Tag: ಮಜುಂದಾರ್

  • ಹಿಂಸಾಚಾರ ಸ್ಥಳಕ್ಕೆ ಭೇಟಿ ನೀಡಲು ಮುಂದಾದ ಬಿಜೆಪಿ ಮುಖಂಡನ ಬಂಧನ, ಬಿಡುಗಡೆ

    ಹಿಂಸಾಚಾರ ಸ್ಥಳಕ್ಕೆ ಭೇಟಿ ನೀಡಲು ಮುಂದಾದ ಬಿಜೆಪಿ ಮುಖಂಡನ ಬಂಧನ, ಬಿಡುಗಡೆ

    ಕೋಲ್ಕತ್ತಾ: ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಪಶ್ಚಿಮ ಬಂಗಾಳದಲ್ಲಿ ಹಿಂಸಾತ್ಮಕ ಪ್ರತಿಭಟನೆ ಮುಂದುವರಿದಿದೆ.

    ಇದೇ ವೇಳೆ ಗಲಭೆ ಪೀಡಿತ ಪ್ರದೇಶವಾದ ಹೌರಾ ಜಿಲ್ಲೆಗೆ ಭೇಟಿ ನೀಡಲು ಯತ್ನಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್‌ನನ್ನು ಪೊಲೀಸರು ಬಂಧಿಸಿ, ಸುಮಾರು ನಾಲ್ಕು ಗಂಟೆಗಳ ಬಳಿಕ ಬಿಡುಗಡೆಗೊಳಿಸಿದ್ದಾರೆ. ಹೌರಾ ಜಿಲ್ಲೆಯಲ್ಲಿ ಹಿಂಸಾತ್ಮಕ ಪತ್ರಿಭಟನೆ ನಡೆಯುತ್ತಿದ್ದರಿಂದ ಮಜುಂದಾರ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.  ಇದನ್ನೂ ಓದಿ: ಪ್ರವಾದಿ ವಿರುದ್ಧ ಅವಹೇಳನ – ಮುಸ್ಲಿಂ ಸಂಘಟನೆಗಳ ಪ್ರತಿಭಟನೆಗೆ ವಿಹೆಚ್‌ಪಿ ತೀವ್ರ ಖಂಡನೆ

    ಬಿಡುಗಡೆಯಾದ ಬಳಿಕ ಮಜುಂದಾರ್ ಇತರ ಬಿಜೆಪಿ ನಾಯಕರೊಂದಿಗೆ ಸೇರಿ ರಾಜ್ಯಪಾಲ ಜಗದೀಪ್ ಧನಕರ್ ಅವರನ್ನು ಭೇಟಿಯಾಗಿದ್ದಾರೆ. ಹೌರಾ ಮತ್ತು ಮುರ್ಷಿದಾಬಾದ್‌ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಬಗ್ಗೆ ರಾಜ್ಯಪಾಲರಿಗೆ ಜ್ಞಾಪನಾ ಪತ್ರ ಸಲ್ಲಿಸಿ ಬಂಗಾಳ ರಾಜ್ಯದಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸುವಂತೆ ಕೋರಿದ್ದಾರೆ.

    ಜೆ.ಪಿ.ನಡ್ಡಾ ಖಂಡನೆ: ಮಜುಂದಾರ್ ಬಂಧನವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಖಂಡಿಸಿದ್ದಾರೆ. ಬಂಗಾಳ ಸರ್ಕಾರವು ಅಪರಾಧಿಗಳ ಉತ್ಸಾಹವನ್ನು ಹೆಚ್ಚಿಸುತ್ತಿದೆ. ಸಮಾಜ ವಿರೋಧಿಗಳಿಗೆ ಆಶ್ರಯ ನೀಡುತ್ತಿದೆ. ಮತ್ತೊಂದೆಡೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಜನರ ಹಕ್ಕುಗಳ ವಿರುದ್ಧ ಹೋರಾಡುವವರ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪದವೀಧರ ಮಹಿಳೆಯನ್ನು ಕೆಲಸಕ್ಕೆ ಹೋಗುವಂತೆ ಒತ್ತಾಯಿಸುವಂತಿಲ್ಲ – ಹೈಕೋರ್ಟ್ 

    ಹೌರಾ ಜಿಲ್ಲೆಯ ಪಾಂಚ್ಲಾದಲ್ಲಿ ಹಿಂಸಾಚಾರ ನಡೆದಿರುವ ಕುರಿತು ವರದಿಗಳಾಗಿವೆ. ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದು, ಕಲ್ಲು ಹಾಗೂ ಇಟ್ಟಿಗೆಗಳನ್ನು ಎಸೆದಿದ್ದಾರೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಪಂಚ್ಲಾ ಮಾರುಕಟ್ಟೆಯ ಸಮೀಪದ ಕೆಲ ಅಂಗಡಿ ಹಾಗೂ ಮನೆಗಳನ್ನು ದರೋಡೆ ಮಾಡಲಾಗಿದೆ. ಅಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

    ನಿನ್ನೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 70ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಹೌರಾ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕೆಲ ರಾಜಕೀಯ ಪಕ್ಷಗಳು ಗಲಭೆಗಳನ್ನು ಪ್ರಚೋದಿಸಲು ಯತ್ನಿಸುತ್ತಿವೆ. ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ.

  • ವೃದ್ಧಿಮಾನ್ ಸಹಾಗೆ ಬೆದರಿಕೆ ಪ್ರಕರಣ – ಪತ್ರಕರ್ತ ಬೋರಿಯಾ ಮಜುಂದಾರ್‌ಗೆ 2 ವರ್ಷ ನಿಷೇಧ ಹೇರಿದ ಬಿಸಿಸಿಐ

    ವೃದ್ಧಿಮಾನ್ ಸಹಾಗೆ ಬೆದರಿಕೆ ಪ್ರಕರಣ – ಪತ್ರಕರ್ತ ಬೋರಿಯಾ ಮಜುಂದಾರ್‌ಗೆ 2 ವರ್ಷ ನಿಷೇಧ ಹೇರಿದ ಬಿಸಿಸಿಐ

    ಮುಂಬೈ: ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ವೃದ್ಧಿಮಾನ್ ಸಹಾಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತ ಬೋರಿಯಾ ಮಜುಂದಾರ್‌ಗೆ 2 ವರ್ಷ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಷೇಧ ಹೇರಿದೆ.

    ಈ ಬಗ್ಗೆ ನೋಟಿಸ್ ಹೊರಡಿಸಿರುವ ಬಿಸಿಸಿಐ, ವೃದ್ಧಿಮಾನ್ ಸಹಾ ಆರೋಪದ ಬೆನ್ನಲ್ಲೇ ಬಿಸಿಸಿಐ ಈ ಬಗ್ಗೆ ತನಿಖೆ ನಡೆಸಿ ಪತ್ರಕರ್ತ ಬೋರಿಯಾ ಮಜುಂದಾರ್ ವಿರುದ್ಧ ಕ್ರಮ ಕೈಗೊಂಡಿದ್ದು, 2 ವರ್ಷ ಯಾವುದೇ ಕ್ರಿಕೆಟ್ ಪಂದ್ಯದ ಸುದ್ದಿಗೋಷ್ಠಿ ಸೇರಿದಂತೆ ಇತರ ಕಾರ್ಯಕ್ರಮಗಳಿಗೆ ಮಜುಂದಾರ್‌ಗೆ ಪ್ರವೇಶವಿಲ್ಲ. 2 ವರ್ಷಗಳ ಕಾಲ ಟೀಂ ಇಂಡಿಯಾದ ಯಾವೊಬ್ಬ ಆಟಗಾರನೊಂದಿಗೂ ಸಂದರ್ಶನಕ್ಕೆ ಅವಕಾಶವಿಲ್ಲ. ಜೊತೆಗೆ 2 ವರ್ಷ ಬಿಸಿಸಿಐ ಮತ್ತು ಅದರ ಇತರ ಕ್ರಿಕೆಟ್ ಮಂಡಳಿ ಪ್ರವೇಶಕ್ಕೆ ನಿಷೇಧ ಹೇರುತ್ತಿದೆ ಎಂದು ನೋಟಿಸ್ ನೀಡಿದೆ. ಇದನ್ನೂ ಓದಿ: ಕೂಲ್ ಕ್ಯಾಪ್ಟನ್ ಮಾಹಿ ಮತ್ತೊಂದು ಮೈಲಿಗಲ್ಲಿಗೆ ಸಜ್ಜು

    ಏನಿದು ಪ್ರಕರಣ:
    ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾವನ್ನು ಆಯ್ಕೆ ಮಾಡುವಾಗ ವೃದ್ಧಿಮಾನ್ ಸಾಹ ಅವರನ್ನು ಬಿಸಿಸಿಐ ಆಯ್ಕೆ ಸಮಿತಿಯು ಕೈಬಿಟ್ಟಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಸಾಹಾ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಇದಾದ ಬಳಿಕ ಸಂದರ್ಶನ ಕೊಡಲು ನಿರಾಕರಿಸಿದಕ್ಕಾಗಿ ನನಗೆ ಬೋರಿಯಾ ಮಜುಂದಾರ್ ಬೆದರಿಕೆಯೊಡ್ಡಿದರು ಎಂದು ಸಹಾ ಆರೋಪಿಸಿದರು. ಮಜುಂದಾರ್ ಕಳುಹಿಸಿದ ಸಂದೇಶಗಳ ಸ್ಕ್ರೀನ್ ಶಾಟ್‍ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಹಾ ಹಂಚಿಕೊಂಡಿದ್ದರು. ಆ ಬಳಿಕ ಈ ಪ್ರಕರಣವನ್ನು ಬಿಸಿಸಿಐ ಗಂಭೀರವಾಗಿ ತೆಗೆದುಕೊಂಡು ತನಿಖೆಗೆ ಆದೇಶಿಸಿತು. ಬಿಸಿಸಿಐ ರಚಿಸಿದ್ದ ಮೂರು ಮಂದಿ ತನಿಖಾ ಸಮಿತಿಯ ಮುಂದೆ ವೃದ್ಧಿಮಾನ್ ಸಾಹ ಎಲ್ಲಾ ಅಗತ್ಯ ಮಾಹಿತಿಯನ್ನು ನೀಡಿದ್ದರು. ಇದನ್ನೂ ಓದಿ: ಮುಂದಿನ ಬಾರಿ ಹಳದಿ ಜೆರ್ಸಿಯಲ್ಲಿ ಕಾಣಿಸ್ತೀನಿ ಆದರೆ…! – ಧೋನಿ ದ್ವಂದ್ವ ಹೇಳಿಕೆ

    ಇದೀಗ ಬಿಸಿಸಿಐ ತನಿಖಾ ಸಮಿತಿ ನೀಡಿದ ರಿಪೋರ್ಟ್‌ ಪ್ರಕಾರ ಮಜುಂದಾರ್ ವಿರುದ್ಧ ಕ್ರಮ ಕೈಗೊಂಡಿದೆ. ಬಿಸಿಸಿಐ ತೆಗೆದುಕೊಂಡಿರುವ ಕ್ರಮ ಇದೀಗ ತೀವ್ರ ಚರ್ಚೆಗೆ ನಾಂದಿಹಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ನೆಟ್ಟಿಗರು ಚರ್ಚೆ ಆರಂಭಿಸಿದ್ದಾರೆ.