Tag: ಮಗು ಸಾವು

  • ಬೆಂಗಳೂರು| ಜೆಸಿಬಿ ಹರಿದು 2 ವರ್ಷದ ಮಗು ಸಾವು

    ಬೆಂಗಳೂರು| ಜೆಸಿಬಿ ಹರಿದು 2 ವರ್ಷದ ಮಗು ಸಾವು

    ಬೆಂಗಳೂರು: ಆಟವಾಡುತ್ತಿದ್ದ ಮಗು ಮೇಲೆ ಜೆಸಿಬಿ ಹರಿದ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ (Bengaluru) ಮಹದೇವಪುರ (Mahadevapura)  ಪೊಲೀಸ್ ಠಾಣಾ ವ್ಯಾಪ್ತಿಯ ಕಾಡುಗೋಡಿ ಬಳಿಯ ಸಿಟಿ ಲೇಔಟ್‌ನಲ್ಲಿ ನಡೆದಿದೆ.

    ಥವನ್ ರೆಡ್ಡಿ (2) ಮೃತಪಟ್ಟ ಮಗು. ಚಾಲಕ ಜೆಸಿಬಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಮನೆ ಮುಂದೆ ಆಟವಾಡುತ್ತಿದ್ದ ಮಗು ಮೇಲೆ ಹರಿದಿದೆ. ರಸ್ತೆಯಲ್ಲಿ ಆಟವಾಡುತ್ತಿದ್ದ ಥವನ್ ರೆಡ್ಡಿ ತಲೆಯ ಮೇಲೆ ಜೆಸಿಬಿ ಹರಿದಿದೆ. ಇದನ್ನೂ ಓದಿ : ಗಾಂಜಾ ಸಾಗಿಸುತ್ತಿದ್ದ ತಂದೆ, ಮಗಳು, ಮೊಮ್ಮಗ ಸೇರಿ ಐವರು ಅರೆಸ್ಟ್‌

    ಕೂಡಲೇ ಮಗುವನ್ನು ವೈದೇಹಿ ಆಸ್ಪತ್ರೆಗೆ ರವಾನಿಸಲಾಗಿದೆ. ಪರೀಕ್ಷೆ ನಡೆಸಿದ ವೈದ್ಯರು ಮಾರ್ಗ ಮಧ್ಯದಲ್ಲಿ ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಗುವಿನ ಮರಣೋತ್ತರ ಪರೀಕ್ಷೆ ನಡೆದಿದ್ದು, ಮಹಾದೇವಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ : ಸರ್ಕಾರ ಶ್ರೀಮಂತರನ್ನು ಗೃಹಲಕ್ಷ್ಮಿ ಯೋಜನೆಯಿಂದ ತೆಗೆದುಹಾಕಬೇಕು – ಎಂ.ಬಿ ಪಾಟೀಲ್

  • ಚರಂಡಿಯಲ್ಲಿ ಬಿದ್ದು ಎರಡು ವರ್ಷದ ಮಗು ಸಾವು

    ಚರಂಡಿಯಲ್ಲಿ ಬಿದ್ದು ಎರಡು ವರ್ಷದ ಮಗು ಸಾವು

    – ಪಾಲಿಕೆಯ ವಿರುದ್ಧ ಕುಟುಂಬಸ್ಥರ ಆಕ್ರೋಶ

    ವಿಜಯಪುರ: ಚರಂಡಿಯಲ್ಲಿ ಬಿದ್ದು ಎರಡು ವರ್ಷದ ಮಗು ಸಾವನ್ನಪ್ಪಿದ್ದ ದಾರುಣ ಘಟನೆ ನಗರದ ಬಡಿಕಮಾನ್ ರಸ್ತೆಯ ಬಳಿ ನಡೆದಿದೆ.

    ಮೃತ ಮಗುವನ್ನು 2 ವರ್ಷದ ಯಾಸೀನ್ ಸದ್ದಾಂ ಮುಲ್ಲಾ ಎಂದು ಗುರುತಿಸಲಾಗಿದೆ.

    ಕಳೆದ ಕೆಲವು ದಿನಗಳ ಹಿಂದೆ ಭಾರೀ ಮಳೆ ಹಿನ್ನೆಲೆ ಚರಂಡಿ ಮೇಲಿನ ಕಲ್ಲು ತೆಗೆಯಲಾಗಿತ್ತು. ಬಳಿಕ ಮಹಾನಗರ ಪಾಲಿಕೆಯವರು (City Corporation) ಚರಂಡಿಯ ಮೇಲ್ಭಾಗವನ್ನು ಮುಚ್ಚಿರಲಿಲ್ಲ. ಇದರಿಂದಾಗಿ ಮಂಗಳವಾರ (ಅ.15) ಸಂಜೆ ಮಗು ಚರಂಡಿಗೆ ಬಿದ್ದು ಸಾವನ್ನಪ್ಪಿದೆ. ಅವಘಡಕ್ಕೆ ಮಹಾನಗರ ಪಾಲಿಕೆಯ ನಿರ್ಲಕ್ಷ್ಯವೇ ಕಾರಣ ಎಂದು ಮಗುವಿನ ಕುಟುಂಬಸ್ಥರು ಆರೋಪಿಸಿದ್ದಾರೆ.

    ಮಹಾನಗರ ಪಾಲಿಕೆಯ ವಿರುದ್ಧ ಸ್ಥಳೀಯರು, ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Gol Gumbaz Police Station) ಈ ಘಟನೆ ನಡೆದಿದೆ.

  • ಕದನ ವಿರಾಮ ಉಲ್ಲಂಘಿಸಿದ ಪಾಕ್ – ಗುಂಡೇಟಿಗೆ 10 ದಿನದ ಕಂದಮ್ಮ ಬಲಿ

    ಕದನ ವಿರಾಮ ಉಲ್ಲಂಘಿಸಿದ ಪಾಕ್ – ಗುಂಡೇಟಿಗೆ 10 ದಿನದ ಕಂದಮ್ಮ ಬಲಿ

    ಶ್ರೀನಗರ: ಗಡಿಯಲ್ಲಿ ಮತ್ತೆ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿ ದಾಳಿ ನಡೆಸಿದ್ದು, ಈ ಗುಂಡಿನ ಚಕಮಕಿಯಲ್ಲಿ 10 ದಿನದ ಶಿಶು ಸಾವನ್ನಪ್ಪಿ, ಇಬ್ಬರು ಸಾರ್ವಜನಿಕರು ಗಾಯಗೊಂಡಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯ (ಎಲ್‍ಒಸಿ) ಪಕ್ಕದ ಕೃಷ್ಣ ಕಣಿವೆ, ಮೆಂದರ್ ಮತ್ತು ಮಂಕೋಟ್ ವಲಯದಲ್ಲಿ ಪಾಕಿಸ್ತಾನ ಮತ್ತೆ ಗುಂಡಿನ ದಾಳಿ ನಡೆಸಿದೆ. ಭಾನುವಾರ ರಾತ್ರಿ ಈ ದಾಳಿ ನಡೆಸಿದ್ದು, ಗುಂಡೇಟಿಗೆ 10 ದಿನ ಶಿಶು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಪ್ರಚೋದನೆಯಿಲ್ಲದೆ ಗುಂಡು ಹಾರಿಸುವ ಮೂಲಕ ಪಾಕಿಸ್ತಾನವು ಭಾರತೀಯ ಚೆಕ್‍ಪೋಸ್ಟ್ ಗಳು ಮತ್ತು ವಸತಿ ಪ್ರದೇಶಗಳನ್ನು ಗುರಿಯಾಗಿಸಿದೆ. ದಾಳಿಯಲ್ಲಿ ಒಟ್ಟು ಮೂವರು ಗಾಯಗೊಂಡಿದ್ದರು. ಅವರನ್ನು ಕೂಡಲೇ ಪೂಂಚ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಗುಂಡೇಟು ತಗುಲಿ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೇ ಪ್ರಾಣಬಿಟ್ಟಿದೆ. ಸದ್ಯ ಗಾಯಗೊಂಡ ಇಬ್ಬರನ್ನು ಜಮ್ಮುವಿಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಪಾಕ್ ಸೈನ್ಯ ಏಕಾಏಕಿ ದಾಳಿ ನಡೆಸಲು ಆರಂಭಿಸಿದ ಕೂಡಲೇ ಭಾರತೀಯ ಯೋಧರು ಕೂಡ ಪ್ರತಿದಾಳಿ ನಡೆಸಿ ತಕ್ಕ ಉತ್ತರ ನೀಡಿದ್ದಾರೆ. ಕಳೆದ ಜುಲೈ 22ರಂದು ರಾಜೌರಿ ಪ್ರದೇಶದಲ್ಲಿ ಪಾಕ್ ನಡೆಸಿದ ದಾಳಿಗೆ ಓರ್ವ ಭಾರತೀಯ ಯೋಧ ಹುತಾತ್ಮರಾಗಿದ್ದರು. ಕೆಲವು ಸಾರ್ವಜನಿಕರು ಕೂಡ ಈ ದಾಳಿಯಲ್ಲಿ ಗಾಯಗೊಂಡಿದ್ದರು.

    ಪದೇ ಪದೇ ಗಡಿಯಲ್ಲಿ ಭಾರತ- ಪಾಕ್ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಕಾಶ್ಮೀರದಲ್ಲಿ ಭದ್ರತೆಯನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಉನ್ನತ ಮಟ್ಟದ ಸಭೆ ನಡೆಸಿದ್ದರು. ಈ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಅನ್ವಯ ಮುಂಜಾಗೃತಾ ಕ್ರಮವಾಗಿ 10 ಸಾವಿರ ಯೋಧರನ್ನು ಕಾಶ್ಮೀರ ಕಣಿವೆ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.

    ಭಾರತದ ಮೇಲೆ ಪಾಕಿಸ್ತಾನ ಸೇನೆ ಹಾಗೂ ಉಗ್ರರು ದೊಡ್ಡ ಮಟ್ಟದಲ್ಲಿ ದಾಳಿ ನಡೆಸಲು ಯೋಜನೆ ಹೂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಅಮರನಾಥ ಯಾತ್ರೆಗೆ ಬರುವ ಯಾತ್ರಾರ್ಥಿಗಳ ಮೇಲೆ ಕೂಡ ಉಗ್ರರು ದಾಳಿ ಮಾಡಲು ಹೊಂಚು ಹಾಕಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

  • ಪೋಷಕರೇ ಗಮನಿಸಿ, ಅಪ್ಪ-ಅಮ್ಮನ ಸೆಲ್ಫಿ ಕ್ರೇಜ್‍ಗೆ 3 ವರ್ಷದ ಮಗು ಬಲಿ!

    ಪೋಷಕರೇ ಗಮನಿಸಿ, ಅಪ್ಪ-ಅಮ್ಮನ ಸೆಲ್ಫಿ ಕ್ರೇಜ್‍ಗೆ 3 ವರ್ಷದ ಮಗು ಬಲಿ!

    ಗಾಂಧಿನಗರ: ಅಪ್ಪ-ಅಮ್ಮನ ಸೆಲ್ಫಿ ಕ್ರೇಜ್‍ಗೆ 3 ವರ್ಷದ ಮಗುವೊಂದು ಕೆರೆ ನೀರಿಗೆ ಬಿದ್ದು ಮೃತಪಟ್ಟ ಘಟನೆ ಗುಜರಾತಿನ ಸೂರತ್‍ನಲ್ಲಿ ನಡೆದಿದೆ.

    ಶುಕ್ರವಾರ ಅಲ್ತಾನ್ ಗಾರ್ಡನ್ ನಲ್ಲಿ ತಮ್ಮ ಹೆಣ್ಣು ಮಗುವನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರು ಮಗು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದನ್ನು ಖಚಿತಪಡಿಸಿದ್ದಾರೆ.

    ನಡೆದದ್ದು ಏನು?
    ಆಗಸ್ಟ್ 3 ರಂದು ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಸೂರತ್ ಸಮೀಪದ ಅಲ್ತಾನ್ ನ್ಯಾಷನಲ್ ಪಾರ್ಕ್ ಗೆ ಹೋಗಿದ್ದರು. ಮಕ್ಕಳನ್ನು ಪಾರ್ಕ್ ನಲ್ಲಿ ಆಟವಾಡಲು ಬಿಟ್ಟು, ದಂಪತಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. 3 ವರ್ಷದ ಹೆಣ್ಣು ಮಗುವೊಂದು ಆಟವಾಡುತ್ತ ಅಲ್ಲಿದ್ದ ಕೆರೆಗೆ ಜಾರಿ ಬಿದ್ದಿತ್ತು. ಆದರೆ ಪೋಷಕರು ತಮ್ಮ ಮಗುವನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

    ಶನಿವಾರ ತನಿಖೆ ಕೈಗೊಂಡ ಪೊಲೀಸರಿಗೆ ಪಾರ್ಕ್ ನ ಕೆರೆಯ ದಂಡೆಯಲ್ಲಿ ಮಗುವಿನ ಶೂ ಪತ್ತೆಯಾಗಿತ್ತು. ಮಗು ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತಪಡಿಸಿ, ಪತ್ತೆಗಾಗಿ ಕಾರ್ಯಾಚರಣೆ ಪ್ರಾರಂಭಸಿದ್ದರು. ಸ್ವಲ್ಪ ಸಮಯದ ನಂತರ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

    ನಾವು ಮಕ್ಕಳನ್ನು ಉದ್ಯಾನದಲ್ಲಿ ಬಿಟ್ಟು ಸೆಲ್ಫಿ ಕ್ಲಿಕ್ಕಿಸುತ್ತಿದ್ದೇವು. ಈ ವೇಳೆ ಮಗು ಕೆರೆಗೆ ಬಂದಿರುವ ವಿಚಾರ ಗೊತ್ತಾಗಿಲ್ಲ ಎಂದು ಪೋಷಕರು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಖತೋಧಾರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣದ ದಾಖಲಿಸಿದ್ದಾರೆ.

  • ಯುವಕರ ಬೈಕ್ ವ್ಹೀಲಿಂಗ್ ಹುಚ್ಚಿಗೆ 4 ವರ್ಷದ ಕಂದಮ್ಮ ಬಲಿಯಾಯ್ತು!

    ಯುವಕರ ಬೈಕ್ ವ್ಹೀಲಿಂಗ್ ಹುಚ್ಚಿಗೆ 4 ವರ್ಷದ ಕಂದಮ್ಮ ಬಲಿಯಾಯ್ತು!

    ಬೆಂಗಳೂರು: ಪೊಲೀಸರು ವ್ಹೀಲಿಂಗ್ ನಿಯಂತ್ರಣಕ್ಕೆ ಕ್ರಮಕೈಗೊಳ್ಳುತ್ತಿದ್ದೇವೆ ಎಂದು ಪದೇ ಪದೇ ಹೇಳುತ್ತಿದ್ದರೂ ವ್ಹೀಲಿಂಗ್ ಮಾಡುವವರಿಗೆ ಮಾತ್ರ ಇನ್ನೂ ಬುದ್ಧಿ ಬಂದಂತಿಲ್ಲ. ಯುವಕರಿಬ್ಬರ ಬೈಕ್ ವ್ಹೀಲಿಂಗ್ ಹುಚ್ಚಿಗೆ 4 ವರ್ಷದ ಮಗುವೊಂದು ಸಾವನ್ನಪ್ಪಿದ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಚಿಕ್ಕಜಾಲದ ಉತ್ನಳ್ಳಿ ಬಳಿ ಇಂದು ಸಂಜೆ 5.30ಕ್ಕೆ ಘಟನೆ ನಡೆದಿದ್ದು ರಾಜು ಅಲಿಯಾಸ್ ಬಂಗಾರಿ ಎಂಬಾತ ತನ್ನ ಸ್ನೇಹಿತನ ಜೊತೆ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ. ಈ ವೇಳೆ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಬದಿಯಲ್ಲಿ ನಿಂತಿದ್ದ ಮಗು ಸಹನಾಗೆ ಡಿಕ್ಕಿ ಹೊಡೆದಿದೆ. ಬೈಕ್ ಗುದಿದ್ದ ರಭಸಕ್ಕೆ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.

    ಆದರೆ ಅಪಘಾತವಾಗುತ್ತಿದ್ದಂತೆ ರಾಜು ಸ್ಥಳದಿಂದ ಪರಾರಿಯಾಗಿದ್ದಾನೆ. ಹಿಂಬದಿ ಕುಳಿತಿದ್ದ ಸವಾರ ಕೆಳಗೆ ಬಿದ್ದಿದ್ದಾನೆ. ತಕ್ಷಣ ಸ್ಥಳೀಯರು ಹೋಗಿ ಹಿಂಬದಿ ಸವಾರನನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಚಿಕ್ಕಜಾಲ ಟ್ರಾಫಿಕ್ ಠಾಣೆಯ ಪೊಲೀಸರಿಗೊಪ್ಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

     

     

  • ಉಡುಪಿಯಲ್ಲಿ ಸರ್ಕಾರಿ ಸ್ವಾಮ್ಯದ ಕ್ವಾರಿಗೆ ಬಿದ್ದು ತಾಯಿ-ಮಗ ಸಾವು!

    ಉಡುಪಿಯಲ್ಲಿ ಸರ್ಕಾರಿ ಸ್ವಾಮ್ಯದ ಕ್ವಾರಿಗೆ ಬಿದ್ದು ತಾಯಿ-ಮಗ ಸಾವು!

    – ಮುಗಿಲುಮುಟ್ಟಿದ ತಂದೆಯ ಆಕ್ರಂದನ

    ಉಡುಪಿ: ಬೆಳಗಾವಿಯ ಅಥಣಿಯಲ್ಲಿ ಕೊಳವೆ ಬಾವಿಗೆ 6 ವರ್ಷದ ಬಾಲಕಿ ಬಿದ್ದು ಮೃತಪಟ್ಟ ಘಟನೆ ಮಾಸುವ ಮುನ್ನವೇ ಉಡುಪಿಯಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ. ಬಟ್ಟೆ ಒಗೆಯಲು ಹೋಗಿದ್ದ ತಾಯಿ ಮಗುವನ್ನು ಕಲ್ಲು ಕ್ವಾರಿ ಬಲಿ ಪಡೆದಿದೆ.

    ನಡೆದಿದ್ದೇನು?: ಉಡುಪಿಯ ಅಲೆವೂರಿನ ಪೆರುಪಾದೆ ಸರ್ಕಾರಿ ಸ್ವಾಮ್ಯದ ಕಲ್ಲಿನ ಕ್ವಾರಿ ಬಾಗಲಕೋಟೆ ಮೂಲದ ದ್ಯಾಮವ್ವ ಮತ್ತು ಹನುಮಂತ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ. ಬಟ್ಟೆ ಒಗೆಯಲು ಹೋದ ದ್ಯಾಮವ್ವ ನಾಲ್ಕು ವರ್ಷದ ಮಗನನ್ನು ಬಂಡೆಯ ಮೇಲೆ ಆಟವಾಡಲು ಬಿಟ್ಟಿದ್ದರು. ಹನುಮಂತ ಆಟವಾಡುತ್ತಾ ಕಲ್ಲಿನ ಕ್ವಾರಿಗೆ ಬಿದ್ದಿದ್ದಾನೆ. ಮಗ ನೀರಿಗೆ ಬಿದ್ದ ತಕ್ಷಣ ರಕ್ಷಿಸಲು ಹೋದ ತಾಯಿ ಕೂಡಾ ಮುಳುಗಿದ್ದಾರೆ. ತಾಯಿ-ಮಗು ಮುಳುಗುವುದನ್ನು ಕಂಡು ರಕ್ಷಿಸಲು ಸ್ಥಳೀಯರು ಹೋಗುವಷ್ಟರಲ್ಲಿ ಸಂಪೂರ್ಣ ಮುಳುಗಿ ಮೃತಪಟ್ಟಿದ್ದಾರೆ.

    ಘಟನೆ ನಡೆದು ಸುಮಾರು 1 ಗಂಟೆ ಬಿಟ್ಟು ಅಗ್ನಿಶಾಮಕ ದಳ ಬೋಟ್ ಜೊತೆ ಬಂತು. ಆ ತಂಡದಲ್ಲಿ ಮುಳುಗು ತಜ್ಞರೇ ಇರಲಿಲ್ಲ. ಗರುಡಪಾತಾಳ ಹಾಕಿ ಮೃತದೇಹ ಹುಡುಕಲು ಯತ್ನಿಸಿದಾಗ ಅದು ಸಾಧ್ಯವಾಗಲಿಲ್ಲ. ಅಗ್ನಿಶಾಮಕ ಅಧಿಕಾರಿಗಳ ಅಸಹಾಯಕತೆ ಕಂಡು ಸ್ಥಳೀಯ ಮುಳುಗು ತಜ್ಞರನ್ನು ಕರೆಸಲಾಯ್ತು. ಮೂವರು ಮುಳುಗು ತಜ್ಞರು ಬಂದು ಸುಮಾರು 15 ನಿಮಿಷಗಳ ಕಾಲ ಹುಡುಕಾಟ ನಡೆಸಿದರು. ಕ್ವಾರಿಯಲ್ಲಿ ಪಾಚಿ ತುಂಬಿಕೊಂಡಿದೆ. ಹಳೆಯ ಬಟ್ಟೆಗಳ ರಾಶಿಯೇ ಇದೆ. ಆಳದಲ್ಲಿ ಎರಡು ಮೃತದೇಹಗಳು ಸಿಲುಕಿದ್ದು, ಸದ್ಯ ಮೃತದೇಹಗಳನ್ನ ಮೇಲಕ್ಕೆತ್ತಿದ್ದೇವೆ ಅಂತಾ ಮುಳುಗು ತಜ್ಞರಾದ ಅಶೋಕ್ ಶೆಟ್ಟಿ, ನಿತೇಶ್, ಪ್ರಭಾಕರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ರು.

    ಅಗ್ನಿಶಾಮಕದಳದ ಅಸಹಾಯಕತೆಗೆ ಸ್ಥಳೀಯರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ತಂಡದಲ್ಲಿ 10-15 ಮಂದಿ ಇದ್ದರು. ಅದರಲ್ಲಿ ಒಬ್ಬನೂ ಈಜುಗಾರ ಇರಲಿಲ್ಲ ಎಂಬುದು ವಿಪರ್ಯಾಸ. ಇವರು ದೋಣಿಯಲ್ಲಿ ಕಬ್ಬಿಣದ ಸಲಾಕೆಗಳನ್ನು ಎಸೆದು ಹುಡುಕಾಟ ಮಾಡಿದರು. ಒಬ್ಬ ಸಿಬ್ಬಂದಿಯೂ ನೀರಿಗೆ ಇಳಿಯಲಿಲ್ಲ. ಈಜಲು- ಮುಳುಗಲು ಬಾರದವರನ್ನು ಅಗ್ನಿಶಾಮಕ ಇಲಾಖೆಗೆ ಆಯ್ಕೆ ಮಾಡಿದ್ದು ಯಾಕೆ?, ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು. ಪರಿಣತರನ್ನು ಇಲಾಖೆಗೆ ಸೇರಿಸಬೇಕು ಎಂದು ಸ್ಥಳೀಯ ಅಲೆವೂರು ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಸೇರಿಗಾರ್ ಆಕ್ರೋಶ ವ್ಯಕ್ತಪಡಿಸಿದರು.

    ಮುಗಿಲುಮುಟ್ಟಿದ ಆಕ್ರಂದನ: ದ್ಯಾಮವ್ವನ ಗಂಡ ಯಮುನಪ್ಪ ಹಾಸಂಗಿಗೆ ಮಾತು ಬರಲ್ಲ. ಕಿವಿನೂ ಕೇಳಿಸಲ್ಲ. ಮೃತದೇಹಗಳ ಪಕ್ಕ ಯಮುನಪ್ಪ ಕುಳಿತು ರೋಧಿಸುತ್ತಿದ್ದುದ್ದು ನೆರೆದವರ ಮನ ಕಲಕುವಂತಿತ್ತು. ಕಳೆದ ಮೂವತ್ತು ವರ್ಷಗಳಿಂದ ಇಬ್ಬರ ಕುಟುಂಬ ಉಡುಪಿಯಲ್ಲಿ ಕೂಲಿ ಕೆಲಸಕ್ಕೆಂದು ಬಂದಿತ್ತು. ಇಬ್ಬರಿಗೂ ಇಲ್ಲೇ ಮದುವೆಯಾಗಿತ್ತು. ಎರಡೂ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.

    ಜಿಲ್ಲೆಯಾದ್ಯಂತ ಸರ್ಕಾರ ನೂರಾರು ಬಂಡೆ ಕಲ್ಲು ಕ್ವಾರಿಗಳಿಗೆ ಪರವಾನಿಗೆ ನೀಡಿದೆ. ಕಲ್ಲು ತೆಗೆದು ಖಾಲಿಯಾದಾಗ ಕ್ವಾರಿಯನ್ನು ಹಾಗೆಯೇ ಬಿಟ್ಟು ಹೋಗಲಾಗುತ್ತದೆ. ಸುತ್ತಲೂ ತಡೆಗೋಡೆ ನಿರ್ಮಾಣ ಮಾಡಿಲ್ಲ. ಯಾವುದೇ ಮುನ್ನೆಚ್ಚರಿಕಾ ಬೋರ್ಟ್ ಅಳವಡಿಸಿಲ್ಲ. ಜಿಲ್ಲೆಯಾದ್ಯಂತ ನೂರಾರು ಕಲ್ಲುಕ್ವಾರಿಗಳಿದ್ದು ಎಲ್ಲವೂ ಹೀಗೆಯೇ ತೆರೆದುಕೊಂಡಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜವಾಬ್ದಾರಿ ಇದು. ನಿದ್ದೆ ಮಾಡುತ್ತಿರುವ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಮಳೆಗಾಲ ಆರಂಭಕ್ಕೆ ಮುನ್ನ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತಾ ಸ್ಥಳೀಯರು ಒತ್ತಾಯಿಸಿದ್ದಾರೆ.

    https://www.youtube.com/watch?v=58cJh_BFu7Y