Tag: ಮಕ್ಕಳ ಸಹಾಯವಾಣಿ

  • ಮುಖ್ಯ ಶಿಕ್ಷಕನಿಂದ ಬಾಲಕಿ ಮೇಲೆ ಅತ್ಯಾಚಾರ, ಮನೆಗೆಲಸ ಮಾಡದ್ದಕ್ಕೆ ಥಳಿತ

    ಮುಖ್ಯ ಶಿಕ್ಷಕನಿಂದ ಬಾಲಕಿ ಮೇಲೆ ಅತ್ಯಾಚಾರ, ಮನೆಗೆಲಸ ಮಾಡದ್ದಕ್ಕೆ ಥಳಿತ

    ಹೈದರಾಬಾದ್: ಶಾಲೆಯ ಮುಖ್ಯ ಶಿಕ್ಷಕನೊಬ್ಬ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ, ಮನೆಗೆಲಸ ಮಾಡಲು ಒತ್ತಾಯಿಸಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ.

    ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಬಟಸಿಂಗರಂನ ಜಾನೆಟ್ ಜಾರ್ಜ್ ಸ್ಮಾರಕ ವಸತಿ ಶಾಲೆಯ ಮುಖ್ಯ ಶಿಕ್ಷಕ ಕೆ.ಪ್ರಸಾದ್ ರಾವ್(51) ಹಾಗೂ ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಈತನ ಪತ್ನಿ ಕೆ.ಶರಧಿ ಅವರನ್ನು ಹೈದರಾಬಾದ್‍ನ ಎಸ್‍ಇಇ ತಂಡದೊಂದಿಗೆ ಪೊಲೀಸರು ಬಂಧಿಸಿದ್ದಾರೆ.

    ಮಕ್ಕಳ ಸಹಾಯವಾಣಿ ಮೂಲಕ ಸಂತ್ರಸ್ತೆ ದೂರು ದಾಖಲಿಸಲಾಗಿದ್ದು, 15 ವರ್ಷದ ಬಾಲಕಿ 2015ರಲ್ಲಿ ಶಾಲೆಗೆ ದಾಖಲಾಗಿದ್ದಳು. ನಂತರ ಶಾಲೆಯ ವಸತಿ ನಿಲಯದಲ್ಲೇ ವಾಸವಿದ್ದಳು. ಬಾಲಕಿ ಮಲಗಿದ್ದಾಗ, ಹಾಸ್ಟೆಲ್ ವಾರ್ಡನ್ ಪ್ರಸಾದ್ ಬಾಲಕಿಯ ಕೋಣೆಗೆ ಆಗಮಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾಳೆ.

    ಈ ಕುರಿತು ಪೊಲೀಸರು ಮಾಹಿತಿ ನೀಡಿ, ಆತ ಬಾಲಕಿ ಮೇಲೆ ಪದೇ ಪದೆ ಅತ್ಯಾಚಾರ ಎಸಗುತ್ತಿದ್ದ, ಅಲ್ಲದೆ ಅವಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ವರದಿಯಾಗಿದೆ.

    ಪ್ರಸಾದ್ ಪತ್ನಿ ಶರಧಿ ಕೂಡ ಬಾಲಕಿಗೆ ಕಿರುಕುಳ ನೀಡಿ ದಂಪತಿಯ ಮನೆಯಲ್ಲಿ ಮನೆ ಕೆಲಸ ಮಾಡುವಂತೆ ಒತ್ತಾಯಿಸಿದ್ದರು. ಬಾಲಕಿ ಕೆಲಸ ಮಾಡಲು ನಿರಾಕರಿಸಿದಾಗ ಆಕೆಯನ್ನು ಥಳಿಸಲಾಗಿದೆ. ಮುಖ್ಯ ಶಿಕ್ಷಕ ಈ ಬಾಲಕಿಗೆ ಮಾತ್ರವಲ್ಲ ಹಾಸ್ಟೆಲ್‍ನಲ್ಲಿರುವ ಇತರ ಹುಡುಗಿಯರನ್ನೂ ನಿಂದಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

    ಕಿರುಕುಳ ಸಹಿಸಲಾಗದೆ, ಸಂತ್ರಸ್ತೆ ಜೂನ್ ತಿಂಗಳಲ್ಲಿ ಶಾಲೆಯನ್ನು ತೊರೆದಿದ್ದಾಳೆ. ಶುಕ್ರವಾರ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿದ್ದಾಳೆ. ನಂತರ ಪೊಲೀಸರು ಹಾಗೂ ಎಸ್‍ಇಇ ತಂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

    ದಂಪತಿ ವಿರುದ್ಧ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೊಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

  • ಅಪ್ರಾಪ್ತೆಯ ಶವ ಸಂಸ್ಕಾರ ತಡೆದು ಅಧಿಕಾರಿಯಿಂದ ಪರಿಶೀಲನೆ

    ಅಪ್ರಾಪ್ತೆಯ ಶವ ಸಂಸ್ಕಾರ ತಡೆದು ಅಧಿಕಾರಿಯಿಂದ ಪರಿಶೀಲನೆ

    ವಿಜಯಪುರ: ಬಾಲ್ಯ ವಿವಾಹ ಮಾಡಿಕೊಡಲಾಗಿದ್ದ ಅಪ್ರಾಪ್ತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಕಾರಣ ಮಕ್ಕಳ ಸಹಾಯವಾಣಿ ಅಧಿಕಾರಿ ಶವ ಸಂಸ್ಕಾರವನ್ನು ತಡೆದು ಪರಿಶೀಲನೆ ನಡೆಸಿರುವ ಘಟನೆ ಜಿಲ್ಲೆಯ ರಾಣಿ ಬಗಿಚಾದಲ್ಲಿ ನಡೆದಿದೆ.

    ರಾಣಿ ಬಗಿಚಾ ನಿವಾಸಿ ಅಪ್ರಾಪ್ತೆಯನ್ನು ಮೂರು ವರ್ಷದ ಹಿಂದೆ ಮಹಾರಾಷ್ಟ್ರದ ಕರಾಡ ತಾಲೂಕಿನ ವಾಟಾರ್ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಗುರುವಾರ ಅಪ್ರಾಪ್ತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ಇಂದು ವಿಜಯಪುರಕ್ಕೆ ಅಪ್ರಾಪ್ತೆಯ ಶವ ತಂದು ಅಂತ್ಯ ಸಂಸ್ಕಾರಕ್ಕೆ ಪೋಷಕರು ಮುಂದಾಗಿದ್ದರು.

    ಈ ಬಗ್ಗೆ ವಿಷಯ ತಿಳಿದ ಮಕ್ಕಳ ಸಹಾಯವಾಣಿ ಅಧಿಕಾರಿ ಸುನಂದಾ ತೋಳಬಂದಿ ಅವರು ಸ್ಥಳಕ್ಕೆ ಭೇಟಿ ನೀಡಿ ಶವ ಸಂಸ್ಕಾರಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗದಂತೆ ಕೆಲಕಾಲ ತಡೆದಿದ್ದರು.

    ಇದು ಕೇವಲ ಆತ್ಮಹತ್ಯೆ ಎಂದು ಮಹಾರಾಷ್ಟ್ರದ ಕರಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈಗ ಈ ಪ್ರಕರಣ ಸಂಬಂಧ ಪೋಕ್ಸೋ ಹಾಗೂ ಜೆ.ಜೆ (ಬಾಲ್ಯವಿವಾಹ) ಕಾಯ್ದೆ ಅಡಿಯಲ್ಲಿ ದಾಖಲಿಸಿಕೊಳ್ಳಲು ಆದೇಶಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ನಂತರ ಶವ ಸಂಸ್ಕಾರಕ್ಕೆ ಮಕ್ಕಳ ಸಹಾಯವಾಣಿ ಅಧಿಕಾರಿ ತೋಳಬಂದಿ ಅನುಮತಿ ನೀಡಿದರು.

  • 10ರ ಬಾಲಕಿಯನ್ನ ದೇವದಾಸಿ ಪದ್ಧತಿಗೆ ತಳ್ಳಿದ ಪೋಷಕರು- ಮಕ್ಕಳ ಸಹಾಯವಾಣಿಯಿಂದ ಅಪ್ರಾಪ್ತೆಯ ರಕ್ಷಣೆ

    10ರ ಬಾಲಕಿಯನ್ನ ದೇವದಾಸಿ ಪದ್ಧತಿಗೆ ತಳ್ಳಿದ ಪೋಷಕರು- ಮಕ್ಕಳ ಸಹಾಯವಾಣಿಯಿಂದ ಅಪ್ರಾಪ್ತೆಯ ರಕ್ಷಣೆ

    ಕಲಬುರಗಿ: ಹತ್ತು ವರ್ಷದ ಬಾಲಕಿಯನ್ನ ದೇವದಾಸಿ ಪದ್ಧತಿಗೆ ತಳ್ಳಿದ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಮಾವಿನಸೂರ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಐದು ವರ್ಷದ ಹಿಂದೆ ಬಾಲಕಿಯನ್ನು ಆಕೆಯ ತಂದೆ ಶರಣಪ್ಪ ಮತ್ತು ತಾಯಿ ಬಿಜಲಿಬಾಯಿ ದೇವರ ಹೆಸರಿನಲ್ಲಿ ದೇವದಾಸಿಯನ್ನಾಗಿ ಮಾಡಿದ್ದರು. ಇದರ ಖಚಿತ ಮಾಹಿತಿ ಪಡೆದ ಮಕ್ಕಳ ಸಹಾಯವಾಣಿ ಸದಸ್ಯರು ದಾಳಿ ಮಾಡಿ ಪ್ರಕರಣ ಬೇಧಿಸಿದ್ದಾರೆ. ಪ್ರಕರಣ ಸಂಬಂಧ ದೇವಸ್ಥಾನದ ಅರ್ಚಕ ಶರಣಪ್ಪ ಮತ್ತು ಪೋಷಕರನ್ನು ಬಂಧಿಸಲಾಗಿದೆ.

    ಈ ಬಗ್ಗೆ ಅರ್ಚಕನನ್ನು ವಿಚಾರಿಸಿದಾಗ 1 ಸಾವಿರಕ್ಕೂ ಅಧಿಕ ಯುವತಿಯರನ್ನು ದೇವದಾಸಿಯರನ್ನಾಗಿ ಮಾಡಿರುವುದಾಗಿ ಹೇಳಿದ್ದಾನೆ. ಹೀಗೆ ದೇವದಾಸಿ ಹೆಸರಿನಲ್ಲಿ ಸದ್ಯ ಕಲಬುರಗಿ ಜಿಲ್ಲೆಯಲ್ಲಿ 10 ಸಾವಿರಕ್ಕೂ ಅಧಿಕ ಹೆಣ್ಣುಮಕ್ಕಳು ವೇಶ್ಯಾವಾಟಿಕೆಯಲ್ಲಿ ತೊಡಗಿರುವದು ಬೆಳಕಿಗೆ ಬಂದಿದೆ.

    ಈ ಸಂಬಂಧ ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.