Tag: ಮಕ್ಕಳ ಕಳ್ಳ

  • ಮಕ್ಕಳ ಕಳ್ಳನೆಂದು ಭಾವಿಸಿ ಮಗುವಿನೊಂದಿಗಿದ್ದ ತಂದೆಯ ಮೇಲೆಯೇ ಹಲ್ಲೆ!

    ಮಕ್ಕಳ ಕಳ್ಳನೆಂದು ಭಾವಿಸಿ ಮಗುವಿನೊಂದಿಗಿದ್ದ ತಂದೆಯ ಮೇಲೆಯೇ ಹಲ್ಲೆ!

    ಮಂಗಳೂರು: ಮಕ್ಕಳ ಕಳ್ಳನೆಂದು ಭಾವಿಸಿ ಮಗುವಿನ ತಂದೆಗೇ ಸಾರ್ವಜನಿಕರು ಸೇರಿ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ.

    ಉಜಿರೆ ಪೇಟೆಯಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಮಗುವಿನೊಂದಿಗೆ ಆಟೋದಲ್ಲಿ ಬರುತ್ತಿದ್ದ ವ್ಯಕ್ತಿ ಸಂಶಯಾಸ್ಪದವಾಗಿ ಕಂಡು ಬಂದಿದ್ದರಿಂದ ಅನುಮಾನಗೊಂಡ ಸ್ಥಳೀಯರು ಆಟೋ ನಿಲ್ಲಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಿಮಗ್ಯಾಕ್ರೀ ಎಂದು ಉತ್ತರಿಸಿದ ಕಾರಣ ಸಾರ್ವಜನಿಕರು ಆತನಿಗೆ ಥಳಿಸಿದ್ದಾರೆ.

    ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಕೊನೆಗೆ ತನ್ನದೇ ಮಗುವೆಂದು ಹೇಳಿಕೊಂಡಿದ್ದಾನೆ. ಕೂಡಲೇ ಬೆಳ್ತಂಗಡಿ ಪೊಲೀಸರು ಆಗಮಿಸಿ ವಿಚಾರಿಸಿದ್ದು, ಯುವಕ ಬೆಳ್ತಂಗಡಿಯ ಕಕ್ಕಿಂಜೆ ನಿವಾಸಿ ಖಲೀದ್ ಎನ್ನುವುದನ್ನು ಪತ್ತೆ ಮಾಡಿದ್ದಾರೆ. ಖಲೀದ್‍ಗೆ ಎರಡು ಮದುವೆಯಾಗಿದ್ದು, ಬೇಲೂರು ಮೂಲದ ಯುವತಿ ಎರಡನೇ ಪತ್ನಿಯಾಗಿದ್ದಳು. ಆಕೆಯ ಎರಡು ವರ್ಷದ ಹೆಣ್ಣು ಮಗುವನ್ನು ಆಟೋದಲ್ಲಿ ಕರೆದುಕೊಂಡು ಬರುತ್ತಿದ್ದನು. ಈ ವೇಳೆ ಖಲೀದ್ ತನ್ನ ಮಗುವಿಗೆ ಹೊಡೆದಿದ್ದನ್ನು ಬೈಕಿನಲ್ಲಿ ಬರುತ್ತಿದ್ದ ಕೆಲ ಯುವಕರು ಗಮನಿಸಿದ್ದರು.

    ಈ ಹಿನ್ನೆಲೆಯಲ್ಲಿ ಉಜಿರೆ ಪೇಟೆಯಲ್ಲಿ ವಿಚಾರಿಸಿದ್ದಲ್ಲದೆ, ಮಕ್ಕಳ ಕಳ್ಳನೆಂದು ಭ್ರಮಿಸಿ ಹೊಡೆದಿದ್ದಾರೆ. ದಕ್ಷಿಣ ಕನ್ನಡ ಭಾಗದಲ್ಲಿ ಕೂಡ ಮಕ್ಕಳ ಕಳ್ಳರ ವದಂತಿ ಇರುವುದರಿಂದ ಇಂಥಹ ಘಟನೆ ನಡೆದಿದ್ದು, ಬೆಳ್ತಂಗಡಿ ಪೊಲೀಸರು ವಿಚಾರಣೆ ನಡೆಸಿ ಬಿಟ್ಟಿದ್ದಾರೆ.

  • ಮಕ್ಕಳ ಕಳ್ಳನೆಂದು ಮಹಾರಾಷ್ಟ್ರದಲ್ಲಿ ಕೊಲೆಯಾಗಿದ್ದ ವ್ಯಕ್ತಿಯ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ

    ಮಕ್ಕಳ ಕಳ್ಳನೆಂದು ಮಹಾರಾಷ್ಟ್ರದಲ್ಲಿ ಕೊಲೆಯಾಗಿದ್ದ ವ್ಯಕ್ತಿಯ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ

    ವಿಜಯಪುರ: ಮಕ್ಕಳ ಕಳ್ಳ ಎಂದು ತಿಳಿದು ಮಹಾರಾಷ್ಟ್ರದಲ್ಲಿ ಕೊಲೆಯಾಗಿದ್ದ ಮೃತ ದೇಹವನ್ನು ರಾಜ್ಯಕ್ಕೆ ತರಲಾಗಿದೆ.

    ಜಿಲ್ಲೆಯ ಇಂಡಿ ತಾಲೂಕಿನ ಗುಂದಾವನ ಗ್ರಾಮದ ರಾಜು ಭೋಸ್ಲೆ (45) ಹತ್ಯೆಗೀಡಾದ ದುರ್ದೈವಿ. ಜುಲೈ 1ರಂದು ಮಹಾರಾಷ್ಟ್ರದ ಧೂಳೆ ಎಂಬ ಗ್ರಾಮದ ಗ್ರಾಮಸ್ಥರು ಮಕ್ಕಳ ಕಳ್ಳರೆಂದು ಭಾವಿಸಿ 5 ಮಂದಿಯನ್ನು ಹೊಡೆದು ಕೊಲೆ ಮಾಡಿದ್ದರು. ಅಂದು ಮೃತಪಟ್ಟ ಐವರಲ್ಲಿ ರಾಜು ಕೂಡ ಒಬ್ಬರಾಗಿದ್ದರು. ರಾಜು ಮಹಾರಾಷ್ಟ್ರದಲ್ಲಿ ಭಿಕ್ಷಾಟನೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಇದನ್ನೂ ಓದಿ: ರಂಜಾನ್ ಪ್ರಯುಕ್ತ ಭಿಕ್ಷಾಟನೆಗೆ ಬಂದಿದ್ದ ಐವರು ಮಹಿಳೆಯರನ್ನು ಮಕ್ಕಳ ಕಳ್ಳರೆಂದು ತಿಳಿದು ಒಂದು ದಿನ ಕೂಡಿ ಹಾಕಿದ್ರು

    ಧೂಳೆ ಗ್ರಾಮದ ಜನರ ತಪ್ಪು ತಿಳುವಳಿಕೆಯಿಂದ ರಾಜು ಭೋಸ್ಲೆ ಕೂಡ ಘಟನೆಯಲ್ಲಿ ಹತ್ಯೆಗೀಡಾಗಿದ್ದರು. ಘಟನೆ ಸಂಬಂಧ ಮಂಗಳವಾರ ರಾಜು ಭೋಸ್ಲೆ ಶವವನ್ನು ಝಳಕಿ ಪೊಲೀಸರ ಸಮ್ಮುಖದಲ್ಲಿ ಮಹಾರಾಷ್ಟ್ರದ ಪೊಲೀಸರು ಹಸ್ತಾಂತರಿಸಿದ್ದಾರೆ. ರಾಜು ಭೋಸ್ಲೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಇಂದು ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

  • ಗಾಂಜಾ ನಶೆಯಲ್ಲಿದ್ದವನಿಗೆ ಮಕ್ಕಳ ಕಳ್ಳ ಎಂದು ಶಂಕಿಸಿ ಥಳಿಸಿದ್ರು!

    ಗಾಂಜಾ ನಶೆಯಲ್ಲಿದ್ದವನಿಗೆ ಮಕ್ಕಳ ಕಳ್ಳ ಎಂದು ಶಂಕಿಸಿ ಥಳಿಸಿದ್ರು!

    ಬೆಂಗಳೂರು: ಅನುಮಾನಾಸ್ಪದವಾಗಿ ಕಾಣಿಸಿಕೊಂಡ ವ್ಯಕ್ತಿಯನ್ನು ಮಕ್ಕಳ ಕಳ್ಳನೆಂದು ಶಂಕಿಸಿ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಗರದ ಹೆಚ್‍ಎಎಲ್ ಬಳಿ ನಡೆದಿದೆ.

    ಅಸ್ಸಾಂ ಮೂಲದ ಚಂದ್ರಕುಮಾರ್ ಎಂಬಾತ ಸಾರ್ವಜನಿಕರಿಂದ ಸಖತ್ ಗೂಸಾ ತಿಂದಾತ. ಹೆಚ್‍ಎಎಲ್ ಬಳಿಯ ದೊಡ್ಡನೆಕ್ಕುಂದಿ ಸರ್ಕಾರಿ ಶಾಲೆ ಬಳಿ ಇಂದು ಸಂಜೆ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಚಂದ್ರಕುಮಾರ್ ನನ್ನು ಕಂಡ ಜನರು ಕಂಬಕ್ಕೆ ಕಟ್ಟಿ ಹಿಗ್ಗಮುಗ್ಗಾ ಥಳಿಸಿದ್ದಾರೆ.

    ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಚಂದ್ರಕಾಂತ್ ಗಾಂಜಾ ಸೇವನೆ ಮಾಡಿ ನಶೆಯಲ್ಲಿ ತಿರುಗಾಡುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಚಂದ್ರಕುಮಾರ್ ನನ್ನು ವಶಕ್ಕೆ ಪಡೆದು ಎಚ್‍ಎಎಲ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಮೇ 24 ರಂದು ಮಕ್ಕಳ ಕಳ್ಳ ಎಂದು ರಾಜಸ್ಥಾನ ಮೂಲದ ಕಾಲುರಾಮ್ ಅಲಿಯಾಸ್ ಬಚ್ಚನ್ ರಾಮ್ ಎಂಬಾತನ್ನು ನಗರದ ಕಾಟನ್ ಪೇಟೆ ಬಳಿಯ ಭಕ್ಷಿ ಗಾರ್ಡನ್ ಬಳಿ ಸಾರ್ವಜನಿಕರು ಥಳಿಸಿ ಕೊಲೆ ಮಾಡಿದ್ದರು. ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿಡಿಯೋ ಆಧರಿಸಿ ಹಲವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಕ್ಕಳ ಕಳ್ಳರ ವದಂತಿ ಹೆಚ್ಚಾಗಿತ್ತು. ಇದಾದ ಬಳಿಕ ಪೊಲೀಸರು ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿದ್ದರೂ ಈಗ ಮತ್ತದೇ ರೀತಿಯ ಘಟನೆಗಳು ನಡೆಯುತ್ತಿದೆ.

  • ಮಕ್ಕಳ ಕಳ್ಳರ ಬಗ್ಗೆ ಜಾಗೃತಿ ಮೂಡಿಸಲು ಬಂದಿದ್ದ ಅಧಿಕಾರಿಗಳನ್ನೇ ಕೊಂದ್ರು!

    ಮಕ್ಕಳ ಕಳ್ಳರ ಬಗ್ಗೆ ಜಾಗೃತಿ ಮೂಡಿಸಲು ಬಂದಿದ್ದ ಅಧಿಕಾರಿಗಳನ್ನೇ ಕೊಂದ್ರು!

    ಅಗರ್ತಲಾ: ಮಕ್ಕಳ ಕಳ್ಳರು ಎಂದು ತಿಳಿದು ತ್ರಿಪುರಾದ ಮಾಹಿತಿ ಮತ್ತು ಸಂಸ್ಕೃತಿ ವಿಭಾಗದ ಒಬ್ಬರು ಸದಸ್ಯರು ಸೇರಿದಂತೆ ಇಬ್ಬರ ಮೇಲೆ ಹಲ್ಲೆ ನಡೆಸಿ ಕೊಂದ ಘಟನೆ ತ್ರಿಪುರದಲ್ಲಿ ನಡೆದಿದೆ.

    ಸುಕಾಂತ್ ಚಕ್ರವರ್ತಿ(33) ಕೊಲೆಯಾದ ವ್ಯಕ್ತಿ. ಸುಕಾಂತ್‍ರನ್ನು ಮಕ್ಕಳು ಕಳ್ಳ ಎಂದು ಭಾವಿಸಿದ ಗ್ರಾಮದ ಜನರು ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸ್ಮೃತಿ ರಂಜನ್ ದಾಸ್ ತಿಳಿಸಿದ್ದಾರೆ.

    ಸುಕಾಂತ್ ತ್ರಿಪುರಾದ ಮಾಹಿತಿ ಮತ್ತು ಸಂಸ್ಕೃತಿ ವಿಭಾಗದ ಸದಸ್ಯರಾಗಿದ್ದು, ಮಕ್ಕಳ ಕಳ್ಳರು ವದಂತಿ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುಲು ಅಭಿಯಾನವನ್ನು ಆಯೋಜಿಸಲಾಗಿತ್ತು. ಸ್ಥಳೀಯರಿಗೆ ಜಾಗೃತಿ ಮೂಡಿಸಲು ಹೋದ ಅಧಿಕಾರಿಯೇ ಕೊಲೆಯಾಗಿದ್ದಾರೆ.

    ಸುಕಾಂತ್ ಜನಸಂದಣಿ ಪ್ರದೇಶಗಳಲ್ಲಿ ಲೌಡ್ ಸ್ಪೀಕರ್ ಬಳಸಿ ಮಕ್ಕಳ ಕಳ್ಳರ ಜಾಗೃತಿಯ ಬಗ್ಗೆ ಅಭಿಯಾನ ನಡೆಸುತ್ತಿದ್ದರು. ಆಗ ಗ್ರಾಮಸ್ಥರು ಇವರೇ ಮಕ್ಕಳ ಕಳ್ಳ ಎಂದು ತಿಳಿದು ಅವರನ್ನು ಹೊಡೆದು ಕೊಂದಿದ್ದಾರೆ. ಅಲ್ಲದೇ ಸುಕಾಂತ್ ಜೊತೆಯಲ್ಲಿದ್ದ ಇಬ್ಬರ ಮೇಲೆಯೂ ಹಲ್ಲೆ ನಡೆಸಿ ಅಧಿಕಾರಿಗಳ ವಾಹನವನ್ನು ಜಖಂಗೊಳಿಸಿದ್ದಾರೆ. ಜನರಿಗೆ ಒಳ್ಳೆಯದಾಗಲು ಸರ್ಕಾರದವರೇ ನಮ್ಮನ್ನು ಕಳುಹಿಸಿದ್ದಾರೆ ಎಂದು ಮೂವರು ಹೇಳಿದರು ಅವರ ಮಾತನ್ನು ಕೇಳದೇ ಗ್ರಾಮಸ್ಥರು ದಾಳಿ ನಡೆಸಿದ್ದಾರೆ.

    ಸದ್ಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ನಡೆದ ನಂತರ ತ್ರಿಪುರಾ ಮುಖ್ಯಮಂತ್ರಿ ಬಿಪ್‍ಲಾಬ್ ಕುಮಾರ್ ದೇಬ್ ಜನರಲ್ಲಿ ಯಾವುದೇ ವದಂತಿಗೆ ಕಿವಿ ಕೊಡದೇ ಶಾಂತಿ ಕಾಪಾಡಲು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಗುರುವಾರದಿಂದ 48 ಗಂಟೆ ಎಸ್‍ಎಂಎಸ್ ಹಾಗೂ ಇಂಟರ್ ನೆಟ್ ಸ್ಥಗಿತಗೊಳಿಸಿದ್ದಾರೆ.

  • ಮಕ್ಕಳ ಕಿಡ್ನಾಪ್ ವದಂತಿ ಪ್ರಕರಣ – ಮೊತ್ತೊಬ್ಬ ಅಮಾಯಕ ಬಲಿ

    ಮಕ್ಕಳ ಕಿಡ್ನಾಪ್ ವದಂತಿ ಪ್ರಕರಣ – ಮೊತ್ತೊಬ್ಬ ಅಮಾಯಕ ಬಲಿ

    ಬೆಂಗಳೂರು: ರಾಜ್ಯದೆಲ್ಲೆಡೆ ಮಕ್ಕಳ ಕಳ್ಳರ ವದಂತಿ ಹಬ್ಬಿದ್ದು, ಕಾಟನ್ ಪೇಟೆ ಪಕ್ಷ ಗಾರ್ಡನ್ ನಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಿ ಕೊಲೆಮಾಡಿದ್ದ ಪ್ರಕರಣ ಮಾಸುವೇ ಮುನ್ನವೇ ಮತ್ತೊಂದು ಘಟನೆ ಸಂಭವಿಸಿದೆ.

    ಕರ್ನಾಟಕ ಗಡಿಗೆ ಹೊಂದಿಕೊಂಡಿರೋ ತಮಿಳುನಾಡಿನ ಹೊಸೂರು ಸಮೀಪದ ವನ್ನಲವಾಡಿ ಗ್ರಾಮದಲ್ಲಿ ಮಕ್ಕಳ ಕಳ್ಳ ಎಂದು ಶಂಕಿಸಿ ಉತ್ತರಭಾರತಿಯನನ್ನು ಗ್ರಾಮಸ್ಥರು ಹೊಡೆದು ಸಾಯಿಸಿರುವ ಘಟನೆ ನಡೆದಿದೆ. ಇದನ್ನೂ ಓದಿ: ಮಕ್ಕಳ ಕಳ್ಳ ಎಂದು ಭಾವಿಸಿ ಥಳಿತ- ನಡು ರಸ್ತೆಯಲ್ಲೇ ಯುವಕ ದುರ್ಮರಣ!

    ಇನ್ನು ಮೃತ ಯುವಕ ಉತ್ತರಭಾರತೀಯನಾಗಿದ್ದು ಹೆಸರು ವಿಳಾಸ ಪತ್ತೆಯಾಗಿಲ್ಲ. ಈತ ವನ್ನಲವಾಡಿ ಸಮೀಪ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಜೊತೆಗಾರರಿಬ್ಬರ ಜೊತೆ ಹೋಗುವಾಗ ಗ್ರಾಮಸ್ಥರು ಮಕ್ಕಳ ಕಳ್ಳರು ಎಂದು ಮೂವರನ್ನು ಶಂಕಿಸಿ ಹಿಡಿಯಲು ಮುಂದಾಗಿದ್ದಾರೆ. ಆಗ ಇಬ್ಬರು ತಪ್ಪಿಸಿಕೊಂಡು ಓಡಿಹೋದ್ದಾರೆ.  ಆದರೆ ಈತ ಮಾತ್ರ ಸಿಕ್ಕಿಬಿದ್ದಿದ್ದಾನೆ. ಸಿಕ್ಕಿಬಿದ್ದವನನ್ನು ಹಿಗ್ಗಾ-ಮುಗ್ಗಾ ಥಳಿಸಿ ಗ್ರಾಮಸ್ಥರು ಹತ್ಯೆ ಮಾಡಿದ್ದಾರೆ.

    ಈ ಸಂಬಂಧ ಹೊಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ವದಂತಿ ಹಿನ್ನೆಲೆಯಲ್ಲಿ ಅಮಾಯಕರನ್ನು ಗ್ರಾಮಸ್ಥರು ಹಿಡಿದು ಹೊಡೆಯುತ್ತಿರುವ ಕಾರಣ ಗುರುವಾರ ಸಂಜೆ ಹೊಸೂರು ಪೊಲೀಸರು ಹೊಸೂರಿನಾದ್ಯಂತ ಇದೊಂದು ವದಂತಿ ಯಾರು ಕಾನೂನು ಕೈಗೆತ್ತಿಕೊಳ್ಳಬೇಡಿ ಎಂದು ಪ್ರಚಾರ ಮಾಡಿದ್ದಾರೆ.

  • ಮಕ್ಕಳ ಕಳ್ಳ ಎಂದು ಭಾವಿಸಿ ಥಳಿತ- ನಡು ರಸ್ತೆಯಲ್ಲೇ ಯುವಕ ದುರ್ಮರಣ!

    ಮಕ್ಕಳ ಕಳ್ಳ ಎಂದು ಭಾವಿಸಿ ಥಳಿತ- ನಡು ರಸ್ತೆಯಲ್ಲೇ ಯುವಕ ದುರ್ಮರಣ!

    ಬೆಂಗಳೂರು: ಮಕ್ಕಳ ಕಳ್ಳ ಅಂತ ಭಾವಿಸಿ ವ್ಯಕ್ತಿಯೋರ್ವನನ್ನು ಸ್ಥಳೀಯರು ಕಂಬಕ್ಕೆ ಕಟ್ಟಿ, ದೊಣ್ಣೆಯಿಂದ ಹೊಡೆದು ಕೊಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಗಂಭೀರವಾಗಿ ಗಾಯಗೊಂಡ ವ್ಯಕ್ತಿ ನಡುರಸ್ತೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ಮೃತ ಕಾಲುರಾಮ್ ಅಲಿಯಾಸ್ ಬಚ್ಚನ್‍ರಾಮ್ ರಾಜಸ್ಥಾನ ಮೂಲದವನು ಅಂತ ತಿಳಿದುಬಂದಿದೆ.

    ಕಾಟನ್ ಪೇಟೆ ಬಳಿಯ ಬಕ್ಷಿಗಾರ್ಡನ್‍ಗೆ ಈತ ಹೋಗಿದ್ದಾನೆ. ಈ ವೇಳೆ ಮಕ್ಕಳ ಕಳ್ಳ ಎಂದು ಶಂಕಿಸಿ ಈತನನ್ನು ಹಿಡಿದ ಸಾರ್ವಜನಿಕರು ಹೊಡೆದಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪೆಟ್ಟು ತಿಂದ ಕಾಲುರಾಮ್‍ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ರು. ಆದ್ರೆ ಅದಾಗಲೇ ಆತ ಮೃತಪಟ್ಟಿದ್ದಾನೆ.

    ಇದಕ್ಕೆಲ್ಲಾ ಕಾರಣ ವಾಟ್ಸಾಪ್‍ಗಳಲ್ಲಿ ಹರಿದಾಡ್ತಿರುವ ಒಂದು ಆಡಿಯೋ ಕ್ಲಿಪ್ ಎನ್ನಲಾಗಿದೆ. ಮಕ್ಕಳ ಕಳ್ಳರ ಬಗ್ಗೆ ಎಚ್ಚರಿಕೆ ನೀಡುವ ಈ ಆಡಿಯೋ ಕ್ಲಿಪ್ ಸುಳ್ಳು ವದಂತಿಯಷ್ಟೇ ಅಂತ ಚಿಕ್ಕಬಳ್ಳಬಳ್ಳಾಪುರ ಎಸ್‍ಪಿ ಸ್ಪಷ್ಟನೆ ಕೂಡಾ ಕೊಟ್ಟಿದ್ರು.