Tag: ಮಂದಾರ್ತಿ

  • ಮಂದಾರ್ತಿ ದುರ್ಗಾಪರಮೇಶ್ವರಿ ದೇವರ ಐದು ಸೇವೆಯಾಟ ಶುರು

    ಮಂದಾರ್ತಿ ದುರ್ಗಾಪರಮೇಶ್ವರಿ ದೇವರ ಐದು ಸೇವೆಯಾಟ ಶುರು

    ಉಡುಪಿ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಐದು ಮೇಳಗಳ ಪ್ರಥಮ ಸೇವೆ ಆಟದೊಂದಿಗೆ ಯಕ್ಷಗಾನ ತಿರುಗಾಟಕ್ಕೆ ಚಾಲನೆ ದೊರೆಯಿತು. ಕೋವಿಡ್ ಕಾಲದಲ್ಲಿ ದೇಗುಲದಲ್ಲೇ ಹರಕೆ ಆಟಗಳು ನಡೆಯುತ್ತಿತ್ತು. ಇನ್ಮುಂದೆ ಭಕ್ತರ ಮನೆಗಳಲ್ಲಿ ಚೆಂಡೆ ನಾದ, ಬಣ್ಣದ ಸೇವೆ ನಡೆಯಲಿದೆ.

    ಬೆಳಗ್ಗೆ ಬಾರಾಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಗಣಹೋಮ, ಮಧ್ಯಾಹ್ನ ಶ್ರೀ ಕ್ಷೇತ್ರದಲ್ಲಿ ಗಣಹೋಮ, ಐದು ಮೇಳಗಳ ಶ್ರೀ ಮಹಾಗಣಪತಿ ಪೂಜೆ ಹಾಗೂ ರಾತ್ರಿ ಪ್ರಥಮ ದೇವರ ಸೇವೆ ನಡೆಯಿತು. ಐದು ಮೇಳದ ಚೌಕಿಗಳಿಗೆ ಸಾಲಾಗಿ ಪೂಜೆ ಸಲ್ಲಿಸಲಾಯ್ತು.

    ಸಂಪ್ರದಾಯದಂತೆ ರಾತ್ರಿ ಬಾರಾಳಿ ದೇವಾಲಯದಲ್ಲಿ ಗೆಜ್ಜೆ ಕಟ್ಟಿ, ವೇಷ ಹಾಕಿಕೊಂಡು ಬಂದು ಮಂದಾರ್ತಿಯಲ್ಲಿ ಸೇವೆ ಸಮರ್ಪಣೆಗೊಂಡಿತು. ನೂರಾರು ಜನ ಭಕ್ತರು, ಯಕ್ಷ ಪ್ರೇಮಿಗಳು ತಿರುಗಾಟದ ಮೊದಲ ಸೇವೆಯಲ್ಲಿ ಪಾಲ್ಗೊಂಡರು.

    ಕೊರೋನ ಇದ್ದ ಕಾರಣ ಹರಕೆ ಆಟಗಳು ದೇಗುಲದ ಸಭಾಂಗಣದಲ್ಲಿ ನಡೆಯುತ್ತಿತ್ತು. ಜಿಲ್ಲಾಡಳಿತ ತಿರುಗಾಟಕ್ಕೆ ಅವಕಾಶ ಕೊಟ್ಟಿರೋದ್ರಿಂದ ಇಂದಿನಿಂದ ಐದು ಕಡೆ ಆಟ ನಡೆಯಲಿದೆ. ಸಾಮಾಜಿಕ ಅಂತರ, ಸರ್ಕಾರದ ನಿಯಮ ಪಾಲಿಸಿಕೊಂಡು ಸೇವೆ ಮಾಡುತ್ತೇವೆ ಎಂದು ಅನುವಂಶಿಕ ಮೊಕ್ತೇಸರ ಧನಂಜಯ ಶೆಟ್ಟಿ ಹೇಳಿದ್ದಾರೆ.

    ಪೂಜಾ ವಿಧಿ, ಸೇವೆಗಳ ಸಂದರ್ಭ ಕಾರ್ಯನಿರ್ವಹಣಾಧಿಕಾರಿ ಎಸ್ ಪಿ ಬಿ ಮಹೇಶ್, ಸುರೇಂದ್ರ ಶೆಟ್ಟಿ ಎಚ್., ಪ್ರಭಾಕರ ಶೆಟ್ಟಿ ಎಚ್., ಶಂಭು ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಅರ್ಚಕ ವೃಂದ, ದೇಗುಲ ಸಿಬ್ಬಂದಿ, ಭಕ್ತರು ಹಾಗೂ ಮೇಳದ ಕಲಾವಿದರು ಉಪಸ್ಥಿತರಿದ್ದರು.

  • ಕೊಲ್ಲೂರು, ಕೋಟ, ಮಂದಾರ್ತಿಯಲ್ಲಿ ಆನ್‍ಲೈನ್ ಪೂಜೆಗೆ ಆಡಳಿತ ಮಂಡಳಿ ರೆಡಿ

    ಕೊಲ್ಲೂರು, ಕೋಟ, ಮಂದಾರ್ತಿಯಲ್ಲಿ ಆನ್‍ಲೈನ್ ಪೂಜೆಗೆ ಆಡಳಿತ ಮಂಡಳಿ ರೆಡಿ

    ಉಡುಪಿ: ರಾಜ್ಯ ಸರ್ಕಾರದ ಹೊಸ ನಿಯಮದ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಮೂರು ಕಡೆ ಆನ್‍ಲೈನ್ ಪೂಜೆಗೆ ಅವಕಾಶ ನೀಡಲಾಗಿದೆ. ಕೊಲ್ಲೂರಿನಲ್ಲಿ ಈಗಾಗಲೇ ಭಕ್ತರಿಗೆ ಅವಕಾಶವಿದ್ದು, ಕೋಟ ಅಮೃತೇಶ್ವರಿ ಮತ್ತು ಮಂದಾರ್ತಿ ಕ್ಷೇತ್ರ ಹೊಸ ಸೇರ್ಪಡೆಯಾಗಿದೆ.

    ರಾಜ್ಯಾದ್ಯಂತ ಮುಜರಾಯಿ ದೇವಸ್ಥಾನಗಳಲ್ಲಿ ಆನ್‍ಲೈನ್ ಪೂಜೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಮುಜರಾಯಿ ಇಲಾಖೆಯಿಂದ ಉಡುಪಿ ಜಿಲ್ಲೆಯೊಳಗೆ ಮೂರು ದೇವಸ್ಥಾನಗಳಿಗೆ ಅವಕಾಶವಾಗಿದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಈಗಾಗಲೇ ಭಕ್ತರಿಗೆ ಬುಕ್ ಮಾಡಿ ಪೂಜೆ ಮಾಡಿಸಿ, ಪೋಸ್ಟ್ ಮೂಲಕ ಪ್ರಸಾದ ಪಡೆಯುವ ಅವಕಾಶ ಇತ್ತು. ಇದೀಗ ಕೋಟ ಅಮೃತೇಶ್ವರಿ, ಮಂದಾರ್ತಿ ದುರ್ಗಾ ಪರಮೇಶ್ವರಿ ದೇಗುಲದಲ್ಲಿ ಈ ಅವಕಾಶ ಕಲ್ಪಿಸಲಾಗಿದೆ. ಕ್ಷೇತ್ರಕ್ಕೆ ಬರಲು ಸಾಧ್ಯವಾಗದವರು ಈ ಅವಕಾಶ ಪಡೆಯಬಹುದು.

    ಜೂನ್ 1 ರಿಂದ ನಮ್ಮಲ್ಲಿ ಆನ್‍ಲೈನ್ ಪೂಜೆ ಆರಂಭವಾಗಲಿದೆ ಎಂದು ಕೋಟ ಅಮೃತೇಶ್ವರಿ ದೇವಸ್ಥಾನ ಮಾಹಿತಿ ನೀಡಿದೆ. ಕೋಟ ಅಮೃತೇಶ್ವರಿ ದೇವರಿಗೆ ವಿಶೇಷ ಅಭಿಷೇಕ ಬೆಳಗ್ಗೆ ಸಂಪನ್ನವಾಗುತ್ತದೆ. ಅಲಂಕಾರ ಪೂಜೆ, ಮಂಗಳಾರತಿ ನಡೆಸಿ ಲಾಕ್ ಡೌನ್ ಸಂದರ್ಭದಲ್ಲಿ ಬಾಗಿಲು ಮುಚ್ಚುತ್ತಿದ್ದರು, ಜೂನ್ 1 ರಿಂದ ದೇವಸ್ಥಾನ ತೆರೆಯಲಿದ್ದು, ಭಕ್ತರಿಗೆ ದರ್ಶನ ಅವಕಾಶ ಸಿಗಲಿದೆ. ಇದನ್ನೂ ಓದಿ: ಆನ್‍ಲೈನ್‍ನಲ್ಲಿ ಮಾದಪ್ಪನ ದರ್ಶನ ಆರಂಭ

    ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆನ್ ಲೈನ್ ಪೂಜೆಗೆ ಅವಕಾಶ ಆರಂಭವಾಗಿದೆ. ಭಕ್ತರು ಆನ್‍ಲೈನ್ ಮೂಲಕ ಪೂಜೆ ಬುಕ್ ಮಾಡಬಹುದು. ಸರ್ಕಾರದ ನಿಯಮದಂತೆ ಪೂಜೆ ನಡೆಸುತ್ತೇವೆ. ಜೂನ್ 1ರಿಂದ ಭಕ್ತರಿಗೆ ನೇರ ದರ್ಶನ ಅವಕಾಶವಿದೆ. ಸರ್ಕಾರದ ಸುತ್ತೋಲೆ ಈವರೆಗೆ ನಮ್ಮ ಕೈ ಸೇರಿಲ್ಲ. ದೇಗುಲ ತೆರವಿಗೆ ಎಲ್ಲಾ ಸ್ವಚ್ಛತೆ, ಸಿದ್ಧತೆ ಮಾಡುತ್ತೇವೆ ಎಂದು ಮಂದರ್ತಿ ದೇವಸ್ಥಾನ ಧರ್ಮದರ್ಶಿ ಧನಂಜಯ ಶೆಟ್ಟಿ ಮಾಹಿತಿ ನೀಡಿದ್ದಾರೆ.