Tag: ಮಂತ್ರಿ ಸ್ಥಾನಮಾನ

  • ಐವರು ಧಾರ್ಮಿಕ ನಾಯಕರಿಗೆ  ಮಂತ್ರಿಸ್ಥಾನ ನೀಡಿದ ಮಧ್ಯಪ್ರದೇಶ ಸರ್ಕಾರ

    ಐವರು ಧಾರ್ಮಿಕ ನಾಯಕರಿಗೆ ಮಂತ್ರಿಸ್ಥಾನ ನೀಡಿದ ಮಧ್ಯಪ್ರದೇಶ ಸರ್ಕಾರ

    ಭೋಪಾಲ್: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಮಧ್ಯಪ್ರದೇಶ ಸರ್ಕಾರ ಐದು ಮಂದಿ ಹಿಂದೂ ಧಾರ್ಮಿಕ ಮುಖಂಡರಿಗೆ ರಾಜ್ಯ ದರ್ಜೆಯ ಮಂತ್ರಿ ಸ್ಥಾನವನ್ನು ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.

    ಕಂಪ್ಯೂಟರ್ ಬಾಬಾ, ನರ್ಮಾನಂದ ಮಹಾರಾಜ್, ಹರಿಹರನಂದ ಮಹಾರಾಜ್, ಭೈಯು ಮಹಾರಾಜ್‍ಜಂದ್ ಹಾಗೂ ಪಂಡಿತ್ ಯೋಗೇಂದ್ರ ಮಹಂತ್ ಅವರಿಗೆ ಮಧ್ಯಪ್ರದೇಶ ಸರ್ಕಾರ ಮಂತ್ರಿ ಸ್ಥಾನವನ್ನು ಕಲ್ಪಿಸಿದೆ.

    ಈ ಐದು ಮಂದಿಗೆ ನರ್ಮದಾ ನದಿಯ ಸಂರಕ್ಷಣಾ ಸಮಿತಿ ಸದಸ್ಯ ಸ್ಥಾನಮಾನವನ್ನು ನೀಡಲು ಮಾರ್ಚ್ ತಿಂಗಳಿನಲ್ಲಿ ಕ್ಯಾಬಿನೆಟ್ ಒಪ್ಪಿಗೆ ನೀಡಿತ್ತು. ಹೀಗಾಗಿ ಕೆಲಸ ನಿರ್ವಹಿಸಲು ಸಹಾಯವಾಗುವಂತೆ ಇವರಿಗೆ ಮಂತ್ರಿ ಸ್ಥಾನವನ್ನು ನೀಡಲಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾಂಗ್ರೆಸ್, ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸಿಎಂ ಶಿವರಾಜ್ ಚೌಹಾಣ್ ಸರ್ಕಾರ ಕೆಲವರನ್ನು ಸಂತೃಪ್ತಿಗೊಳಿಸುವ ಉದ್ದೇಶದಿಂದ ಈ ಕ್ರಮಕೈಗೊಂಡಿದೆ. ಉತ್ತರ ಪ್ರದೇಶದಲ್ಲಿ ಇಂತಹ ಕ್ರಮಕೈಗೊಂಡ ಕಾರಣ ಏನಾಗಿತ್ತು ಎಂಬುದನ್ನು ಇವರು ತಿಳಿಯಬೇಕಿದೆ ಎಂದು ಆರೋಪಿಸಿದೆ.

    ವಿರೋಧಿ ಪಕ್ಷಗಳ ಆರೋಪಗಳನ್ನು ನಿರಕಾರಿಸಿರುವ ಮಧ್ಯಪ್ರದೇಶ ಬಿಜೆಪಿ ಪಕ್ಷದ ವಕ್ತಾರ ರಜನೀಶ್, ಸರ್ಕಾರವು ನಿಯಮಾವಳಿ ಪ್ರಕಾರವೇ ಕಾರ್ಯನಿರ್ವಹಿಸುತ್ತಿದೆ. ಧಾರ್ಮಿಕ ನಾಯಕರಿಗೆ ನೀಡಿರುವ ಮಂತ್ರಿಸ್ಥಾನಮಾನ ನರ್ಮದಾ ನದಿಯ ಅಭಿವೃದ್ಧಿ ಕಾರ್ಯ ನಡೆಸಲು ನೆರವಾಗುತ್ತದೆ. ಅಲ್ಲದೇ ಜನರನ್ನು ಈ ಕಾರ್ಯದಲ್ಲಿ ಭಾಗವಹಿಸುವಂತೆ ಮಾಡಲು ಧಾರ್ಮಿಕ ಮುಖಂಡರು ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದ್ದಾರೆ.

    ರಾಜ್ಯ ಸರ್ಕಾರ ಕ್ರಮವನ್ನು ಸಮರ್ಥಿಸಿಕೊಂಡಿರುವ ಕಂಪ್ಯೂಟರ್ ಬಾಬಾ ನಮ್ಮ ಕಾರ್ಯಕ್ಕೆ ತಕ್ಕ ಸ್ಥಾನ ನೀಡಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಕೆಲ ದಿನಗಳ ಹಿಂದೆ ಕಂಪ್ಯೂಟರ್ ಬಾಬಾ ನರ್ಮದಾ ಯೋಜನೆ ನಿರ್ಮಾಣ ಕಾರ್ಯದಲ್ಲಿ ಉಂಟಾಗಿರುವ ವ್ಯಾಪಕ ಭ್ರಷ್ಟಚಾರದ ಕುರಿತು ಯಾತ್ರೆ ನಡೆಸಿ ಜಾಗೃತಿ ಕಾರ್ಯ ನಡೆಸುವುದಾಗಿ ಹೇಳಿಕೆ ನೀಡಿದ್ದರು.