ದಾವಣಗೆರೆ: ನಾನು ಕಲ್ಲುಬಂಡೆ ಇದ್ದಂತೆ ನಾನ್ಯಾವತ್ತು ಕರಗಲ್ಲ. ಮಂತ್ರಿ ಸ್ಥಾನ ನೀರಿನ ಮೇಲೆ ಗುಳ್ಳೆ, ಈಗ ಎತ್ತಿನ ಬಂಡಿಯಲ್ಲಿ ಬಂದೆ. ಆ ಬಂಡಿ ಮುಂದೆ ಗೂಟದ ಕಾರು ಲೆಕ್ಕವೇ ಇಲ್ಲ ಎಂದು ದಾವಣಗೆರೆಯಲ್ಲಿ ಶಾಸಕ ಎಂಪಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ಗೂಟದ ಕಾರು ಬೇಕು ಎನ್ನುವವರಿಗೆ ಮಂತ್ರಿ ಮಾಡಬೇಡಿ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದಲ್ಲಿ ತಿರುಗೇಟು ನೀಡಿದ ರೇಣುಕಾಚಾರ್ಯ, ನಾನು ಸಚಿವ ಸ್ಥಾನ ಆಕಾಂಕ್ಷಿ ಎಂದು ಹೇಳಿದ್ದು ನಿಜ. ಆದರೆ ನನಗೆ ಗೂಟದ ಕಾರು ಲೆಕ್ಕಕ್ಕೇ ಇಲ್ಲ ಎಂದಿದ್ದಾರೆ.
ನನಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯ. ಅಧಿಕಾರ ಶಾಶ್ವತ ಅಲ್ಲ ಯಾರೇ ಟೀಕೆ ಮಾಡಿದರು ಪರವಾಗಿಲ್ಲ. ನಾನು ಬಂಡೆಯಿದ್ದಂತೆ ಕರಗಲ್ಲ. ಸಚಿವ ಸಂಪುಟ ವಿಚಾರದಲ್ಲಿ ಸಿಎಂಗೆ ಪರಾಮಾಧಿಕಾರವಿದೆ. ಅವರು ಹಾಗೂ ಕೇಂದ್ರದ ವರಿಷ್ಠರು ಸೇರಿ ಸಚಿವ ಸ್ಥಾನ ತೀರ್ಮಾನ ಮಾಡುತ್ತಾರೆ. ನನಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯ ಎಂದರು.
ಬಸ್ ನಿಲ್ದಾಣದಲ್ಲಿನ ಮಹಿಳೆ ಇದ್ದಾಗೆ ಎಂದು ಸಿಎಂ ಇಬ್ರಾಹಿಂ ಹೇಳಿಕೆಗೆ ತಿರುಗೇಟು ನೀಡಿದ ರೇಣುಕಾಚಾರ್ಯ, ಸಿಎಂ ಇಬ್ರಾಹಿಂ ಅವರದ್ದು ಎಲುಬಿಲ್ಲದ ನಾಲಿಗೆ. ಆತ ಜೋಕರ್ ವಚನ ಹೇಳೋಕೆ ಅವರನ್ನು ಬಳಸಿಕೊಳ್ಳುತ್ತಾರೆ. ಸಿಎಂ ಇಬ್ರಾಹಿಂ ನೀಚ ಭದ್ರಾವತಿಯಲ್ಲಿ ಏನೇನೂ ಪ್ರಕರಣ ಮಾಡಿದ್ದಾರೆ ಎಲ್ಲ ಗೊತ್ತಿದೆ. ಇಡೀ ಭದ್ರಾವತಿಯನ್ನು ಕೋಮು ಗಲಭೆಗೆ ತಳ್ಳಿದವರು ಎಂದು ಆರೋಪಿಸಿದರು.
ಬೆಂಗಳೂರು: ಕೊಟ್ಟ ಮಾತಿನಂತೆ ತಪ್ಪದೇ ನಡೆಯಲು ಯಡಿಯೂರಪ್ಪ ತಂತ್ರಗಳ ಮೇಲೆ ತಂತ್ರ ಮಾಡ್ತಿದ್ದಾರೆ. ಅವರೆಲ್ಲಾ ಈಗ ನನ್ನವರು ಎಂಬ ಅಸ್ತ್ರ ಪ್ರಯೋಗಿಸಿಲು ಪ್ಲ್ಯಾನ್ ಮಾಡಿದ್ದಾರೆ. ಅಷ್ಟೇ ಅಲ್ಲ ಈಗಿರುವ ಅವರೆಲ್ಲಾ ನನ್ನವರಲ್ಲ ಎಂಬ ಲೆಕ್ಕಚಾರಕ್ಕೆ ಯಡಿಯೂರಪ್ಪ ಬಂದ್ರಾ ಅನ್ನೋ ಗೊಂದಲವೂ ಹೆಚ್ಚಾಗಿದೆ. ಕ್ಯಾಬಿನೆಟ್ ವಿಳಂಬದಿಂದಾಗಿಯೇ ಈ ತಂತ್ರಗಳು, ಗೊದಲಗಳು ಹೆಚ್ಚು ಸದ್ದು ಮಾಡುತ್ತಿದೆ.
ಅಂದಹಾಗೆ ಸಂಕ್ರಾಂತಿ ಮುಗಿಯುತ್ತಿದಂತೆ ಬಿಜೆಪಿಯಲ್ಲಿ ಆಟ ಮೇಲಾಟ ಭರ್ಜರಿಯಾಗಿಯೆ ನಡೆಯುತ್ತಿದೆ. ಕೊಟ್ಟ ಮಾತಿನಂತೆ ಗೆದ್ದವರನ್ನ ಸಚಿವರನ್ನಾಗಿ ಮಾಡಲು ಯಡಿಯೂರಪ್ಪ ಹರಸಾಹಸ ಪಡ್ತಿದ್ದಾರೆ. ಹೈಕಮಾಂಡ್ ಮುಂದೆ ಯಡಿಯೂರಪ್ಪ ನನ್ನವರು ಅಸ್ತ್ರ ಪ್ರಯೋಗ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.
ಈಗ ಕ್ಯಾಬಿನೆಟ್‍ನಲ್ಲಿ ಇರೋರನ್ನ ಏನ್ ಬೇಕಾದ್ರೂ ಮಾಡಿ. ಈಗಿರುವವರ ಮೇಲೆ ಏನು ತೀರ್ಮಾನ ಮಾಡಿದ್ರೂ ನನಗೇನಿಲ್ಲ..! ಆದ್ರೆ ಸರ್ಕಾರ ರಚಿಸಲು ಕಾರಣರಾದ ಆ 17 ಜನ ಮಾತ್ರ ನನ್ನವರು. ಆ ನನ್ನವರನ್ನ ಯಾವುದೇ ಕಾರಣಕ್ಕೂ ಕೈ ಬಿಡಲು ನಾನು ತಯಾರಿಲ್ಲ. ಆ 17 ಜನರನ್ನ ಸಚಿವ ಸ್ಥಾನದಲ್ಲಿ ಕೂರಿಸಿ, ಉಳಿದಂತೆ ಬೇಕಾದ್ದು ಮಾಡಿ ಎಂದು ಆಪ್ತರಾಗಿರುವ ಹೈಕಮಾಂಡ್ ನಾಯಕರೊಬ್ಬರ ಮುಂದೆ ಯಡಿಯೂರಪ್ಪ ಅಸ್ತ್ರ ಪ್ರಯೋಗಿಸಿದ್ದಾರೆ.
ಅಮಿತ್ ಶಾ ಜತೆ ಮಾತುಕತೆ ವೇಳೆ ನನ್ನವರು ಅಸ್ತ್ರ ಪ್ರಸ್ತಾಪ ಚರ್ಚೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಆಪ್ತರ ಬಳಿ ಪ್ರಸ್ತಾಪ ಮಾಡಿದ್ದನ್ನೇ ಅಧಿಕೃತವಾಗಿ ಹೈಕಮಾಂಡ್ ಚರ್ಚೆ ವೇಳೆಯೂ ಪ್ರಸ್ತಾಪಿಸಲು ಬಿಎಸ್‍ವೈ ಮುಂದಾಗಿರೋದು ಕುತೂಹಲ ಮೂಡಿಸಿದೆ. ಆದ್ರೆ ಯಡಿಯೂರಪ್ಪ ಅಸ್ತ್ರಕ್ಕೆ ಹೈಕಮಾಂಡ್ ಬಳಿ ಇರುವ ಪ್ರತ್ಯಾಸ್ತ್ರ ಏನು? ಅನಿವಾರ್ಯವಾಗಿ ಯಡಿಯೂರಪ್ಪ ಪ್ರಸ್ತಾಪವನ್ನ ಒಪ್ಪಿಕೊಳ್ಳುತ್ತಾ? ಇಲ್ಲ ರಾಡಿ ಮಾಡಿಕೊಳ್ಳುತ್ತಾ? ಯಡಿಯೂರಪ್ಪ ಪಟ್ಟಿಗೆ ಬಿಜೆಪಿ ಹೈಕಮಾಂಡ್ ನಡೆ ಏನು ಎನ್ನುವ ಕುತೂಹಲ ಹೆಚ್ಚಾಗಿರೋದಂತೂ ಸತ್ಯ.
ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಸದ್ಯಕ್ಕೆ ಶಾಂತಿ ನೆಲೆಸಿದೆ. ಉಪಚುನಾವಣೆ ಫಲಿತಾಂಶದ ಬಳಿಕ ಸಚಿವ ಸ್ಥಾನದ ಆಕಾಂಕ್ಷಿಗಳ ಆರ್ಭಟ ಹೆಚ್ಚಾಗಿತ್ತು. ಪಕ್ಷದ ಹಿರಿಯ ಶಾಸಕರು ಈ ಬಾರಿಯಾದರೂ ಸಚಿವ ಸ್ಥಾನ ಪಡೆಯಲೇಬೇಕೆಂದು ಸಿಎಂ ಯಡಿಯೂರಪ್ಪ ನಿವಾಸಕ್ಕೆ ನಿತ್ಯ ಭೇಟಿ ಕೊಟ್ಟು ಒತ್ತಡ ಹೇರುತ್ತಿದ್ದರು. ಆಕಾಂಕ್ಷಿಗಳ ಒತ್ತಡಕ್ಕೆ ಯಡಿಯೂರಪ್ಪನವರು ಅಕ್ಷರಶ: ತಾಳ್ಮೆಗೆಟ್ಟಿದ್ರು. ಆದ್ರೆ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಒಲವು ತೋರದ ಹಿನ್ನೆಲೆಯಲ್ಲಿ ದಿಢೀರನೇ ಸನ್ನಿವೇಶ ಬದಲಾಗಿದೆ. ಸಚಿವ ಸ್ಥಾನಕ್ಕೆ ಬೇಡಿಕೆ ಇಡಲು ಬೆಂಗಳೂರಿಗೆ ಆಗಮಿಸಿದ್ದ ಶಾಸಕರುಗಳು ಬೇರೆ ದಾರಿಯಿಲ್ಲದೇ ಸದ್ದಿಲ್ಲದೇ ತಮ್ಮ ತಮ್ಮ ಗೂಡು ಸೇರಿಕೊಂಡಿದ್ದಾರೆ.
ಕಳೆದ ಎರಡು ದಿನಗಳಿಂದಲೂ ಸಿಎಂ ಅವರ ಧವಳಗಿರಿ ನಿವಾಸದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಚಟುವಟಿಕೆಗಳು ನಿಶ್ಚಲಗೊಂಡಿವೆ. ಧವಳಗಿರಿಗೆ ಬರುತ್ತಿದ್ದ ಸಚಿವ ಸ್ಥಾನಾಕಾಂಕ್ಷಿಗಳ ಭೇಟಿ ಈ ಎರಡು ದಿನಗಳಲ್ಲಿ ಇಲ್ಲವೇ ಇಲ್ಲ ಅನ್ನುವಂತಾಗಿದೆ. ಪಕ್ಷದ ಶಾಸಕರಾದ ಉಮೇಶ್ ಕತ್ತಿ, ರೇಣುಕಾಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ್, ರಾಜುಗೌಡ, ಎಂ.ಪಿ.ಕುಮಾರಸ್ವಾಮಿ, ಪೂರ್ಣಿಮಾ ಶ್ರೀನಿವಾಸ್, ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ, ಎಸ್ ಆರ್ ವಿಶ್ವನಾಥ್, ಮಾಡಾಳ್ ವಿರೂಪಾಕ್ಷಪ್ಪ, ಅರಗ ಜ್ಞಾನೇಂದ್ರ, ರಾಮದಾಸ್, ದತ್ತಾತ್ರೇಯ ಪಾಟೀಲ್ ರೇವೂರ, ಮಾಜಿ ಸಚಿವ ಸಿಪಿ ಯೋಗೇಶ್ವರ್ ಸೇರಿ ಹಲವರು ಸಚಿವ ಸ್ಥಾನಕ್ಕಾಗಿ ಉಪಚುನಾವಣೆ ಬಳಿಕ ಸಿಎಂ ಯಡಿಯೂರಪ್ಪನವರಿಗೆ ದುಂಬಾಲು ಬಿದ್ದಿದ್ದರು.
ಉಪಚುನಾವಣೆಯಲ್ಲಿ ಗೆದ್ದಿದ್ದ 11 ನೂತನ ಶಾಸಕರು ಸಹ ನಿತ್ಯ ಯಡಿಯೂರಪ್ಪ ಭೇಟಿ ಮಾಡಲು ಆಗಮಿಸುತ್ತಿದ್ದರು. ಇವರ ಜೊತೆಗೆ ಪರಾಜಿತರಾದ ಎಂಟಿಬಿ ನಾಗರಾಜ್, ಎಚ್ ವಿಶ್ವನಾಥ್ ಸಹ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಯಾವಾಗ ಹೈಕಮಾಂಡ್ ಸದ್ಯಕ್ಕೆ ಸಂಪುಟ ವಿಸ್ತರಣೆ ಇಲ್ಲ ಎನ್ನುವ ಸಂದೇಶ ರವಾನಿಸಿತೋ ಆಗ ಎಲ್ಲ ಹೊಸ ಮತ್ತು ಹಳೆ ಶಾಸಕರೂ ಭ್ರಮನಿರಸನಗೊಂಡು ವಾಪಸ್ ತಮ್ಮ ತಮ್ಮ ಗೂಡುಗಳಿಗೆ ಮರಳಿದ್ದಾರೆ.
ಸದ್ಯಕ್ಕೆ ಎರಡು ದಿನಗಳಿಂದ ಯಡಿಯೂರಪ್ಪ ನಿವಾಸದ ಎದುರು ಯಾರೊಬ್ಬರೂ ಆಕಾಂಕ್ಷಿಗಳು ಕಾಣಿಸಿಕೊಳ್ಳುತ್ತಿಲ್ಲ. ಹೈಕಮಾಂಡ್ ಧೋರಣೆಯಿಂದ ಬೇಸರಗೊಂಡಿರುವ ಆಕಾಂಕ್ಷಿಗಳು ಒಳಗೊಳಗೇ ಕುದಿಯುತ್ತಿದ್ದಾರೆ. ನೂತನ ಶಾಸಕರಲ್ಲೂ ಮಡುಗಟ್ಟಿರುವ ಬೇಗುದಿ ಕಡಿಮೆಯೇನಿಲ್ಲ. ಆದರೆ ಯಾರಿಗೂ ಬಹಿರಂಗವಾಗಿ ಅತೃಪ್ತಿ ತೋಡಿಕೊಳ್ಳದ ಅಸಹಾಯಕತೆ. ಈ ಹಿನ್ನೆಲೆಯಲ್ಲಿ ಏನೂ ಮಾಡಲಾಗದೇ ತಮ್ಮ ತಮ್ಮ ಕ್ಷೇತ್ರಗಳಿಗೆ ಎಲ್ಲರೂ ಮರಳಿದ್ದಾರೆ.
ಮುಂದಿನ ವಾರ ಅಂದ್ರೆ ಡಿಸೆಂಬರ್ 22ರ ನಂತರ ಯಡಿಯೂರಪ್ಪ ದೆಹಲಿಗೆ ಹೋಗುವ ಸಾಧ್ಯತೆಯಿದೆ. ಅದಕ್ಕೂ ಮುನ್ನ ಆಕಾಂಕ್ಷಿಗಳೆಲ್ಲ ಮತ್ತೊಂದು ರೌಂಡ್ ಯಡಿಯೂರಪ್ಪ ಭೇಟಿ ಮಾಡುವ ಸಾಧ್ಯತೆಯಿದೆ.
– ಗೌಡರ ಕುಟುಂಬದ ವಿರುದ್ಧ ಸ್ಫೋಟಕ ಹೇಳಿಕೆ
– ಚುನಾವಣಾ ನಿವೃತ್ತಿ ಘೋಷಿಸಿದ ಜಿಟಿಡಿ
ಮೈಸೂರು: ಗೌಡರ ಕುಟುಂಬದ ವಿರುದ್ಧ ಮಾಜಿ ಸಚಿವ ಜಿ.ಟಿ ದೇವೇಗೌಡ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಾನು ಜೆಡಿಎಸ್‍ನಲ್ಲಿ ಇರುವುದು ಬಹಳ ಮಂದಿಗೆ ಇಷ್ಟವಿಲ್ಲ ಎಂದು ಹೇಳಿಕೆ ನೀಡಿ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು. ಎಚ್.ಡಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ನನಗೆ ಉನ್ನತ ಶಿಕ್ಷಣ ಸಚಿವ ಸ್ಥಾನ ಬೇಡ ಎಂದು ಮುನಿಸಿಕೊಂಡಿದ್ದೆ. ಆಗ ಅವರು ನಾನು ಹಾಗೇ ದೂರವಾಗಲಿ ಎಂದು ಕಾಯುತ್ತಿದ್ದರು. ಮಂತ್ರಿ ಸ್ಥಾನ ತೆಗೆದುಕೊಳ್ಳದೆ ವಾಪಸ್ ಹೋಗಲಿ ಎಂದು ಕಾಯುತ್ತಿದ್ದರು. ನಾನು ಮಾತ್ರ ಈ ಸರ್ಕಾರ ಉಳಿಸಲು ಕೊನೆ ಕ್ಷಣದವರೆಗೂ ಹೋರಾಡಿದೆ. ಕುಮಾರಸ್ವಾಮಿಯನ್ನು ಸಿಎಂ ಮಾಡಲು, ಉಳಿಸಲು ನಾನು ಶತ ಪ್ರಯತ್ನ ಮಾಡಿದ್ದೇನೆ. ಆದರೆ ನಾನು ಜೆಡಿಎಸ್‍ನಲ್ಲಿ ಇರುವುದು ಬಹಳ ಮಂದಿಗೆ ಇಷ್ಟವಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಜಿ.ಟಿ.ದೇವೆಗೌಡ ಅವರ ಈ ಹೇಳಿಕೆ ಸದ್ಯ ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯರನ್ನು ಜನ ಸೋಲಿಸಿ, ನನ್ನನ್ನು ಗೆಲ್ಲಿಸಿ ಕುಮಾರಸ್ವಾಮಿ ಅವರು ಸಿಎಂ ಆಗಲು ಕಾರಣವಾದರು. ಆಗ ಎಲ್ಲಾ ಕಡೆ ಕುಮಾರಸ್ವಾಮಿ ಅವರು ಸಿಎಂಗೆ ಇರುವ ಅಧಿಕಾರ ಜಿಟಿಡಿಗೂ ಇದೆ ಎಂದು ಹೇಳಿದ್ದರು. ಆದರೆ ಸಿಎಂ ಆದ ಮೇಲೆ ನಾನು ಯಾವ ಖಾತೆ ಬೇಡ ಎಂದು ಹೇಳಿದ್ದೆನೋ ಅದೇ ಖಾತೆ ಕೊಟ್ಟರು. ನಾನು ಮುನಿಸಿಕೊಂಡರೂ ಸಮಾಧಾನ ಮಾಡಲು ಬರಲಿಲ್ಲ. ನಾನು ಖಾತೆ ಬಿಟ್ಟು ಹೋಗಲಿ ಎಂದು ಕಾಯುತ್ತಿದ್ದರು. ಬಳಿಕ ಮಂಡ್ಯ ರಮೇಶ್ ಅವರು ಸಹಕಾರ ಕೊಡುತ್ತೇನೆ ಎಂದು ಕರೆದುಕೊಂಡು ಹೋದರೂ ಸಹಕರಿಸಲಿಲ್ಲ. ಕೊನೆಗೆ ಉನ್ನತ ಶಿಕ್ಷಣ ಖಾತೆಯನ್ನೇ ತಗೆದುಕೊಂಡು ಯಶಸ್ವಿಯಾಗಿ ನಿರ್ವಹಿಸಿದೆ. ನಾನು ಡಿ.ಕೆ ಶಿವಕುಮಾರ್ ಅವರು ಮುಂಬೈಗೆ ಹೋಗಿದ್ದ ಶಾಸಕರನ್ನು ಕರೆತರಲು ಹೋಗಿದ್ದೇವು. ಕೊನೆ ಕ್ಷಣದವರೆಗೂ ಕುಮಾರಸ್ವಾಮಿ ಸಿಎಂ ಆಗಿರಬೇಕು ಎಂದು ಹೋರಾಡಿದೆವು. ಆದರೆ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಮಾಜಿ ಸಚಿವ ಸಾರಾ ಮಹೇಶ್ ಅವರೇ ಸಿಎಂ ಆಗಿರುವ ರೀತಿ ಆ್ಯಕ್ಟಿಂಗ್ ಮಾಡಿ ಕೆಲಸ ಮಾಡಿದ್ದಾರೆ. ಆದ್ದರಿಂದ ಅವರನ್ನೇ ಕಾರ್ಯಕಾರಣ ಸಮಿತಿಗೆ ಹಾಕಿದ್ದಾರೆ. ರಾಜ್ಯ ಮಟ್ಟದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ, ರಾಷ್ಟ್ರಮಟ್ಟದಲ್ಲೂ ಪಕ್ಷ ಬೆಳೆಸುವ ಕೆಲಸ ಮಾಡಲಿ ಎಂದು ಸಾರಾ ಮಹೇಶ್ ಅವರನ್ನು ಸಮಿತಿಗೆ ಹಾಕಿದ್ದಾರೆ. ಅವರಿಗೆ ನಾನು ಅಭಿನಂದನೆ ತಿಳಿಸುತ್ತೇನೆ ಎಂದರು.
ನನ್ನನ್ನು ಜೆಡಿಎಸ್ ಬೇಡ ಎಂದಿಲ್ಲ, ನಾನು ಕೂಡ ಜೆಡಿಎಸ್ ಪಕ್ಷವನ್ನು ಬೇಡ ಎಂದಿಲ್ಲ. ಆದರೆ ನಾನು ಬಿಜೆಪಿಗೆ ಹೋದಾಗ ಹುಣಸೂರು ಕ್ಷೇತ್ರದಿಂದ ಸೋತಿದ್ದೆ. ಆಗ ಸಿಎಂ ಯಡಿಯೂರಪ್ಪ ಅವರು ನನಗೆ ಸೋತ್ತಿದ್ದರೂ ಕ್ಯಾಬಿನೆಟ್ ದರ್ಜೆ ಕೊಟ್ಟು, ಗೃಹ ಮಂಡಳಿ ಅಧ್ಯಕ್ಷನ್ನಾಗಿ ಮಾಡಿದ್ದರು. ಬಳಿಕ ಇವರೇ ನನ್ನನ್ನು ವಾಪಸ್ ಪಕ್ಷಕ್ಕೆ ಬನ್ನಿ ಎಂದು ಕರೆದರು. ಧರ್ಮಸಿಂಗ್ ಅವರು ಸಿಎಂ ಆಗಿದ್ದಾಗ ನನಗೆ ಸಚಿವ ಸ್ಥಾನ ನೀಡಲಿಲ್ಲ, ಬೇರೆ ನಾಯಕರಿಗೆ ಸಚಿವ ಸ್ಥಾನ ಕೊಟ್ಟಿದ್ದರು. ಆದರೆ ಸಿದ್ದರಾಮಯ್ಯ ಅವರು ಚುನಾವಣೆಯಲ್ಲಿ ಸೋತ ಬಳಿಕ ನನ್ನನ್ನು ಏಳು ತಿಂಗಳ ಕಾಲ ಮಂತ್ರಿ ಮಾಡಿದರು ಎಂದು ಕಿಡಿಕಾರಿದರು.
ಹುಣಸೂರು ಉಪಚುನಾವಣೆ ನಡೆದರೆ ಜೆಡಿಎಸ್ ಸೋಲುತ್ತದೆ ಎಂದು ಚುನಾವಣೆಗೂ ಮುನ್ನವೆ ಜಿಟಿಡಿ ಭವಿಷ್ಯ ನುಡಿದಿದ್ದಾರೆ. ಹುಣಸೂರು ಉಪ ಚುನಾವಣೆಯಲ್ಲಿ ಜೆಡಿಎಸ್ ಸೋಲು ಖಚಿತ. ಕಾಂಗ್ರೆಸ್ ಅಭ್ಯರ್ಥಿ ಅಲ್ಲಿ ಗೆಲ್ಲುತ್ತಾರೆ. ನನ್ನ ಮಗನನ್ನು ಅಲ್ಲಿಂದ ಸ್ಪರ್ಧಿಸುವಂತೆ ಹೆಚ್‍ಡಿಕೆ ಕೇಳಿದ್ದರು. ನಾನು ಇಲ್ಲ ಎಂದಿದ್ದೇನೆ. ನನ್ನ ಮಗ ಬೇಕಾದರೆ ಚಾಮುಂಡೇಶ್ವರಿ ಕ್ಷೇತ್ರದಿಂದ ಮುಂದೆ ಸ್ಪರ್ಧೆ ಮಾಡಲಿ. ಸದ್ಯಕ್ಕೆ ನಾವು ಯಾವ ಉಪಚುನಾವಣೆಯಲ್ಲು ಸ್ಪರ್ಧೆ ಮಾಡುತ್ತಿಲ್ಲ ಎಂದು ತಮ್ಮ ನಿರ್ಧಾರ ತಿಳಿಸಿದರು.
ಸಚಿವನಾಗಿದ್ದಾಗ ಕ್ಷಣ ಕ್ಷಣಕ್ಕೂ ಅವಮಾನ ಮತ್ತು ನೋವು ಉಣ್ಣುತ್ತಿದ್ದೆ. ನಾನು ಈಗ ಬಹಳ ಆರಾಮಾಗಿದ್ದೇನೆ. ಯಾವ ಅವಮಾನವು ಇಲ್ಲ, ನೋವು ಇಲ್ಲ. ಈಗ ಜೆಡಿಎಸ್ ಸಂಘಟನೆ ಪಟ್ಟಿಯಲ್ಲಿ ನನ್ನ ಹೆಸರಿಲ್ಲದ ಕಾರಣ ತಲೆಯ ಮೇಲಿದ್ದ ದೊಡ್ಡ ಬಂಡೆ ಇಳಿದಂತಾಗಿದೆ. ಚುನಾವಣೆ ರಾಜಕಾರಣದಿಂದ ನಿವೃತ್ತಿ ಪಡೆದು ಮಗನಿಗೆ ಬಿಟ್ಟುಕೊಡುತ್ತಿದ್ದೇನೆ. ಈಗ ಬಡವರ ಸೇವೆ ಮಾಡಿಕೊಂಡು ನೆಮ್ಮದಿಯಾಗಿದ್ದೇನೆ ಎಂದು ಹೇಳಿದರು.
ದಸರಾದಲ್ಲಿ ಬಿಜೆಪಿಯವರ ಜೊತೆ ಕೂರೋಲ್ಲ ಎಂಬ ಸಾ.ರಾ.ಮಹೇಶ್ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ಸಾ.ರಾ.ಮಹೇಶ್‍ರನ್ನ ಬಹು ಹತ್ತಿರದಿಂದ ನೋಡಿದ್ದೇನೆ. ಅವರು ಬಿಜೆಪಿಯಲ್ಲಿದ್ದಾಗ, ನಂತರ ಜೆಡಿಎಸ್ ಬಂದಾಗಲೂ ಅವರನ್ನು ನೋಡಿದ್ದೇನೆ. ಸಿಎಂ ಜೊತೆ ಇದ್ದಾಗಲೂ ನೋಡಿದ್ದೇನೆ. ಅವರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ಬೆಂಗಳೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಿ 2 ದಿನ ಕಳೆದಿಲ್ಲ. ಈಗ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಮೊದಲೇ ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕಾಗಿ ಪೈಪೋಟಿ ಶುರುವಾಗಿದೆ.
ರಾಜ್ಯ ಸರ್ಕಾರದ ಗದ್ದುಗೆ ಹಿಡಿಯಲು ಶಾಸಕರು ನಾ ಮುಂದು ತಾ ಮುಂದು ಅಂತಿದ್ದಾರೆ. ಅದರಲ್ಲೂ ಸರ್ಕಾರ ಪತನಕ್ಕೆ ನಾಂದಿ ಹಾಡಿದ ಬೆಳಗಾವಿ ಜಿಲ್ಲೆಯಲ್ಲಿ ಮೂವರು ಶಾಸಕರ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಈಗಾಗಲೇ ಗೋಕಾಕ್‍ನ ರಮೇಶ್ ಜಾರಕಿಹೊಳಿ ಉಪಮುಖ್ಯಮಂತ್ರಿ ಆಗುತ್ತಾರೆ ಅನ್ನೋ ಗಾಸಿಪ್ ಇದೆ. ಇವರ ಜೊತೆ ಮಹಿಳಾ ಕೋಟಾದಡಿ ಶಶಿಕಲಾ ಜೊಲ್ಲೆ, ಲಿಂಗಾಯತ ಕೋಟಾದಡಿ ಉಮೇಶ್ ಕತ್ತಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಯಾದವ ಸಮಾಜಕ್ಕೆ ಒಂದು ಸಚಿವ ಸ್ಥಾನ ಕೊಡಬೇಕು ಎಂದು ದಾವಣಗೆರೆಯಲ್ಲಿ ಜಿಲ್ಲಾ ಯಾದವ ಸಮಾಜದ ಮುಖಂಡ ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ. ಯಾದವ ಸಮುದಾಯದ ಪೂರ್ಣಿಮಾ ಶ್ರೀನಿವಾಸ್ ಚಿತ್ರದುರ್ಗದ ಹಿರಿಯೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಇವರಿಗೆ ಮಹಿಳಾ ಕೋಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದಗೆ ಸಚಿವ ಸ್ಥಾನ ನೀಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಅರವಿಂದ ಬೆಲ್ಲದ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರ ತಂದೆ 4 ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದರೂ ಅವರಿಗೆ ಸಚಿವ ಸ್ಥಾನ ದಕ್ಕಿರಲಿಲ್ಲ. ಇದನ್ನ ಪರಿಗಣಿಸಿ ಬೆಲ್ಲದಗೆ ಸಚಿವ ಸ್ಥಾನವನ್ನ ನೀಡಬೇಕು ಎಂದು ಅವರ ಅಭಿಮಾನಿಗಳು ಆಗ್ರಹಿಸಿದ್ದಾರೆ.
ಇತ್ತ ಕೊಪ್ಪಳದಲ್ಲೂ ಕೂಡ ಪೈಪೋಟಿ ಜೋರಿದೆ. ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೆಸೂಗುರು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಕಾರ್ಯಕರ್ತರು, ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ಅಲ್ಲದೇ ಈ ಭಾಗದ ಹಿಂದುಳಿದ ನಾಯಕ ಬಿ.ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲು ಒತ್ತಾಯಿಸಿದ್ದಾರೆ. ಹಾವೇರಿಯಲ್ಲಿ ನೆಹರು ಓಲೇಕಾರ್‌ಗೆ ಸಚಿವ ಸ್ಥಾನ ಕೊಡಿ ಎಂದು ಒತ್ತಾಯಿಸಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸಮಾರಂಭಕ್ಕೆ ಕೆಲವೇ ಗಂಟೆಯಷ್ಟೇ ಬಾಕಿ ಇದೆ. ಆದರೆ ಇನ್ನೂ ಮೋದಿ ಸಂಪುಟದ ಸಚಿವರ ಪಟ್ಟಿ ಅಂತಿಮವಾಗಿಲ್ಲ ಎನ್ನುವ ವಿಚಾರ ಹೊರ ಬಿದ್ದಿದೆ.
ಇತ್ತ ರಾಜ್ಯ ಸಂಸದರಲ್ಲಿ ಟೆನ್ಶನ್ ಶುರುವಾಗಿದ್ದು, ಹೈಕಮಾಂಡ್ ಕರೆಗಾಗಿ ದೆಹಲಿಯಲ್ಲಿ ಸಂಸದರು ಕಾದು ಕುಳಿತ್ತಿದ್ದಾರೆ. ಬುಧವಾರ ರಾತ್ರಿಯಿಂದಲೇ ಕೈಯಲ್ಲಿ ಫೋನ್ ಹಿಡಿದು ಸಂಸದರು ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕೆಲ ಸಂಸದರು ಕುಟುಂಬ ಸದಸ್ಯರೊಂದಿಗೆ ದೆಹಲಿಗೆ ಆಗಮಿಸಿದ್ದಾರೆ. ಇದನ್ನೂ ಓದಿ: ಮೋದಿ 2 ಸರ್ಕಾರದಲ್ಲಿ ಕರ್ನಾಟಕದ ಮೂವರಿಗೆ ಮಂತ್ರಿ ಸ್ಥಾನ
ಆಯ್ಕೆ ಹೇಗೆ?
ಇಲ್ಲಿಯವರೆಗೆ ಜಾತಿ, ರಾಜ್ಯವಾರು ಕೋಟಾದ ಅಡಿ ಮಂತ್ರಿಗಳ ಸ್ಥಾನವನ್ನು ಹಂಚಿಕೆ ಮಾಡಲಾಗುತಿತ್ತು. ಆದರೆ ಈ ಬಾರಿ ಜಾತಿ ನೋಡದೇ ಬಿಜೆಪಿ ಮತ ನೀಡಿದ್ದರಿಂದ ಮಂತ್ರಿ ಸ್ಥಾನವನ್ನು ಜಾತಿ ನೋಡದೇ ಹಂಚಿಕೆ ಮಾಡಲಾಗುತ್ತದೆ ಎನ್ನುವ ವಿಚಾರ ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಈ ಬಾರಿ ಬಿಜೆಪಿ ಆಡಳಿತ ರಾಜ್ಯವಲ್ಲದೇ ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳ, ಒಡಿಶಾದಲ್ಲೂ ಬಿಜೆಪಿ ಉತ್ತಮ ಪ್ರದರ್ಶನ ನೀಡಿದೆ. ಹೀಗಾಗಿ ಈ ಭಾಗದಲ್ಲೂ ಮಂತ್ರಿ ಸ್ಥಾನ ನೀಡಬೇಕಾಗುತ್ತದೆ.
ಮಾಧ್ಯಮಗಳಲ್ಲಿ ಬಂದಿರುವ ಮಾಹಿತಿ ಪ್ರಕಾರ ತನ್ನ ಕ್ಯಾಬಿನೆಟ್‍ನಲ್ಲಿ ಯಾರಿಗೆ ಸ್ಥಾನ ನೀಡಬೇಕು ಎನ್ನುವುದನ್ನು ಪ್ರಧಾನಿ ಮೋದಿ ಅವರೇ ತೀರ್ಮಾನಿಸುತ್ತಿದ್ದಾರೆ. ಜಾತಿ, ರಾಜ್ಯವಾರು ಕೋಟಾ ನೋಡದೇ ಅರ್ಹತೆ ಇದ್ದವರಿಗೆ ಮಾತ್ರ ಕ್ಯಾಬಿನೆಟ್ ನಲ್ಲಿ ಸ್ಥಾನ ನೀಡಲು ಮುಂದಾಗಿದ್ದಾರೆ. ರಾಜ್ಯ ಖಾತೆಯನ್ನು ಹಂಚುವ ಜವಾಬ್ದಾರಿಯನ್ನು ಮೋದಿ ಅಮಿತ್ ಶಾ ಅವರಿಗೆ ನೀಡಿದ್ದು, ರಾಜ್ಯವಾರು ಮತ್ತು ಪಕ್ಷ ಸಂಘಟನೆ, ಎನ್‍ಡಿಎ ಮಿತ್ರ ಪಕ್ಷಗಳಲ್ಲಿ ಉತ್ತಮರು ಯಾರು ಎನ್ನುವುದನ್ನು ನೋಡಿಕೊಂಡು ಅಮಿತ್ ಶಾ ಸಂಸದರನ್ನು ಆಯ್ಕೆ ಮಾಡುತ್ತಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ.
ಪಟ್ಟಿ:4
ಪ್ರಧಾನಿ ಮೋದಿ ಈಗಾಗಲೇ ಮಂತ್ರಿಯಾಗಲು ಯೋಗ್ಯರಾದವರ ಪಟ್ಟಿಯನ್ನು ತೆಗೆದುಕೊಂಡಿದ್ದಾರೆ. ಎಲ್ಲ ರಾಜ್ಯದ ರಾಜ್ಯಾಧ್ಯಕ್ಷರು ಒಂದು ಪಟ್ಟಿಯನ್ನು ಕಳುಹಿಸಿದ್ದಾರೆ. ಇದರ ಜೊತೆಯಲ್ಲೇ ಆರ್‍ಎಸ್‍ಎಸ್, ರಾಜ್ಯದ ಉಸ್ತುವಾರಿ ಬಳಿಯಿಂದ ಒಂದು ಪಟ್ಟಿಯನ್ನು ಪಡೆದುಕೊಂಡಿದ್ದಾರೆ. ಇಷ್ಟೇ ಅಲ್ಲದೇ ಮೂರಕ್ಕೂ ಸೇರದೇ ಇರುವ ವ್ಯಕ್ತಿಯೊಬ್ಬರಿಂದ ಅರ್ಹ ಸಂಸದರ ಪಟ್ಟಿಯನ್ನು ತೆಗೆದುಕೊಂಡಿದ್ದಾರೆ. ಒಟ್ಟಾರೆ ಈ ನಾಲ್ಕು ಪಟ್ಟಿಯನ್ನು ಪರಿಗಣಿಸಿ ಜೊತೆ ಸಂಸದರ ಕಾರ್ಯಶೈಲಿ, ಪ್ರೊಫೈಲ್ ಪರಿಶೀಲಿಸಿದ ಬಳಿಕ ಮಂತ್ರಿ ಸ್ಥಾನವನ್ನು ಹಂಚಿಕೆ ಮಾಡಲಾಗುತ್ತದೆ.
ಸ್ಪರ್ಧೆಯಲ್ಲಿರುವ ಸಂಸದರು:
1. ರಮೇಶ್ ಜಿಗಜಿಣಗಿ – ವಿಜಯಪುರ
2. ಸುರೇಶ್ ಅಂಗಡಿ – ಬೆಳಗಾವಿ
3. ಪ್ರಹ್ಲಾದ್ ಜೋಷಿ – ಹುಬ್ಬಳಿ – ಧಾರವಾಡ
4. ಶೋಭಾ ಕರಂದ್ಲಾಜೆ – ಉಡುಪಿ – ಚಿಕ್ಕಮಗಳೂರು
5. ಪಿ ಸಿ ಮೋಹನ್ – ಬೆಂಗಳೂರು ಸೆಂಟ್ರಲ್
6. ಉಮೇಶ್ ಜಾಧವ್ – ಕಲಬುರಗಿ
7. ಭಗವಂತ ಖೂಬಾ – ಬೀದರ್
8. ಸದಾನಂದಗೌಡ, ಬೆಂಗಳೂರು ಉತ್ತರ
ಅಚ್ಚರಿಗಳು ಜಾಸ್ತಿ:
ಮಾಧ್ಯಮಗಳಲ್ಲಿ ಮಂತ್ರಿ ಹಂಚಿಕೆ ಕುರಿತು ಸುದ್ದಿಗಳು ಬರುತ್ತಲೇ ಇರುತ್ತದೆ. ಅದನ್ನು ನೀವು ನಂಬಲು ಹೋಗಬೇಡಿ. ಅಂತಿಮವಾಗಿ ನಾವೇ ಆಯ್ಕೆ ಮಾಡಿ ನಿಮಗೆ ತಿಳಿಸುತ್ತೇವೆ ಎಂದು ಮೋದಿ ಈಗಾಗಲೇ ಎಲ್ಲ ಸಂಸದರಿಗೆ ತಿಳಿಸಿದ್ದಾರೆ.
ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಅಚ್ಚರಿಯ ನಿರ್ಧಾರಗಳನ್ನು ಪ್ರಕಟಿಸುವುದು ಮೋದಿ ಅವರ ತಂತ್ರಗಾರಿಕೆ. ಕಳೆದ ಬಾರಿ ಕರ್ನಾಟಕದ ಅನಂತ್ ಕುಮಾರ್ ಹೆಗಡೆ ಅವರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಸಿಗುತ್ತದೆ ಎನ್ನುವ ಕಲ್ಪನೆ ಬಿಜೆಪಿ ನಾಯಕರಿಗೆ ಇರಲಿಲ್ಲ. ಸ್ವತಃ ತೇಜಸ್ವಿ ಸೂರ್ಯ ಅವರೇ ಟ್ವೀಟ್ ಮಾಡಿ ನನಗೆ ಅಚ್ಚರಿ ಆಗಿದೆ ಎಂದು ಹೇಳಿದ್ದರು. ಹೀಗಾಗಿ ಈ ಬಾರಿ ಕ್ಯಾಬಿನೆಟ್‍ನಲ್ಲೂ ಅಚ್ಚರಿ ನೀಡುತ್ತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ.
ಭೋಪಾಲ್: ನನಗೆ ಮಂತ್ರಿ ಸ್ಥಾನ ಸಿಗದಿದ್ದರೂ ನಾನು ಕೆಲಸ ಮಾಡುತ್ತೇನೆ. ಆಡಳಿತದ ವಿಚಾರಕ್ಕೆ ಬಂದರೇ ನಾನು ಎಲ್ಲ ಸಚಿವರ ತಂದೆ, ನಾನೇ ಕಿಂಗ್ ಮೇಕರ್ ಎಂದು ಮಧ್ಯಪ್ರದೇಶದ ಬಹುಜನ್ ಸಮಾಜ ಪಕ್ಷ(ಬಿಎಸ್‍ಪಿ) ಶಾಸಕಿ ರಮಾಬಾಯಿ ಕಾಂಗ್ರೆಸ್ ಪಕ್ಷದ ಕಾಲೆಳೆದಿದ್ದಾರೆ.
ಪಥರಿಯಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಶಾಸಕಿ ರಮಾಬಾಯಿ ತನಗೆ ಮಂತ್ರಿ ಸ್ಥಾನ ಕೊಡದಿದ್ದರೂ ಜನಕ್ಕಾಗಿ ಒಳ್ಳೆ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವೆಯಾದರೆ ಜನರಿಗಾಗಿ ಉತ್ತಮ ಕೆಲಸ ಮಾಡುತ್ತೇನೆ. ಮಂತ್ರಿಯಾಗದಿದ್ದರೂ ಸರಿಯಾಗಿ ಕೆಲಸ ಮಾಡುತ್ತೇನೆ. ನಾನು ಒಂದು ರೀತಿ ಮಂತ್ರಿಗಳಿಗೆ ತಂದೆ, ನಾನೇ ಸರ್ಕಾರವನ್ನು ರಚಿಸಿದ್ದು ಎಂದು ಹೇಳಿದ್ದಾರೆ.
#WATCH BSP MLA from Patharia (MP), Ramabai Singh who had demanded a ministerial berth earlier: Hum ban jaye (Minister) to achha kaam karenge, nahi baney to bhi sahi kaam karenge……. Hum mantriyo ke baap hain, humne hi sarkar banayi hai. (25-1-19) #MadhyaPradeshpic.twitter.com/eJaSIHFEbV
ಈ ಹಿಂದೆ ಜ. 23ರಂದು ಕರ್ನಾಟಕದಲ್ಲಿ ಆಗುತ್ತಿರುವ ರಾಜಕೀಯ ಡ್ರಾಮಾದಂತೆ ಮಧ್ಯಪ್ರದೇಶದಲ್ಲಿ ಆಗುವುದು ಬೇಡ. ನನಗೆ ಸಚಿವ ಸ್ಥಾನ ಕೊಡಿ ಆಗ ಸರ್ಕಾರ ಚೆನ್ನಾಗಿರುತ್ತೇ ಅಂತ ರಮಾಬಾಯಿ ಮಧ್ಯಪ್ರದೇಶದ ಸಿಎಂ ಕಮಲ್ ನಾಥ್ ಸರ್ಕಾರಕ್ಕೆ ಆಗ್ರಹಿಸಿದ್ದರು. ಹಾಗೆಯೇ ಜ. 7ರಂದು ಸಂಜೀವ್ ಸಿಂಗ್ ಕುಶ್ವಾಹಗೆ ಹಾಗೂ ನನಗೆ ಸಚಿವ ಸ್ಥಾನ ಕೊಡಿ ಅಂತ ಸರ್ಕಾರವನ್ನು ಕೇಳಿದ್ದರು.
ಇತ್ತೀಚೆಗಷ್ಟೇ ಮಧ್ಯಪ್ರದೇಶದಲ್ಲಿ ಚುನಾವಣೆ ನಡೆದಾಗ ಕಾಂಗ್ರೆಸ್ 114 ಸೀಟ್, ಬಿಜೆಪಿ 109 ಸೀಟ್, ಬಿಎಸ್‍ಪಿ 2, ಸಮಾಜವಾದಿ ಪಕ್ಷ 1 ಹಾಗೂ ಪಕ್ಷೇತರ ಪಕ್ಷಗಳು 4 ಸ್ಥಾನವನ್ನು ಗೆದ್ದಿತ್ತು. ಬಿಎಸ್‍ಪಿ ಬೆಂಬಲ ಪಡೆದ ಕಾಂಗ್ರೆಸ್ ಮಧ್ಯ ಪ್ರದೇಶದಲ್ಲಿ ಸರ್ಕಾರ ರಚನೆ ಮಾಡಿದೆ.
ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಕೆಜೆ ಜಾರ್ಜ್ ಅವರಿಂದ ಭರ್ಜರಿ ಗಿಫ್ಟ್ ಲಭಿಸಿತ್ತು. ಆದಾದ ಬಳಿಕ ಸದ್ಯ ಸಿದ್ದರಾಮಯ್ಯ ಅವರ ರಾಜಕೀಯ ಶಿಷ್ಯರೆಂದೇ ಗುರುತಿಸಿಕೊಂಡಿರುವ ಹೆಬ್ಬಾಳ ಶಾಸಕ ಭೈರತಿ ಸುರೇಶ್ ಅವರು ಕೋಟಿ ರೂ. ಮೌಲ್ಯದ ಕಾರು ಉಡುಗೊರೆಯಾಗಿ ನೀಡಿದ್ದಾರೆ.
ರಾಜಕೀಯದಲ್ಲಿ ತಮ್ಮ ಮಗನನ್ನು ಬೆಳೆಸುವ ಬದಲು ತಮ್ಮ ಶಿಷ್ಯಂದಿರಗೆ ಉತ್ತಮ ರಾಜಕೀಯ ಜೀವನ ರೂಪಿಸಲು ಸಿದ್ದರಾಮಯ್ಯ ಮುಂದಾಗಿದ್ದರು ಎಂಬ ಸುದ್ದಿ ಈ ಹಿಂದೆಯೇ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಅವರ ಶಿಷ್ಯರ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಭೈರತಿ ಸುರೇಶ್ ಅವರು ಹೊಸ ಕಾರು ನೀಡಿದ್ದಾರೆ.
ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಭೈರತಿ ಸುರೇಶ್ ಅವರು ವಿಧಾನ ಪರಿಷತ್ ಅಭ್ಯರ್ಥಿಯಾಗಿ ಸ್ವತಂತ್ರ್ಯವಾಗಿ ಸ್ಪಧಿಸಿದ್ರು. ಬಳಿಕ ಹೆಬ್ಬಾಳ ಕ್ಷೇತ್ರದಲ್ಲಿ ಗೆದ್ದು ಶಾಸಕ ಸ್ಥಾನ ಪಡೆದಿದ್ದರು. ಇದನ್ನೂ ಓದಿ: ಮಾಜಿ ಸಿಎಂ ಮನೆಗೆ ಬಂತು ಕೋಟಿ ಮೌಲ್ಯದ ಬೆಂಜ್ ಕಾರ್! – ವಿಶೇಷತೆ ಏನು?
ಮಾಜಿ ಸಿಎಂ ಸಿದ್ದರಾಮಯ್ಯ ನಂತರ ಕಾಂಗ್ರೆಸ್ ನಲ್ಲಿ ಅವರ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆಗೆ ಸಿದ್ದರಾಮಯ್ಯ ಅವರು ಈ ಹಿಂದೆಯೇ ಸಂದೇಶ ನೀಡಿದ್ದರು. ಸಾಮಾನ್ಯವಾಗಿ ತಂದೆ ಸಕ್ರಿಯ ರಾಜಕಾರಣದಲ್ಲಿದ್ದರೆ ಅವರ ಮಗ ಉತ್ತರಾಧಿಕಾರಿ ಎನ್ನುವ ಮಾತು ಪ್ರಚಲಿತದಲ್ಲಿದೆ. ಆದರೆ ಸಿಎಂ ತಮ್ಮ ಮಗನ ಬಗ್ಗೆ ಹೆಚ್ಚು ಒಲವು ತೋರಿಸದೇ ತಮ್ಮದೇ ಸಮುದಾಯ ಶಾಸಕರದ ಭೈರತಿ ಸುರೇಶ್ ಅವರನ್ನು ಸದ್ದಿಲ್ಲದೇ ಪ್ರಚಾರಕ್ಕೆ ತರಲು ಮುಂದಾಗಿದ್ದರು. ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಿದ್ದರಾಮಯ್ಯ ತಮ್ಮ ಮಗನಿಗೆ ಮಂತ್ರಿಗಿರಿ ಕೊಡಿಸುವಂತೆ ಒತ್ತಡ ಹೇರದೆ ಭೈರತಿ ಸುರೇಶ್ ಅವರ ಪರವಾಗಿ ಸಿದ್ದರಾಮಯ್ಯ ಹೆಚ್ಚಿನ ಒಲವು ತೋರಿದ್ದರು.
ಪಕ್ಷದ ಕಷ್ಟಕಾಲದಲ್ಲಿ ಸಹಾಯಕ್ಕೆ ಬಂದ ಭೈರತಿ ಸುರೇಶ್ ರನ್ನು ಸಚಿವರನ್ನಾಗಿ ಮಾಡಲು ಸಿದ್ದರಾಮಯ್ಯ ಆಸಕ್ತಿ ಹೊಂದಿದ್ದರು. ಆದ್ದರಿಂದ ಅವರನ್ನೇ ಸಿದ್ದರಾಮಯ್ಯ ನಂತರದ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿದೆ. ಇದು ಕಾಂಗ್ರೆಸ್ ಪಕ್ಷದಲ್ಲಿ ಇನ್ನುಳಿದ ಕುರುಬ ಸಮುದಾಯದ ನಾಯಕ ಅಸಮಾಧಾನಕ್ಕೂ ಕಾರಣವಾಗಿತ್ತು. ಪ್ರಮುಖವಾಗಿ ಹೆಚ್.ಎಂ.ರೇವಣ್ಣ, ಶಾಸಕರಾದ ಶಿವಳ್ಳಿ, ಎಂ.ಟಿ.ಬಿ.ನಾಗರಾಜ್ ಪಕ್ಷದಲ್ಲಿ ತಮ್ಮ ಅಸ್ತಿತ್ವದ ಬಗ್ಗೆ ಭಯ ಪಡುವಂತಾಗಿತ್ತು. ಈ ಕಾರಣಕ್ಕೆ ಸಿದ್ದರಾಮಯ್ಯನವರೇ ನಮ್ಮ ಪಾಲಿಗೆ ವಿಲನ್ ಆಗಿದ್ದು, ಮಂತ್ರಿ ಸ್ಥಾನಕ್ಕೆ ಸಿಎಂ ತಮ್ಮ ಪರವಾಗಿ ಮಾತನಾಡುತ್ತಿಲ್ಲ ಎಂದು ಕುರುಬ ಸಮಾಜದ ಶಾಸಕರು ತಮ್ಮ ಆಪ್ತರ ಜೊತೆ ಮಾತನಾಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿತ್ತು. ಇದನ್ನೂ ಓದಿ: ಸಿದ್ದರಾಮಯ್ಯಗೆ ಮತ್ತೆ ಸುತ್ತಿಕೊಂಡ `ವಾಚ್’ ಕಂಟಕ!
ಯಾಕೆ ನೀವು ಭೈರತಿ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಿದ್ದೀರಿ ಎಂದು ಸಿದ್ದರಾಮಯ್ಯನವರನ್ನು ಕೇಳಿದ್ದಕ್ಕೆ ತಮ್ಮ ಆಪ್ತರ ಬಳಿ, ಭೈರತಿ ಸುರೇಶ್ ತಮ್ಮ ಸಾಮಥ್ರ್ಯದಿಂದಲೇ ಪರಿಷತ್ ಸದಸ್ಯರಾಗಿದ್ದಾರೆ. ಹೆಬ್ಬಾಳ ಉಪ ಚುನಾವಣೆಯಲ್ಲಿ ಟಿಕೆಟ್ ತಪ್ಪಿದರೂ ನಿಷ್ಟೆಯಿಂದಲೇ ಪಕ್ಷಕ್ಕಾಗಿ ದುಡಿದಿದ್ದಾರೆ. ಯಾವುದೇ ಅಪಸ್ವರ ಎತ್ತದೇ ಶಿಸ್ತಿನಿಂದ ಪಕ್ಷ ಕಟ್ಟಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಸಂಕಷ್ಟಕ್ಕೆ ಸಿಕ್ಕಾಗ ಅವರಿಗೆ ಎಲ್ಲಾ ರೀತಿಯ ನೆರವು ನೀಡಿದ್ದಾರೆ. ಸಮುದಾಯದ ಉಳಿದ ಶಾಸಕರುಗಳು ಅವರವರ ಗೆಲುವಿಗಷ್ಟೆ ಸೀಮಿತರಾದರು. ಕಷ್ಟದಲ್ಲಿದ್ದಾಗ ಯಾರೂ ನೆರವಿಗೂ ಬರಲಿಲ್ಲ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಎನ್ನುವ ವಿಚಾರ ತಿಳಿದುಬಂದಿತ್ತು.
ಇದೇ ಕಾರಣಕ್ಕೆ ಭೈರತಿ ಸುರೇಶ್ ಗೆ ಮಂತ್ರಿ ಸ್ಥಾನ ನೀಡಬೇಕು ಅಂತಾ ಸ್ವತಃ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಗೆ ಮನವಿ ಕೂಡಾ ಮಾಡಿದ್ದರು ಎನ್ನಲಾಗಿತ್ತು. ತಮ್ಮ ಪುತ್ರನಿಗಿಂತ ಹೆಚ್ಚು ಪ್ರೀತಿ ತೋರಿಸಿ ಭವಿಷ್ಯದ ಸಮುದಾಯದ ನಾಯಕನನ್ನಾಗಿಸುವ ಯತ್ನದಲ್ಲಿದ್ದಾರೆ ಎನ್ನುವ ಮಾತುಗಳು ಸಿದ್ದರಾಮಯ್ಯ ಆಪ್ತ ವಲಯದಲ್ಲೇ ಈಗ ಕೇಳಿ ಬಂದಿತ್ತು. ಸದ್ಯ ಬೈರತಿ ಸುರೇಶ್ ಅವರು ತಮ್ಮ ರಾಜಕೀಯ ಬೆಳವಣಿಗೆಗೆ ಕಾರಣರಾದ ಸಿದ್ದರಾಮಯ್ಯ ಅವರಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ್ದಾರೆ.
ಕಲಬುರಗಿ: ಕಲಬುರಗಿ ದೊಡ್ಡ ಜಿಲ್ಲೆಯಾಗಿರುವುದರಿಂದ ಇನ್ನೊಂದು ಸಚಿವ ಸ್ಥಾನ ನೀಡಬೇಕು ಎಂದು ಸಮಾಜಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಸಚಿವ ಸಂಪುಟ ವಿಸ್ತರಣೆ ದೊಡ್ಡ ತಲೆನೋವಾಗಿ ಪರಿಣಮಿಸಿದ ಬೆನ್ನಲ್ಲೇ, ಪ್ರಿಯಾಂಕ ಖರ್ಗೆ ಕೂಡ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿವರು, ಕಲಬುರಗಿ ಜಿಲ್ಲೆ ದೊಡ್ಡ ಜಿಲ್ಲೆಯಾಗಿರುವುದರಿಂದ ಇನ್ನೊಂದು ಸಚಿವ ಸ್ಥಾನ ನೀಡಬೇಕು. ಸಚಿವ ಸ್ಥಾನ ನೀಡುವುದರಿಂದ ಜಿಲ್ಲೆಯ ಅಭಿವೃದ್ಧಿ ಕೆಲಸಗಳಿಗೆ ಪೂರಕವಾಗುತ್ತದೆ. ಈ ಬಗ್ಗೆ ಹೈಕಮಾಂಡ್‍ಗೂ ಕೂಡ ಮನವಿಯನ್ನು ಮಾಡಿದ್ದೇವೆ ಎಂದು ಹೇಳಿದರು.
ಮತ್ತೊಂದು ಸಚಿವ ಸ್ಥಾನಕ್ಕೆ ಪ್ರಿಯಾಂಕ್ ಅವರಿಂದಲೇ ಆಗ್ರಹ ಕೇಳಿ ಬಂದ ಹಿನ್ನೆಲೆಯಲ್ಲಿ ಜೇವರ್ಗಿ ಶಾಸಕ ಅಜಯ್ ಸಿಂಗ್ ಸೇರಿದಂತೆ ಹಲವು ಆಕಾಂಕ್ಷಿಗಳು ಮಂತ್ರಿಗಿರಿಯ ರೇಸ್‍ನಲ್ಲಿದ್ದಾರೆ. ಸಮ್ಮಿಶ್ರ ಸರ್ಕಾರ ಯಾವ ರೀತಿ ಮಂತ್ರಿ ಸ್ಥಾನವನ್ನು ಹಂಚಿ, ಉಳಿದ ಶಾಸಕರನ್ನು ಹೇಗೆ ಮನವೊಲಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.