Tag: ಮಂತ್ರಂ

  • ಚಾಮರಾಜನಗರ ದೇಗುಲಗಳಲ್ಲಿ ಕನ್ನಡ ಕಡ್ಡಾಯ- ಮಾತೃ ಭಾಷೆಯಲ್ಲೇ ಅರ್ಚನೆಗೆ ಆದೇಶ

    ಚಾಮರಾಜನಗರ ದೇಗುಲಗಳಲ್ಲಿ ಕನ್ನಡ ಕಡ್ಡಾಯ- ಮಾತೃ ಭಾಷೆಯಲ್ಲೇ ಅರ್ಚನೆಗೆ ಆದೇಶ

    ಚಾಮರಾಜನಗರ: ಗಡಿನಾಡು ಚಾಮರಾಜನರದ ದೇವಸ್ಥಾನಗಳಲ್ಲಿ ಇನ್ಮುಂದೆ ಕನ್ನಡ ಡಿಂಡಿಮ ಮೊಳಗಲಿದೆ. ಯಾರಿಗೂ ಅರ್ಥವಾಗದ ಸಂಸ್ಕೃತದ ಮಂತ್ರಘೋಷಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಇನ್ನೇನಿದ್ದರೂ ಕನ್ನಡದಲ್ಲೇ ದೇವರಿಗೆ ಭಕ್ತಿಭಾವ ಸಮರ್ಪಿಸಿ ಎಂಬ ಹೊಸ ಆದೇಶವನ್ನು ಜಿಲ್ಲಾಡಳಿತ ನೀಡಿದೆ.

    ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಮಂತ್ರಪಠಣ, ಅರ್ಚನೆ, ಸಂಕಲ್ಪ, ವಿವಿಧ ಪೂಜಾ ಕೈಂಕರ್ಯಗಳನ್ನು ಸಂಸ್ಕೃತದಲ್ಲೇ ನೆರವೇರಿಸಲಾಗುತ್ತೆ. ಆದರೆ ದೇವಸ್ಥಾನಕ್ಕೆ ಹೋಗುವ ಶೇ.99 ರಷ್ಟು ಮಂದಿಗೆ ಸಂಸ್ಕೃತ ಬರೋದಿಲ್ಲ, ಅದು ನಮ್ಮ ವ್ಯವಹಾರಿಕ ಭಾಷೆಯೂ ಅಲ್ಲ. ಹಾಗಾಗಿ ಅರ್ಚಕರು ಹೇಳುವ ಮಂತ್ರವಾಗಲಿ, ಭಕ್ತರ ಪರವಾಗಿ ಮಾಡುವ ಸಂಕಲ್ಪವಾಗಲಿ, ಅರ್ಚನೆಯಾಗಲಿ, ಶ್ಲೋಕಗಳಾಗಲಿ ಅರ್ಥವೇ ಆಗುವುದಿಲ್ಲ.

    ಪೂಜಾರಿಗಳು ಮಾಡುವ ಅರ್ಚನೆ, ಮಂತ್ರ ಸುಲಭವಾಗಿ ಅರ್ಥವಾಗಬೇಕು ಎಂಬ ಉದ್ದೇಶದಿಂದ ಚಾಮರಾಜನಗರ ಜಿಲ್ಲಾಡಳಿತ ಹೊಸ ಆದೇಶವನ್ನು ಹೊರಡಿಸಿದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಾಲಯಗಳಲ್ಲಿ ಇನ್ಮುಂದೆ ಕನ್ನಡದಲ್ಲೇ ಮಂತ್ರೊಚ್ಛಾರಣೆ ಮಾಡಬೇಕು. ಸಂಪ್ರದಾಯ ಹಾಗೂ ಧಾರ್ಮಿಕ ಪದ್ಧತಿಗಳಿಗೆ ಧಕ್ಕೆ ಬಾರದಂತೆ ಕನ್ನಡದಲ್ಲಿಯೇ ಮಂತ್ರ ಪಠಿಸಬೇಕು ಎಂದು ಡಿಸಿ ಡಾ.ಎಂ.ಆರ್. ರವಿ ಸೂಚಿಸಿದ್ದಾರೆ.

    ಕನ್ನಡದಲ್ಲಿ ಮಂತ್ರಪಠಣಕ್ಕಾಗಿ ಕನ್ನಡ ಪಂಡಿತರ ಅರ್ಚಕರಿಗೆ ವಿಶೇಷ ಟ್ರೈನಿಂಗ್ ಕೊಡಿಸಲು ಸಹ ಜಿಲ್ಲಾಡಳಿತ ತೀರ್ಮಾನಿಸಿದೆ. ಇದನ್ನು ಅರ್ಚಕರು ಸಹ ಸ್ವಾಗತಿಸಿದ್ದಾರೆ. ಮಂತ್ರ, ಶ್ಲೋಕ ಹಾಗೂ ಪೂಜಾ ವಿಧಿವಿಧಾನಗಳನ್ನು ಕನ್ನಡದಲ್ಲೇ ಮುದ್ರಿಸಿ ಪುಸ್ತಕ ರೂಪದಲ್ಲಿ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

    ಚಾಮರಾಜನಗರ ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಗೆ ಸೇರಿದ 281 ದೇವಸ್ಥಾನಗಳಿದ್ದು, ಅಲ್ಲೆಲ್ಲಾ ಕನ್ನಡದ ಕಂಪು ಪಸರಿಸಲಿದೆ. ಕನ್ನಡದಲ್ಲೇ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಬೇಕೆಂಬ ಜಿಲ್ಲಾಧಿಕಾರಿಗಳ ಆದೇಶ ಭಕ್ತರ ಪ್ರಶಂಸೆಗೂ ಪಾತ್ರವಾಗಿದೆ.

  • ಸೂರ್ಯನಿಗೆ ಟಾರ್ಚ್ ಬಿಟ್ಟ ನಂತ್ರ ಕೊರೊನಾಗೆ ಔಷಧಿ ಕಂಡು ಹಿಡಿದ ನಿತ್ಯಾನಂದ

    ಸೂರ್ಯನಿಗೆ ಟಾರ್ಚ್ ಬಿಟ್ಟ ನಂತ್ರ ಕೊರೊನಾಗೆ ಔಷಧಿ ಕಂಡು ಹಿಡಿದ ನಿತ್ಯಾನಂದ

    ಬೆಂಗಳೂರು: ವಿಶ್ವಾದ್ಯಂತ ಹರಡುತ್ತಿರುವ ಕೊರೊನಾ ವೈರಸ್‍ಗೆ ಸ್ವಯಂ ಘೋಷಿತ ದೈವಮಾನವ ನಿತ್ಯಾನಂದ ಔಷಧಿ ಕಂಡುಹಿಡಿದ್ದೇನೆ ಎಂದು ವಿಡಿಯೋವೊಂದನ್ನು ಹರಿಬಿಟ್ಟಿದ್ದಾನೆ.

    ಕೊರೊನಾವನ್ನು ನಾನು ಗುಣಪಡಿಸುತ್ತೇನೆ. ಸೋಂಕಿಗೆ ಮದ್ದು ಕಂಡು ಹಿಡಿದಿದ್ದೇನೆ. ಇಂದಿನಿಂದ ಕೊರೊನಾಗೆ ಚಿಕಿತ್ಸೆ ಕೊಡಲಿರುವೆ ಎಂದು ನಿತ್ಯಾನಂದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ನಾನು ಹೇಳುವ ಮಂತ್ರವನ್ನು 48 ಗಂಟೆಗಳ ಕಾಲ ಪಠಿಸಿದರೆ ಸಾಕು ಕೊರೊನಾ ವೈರಸ್ ದೇಹ ಬಿಟ್ಟು ಹೋಗುತ್ತೆ ಎಂದಿದ್ದಾನೆ. ಇದನ್ನೂ ಓದಿ:ಹೊಸ ದೇಶವನ್ನೇ ಕಟ್ಟಿದ ನಿತ್ಯಾನಂದ – ಕ್ಯಾಬಿನೆಟ್ ರಚನೆ, ಪ್ರಧಾನಿ ಆಯ್ಕೆ

    “ಓಂ ನಿತ್ಯಾನಂದ ಪರಮ ಶಿವೋಹಂ” ಎಂದು ನಿರಂತರ 48 ಗಂಟೆಗಳ ಕಾಲ ಮಂತ್ರ ಪಠಿಸಿದರೆ ಕೊರೊನಾ ದೇಹ ಬಿಟ್ಟು ಹೋಗುತ್ತೆ ಎಂದು ವಿಡಿಯೋದಲ್ಲಿ ತಿಳಿಸಲಾಗಿದೆ. ಈ ಮಂತ್ರ ಪಠಿಸಿದರೆ 48 ಗಂಟೆ ಧನಾತ್ಮಕ, ಆಧ್ಯಾತ್ಮಿಕ ಶಕ್ತಿ ದೇಹದಿಂದ ಕೊರೊನಾ ಓಡಿಹೋಗುತ್ತೆ. ಶುಕ್ರವಾರದಿಂದ ಭಾನುವಾರದವರೆಗೂ ಕೈಲಾಸದಲ್ಲಿ ಸ್ಪೆಷಲ್ ಕ್ಲಾಸ್ ಇದೆ. ಕೊರೊನಾ ಪೀಡಿತರು ಇಲ್ಲಿ ಸೇರಿ ಎಂದು ವಿಡಿಯೋ ಮೂಲಕ ನಿತ್ಯಾನಂದ ಸಂದೇಶ ರವಾನಿಸಿದ್ದಾನೆ.

    ಸೂರ್ಯನಿಗೆ ಟಾರ್ಚ್ ಬಿಟ್ಟಿದ್ದ:
    ನಾನು ಧ್ವಜಾರೋಹಣ ಮುಗಿಸೋವರೆಗೂ ಕಾಣಿಸಬೇಡ ಎಂದು ಸೂರ್ಯನಿಗೆ ಹೇಳಿದ್ದೆ. ಅದಕ್ಕೆ ಅವನು ಬಿಡದಿಯಲ್ಲಿ 40 ನಿಮಿಷ ತಡವಾಗಿ ಹುಟ್ಟಿದ್ದ ಎಂದು ನಿತ್ಯಾನಂದ ಸ್ವಾಮೀಜಿ ಈ ಹಿಂದೆ ಭರ್ಜರಿ ಬಿಲ್ಡಪ್ ಕೊಟ್ಟಿದ್ದ. ಬಿಡದಿ ಆಶ್ರಮದಲ್ಲಿ ವಿದೇಶಿ ಭಕ್ತಾದಿಗಳನ್ನು ಸುತ್ತಲು ಕೂರಿಸಿಕೊಂಡು ನಾನು ಆದೇಶ ನೀಡಿದ್ದಕ್ಕೆ ಸೂರ್ಯ ತಡವಾಗಿ ಉದಯಿಸಿದ. ಬಿಡದಿಯಲ್ಲಿ ಮಾತ್ರ 40 ನಿಮಿಷ ತಡವಾಗಿ ಕಾಣಿಸಿಕೊಂಡ ಎಂದು ನಿತ್ಯಾನಂದ ಹೇಳಿದ್ದ. ಇದನ್ನೂ ಓದಿ: ನನ್ನನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ, ನಾನು ಪರಮಶಿವ- ನಿತ್ಯಾನಂದನ ವಿಡಿಯೋ ವೈರಲ್

    ನಿತ್ಯಾನಂದ ಹೇಳಿದ್ದೇನು?
    ದಿನ ಆರಂಭವಾಗುವುದು ಸೂರ್ಯೋದಯದ ಮೂಲಕ. ಇವತ್ತು ಎಷ್ಟು ಮಂದಿ ಸೂರ್ಯೋದಯವನ್ನು ನೋಡಿದ್ದೀರೋ ಗೊತ್ತಿಲ್ಲ. ಇವತ್ತು ನಾನು ಧ್ವಜರೋಹಣಕ್ಕೆ ತಡವಾಗಿ ಬಂದೆ. ಪ್ರತಿದಿನ ಮುಂಜಾನೆ 6:40ರಿಂದ 7 ರವರೆಗೆ ಧ್ವಜರೋಹಣ ನಡೆಯುತ್ತದೆ. ಆದರೆ ನಾನು ಇಂದು ಕೊಂಚ ತಡವಾಗಿ ಬಂದೆ. ನಾನು ಹೇಳೋವರೆಗೆ, ಧ್ವಜಾರೋಹಣ ಮುಗಿಸೋವರೆಗೆ ನೀನು ಕಾಣಿಸಿಕೊಳ್ಳಬೇಡ ಎಂದು ಸೂರ್ಯನಿಗೆ ಹೇಳಿದ್ದೆ. ನಾನು ಹೇಳಿದ ತಕ್ಷಣ ಸೂರ್ಯ ಅವತ್ತು ಬಿಡದಿಯಲ್ಲಿ ನಲವತ್ತು ನಿಮಿಷ ತಡವಾಗಿ ಕಾಣಿಸಿಕೊಂಡ.

    ಬಿಡದಿಯಲ್ಲಿ ಮಾತ್ರ ಈ ಅಚ್ಚರಿ ನಡೆದಿದ್ದು, ಬೇಕಾದರೆ ಗೂಗಲ್ ನಲ್ಲಿ ಇಂದಿನ ಸೂರ್ಯೋದಯದ ಸಮಯ ಎಷ್ಟಿತ್ತು? ಬಿಡದಿಯಲ್ಲಿ ಸೂರ್ಯೋದಯವಾದ ಸಮಯ ನೋಡಿ ಆಗ ಗೊತ್ತಾಗುತ್ತೆ. ಇದೆಲ್ಲ ನನ್ನಿಂದ ಮಾತ್ರ ಸಾಧ್ಯ ಎಂದು ವಿವರಿಸಿದ್ದ. ನಿತ್ಯಾನಂದನ ಈ ಮಾತನ್ನು ಹೇಳುತ್ತಿದ್ದಂತೆ ಅಲ್ಲಿದ್ದ ವಿದೇಶಿ ಮಹಿಳಾ ಭಕ್ತೆಯರು ಚಪ್ಪಾಳೆ ತಟ್ಟಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸದ್ಯ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ.

    https://www.facebook.com/theavatarclicks/videos/165762454725106/

  • ಗಮನ ಸೆಳೆಯುತ್ತಿದೆ ‘ಫೋರ್ ವಾಲ್ಸ್’ ಫಸ್ಟ್ ಲುಕ್- ‘ಮಂತ್ರಂ’ ನಿರ್ದೇಶಕನ 2ನೇ ಪ್ರಯತ್ನ

    ಗಮನ ಸೆಳೆಯುತ್ತಿದೆ ‘ಫೋರ್ ವಾಲ್ಸ್’ ಫಸ್ಟ್ ಲುಕ್- ‘ಮಂತ್ರಂ’ ನಿರ್ದೇಶಕನ 2ನೇ ಪ್ರಯತ್ನ

    ‘ಮಂತ್ರಂ’ ಚಿತ್ರದ ಮೂಲಕ ಖ್ಯಾತಿಗಳಿಸಿದ ನಿರ್ದೇಶಕ ಸಂಗಮೇಶ್ ಎಸ್ ಸಜ್ಜನ್ ಎರಡುವರೆ ವರ್ಷದ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಎರಡನೇ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಕೂಡ ಮಾಡಿದ್ದಾರೆ. ಚಿತ್ರದ ಟೈಟಲ್ ವಿಭಿನ್ನವಾಗಿದ್ದು ಫಸ್ಟ್ ಲುಕ್ ಪೋಸ್ಟರ್ ಎಲ್ಲೆಡೆ ಮೆಚ್ಚುಗೆ ಪಡೆದುಕೊಂಡಿದೆ.

    ‘ಮಂತ್ರಂ’ ಸಿನಿಮಾದಿಂದ ಖ್ಯಾತಿ ಸಿಕ್ಕಿದರು ಮತ್ತೊಂದು ಹೊಸ ಪ್ರಯತ್ನಕ್ಕೆ ಸಮಯ ತೆಗೆದುಕೊಂಡು ಸಕಲ ಸಿದ್ಧತೆಯೊಂದಿಗೆ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ ಸಂಗಮೇಶ್ ಎಸ್ ಸಜ್ಜನ. ಉತ್ತರ ಕರ್ನಾಟಕ ಮೂಲದವರಾದ ಸಂಗಮೇಶ್ ಎಸ್ ಸಜ್ಜನ ಮೂಲತಃ ರಂಗಭೂಮಿ ಕಲಾವಿದರು. ಹಲವಾರು ರಂಗ ನಾಟಕ, ಬೀದಿ ನಾಟಕಗಳನ್ನ ನಿರ್ದೇಶಿಸಿ ಅನುಭವ ಇರುವ ಇವರು, ಸಿನಿಮಾ ನಿರ್ದೇಶಕನಾಗಿ ಹೆಸರು ಮಾಡುತ್ತಿದ್ದಾರೆ.

    ಇದೀಗ ಇವರ ಎರಡನೇ ಚಿತ್ರ ‘ಫೋರ್ ವಾಲ್ಸ್ & ಟೂ ನೈಟೀಸ್’ ಚಿತ್ರದ ಪಸ್ಟ್ ಲುಕ್ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ. ಅಂದ್ಹಾಗೆ ಇದು ಕುಟುಂಬ ಸಮೇತ ಕುಳಿತು ನೋಡಬಹುದಾದ ಚಿತ್ರವಾಗಿದ್ದು, ತಂದೆ ಹಾಗೂ ಮಕ್ಕಳ ಕಥೆ ಚಿತ್ರದಲ್ಲಿದೆಯಂತೆ. ಅಚ್ಯುತ್ ಕುಮಾರ್, ದತ್ತಣ್ಣ, ನೀನಾಸಂ ಭಾಸ್ಕರ್, ಜಾನ್ಹವಿ ಜೋಶಿ, ಶ್ರೇಯಾ ಶೆಟ್ಟಿ, ಆಂಚಲ್, ರಘು ರಾಮಪ್ಪ ಚಿತ್ರದ ತಾರಾ ಬಳಗದಲ್ಲಿದ್ದಾರೆ. ನಾಯಕಿ ಪಾತ್ರದಲ್ಲಿ ಡಾ.ಪವಿತ್ರ ನಟಿಸುತ್ತಿದ್ದು, ಸಿನಿಮಾ ಇವರ ಹೊಸ ಪ್ರಯತ್ನ.

    ತೆಲುಗಿನ ರುದ್ರಮ್ಮದೇವಿ, ಗರುಡವೇಗ ಚಿತ್ರಗಳಿಗೆ ಸಿನಿಮಾಟೋಗ್ರಾಫರ್ ಆಗಿ ಖ್ಯಾತಿಗಳಿಸಿರುವ ವಿಡಿಆರ್ ಈ ಚಿತ್ರಕ್ಕೆ ಸಿನಿಮಾಟೋಗ್ರಾಫರ್ ಆಗಿರೋದು ವಿಶೇಷ. ಇನ್ನೂ ಚಿತ್ರಕ್ಕೆ ಆನಂದ ರಾಜಾ ವಿಕ್ರಮ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

    ಎಸ್.ವಿ. ಪಿಕ್ಚರ್ಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗುತ್ತಿದ್ದು, ಟಿ.ವಿಶ್ವನಾಥ್ ನಾಯಕ್ ‘ಪೋರ್ ವಾಲ್ಸ್’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸದ್ಯ ಶೇಕಡಾ ಎಂಬತ್ತು ಭಾಗ ಶೂಟಿಂಗ್ ಕಂಪ್ಲೀಟ್ ಮಾಡಿರೋ ‘ಫೋರ್ ವಾಲ್ಸ್’ ಚಿತ್ರತಂಡ ಸದ್ಯದಲ್ಲೇ ಟೀಸರ್ ಬಿಡುಗಡೆ ಮಾಡಲಿದೆ.

  • ಸೂರ್ಯಗ್ರಹಣದ ಪರಿಣಾಮವೇನು -ಏನು ಮಾಡಬೇಕು? ಏನು ಮಾಡಬಾರದು?

    ಸೂರ್ಯಗ್ರಹಣದ ಪರಿಣಾಮವೇನು -ಏನು ಮಾಡಬೇಕು? ಏನು ಮಾಡಬಾರದು?

    ಗುರುವಾರ ಬೆಳಗ್ಗೆ 8:04ಕ್ಕೆ ಕೇತುಗ್ರಸ್ತ ಸೂರ್ಯಗ್ರಹಣ ಆರಂಭವಾಗಲಿದ್ದು, ಬೆಳಗ್ಗೆ 11:04 ಗಂಟೆಗೆ ಮುಕ್ತಾಯವಾಗುತ್ತದೆ. ಈ ಬಾರಿ ಮೂಲ ನಕ್ಷತ್ರ ಧನಸ್ಸು ರಾಶಿಯಲ್ಲಿ ಗ್ರಹಣವಾಗುತ್ತದೆ. ಹೀಗಾಗಿ ಈ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು? ದೋಷ ಪರಿಹಾರಕ್ಕೆ ಯಾವ ಮಂತ್ರ ಪಠಿಸಬೇಕು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

    ರಾಜ್ಯದ ಎಲ್ಲೆಲ್ಲಿ ಗ್ರಹಣ ಗೋಚರ?
    ಮಂಗಳೂರು – ಶೇ. 93.04
    ಮೈಸೂರು – ಶೇ.94
    ಶಿವಮೊಗ್ಗ – ಶೇ. 89.86
    ಬೆಂಗಳೂರು – ಶೇ. 89.54
    ಹುಬ್ಬಳ್ಳಿ – ಶೇ. 86.24
    ಬೀದರ್ – ಶೇ. 74.40
    ವಿಜಯಪುರ -ಶೇ. 80.64

    ಸೂರ್ಯಗ್ರಹಣ ಕಾಲದಲ್ಲಿ ಏನು ಮಾಡಬಾರದು?
    ಗರ್ಭಿಣಿಯರು ಮನೆಯಿಂದ ಹೊರಗೆ ಬರಬಾರದು, ಯಾಕೆಂದರೆ ಗರ್ಭಿಣಿಯರ ಮೇಲೆ ಸೂರ್ಯನ ಕಿರಣ ಬಿದ್ದಾಗ ಮಗುವಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ನಿದ್ರೆ, ಸ್ನಾನ, ಊಟ, ಪ್ರಯಾಣ ಮಾಡಬಾರದು. ದೇವತಾ ವಿಗ್ರಹಗಳನ್ನು ಮುಟ್ಟಬಾರದು, ವ್ಯವಹಾರಗಳಿಗೆ ಒಪ್ಪಂದ ಮಾಡಿಕೊಳ್ಳಬಾರದು. ವ್ಯಾಪಾರ-ಹಣಕಾಸು ವಿಚಾರದಲ್ಲಿ ಎಚ್ಚರ ವಹಿಸಬೇಕು. ಬರೀಗಣ್ಣಿನಿಂದ ಸೂರ್ಯ ಗ್ರಹಣ ನೋಡಬಾರದು.

    ಗ್ರಹಣದ ನಂತರ ಏನು ಮಾಡಬೇಕು?
    ಗ್ರಹಣ ಮೋಕ್ಷದ ನಂತರ ಕಡ್ಡಾಯವಾಗಿ ಸ್ನಾನ ಮಾಡಬೇಕು. ಹರಿಯುವ ನೀರಿನಲ್ಲಿ ಅಥವಾ ತಣ್ಣೀರಿನಿಂದ ಸ್ನಾನ ಮಾಡಬೇಕು. ಸ್ನಾನದ ನಂತರ ಆಹಾರ ಸೇವನೆ ಮಾಡಬಹುದು. ಈ ವೇಳೆ ಜಪ-ತಪ, ಧ್ಯಾನ, ಮಂತ್ರೋಪದೇಶ, ಪಿತೃದರ್ಪಣ ಮಾಡುವುದು ಒಳಿತು.

    ಗ್ರಹಣಾಚರಣೆಯ ಕ್ರಮವೇನು?
    ಗ್ರಹಣ ಸ್ಪರ್ಶಕಾಲದಲ್ಲಿ ಸ್ನಾನ ಮಾಡಬೇಕು. ಬಳಿಕ ಗ್ರಹಣ ಸಮಯದಲ್ಲಿ ದೇವರ ಸ್ತೋತ್ರಗಳನ್ನು ಪಠಿಸಬೇಕು. ಮನೆಯ ದೇವರಿಗೆ ವಿಶೇಷ ಪೂಜೆ-ಪ್ರಾಥನೆ ಮಾಡಬೇಕು. ನಂತರ ಗ್ರಹಣ ಮೋಕ್ಷ ಕಾಲದ ಬಳಿಕ ಪುನಃ ಸ್ನಾನ ಮಾಡಿ, ದೇವರ ಕೋಣೆಯನ್ನು ಸ್ವಚ್ಛಗೊಳಿಸಿ ಪೂಜೆ ಮಾಡಬೇಕು. ಆ ನಂತರ ಆಹಾರ ಸೇವನೆ ಮಾಡಬೇಕು.

    ಗ್ರಹಣ ದೋಷ ಪರಿಹಾರ ಮಂತ್ರ:
    ಯೋ ಸೌ ವಜ್ರಧರೋ ದೇವಃ ಆದಿತ್ಯಾನಂ ಪ್ರಭುರ್ಮತಃ |
    ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||
    ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |
    ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||
    ಯೋ ಸೌ ಶೂಲಧಯೋ ದೇವಃ ಪಿನಾಕೀ ವೃಷವಾಹನಃ |
    ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||

    ಗ್ರಹಣ ದೋಷ ಪರಿಹಾರ ಕ್ರಮ:
    ಶಿವನ ದೇವಾಲಯದ ದೀಪಕ್ಕೆ ಎಣ್ಣೆ ಒಪ್ಪಿಸುವುದು, ದೇಗುಲದಲ್ಲಿ ಕನಿಷ್ಠ 21 ಪ್ರದಕ್ಷಿಣೆ ಹಾಕುವುದು. ಗ್ರಹಣಕ್ಕೆ ಸಂಬಂಧಿಸಿದ ಧಾನ್ಯಗಳನ್ನು(ಗೋಧಿ ಹಾಗೂ ಹುರುಳಿ) ದಾನ ಮಾಡುವುದು.

    ಗ್ರಹಣ ಎಫೆಕ್ಟ್ ಏನಾಗಬಹುದು?
    1. ರಾಜ್ಯದಲ್ಲಿ ಅಕಾಲಿಕ ಮಳೆ, ಸೈಕ್ಲೋನ್ ಭೀತಿ, ಕೃಷಿಕ್ಷೇತ್ರಕ್ಕೆ ಹಾನಿ, ಕೆಂಪು ಧಾನ್ಯದಲ್ಲಿ ಹಾನಿ ಆಗುವ ಸಂಭವವಿದೆ.
    2. ಅಲ್ಲದೆ ರಾಜ್ಯ ರಾಜಕೀಯದಲ್ಲಿ ಭಿನ್ನಮತ ಸ್ಫೋಟವಾಗುವ ಸಾಧ್ಯತೆ ಇದೆ. ಹಿರಿಯ ರಾಜಕಾರಣಿಗಳ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ.
    3. ದೇಶದ ವಿಚಾರದಲ್ಲಿ ಸೈನಿಕರಿಗೆ ತೊಂದರೆ, ನೆರೆಯ ರಾಷ್ಟ್ರದಿಂದ ಆಕಸ್ಮಿಕ ಯುದ್ಧಭೀತಿ ಆವರಿಸಲಿದೆ.
    4. ದೇಶದ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಸುನಾಮಿ, ಬೆಂಕಿ ಅನಾಹುತಗಳು ಸಂಭವಿಸುವ ಸಾಧ್ಯತೆಯಿದೆ.
    5. ಧರ್ಮವನ್ನು ಅನುಸರಿಸುವ ಎಲ್ಲಾ ವ್ಯಕ್ತಿಗಳಿಗೂ ಅತೀ ವಿರೋಧ, ತೊಂದರೆಗಳು ಆಗಲಿದೆ.
    6. ಗ್ರಹಣ ರಾಶಿಯಲ್ಲಿ ಬುಧ, ಗುರು, ಶನಿ, ಕೇತು ಇರುವುದರಿಂದ ಕಾಯಿಲೆಗಳು ಹೆಚ್ಚಾಗುತ್ತದೆ, ಮಾನಸಿಕ ನೆಮ್ಮದಿ ಕಡಿಮೆಯಾಗುತ್ತದೆ.

  • ರವಿ ಹಿಸ್ಟರಿ: ನಾಯಕಿ ಪಲ್ಲವಿ ರಾಜು ಬಗ್ಗೆ ನಿಮಗೆ ಗೊತ್ತಿಲ್ಲದ ಸ್ಟೋರಿ!

    ರವಿ ಹಿಸ್ಟರಿ: ನಾಯಕಿ ಪಲ್ಲವಿ ರಾಜು ಬಗ್ಗೆ ನಿಮಗೆ ಗೊತ್ತಿಲ್ಲದ ಸ್ಟೋರಿ!

    ಮಧುಚಂದ್ರ ನಿರ್ದೇಶನ ಮಾಡಿರುವ ರವಿ ಹಿಸ್ಟರಿ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಬರಿಗಣ್ಣಿಗೆ ಕಾಣಿಸದ ಭೂಗತ ಜಗತ್ತಿನ ಕಥಾ ಹಂದರದ ಸುಳಿವಿನೊಂದಿಗೆ ಹೊಸತೇನೋ ಇದೆ ಅನ್ನೋ ಆಕರ್ಷಣೆಯನ್ನು ಈ ಚಿತ್ರ ಪ್ರೇಕ್ಷಕರಲ್ಲಿ ಹುಟ್ಟಿಸಿದೆ. ಇಂಥಾದ್ದೊಂದು ಹೊಸಾ ಅಲೆಯ ಚಿತ್ರದ ನಾಯಕಿಯಾಗಿ ವಿಭಿನ್ನವಾದೊಂದು ಪಾತ್ರದ ಮೂಲಕ ಪಲ್ಲವಿ ರಾಜು ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

    ಪಲ್ಲವಿ ರಾಜು ಅಂದರೆ ಪ್ರೇಕ್ಷಕರು ಮಂತ್ರಂ ಎಂಬ ಚಿತ್ರದಲ್ಲಿನ ಮನಸೆಳೆಯುವ ನಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಮತ್ತೊಂದಷ್ಟು ಭಿನ್ನ ಪಾತ್ರಗಳು ಕಣ್ಮುಂದೆ ಕದಲುತ್ತವೆ. ಒಟ್ಟಾರೆಯಾಗಿ ಪಲ್ಲವಿ ಎಂಥಾ ಪಾತ್ರಗಳಿಗಾದರೂ ಜೀವ ತುಂಬಬಲ್ಲ ಪ್ರತಿಭಾವಂತ ನಟಿಯಾಗಿ ಕನ್ನಡದ ಪ್ರೇಕ್ಷಕರ ಮನದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈವರೆಗೂ ಪ್ರಯೋಗಾತ್ಮಕವಾದ ಚಿತ್ರಗಳಲ್ಲಿಯೇ ನಟಿಸುತ್ತಾ ಬಂದಿರುವ ಪಲ್ಲವಿ ರವಿ ಹಿಸ್ಟರಿಯ ಮೂಲಕ ಕಮರ್ಶಿಯಲ್ ಸಿನಿಮಾ ಮೂಲಕವೂ ಸೈ ಅನ್ನಿಸಿಕೊಳ್ಳೋ ಕಾತರದಿಂದಿದ್ದಾರೆ.

    ರವಿ ಹಿಸ್ಟರಿ ಚಿತ್ರದಲ್ಲಿಯೂ ಪಲ್ಲವಿ ರಾಜು ಅವರಿಗೆ ನಟನೆಗೆ ಅವಕಾಶವಿರುವ ಸವಾಲಿನ ಪಾತ್ರವೇ ಸಿಕ್ಕಿದೆ. ಅವರಿಲ್ಲಿ ಎಸ್‍ಐ ಅನಿತ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಖುದ್ದು ಅವರಿಗೇ ಅಚ್ಚರಿ ಹುಟ್ಟಿಸಿದ್ದ ಪಾತ್ರವಿದು. ಹಾಗಿದ್ದ ಮೇಲೆ ಈ ಪಾತ್ರವೇ ಪ್ರೇಕ್ಷಕರನ್ನೂ ಕೂಡಾ ಬೆರಗಾಗಿಸೋದರಲ್ಲಿ ಯಾವ ಸಂದೇಹವೂ ಇಲ್ಲ.

    ಪಲ್ಲವಿ ರಾಜು ಕ ಎಂಬ ಸಿನಿಮಾದ ಮೂಲಕವೇ ನಟಿಯಾಗಿ ಪಾದಾರ್ಪಣೆ ಮಾಡಿದ್ದವರು. ಆರಂಭ ಕಾಲದಿಂದಲೂ ನಟಿಯಾಗ ಬೇಕೆಂಬ ಆಸೆ ಹೊಂದಿದ್ದ ಪಲ್ಲವಿಗೆ ಪೂರಕ ವಾತಾವರಣವನ್ನು ಸೃಷ್ಟಿಸಿದ್ದದ್ದು ಅವರ ತಂದೆ. ಅವರಿಗೂ ಕೂಡಾ ಸಿನಿಮಾ ನೋಡೋ ಹವ್ಯಾಸವಿತ್ತು. ಈ ಕಾರಣದಿಂದಲೇ ಪಲ್ಲವಿ ಅವರಿಗೂ ಒಳ್ಳೊಳ್ಳೆ ಚಿತ್ರಗಳನ್ನು ಕಣ್ತುಂಬಿಕೊಳ್ಳೋ ಅವಕಾಶವೂ ಸಿಗುತ್ತಿತ್ತು. ಈ ಮೂಲಕವೇ ಕಲ್ಪನಾ, ಆರತಿ, ಮಂಜುಳಾ, ಲಕ್ಷ್ಮಿ ಮುಂತಾದ ನಟಿಯರನ್ನು ಆರಾಧಿಸಲಾರಂಭಿಸಿದ್ದ ಅವರಿಗೆ ತಾನೂ ಈ ನಟಿಯರಂತಾಗಬೇಕೆಂಬ ಕನಸು ಮೊಳೆತುಕೊಂಡಿತ್ತು. ಈ ಕಾರಣದಿಂದಲೇ ಈವತ್ತಿಗೂ ರಂಗನಾಯಕಿಯಂಥಾ ಸಿನಿಮಾದಲ್ಲಿ ನಟಿಸಬೇಕೆಂಬ ಮಹದಾಸೆ ಪಲ್ಲವಿಯವರಲ್ಲಿದೆ.

    ಆದರೆ ಇಂಥಾ ಆಸಕ್ತಿಗಳಿಗೆ ಅನುಗುಣವಾಗಿಯೇ ಬದುಕು ಸಾಗೋದಿಲ್ಲ. ಪರೀಕ್ಷೆಯೆಂಬಂತೆ ಜೀವನ ಬೇರಾವುದೋ ಕ್ಷೇತ್ರಕ್ಕೆ ಎತ್ತಿ ಒಗೆದು ಬಿಡುತ್ತೆ. ಒಳಗಿರೋ ಆಸಕ್ತಿ ಬಲವಾಗಿದ್ದರೆ ಖಂಡಿತಾ ಅದುವೇ ಸೆಳೆದುಕೊಂಡು ಬಿಡುತ್ತೆ. ಈ ಮಾತಿಗೆ ಪಲ್ಲವಿ ತಾಜಾ ಉದಾಹರಣೆ. ಯಾಕೆಂದರೆ ನಟಿಯಾಗಬೇಕೆಂಬ ಆಸೆ ಇದ್ದರೂ ಅವರು ಓದಿಕೊಂಡಿದ್ದು, ಕೆಲಸ ದಕ್ಕಿಸಿಕೊಂಡಿದ್ದು ತದ್ವಿರುದ್ಧ ಕ್ಷೇತ್ರದಲ್ಲಿ. ಬಿಕಾಂ ಓದಿಯಾದ ಮೇಲೆ ಬ್ಯಾಂಕೊಂದರಲ್ಲಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದ ಪಲ್ಲವಿ ರಾಜು, ಅದರ ನಡುವೆಯೂ ನಾಟಕ ತಂಡವೊಂದರಲ್ಲಿ ಸಕ್ರಿಯರಾಗಿದ್ದರು. ರಂಗಭೂಮಿಯಲ್ಲಿಯೇ ನಟಿಯಾಗಿ ರೂಪುಗೊಂಡಿದ್ದರು.

    ಅದರ ನಡುವಲ್ಲಿಯೇ ಕ ಎಂಬ ಸಿನಿಮಾದಲ್ಲಿ ಅವಕಾಶ ಸಿಕ್ಕಿ ಕೆಲಸದ ಜೊತೆಗೇ ಚಿತ್ರೀಕರಣ ಮುಗಿಸಿಕೊಂಡಿದ್ದ ಪಲ್ಲವಿ, ಆ ಬಳಿಕ ಕೆಲಸ ಬಿಟ್ಟು ಪೂರ್ಣವಾಗಿ ನಟನೆಯಲ್ಲಿಯೇ ತೊಡಗಿಸಿಕೊಂಡಿದ್ದರು. ಅವರೀಗ ಹತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲೊಂದಷ್ಟು ಬಿಡುಗಡೆಗೆ ರೆಡಿಯಾಗಿವೆ. ರವಿ ಹಿಸ್ಟರಿ ಈ ವಾರವೇ ಬಿಡುಗಡೆಯಾಗಲಿದೆ. ಈ ಚಿತ್ರ ಈಗಾಗಲೇ ಜನರಲ್ಲೊಂದು ನಿರೀಕ್ಷೆ ಚಿಗುರಿಸಿದೆ. ದೊಡ್ಡ ಮಟ್ಟದಲ್ಲಿಯೇ ಕ್ರೇಜ್ ಸೃಷ್ಟಿಸಿದೆ. ಈ ಮೂಲಕವೇ ಪಲ್ಲವಿಯವರ ಪಾಲಿಗೆ ಇನ್ನಷ್ಟು ಅವಕಾಶಗಳು ಕೂಡಿ ಬರುವುದು ಖಂಡಿತ!