Tag: ಮಂಡ್ಯ ರಾಜಕೀಯ

  • ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಾಗಲೇ ರಮ್ಯಾ ತಾಯಿ ಕೈ ವಿರುದ್ಧ ಅಪಸ್ವರ ಎತ್ತಿದ್ದೇಕೆ?

    ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಾಗಲೇ ರಮ್ಯಾ ತಾಯಿ ಕೈ ವಿರುದ್ಧ ಅಪಸ್ವರ ಎತ್ತಿದ್ದೇಕೆ?

    ಬೆಂಗಳೂರು: ಎಐಸಿಸಿ ಸಾಮಾಜಿಕ ಜಾಲತಾಣ ಮುಖ್ಯಸ್ಥೆಯಾಗಿರುವ ಮಗಳು ರಮ್ಯಾ ಜೊತೆಗೆ ತಾಯಿ ರಂಜಿತಾ ಅವರಿಗೆ ಮನಸ್ತಾಪ ಇದ್ಯಾ ಎನ್ನುವ ಪ್ರಶ್ನೆಯೊಂದು ಈಗ ಎದ್ದಿದೆ.

    ಹೌದು. ಇದೂವರೆಗೂ ಎಲ್ಲಿಯೂ ಪಕ್ಷದ ವಿರುದ್ಧ ಬಹಿರಂಗ ಹೇಳಿಕೆ ನೀಡದ ರಂಜಿತಾ ರಾಹುಲ್ ಗಾಂಧಿ ಕರಾವಳಿ ಪ್ರವಾಸ ಆರಂಭಗೊಂಡ ದಿನವೇ ಬಂಡಾಯದ ಧ್ವನಿ ಎತ್ತಿದ್ದನ್ನು ನೋಡಿದಾಗ ಕಾಂಗ್ರೆಸ್ ವಲಯದಲ್ಲಿ ಈ ಪ್ರಶ್ನೆ ಎದ್ದಿದೆ.ಈಗ ಧ್ವನಿ ಎತ್ತಿದ್ದರೆ ಈ ವಿಚಾರ ರಾಹುಲ್ ಅವರಿಗೆ ತಿಳಿಯಬಹುದು ಎನ್ನು ಕಾರಣಕ್ಕೆ ತನ್ನ ಅಸಮಾಧಾನವನ್ನು ಹೊರಹಾಕಿದ್ದಾರೆ ಎನ್ನುವ ವಿಶ್ಲೇಷಣೆ ಆರಂಭವಾಗಿದೆ.

    ರಾಹುಲ್ ಗಾಂಧಿ ಗಮನ ಸೆಳೆಯಲೆಂದು ರಂಜಿತಾ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರಾ? ರಮ್ಯಾ ಮೇಲಿನ ಸಿಟ್ಟೇ ಅಂಬರೀಶ್ ವಿರುದ್ಧದ ಸ್ಪರ್ಧೆಗೆ ಕಾರಣನಾ? ತಾಯಿ-ಮಗಳ ಕಿತ್ತಾಟದಿಂದ ಮಂಡ್ಯದಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾಗುತ್ತಾ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿದೆ.

    ರಂಜಿತಾ ಹೇಳಿದ್ದು ಏನು?
    ನನಗೆ ಯಾರ ವಿರುದ್ಧವೂ ಅಸಮಾಧಾನವಿಲ್ಲ. ಆದರೆ ಜನರ ಸೇವೆ ಮಾಡಲು ಅವಕಾಶ ನೀಡದ್ದಕ್ಕೆ ನನಗೆ ಕಾಂಗ್ರೆಸ್ ಪಕ್ಷದ ಮೇಲೆ ಅಸಮಾಧಾನವಿದೆ ಎಂದು ರಮ್ಯಾ ಅವರ ತಾಯಿ ರಂಜಿತಾ ಹೇಳಿದ್ದರು. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬಹಳ ಹಿಂದಿನಿಂಂದಲೂ ನಾನು ಕಾಂಗ್ರೆಸ್ ಕಾರ್ಯಕರ್ತೆ, 1986ರಲ್ಲಿ ತಂದೆ ತೀರಿಹೋಗಿದ್ದರು. 1980ರ ದಶಕದಲ್ಲೇ 2 ರೂ. ನೀಡಿ ಕಾಂಗ್ರೆಸ್ ಸದಸ್ಯೆಯಾಗಿ ಸೇರ್ಪಡೆಯಾದೆ. ನಾನು ಮನೆಮನೆಗೆ ಪ್ರಚಾರ ಮಾಡಿದ್ದೇನೆ. ಪಕ್ಷದ ಪರವಾಗಿ ಕೆಲಸ ಮಾಡಿದ್ದರೂ ಕಾಂಗ್ರೆಸ್ ನನ್ನನ್ನು ಗುರುತಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

    ಈ ವೇಳೆ ರಮ್ಯಾ ಜೊತೆ ಮಾತನಾಡಿದ್ದೀರಾ ಎನ್ನುವ ಪ್ರಶ್ನೆಗೆ, ಸಂಬಂಧ ಬೇರೆ, ಅವರ ಅಭಿಪ್ರಾಯ ಬೇರೆ. ಸ್ವತಂತ್ರವಾಗಿ ತೀರ್ಮಾನ ಮಾಡುವ ಹಕ್ಕು ನನಗಿದೆ. ಜನ ಸೇವೆ ಮಾಡಲು ಯಾವ ಪಕ್ಷವಾದರೆ ಏನು? ಜನ ಸೇವೆ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದು, ಪಕ್ಷೇತರಳಾಗಿ ನಿಲ್ಲಬೇಕು ಎಂದು ತೀರ್ಮಾನ ಮಾಡಿದ್ದೇನೆ ಎಂದರು. ಈ ವೇಳೆ ಅಂಬರೀಶ್ ಬಗ್ಗೆ ಮಾತನಾಡಿದ ಅವರು, ಅಂಬಿ ಅಣ್ಣನ ಬಗ್ಗೆ ನನಗೆ ಗೌರವವಿದೆ. ಹಾಲಿ ಶಾಸಕರಾಗಿರುವ ಅಂಬರೀಷ್ ಬಗ್ಗೆ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದರು.

    ರಮ್ಯಾರನ್ನು ನಂಬಿ ಓಟ್ ಮಾಡಿದ ಮತದಾರರಿಗಾಗಿ ದುಡಿಯಬೇಕಿದೆ, ಹಾಗಾಗಿ ಎಲೆಕ್ಷನ್‍ಗೆ ನಿಲ್ಲುತ್ತಿದ್ದೇನೆ. ರೈತರ ಸೇವೆ ಮಾಡಬೇಕು ಎನ್ನುವ ಕನಸು ನನಗಿದೆ. ಹೀಗಾಗಿ ಪಕ್ಷೇತರಳಾಗಿ ನಿಲ್ಲುತ್ತೇನೆ ಎಂದು ರಂಜಿತಾ ತಿಳಿಸಿದರು.