Tag: ಮಂಡ್ಯ ರಮೇಶ್

  • ಅಪರ್ಣಾಗೆ ಇಷ್ಟು ಬೇಗ ಸಾವು ಪಟ್ ಅಂತ ಬರುತ್ತೆ ಎಂದು ಗೊತ್ತಿರಲಿಲ್ಲ: ಮಂಡ್ಯ ರಮೇಶ್

    ಅಪರ್ಣಾಗೆ ಇಷ್ಟು ಬೇಗ ಸಾವು ಪಟ್ ಅಂತ ಬರುತ್ತೆ ಎಂದು ಗೊತ್ತಿರಲಿಲ್ಲ: ಮಂಡ್ಯ ರಮೇಶ್

    ನ್ನಡದ ನಟಿ, ನಿರೂಪಕಿ 3 ದಶಕಗಳ ಕಾಲ ರಂಜಿಸಿದ ಅಪರ್ಣಾ (Aparna) ಇನ್ನಿಲ್ಲ. ಇದೀಗ ನಟಿಯ ಸ್ವಗೃಹಕ್ಕೆ ಸ್ಯಾಂಡಲ್‌ವುಡ್ ನಟ, ನಟಿಯರು ಭೇಟಿ ನೀಡಿ ಅಪರ್ಣಾ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಸದ್ಯ ಅಪರ್ಣಾ ನಿಧನಕ್ಕೆ ಸಹನಟ ಮಂಡ್ಯ ರಮೇಶ್ (Mandya Ramesh) ಕಂಬನಿ ಮಿಡಿದಿದ್ದಾರೆ.

    ಕನ್ನಡ ಅಂದರೆ ಅಪರ್ಣ ಅಪರ್ಣಾ ಅಂದರೆ ಕನ್ನಡ ಅಂತ ಮಾತಿದೆ. ಅವರ ಕನ್ನಡ ಪ್ರೀತಿ ಮಾಡಿದ ದೊಡ್ಡ ಜನ ಸಮೂಹವಿದೆ ಎಂಬುದು ಸೋಷಿಯಲ್ ಮೀಡಿಯಾದಲ್ಲಿ ಗೊತ್ತಾಗುತ್ತದೆ. 5 ವರ್ಷ ಮಜಾ ಟಾಕೀಸ್ ಮೂಲಕ ಇವರ ಜೊತೆ ಒಡನಾಟ ನಮ್ಮದು. ಎಲ್ಲರನ್ನೂ ಅತೀ ಪ್ರೀತಿಯಿಂದ ಮಾತನಾಡಿಸುತ್ತಿದ್ದರು ಅಪರ್ಣಾ. ಇಷ್ಟು ಬೇಗ ಸಾವು ಪಟ್ ಅಂತ ಬರುತ್ತೆ ಅಂತ ಗೊತ್ತಿರಲಿಲ್ಲ ಎಂದು ಮಂಡ್ಯ ರಮೇಶ್ ಭಾವುಕರಾಗಿದ್ದಾರೆ. ಇದನ್ನೂ ಓದಿ:ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ನಡೆಯಲಿದೆ ಅಪರ್ಣಾ ಅಂತ್ಯಕ್ರಿಯೆ

    ಶ್ರೇಷ್ಠವಾದ ಶುದ್ಧ ಕನ್ನಡದ ಚೆಂದದ, ಮನುಷ್ಯತ್ವ ಗುಣಗಳನ್ನ ಮರೆಯದ ನಟಿಯಾಗಿದ್ದರು. ಮಾತೃತ್ವದ ಹೆಣ್ಣು ಮಗು ಅಪರ್ಣಾ ಎಂದಿದ್ದಾರೆ. ಆರೋಗ್ಯ ಸರಿಯಿಲ್ಲ ಅನ್ನೋದಷ್ಟೇ ಗೊತ್ತಿತ್ತು. ಆದರೆ ಇಷ್ಟು ಗಂಭೀರ ಪರಿಸ್ಥಿತಿ ಇದೆ ಎಂದು ಗೊತ್ತಿರಲಿಲ್ಲ. 80 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮ ನಿರೂಪಣೆ ಮಾಡಿದ್ದ ಹೆಗ್ಗಳಿಕೆ ಅವರದ್ದು ಎಂದಿದ್ದಾರೆ. ಇನ್ನೂ ಯಾವಾಗಲೂ ಮಜಾ ಟಾಕೀಸ್‌ನಲ್ಲಿ ರೂಪದ ಬಗ್ಗೆ, ವಯಸ್ಸಿನ ಬಗ್ಗೆ ಕಾಮಿಡಿ ಮಾಡ್ತಿದ್ವಿ ಎಂದು ಸ್ಮರಿಸಿದ್ದರು. ಆಸ್ಟ್ರೇಲಿಯಾಗೆ ನಾವೆಲ್ಲ ಹೋಗಿದ್ದ ದಿನಗಳನ್ನ ಮರೆಯಲು ಆಗಲ್ಲ ಎಂದು ಹಳೆಯ ದಿನಗಳನ್ನು ನೆನೆದು ಮಂಡ್ಯ ರಮೇಶ್ ಭಾವುಕರಾಗಿದ್ದಾರೆ.

    ಅಂದಹಾಗೆ, ಬಹಳ ದಿನಗಳಿಂದಲೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಪರ್ಣಾ ಅವರು ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರು ದೂರದರ್ಶನದಲ್ಲಿ ಸೀನಿಯರ್ ಗ್ರೇಡ್ ನಿರೂಪಕಿಯಾಗಿದ್ದ ಅಪರ್ಣಾ, ಆಕಾಶವಾಣಿ ನಿರೂಪಕಿಯಾಗಿ ಕೆಲಸ ನಿರ್ವಹಿಸಿದ್ದರು. ಅಲ್ಲದೇ ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಅಭಿನಯಿಸಿದ್ದರು. ಕನ್ನಡದ ಯಶಸ್ವಿ ನಿರೂಪಕಿಯಾಗಿ 3 ದಶಕಗಳನ್ನು ಪೂರೈಸಿದ್ದಾರೆ.

    ಕಿರುತೆರೆಯಲ್ಲಿ ‘ಮೂಡಲಮನೆ’, ‘ಮುಕ್ತ’ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಅಪರ್ಣಾ, 2013 ರಲ್ಲಿ ಬಿಗ್‌ಬಾಸ್ ಕನ್ನಡದ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ್ದರು. 2015 ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ `ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿ ಕನ್ನಡ ಕಲಾಪ್ರಿಯರ ಮನಗೆದ್ದಿದ್ದರು. 2014 ರಲ್ಲಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಘೋಷಣೆಯಾಗುವ ಪ್ರಯಾಣಿಕರು ಹತ್ತುವ ಮತ್ತು ಇಳಿಯುವ ಸೂಚನೆ’ಗೆ ಧ್ವನಿ ಗೂಡಿಸಿದ್ದರು.

  • ‘ಆಸೆ’ ಧಾರಾವಾಹಿ ನಿರ್ಮಾಣ ಮಾಡಿದ ನಟ ರಮೇಶ್ ಅರವಿಂದ್

    ‘ಆಸೆ’ ಧಾರಾವಾಹಿ ನಿರ್ಮಾಣ ಮಾಡಿದ ನಟ ರಮೇಶ್ ಅರವಿಂದ್

    ನ್ನಡದ ಹೆಸರಾಂತ ನಟ ರಮೇಶ್ ಅರವಿಂದ್ (Ramesh Aravind) ಮತ್ತೆ ಕಿರುತೆರೆಗೆ ಹಾರಿದ್ದಾರೆ. ಈ ಬಾರಿ ಅವರು ಸುವರ್ಣ ವಾಹಿನಿಗಾಗಿ ಧಾರಾವಾಹಿಯನ್ನು (Serial) ನಿರ್ಮಿಸುತ್ತಿದ್ದು, ಈ ಧಾರಾವಾಹಿಗೆ ‘ಆಸೆ’ (Aase) ಎಂದು ಹೆಸರಿಡಲಾಗಿದೆ. ಕಿರುತೆರೆ ವೀಕ್ಷಕರಿಗೆ ಸ್ಟಾರ್ ಸುವರ್ಣ ವಾಹಿನಿಯು ನೂತನವಾದ ಮನಮುಟ್ಟುವ ಮನರಂಜನೆಯ ಧಾರಾವಾಹಿಗಳನ್ನು ನೀಡುತ್ತಲೇ ಆ ಸಾಲಿಗೆ ಆಸೆ ಸೇರ್ಪಡೆ ಆಗಲಿದೆ.

    ಸಾಮಾನ್ಯ ಜನರ ಅಸಾಮಾನ್ಯ ಕಥೆಯಿದು. ಚಿಕ್ಕವನಿದ್ದಾಗ ಗೊತ್ತಿಲ್ಲದೇ ನಡೆದ ಘಟನೆಯಿಂದಾಗಿ ತಾಯಿಯಿಂದ ಪ್ರತಿದಿನ, ಪ್ರತಿಕ್ಷಣ ದೂಷಿಸಲ್ಪಡುತ್ತಿರುವ ಕಥಾನಾಯಕ ಸೂರ್ಯ, ಈತನ ಮಾತು ಸ್ವಲ್ಪ ಒರಟು ಆದರೆ ಮೃದುವಾದ ಮನಸು. ಜೀವನದಲ್ಲಿ ನೊಂದು-ಬೆಂದು ಆಕಾಂಕ್ಷೆಯನ್ನೇ ಕಳೆದುಕೊಂಡಿರುವ ಸೂರ್ಯ ತಂದೆಯ ಮುದ್ದಿನ ಮಗ. ಮತ್ತೊಂದು ಕಡೆ ಬಡತನದ ಬೇಗೆಯಲ್ಲಿ ಬೇಯುತ್ತಿದ್ದರು ಮುಖದಲ್ಲಿ ಸದಾ ಮಂದಹಾಸವನ್ನು ಹೊಂದಿರೋ ಮೀನಾ ಈ ಕತೆಯ ನಾಯಕಿ. ಮನೆಯ ಕಷ್ಟಕ್ಕಾಗಿ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ, ಹೆತ್ತವರಿಗೆ ಸಹಕರಿಸುತ್ತಿರೋ ಮುಗ್ದ ಮನಸಿನ ಕಣ್ಮಣಿ. ತಮ್ಮ-ತಂಗಿಯರ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುತ್ತಿರುವ ತಾಯಿಯ ಎರಡನೇ ರೂಪ ಈ ಮೀನಾ .

    ಒಂದ್ಕಡೆ ಜೀವನದಲ್ಲಿ ಗುರಿ, ಆಸೆಯೇ ಇಲ್ಲದಿರೋ ಹುಡುಗ ಸೂರ್ಯ, ಇನ್ನೊಂದ್ಕಡೆ ಮನೆಯವರ ಖುಷಿಗಾಗಿ ತುಂಬಾ ಆಸೆಯನ್ನು ಇಟ್ಟುಕೊಂಡಿರೋ ಮೀನಾ. ತದ್ವಿರುದ್ದವಾಗಿರುವ ಮೀನಾ ಹಾಗು ಸೂರ್ಯನ ಬದುಕು ಎದುರು ಬದುರಾದ್ರೆ ಮುಂದೇನಾಗುತ್ತೆ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

    ಈ ಧಾರಾವಾಹಿಯಲ್ಲಿ ನಟ, ರಂಗಭೂಮಿ ಕಲಾವಿದರಾದ ಮಂಡ್ಯ ರಮೇಶ್ (Mandya Ramesh) ಅವರು ಮುಖ್ಯ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಜೊತೆಗೆ ನಿನಾದ್, ಪ್ರಿಯಾಂಕಾ, ಸ್ನೇಹಾ, ನಾಗೇಂದ್ರ ಶಾ, ಪ್ರಗತಿ, ನಂದೀಶ್, ಲಕ್ಷ್ಮಿ ಚಂದ್ರಶೇಖರ್ ಸೇರಿದಂತೆ ಇನ್ನು ಅನೇಕ ಪ್ರತಿಭಾನ್ವಿತ ಕಲಾವಿದರು ಈ  ಅಭಿನಯಿಸುತ್ತಿದ್ದಾರೆ. ಈಗಾಗಲೇ ಧಾರಾವಾಹಿಯ ಶೀರ್ಷಿಕೆ ಗೀತೆಯಂತೂ ನೋಡುಗರ ಮನಗೆದ್ದು ಪ್ರಶಂಸೆಗೆ ಪಾತ್ರವಾಗಿದೆ. ಇದೇ ಸೋಮವಾರದಿಂದ ರಾತ್ರಿ 7.30 ಕ್ಕೆ ಧಾರಾವಾಹಿಯ ಪ್ರಸಾರವಾಗಲಿದೆ.

  • ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ಮಂಡ್ಯ ರಮೇಶ್

    ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ಮಂಡ್ಯ ರಮೇಶ್

    ಧಾರಾವಾಹಿ ಶೂಟಿಂಗ್ ವೇಳೆ ಭಾರೀ ಅನಾಹುತ (Accident) ಸಂಭವಿಸಿ, ಪೆಟ್ಟು ಮಾಡಿಕೊಂಡಿದ್ದ ನಟ ಮಂಡ್ಯ ರಮೇಶ್ (Mandya Ramesh) ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದುಕೊಂಡು ಇದೀಗ ಮನೆಗೆ ವಾಪಸ್ಸಾಗಿದ್ದಾರೆ. ಸೋಮವಾರ ಈ ಘಟನೆ ನಡೆದಿದ್ದು ಕೈಗೆ, ಹೊಟ್ಟೆಗೆ, ಕಾಲಿಗೆ, ತಲೆಗೆ ಏಟು ಬಿದ್ದಿದೆ. ಕೂಡಲೇ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು.

    ಆಸೆ ಧಾರಾವಾಹಿ ಶೂಟಿಂಗ್ ವೇಳೆ ಅವಘಡ ನಡೆದಿದ್ದು, ಅವರಿಗೆ ತೀವ್ರ ಗಾಯವಾಗಿತ್ತು. ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಲ್ಲು ಕ್ವಾರಿಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ರಮೇಶ್ ಕಾಲು ಜಾರಿ ಬಿದ್ದಿದ್ದರು. ಬಿದ್ದ ರಭಸಕ್ಕೆ ಅವರ ದೇಹದ ನಾನಾ ಭಾಗಗಳಿಗೆ ತೀವ್ರ ತೆರನಾದ ಪೆಟ್ಟಾಗಿತ್ತು.

    ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಆಸೆ ಸೀರಿಯಲ್ ನಲ್ಲಿ ಮಂಡ್ಯ ರಮೇಶ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಧಾರಾವಾಹಿಯ ದೃಶ್ಯದ ಚಿತ್ರೀಕರಣದಲ್ಲಿ ಇಂಥದ್ದೊಂದು ಅವಘಡ ಸಂಭವಿಸಿದೆ. ನಾಲ್ಕೈದು ಅಡಿಯಿಂದ ಜಲ್ಲಿಕಲ್ಲ ಮೇಲೆ ರಮೇಶ್ ಬಿದ್ದಿದ್ದರು ಎಂದು ಹೇಳಲಾಗುತ್ತಿದೆ.

     

    ರಮೇಶ್ ಅರವಿಂದ್ ನಿರ್ಮಾಣದಲ್ಲಿ ಈ ಧಾರಾವಾಹಿ ಮೂಡಿ ಬರುತ್ತಿದ್ದು, ಭಾರೀ ನಿರೀಕ್ಷೆ ಮೂಡಿಸಿದ ಧಾರಾವಾಹಿ ಇದಾಗಿದೆ. ಸದ್ಯ ಚಿಕಿತ್ಸೆ ಪಡೆದಿರುವ ಮಂಡ್ಯ ರಮೇಶ್ ಅವರಿಗೆ ಒಂದು ತಿಂಗಳ ಕಾಲ ರೆಸ್ಟ್ ತಗೆದುಕೊಳ್ಳುವಂತೆ ವೈದ್ಯರು ತಿಳಿಸಿದ್ದಾರೆ. ಕಿರುತೆರೆ, ರಂಗಭೂಮಿ ಮತ್ತು ಸಿನಿಮಾದಲ್ಲಿ ಸಕ್ರೀಯರಾಗಿರುವ ಮಂಡ್ಯ ರಮೇಶ್ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

  • ಶೂಟಿಂಗ್ ವೇಳೆ ಅವಘಡ: ಮಂಡ್ಯ ರಮೇಶ್ ಗೆ ತೀವ್ರ ಗಾಯ

    ಶೂಟಿಂಗ್ ವೇಳೆ ಅವಘಡ: ಮಂಡ್ಯ ರಮೇಶ್ ಗೆ ತೀವ್ರ ಗಾಯ

    ಸಿನಿಮಾ ಹಾಗೂ ರಂಗಭೂಮಿ ನಟ ಮಂಡ್ಯ ರಮೇಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸೆ ಧಾರಾವಾಹಿ ಶೂಟಿಂಗ್ ವೇಳೆ ಅವಘಡ ನಡೆದಿದ್ದು, ಅವರಿಗೆ ತೀವ್ರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಲ್ಲು ಕ್ವಾರಿಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ರಮೇಶ್ ಕಾಲು ಜಾರಿ ಬಿದ್ದಿದ್ದಾರಂತೆ.

    ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಎರಡು ಆಪರೇಷನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಆಸೆ ಸೀರಿಯಲ್ ನಲ್ಲಿ ಮಂಡ್ಯ ರಮೇಶ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಧಾರಾವಾಹಿಯ ದೃಶ್ಯದ ಚಿತ್ರೀಕರಣದಲ್ಲಿ ಇಂಥದ್ದೊಂದು ಅವಘಡ ಸಂಭವಿಸಿದೆ.

    ರಮೇಶ್ ಅರವಿಂದ್ ನಿರ್ಮಾಣದಲ್ಲಿ ಈ ಧಾರಾವಾಹಿ ಮೂಡಿ ಬರುತ್ತಿದ್ದು, ಭಾರೀ ನಿರೀಕ್ಷೆ ಮೂಡಿಸಿದ ಧಾರಾವಾಹಿ ಇದಾಗಿದೆ. ಸದ್ಯ ಚಿಕಿತ್ಸೆ ಪಡೆದಿರುವ ಮಂಡ್ಯ ರಮೇಶ್ ಅವರಿಗೆ ಒಂದು ತಿಂಗಳ ಕಾಲ ರೆಸ್ಟ್ ತಗೆದುಕೊಳ್ಳುವಂತೆ ವೈದ್ಯರು ತಿಳಿಸಿದ್ದಾರೆ. ಕಿರುತೆರೆ, ರಂಗಭೂಮಿ ಮತ್ತು ಸಿನಿಮಾದಲ್ಲಿ ಸಕ್ರೀಯರಾಗಿರುವ ಮಂಡ್ಯ ರಮೇಶ್ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

  • Weekend With Ramesh ಶೋನಲ್ಲಿ ಪ್ರೇಮ ಪ್ರಸಂಗ ಬಿಚ್ಚಿಟ್ಟ ಮಂಡ್ಯ ರಮೇಶ್

    Weekend With Ramesh ಶೋನಲ್ಲಿ ಪ್ರೇಮ ಪ್ರಸಂಗ ಬಿಚ್ಚಿಟ್ಟ ಮಂಡ್ಯ ರಮೇಶ್

    ಕಿರುತೆರೆಯ ಜನಪ್ರಿಯ ಶೋ Weekend With Ramesh-5 ಕಾರ್ಯಕ್ರಮದಲ್ಲಿ ಖ್ಯಾತ ನಟ ಅವಿನಾಶ್ ನಂತರ ಮಂಡ್ಯ ರಮೇಶ್ (Mandya Ramesh) ಅವರು ಸಾಧಕರ ಸೀಟ್ ಅನ್ನ ಅಲಂಕರಿಸಿದ್ದಾರೆ. ನಟ ರಮೇಶ್ ಅರವಿಂದ್ (Ramesh Aravind) ಜೊತೆ ತಮ್ಮ ಲವ್ ಸ್ಟೋರಿ (Love Story), ಮದುವೆ (Wedding), ಜರ್ಮನಿಯ ನಡೆದ ಘಟನೆ ಬಗ್ಗೆ ಮಂಡ್ಯ ರಮೇಶ್ ಹಂಚಿಕೊಂಡಿದ್ದಾರೆ.

    ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಈಗಾಗಲೇ ರಮ್ಯಾ, ಪ್ರಭುದೇವ, ಡಾಲಿ, ದತ್ತಣ್ಣ ಹೀಗೆ ಹಲವರು ಭಾಗವಹಿಸಿ ತಮ್ಮ ಬದುಕಿನ ಸ್ಪೂರ್ತಿದಾಯಕ ಕಥೆಗಳನ್ನ ಹಂಚಿಕೊಂಡಿದ್ದಾರೆ. ಇದೀಗ ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರ ಸರದಿ. ಪತ್ನಿ ಸರೋಜಾ (Saroja) ಅವರನ್ನ ಮೊದಲು ಭೇಟಿಯಾಗಿದ್ದು ಎಲ್ಲಿ? ಲವ್ ಕಹಾನಿ ಶುರುವಾಗಿದ್ದು ಹೇಗೆ? ಮಗಳು ದಿಶಾ ಬಂದ ಮೇಲೆ ಬದುಕಿನಲ್ಲಿ ಎದುರಿಸಿದ ಸವಾಲಿನ ಬಗ್ಗೆ ಮಂಡ್ಯ ರಮೇಶ್ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ಐರೆನ್ ಲೆಗ್ ಎಂದು ಟೀಕಿಸಿದವರಿಗೆ ಉತ್ತರ ಕೊಟ್ಟ ಶ್ರುತಿ ಹಾಸನ್

    ಮಂಡ್ಯ ರಮೇಶ್- ಸರೋಜಾ ಅವರು ಮೊದಲು ನೀನಾಸಂನಲ್ಲಿ ಭೇಟಿ ಮಾಡಿದ್ದರು. ಸರೋಜ ಅವರು ಬಿಂದಾಸ್ ಆಗಿ ಅವರ ಪಾಡಿಗೆ ಅವರು ಇರುತ್ತಿದ್ದರು. ಒಮ್ಮೆ ಸರೋಜ ಅವರು ಏನೋ ಒಂದು ಸಣ್ಣ ತಪ್ಪನ್ನು ಮಾಡಿದ್ದರು. ಇದು ಡಿಸಿಪ್ಲಿನ್ ಕಮಿಟಿ ಲೀಡರ್ ಆಗಿದ್ದ ಮಂಡ್ಯ ರಮೇಶ್ ಗಮನಕ್ಕೆ ಬಂತು. ನೀನಾಸಂನಲ್ಲಿ ಸರೋಜ ಅವರಿಗೆ ಶಿಸ್ತಿನ ಪಾಠ ಮಾಡಿದ್ದರು. ಕೆಲದಿನಗಳ ಬಳಿಕ ಮಂಡ್ಯ ರಮೇಶ್ ಅವರಿಗೆ ಅಪಘಾತವಾಗಿತ್ತು. ಆಸ್ಪತ್ರೆಯಲ್ಲಿ ರಮೇಶ್ ಅವರಿಗೆ ಒಂದು ವಾರಗಳ ಕಾಲ ಮೂರ್ಛೆ ತಪ್ಪೋದು, ಎಚ್ಚರ ಆಗೋದು ಆಗುತ್ತಿತ್ತಂತೆ. ಅಷ್ಟೂ ದಿನ ರಮೇಶ್ ಅವರನ್ನು ಸರೋಜಾ ನೋಡಿಕೊಳ್ಳುತ್ತಿದ್ದರು. ಅದನ್ನು ನೋಡಿ ರಮೇಶ್ ಅವರ ಅಕ್ಕ ನಾವಿದ್ದಾಗ ಇವಳ್ಯಾಕೆ ನಿನ್ನ ಟ್ರೀಟ್‌ಮೆಂಟ್ ಮಾಡ್ತಿದ್ದಾಳೆ, ಏನು ವಿಶೇಷ ಅಂತಾ ರಮೇಶ್‌ಗೆ ಪ್ರಶ್ನೆ ಕೇಳಲು ಆರಂಭಿಸಿದರು. ಮನಸ್ಸಿನಲ್ಲಿ ಏನೂ ಇಲ್ಲದಿದ್ದರೂ ಕೂಡ ಎಷ್ಟೋ ಪ್ರೇಮ ಪ್ರಸಂಗಗಳು ಬೇರೆಯವರು ಹೇಳಿ ಹೇಳಿ ಹುಟ್ಟತ್ತಂತೆ ಎಂದು ಮಂಡ್ಯ ರಮೇಶ್ ಹೇಳಿದ್ದಾರೆ.

    ಅಪಘಾತ ಆದ ಬಳಿಕ ಪ್ರೇಮದ ಗಳಿಗೆಗಳು ಹುಟ್ಟಲು ಆರಂಭಿಸಿದವಂತೆ. ಕೊನೆಗೂ ಇವರಿಬ್ಬರು ಮದುವೆಯಾದರು. ಮಗು ಹುಟ್ಟಿತು. ಇಬ್ಬರು ಕಲಾವಿದರು ಜರ್ಮನಿಯಲ್ಲಿ ನಾಟಕವೊಂದರಲ್ಲಿ ನಟಿಸಬೇಕಿತ್ತು. ಆ ವೇಳೆ ಮಗಳು ದಿಶಾ (Disha) ಚಿಕ್ಕವಳು. ಮಗಳನ್ನು ಎತ್ತಿಕೊಂಡು ಗಲೀಜು ಮಾಡಿಕೊಂಡರೆ ಕಾಸ್ಟ್ಯೂಮ್ ಹಾಳಾಗುತ್ತದೆ ಅಂತ ಮುಟ್ಟದೆ ಮಗಳನ್ನು ಸಂತೈಸುತ್ತಿದ್ದರಂತೆ. ಜರ್ಮನಿಯಲ್ಲಿ ನಾಟಕದ ಸಮಯದಲ್ಲಿ ಮಗು ತುಂಬ ಅತ್ತಾಗ ಸರೋಜ ಅವರು ಎದೆಹಾಲು ಕುಡಿಸುತ್ತಿದ್ದರು. ಆಮೇಲೆ ನಾಟಕ ಶುರು ಆಯ್ತು ಅಂತ ಅವರು ಎದೆಯಿಂದ ಮಗುವನ್ನು ಕಿತ್ತಿಟ್ಟು ನಾಟಕ ಮಾಡಲು ಆರಂಭಿಸಿದರು. ಎಲ್ಲರೂ ಯಾಕೆ ಸರೋಜ ಅವರು ಇಷ್ಟು ಬೆವತರು ಅಂತ ಅಂದುಕೊಂಡರು. ಆದರೆ ಎದೆಯಿಂದ ಮಗುವನ್ನು ಕಿತ್ತಿಟ್ಟು ಬಂದಿದ್ದರಿಂದ ಇಡೀ ಮೈ ಹಾಲಾಗಿ ಹೋಗಿತ್ತು ಎಂದು ಮಂಡ್ಯ ರಮೇಶ್ ಅವರು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.

  • Weekend With Ramesh ಕಾರ್ಯಕ್ರಮದಲ್ಲಿ ಈ ವಾರದ ಗೆಸ್ಟ್ ಯಾರು?

    Weekend With Ramesh ಕಾರ್ಯಕ್ರಮದಲ್ಲಿ ಈ ವಾರದ ಗೆಸ್ಟ್ ಯಾರು?

    ಕಿರುತೆರೆಯ ಜನಪ್ರಿಯ ಶೋ ‘ವೀಕೆಂಡ್ ವಿತ್ ರಮೇಶ್’ (Weekend With Ramesh) ಕಾರ್ಯಕ್ರಮದಲ್ಲಿ ಈಗಾಗಲೇ ರಮ್ಯಾ(Ramya), ಪ್ರಭುದೇವ, ದತ್ತಣ್ಣ, ಡಾ.ಮಂಜುನಾಥ್, ಡಾಲಿ (Daali) ಸಾಧಕರ ಸೀಟ್ ಅಲಂಕರಿಸಿ ತಮ್ಮ ಜೀವನದ ಕಥೆಯನ್ನ ಹಂಚಿಕೊಂಡಿದ್ದಾರೆ. ಈ ವಾರ ವೀಕೆಂಡ್ ಟೆಂಟ್‌ನಲ್ಲಿ ಯಾರು ಅತಿಥಿಯಾಗಿ ಬರುತ್ತಾರೆ ಎಂಬ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ.

    ರಮೇಶ್ ಅರವಿಂದ್ (Ramesh Aravind) ಅವರ ನಿರೂಪಣೆಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ. ಕಳೆದ 4 ಸೀಸನ್‌ಗಳಿಂದ ಹಲವು ಸಾಧಕರ ಕಥೆಯನ್ನ ಟಿವಿ ಪರದೆಯಲ್ಲಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಹೊಸ ಸೀಸನ್ ಕೂಡ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

    ‘ವೀಕೆಂಡ್ ವಿತ್ ರಮೇಶ್’ (Weekend With Ramesh 5) ಕಾರ್ಯಕ್ರಮ 5ನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಅತಿಥಿಯಾಗಿ ಮಂಡ್ಯ ರಮೇಶ್- ಹಿರಿಯ ನಟ ಅವಿನಾಶ್ ಭಾಗಿಯಾಗಿದ್ದಾರೆ. ತಮ್ಮ ಜೀವನದ ಸವಾಲುಗಳು, ಏಳು-ಬೀಳಿನ ಕಥೆಯನ್ನ ಈ ನಟರು ಕಾರ್ಯಕ್ರಮದಲ್ಲಿ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ರಾಕಿ ಭಾಯ್ ಲೆಜೆಂಡ್ ಎಂದು ಹಾಡಿ ಹೊಗಳಿದ ಪೂಜಾ ಹೆಗ್ಡೆ

    ನಟ ಮಂಡ್ಯ ರಮೇಶ್ (Mandya Ramesh) ಅವರು ಸಾಕಷ್ಟು ಸಿನಿಮಾ, ಸೀರಿಯಲ್ ಮತ್ತು ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಯುವ ನಟ-ನಟಿಯರಿಗೆ ನಟನೆ ಕಲಿಸಿ, ಚಿತ್ರರಂಗದಲ್ಲಿ ನೆಲೆ ನಿಲ್ಲಲು ದಾರಿ ಮಾಡಿ ಕೊಟ್ಟಿದ್ದಾರೆ.

    ಹಿರಿಯ ನಟ ಅವಿನಾಶ್ (Avinash) ಅವರು ನಟ, ಪೋಷಕ ನಟನಾಗಿ ಬಹುಭಾಷೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಪಾತ್ರ ಯಾವುದೇ ಇರಲಿ, ಆ ಪಾತ್ರವೇ ತಾವಾಗಿ ನಟಿಸಿದ್ದಾರೆ. ಪೋಷಕ ಕಲಾವಿದನಾಗಿ ಗುರುತಿಸಿಕೊಂಡಿರುವ ಅವಿನಾಶ್ ಅವರು ವೀಕೆಂಡ್ ಟೆಂಟ್‌ನಲ್ಲಿ ಭಾಗಿಯಾಗಿದ್ದಾರೆ.

  • ರಂಗಭೂಮಿ ಕಲಾವಿದರಿಗೆ ಸರ್ಕಾರದಿಂದ ಯಾವುದೇ ಅನುದಾನ ಇಲ್ಲ: ಮಂಡ್ಯ ರಮೇಶ್

    ರಂಗಭೂಮಿ ಕಲಾವಿದರಿಗೆ ಸರ್ಕಾರದಿಂದ ಯಾವುದೇ ಅನುದಾನ ಇಲ್ಲ: ಮಂಡ್ಯ ರಮೇಶ್

    ಯಾದಗಿರಿ: ಸರ್ಕಾರ ರಂಗಭೂಮಿ ಕಲಾವಿದರಿಗೆ ಯಾವುದೇ ಅನುದಾನ ನೀಡಿಲ್ಲ ಎಂದು ನಟ ಮಂಡ್ಯ ರಮೇಶ್ ಹೇಳಿದ್ದಾರೆ.

    ಯಾದಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ವೋಟ್ ಬ್ಯಾಂಕಿಂಗ್ ಅಲ್ಲ. ಹಾಗಾಗಿ ಸರ್ಕಾರದಿಂದ ನಮಗೆ ಯಾವುದೇ ಸಹಾಯ ಇಲ್ಲ. ರಂಗಭೂಮಿ ಕಲಾವಿದರಿಗೆ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 5.21 ಲಕ್ಷ ಮನೆ ಉದ್ಘಾಟನೆ, ಬಡವರ ಸಬಲೀಕರಣಕ್ಕಾಗಿ ಬಿಜೆಪಿ ಕೆಲಸ: ಮೋದಿ

     

    ಕೊರೊನಾ ಲಾಕ್‍ಡೌನ್ ವೇಳೆ ಸಾಕಷ್ಟು ಸಂಕಷ್ಟ ಅನುಭವಿಸಿದ್ದೇವೆ. ರಂಗಭೂಮಿಯಲ್ಲಿ ಎಲ್ಲ ಜನಾಂಗದವರು ಇದ್ದೇವೆ. ಎಲ್ಲಾ ಧರ್ಮದವರು ಇದ್ದೇವೆ, ಎಲ್ಲಾ ಲಿಂಗದವರು ಇದ್ದೇವೆ. ಆದರೂ ಸರ್ಕಾರ ಕಲಾವಿದರ ಕಷ್ಟ ಅರ್ಥ ಮಾಡಿಕೊಳ್ಳುತ್ತಿಲ್ಲ. ಒಂದು ವೇಳೆ ನಾವು ವೋಟ್ ಬ್ಯಾಂಕಿಂಗ್ ಆಗಿದ್ದರೆ, ನಮಗೂ ಸರ್ಕಾರ ಅನುದಾನ ಕೊಡುತ್ತಿತ್ತು ಅನಿಸುತ್ತದೆ. ಸರ್ಕಾರ ಹೆಚ್ಚು, ಹೆಚ್ಚು ಅನುದಾನವನ್ನು ನಾಟಕ ಅಕಾಡೆಮಿ, ಕನ್ನಡ ಸಂಸ್ಕೃತಿ ಇಲಾಖೆಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪರವಾನಿಗೆ ಇಲ್ಲದೆ ಬಂದೂಕುಗಳನ್ನು ಹೊಂದಲು ಕೊಡವರಿಗೆ ಅವಕಾಶ- ರಾಜ್ಯಕ್ಕೆ ಸುಪ್ರೀಂ ನೋಟಿಸ್‌

  • ಸ್ನೇಹಿತರೊಂದಿಗೆ ಶ್ವೇತಾ ಚೆಂಗಪ್ಪ ಮೋಜು, ಮಸ್ತಿ – ಫೋಟೋ ವೈರಲ್

    ಸ್ನೇಹಿತರೊಂದಿಗೆ ಶ್ವೇತಾ ಚೆಂಗಪ್ಪ ಮೋಜು, ಮಸ್ತಿ – ಫೋಟೋ ವೈರಲ್

    ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಟಿ ಶ್ವೇತಾ ಚೆಂಗಪ್ಪ ಸ್ನೇಹಿತರನ್ನು ಭೇಟಿಯಾಗಿ ಸಖತ್ ಎಂಜಾಯ್ ಮಾಡಿದ್ದಾರೆ.

    Swetha Changappa

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ತಂಡದ ಸದಸ್ಯರೊಂದಿಗೆ ಶ್ವೇತಾ ಚೆಂಗಪ್ಪ ಮೈಸೂರಿನ ಚಾಂಮುಡಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಬಳಿಕ ನಟ ಮಂಡ್ಯ ರಮೇಶ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಸೆಲ್ಫಿಕ್ಲಿಕ್ಕಿಸಿಕೊಂಡಿದ್ದಾರೆ. ಕೊನೆಯದಾಗಿ ಹಲವು ದಿನಗಳ ಬಳಿಕ ಒಟ್ಟಿಗೆ ಸ್ನೇಹಿತೊಂದಿಗೆ ಕುಳಿತು ಊಟ ಮಾಡಿದ್ದಾರೆ.

    Swetha Changappa

    ಸದ್ಯ ಈ ಫೋಟೋಗಳನ್ನು ಶ್ವೇತಾ ಚೆಂಗಪ್ಪ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ಶ್ವೇತಾ ಜೊತೆಗೆ ಅಪರ್ಣ ವಸ್ತಾರೆ, ಕುರಿ ಪ್ರತಾಪ್, ರೆಮೋ, ಮಾಲಿನಿ ಜಯಪ್ರಕಾಶ್, ಶಾಲಿನಿ ಜಯಪ್ರಕಾಶ್ ಇರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಮೈಸೂರಿನ ಚಿತ್ರನಗರಿಗೆ ಪುನೀತ್ ರಾಜ್‍ಕುಮಾರ್ ಹೆಸರಿಡಲು ಚಿಂತನೆ: ಎಸ್‍ಟಿಎಸ್

     

    View this post on Instagram

     

    A post shared by Swetha Changappa (@swethachangappa)

    ಫೋಟೋ ಜೊತೆಗೆ ನಾನು ನಗಲು ಬಯಸದಿದ್ದರೂ ಸಹ ನನ್ನನ್ನು ನಗಿಸುವವರನ್ನು ನಾನು ಪ್ರೀತಿಸುತ್ತೇನೆ ಮತ್ತು ಯಾವಾಗಲೂ ನಂಬುತ್ತೇನೆ. ಜಗತ್ತನ್ನು ವಿಭಿನ್ನವಾಗಿ ಕಾಣುವಂತೆ ಮಾಡುವ ಜನರೊಂದಿಗೆ ನಿಮ್ಮ ಸಮಯವನ್ನು ಕಳೆಯಿರಿ. ನಿಮ್ಮೆಲ್ಲರನ್ನು ಭೇಟಿಯಾಗಿದ್ದು ಮತ್ತು ನಿಮ್ಮೆಲ್ಲರ ಜೊತೆ ಸಮಯ ಕಳೆದಿದ್ದು, ಬಹಳ ಸಂತಸ ತಂದಿದೆ. ಲವ್ ಯು ಆಲ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳ ಪ್ರಶ್ನೆಗೆ ಖಡಕ್ ಉತ್ತರ ನೀಡಿದ ರಾಧಿಕಾ ಪಂಡಿತ್

  • ಲಯನ್ಸ್ ಸಂಸ್ಥೆಯಿಂದ ಸೇವೆ ಮಾಡುವುದನ್ನು ಬಾಲ್ಯದಲ್ಲೇ ಕಲಿಸುವ ಕೆಲಸವಾಗಲಿ: ಮಂಡ್ಯ ರಮೇಶ್

    ಲಯನ್ಸ್ ಸಂಸ್ಥೆಯಿಂದ ಸೇವೆ ಮಾಡುವುದನ್ನು ಬಾಲ್ಯದಲ್ಲೇ ಕಲಿಸುವ ಕೆಲಸವಾಗಲಿ: ಮಂಡ್ಯ ರಮೇಶ್

    ಮಂಗಳೂರು: ಸಮಾಜಕ್ಕೆ ಏನನ್ನಾದರೂ ಕೊಡಬೇಕು ಎಂದು ಯೋಚಿಸಿದಾಗ ಮಾತ್ರ ಸೇವೆ ಮಾಡಲು ಸಾಧ್ಯ. ಅಂತಹ ಸೇವಾಕಾರ್ಯವನ್ನು ಲಯನ್ಸ್ ಸಂಸ್ಥೆ ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ಖ್ಯಾತ ಚಿತ್ರನಟ, ರಂಗಕರ್ಮಿ ಮಂಡ್ಯ ರಮೇಶ್ ಹೇಳಿದರು.

    ನಗರದ ಲೇಡಿಹಿಲ್ ಸಮೀಪದ ಕೃಷ್ಣ ಹೆರಿಟೇಜ್ ನಲ್ಲಿ ಪ್ರಾಂತ್ಯಾಧ್ಯಕ್ಷ ಉಮೇಶ್ ಪ್ರಭು ಇವರ ನೇತೃತ್ವದಲ್ಲಿ ನಡೆದ ಲಯನ್ಸ್ ಜಿಲ್ಲೆ 317ಆ, ಇದರ ರೀಜನ್ 5ರ “ಪ್ರಾಂತೀಯ ಸಮ್ಮೇಳನ” “ನಕ್ಷತ್ರ”ದಲ್ಲಿ ಅವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದರು. ಆರಂಭದಲ್ಲಿ ತುಳುವಿನಲ್ಲಿ ಕುಡ್ಲದ ಜನಕ್ಲೆಗೆ ಎನ್ನ ನಮಸ್ಕಾರ. ಎಂಚ ಉಲ್ಲರ್ (ಮಂಗಳೂರಿನ ಜನತೆಗೆ ನನ್ನ ನಮಸ್ಕಾರ, ಹೇಗಿದ್ದಿರಿ..?) ಎಂದು ಮಾತು ಆರಂಭಿಸಿದ ಅವರು ಬಳಿಕ ಕನ್ನಡದಲ್ಲಿ ಮಾತನಾಡಿದರು.

    ದೇವರು ಸೇವೆ ಮಾಡಲು ಬೇರೆ ಬೇರೆ ರೂಪದಲ್ಲಿ ಅವಕಾಶ ನೀಡುತ್ತಾನೆ. ಸಿಕ್ಕಿದ ಅವಕಾಶವನ್ನು ಸದಪಯೋಗಪಡಿಸಿಕೊಂಡು ಸೇವೆ ಮಾಡಿದಾಗ ಆತ್ಮಕ್ಕೆ ತೃಪ್ತಿ ಸಿಗುತ್ತದೆ ಎಂದರು. ಸೇವೆಯಲ್ಲಿ ಮುಂಚೂಣಿಯಲ್ಲಿರುವ ಲಯನ್ಸ್ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ಸೇವೆ ಮಾಡುವುದನ್ನು ಬಾಲ್ಯದಲ್ಲೇ ಕಲಿಸುವ ಕೆಲಸವಾಗಲಿ ಎಂದು ಅಭಿಪ್ರಾಯಪಟ್ಟರು.

    ಕಲೆ, ಸಾಹಿತ್ಯ, ಶಿಕ್ಷಣ, ಉದ್ಯಮ, ದೈವರಾಧನೆ ಮುಂತಾದ ಅನೇಕ ಚಟುವಟಿಕೆಗಳಿಗೆ ಹೆಸರು ಪಡೆದ ಜಿಲ್ಲೆಯೆಂದರೆ ಅದು ದ.ಕ.ಜಿಲ್ಲೆ. ಇಲ್ಲಿ ಎಲ್ಲವೂ ಇದೆ. ಇಲ್ಲಿನ ಜನರು ಪ್ರತಿಭಾನ್ವಿತರು, ಬುದ್ಧಿವಂತರು, ಕನ್ನಡ, ತುಳು, ಕೊಂಕಣಿ, ಬ್ಯಾರಿ, ಹಿಂದಿ, ಇಂಗ್ಲೀಷ್ ಈ ರೀತಿ ಅತೀ ಹೆಚ್ಚು ಭಾಷೆ ಮಾತಾನಾಡುವ ಕರ್ನಾಟಕದ ಏಕೈಕ ಜಿಲ್ಲೆ ಇದ್ದರೆ ಅದು ದ.ಕ.ಜಿಲ್ಲೆ.

    ಇಲ್ಲಿ ಕಲೆಯಿದೆ, ಉದ್ಯಮವಿದೆ, ವಿಧ್ವತ್ವ ಇದೆ. ದೈವತ್ವ ಇದೆ, ಆಧ್ಯಾತ್ಮತೆ ಇದೆ, ಪಾಶ್ಚತ್ಯ, ಪೌರತ್ವ ಎಲ್ಲವನ್ನು ಇಲ್ಲಿ ಕಾಣಬಹುದು. ಇದು ಪ್ರೀತಿ ಬಾವದ ಜಾಗ, ಎಲ್ಲದಕ್ಕೂ ಖ್ಯಾತಿ ಪಡೆದಿರುವ ಈ ಮಂಗಳೂರಿನ ಮಣ್ಣಿಗೆ ಕಾಲಿಟ್ಟಗ ಮೈ ರೋಮಾಂಚನೆಗೊಳ್ಳುತ್ತದೆ. ಹಲವಾರು ಕ್ಷೇತ್ರಗಳಲ್ಲಿ ಹತ್ತು ಹಲವು ರೀತಿಯ ಕೊಡುಗೆಗಳನ್ನು ನೀಡಿದ ದ.ಕ.ಜಿಲ್ಲೆಗೆ ಬರುವುದೆಂದರೆ ನನಗೆ ಅದೊಂದು ರೀತಿಯ ಖುಷಿ, ಸಂಭ್ರಮ ಎಂದು ಮಂಡ್ಯ ರಮೇಶ್ ಜಿಲ್ಲೆಯ ಸಮಗ್ರ ವಿಷಯ, ವಿಚಾರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಪ್ರಾಂತ್ಯಧ್ಯಕ್ಷ ಉಮೇಶ್ ಪ್ರಭು ಅವರು ಮಾತನಾಡಿ, ಒಬ್ಬ ಲಯನ್ ಆಗಿ ಸಮಾಜದ ಬಗ್ಗೆ ಚಿಂತನೆ, ಕಳಕಳಿ ಇರಬೇಕು. ಹಾಗಾದಾಗ ಮಾತ್ರ ಸೇವೆ ಮಾಡಬೇಕು ಎಂಬ ಮನೋಭಾವನೆ ಬೆಳೆಯುತ್ತದೆ. ನಮ್ಮ ತಂಡ ಉತ್ತಮವಾಗಿ ಸೇವಾಕಾರ್ಯವನ್ನು ನಿರ್ವಹಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತದೆ. ನಮ್ಮ ಲಯನ್ಸ್ ತಂಡದ ಮೂಲಕ ನಿರಂತರವಾಗಿ ನಡೆಯುತ್ತಿರುವ ಸೇವಾಕಾರ್ಯದಲ್ಲಿ ಪ್ರತಿಯೊಬ್ಬರ ಪಾತ್ರವು ಪ್ರಾಮುಖ್ಯತೆಯನ್ನು ಪಡೆದಿದೆ. ಸೇವಾ ಕಾರ್ಯದಲ್ಲಿ ತೊಡಗಿರುವ ತಂಡದ ಪ್ರತಿಯೊಬ್ಬರನ್ನು ಈ ಸಂದರ್ಭದಲ್ಲಿ ಅಭಿನಂದಿಸುವುದಾಗಿ ಅವರು ಹೇಳಿದರು.

    ಸಾಧಕರಿಗೆ ಸನ್ಮಾನ:
    ಕಾರ್ಯಕ್ರಮದಲ್ಲಿ ಸಂಗೀತಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಡಾ. ವೈಷ್ಣವಿ ಕಿಣಿ ಹಾಗು ಸಂಸ್ಕೃತ ಭಾಷೆಯಲ್ಲಿ ವಿಶೇಷ ಸಾಧನೆ ಮಾಡಿದ ಶಾಂತಲಾರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಅರ್ಥಿಕ ನೆರವು ವಿತರಣೆ:
    ಕಾರ್ಯಕ್ರಮದಲ್ಲಿ ಪ್ರಾಂತ್ಯದ ವತಿಯಿಂದ ಜಿಲ್ಲಾ ಡಯಲಿಸ್ ಸೆಂಟರ್‍ಗೆ ಅರ್ಥಿಕ ನೆರವು ನೀಡಲಾಯಿತು. ಸೆಂಟರ್‍ನ ಪ್ರಮುಖರಾದ ಪಿಡಿಜಿ ಕೆ.ಸಿ.ಪ್ರಭು ಹಾಗು ಶಾಂತೇರಿ ಪ್ರಭು ಇವರಿಗೆ ಪ್ರಾಂತ್ಯಾಧ್ಯಕ್ಷ ಉಮೇಶ್ ಪ್ರಭು ಅವರು ಚೆಕ್ ಹಸ್ತಾಂತರಿಸಿದರು. ಇದೇ ಸಂದರ್ಭ ಜಿಲ್ಲಾ ರಾಜ್ಯಪಾಲ ಡಾ. ಗೀತಾ ಪ್ರಕಾಶ್ ಇವರ ಜಿಲ್ಲಾ ಯೋಜನೆಗೆ ಅರ್ಥಿಕ ನೆರವು ನೀಡಲಾಯಿತು.

    ಪ್ರಾಂತೀಯ ಸಮ್ಮೇಳನದ ಸಮಿತಿಯ ಅಧ್ಯಕ್ಷೆ ಆಶಾ ಸಿ. ಶೆಟ್ಟಿ, ಖಜಾಂಜಿ ಜೈರಾಜ್ ಪ್ರಕಾಶ್, ವಲಯ ಅಧ್ಯಕ್ಷರಾದ ಸ್ವರೂಪ್ ಎನ್.ಶೆಟ್ಟಿ, ರವೀಂದ್ರನಾಥ್ ಶೆಟ್ಟಿ, ಪ್ರಾಂತೀಯ ಸಲಹೆಗಾರ ನಾಗೇಶ್ ಕುಮಾರ್ ಎನ್.ಜೆ, ವಲಯ ಸಲಹೆಗಾರ ಜೀವನ್ ದಾಸ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮ್ಮೇಳನದ ಸಲಹೆಗಾರರಾದ ಗೋವರ್ಧನ ಶೆಟ್ಟಿ, ಅರವಿಂದ್ ಶೆಣೈ ಹಾಗೂ ಸಾರ್ವಜನಿಕ ಸಂಪರ್ಕಧಿಕಾರಿ ವೆಂಕಟೇಶ್ ಬಾಳಿಗ ಉಪಸ್ಥಿತರಿದ್ದರು.

    ನಿನ್ನೆಟ್ ಟೆಲ್ಲಿಸ್ ಹಾಗು ವಿಲ್ಸನ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಂತೀಯ ಸಮ್ಮೇಳನದ ಸಮಿತಿಯ ಕಾರ್ಯದರ್ಶಿ ಸೈಮನ್ ಲೋಬೋ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ರಾಜೇಶ್ ಮತ್ತು ರಚನಾ ಕಾಮಾತ್ ಇವರಿಂದ ಮನೋರಂಜನಾ ಕಾರ್ಯಕ್ರಮ ನೆರವೇರಿತು.

  • ಸಾರ್ವಜನಿಕರಲ್ಲಿ ವಿನಂತಿ: ಕೊಲೆಯ ಸಿಕ್ಕು ಬಿಡಿಸುತ್ತಾ ಸಖತ್ ಥ್ರಿಲ್ ನೀಡೋ ಚಿತ್ರ!

    ಸಾರ್ವಜನಿಕರಲ್ಲಿ ವಿನಂತಿ: ಕೊಲೆಯ ಸಿಕ್ಕು ಬಿಡಿಸುತ್ತಾ ಸಖತ್ ಥ್ರಿಲ್ ನೀಡೋ ಚಿತ್ರ!

    ಬೆಂಗಳೂರು: ವಿಭಿನ್ನವಾದ ಕ್ರೈಂ ಥ್ರಿಲ್ಲರ್ ಕಥೆಯ ಸುಳಿವು ಕೊಡುತ್ತಲೇ ಪ್ರೇಕ್ಷಕರನ್ನು ಕಾಯುವಂತೆ ಮಾಡಿದ್ದ ಸಾರ್ವಜನಿಕರಲ್ಲಿ ವಿನಂತಿ ಚಿತ್ರ ತೆರೆ ಕಂಡಿದೆ. ಒಂದು ಕೊಲೆ ಮತ್ತು ಅದರ ಸುತ್ತ ಬಿಚ್ಚಿಕೊಳ್ಳೋ ರಂಗು ರಂಗಾದ ಕಥನಗಳು ಮತ್ತು ಅದೆಲ್ಲದರ ತಾರ್ಕಿಕ ಅಂತ್ಯವಾಗುವಲ್ಲಿ ಅಮೂಲ್ಯವಾದೊಂದು ಸಂದೇಶ. ಇವಿಷ್ಟು ಎಲಿಮೆಂಟುಗಳೊಂದಿಗೆ ಮಾಮೂಲಿ ಚಿತ್ರಗಳಿಗಿಂತಲೂ ಒಂಚೂರು ವಿಭಿನ್ನವಾಗಿಯೇ ಪ್ರೇಕ್ಷಕರನ್ನು ತಾಕುವಲ್ಲಿ ಸಾರ್ವಜನಿಕರಲ್ಲಿ ವಿನಂತಿ ಯಶ ಕಂಡಿದೆ.

    ಇದು ಕೃಪಾ ಸಾಗರ್ ನಿರ್ದೇಶನ ಮಾಡಿರುವ ಚೊಚ್ಚಲ ಚಿತ್ರ. ಈ ಮೊದಲ ಹೆಜ್ಜೆಯಲ್ಲಿಯೇ ಅವರು ಸಂಕೀರ್ಣವಾದ ಕಥೆಯೊಂದನ್ನು ಆರಿಸಿಕೊಂಡಿದ್ದಾರೆ. ಇಲ್ಲಿ ಹಲವಾರು ಘಟನಾವಳಿಗಳ ಗುಚ್ಛವಿದೆ. ಹಳ್ಳಿ ಘಮಲಿನ ಸನ್ನಿವೇಶಗಳಿವೆ. ಚೂರೇ ಚೂರು ಎಡವಟ್ಟಾದರೂ ಸೂತ್ರ ಸಂಬಂಧ ಕಡಿದು ಹೋಗುವಂಥಾ, ಎಚ್ಚರ ತಪ್ಪಿದರೂ ಸಿಕ್ಕಾಗಿ ಬಿಡುವಂಥಾ ಕಥೆಯನ್ನು ಕೃಪಾ ಸಾಗರ್ ಇಲ್ಲಿ ಲೀಲಾಜಾಲವಾಗಿಯೇ ನಿರೂಪಣೆ ಮಾಡಿದ್ದಾರೆ. ಈ ಕಾರಣದಿಂದಲೇ ಸಾರ್ವಜನಿಕರಲ್ಲಿ ವಿನಂತಿ ಹೊಸ ಅಲೆಯ ಚಿತ್ರವಾಗಿ ತಾನೇ ತಾನಾಗಿ ದಾಖಲಾಗುವಷ್ಟು ಪರಿಣಾಮಕಾರಿಯಾಗಿಯೂ ಮೂಡಿ ಬಂದಿದೆ.

    ಒಂದು ಹಳ್ಳಿ. ಅದರಲ್ಲಿ ಪ್ರತೀ ಹಳ್ಳಿಗಳಲ್ಲಿರುವಂಥಾದ್ದೇ ಒಂದು ಹುಡುಗರ ಗುಂಪು. ಅದರಲ್ಲಿ ಪ್ರತಿಯೊಬ್ಬರಿಗೂ ಮಾಡಲೊಂದು ಕೆಲಸವಿದೆಯೋ ಇಲ್ಲವೋ. ಆದರೆ ಅವರೆಲ್ಲರಿಗೂ ಒಂದೊಂದು ಲವ್ವಿರುತ್ತೆ. ಅಂಥಾ ಲವ್ವಿನ ಹಿನ್ನೆಲೆಯೊಂದಿಗೇ ತೆರೆದುಕೊಳ್ಳುವ ಕಥೆಯನ್ನು ನಿರ್ದೇಶಕರು ಜಾಣ್ಮೆಯಿಂದಲೇ ಕ್ರೈಂ ಥ್ರಿಲ್ಲರ್ ಟ್ರ್ಯಾಕಿನತ್ತ ಹೊರಳಿಸಿದ್ದಾರೆ. ಈ ಹುಡುಗರ ಗುಂಪಿನ ಪರಮ ಸೋಮಾರಿ ಆಸಾಮಿಗೆ ಹೇಗೋ ಹುಡುಗಿಯೊಬ್ಬಳು ಸಿಕ್ಕು ಮದುವೆಯೂ ಆಗುತ್ತೆ. ಆದರೆ ಈತನ ವರ್ತನೆಯಿಂದ ರೇಜಿಗೆ ಹುಟ್ಟಿಸಿಕೊಳ್ಳೋ ಆಕೆ ಅಸಮಾಧಾನವನ್ನು ಧರಿಸಿಕೊಂಡೇ ಬದುಕುತ್ತಿರುತ್ತಾಳೆ. ಈ ನಡುವೆ ಅದೇ ಊರ ತೋಟದಲ್ಲೊಂದು ಕೊಲೆ ನಡೆಯುತ್ತದೆ. ಆ ಕೊಲೆ ಕೇಸಲ್ಲಿ ಈ ಸೋಮಾರಿ ಆಸಾಮಿಯನ್ನು ಪೊಲೀಸರು ಎತ್ತಾಕಿಕೊಂಡು ಹೋಗಿ ಟ್ರೀಟ್‍ಮೆಂಟು ಕೊಡುತ್ತಾರೆ.

    ಅಸಲಿಗೆ ಆ ಕೊಲೆಗೂ ಈ ಸೋಮಾರಿಗೂ ಸಂಬಂಧವಿರೋದಿಲ್ಲ. ಅಲ್ಲಿಂದಾಚೆಗೆ ಆ ಕೊಲೆಗೆ ಕಾರಣವೇನೆಂಬುದನ್ನು ಪೊಲೀಸರು ಬೆಂಬೀಳುತ್ತಾರೆ. ಆ ಪೊಲೀಸರ ಹುಡುಕಾಟದೊಂದಿಗೇ ಒಟ್ಟಾರೆ ಕಥೆ ಪ್ರತೀ ಕ್ಷಣವೂ ಕಾತರದಿಂದ ಕಾಯುವಂತೆ ಚಲಿಸುತ್ತದೆ. ಹಾಗಾದರೆ ಆ ಕೊಲೆಗೆ ಕಾರಣವೇನು? ಅದಕ್ಕೂ ಅಂಡಲೆಯೋ ಊರ ಹುಡುಗರಿಗೂ ಸಂಬಂಧವಿರುತ್ತಾ ಎಂಬ ಕುತೂಹಲಕ್ಕೆ ಮಜವಾದ ಉತ್ತರವೇ ಕಾದಿದೆ. ಈ ಮೂಲಕವೇ ನಿರ್ದೇಶಕರಾಗಿ ಕೃಪಾ ಸಾಗರ್ ಕೂಡಾ ಭರವಸೆ ಮೂಡಿಸುವಂಥಾ ಚಿತ್ರವನ್ನೇ ಕಟ್ಟಿ ಕೊಟ್ಟಿದ್ದಾರೆ.

    ನಾಯಕನಾಗಿ ಮದನ್ ರಾಜ್ ರಂಗಭೂಮಿಯ ಕಸುವನ್ನೆಲ್ಲ ಒಗ್ಗೂಡಿಸಿಕೊಂಡು ನಟಿಸಿದ್ದಾರೆ. ನಾಯಕಿ ಅಮೃತಾ ಕೂಡಾ ಅಷ್ಟೇ ಚೆನ್ನಾಗಿ ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ. ರಮೇಶ್ ಪಂಡಿತ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಎಂದಿನಂತೆ ಚೆಂದಗೆ ನಟಿಸಿದ್ದಾರೆ. ಯಾವ ಪಾತ್ರವೂ ಇಲ್ಲಿ ಸುಮ್ಮನೆ ತುರುಕಿದಂತಿಲ್ಲ. ಪ್ರತಿಯೊಂದು ಪಾತ್ರಗಳೂ ಚಿತ್ರದ ಕಥೆಗೆ ಟ್ವಿಸ್ಟು ನೀಡುತ್ತಾ ವೇಗ ಹೆಚ್ಚಿಸುವಂತಿವೆ. ಅನಿಲ್ ಪಿಜೆ ಹಿನ್ನೆಲೆ ಸಂಗೀತ ಮತ್ತು ಅನಿಲ್ ಕುಮಾರ್ ಕೆ ಅವರ ಛಾಯಾಗ್ರಹಣ ಇಡೀ ಚಿತ್ರವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿವೆ.

    ರೇಟಿಂಗ್: 3.5/5

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]