Tag: ಮಂಡ್ಯ. ಮಳವಳ್ಳಿ

  • ಹಾಡಹಗಲೇ ಅಂಗಡಿಗೆ ನುಗ್ಗಿ ಯುವಕನ ಕೊಚ್ಚಿ ಬರ್ಬರ ಹತ್ಯೆ

    ಹಾಡಹಗಲೇ ಅಂಗಡಿಗೆ ನುಗ್ಗಿ ಯುವಕನ ಕೊಚ್ಚಿ ಬರ್ಬರ ಹತ್ಯೆ

    ಮಂಡ್ಯ: ಹಾಡಹಗಲೇ ಅಂಗಡಿಗೆ ನುಗ್ಗಿ ಯುವಕನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ನಡೆದಿದೆ.

    ಹಲಗೂರಿನಲ್ಲಿ ಪ್ರಾವಿಜನ್ ಸ್ಟೋರ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ರಾಮು (30) ಕೊಲೆಯಾದ ಯುವಕ. ಈ ಕೊಲೆ ನಡೆಯುತ್ತಿರುವ ದೃಶ್ಯವನ್ನು ಸಾರ್ವಜನಿಕರು ತಮ್ಮ ಮೊಬೈಲ್ ಫೋನ್‍ನಲ್ಲಿ ವಿಡಿಯೋ ಮಾಡಿದ್ದು, ಅಂಗಡಿಯೊಳಗೆ ಯುವಕನನ್ನು ಮನಬಂದಂತೆ ಕೊಚ್ಚುತ್ತಿರುವುದು ಕಂಡುಬಂದಿದೆ.

    ಇಂದು ಬೆಳಗ್ಗೆ ಬಂದು ಅಂಗಡಿ ತೆರೆದ ರಾಮು ಎಂದಿನಂತೆ ವ್ಯಾಪಾರ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಅಂಗಡಿಯೊಳಗೆ ಬಂದ ನಾಲ್ವರು ದುಷ್ಕರ್ಮಿಗಳು ಮಚ್ಚು, ಲಾಂಗ್‍ನಿಂದ ರಾಮುವನ್ನು ಕೊಚ್ಚಿಹಾಕಿದ್ದಾರೆ. ಈ ವೇಳೆ ಅಂಗಡಿಯ ಹೊರಗೆ ನಿಂತುಕೊಂಡ ಮತ್ತೊಬ್ಬ ಸಾರ್ವಜನಿಕರನ್ನು ಹತ್ತಿರ ಬಾರದಂತೆ ಬೆದರಿಕೆ ಹಾಕಿದ್ದಾನೆ.

    ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಮುವನ್ನು ಸ್ಥಳೀಯರು ತಕ್ಷಣ ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ತೀವ್ರ ರಕ್ತ ಸ್ರಾವ ಆಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಸಂಬಂಧ ಸ್ಥಳಕ್ಕೆ ಹಲಗೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.