Tag: ಮಂಡ್ಯ

  • ಮಂಡ್ಯ| ಅಲಂಕಾರಿಕ ಗಿಡ ಅಂತ ಮನೆ ಮುಂದೆಯೇ ಗಾಂಜಾ ಬೆಳೆದ ಭೂಪ

    ಮಂಡ್ಯ| ಅಲಂಕಾರಿಕ ಗಿಡ ಅಂತ ಮನೆ ಮುಂದೆಯೇ ಗಾಂಜಾ ಬೆಳೆದ ಭೂಪ

    ಮಂಡ್ಯ: ಅಲಂಕಾರಿಕ ಗಿಡ ಎಂದು ಜನರನ್ನು ನಂಬಿಸಿ ಮನೆಯ ಮುಂದೆಯೇ ಐದು ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರದಲ್ಲಿ‌ ಜರುಗಿದೆ.

    ಶ್ರೀನಿವಾಸ ಅಗ್ರಹಾರದ ಸುರೇಶ್ ಎಂಬಾತ ತನ್ನ ಮನೆಯ ಮುಂದೆ ಐದು ಗಾಂಜಾ ಗಿಡಗಳನ್ನು ಬೆಳೆದಿದ್ದ. ಸ್ಥಳೀಯರು ಇದು ಯಾವ ಗಿಡ ಎಂದು‌ ಕೇಳಿದಾಗ ಸುರೇಶ್ ಇದು ಅಲಂಕಾರಿಕ‌‌ ಗಿಡ ಎಂದು‌ ಹೇಳುತ್ತಿದ್ದ. ಗಾಂಜಾ ಗಿಡ ಹೂ ಬಿಡುವ ಹಂತಕ್ಕೆ ಬಂದ ವೇಳೆ ಗಿಡಗಳಿಗೆ ಸೀರೆ ಸುತ್ತಿ ಮರೆ ಮಾಡಿದ್ದಾನೆ. ಈ ವಿಚಾರವನ್ನು ಸ್ಥಳೀಯರೊಬ್ಬರು ಶ್ರೀರಂಗಪಟ್ಟಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮಾಹಿತಿ ಆಧರಿಸಿ ದಾಳಿ‌ ನಡೆಸಿದ ಪೊಲೀಸರು ಪರಿಶೀಲನೆ ಮಾಡಿದ ವೇಳೆ ಅದು ಅಲಂಕಾರಿಕ‌ ಗಿಡ ಅಲ್ಲ ಗಾಂಜಾ ಗಿಡ ಎಂದು‌ ತಿಳಿದು ಬಂದಿದೆ. ಸದ್ಯ 9 ಕೆಜಿಯ 3 ಲಕ್ಷ ಮೌಲ್ಯದ ಗಾಂಜಾ ಗಿಡವನ್ನು ಪೊಲೀಸರು ಜಪ್ತಿ ಮಾಡಿ ಸುರೇಶ್‌ನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

  • ಕಾವೇರಿ ಜಲಾನಯನ ಪ್ರದೇಶದಲ್ಲಿ ಹಿಂಗಾರು ಚುರುಕು – ನದಿ ಪಾತ್ರದ ಜನರಿಗೆ ಅಲರ್ಟ್

    ಕಾವೇರಿ ಜಲಾನಯನ ಪ್ರದೇಶದಲ್ಲಿ ಹಿಂಗಾರು ಚುರುಕು – ನದಿ ಪಾತ್ರದ ಜನರಿಗೆ ಅಲರ್ಟ್

    ಮಂಡ್ಯ: ಮುಂಗಾರು ಮಳೆ ಬಳಿಕ ಕಾವೇರಿ ಜಲಾನಯನ ಪ್ರದೇಶದಲ್ಲಿ ಹಿಂಗಾರು ಮಳೆಯೂ ಚುರುಕುಗೊಂಡಿದೆ. ಈ ಹಿನ್ನೆಲೆ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನ (KRS Dam) ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.

    ಕೆಆರ್‌ಎಸ್ ಡ್ಯಾಂ ಸಂಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿರುವ ಹಿನ್ನೆಲೆ ಯಾವುದೇ ಕ್ಷಣದಲ್ಲಾದರು ಡ್ಯಾಂನಿಂದ 40 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡುವ ಸಾಧ್ಯತೆ ಇದೆ. ಹೀಗಾಗಿ ಕಾವೇರಿ ನೀರಾವರಿ ನಿಗಮ ಕಾವೇರಿ ನದಿ (Cauvery River) ಪಾತ್ರದ ಜನರಿಗೆ ಎಚ್ಚರಿಕೆಯನ್ನು ನೀಡಿದೆ. ಇದನ್ನೂ ಓದಿ: ಯಾವುದೇ ಕ್ಷಣದಲ್ಲಿ ಹೇಮಾವತಿ ಡ್ಯಾಂನಿಂದ ನೀರು ಹೊರಕ್ಕೆ – ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ

    ಸದ್ಯ ಕೆಆರ್‌ಎಸ್ ಡ್ಯಾಂನ ಒಳಹರಿವಿನ ಪ್ರಮಾಣ 20,797 ಕ್ಯೂಸೆಕ್ ಇದ್ದು, 25 ಸಾವಿರ ಕ್ಯೂಸೆಕ್‌ನ್ನು ಸದ್ಯ ನದಿಗೆ ಬಿಡಲಾಗುತ್ತಿದೆ. 124.80 ಗರಿಷ್ಟ ಮಟ್ಟದ ಕೆಆರ್‌ಎಸ್ ಸಂಪೂರ್ಣ ಭರ್ತಿಯಾಗಿದ್ದು, ಡ್ಯಾಂನಲ್ಲಿ ಗರಿಷ್ಠ ಸಾಮರ್ಥ್ಯವಾದ 49.452 ಟಿಎಂಸಿಯಷ್ಟು ನೀರು ಭರ್ತಿಯಾಗಿದೆ. ಇದನ್ನೂ ಓದಿ: ಏಷ್ಯಾಕಪ್‌ ವಿವಾದದ ಬೆನ್ನಲ್ಲೇ ನವೆಂಬರ್‌ನಲ್ಲಿ ಪಾಕ್‌ ವಿರುದ್ಧ ಆಡಲಿದೆ ಭಾರತ

  • ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆ – ಮಂಡ್ಯದ ಅರ್ಪಿತ ಸಾಧನೆ

    ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆ – ಮಂಡ್ಯದ ಅರ್ಪಿತ ಸಾಧನೆ

    ಮಂಡ್ಯ: ಮಲ್ಲೇಷಿಯಾದಲ್ಲಿ ನಡೆದ ಏಷ್ಯಾ ಪ್ಯಾನಿಕ್ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ (International Yoga Competition) ಮಂಡ್ಯದ ಜೆ.ಕೆ ಅರ್ಪಿತ 3ನೇ ಸ್ಥಾನ ಪಡೆದಿದ್ದಾರೆ.

    ಮಂಡ್ಯ (Mandya) ತಾಲ್ಲೂಕಿನ ಜವನಹಳ್ಳಿ ಗ್ರಾಮದ ಕುಮಾರ್ ಎಂಬುವರ ಪುತ್ರಿ ಅರ್ಪಿತಾ ಅಕ್ಟೋಬರ್ 14ರಂದು ನಡೆದ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಮಂಡ್ಯಕ್ಕೆ ಕೀರ್ತಿ ತಂದಿದ್ದಾರೆ.

    ಪ್ರಸ್ತುತ ಹಾಸನ ಜಿಲ್ಲೆಯ ಶ್ರವಣಬೆಳಗೋಳದಲ್ಲಿ ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿಯಾಗಿ ಕರ್ತವ್ಯನಿರ್ವಹಿಸುತ್ತಿರುವ ಅರ್ಪಿತಾ, ಕಳೆದ ಜೂನ್‌ನಲ್ಲಿ ಶಿವಮೊಗ್ಗದ ಸಾಗರದಲ್ಲಿ ನಡೆದ ರಾಜ್ಯ ಯೋಗಾಸನ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ 4ನೇ ಸ್ಥಾನ ಹಾಗೂ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಡಬ್ಲ್ಯೂಎಫ್ ಯೋಗಾಸನ ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆದಿದ್ದರು. ಬಳಿಕ ಕೇರಳದ ಎರ್ನಾಕಲಂನಲ್ಲಿ ನಡೆದ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ ಶಿಫ್ ಸ್ಪರ್ಧೆಯಲ್ಲಿ ಭಾಗಿಯಾಗಿ ಉತ್ತಮ ಸಾಧನೆ ಮಾಡುವ ಮೂಲಕ ಅಂತರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದರು.  

    ಈವರೆಗೆ ಎರಡು ರಾಜ್ಯಮಟ್ಟದ ಹಾಗೂ ಎರಡು ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿಜೇತರಾಗುವ ಜೊತೆಗೆ ಇದೀಗ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲೂ 3ನೇ ಬಹುಮಾನ ಪಡೆಯುವ ಮೂಲಕ ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

  • ಮಂಡ್ಯ ಭತ್ತಕ್ಕೆ ಫಿಲಿಪೈನ್ಸ್ ನಂಟು – ಹೊಸ ತಳಿ ಸಂಶೋಧನೆಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ

    ಮಂಡ್ಯ ಭತ್ತಕ್ಕೆ ಫಿಲಿಪೈನ್ಸ್ ನಂಟು – ಹೊಸ ತಳಿ ಸಂಶೋಧನೆಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ

    ಜಗತ್ತಿನಲ್ಲಿ ಅತಿ ದೊಡ್ಡ ಭತ್ತ ಉತ್ಪಾದನೆ ರಾಷ್ಟ್ರದಲ್ಲೊಂದು ಎಂಬ ಹೆಗ್ಗಳಿಕೆ ಹೊಂದಿರುವ ಫಿಲಿಪೈನ್ಸ್‌ನೊಂದಿಗೆ ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಭತ್ತದ ತಳಿ ಸಂಶೋಧನೆಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿದೆ. ಇದರೊಂದಿಗೆ ಕೃಷಿ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ.

    ರಾಜ್ಯದ ಭತ್ತ ಉತ್ಪಾದನಾ ಕ್ಷೇತ್ರದಲ್ಲಿ ಮಂಡ್ಯ ಜಿಲ್ಲೆಯೂ ಪ್ರಮುಖ ಸ್ಥಾನ ಹೊಂದಿದೆ. ಈ ನಡುವೆ ಭತ್ತ ಬೆಳೆಗೆ ಸಂಬಂಧಿಸಿದಂತೆ ಹಲವು ಸಮಸ್ಯೆ ಜೊತೆಗೆ ಇಳುವರಿ ಕುಂಠಿತವಾಗುತ್ತಿರುವುದು ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಆದಾಗ್ಯೂ ಭತ್ತದ ಉತ್ಪಾದನೆಗೆ ಹೆಚ್ಚಿನ ರೈತರು ಒಲವು ತೋರುತ್ತಾರೆ. ಈ ಹಿನ್ನೆಲೆಯಲ್ಲಿ ಭತ್ತದಲ್ಲಿ ಹೊಸ ತಳಿ ಸಂಶೋಧನೆಗೆ ಮಂಡ್ಯ ಕೃಷಿ ವಿವಿ ಫಿಲಿಪೈನ್ಸ್‌ನ ಇಂಟರ್‌ನ್ಯಾಷನಲ್ ರೈಸ್ ರಿಸರ್ಚ್ ಇನ್ಶಿಟ್ಯೂಟ್(ಐಆರ್‌ಆರ್‌ಐ)ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

    ಕರ್ನಾಟಕದಲ್ಲಿ 1.2 ದಶಲಕ್ಷ ಹೆಕ್ಟೇರ್‌ನಲ್ಲಿ ಭತ್ತದ ಬೆಳೆ
    ಸಚಿವ ಎನ್.ಚಲುವರಾಯಸ್ವಾಮಿ ಅವರ ಸೂಚನೆ ಮೇರೆಗೆ ಮಂಡ್ಯ ಕೃಷಿ ವಿವಿ ವಿಶೇಷಾಧಿಕಾರಿ ಡಾ.ಕೆ.ಎಂ ಹರಿಣಿಕುಮಾರ್ ವಿಸ್ತಾರವಾದ ಪ್ರಸ್ತಾವನೆ ಸಿದ್ಧಪಡಿಸಿ ಐಆರ್‌ಆರ್‌ಐಗೆ ಸಲ್ಲಿಸಿದ್ದಾರೆ. ಅದರಂತೆ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಕೃಷಿ ಅಭಿವೃದ್ಧಿ ಮತ್ತು ರೈತರನ್ನ ಉನ್ನತೀಕರಿಸಲು ವಿ.ಸಿ ಫಾರ್ಮ್‌ನಲ್ಲಿ ಕೃಷಿ ವಿವಿ ಸ್ಥಾಪಿಸಲಾಗಿದೆ. ಭಾರತ ಮತ್ತು ಕರ್ನಾಟಕದಲ್ಲಿ ಹೆಚ್ಚಿನ ಜನರಿಗೆ ಅಕ್ಕಿ ಪ್ರಧಾನ ಆಹಾರ ಮತ್ತು ಪೋಷಣೆಯ ಪ್ರಾಥಮಿಕ ಮೂಲವಾಗಿದೆ. ಇದು ಆದಾಯ ಮತ್ತು ಉದ್ಯೋಗದ ಪ್ರಮುಖ ಮೂಲ. ಮಾತ್ರವಲ್ಲದೆ ರಾಜ್ಯದ ಆರ್ಥಿಕತೆಯ ಬೆನ್ನೆಲುಬಾಗಿದೆ. ಕರ್ನಾಟಕದಲ್ಲಿ ಸುಮಾರು 1.2 ದಶಲಕ್ಷ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುತ್ತಿದ್ದು, ಪ್ರತಿ ಹೆಕ್ಟೇರ್‌ಗೆ ಸರಾಸರಿ 3 ಟನ್ ಇಳುವರಿ ನೀಡುತ್ತದೆ. ಇದರಲ್ಲಿ ಶೇ.44ರಷ್ಟು ನೀರಾವರಿ ಮತ್ತು ಶೇ.56ರಷ್ಟು ಮಳೆಯಾಶ್ರಿತವಾಗಿದೆ.

    ಪ್ರಸ್ತುತ ಕರ್ನಾಟಕದಲ್ಲಿ ಭತ್ತದ ಸಂಶೋಧನೆಯು ವಿ.ಸಿ ಫಾರ್ಮ್ ಹಾಗೂ ಗಂಗಾವತಿ ಕೇಂದ್ರದಲ್ಲಿ ನಡೆಯುತ್ತಿದೆ. 1969ರಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ವಿ.ಸಿ ಫಾರ್ಮ್‌ನಲ್ಲಿ ಅಖಿಲ ಭಾರತ ಸಂಯೋಜಿತ ಭತ್ತದ ಸುಧಾರಣಾ ಯೋಜನೆ ಪ್ರಾರಂಭಿಸಿತು. ಇದಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದೆ. ಗಮನಾರ್ಹ ವಿಷಯವೆಂದರೆ ಭಾರತದ ಮೊದಲ ಹೈಬ್ರಿಡ್ ಭತ್ತದ ವಿಧವಾದ ಕೆಆರ್‌ಎಚ್-2 ಅನ್ನು ಫಿಲಿಪೈನ್ಸ್‌ನ ಐಆರ್‌ಆರ್‌ಐನಿಂದ ಜರ್ಮ್‌ಪ್ಲಾಸಂ ಬಳಸಿ ವಿ.ಸಿ ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸಲಾಗಿತ್ತು.

    ಹವಾಮಾನ ಬದಲಾವಣೆ, ನೀರಿನ ಕೊರತೆ, ಹೆಚ್ಚುತ್ತಿರುವ ಕೃಷಿ ವೆಚ್ಚ, ಕೀಟ ಮತ್ತು ರೋಗಗಳ ಒತ್ತಡ ಮತ್ತು ಕುಗ್ಗುತ್ತಿರುವ ಭತ್ತದ ವಿಸ್ತೀರ್ಣದಂತಹ ಸವಾಲು ಎದುರಿಸಲು ಹಾಗೂ ಉತ್ಪಾದಕತೆ ಹೆಚ್ಚಿಸಲು ವಿ.ಸಿ ಫಾರ್ಮ್ ವಿಜ್ಞಾನಿಗಳು 45 ಭತ್ತದ ಪ್ರಭೇದ, 2 ಮಿಶ್ರತಳಿ ಮತ್ತು 47 ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ. ಆದರೆ ಈ ಪ್ರಯತ್ನಗಳ ಹೊರತಾಗಿಯೂ ಕರ್ನಾಟಕದಲ್ಲಿ ಭತ್ತದ ಕೃಷಿ ನೀರಿನ ಕೊರತೆ, ಕೀಟ ಮತ್ತು ರೋಗಗಳ ಹರಡುವಿಕೆ, ಅಜೈವಿಕ ಒತ್ತಡ, ಕಾರ್ಮಿಕರ ಕೊರತೆಯಿಂದ ಕುಸಿಯುತ್ತಿದೆ. ಈ ನಿಟ್ಟಿನಲ್ಲಿ ಹೊಸ ತಳಿ ಸಂಶೋಧನೆಗೆ ಐಆರ್‌ಆರ್‌ಐ ನೆರವಿನ ಅವಶ್ಯಕತೆ ಇದೆ ಎಂದಿದ್ದಾರೆ.

    ಗುಣಮಟ್ಟದ ಅಕ್ಕಿ ಪೂರೈಕೆ ಗುರಿ
    ಕುಗ್ಗುತ್ತಿರುವ ಕೃಷಿ ಪ್ರದೇಶಗಳ ನಡುವೆಯೂ ಭತ್ತಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಹವಾಮಾನ, ಸ್ಮಾರ್ಟ್, ಹೆಚ್ಚಿನ ಇಳುವರಿ ನೀಡುವ, ಕೀಟ-ನಿರೋಧಕ ಮತ್ತು ಪೋಷಕಾಂಶ-ದಟ್ಟವಾದ ಭತ್ತದ ಪ್ರಭೇದಗಳು ಬೇಕಾಗುತ್ತವೆ. ಈ ನಿಟ್ಟಿನಲ್ಲಿ ಫಿಲಿಪೈನ್ಸ್‌ನ ಐಆರ್‌ಆರ್‌ಐ ಜೊತೆ ಹೊಸ ಸಹಯೋಗದ ಸಂಶೋಧನಾ ಉಪಕ್ರಮದ ಅವಶ್ಯಕತೆ ಇದೆ. ಇದರಿಂದ ಉತ್ತಮ ಗುಣಮಟ್ಟದ ಸಂಶೋಧನೆಗೆ ಅನುವು ಮಾಡಿಕೊಡುವುದರ ಜೊತೆಗೆ ಭಾರತದ ಕೃಷಿ ವಲಯಕ್ಕೆ ವಿಶಾಲ ಅವಕಾಶ ತೆರೆಯುತ್ತದೆ.

    ಒಪ್ಪಂದದ ಮೂಲಕ ಸಾಂಪ್ರದಾಯಿಕ ಭತ್ತದ ತಳಿಗಳನ್ನು ಅಧ್ಯಯನ ಮಾಡುವುದು ಮತ್ತು ಹೆಚ್ಚಿಸುವುದು. ಹವಾಮಾನ-ನಿರೋಧಕ ಮತ್ತು ಪೋಷಕಾಂಶ-ಭರಿತ ಮಿಶ್ರತಳಿ ಅಭಿವೃದ್ಧಿಪಡಿಸುವುದು. ಉತ್ತಮ ಬೆಳೆ ನಿರ್ವಹಣೆ ಪದ್ಧತಿ ಉತ್ತೇಜಿಸುವುದು. ಭತ್ತದ ಸಂಶೋಧನೆ ಮತ್ತು ಕೃಷಿಯಲ್ಲಿ ವಿಜ್ಞಾನಿಗಳು ಮತ್ತು ರೈತರನ್ನ ಸಬಲೀಕರಣಗೊಳಿಸಬಹುದು. ಪರಿಣಾಮ ಫಿಲಿಪೈನ್ಸ್‌ಗೆ ಉತ್ತಮ ಗುಣಮಟ್ಟದ ಅಕ್ಕಿಯನ್ನು ರಫ್ತು ಮಾಡುವ ಗುರಿ ಹೊಂದಲಾಗಿದೆ. ರಾಜ್ಯದ ರೈತ ಸಮುದಾಯಗಳಲ್ಲಿ ಸುಧಾರಿತ ಜೀವನೋಪಾಯಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಿದ್ದಾರೆ.

    ಜಿಲ್ಲೆಯ ಜನರ ಹಲವು ದಶಕದ ಬೇಡಿಕೆಯಂತೆ ವಿ.ಸಿ ಫಾರ್ಮ್‌ನಲ್ಲಿ ಕೃಷಿ ವಿಶ್ವವಿದ್ಯಾನಿಲಯ ಪ್ರಾರಂಭಿಸುವಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಮಹತ್ವದ ಪಾತ್ರ ವಹಿಸಿದ್ದರು. ಇದರ ಮುಂದುವರೆದ ಭಾಗವಾಗಿ ಭತ್ತದ ತಳಿ ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆ ತರುವ ನಿಟ್ಟಿನಲ್ಲಿ ಫಿಲಿಪೈನ್ಸ್‌ನ ಐಆರ್‌ಆರ್‌ಐ ಜತೆ ಮಹತ್ವದ ಒಡಂಬಡಿಕೆಗೆ ಸಹಿ ಹಾಕಿದ್ದಾರೆ.

    ಫಿಲಿಪೈನ್ಸ್‌ನ ಮನಿಲಾದಲ್ಲಿರುವ ಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರಕ್ಕೆ ಉನ್ನತ ಮಟ್ಟದ ನಿಯೋಗದೊಂದಿಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತೆರಳಿದ್ದಾರೆ. ರಾಜ್ಯದಲ್ಲಿ ನೆರೆ ಹಾವಳಿ, ಬರ ಪರಿಸ್ಥಿತಿ, ಕರಾವಳಿ, ಮಲೆನಾಡು, ಬಯಲು ಸೀಮೆ ಹೀಗೆ ವಿಭಿನ್ನ ಭೌಗೋಳಿಕ ಪರಿಸರಕ್ಕೆ ಹೊಂದಾಣಿಕೆಯಾಗುವ ವಿವಿಧ ಜೈವಿಕ, ಅಜೈವಿಕ ಒತ್ತಡಗಳಿಗೆ ನಿರೋಧಕತೆ ಜತೆಗೆ ಪೌಷ್ಠಿಕಾಂಶವುಳ್ಳ, ಅಧಿಕ ಇಳುವರಿ ತರುವ ಬೇಸಾಯ ಕ್ರಮ ಮತ್ತು ಭತ್ತದ ತಳಿಗಳ ಸಂಶೋಧನೆಗೆ ಈ ಒಡಂಬಡಿಕೆ ನೆರವಾಗಲಿದೆ.

  • ಮಂಡ್ಯ: 3 ಸಾರಿಗೆ ಬಸ್‌ಗಳ ನಡುವೆ ಡಿಕ್ಕಿ – ಓರ್ವ ಮಹಿಳೆ ಸಾವು; 75 ಮಂದಿಗೆ ಗಾಯ

    ಮಂಡ್ಯ: 3 ಸಾರಿಗೆ ಬಸ್‌ಗಳ ನಡುವೆ ಡಿಕ್ಕಿ – ಓರ್ವ ಮಹಿಳೆ ಸಾವು; 75 ಮಂದಿಗೆ ಗಾಯ

    ಮಂಡ್ಯ: ಮೂರು ಸಾರಿಗೆ ಬಸ್‌ಗಳ ನಡುವೆ ಡಿಕ್ಕಿಯಾಗಿ ಓರ್ವ ಮಹಿಳೆ ಸಾವಿಗೀಡಾಗಿದ್ದು, 75ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಮಳವಳ್ಳಿ ತಾಲೂಕಿನ ಬಾಚಹಳ್ಳಿ ಗ್ರಾಮದ ಮಳವಳ್ಳಿ-ಕೊಳ್ಳೇಗಾಲ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಎರಡು KSRTC ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾದವು. ಅಪಘಾತಗೊಂಡ ಬಸ್‌ಗೆ ಮತ್ತೊಂದು ಬಸ್ ಡಿಕ್ಕಿ ಹೊಡೆಯಿತು. ಮೂರು ಬಸ್‌ಗಳ ಕೆಲವು ಭಾಗಗಳು ಜಖಂಗೊಂಡವು. ಬಸ್‌ನಲ್ಲಿದ್ದ 20 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. 15 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳಿಗೆ ಮಳವಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಮೃತ ಮಹಿಳೆ ಬಗ್ಗೆ ಮಾಹಿತಿ ಇನ್ನೂ ಸಿಕ್ಕಿಲ್ಲ. ಗಾಯಾಳುಗಳಿಗೆ ಮಳವಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್‌ಗೆ ರವಾನಿಸಲಾಗಿದೆ.

  • ಮಂಡ್ಯ | ದಲಿತ ಸಮುದಾಯದಿಂದಲೇ ದಲಿತರಿಗೆ ಬಹಿಷ್ಕಾರ ಆರೋಪ; ಗ್ರಾಮದ 7 ಕುಟುಂಬಕ್ಕೆ ಶಿಕ್ಷೆ

    ಮಂಡ್ಯ | ದಲಿತ ಸಮುದಾಯದಿಂದಲೇ ದಲಿತರಿಗೆ ಬಹಿಷ್ಕಾರ ಆರೋಪ; ಗ್ರಾಮದ 7 ಕುಟುಂಬಕ್ಕೆ ಶಿಕ್ಷೆ

    – ಕುಲದ ವಿರುದ್ಧ ಮಾತನಾಡಿದ್ದಕ್ಕೆ ಬಹಿಷ್ಕಾರ

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ದಲಿತ ಸಮುದಾಯವೇ (Dalit Community) ದಲಿತರನ್ನು ಬಹಿಷ್ಕರಿಸಿರುವ ಆರೋಪ ಕೇಳಿ ಬಂದಿದೆ.

    ಕಾಲೋನಿಯ 7 ಕುಟುಂಬಗಳು ಬಹಿಷ್ಕಾರಕ್ಕೆ ಒಳಗಾಗಿದ್ದು, ಕುಟುಂಬಗಳ ಜೊತೆ ನೆರೆ ಹೊರೆಯವರು ಮಾತನಾಡದಂತೆ ಕುಲದ ಮುಖಂಡರು ಆದೇಶ ಮಾಡಿದ್ದಾರೆ. ಇದೀಗ ಬಹಿಷ್ಕಾರಕ್ಕೊಳಗಾದ (Social Exclusion) ಕುಟುಂಬಗಳು ಕಾನೂನು ಹೋರಾಟ ನಡೆಸಲು ಮುಂದಾಗಿದ್ದಾರೆ.

    ಕುಲದ ವಿರುದ್ಧ ಮಾತನಾಡಿದ ಕಾರಣಕ್ಕೆ 7 ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಬಹಿಷ್ಕಾರಕ್ಕೊಳಗಾದ ಕುಟುಂಬಗಳ ಜೊತೆ ನೆರೆ ಹೊರೆಯವರು ಮಾತನಾಡದಂತೆ ಆದೇಶ ಮಾಡಲಾಗಿದೆ.

    ತಮ್ಮದೇ ಸಮುದಾಯದವರಿಂದ ಸಾಮಾಜಿಕ ಬಹಿಷ್ಕಾರದ ಶಿಕ್ಷೆಗೆ ಗುರಿಯಾಗಿರುವ ಕುಟುಂಬಗಳೀಗ ಸಿಡಿದೆದ್ದಿವೆ. ಈ ಹಿನ್ನೆಲೆ ತಮಗಾದ ಅನ್ಯಾಯವನ್ನು ಅರಿತು, ತಮ್ಮ ನೆರವಿಗೆ ಬರುವಂತೆ ಸರ್ಕಾರ ಸೇರಿದಂತೆ ಡಿಸಿ, ಎಸ್ಪಿ ಹಾಗೂ ತಾಲೂಕು ಆಡಳಿತಕ್ಕೆ ಬಹಿಷ್ಕಾರಕ್ಕೊಳಗಾದ ಕುಟುಂಬಗಳು ಮನವಿ ಮಾಡಿವೆ.

  • ದೀಪಾವಳಿ ಕೊಡುಗೆ ನೆಪದಲ್ಲಿ ಜನಕ್ಕೆ ದೋಖಾ, ಎ-ಖಾತಾ ಸೋಗಿನಲ್ಲಿ 15,000 ಕೋಟಿ ಸುಲಿಗೆ: ಹೆಚ್‌ಡಿಕೆ ಬಾಂಬ್‌

    ದೀಪಾವಳಿ ಕೊಡುಗೆ ನೆಪದಲ್ಲಿ ಜನಕ್ಕೆ ದೋಖಾ, ಎ-ಖಾತಾ ಸೋಗಿನಲ್ಲಿ 15,000 ಕೋಟಿ ಸುಲಿಗೆ: ಹೆಚ್‌ಡಿಕೆ ಬಾಂಬ್‌

    ಮಂಡ್ಯ: ದೀಪಾವಳಿ ಕೊಡುಗೆ (Deepavali Gift) ಕೊಡುತ್ತಿದ್ದೇವೆ ಎಂದು ಹೇಳಿ ರಾಜ್ಯ ಸರ್ಕಾರ ಬೆಂಗಳೂರು ಜನರ ಕಿಸೆಗೆ ಕೈ ಹಾಕಿದೆ. ಎ-ಖಾತಾ ಸೋಗಿನಲ್ಲಿ 15,000 ಕೋಟಿ ಸುಲಿಗೆ ಮಾಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ನೇರ ಆರೋಪ ಮಾಡಿದರು.

    ಮಂಡ್ಯ ನಗರದ (Mandya City) ಸಂಜಯ್ ವೃತ್ತದಲ್ಲಿ ಹೊಸದಾಗಿ ನಿರ್ಮಿಸಿರುವ ಸುಸಜ್ಜಿತ ಆಟೋ ನಿಲ್ದಾಣ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ದೀಪಾವಳಿ ಕೊಡುಗೆ ಎಂದರೆ ಏನೋ ನಮಗೆ ದೊಡ್ಡ ಕೊಡುಗೆ ಕೊಡುತ್ತದೆ ಎಂದು ಜನರು ಭಾವಿಸಿದ್ದರು. ದೊಡ್ಡ ದೊಡ್ಡ ಜಾಹೀರಾತುಗಳನ್ನ ನೋಡಿ ನಾನು ಕೂಡ ಹಾಗೆಯೇ ಅಂದುಕೊಂಡಿದ್ದೆ. ಆದರೆ, ಅದು ದೀಪಾವಳಿ ಹೆಸರಿನಲ್ಲಿ ಜನರಿಗೆ ಮಾಡುತ್ತಿರುವ ಮಹಾನ್ ದೋಖಾ ಎಂದು ಕಿಡಿಕಾರಿದರು. ಇದನ್ನೂ ಓದಿ: ನ.1ರಿಂದ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ – ನಿವೇಶನಗಳಿಗಷ್ಟೇ ಎ ಖಾತೆ; ಕಟ್ಟಡಗಳ ಸಕ್ರಮ ಇಲ್ಲ

    Khata 2

    ಬೆಂಗಳೂರು (Bengaluru) ನಗರದ ಜನರಿಗೆ ದೀಪಾವಳಿ ಕೊಡುಗೆ ನೀಡೋದಕ್ಕೆ ಬದಲಾಗಿ ಶಾಕ್ ಕೊಡ್ತಿದ್ದಾರೆ. ಅದು ಹೇಗಿದೆ ಎಂದರೆ, ಬಿ ಖಾತಾದಿಂದ ಎ ಖಾತಾಗೆ (A Khata) ಪರಿವರ್ತನೆ ಮಾಡುವ ಅರ್ಜಿಗೆ 500 ರೂಪಾಯಿ ಶುಲ್ಕ ತುಂಬಬೇಕು. ಆ ಶುಲ್ಕದ ಹೆಸರಿನಲ್ಲಿಯೇ ನೂರಾರು ಕೋಟಿ ರೂಪಾಯಿ ಸುಲಿಗೆ ಮಾಡುತ್ತಿದೆ ಈ ಸರ್ಕಾರ. 30/40 ನಿವೇಶನಕ್ಕೆ 4 ರಿಂದ 8 ಲಕ್ಷ ರೂಪಾಯಿವರೆಗೂ ಕಿತ್ತುಕೊಳ್ಳುತ್ತಿದ್ದಾರೆ. ಮೊದಲು 10 ರಿಂದ 13 ಸಾವಿರ ರೂಪಾಯಿ ಅಷ್ಟನ್ನೇ ಕಟ್ಟಬೇಕಿದ್ದ ಬೆಂಗಳೂರು ಜನರು ಇನ್ನು ಮುಂದೆ ಲಕ್ಷಗಳಲ್ಲಿ ಹಣ ಏರಬೇಕಿದೆ. ಎ-ಖಾತಾ ದಂಧೆಯ ಮೂಲಕ ರಾಜ್ಯ ಸರ್ಕಾರ 15,000 ಕೋಟಿ ರೂಪಾಯಿ ವಸೂಲಿ ಮಾಡುತ್ತಿದೆ ಎಂದು ಕೇಂದ್ರ ಸಚಿವರು ಆರೋಪ ಮಾಡಿದರು. ಇದನ್ನೂ ಓದಿ: ಐನಾಕ್ಸ್‌ವಿಂಡ್‌ ಕಂಪನಿಯಿಂದ ಕುಷ್ಟಗಿಯಲ್ಲಿ 400 ಕೋಟಿ ಹೂಡಿಕೆ: ಎಂಬಿ ಪಾಟೀಲ್‌

    Khata

    ಹಣ ಮಾಡುವುದಕ್ಕೆಂದೇ ಈ ಸರ್ಕಾರ ಇದೆ
    ಗ್ಯಾರಂಟಿ ಕೊಟ್ಟು ಜನರ ಬದುಕು ಹಸನು ಮಾಡೋದು ಎಂದರೆ ಹೀಗೆನಾ? ಜನರ ಮೇಲೆ ತೆರಿಗೆ ವಿಧಿಸಿ 6ನೇ ಗ್ಯಾರಂಟಿ ಕೊಡಲು ಹೊರಟಿದ್ದಾರೆ. ಈ ಸರ್ಕಾರ ಬಂದ ಮೇಲೆ ನಿರಂತರವಾಗಿ ಸುಲಿಗೆ ಮಾಡುತ್ತಿದೆ. ಕೇವಲ ಹಣ ಮಾಡುವುದಕ್ಕೆ ಸರ್ಕಾರ ಹೊರಟಿದೆ. ಪ್ರತಿಯೊಂದರಲ್ಲೂ ದುಡ್ಡು ಮಾಡುವ ಬಗ್ಗೆಯಷ್ಟೇ ಆಲೋಚನೆ ಮಾಡುತ್ತಿದೆ ಎಂದು ಕಟುವಾಗಿ ಟೀಕಿಸಿದರು. ಇದನ್ನೂ ಓದಿ: ದೀಪಾವಳಿಗೆ ಸಿಹಿ ಸುದ್ದಿ- ರಾಜ್ಯದ ಸರ್ಕಾರಿ ನೌಕರರ DA 2% ಏರಿಕೆ

    ಈ ಸರ್ಕಾರದಲ್ಲಿ ಹಣ ಇಲ್ಲ. ಅದಕ್ಕೆ ಕಂಡ ಕಂಡ ಕಡೆ ಹಣಕ್ಕೆ ಕೈ ಹಾಕುತ್ತಿದೆ. ಬೆಂಗಳೂರಿನ ಗುಂಡಿ ಮುಚ್ಚೋದು ಇರಲಿ. ರಾಜ್ಯದಲ್ಲಿರುವ ಗುಂಡಿಗಳನ್ನೂ ಮುಚ್ಚೋಕೆ ಇವರಿಂದ ಆಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡ ಸಚಿವರು, ಜೆಡಿಎಸ್ ಕೊಡುಗೆ ಏನು ಎಂದು ಹಾಸನದಲ್ಲಿ ಸಿಎಂ ಪ್ರಶ್ನೆ ಮಾಡಿದ್ದಾರೆ. ನನ್ನ ಆರೋಗ್ಯ ವಿಚಾರಿಸಲು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ದೆಹಲಿಗೆ ಬಂದಿದ್ದರು. 2018ರಲ್ಲಿ ನೀವು ಕೊಟ್ಟ 500 ಕೋಟಿ ರೂಪಾಯಿ ಅನುದಾನದಲ್ಲಿಯೇ ಇನ್ನೂ ಕೆಲಸ ನಡೆಯುತ್ತಿದೆ ಎಂದು ಅವರೇ ಹೇಳುತ್ತಾರೆ. ಅನುದಾನದ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು, ನಾನು ಅಧಿಕಾರದಲ್ಲಿ ಇದ್ದ ಎಷ್ಟು ಕೊಟ್ಟಿದ್ದೇನೆ? ಇವರು ಎಷ್ಟು ಕೊಟ್ಟಿದ್ದಾರೆ? ಎಂಬ ಬಗ್ಗೆ ಜನರ ಮುಂದೆ ದಾಖಲೆ ಇಡಲಿ ಎಂದು ಕೇಂದ್ರ ಸಚಿವರು ಸವಾಲು ಹಾಕಿದರು.

    ಸಂಸದರ ನಿಧಿಯಲ್ಲಿ ಆಟೋ ನಿಲ್ದಾಣ ಲೋಕಾರ್ಪಣೆ
    ಮಂಡ್ಯದ ಸಂಜಯ ನಗರ ವೃತ್ತದಲ್ಲಿ ಸಂಸದರ 35 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಸುಸಜ್ಜಿಯ ಆಟೋ ನಿಲ್ದಾಣವನ್ನು ಇದೇ ಸಂದರ್ಭದಲ್ಲೂ ಹೆಚ್‌ಡಿಕೆ ಉದ್ಘಾಟಿಸಿದರು. ಇದನ್ನೂ ಓದಿ: ಎಪಿಎಲ್‌ಗೆ ಬದಲಾದ ಅರ್ಹ ಬಿಪಿಎಲ್ ಕಾರ್ಡ್‌ದಾರರಿಗೆ ಗುಡ್‌ನ್ಯೂಸ್; ದಾಖಲೆ ಇದ್ರೆ 45 ದಿನದೊಳಗೆ ಮತ್ತೆ ಬಿಪಿಎಲ್ ಕಾರ್ಡ್ ಭಾಗ್ಯ

    ಮಾಜಿ ಪ್ರಧಾನಿಗಳಾದ ಹೆಚ್.ಡಿ ದೇವೇಗೌಡರು ಹಾಗೂ ಕೇಂದ್ರ ಸಚಿವರ ಸಂಸತ್ ಪ್ರದೇಶಾಭಿವೃದ್ಧಿ ನಿಧಿಯಿಂದ ಈ ಆಟೋ ನಿಲ್ದಾಣ ನಿರ್ಮಾಣ ಮಾಡಿದ್ದೇವೆ. ಇದು ಸುಸಜ್ಜಿತ, ವಿಶಾಲ ಆಟೋ ನಿಲ್ದಾಣ ಆಗಿದ್ದು, ಆಟೋ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಇಲ್ಲಿ ಸುಸಜ್ಜಿತ ಆಟೋ ನಿಲ್ದಾಣ ಬೇಕು ಎನ್ನುವುದು ಬಹಳ ದಿನಗಳ ಬೇಡಿಕೆ ಆಗಿತ್ತು. ಆ ಬೇಡಿಕೆ ಈಡೇರಿಸುವ ಕೆಲಸ ಆಗಿದೆ. ಅಲ್ಪ ಕಾಲದಲ್ಲಿಯೇ ನಿಲ್ದಾಣ ನಿರ್ಮಾಣ ಆಗಿದೆ ಎಂದರು.

    ನಗರದಲ್ಲಿ ಆಟೋ ವ್ಯವಸ್ಥೆ ಜನತೆಯ ಸಂಚಾರಕ್ಕೆ ಬಹಳ ಅನುಕೂಲವಾಗಿದೆ. ಆದರೆ, ಆಟೋ ಚಾಲಕರು ಮಳೆ, ಬಿಸಿಲಿನಲ್ಲಿ ಕಷ್ಟ ಅನುಭವಿಸುತ್ತಿದ್ದರು. ನಮಗೊಂದು ಸುಸಜ್ಜಿತ ನಿಲ್ದಾಣ ಮಾಡಿಕೊಡಿ ಎಂದು ಕೇಳಿದ್ದರು. ತಕ್ಷಣವೇ ಅದಕ್ಕೆ ಕ್ರಮ ವಹಿಸಿದ್ದೇವೆ. ದೇವೇಗೌಡರ ಸಂಸತ್ ನಿಧಿ ಹಾಗೂ ನನ್ನ ಪಾಲಿನ ಸಂಸತ್ ನಿಧಿಯ ಅನುದಾನದಿಂದ ಕಾಮಗಾರಿ ಕೈಗೆತ್ತಿಗೊಂಡಿದ್ದೆವು. ಈ ಸಂದರ್ಭದಲ್ಲಿ ಅನುದಾನ ನೀಡಿದ ದೇವೇಗೌಡರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.

  • 100 ದಿನಗಳ ಬಳಿಕ ಮಂಡ್ಯಕ್ಕೆ ಕುಮಾರಸ್ವಾಮಿ

    100 ದಿನಗಳ ಬಳಿಕ ಮಂಡ್ಯಕ್ಕೆ ಕುಮಾರಸ್ವಾಮಿ

    ಮಂಡ್ಯ: ಆರೋಗ್ಯದಲ್ಲಿ ಆದ ಏರುಪೇರಿನಿಂದ ವಿಶ್ರಾಂತಿ ಕಡೆಗೆ ಜಾರಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಇಂದು ಅವರ ಸ್ವಕ್ಷೇತ್ರವಾದ ಮಂಡ್ಯಗೆ (Mandya) ಬರೋಬ್ಬರಿ 100 ದಿನಗಳ ಬಳಿಕ ಇಂದು ಬರಲಿದ್ದಾರೆ.

    ಇಂದು ಮಂಡ್ಯದ ಪೇಟೆ ಬೀದಿಯಲ್ಲಿ ನಿರ್ಮಾಣವಾಗಿರುವ ಜಯಚಾಮರಾಜೇಂದ್ರ ಒಡೆಯರ್ ಮಾರುಕಟ್ಟೆಯ ಉದ್ಘಾಟನೆಗೆ ಹೆಚ್.ಡಿ.ಕುಮಾರಸ್ವಾಮಿ ಅವರು ಆಗಮಿಸಲಿದ್ದಾರೆ. ಮೂರು ತಿಂಗಳ ಹಿಂದೆ ಹೆಚ್‌ಡಿಕೆ ಮಂಡ್ಯದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಿಶಾ ಸಭೆಯನ್ನು ನಡೆಸಿದ್ದರು. ಆದಾದ ಬಳಿಕ ಅವರಿಗೆ ಆರೋಗ್ಯ ಸಮಸ್ಯೆಗಳು ಎದುರಾಗಿದ್ದವು. ಇದನ್ನೂ ಓದಿ: ಖ್ಯಾತ ಗಾಯಕಿ ಜೊತೆ 2ನೇ ಮದ್ವೆಗೆ ಸಜ್ಜಾದ ರಘು ದೀಕ್ಷಿತ್;‌ ಅಕ್ಟೋಬರ್ ಅಂತ್ಯದಲ್ಲೇ ಮದುವೆ!

    ಹೀಗಾಗಿ ಕುಮಾರಸ್ವಾಮಿ ಅವರು ವಿಶ್ರಾಂತಿ ಕಡೆಗೆ ಜಾರಿದ್ದರು. ಈ ವೇಳೆ ಹೆಚ್‌ಡಿಕೆ ಅವರ ದಿಢೀರ್ ತೂಕ ಇಳಿಕೆ, ಸೊರಗಿದ ದೇಹ ಕಂಡು ಕಾರ್ಯಕರ್ತರಲ್ಲಿ ಆತಂಕ ಮೂಡಿದ್ದವು. ಇದೀಗ ಆರೋಗ್ಯ ಸುಧಾರಿಸಿರುವ ಬೆನ್ನಲ್ಲೇ ಇಂದು 100 ದಿನಗಳ ಬಳಿಕ ಕುಮಾರಸ್ವಾಮಿ ಮಂಡ್ಯಗೆ ಆಗಮಿಸುತ್ತಿದ್ದು, ಜೆಡಿಎಸ್ ಕಾರ್ಯಕರ್ತರು, ಕುಮಾರಸ್ವಾಮಿ ಅಭಿಮಾನಿಗಳು ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಭಾರತ ಇನ್ಮುಂದೆ ರಷ್ಯಾದಿಂದ ತೈಲ ಖರೀದಿಸಲ್ಲ, ಮೋದಿ ನನಗೆ ಭರವಸೆ ನೀಡಿದ್ದಾರೆ: ಟ್ರಂಪ್‌

  • Mandya | 60 ವರ್ಷದ ಹಿಂದೂ ಸ್ಮಶಾನ ಈಗ ಮುಸ್ಲಿಂ ಮಕಾನ್

    Mandya | 60 ವರ್ಷದ ಹಿಂದೂ ಸ್ಮಶಾನ ಈಗ ಮುಸ್ಲಿಂ ಮಕಾನ್

    – ಗ್ರಾಮಸ್ಥರಿಂದ ಪ್ರತಿಭಟನೆ

    ಮಂಡ್ಯ: 60 ವರ್ಷಗಳಿಂದ ಸರ್ಕಾರಿ ಸ್ಮಶಾನವಾಗಿದ್ದ (Graveyard) ಜಾಗವನ್ನು ಮುಸ್ಲಿಂ ಮಕಾನ್ ಮಾಡಿದ ಹಿನ್ನೆಲೆ ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಿರುವ ಘಟನೆ ಮಂಡ್ಯದ (Mandya) ಹೊಸಬೂದನೂರು (Hosabudanur) ಗ್ರಾಮದಲ್ಲಿ ನಡೆದಿದೆ.

    ಮಂಡ್ಯದ ಹೊಸಬೂದನೂರು ಗ್ರಾಮದಲ್ಲಿ ಕಳೆದ 1963ರಿಂದ 2017ರವರೆಗೆ ಸರ್ವೇ ನಂಬರ್ 313ರಲ್ಲಿ 1 ಎಕರೆ 13 ಗುಂಟೆ ಜಾಗದಲ್ಲಿ ಹಿಂದೂಗಳಿಗಾಗಿ ಸ್ಮಶಾನ ಇತ್ತು. ಆದರೆ 2017ರ ಬಳಿಕ ವಕ್ಫ್ ಬೋರ್ಡ್ ಆಸ್ತಿ ಇದಾಗಿದ್ದು, ಈ ಜಾಗ ಇದೀಗ ಮುಸ್ಲಿಂ ಸಮುದಾಯದ ಮಕಾನ್ (ಸ್ಮಶಾನ) ಆಗಿದೆ. ಇದನ್ನೂ ಓದಿ: ಕೊಪ್ಪಳ | KPCC ಕಾರ್ಮಿಕ ವಿಭಾಗದ ಕಾರ್ಯದರ್ಶಿ ಮೇಲೆ ಹಲ್ಲೆ – ಪಿಎಸ್‌ಐ ಸಸ್ಪೆಂಡ್

    ವಿಶೇಷ ಅಂದ್ರೆ ಈ ಊರಿನಲ್ಲಿ ಒಂದೇ ಒಂದು ಮುಸ್ಲಿಂ ಸಮುದಾಯದವರ ಮನೆ ಇಲ್ಲ. ಹೀಗಿರುವಾಗ ಮುಸ್ಲಿಂ ಸಮುದಾಯಕ್ಕೆ ಹಿಂದೂ ಸ್ಮಶಾನವನ್ನು ಬಿಟ್ಟುಕೊಡಲಾಗಿದೆ. ಇದೀಗ ಈ ಊರಿನಲ್ಲಿ ಹಿಂದೂಗಳು ಸಾವನ್ನಪ್ಪಿದರೆ ಹೂಳಲು ಸ್ಮಶಾನ ಇಲ್ಲದಂತೆ ಆಗಿದೆ. ಈ ಬಗ್ಗೆ ಸಚಿವರಿಗೆ, ಜಿಲ್ಲಾಡಳಿತಕ್ಕೆ, ಶಾಸಕರಿಗೆ ಹೇಳಿದ ವೇಳೆ ಇರುವ ಜಾಗದಲ್ಲಿ 24 ಗುಂಟೆ ಜಾಗವನ್ನು ಹಿಂದೂಗಳ ಸ್ಮಶಾನಕ್ಕಾಗಿ ಬಿಟ್ಟುಕೊಡಲಾಗಿತ್ತು. ಇದನ್ನೂ ಓದಿ: ಅಮೆರಿಕದ ರಹಸ್ಯ ದಾಖಲೆಗಳ ಸಂಗ್ರಹ ಆರೋಪ – ಭಾರತ ಮೂಲದ ವಿದೇಶಾಂಗ ನೀತಿ ತಜ್ಞ ಆಶ್ಲೇ ಟೆಲ್ಲಿಸ್ ಅರೆಸ್ಟ್‌

    ಇದೀಗ ಮತ್ತೆ ಆ ಜಾಗದಲ್ಲಿ ಅಂತ್ಯ ಸಂಸ್ಕಾರಕ್ಕೆ ತಡೆ ಹಿಡಿಯಲಾಗಿದೆ. ಜೊತೆಗೆ ಗ್ರಾಮ ಪಂಚಾಯ್ತಿಯಿಂದ ಸ್ಮಶಾನ ಅಭಿವೃದ್ಧಿಗೆ ತಹಶೀಲ್ದಾರ್ ತಡೆ ನೀಡಿದ್ದಾರೆ. ಹೀಗಾಗಿ ಇದೀಗ ಹೊಸಬೂದನೂರು ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈಗ ಮುಸ್ಲಿಂ ಮಕಾನ್ ಮಾಡಿರುವ ಹಿಂದೂ ಸ್ಮಶಾನವನ್ನು ವಾಪಸ್ ಹಿಂದೂಗಳಿಗೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿಯಿಂದ ಎಣ್ಣೆ ಪಾರ್ಟಿ – ವೀಡಿಯೋ ವೈರಲ್

  • ಮಂಡ್ಯ | ಹೆಣ್ಣು ಭ್ರೂಣ ಹತ್ಯೆಗೆ ಕಡಿವಾಣ – ಲಿಂಗಾನುಪಾತ ಏರಿಕೆ

    ಮಂಡ್ಯ | ಹೆಣ್ಣು ಭ್ರೂಣ ಹತ್ಯೆಗೆ ಕಡಿವಾಣ – ಲಿಂಗಾನುಪಾತ ಏರಿಕೆ

    ಮಂಡ್ಯ: ಜಿಲ್ಲೆಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದ್ದ ಭ್ರೂಣ ಹತ್ಯೆಗೆ ಆರೋಗ್ಯ ಇಲಾಖೆ ಕಡಿವಾಣ ಹಾಕಿದ ನಂತರ ಇದೀಗ ಲಿಂಗಾನುಪಾತದಲ್ಲಿ (Sex Ratio) ಏರಿಕೆಯಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಳ ಕಂಡುಬಂದಿದೆ.

    ಮಂಡ್ಯ, ಪಾಂಡವಪುರ, ನಾಗಮಂಗಲದಲ್ಲಿ ಸರಣಿ ಭ್ರೂಣ ಹತ್ಯೆ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣ ಮಂಡ್ಯ ಜಿಲ್ಲೆಯನ್ನು ರಾಜ್ಯದ ಮುಂದೆ ತಲೆ ತಗ್ಗಿಸುವಂತೆ ಮಾಡಿತ್ತು. ಪಾಪಿಗಳು ಹಣದಾಸೆಗೆ ಸಾವಿರಾರು ಹೆಣ್ಯ ಭ್ರೂಣಗಳ ಮಾರಣಹೋಮ ನಡೆಸಿದ್ದರು. ಇದರಿಂದ ಜಿಲ್ಲೆಯ ಲಿಂಗಾನುಪಾತ ಇಳಿಕೆಯಾಗಿತ್ತು. ಬಳಿಕ ದಿಟ್ಟ ಕ್ರಮಕ್ಕೆ ಮುಂದಾದ ಆರೋಗ್ಯ ಇಲಾಖೆ ದಂಧೆಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದೆ.ಇದನ್ನೂ ಓದಿ: ಬೆಂಗಳೂರು, ಶಿವಮೊಗ್ಗ ಸೇರಿ ರಾಜ್ಯದ ಹಲವೆಡೆ ʻಲೋಕಾʼ ದಾಳಿ; ಭ್ರಷ್ಟ ಅಧಿಕಾರಿಗಳಿಗೆ ನಡುಕ

    ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ದಂಧೆಯಿಂದ ಜಿಲ್ಲೆಯಲ್ಲಿ ಲಿಂಗಾನುಪಾತ ಇಳಿಕೆಯಾಗಿತ್ತು. ಆದರೆ ಇದೀಗ ಆರೋಗ್ಯ ಇಲಾಖೆ ದಿಟ್ಟ ಕ್ರಮಕ್ಕೆ ಲಿಂಗಾನುಪಾತ ಏರಿಕೆ ಆಗಿದೆ. ಕಳೆದ ವರ್ಷ ಪ್ರತಿ ಗಂಡಿಗೆ 869 ಇದ್ದ ಹೆಣ್ಣು ಮಕ್ಕಳ ಸಂಖ್ಯೆ ಈ ವರ್ಷ 930ಕ್ಕೆ ಏರಿಕೆ ಕಂಡಿದೆ.

    ಜಿಲ್ಲಾ ಆರೋಗ್ಯ ಇಲಾಖೆ ಡಿಎಚ್‌ಓ ಡಾ.ಮೋಹನ್ ನೇತೃತ್ವದಲ್ಲಿ ಕಾರ್ಯತಂತ್ರಗಳನ್ನ ರೂಪಿಸಿ, ಭ್ರೂಣ ಹತ್ಯೆ ದಂಧೆಗೆ ಬ್ರೇಕ್ ಹಾಕಲಾಗಿತ್ತು. ಮೊದಲಿಗೆ ಖಾಸಗಿ ಆಸ್ಪತ್ರೆ, ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ಹದ್ದಿನ ಕಣ್ಣಿಟ್ಟರು. ಬಳಿಕ ಮೂರು ತಿಂಗಳ ಬಳಿಕ ಸ್ಕ್ಯಾನಿಂಗ್‌ಗೆ ಬರುವ, ಮೊದಲು ಹೆಣ್ಣು ಮಗುವಿಗೆ ಜನ್ಮ ಕೊಟ್ಟ ಗರ್ಭಿಣಿಯರ ಮೇಲೆ ನಿಗಾವಹಿಸಿದರು. ಆರಂಭದಲ್ಲಿ ಹಲವು ಆರೋಪಿಗಳನ್ನ ಬಂಧಿಸಿದ್ದರೂ ಕೂಡ ದಂಧೆ ನಿಂತಿರಲಿಲ್ಲ. ಆಗ ಆರೋಗ್ಯ ಇಲಾಖೆ ಕೈಗೆತ್ತಿಕೊಂಡದ್ದು ಡೆಕಾಯ್ ಆಪರೇಷನ್. ಭ್ರೂಣ ಲಿಂಗ ದಂಧೆ ಪತ್ತೆ ಹಚ್ಚಲು ಇಲಾಖೆಯೇ ಓರ್ವ ಗರ್ಭಿಣಿಯನ್ನು ನೇಮಕ ಮಾಡಿದ್ರು. ಆ ಗರ್ಭಿಣಿ ಮೂಲಕವೇ ಆರೋಪಿಗಳ ಹೆಡೆಮುರಿ ಕಟ್ಟಿದ್ರು. ಆ ಮೂಲಕ ದಂಧೆಗೆ ಸಂಪೂರ್ಣ ಕಡಿವಾಣ ಹಾಕಿದ್ರು. ಇದರ ಪರಿಣಾಮ ಲಿಂಗಾನುಪಾತ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿತು.

    ಜಿಲ್ಲೆಗೆ ಕಳಂಕ ತಂದಿದ್ದ ಭ್ರೂಣ ಲಿಂಗ ಪತ್ತೆ ದಂಧೆಗೆ ಬ್ರೇಕ್ ಹಾಕುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ.ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆ ಗುಂಡಿ, ಕಸದ ಅದ್ವಾನ – ರಾಜ್ಯ ಸರ್ಕಾರದ ವಿರುದ್ಧ ಉದ್ಯಮಿ ಕಿರಣ್ ಮಜುಂದಾರ್ ಶಾ ಕಿಡಿ