Tag: ಮಂಡೇಲಾ

  • ಹೀರೋ ಆದ ಡೈರೆಕ್ಟರ್ ಸ್ಮೈಲ್ ಶ್ರೀನು

    ಹೀರೋ ಆದ ಡೈರೆಕ್ಟರ್ ಸ್ಮೈಲ್ ಶ್ರೀನು

    ಶಸ್ವಿ ಚಿತ್ರಗಳಾದ  ಓ ಮೈ ಲವ್, 18 ಟು 25  ಬಳ್ಳಾರಿ ದರ್ಬಾರ್ ಅಲ್ಲದೆ ತೆಲುಗಿನಲ್ಲೂ ಪ್ರತಿಭಾವಂತ  ನಿರ್ದೇಶಕನಾಗಿ  ಗುರುತಿಸಿಕೊಂಡಿರುವ ನಾರಿ ಶ್ರೀನಿವಾಸ್ (ಸ್ಮೈಲ್ ಶ್ರೀನು) (Smile Srinu) ಇದೀಗ ಹೀರೋ ಆಗುತ್ತಿದ್ದಾರೆ. ಈ ಕುರಿತಂತೆ ಮಾತನಾಡಿದ ಶ್ರೀನು,  ‘ನಿರ್ದೇಶಕರು ಕಥೆ ತುಂಬಾ ಅದ್ಭುತವಾಗಿ ಮಾಡಿಕೊಂಡಿದ್ದಾರೆ. ಎಲ್ಲಾ ಪಾತ್ರಗಳ ಜೊತೆ ನಾಯಕನ ಪಾತ್ರ ತುಂಬಾ ಚೆನ್ನಾಗಿದೆ. ನಟನಾಗಿ ಈ ಒಂದು ಪಾತ್ರ ಮಾಡಿದರೆ ಸಾಕು ಅನ್ನುವ ಹಾಗೆ ಈ ನಾಯಕನ ಪಾತ್ರ ಇದೆ. ಒಬ್ಬ ನಟನಾಗಿ ನಿರೂಪಿಸಲು ಏನೆಲ್ಲಾ ಭಾವನೆಗಳು ಬೇಕೋ ಅದೆಲ್ಲವೂ ಈ ಚಿತ್ರದಲ್ಲಿದೆ. ಹಾಗಾಗಿ ನಟಿಸಲು ಒಪ್ಪಿಕೊಂಡೆ’ ಅಂತಾರೆ.

    ಶ್ರೀಧರ್ ಪೂರ್ವಜಿತ್ ಅವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು. ಆ ಚಿತ್ರದ ಹೆಸರು ಮಂಡೇಲಾ (Mandela). ಇದೊಂದು ವಿಭಿನ್ನ  ಪ್ರಯೋಗದ  ಚಿತ್ರ ಎಂದೂ ಹೇಳಬಹುದು.  ಸಿನಿಮಾ ಎಂದಮೇಲೆ ಹಲವಾರು ಪಾತ್ರಗಳಿರಬೇಕಲ್ಲವೆ, ಈ ಚಿತ್ರದಲ್ಲೂ ಒಂದಷ್ಟು ಪಾತ್ರಗಳಿವೆ. ಆದರೆ ಪ್ರಮುಖವಾಗಿ ಮೂರು ಪಾತ್ರಗಳ ಮೂಲಕ ನಿರ್ದೇಶಕರು ಕಥೆಯನ್ನು ಹೇಳಹೊರಟಿದ್ದಾರೆ. 1980- 90ರ ದಶಕದಲ್ಲಿನ ಸೂಕ್ಷ್ಮ ಹಾಗೂ ಸುಂದರವಾದ ಭಾವನೆಗಳ  ಸುತ್ತ ನಡೆಯುವ ಕಥೆ ಈ ಚಿತ್ರದಲ್ಲಿದೆ. ಶ್ರೀಲಕ್ಷ್ಮಿ ನರಸಿಂಹ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ನಾಯಕನಾಗಿ ನಾರಿ ಶ್ರೀನಿವಾಸ್ (ಸ್ಮೈಲ್ ಶ್ರೀನು) ನಟಿಸುತ್ತಿದ್ದಾರೆ.

    ಈ ಸಿನಿಮಾ ಹೊರತುಪಡಿಸಿ ಇನ್ನೂ  ಎರಡು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಲು ಒಪ್ಪಿಕೊಂಡಿದ್ದಾರಂತೆ ಸ್ಮೈಲ್ ಶ್ರೀನು.  ಹಾಗೆ ಎರೆಡು ಚಿತ್ರಗಳನ್ನು  ನಿರ್ದೇಶನ ಕೂಡ ಮಾಡಲಿದ್ದಾರಂತೆ. ಮುಂದಿನ ದಿನಗಳಲ್ಲಿ ಈ ಎಲ್ಲ ವಿವರಣೆ ನೀಡುತ್ತೇನೆ ಎಂದು ಸ್ಮೈಲ್ ಮಾಡುತ್ತಾರೆ ನಟ ,ನಿರ್ದೇಶಕ ನಾರಿ ಶ್ರೀನಿವಾಸ್.

    ಚಿತ್ರದಲ್ಲಿ  ಇಬ್ಬರು ನಾಯಕಿಯರು ನಟಿಸುತ್ತಿದ್ದು, ಅವರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಕನ್ನಡದಲ್ಲಿ ಈಗಾಗಲೇ ಬಾ ನಲ್ಲೆ ಮಧುಚಂದ್ರಕೆ, ಬೆಳದಿಂಗಳ ಬಾಲೆಯಂಥ ಚಿತ್ರಗಳು ಬಂದು ಹೋಗಿವೆ. ಆಗಿನಿಂದಲೂ ಹೊಸಥರದ ಕಂಟೆಂಟ್ ಇರುವ ಕಥೆಗಳನ್ನು ನಮ್ಮ ಜನ  ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಅದೇ ರೀತಿ ನಮ್ಮ ಹೊಸ ಈ ಪ್ರಯತ್ನವನ್ನೂ ಪ್ರೇಕ್ಷಕರು ಕೈ ಹಿಡಿಯುತ್ತಾರೆ ಎಂಬ ಭರವಸೆಯನ್ನು ವ್ಯಕ್ತ ಪಡಿಸುತ್ತಾರೆ ಚಿತ್ರದ ನಾಯಕ ಸ್ಮೈಲ್ ಶ್ರೀನು.  ಕನ್ನಡ, ತೆಲುಗು, ತಮಿಳು ಸೇರಿ ಮೂರು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಪಕ್ಕಾ ಕಂಟೆಂಟ್ ಬೇಸ್ ಸಿನಿಮಾ ಇದಾಗಲಿದೆ.  ಬರುವ ಜುಲೈ 2 ಅಥವಾ 3ನೇ ವಾರ ಈ  ಚಿತ್ರ ಪ್ರಾರಂಭವಾಗಲಿದೆ.

    ನಮಗೆ ಫೇಮಸ್ ಆಗಿರೋ ಮ್ಯೂಸಿಕ್ ಡೈರೆಕ್ಟರ್ ಬೇಡ. ಫೇಮಸ್ ಆಗೋವಂಥ ಮ್ಯೂಸಿಕ್ ಕಂಪೋಜ್  ಮಾಡುವ ಸಂಗೀತ ನಿರ್ದೇಶಕರನ್ನ ಹುಡುಕುತ್ತಿದ್ದೇವೆ.  ಸಂಬಂಧಗಳ‌ ವ್ಯಾಲ್ಯೂ ಚೆನ್ನಾಗಿರಬೇಕು. ‌‌ಇಲ್ಲಿ ಯಾರೂ ಶತ್ರುಗಳಿಲ್ಲ ಅಂತ ಹೇಳ ಹೊರಟಿದ್ದೇವೆ. ನಾವು ತಪ್ಪು ಮಾಡಿದಾಗ ಪ್ರಪಂಚ ನಮ್ಮನ್ನು ಹೇಗೆ ನೋಡುತ್ತೆ  ಅಂತ ಸಮಯದಲ್ಲಿ ಸಮಾಜ ನಮ್ಮ ಜೊತೆ ಹೇಗೆ ನೆಡೆದುಕೊಳ್ಳುತ್ತೆ ಅನ್ನುವುದರ ಜೊತೆಗೆ ಇನ್ನೂ ಹಲವಾರು ಸೂಕ್ಷ್ಮ ವಿಷಯಗಳನ್ನು ಈ ಚಿತ್ರದಲ್ಲಿ ಹೇಳಲಿದ್ದೇವೆಂದು ಅಂತಾರೆ ನಿರ್ದೇಶಕ ಶ್ರೀಧರ್ ಪೂರ್ವಜಿತ್. ಮಂಡೇಲಾದ ಸ್ಕ್ರಿಪ್ಟ್ ಅಂತಿಮ ಹಂತದಲ್ಲಿದೆ. ಹಂತ ಹಂತವಾಗಿ ಎಲ್ಲವನ್ನೂ ತಿಳಿಸುತ್ತೇವೆ’ ಎನ್ನುತ್ತಾರೆ ನಿರ್ದೇಶಕ ಶ್ರೀಧರ್ ಪೂರ್ವಜಿತ್.