Tag: ಮಂಚ

  • ಹೆರಿಗೆಗಾಗಿ ಗರ್ಭಿಣಿಯನ್ನು ಮಂಚದ ಮೇಲೆ ಮಲಗಿಸಿ ಹೊತ್ತೊಯ್ದ ಗ್ರಾಮಸ್ಥರು!

    ಹೆರಿಗೆಗಾಗಿ ಗರ್ಭಿಣಿಯನ್ನು ಮಂಚದ ಮೇಲೆ ಮಲಗಿಸಿ ಹೊತ್ತೊಯ್ದ ಗ್ರಾಮಸ್ಥರು!

    ರಾಂಚಿ: ರಸ್ತೆಗಳು ಹದಗೆಟ್ಟ ಪರಿಣಾಮ ಗ್ರಾಮಸ್ಥರು ತುಂಬು ಗರ್ಭಿಣಿಯನ್ನು ಮಂಚದ ಮೇಲೆ ಮಲಗಿಸಿ ಅದನ್ನು ತಮ್ಮ ಹೆಗಲಲ್ಲಿ ಹೊತ್ತು ಆಸ್ಪತ್ರೆಗೆ ನಡೆದ ವಿಲಕ್ಷಣ ಘಟನೆಯೊಂದು ಜಾರ್ಖಂಡ್ ನಲ್ಲಿ ನಡೆದಿದೆ.

    ಗುಡಿಯಾ ದೇವಿ ತುಂಬು ಗರ್ಭಿಣಿ. ಈಕೆಗೆ ಸೋಮವಾರ ಹೆರಿಗೆ ನೋವು ಕಾಣಿಸಿಕೊಂಡಿದೆ. ಆದರೆ ಈಕೆಯಿದ್ದ ಪ್ರದೇಶದಲ್ಲಿ ರಸ್ತೆ ವ್ಯವಸ್ಥೆ ಸರಿಯಾಗಿಲ್ಲ. ಅಲ್ಲದೆ ಹತ್ತಿರ ಯಾವುದೇ ಆಸ್ಪತ್ರೆಯೂ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕೆಯನ್ನು ಮಂಚದ ಮೇಲೆ ಮಲಗಿಸಿದ್ದಾರೆ. ನಂತರ ಮಂಚವನ್ನು ಹೊತ್ತು ಗ್ರಾಮಸ್ಥರು ಕೆಲ ದೂರ ಸಾಗಿದ್ದಾರೆ. ಸೂಕ್ತವಾದ ರಸ್ತೆ ಸಿಕ್ಕಿದ ಬಳಿಕ ಗುಡಿಯಾ ದೇವಿಯವರನ್ನು ಕಾರಿನ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

    ಈ ಸಂಬಂಧ ಸಮಾಜ ಸೇವಕ ಭವೇಶ್ ಕುಮಾರ್ ಹೆಂಬ್ರಾಂ ಮಾತನಾಡಿ, ಗ್ರಾಮಕ್ಕೆ ರಸ್ತೆ ನಿರ್ಮಾಣಕ್ಕೆ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಹಲವು ಬಾರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅದರಿಂದ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಜಾರ್ಖಂಡ್‍ನ 6 ಗ್ರಾಮಗಳಿಗೆ ಮೂಲ ಸೌಕರ್ಯಗಳ ಕೊರತೆಯಿದೆ ಎಂದರು.

    ಗ್ರಾಮದಲ್ಲಿ ಸರಿಯಾದ ರಸ್ತೆ ವ್ಯವಸ್ಥೆ ಹಾಗೂ ಆಸ್ಪತ್ರೆ ಕೂಡ ಇಲ್ಲ. ಹೀಗಾಗಿ ಈ ಗ್ರಾಮಗಳಲ್ಲಿ ಜನ ವೈದ್ಯಕೀಯ ಚಿಕಿತ್ಸೆ ಪಡೆಯಲು ಜನ ಹರಸಾಹಸಪಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಅವರು ಅಳಲು ತೋಡಿಕೊಂಡರು.

  • 500ರೂ. ಪಿಂಚಣಿ ಹಣಕ್ಕಾಗಿ ವೃದ್ಧ ತಾಯಿಯನ್ನ ಮಂಚದ ಸಮೇತ ಬ್ಯಾಂಕಿಗೆ ಕರೆತಂದ ಮಗಳು

    500ರೂ. ಪಿಂಚಣಿ ಹಣಕ್ಕಾಗಿ ವೃದ್ಧ ತಾಯಿಯನ್ನ ಮಂಚದ ಸಮೇತ ಬ್ಯಾಂಕಿಗೆ ಕರೆತಂದ ಮಗಳು

    – ವಿಡಿಯೋ ವೈರಲ್

    ಭುವನೇಶ್ವರ್: ಪಿಂಚಣಿ ಹಣ ಪಡೆಯಲು ವೃದ್ಧರು ಎಷ್ಟೆಲ್ಲ ಕಷ್ಟಪಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗೆಯೇ ಒಡಿಶಾದಲ್ಲಿ ಕೂಡ ತಾಯಿಯ ಪಿಂಚಣಿ ಹಣಕ್ಕಾಗಿ ಮಗಳೊಬ್ಬಳು ಕಷ್ಟಪಟ್ಟ ಮನಕಲಕುವ ಘಟನೆ ನಡೆದಿದೆ.

    ಹೌದು. ತನ್ನ 100 ವರ್ಷ ವಯಸ್ಸಿನ ವೃದ್ಧ ತಾಯಿಯ ಪಿಂಚಣಿ ಹಣಕ್ಕಾಗಿ ಮಗಳು ಮಂಚದ ಸಮೇತ ಆಕೆಯನ್ನು ಬ್ಯಾಂಕಿಗೆ ಕರೆತಂದ ಘಟನೆಯೊಂದು ನಡೆದಿದೆ. ಮಗಳು ತನ್ನ ತಾಯಿಯನ್ನು ಮಂಚದ ಸಮೇತ ಕರೆದೊಯ್ಯುವುದನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    27 ನಿಮಿಷದ ವಿಡಿಯೋದಲ್ಲಿ 60 ವರ್ಷದ ಮಹಿಳೆ ಬಾರ್ಗಾಂವ್ ಗ್ರಾಮದಲ್ಲಿ ತನ್ನ ವೃದ್ಧ ತಾಯಿಯನ್ನು ಮಂಚದ ಮೇಲೆ ಮಲಗಿಸಿಕೊಂಡು ಎಳೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಹೀಗೆ ತನ್ನ ತಾಯಿಯನ್ನು ಮಗಳು ಕರೆದುಕೊಂಡು ಹೋಗುತ್ತಿರುವುದು ಉತ್ಕಲ್‍ನ ಗ್ರಾಮೀಣ ಬ್ಯಾಂಕಿಗೆ.

    ಪಿಂಚಣಿ ಹಣವನ್ನು ಡ್ರಾ ಮಾಡಲು ಆಕೆಯೇ ಬರಬೇಕು ಎಂದು ಬ್ಯಾಂಕ್ ಸಿಬ್ಬಂದಿ ಸೂಚನೆ ನೀಡಿದ್ದಾರೆ. ಆದರೆ ತಾಯಿಗೆ ಎದ್ದು ನಡೆಯಲು ಸಾಧ್ಯವಿಲ್ಲ. ಹೀಗಾಗಿ ಅವರು ಬ್ಯಾಂಕಿಗೆ ಬರಲು ಆಗುತ್ತಿಲ್ಲ ಎಂದು ಹೇಳಿದರೂ ಸಿಬ್ಬಂದಿ ಕೇಳುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ವೃದ್ಧೆಯ ಮಗಳು ಗುಂಜ ದೇವಿ ಬೇರೆ ದಾರಿಯಿಲ್ಲದೆ ಈ ರೀತಿಯಾಗಿ ಬ್ಯಾಂಕಿಗೆ ಕರೆತಂದಿದ್ದಾರೆ.

    ಜೂನ್ 10 ರಂದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ಗುಂಜ, ನನ್ನ ತಾಯಿಯ ಹಣವನ್ನು ಡ್ರಾ ಮಾಡಿಕೊಳ್ಳಲು ನನಗೆ ಅವಕಾಶ ನೀಡಿ ಎಂದು ಬ್ಯಾಂಕ್ ಮ್ಯಾನೇಜರ್ ಅವರನ್ನು ಪರಿಪರಿಯಾಗಿ ಬೇಡಿಕೊಂಡೆ. ಯಾಕೆಂದರೆ ಆಕೆಗೆ ಎದ್ದು ನಡೆಯಲು ಆಗುತ್ತಿಲ್ಲ. ಹೀಗಾಗಿ ಆಕೆ ಬ್ಯಾಂಕಿಗೆ ಬಂದು ಹಣ ಡ್ರಾ ಮಾಡಲು ಸಾಧ್ಯವಿಲ್ಲ. ಸದ್ಯ ನಮಗೆ ಹಣದ ಅವಶ್ಯಕತೆ ಇದೆ. ಹೀಗಾಗಿ ದಯಮಾಡಿ ಹಣ ಡ್ರಾ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡೆ. ಆದರೆ ಬ್ಯಾಂಕ್ ಮ್ಯಾನೇಜರ್ ಇದಕ್ಕೆ ಸುತರಾಂ ಒಪ್ಪಲಿಲ್ಲ. ಬದಲಾಗಿ ಭೌತಿಕ ಪರಿಶೀಲನೆ ನಡೆಸಬೇಕು. ಹೀಗಾಗಿ ಅಗತ್ಯವಾಗಿ ನೀವು ಅವರನ್ನು ಕರೆದುಕೊಂಡು ಬರಲೇಬೇಕು ಎಂದರು. ಆಗ ನಾನು ಹಾಗಾದರೆ ನೀವೇ ಮನೆಗೆ ಬಂದು ಹಣ ನೀಡಿ ಎಂದು ಹೇಳಿದೆ. ಅಲ್ಲದೆ ಅವರು ಮನೆಗೆ ಬರುತ್ತಾರೆ ಎಂದು ಕಾದು ಕುಳಿತೆ ಎಂದು ಬೇಸರ ವ್ಯಕ್ತಪಡಿಸಿದರು.

    ಬ್ಯಾಂಕಿನಿಂದ ಯಾರೊಬ್ಬರೂ ಬಾರದ ನಂತರ ಮತ್ತೆ ಜೂನ್ 8ರಂದು ಬ್ಯಾಂಕಿಗೆ ತೆರಳಿದೆ. ಈ ವೇಳೆ ಬ್ಯಾಂಕ್ ಮ್ಯಾನೇಜರ್ ಅಜಿತ್ ಕುಮಾರ್ ಜೊತೆ ಹಣ ನೀಡುವಂತೆ ವಾಗ್ವಾದಕ್ಕಿಳಿದೆ. ಆ ಬಳಿಕ ಮ್ಯಾನೇಜರ್, ನಾಳೆ ನಮ್ಮ ಸಿಬ್ಬಂದಿ ನಿಮ್ಮ ಮನೆಗೆ ಬರುತ್ತಾರೆ ಎಂದು ಹೇಳಿ ಕಳುಹಿಸಿದರು ಎಂದು ಗುಂಜ ನಡೆದ ಘಟನೆಯನ್ನು ವಿವರಿಸಿದರು.

    ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಪ್ರತಿಕ್ರಿಯಿಸಿ, ನಾನು ಗುಂಜಳ ಬಳಿ ನಾಳೆ ನಮ್ಮ ಸಿಬ್ಬಂದಿ ನಿಮ್ಮ ಮನೆಗೆ ಬರುತ್ತಾರೆ ಎಂದು ಹೇಳಿ ಕಳುಹಿಸಿದ್ದೆ. ಆದರೆ ಬಿಡುವಿಲ್ಲದಷ್ಟು ಕೆಲಸವಿದ್ದಿದ್ದರಿಂದ ಹೋಗಲು ಅಸಾಧ್ಯವಾಯಿತು. ಹೀಗಾಗಿ ಮರುದಿನ ಆಕೆ ಬ್ಯಾಂಕ್ ಓಪನ್ ಆಗುವ ಮೊದಲೇ ತನ್ನ ತಾಯಿಯನ್ನು ಈ ರೀತಿಯಾಗಿ ಕರೆದುಕೊಂಡು ಬಂದಿದ್ದಾರೆ ಎಂದು ತಿಳಿಸಿದ್ದಾರೆ.