Tag: ಮಂಗಳೂರು ವಿಮಾನ ನಿಲ್ದಾಣ

  • ಮಂಗ್ಳೂರಲ್ಲಿ ಇನ್ನೂ ಬಾಂಬ್ ಭೀತಿ- ಇಂಡಿಗೋ ವಿಮಾನಯಾನ ಸಂಸ್ಥೆಗೆ ಬೆದರಿಕೆ ಕರೆ

    ಮಂಗ್ಳೂರಲ್ಲಿ ಇನ್ನೂ ಬಾಂಬ್ ಭೀತಿ- ಇಂಡಿಗೋ ವಿಮಾನಯಾನ ಸಂಸ್ಥೆಗೆ ಬೆದರಿಕೆ ಕರೆ

    ಮಂಗಳೂರು: ವಿಮಾನ ನಿಲ್ದಾಣದ ಆವರಣದಲ್ಲಿ ಪತ್ತೆಯಾದ ಬಾಂಬ್ ನ್ನು ನಿಷ್ಕ್ರಿಯಗೊಳಿಸಲು ಅಧಿಕಾರಿಗಳು ಕೆಂಜಾರು ಮೈದಾನದಲ್ಲಿ ನಿರತರಾಗಿದ್ದಾರೆ. ಇತ್ತ ಮಂಗಳೂರಿನಿಂದ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಬೆದರಿಕೆ ಕರೆಯೊಂದು ಬಂದಿದೆ.

    ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ತಡೆದು ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಮುಂಜಾಗ್ರತ ಕ್ರಮವಾಗಿ ವಿಮಾನದಲ್ಲಿದ್ದ ಎಲ್ಲ 126 ಪ್ರಯಾಣಿಕರನ್ನು ಕೆಳಗಿಳಿಸಿ ವಿಮಾನ ತಪಾಸಣೆಗೆ ಬಾಂಬ್ ಸ್ಕ್ವಾಡ್ ತಂಡ ಮುಂದಾಗಿದೆ. ವಿಮಾನ ಮಂಗಳೂರಿನಿಂದ ಹೈದರಾಬಾದ್ ನತ್ತ ತೆರಳಲು ಸಿದ್ಧಗೊಂಡಾಗ ಇಂಡಿಗೋ ವಿಮಾನಯಾನ ಸಂಸ್ಥೆಗೆ ಬೆದರಿಕೆ ಕರೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಇಂದು ಬೆಳಗ್ಗೆ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಅನುಮಾನಾಸ್ಪದ ಲ್ಯಾಪ್‍ಟಾಪ್ ಬ್ಯಾಗ್ ಪತ್ತೆಯಾಗಿತ್ತು, ಬ್ಯಾಗ್ ಒಳಗಡೆ 10 ಕೆಜಿ ತೂಕವುಳ್ಳ ಸಜೀವ ಬಾಂಬ್ ಇತ್ತು. ಸಿಐಎಸ್‍ಎಫ್ ಸಿಬ್ಬಂದಿ ನಿಲ್ದಾಣದಲ್ಲಿಯ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ ಪತ್ತೆಯಾದ ಬ್ಯಾಗ್ ನ್ನು ಬಾಂಬ್ ನಿಷ್ಕ್ರಿಯ ವಾಹನದಲ್ಲಿ ಇರಿಸಿದ್ದರು. ಕೆಲ ಸಮಯದ ಬಳಿಕ ಬಾಂಬ್ ನ್ನು ಕೆಂಜಾರು ಮೈದಾನದಲ್ಲಿ ನಿಷ್ಕ್ರಿಯಗೊಳಿಸಲು ಮುಂದಾಗಿದ್ದಾರೆ.

  • ಮಂಗಳೂರು ಬಾಂಬ್ ಪ್ರಕರಣ ಶೀಘ್ರವಾಗಿ ಭೇದಿಸುತ್ತೇವೆ: ಬೊಮ್ಮಾಯಿ

    ಮಂಗಳೂರು ಬಾಂಬ್ ಪ್ರಕರಣ ಶೀಘ್ರವಾಗಿ ಭೇದಿಸುತ್ತೇವೆ: ಬೊಮ್ಮಾಯಿ

    ಧಾರವಾಡ/ಹುಬ್ಬಳ್ಳಿ: ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ ಸುಮಾರು 10.15ಕ್ಕೆ ಟಿಕೆಟ್ ಕೌಂಟರ್ ಹತ್ತಿರ ಸ್ಫೋಟಕ ವಸ್ತು ಪತ್ತೆ ಆಗಿದ್ದು, ಬಾಂಬ್ ಇರುವ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಮೊದಲ ಹಂತದ ಇನ್ವೆಸ್ಟಿಗೇಷನ್ ಆಗಿದೆ. ಈ ಪ್ರಕರಣವನ್ನು ಶೀಘ್ರದಲ್ಲೇ ಭೇದಿಸುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಹೇಳಿದರು.

    ನಗರದಲ್ಲಿಂದು ಮಂಗಳೂರು ಬಾಂಬ್ ಪ್ರಕರಣ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈ ರೀತಿ ಭಯ ಹುಟ್ಟಿಸುವ ಪ್ರಕ್ರಿಯೆ ಮೇಲಿಂದ ಮೇಲೆ ನಡೆಯುತ್ತಿವೆ. ಈ ರೀತಿಯ ಪ್ರಯತ್ನ ಹತ್ತಿಕ್ಕಲು ನಾವು ಕಟ್ಟೆಚ್ಚರ ವಹಿಸಿದ್ದೇವೆ ಎಂದರು.

    ಮಂಗಳೂರು, ಬೆಂಗಳೂರು, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಒಟ್ಟಾರೆಯಾಗಿ ಇದು ದೇಶದ್ರೋಹದ ಕೆಲಸವಾಗಿದೆ ಎಂದರು.

  • ಮಂಗ್ಳೂರಲ್ಲಿ ಪತ್ತೆಯಾಗಿದ್ದು 10 ಕೆಜಿ ತೂಕದ ಸಜೀವ ಬಾಂಬ್

    ಮಂಗ್ಳೂರಲ್ಲಿ ಪತ್ತೆಯಾಗಿದ್ದು 10 ಕೆಜಿ ತೂಕದ ಸಜೀವ ಬಾಂಬ್

    -ಸ್ಫೋಟವಾಗಿದ್ರೆ 500 ಮೀಟರ್ ಹಾನಿ ಸಾಧ್ಯತೆ
    -ಉಡುಪಿಯಲ್ಲಿಯೂ ಕಟ್ಟೆಚ್ಚರ

    ಮಂಗಳೂರು: ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 10 ಕೆಜಿ ತೂಕದ ಬಾಂಬ್ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದು ವೇಳೆ 10 ಕೆಜಿ ತೂಕದ ಬಾಂಬ್ ಸ್ಫೋಟವಾಗಿದ್ರೆ ಸುಮಾರು 500 ಮೀಟರ್ ಸುತ್ತಲಿನ ವ್ಯಾಪ್ತಿಯಲ್ಲಿ ಹಾನಿಯಾಗುವ ಸಾಧ್ಯತೆ ಇತ್ತು.

    ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಅನುಮಾನಾಸ್ಪದವಾದ ಲ್ಯಾಪ್‍ಟಾಪ್ ಬ್ಯಾಗ್ ಪತ್ತೆಯಾಗಿತ್ತು. ಸಂಶಯದ ಮೇಲೆ ಬ್ಯಾಗ್ ಪರಿಶೀಲನೆ ನಡೆಸಿದಾಗ ಜೀವಂತ ಬಾಂಬ್ ಪತ್ತೆಯಾಗಿತ್ತು. ಕೂಡಲೇ ಎಚ್ಚೆತ್ತ ಸಿಬ್ಬಂದಿ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ, ನಿಲ್ದಾಣದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ. ಇತ್ತ ಸಿಐಎಸ್‍ಎಫ್ ಸಿಬ್ಬಂದಿ ಸಜೀವ್ ಬಾಂಬ್ ನ್ನು ನಿಲ್ದಾಣದಿಂದ ಹೊರ ತಂದು ನಿಷ್ಕ್ರಿಯ ವಾಹನದಲ್ಲಿ ಇರಿಸಲಾಗಿದೆ.

    ಆಟೋದಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ಬ್ಯಾಗ್ ನ್ನು ಟಿಕೆಟ್ ಕೌಂಟರ್ ಬಳಿ ಬಿಟ್ಟು ಹೋಗಿರುವ ಬಗ್ಗೆ ಮಾಹಿತಿಗಳೂ ಲಭ್ಯವಾಗುತ್ತಿದೆ. ಬೆಂಗಳೂರಿನ ಮಾದರಿಯಲ್ಲಿಯೇ ಮಂಗಳೂರಿನಲ್ಲಿ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

    ಇತ್ತ ಮಂಗಳೂರಿನಿಂದ ಉಡುಪಿಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿ ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ, ನಗರದ ಪ್ರಮುಖ ರಸ್ತೆಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಶಂಕಿತ ಮಂಗಳೂರಿನಿಂದ ಉಡುಪಿಗೆ ರೈಲ್ವೇ ಮೂಲಕ ಪ್ರಯಾಣ ಬೆಳೆಸಿರುವ ಅನುಮಾನದ ನಿಲ್ದಾಣದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಕೆಲವು ದಿನಗಳ ಹಿಂದ ತಮಿಳುನಾಡಿನ ಪೊಲೀಸ್ ಅಧಿಕಾರಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯ ಇಬ್ಬರು ಯುವಕರನ್ನು ಬಂಧಿಸಲಾಗಿತ್ತು. ಹೀಗಾಗಿ ಉಡುಪಿ ಸೇರಿದಂತೆ ದಕ್ಷಿಣ ಕನ್ನಡದ  ಅಕ್ಕಪಕ್ಕದ ಜಿಲ್ಲೆಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

  • ಮಂಗ್ಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ

    ಮಂಗ್ಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ

    ಮಂಗಳೂರು: ನಗರದ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಅನುಮಾನಾಸ್ಪದವಾದ ಲ್ಯಾಪ್‍ಟಾಪ್ ಬ್ಯಾಗ್ ಪತ್ತೆಯಾಗಿತ್ತು. ಅನುಮಾನ ಹಿನ್ನೆಲೆ ಬಾಂಬ್ ಸ್ಕ್ವಾಡ್ ತಂಡದಿಂದ ತಪಾಸಣೆ ನಡೆಸಿದಾಗ ಸಜೀವ ಬಾಂಬ್ ಪತ್ತೆಯಾಗಿದೆ.

    ಬಾಂಬ್ ಪತ್ತೆಯಾದ ಕೂಡಲೇ ಎಚ್ಚೆತ್ತ ಸಿಬ್ಬಂದಿ, ವಿಮಾನ ನಿಲ್ದಾಣದಲ್ಲಿನ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದಾರೆ. ಬಾಂಬ್ ಇರಿಸಲಾಗಿದ್ದ ಬ್ಯಾಗ್ ನ್ನು ನಿಲ್ದಾಣದ ಆವರಣದ ಹೊರಗೆ ತರಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಿಐಎಸ್‍ಎಫ್ ಭದ್ರತಾ ಪಡೆ ನಿಲ್ದಾಣದ ಸುತ್ತಲೂ ಬಿಗಿ ಬಂದೋಬಸ್ತ್ ಕೈಗೊಂಡಿದೆ.

    ಆಟೋದಲ್ಲಿ ಬಂದ ಅಪರಿಚಿತ ವ್ಯಕ್ತಿ ಬ್ಯಾಗ್ ನ್ನು ವಿಮಾನ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳದ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದೆ. ಸದ್ಯ ಸಜೀವ ಬಾಂಬ್ ನ್ನು ಪ್ರೂಫ್ ವೆಹಿಕಲ್ ನಲ್ಲಿ ಇರಿಸಲಾಗಿದೆ.

  • ರನ್‍ವೇಯಿಂದ ಹೊರ ಬಂದ ವಿಮಾನ: ಟೇಕಾಫ್- ಲ್ಯಾಂಡಿಂಗ್ ಸಂಪೂರ್ಣ ಸ್ಥಗಿತ

    ರನ್‍ವೇಯಿಂದ ಹೊರ ಬಂದ ವಿಮಾನ: ಟೇಕಾಫ್- ಲ್ಯಾಂಡಿಂಗ್ ಸಂಪೂರ್ಣ ಸ್ಥಗಿತ

    -ವಿಮಾನ ತೆರವು ಕಾರ್ಯಚರಣೆ

    ಮಂಗಳೂರು: ಇಂದು ಸಂಜೆ 5.20ಕ್ಕೆ ಮಂಗಳೂರು ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿದ್ದ ಪ್ಲೇನ್ ರನ್ ವೇಯಿಂದ ಹೊರ ಬಂದು ಆತಂಕವನ್ನು ಸೃಷ್ಟಿ ಮಾಡಿತ್ತು. ಪೈಲಟ್ ಸಮಯ ಪ್ರಜ್ಞೆಯಿಂದಾಗಿ 181 ಪ್ರಯಾಣಿಕರ ಜೀವ ಉಳಿದಿದೆ. ಇದೀಗ ವಿಮಾನದ ತೆರವು ಕಾರ್ಯಚರಣೆ ಅಂತಿಮವಾಗುವರೆಗೂ ಟೇಕಾಫ್ ಮತ್ತು ಲ್ಯಾಂಡಿಂಗ್ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

    ರನ್ ವೇಯಿಂದ ಹೊರಬಂದಿರುವ ವಿಮಾನ ಇಂದು ರಾತ್ರಿ 8.30ಕ್ಕೆ ಅಬುಧಾಬಿಯತ್ತ ಪ್ರಯಾಣ ಬೆಳಸಬೇಕಿತ್ತು. ರಾತ್ರಿ ವೇಳೆಗೆ ರನ್ ವೇ ಸುಗಮಗೊಳಿಸಿ ಸೋಮವಾರ ವಿಮಾನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಇಂದು ರಾತ್ರಿ 8.30ಕ್ಕೆ ಪ್ರಯಾಣ ಬೆಳೆಸಬೇಕಿದ್ದ ಪ್ರಯಾಣಿಕರಿಗೆ ಮಂಗಳೂರಿನ ಹೋಟೆಲ್ ಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಸೋಮವಾರ ಬೆಳಗ್ಗೆವರೆಗೂ ಸಂಚಾರ ಸ್ಥಗಿತಗೊಳ್ಳಲಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಅಪಘಾತಕ್ಕೆ ಕಾರಣ ಏನು?
    ಮಳೆಯ ಕಾರಣದಿಂದ ಸ್ಲಿಪ್ ಆಗಿ ವಿಮಾನ ರನ್ ವೇಯಿಂದ ಹೊರ ಬಂದಿದೆ ಎನ್ನಲಾಗುತ್ತಿದೆ. ಅಪಘಾತದಿಂದ ವಿಮಾನದ ಇಂಜಿನ್ ಭಾಗಕ್ಕೆ ಹಾನಿಯಾಗಿದ್ದು, ರಿಪೇರಿಗೆ ಮೂರು ತಿಂಗಳು ಸಮಯ ಬೇಕಾಗುತ್ತದೆ ತಜ್ಞರು ತಿಳಿಸಿದ್ದಾರೆ.

    ಆಗಿದ್ದೇನು?
    ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್- ಐಎಕ್ಸ್ 384 ವಿಮಾನ ಸಂಜೆ 5.20ಕ್ಕೆ ಲ್ಯಾಂಡ್ ಆಗಬೇಕಿತ್ತು. ರನ್ ವೇ ಮೇಲೆ ಬರುತ್ತಿದ್ದ ವಿಮಾನ ದಿಢೀರ್ ಅಂತಾ ಟ್ಯಾಕ್ಸಿ ವೇನತ್ತು ಚಲಿಸಿತ್ತು. ಕೂಡಲೇ ಎಚ್ಚೆತ್ತ ಪೈಲಟ್ ವಿಮಾನ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದು, ಸಿಬ್ಬಂದಿ ಸೇರಿದಂತೆ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

    2010ರಲ್ಲಿ ನಡೆದಿತ್ತು ದುರಂತ:
    2010 ಮೇ 22ರಂದು ಏರ್ ಇಂಡಿಯ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆ ರನ್ ವೇ ಬಿಟ್ಟು ಲ್ಯಾಂಡ್ ಆದ ಪರಿಣಾಮ 158 ಮಂದಿ ಸಾವನ್ನಪ್ಪಿದ್ದರು. ಮಂಗಳೂರು ವಿಮಾನ ನಿಲ್ದಾಣ ಟೇಬಲ್ ಟಾಪ್ ವಿಮಾನ ನಿಲ್ದಾಣವಾಗಿದ್ದು, ಲ್ಯಾಂಡಿಂಗ್ ಮತ್ತು ಟೇಕಾಫ್ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಸುತ್ತಲೂ ಭದ್ರವಾದ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗಿದೆ. 2018 ಜೂನ್ ನಲ್ಲಿ ಸುರಿದ ಮಳೆಗೆ ಈ ತಡೆಗೋಡೆ ಕುಸಿತ ಕಂಡಿತ್ತು. ಕೂಡಲೇ ಅಧಿಕಾರಿಗಳು ಗೋಡೆಗಳನ್ನು ರಿಪೇರಿ ಮಾಡಿಸಿದ್ದರು.

    2010ರ ಅಪಘಾತಕ್ಕೆ ಕಾರಣ ಏನು?
    2010ರಲ್ಲಿ 158 ಪ್ರಯಾಣಿಕರನ್ನು ಬಲಿ ತೆಗೆದುಕೊಂಡಿದ್ದ ವಿಮಾನ ದುರಂತಕ್ಕೆ ಕಾರಣ ಕ್ಯಾಪ್ಟನ್ ಝಡ್. ಗ್ಲುಸಿಕಾ ಕಾರಣ ಎಂದು ವರದಿಯಾಗಿತ್ತು. ವಿಮಾನವನ್ನು ರನ್ ವೇಯಲ್ಲಿ ಇಳಿಸದೇ ಸುತ್ತು ಹಾಕಿಸಿ ಎಂದು ಏರ್ ಪೋರ್ಟ್ ಅಧಿಕಾರಿಗಳು ಸೂಚನೆ ನೀಡಿದ್ದರು. ಆದ್ರೂ ಕ್ಯಾಪ್ಟನ್ ಟೇಬಲ್ ಟಾಪ್ ರನ್ ವೇಯಲ್ಲಿ ವಿಮಾನ ಇಳಿಸಿದ್ದರಿಂದ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

    2018ರಲ್ಲಿ ಟೇಕಾಪ್ ವೇಳೆ ತಪ್ಪಿತ್ತು ದುರಂತ:
    2018 ಜನವರಿಯಲ್ಲಿ ಟೇಕಾಫ್ ವೇಳೆಯೂ ದೊಡ್ಡ ಅನಾಹುತವೊಂದು ತಪ್ಪಿತ್ತು. ಅಂದು ನಿಲ್ದಾಣದ ಸುತ್ತಲಿನ ಪ್ರದೇಶದಲ್ಲಿ ಹುಲ್ಲು ತೆಗೆಯಲು ಟ್ರ್ಯಾಕ್ಟರ್ ಕರೆಸಲಾಗಿತ್ತು. ಆದ್ರೆ ಚಾಲಕ ತನ್ನ ಟ್ರ್ಯಾಕ್ಟರ್ ನ್ನು ರನ್ ವೇ ಅಂತ್ಯದಲ್ಲಿ ನಿಲ್ಲಿಸಿದ್ದನು. ಮುಂಬೈನತ್ತ ಹೊರಟಿದ್ದ ವಿಮಾನ ಟೇಕಾಪ್ ಆಗುವದರಲ್ಲಿತ್ತು. ಟ್ರ್ಯಾಕ್ಟರ್ ರನ್ ವೇ ಅಂತ್ಯದಲ್ಲಿ ನಿಂತಿರೋದು ಪೈಲಟ್ ಗೆ ಕಾಣಿಸಿರಲಿಲ್ಲ. ಟ್ರ್ಯಾಕ್ಟರ್ ಗಮನಿಸಿ ಟ್ರಾಫಿಕ್ ಕಂಟ್ರೋಲರ್ ವಿಮಾನದ ಹಾರಾಟವನ್ನು ರದ್ದುಗೊಳಿಸಿದ್ದರು.

    ಏನಿದು ಟೇಬಲ್ ಟಾಪ್ ವಿಮಾನ ನಿಲ್ದಾಣ?
    ಸುತ್ತಲೂ ಆಳ ಕಣಿವೆಯಿಂದ ಕೂಡಿ, ಬೆಟ್ಟದ ತುದಿಯಲ್ಲಿ ರನ್ ವೇ ಇರುವ ನಿಲ್ದಾಣಗಳನ್ನು ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದು ಗುರುತಿಸಲಾಗಿದೆ. ಮಂಗಳೂರು ಹೊರತು ಪಡಿಸಿ ದೇಶದಲ್ಲಿ ಕೋಝಿಕ್ಕೋಡು ಮತ್ತು ಲೆಂಗ್‍ಪುಯಿನಲ್ಲಿ ಈ ರೀತಿಯ ವಿಮಾನ ನಿಲ್ದಾಣಗಳನ್ನು ಕಾಣಬಹುದು.

  • ಮೋದಿ ಸ್ವಾಗತಕ್ಕೆ ಸಜ್ಜಾದ ಶ್ರೀ ಕ್ಷೇತ್ರ – ಎಲ್ಲೆಲ್ಲೂ ಸ್ಪೆಷಲ್ ಕಮಾಂಡೋಗಳ ಭರಾಟೆ

    ಮೋದಿ ಸ್ವಾಗತಕ್ಕೆ ಸಜ್ಜಾದ ಶ್ರೀ ಕ್ಷೇತ್ರ – ಎಲ್ಲೆಲ್ಲೂ ಸ್ಪೆಷಲ್ ಕಮಾಂಡೋಗಳ ಭರಾಟೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಯಾತ್ರಾ ಸ್ಥಳ ಧರ್ಮಸ್ಥಳಕ್ಕೆ ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಅಭೂತಪೂರ್ವ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

    ಎಲ್ಲೆಲ್ಲೂ ಪೊಲಿಸ್ ಸರ್ಪಗಾವಲಿದೆ. ಎನ್‍ಎಸ್‍ಜಿ, ಎಸ್‍ಪಿಜಿ.. ಹೀಗೆ ಸ್ಪೆಷಲ್ ಕಮಾಂಡೋಗಳ ಭರಾಟೆ ಇದೆ. ಜೊತೆಗೆ ನಕ್ಸಲ್ ನಿಗ್ರಹ ದಳವೂ ಬೀಡುಬಿಟ್ಟಿದೆ. ಇನ್ನು ಇಂದು ಮಧ್ಯಾಹ್ನ 2 ಗಂಟೆವರೆಗೆ ಸಾಮಾನ್ಯ ಭಕ್ತರಿಗೆ ಮಂಜುನಾಥನ ದರ್ಶನ ಭಾಗ್ಯ ನಿರ್ಬಂಧಿಸಲಾಗಿದೆ.

    ಬೆಳಗ್ಗೆ 9ರಿಂದ ಧರ್ಮಸ್ಥಳ-ಉಜಿರೆ-ಕೊಕ್ಕಡ ನಡುವೆ ವಾಹನ ಸಂಚಾರ ಬಂದ್ ಮಾಡಲಾಗಿದೆ. ಆದ್ರೆ ಚಾರ್ಮಾಡಿ, ಮಂಗಳೂರು ರಸ್ತೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ಇನ್ನು ಉಜಿರೆಯಲ್ಲಿ ನಡೆಯಲಿರುವ ಸಮಾವೇಶಕ್ಕೆ ಬೆಳಗ್ಗೆ 9.30ರೊಳಗೆ ಆಗಮಿಸುವಂತೆ ಸಾರ್ವಜನಿಕರಿಗೆ ದೇವಳದ ಆಡಳಿತ ಮಂಡಳಿ ತಿಳಿಸಿದೆ.

    ಶನಿವಾರ ಎಸ್‍ಪಿಜಿ ಕಮ್ಯಾಂಡೋಗಳು ಕಾನ್‍ವೇ ಪರಿಶೀಲಿಸಿದರು. ಹೆಲಿಪ್ಯಾಡ್‍ನಿಂದ ದೇವಳದವರೆಗೆ ರಿಹಾರ್ಸಲ್ ನಡೆಸಿದರು. ಮೋದಿ ಬಳಸಲಿರುವ ಲ್ಯಾಂಡ್ ಕ್ರ್ಯೂಸರ್, ಪೈಲಟ್ ಜೀಪ್ ಸೇರಿದಂತೆ 16 ವಾಹನಗಳಲ್ಲಿ ರಿಹರ್ಸಲ್ ನಡೀತು. ಬಳಿಕ ಧಮಸ್ಥಳ- ಉಜಿರೆ ಹಾದಿಯಲ್ಲೂ ಎಸ್‍ಪಿಜಿ ಪರಿಶೀಲನೆ ನಡೀತು. ಪ್ರಧಾನಿಯ ವಾಹನ ಧರ್ಮಸ್ಥಳದಿಂದ ತೆರಳಿ ಅರ್ಧ ಗಂಟೆಯ ನಂತರ ಸಾರ್ವಜನಿಕರ ವಾಹನಗಳ ಓಡಾಟಕ್ಕೆ ಪೆÇಲೀಸರು ಅವಕಾಶ ಮಾಡಿಕೊಡಲಿದ್ದಾರೆ.

    ಹಾಗಿದ್ರೆ ಮೋದಿಯವರ ಇಂದಿನ ದಿನಚರಿ ಧರ್ಮಸ್ಥಳದಲ್ಲಿ ಹೇಗಿರುತ್ತೆ ಅಂತ ನೋಡೋದಾದ್ರೆ..

    * ಬೆಳಗ್ಗೆ 10.45 ಗಂಟೆಗೆ ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ
    * ಬೆಳಗ್ಗೆ 11.00 ಗಂಟೆಗೆ ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ
    * ಮಂಜುನಾಥನ ಸನ್ನಿಧಿಯಲ್ಲಿ ಮೋದಿ ಪೂಜೆ
    * ಸುಮಾರು 10 ನಿಮಿಷ ಮೋದಿ ಧ್ಯಾನ ಸಾಧ್ಯತೆ
    * ಅಣ್ಣಪ್ಪ ಸ್ವಾಮಿ ದರ್ಶನ, ಅನ್ನಪೂರ್ಣ ಹಾಲ್‍ಗೆ ಭೇಟಿ ನೀಡಲಿರುವ ಮೋದಿ
    * 12.15ಕ್ಕೆ ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಮೋದಿ ಭಾಷಣ

    https://www.youtube.com/watch?v=F-C0cUhjm6c