Tag: ಮಂಗಳೂರು ಮಳೆ

  • ಮೊಂಟೆಪದವು ಗುಡ್ಡಕುಸಿತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ – ಪಿಡಿಓ ಇತರ ಅಧಿಕಾರಿಗಳ ವಿರುದ್ಧ ದೂರು

    ಮೊಂಟೆಪದವು ಗುಡ್ಡಕುಸಿತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ – ಪಿಡಿಓ ಇತರ ಅಧಿಕಾರಿಗಳ ವಿರುದ್ಧ ದೂರು

    – ದಕ್ಷಿಣ ಕನ್ನಡದಲ್ಲಿ ʻಮರಣ ಮಳೆʼಗೆ ಒಂದೇ ದಿನ 7 ಬಲಿ

    ಮಂಗಳೂರು: ನಗರದ ಹೊರವಲಯದ ಮಂಜನಾಡಿಯ ಮೊಂಟೆಪದವು ಗುಡ್ಡಕುಸಿತದಿಂದ (Montepadavu Landslide) ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಅಂತ ಪೊಲೀಸ್ ಠಾಣೆಗೆ (Konaje Police Station) ದೂರು ನೀಡಲಾಗಿದೆ.

    ಹರೇಕಳ ಗ್ರಾಮದ ತೇಜುಕುಮಾರ್‌ ಎಂಬುವವರು ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗುಡ್ಡ ಕುಸಿದ ಘಟನೆಗೆ ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾಮಗಾರಿಯೇ ಕಾರಣ. ಮಂಜನಾಡಿ ಗ್ರಾಪಂ ಪಿಡಿಓ ಚೈತ್ರಾ ಮತ್ತು ಕೆಆರ್‌ಡಿಐಎಲ್  (KRDIL) ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಅವೈಜ್ಞಾನಿಕ ಕಾಮಗಾರಿಯೇ ದುರಂತಕ್ಕೆ ಕಾರಣ. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 105 ಮತ್ತು 106 ಪ್ರಕಾರ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಂಗಳೂರಲ್ಲಿ ವರುಣಾರ್ಭಟ; ಮಳೆಗೆ 6 ಮಂದಿ ಬಲಿ

    ಒಂದೇ ದಿನ 7 ಬಲಿ:
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಣ ಮಳೆಗೆ ಶುಕ್ರವಾರ ಒಂದೇ ದಿನ ಪ್ರತ್ಯೇಕ ಘಟನೆಗಳಲ್ಲಿ 7 ಜನ ಬಲಿಯಾಗಿದ್ದಾರೆ. ಉಳ್ಳಾಲದ ಮೊಂಟೆಪದವು ಕೋಡಿಯ ಕಾಂತಪ್ಪ ಪೂಜಾರಿ ಅನ್ನೋವ್ರ ಮನೆ ಮೇಲೆ ಗುಡ್ಡ ಕುಸಿದಿದೆ. ವೃದ್ಧೆ ಪ್ರೇಮಾ ಪೂಜಾರಿ, ಮೊಮ್ಮಕ್ಕಳಾದ ಆರುಷ್, ಆರ್ಯನ್ ಸಾವನ್ನಪ್ಪಿದ್ದಾರೆ. ಮುಂಜಾನೆ 4.30ರ ಸುಮಾರಿಗೆ ಗಾಢ ನಿದ್ರೆಯಲ್ಲಿದ್ದಾಗಲೇ ಈ ಘೋರ ದುರಂತ ಸಂಭವಿಸಿದೆ. ಇದನ್ನೂ ಓದಿ: ಕೇರಳದಲ್ಲಿ ಭಾರೀ ಮಳೆಗೆ 5 ಸಾವು – 8 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

    ಗುಡ್ಡ ಕುಸಿಯೋ ಶಬ್ಬ ಕೇಳಿ ಪತಿ ಸೀತಾರಾಮ ಮನೆಯಿಂದ ಓಡಿ ಹೊರ ಬಂದಿದ್ದು, ತಂದೆ ಕಾಂತಪ್ಪ ಪೂಜಾರಿ (65), ತಾಯಿ ಪ್ರೇಮಾ ಪೂಜಾರಿ (60), ಪತ್ನಿ ಅಶ್ವಿನಿ (31) ಮಕ್ಕಳಾದ ಆರ್ಯನ್ (2.5 ವರ್ಷ), ಆರುಷ್ (2.5 ವರ್ಷ) ಮಣ್ಣಿನಡಿ ಸಿಲುಕಿದ್ದರು. ಅವಶೇಷಗಳಡಿ ಸಿಲುಕಿದ್ದ ಕಾಂತಪ್ಪರನ್ನು ಸ್ಥಳೀಯರು ಬಂದು ರಕ್ಷಿಸಿದ್ದು, ಕಾಲಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಇದನ್ನೂ ಓದಿ: ದ.ಕ ಜಿಲ್ಲೆಯಾದ್ಯಂತ ಭಾರೀ ಮಳೆ – ಶನಿವಾರ ಶಾಲೆಗಳಿಗೆ ರಜೆ ಘೋಷಣೆ

    ಅವಶೇಷಗಳಡಿ ಸಿಲುಕಿದ್ದ ತಾಯಿ ಅಶ್ವಿನಿ, ಮಕ್ಕಳಾದ ಆರ್ಯನ್, ಆರುಷ್ ರಕ್ಷಣೆಗೆ ಬೆಳಗ್ಗೆ 6 ಗಂಟೆಯಿಂದಲೇ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಕಾರ್ಯಾಚರಣೆಗೆ ಇಳಿದಿದ್ರು. ಜೆಸಿಬಿ, ಹಿಟಾಚಿ ತೆರಳಲು ಸಾಧ್ಯವಾಗದ ದುರ್ಗಮ ರಸ್ತೆಯಾದ್ದರಿಂದ ರಕ್ಷಣಾ ಕಾರ್ಯಾಚರಣೆ ವಿಳಂಬವಾಯ್ತು. ತಾಯಿ ಅಶ್ವಿನಿ ಮಕ್ಕಳನ್ನು ಮಡಿಲಲ್ಲಿಟ್ಟುಕೊಂಡೇ ಮಲಗಿದ್ರು. ಮೂವರ ಮೇಲೂ ಗೋಡೆ ಕುಸಿದಿತ್ತು. ಆರ್ಯನ್ ಮೃತಪಟ್ಟಿದ್ದರೆ ಪುಟ್ಟಕಂದ ಆರುಷ್ ತಾಯಿ ತೋಳಿನಲ್ಲೇ ನರಳಾಡ್ತಿದ್ದ. ಮಕ್ಕಳನ್ನು ರಕ್ಷಿಸಿ ಅಂತ ತಾಯಿ ಅಂಗಲಾಚಿದರು. ಸತತ 10 ಗಂಟೆ ಕಾರ್ಯಾಚರಣೆ ಬಳಿಕ ದೊಡ್ಡಮಗು ಆರ್ಯನ್ ಮೃತದೇಹ ಹೊರತೆಗೆಯಲಾಯ್ತು. ಆರುಷ್‌ನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಸಾವನ್ನಪ್ಪಿದ. ತಾಯಿ ಅಶ್ವಿನಿಯನ್ನು ರಕ್ಷಿಸಿ ಹೊರ ತೆಗೆದಾಗ ನನ್ನ ಮಕ್ಕಳೆಲ್ಲಿದ್ದಾರೆ…? ಹೇಗಿದ್ದಾರೆ..? ಅಂತ ಹಪಾಹಪಿಸಿದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮಕ್ಕಳು ಸಾವನ್ನಪ್ಪಿರುವ ವಿಷಯ ತಿಳಿಸಿಲ್ಲ. ಕೊನೆಯದಾಗಿ ಪ್ರೇಮಾಪೂಜಾರಿ ದೇಹ ಹೊರತೆಗೆಯಲಾಯಿತು.

    ನಾಡದೋಣಿ ಮಗುಚಿ ಇಬ್ಬರು ನೀರುಪಾಲು:
    ಮಂಗಳೂರಿನ ತೋಟಬೆಂಗ್ರೆ ಅಳಿವೆ ಬಾಗಿಲು ಎಂಬಲ್ಲಿ ಕಡಲ ಅಬ್ಬರಕ್ಕೆ ನಾಡದೋಣಿ ಮಗುಚಿ ಇಬ್ಬರು ನೀರುಪಾಲಾಗಿದ್ದಾರೆ. ತೋಟಬೆಂಗ್ರೆ ನಿವಾಸಿಗಳಾದ ಯಶವಂತ, ಕಮಲಾಕ್ಷ ಸಾವನ್ನಪ್ಪಿದ ಮೀನುಗಾರರಾಗಿದ್ದಾರೆ.

    ಇನ್ನೂ ದೇರಳಕಟ್ಟೆಯ ಕಾನಕೆರೆ ಎಂಬಲ್ಲಿ ಕಾಂಪೌಂಡ್ ಗೋಡೆ ಕುಸಿದು 10 ವರ್ಷದ ನಯೀಮಾ ಎಂಬ ಬಾಲಕಿ ದುರ್ಮರಣಕ್ಕೀಡಾಗಿದ್ದಾರೆ. ನೌಶಾದ್ ಎಂಬುವರ ಮನೆಯ ಕಿಟಕಿಯ ಹಿಂಬದಿ ಗೋಡೆ ಕುಸಿದ್ದು ಮನೆ ಮೇಲೆ ಮಣ್ಣುಬಿದ್ದಿತ್ತು, ಗಾಯಗೊಂಡಿದ್ದ ಪುತ್ರಿ ನಯೀಮಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆಕೆ ಸಾವನ್ನಪ್ಪಿದ್ದಾರೆ. ಮತ್ತೊಂದು ಕಡೆ, ಬೆಳ್ತಂಗಡಿಯ ಓಡಿನ್ಮಾಳ ಗ್ರಾಮದ ಕುಮ್ಮಂಜ ಎಂಬಲ್ಲಿ ಕರೆಂಟ್ ಶಾಕ್‌ನಿಂದ, ಲೈನ್‌ಮ್ಯಾನ್ ವೀರೇಶ್ ಜೈನ್ (27) ದುರ್ಮರಣಕ್ಕೀಡಾಗಿದ್ದಾರೆ.

  • ಮಂಗಳೂರಲ್ಲಿ ವರುಣಾರ್ಭಟ; ಮಳೆಗೆ 6 ಮಂದಿ ಬಲಿ

    ಮಂಗಳೂರಲ್ಲಿ ವರುಣಾರ್ಭಟ; ಮಳೆಗೆ 6 ಮಂದಿ ಬಲಿ

    ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಾದ್ಯಂತ ವರುಣಾರ್ಭಟ ಜೋರಾಗಿದೆ. ಭಾರೀ ಮಳೆ ಪರಿಣಾಮ ವಿವಿಧೆಡೆ ಆರು ಮಂದಿ ಬಲಿಯಾಗಿದ್ದಾರೆ.

    ಮನೆ ಮೇಲೆ ಕುಸಿದ ಗುಡ್ಡ; ಮೂವರು ದುರ್ಮರಣ
    ಮಂಗಳೂರು (Mangaluru Rains) ಹೊರವಲಯದ ದೇರಳಕಟ್ಟೆಯ ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತವಾಗಿ ಮನೆ ಧರಶಾಹಿಯಾಗಿ ಇಬ್ಬರು ಮಕ್ಕಳು ಸೇರಿ ಮೂವರು ಸಾವನ್ನಪ್ಪಿದರು. ದುರಂತದಲ್ಲಿ ಮೂವರು ಪವಾಡ ಸದೃಶವಾಗಿ ಪಾರಾಗಿದ್ದಾರೆ. ಕಾಂತಪ್ಪ ಪೂಜಾರಿ ಎಂಬವರ ಮನೆ ಸಂಪೂರ್ಣ ಕುಸಿತವಾಗಿದೆ. ನಸುಕಿನ 4:30ರ ಸುಮಾರಿಗೆ ಗುಡ್ಡ ಕುಸಿದಿದ್ದು, ಸೀತಾರಾಮ ಅವರು ಮನೆಯಿಂದ ಓಡಿ ಹೊರ ಬಂದಿದ್ದರು. ಮನೆಯೊಳಗೆ ಅವರ ತಂದೆ 65 ವರ್ಷದ ಕಾಂತಪ್ಪ ಪೂಜಾರಿ, ತಾಯಿ 60 ವರ್ಷದ ಪ್ರೇಮ, ಪತ್ನಿ 31 ವರ್ಷದ ಅಶ್ವಿನಿ ಮತ್ತು ಇಬ್ಬರು ಮಕ್ಕಳಾದ ಎರಡೂವರೆ ವರ್ಷದ ಆರ್ಯನ್ ಹಾಗೂ ಒಂದು ವರ್ಷದ ಮಗು ಆಯುಷ್ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಸ್ಥಳೀಯರು ಬಂದು ಕಾಂತಪ್ಪ ಪೂಜಾರಿಯವರನ್ನ ರಕ್ಷಿಸಿದ್ದು, ಅವರ ಕಾಲಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರೇಮ ಮಣ್ಣಿನಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಮಣ್ಣಿನಡಿಯಲ್ಲಿದ್ದ ಒಂದು ಮಗು ಸಾವನ್ನಪ್ಪಿದ್ದು, ಬಳಿಕ ತಾಯಿ ಹಾಗೂ ಒಂದು ಮಗುವನ್ನು ರಕ್ಷಣೆ ಮಾಡಲಾಗಿತ್ತು. ಆಸ್ಪತ್ರೆಗೆ ಸಾಗಿಸುವಾಗ ಆ ಮಗುವೂ ಮೃತಪಟ್ಟಿರುವ ದುರಂತ ಘಟನೆ ನಡೆದಿದೆ. ಇದನ್ನೂ ಓದಿ: ಮಲೆನಾಡು ಭಾಗದಲ್ಲಿ ಭಾರೀ ಮಳೆ – ಶಿರಾಡಿಘಾಟ್‌ನಲ್ಲಿ ಮತ್ತೆ ಭೂಕುಸಿತ

    ವಿದ್ಯುತ್ ಶಾಕ್‌ಗೆ ಲೈನ್‌ಮನ್ ಬಲಿ
    ಓಡಿನ್ಮಾಳ ಗ್ರಾಮದ ಕುಮ್ಮಂಜ ಎಂಬಲ್ಲಿ ಘಟನೆ ವಿದ್ಯುತ್ ಶಾಕ್‌ನಿಂದ ಲೈನ್‌ಮನ್ ವೀರೇಶ್ ಜೈನ್ (27) ಮೃತಪಟ್ಟಿದ್ದಾರೆ. ಕೆಂಜಿಲ ಮನೆ ನಿವಾಸಿ ಸುಕುಮಾರ್ ಜೈನ್ ಮತ್ತು ಪೂರ್ಣಿಮಾ ದಂಪತಿಯ ಎರಡನೇ ಮಗ ಇವರು. ಹೆಚ್‌ಡಿ ಲೈನ್ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಸಾವಿಗೀಡಾಗಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ನಾಡದೋಣಿ ಮಗುಚಿ ಇಬ್ಬರು ನೀರುಪಾಲು
    ಮಂಗಳೂರಿನಲ್ಲಿ ಮಳೆಯ ಜೊತೆ ಕಡಲಬ್ಬರ ಜೋರಾಗಿದೆ. ಪರಿಣಾಮ ನಾಡದೋಣಿ ಮಗುಚಿ ಇಬ್ಬರು ನೀರುಪಾಲಾಗಿರುವ ಘಟನೆ ತೋಟಬೆಂಗ್ರೆ ಅಳಿವೆ ಬಾಗಿಲು ಎಂಬಲ್ಲಿ ನಡೆದಿದೆ. ತೋಟಬೆಂಗ್ರೆ ನಿವಾಸಿಗಳಾದ ಯಶವಂತ, ಕಮಲಾಕ್ಷ ನೀರುಪಾಲಾದ ಮೀನುಗಾರರಾಗಿದ್ದಾರೆ. ನಾಡದೋಣಿಯ ಅವಶೇಷಗಳು ಕಡಲತೀರದಲ್ಲಿ ಬಂದು ಬಿದ್ದಿವೆ. ನೀರಿನಲ್ಲಿ ಕಣ್ಮರೆಯಾಗಿರುವ ಮೀನುಗಾರರಿಗೆ ಶೋಧ ಕಾರ್ಯ ನಡೆಯುತ್ತಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ʻಮರಣ ಮಳೆʼಗೆ ಅಜ್ಜಿ, ಮೊಮ್ಮಕ್ಕಳು ಬಲಿ – 9 ಗಂಟೆಗಳ ಜೀವನ್ಮರಣ ಹೋರಾಟದ ನಂತ್ರ ಬದುಕುಳಿದ ತಾಯಿ!