Tag: ಮಂಗಳೂರು ಬೋಟ್

  • ಎಚ್ಚರ, ಸಮುದ್ರದಲ್ಲಿ ಏಳಲಿದೆ 6 ಮೀಟರ್ ಎತ್ತರದ ಅಲೆ – ಓಖಿ ಚಂಡಮಾರುತಕ್ಕೆ ಮಂಗಳೂರಿನ 2 ಹಡಗು ಮುಳುಗಡೆ

    ಎಚ್ಚರ, ಸಮುದ್ರದಲ್ಲಿ ಏಳಲಿದೆ 6 ಮೀಟರ್ ಎತ್ತರದ ಅಲೆ – ಓಖಿ ಚಂಡಮಾರುತಕ್ಕೆ ಮಂಗಳೂರಿನ 2 ಹಡಗು ಮುಳುಗಡೆ

    ಮಂಗಳೂರು/ಬೆಂಗಳೂರು/ಕೊಚ್ಚಿ: ಓಖಿ ಚಂಡಮಾರುತ ಹೊಡೆತದಿಂದಾಗಿ ಲಕ್ಷದ್ವೀಪ ಸಮೀಪದ ಅರಬ್ಬಿ ಸಮುದ್ರದಲ್ಲಿ ಮಂಗಳೂರಿನಿಂದ ಹೊರಟಿದ್ದ 2 ಹಡಗು ಮುಳುಗಡೆಯಾಗಿದೆ. ಆದರೆ ಓಖಿ ಎಫೆಕ್ಟ್ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

    ಅದೃಷ್ಟವಶಾತ್ ಮಂಗಳೂರಿನಿಂದ ಹೊರಟ ಮೂರು ಹಡಗಿನಲ್ಲಿದ್ದ ಒಟ್ಟು 14 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿನ್ನೆ ಮಂಗಳೂರು ಹಳೆ ಬಂದರಿನಿಂದ ಸರಕು ಮತ್ತು ತರಕಾರಿ ಹೇರಿಕೊಂಡು ಹೋಗಿದ್ದ ಈ ಹಡಗುಗಳು ಅಪಾಯಕ್ಕೆ ಸಿಲುಕಿರುವ ಬಗ್ಗೆ ಬೋಟ್ ಮಾಲಕರಿಗೆ ಇಂದು ಸಂಜೆ ಮಾಹಿತಿ ಸಿಕ್ಕಿತ್ತು. ಕೂಡಲೇ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.

    ಮಂಗಳೂರಿನಿಂದ ಹೊರಟಿದ್ದ ಒಂದು ಬೋಟ್ ಸಂಪೂರ್ಣ ಮುಳುಗಡೆಯಾಗಿದ್ದರೆ, ಎರಡನೇ ಬೋಟ್ ಅರ್ಧ ಮುಳುಗಿದೆ. ಮೂರನೇ ಬೋಟ್ ಗೆ ಡ್ಯಾಮೇಜ್ ಆಗಿದೆ. ಈ ಎಲ್ಲಾ ಹಡಗುಗಳು ಮಂಗಳೂರು ಹಳೆ ಬಂದರಿನಲ್ಲಿ ನೋಂದಣಿಯಾಗಿವೆ. ಬೋಟಿನಲ್ಲಿದ್ದ ಕಾರ್ಮಿಕರು ಗುಜರಾತ್ ಹಾಗೂ ತಮಿಳುನಾಡಿನವರು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಈ ನಡುವೆ ಮೀನುಗಾರಿಕೆಗೆ ತೆರಳಿ ಚಂಡಮಾರುತದ ನಡುವೆ ಸಿಲುಕಿಕೊಂಡಿದ್ದ 214 ಮೀನುಗಾರರನ್ನು ಇದುವರೆಗೆ ನೌಕಾ ಪಡೆ ಹಾಗೂ ವಿಪತ್ತು ನಿರ್ವಹಣಾ ಸಿಬ್ಬಂದಿ ರಕ್ಷಿಸಿದ್ದಾರೆ. ಇನ್ನೊಂದೆಡೆ ಸಿಲುಕಿದ್ದ 60 ಮಂದಿಯನ್ನು ಜಪಾನ್ ಹಡಗು ರಕ್ಷಿಸಿದೆ. ಇವರು ಕರಾವಳಿ ಪಡೆಯ ಸಹಾಯದ ಮೂಲಕ ದಡ ಸೇರಲಿದ್ದಾರೆ. ತಿರುವನಂತಪುರಂ ಜಿಲ್ಲಾಧಿಕಾರಿ ವಾಸುಕಿನೇತೃತ್ವದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ತಾವು ಹೋಗಿದ್ದ ಬೋಟ್ ಬಿಟ್ಟು ಬರಲು ಹೆಚ್ಚಿನವರು ತಯಾರಾಗದೇ ಇರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ. ರಕ್ಷಣೆ ಮಾಡಿದ ಹೆಚ್ಚಿನ ಮೀನುಗಾರರು ಅಸ್ವಸ್ಥರಾಗಿದ್ದು ಚಿಕಿತ್ಸೆ ಮುಂದುವರೆದಿದೆ.

    ಕೇರಳ ಸಮುದ್ರ ತೀರದಿಂದ 10 ಕಿಮೀ ದೂರದವರೆಗೆ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಏಳುವ ಸಾಧ್ಯತೆಯಿದೆ ಎಂದು ಹವಾಮಾನಾ ಇಲಾಖೆ ಹಾಗೂ ಇಂಡಿಯನ್ ನ್ಯಾಷನಲ್ ಸೆಂಟರ್ ಫಾರ್ ಓಷಿಯನ್ ಇನ್ಫಾರ್ಮೇಷನ್ ಸರ್ವೀಸ್ ಎಚ್ಚರಿಕೆ ನೀಡಿದೆ. ಕೊಲ್ಲಂ, ಆಲೆಪ್ಪಿ, ಕೊಚ್ಚಿ, ತ್ರಿಶೂರ್ ಜಿಲ್ಲೆಗಳಲ್ಲಿ 4.4 ಮೀಟರ್ ನಿಂದ 6.1 ಮೀಟರ್ ಎತ್ತರದವರೆಗೆ ಅಲೆಗಳು ಅಪ್ಪಳಿಸುವ ಸಾಧ್ಯತೆಯಿದೆ. ಕೇರಳದ ವಿಯಿಞಂನಿಂದ ಕರ್ನಾಟಕದ ಗಡಿ ಭಾಗವಾದ ಕಾಸರಗೋಡುವರೆಗೆ ಓಖಿ ಎಫೆಕ್ಟ್ ಬರುವ ಸಾಧ್ಯತೆಯಿದೆ. ಡಿಸೆಂಬರ್ 2ರಂದು ರಾತ್ರಿ 11.30ರವರೆಗೆ ಎಚ್ಚರಿಕೆಯಿಂದಿರುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಕಾಸರಗೋಡಿಗೂ ಎಫೆಕ್ಟ್ ತಟ್ಟುವ ಹಿನ್ನೆಲೆಯಲ್ಲಿ ಮಂಗಳೂರಿಗೂ ಇದರ ಎಫೆಕ್ಟ್ ತಟ್ಟುವ ಸಾಧ್ಯತೆಯಿದೆ. ಕೇರಳ ತೀರದಲ್ಲಿ 45ರಿಂದ 65 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಈ ನಡುವೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಸಮುದ್ರ 100 ಮೀಟರ್ ತೀರವನ್ನು ನುಂಗಿಕೊಂಡಿದೆ.

    ಬೆಂಗಳೂರು: ಓಖಿ ಚಂಡಮಾರುತದ ಹಿನ್ನೆಲೆಯಲ್ಲಿ ನಿನ್ನೆ ಸಂಜೆಯಿಂದ ತುಂತುರು ಮಳೆ ಸಹಿತ ಮೋಡ ಕವಿದ ವಾತಾವರಣವಿದೆ. ಈ ವಾತಾವರಣ ಇನ್ನೂ ಎರಡು ದಿನಗಳ ಕಾಲ ಮುಂದುವರೆಯುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ 24 ಗಂಟೆಯಿಂದ ಕೋಲಾರದಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಕಳೆದ 24 ಗಂಟೆಯಿಂದ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದರೂ ಮಳೆಯಲ್ಲೇ ದಿನ ನಿತ್ಯದ ಕೆಲಸಕಾರ್ಯ ಗಳಲ್ಲಿ ಜನರು ತೊಡಗಿದ್ದಾರೆ. ನಿನ್ನೆಯಿಂದಲೇ ಜಿಲ್ಲೆಗೆ ಅಪ್ಪಳಿಸಿರುವ ಓಕ್ಲಿ ಚಂಡ ಮಾರುತ, ಮತ್ತೆ ಜಿಲ್ಲೆಯನ್ನ ತಂಪಾಗಿಸಿದ್ದಾನೆ. ಆದ್ರೆ ಜಿಲ್ಲೆಯ ರೈತರಲ್ಲಿ ಆತಂಕ ಮನೆ ಮಾಡಿದ್ದು, ರಾಗಿ ಸೇರಿದಂತೆ ದ್ವಿದಳ ಧಾನ್ಯಗಳ ಕಟಾವು ಹಾಗೂ ಒಕ್ಕಣಿಯಲ್ಲಿ ರೈತರು ತೊಡಗಿರುವ ಕಾರಣ, ಈ ಚಂಡ ಮಾರುತ ರೈತರಿಗೆ ಕಂಟಕವಾಗಲಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾದ ಓಖಿ ಚಂಡಮಾರುತ ಎಫೆಕ್ಟ್ ತುಮಕೂರು ಜೆಲ್ಲೆಗೂ ತಟ್ಟಿದೆ. ಪರಿಣಾಮ ತುಮಕೂರು ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿತ್ತು. ಮೈಸೂರು, ಮಂಡ್ಯ ಜಿಲ್ಲೆಯಲ್ಲೂ ತುಂತುರು ಮಳೆಯಾಗಿದೆ.