Tag: ಮಂಗಳೂರು ಪ್ರೆಸ್ ಕ್ಲಬ್

  • ಮಂಗಳೂರು ಪ್ರೆಸ್‍ಕ್ಲಬ್‍ನಲ್ಲಿ ಮಾಧ್ಯಮ ಗ್ರಂಥಾಲಯ ಉದ್ಘಾಟನೆ

    ಮಂಗಳೂರು ಪ್ರೆಸ್‍ಕ್ಲಬ್‍ನಲ್ಲಿ ಮಾಧ್ಯಮ ಗ್ರಂಥಾಲಯ ಉದ್ಘಾಟನೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳೂರು ಪ್ರೆಸ್‍ಕ್ಲಬ್ ಹಾಗೂ ಪತ್ರಿಕಾಭವನ ಟ್ರಸ್ಟ್ ಸಹಭಾಗಿತ್ವದಲ್ಲಿ ಆರಂಭಿಸಿರುವ ನೂತನ ಮಾಧ್ಯಮ ಗ್ರಂಥಾಲಯ ಮಂಗಳವಾರ ಉದ್ಘಾಟನೆಗೊಂಡಿತು.

    ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್ ರಾಯಮನೆ ಮಾಧ್ಯಮ ಗ್ರಂಥಾಲಯಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಿರಂತರವಾದ ಓದಿನಿಂದ ಹೆಚ್ಚಿನ ಜ್ಞಾನ ಸಂಪಾದನೆ ಸಾಧ್ಯ. ಸಮಾಜಕ್ಕೆ ಮೌಲ್ಯಯುತ ಸುದ್ದಿಗಳನ್ನು ನೀಡುವ ಪತ್ರಕರ್ತರ ನಿರಂತರ ಓದಿನ ದೃಷ್ಟಿಯಿಂದ ನೂತನ ಗ್ರಂಥಾಲಯ ಉಪಯುಕ್ತವಾಗಿದೆ. ಪ್ರತಿಯೊಬ್ಬರೂ ಉತ್ತಮ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಪತ್ರಕರ್ತರು ಕೇವಲ ಸುದ್ದಿಯನ್ನು ಮಾತ್ರ ನೀಡದೆ ಅದಕ್ಕೆ ಪೂರಕವಾಗುವ ಇತರ ಅಂಶಗಳನ್ನು ಓದುಗರಿಗೆ ಸಂಕ್ಷಿಪ್ತವಾಗಿ ನೀಡಬೇಕು. ಉತ್ತಮ ಬರವಣಿಗೆ ಕೂಡ ಓದಿನಿಂದ ಸಾಧ್ಯವಾಗುತ್ತದೆ ಎಂದು ಹೇಳಿದರು.

    ಮುಖ್ಯ ಅತಿಥಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ ಆರ್ ಮಾತನಾಡಿ, ಪ್ರಸಕ್ತ ಕಾಲಕ್ಕನುಗುಣವಾಗಿ ಜ್ಞಾನ ಪಡೆದುಕೊಳ್ಳುವ ನಿಟ್ಟಿನಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳದಿದ್ದರೆ ಬಹಳಷ್ಟು ಹಿಂದೆ ಉಳಿಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪತ್ರಕರ್ತರೂ ಕೂಡ ವಿಶೇಷ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ಗ್ರಂಥಾಲಯ ಅತ್ಯಂತ ಪೂರಕ ಎಂದು ಹೇಳಿದರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವಿಂದು ಮೊಬೈಲ್ ಲೋಕದಲ್ಲಿದ್ದೇವೆ ಎಂದ ಮಾತ್ರಕ್ಕೆ ಎಲ್ಲಾ ಮಾಹಿತಿಯನ್ನು ಅದು ಪೂರೈಸುತ್ತದೆ ಎನ್ನಲಾಗದು. ಹೆಚ್ಚಿನ ಜ್ಞಾನ ಸಂಪಾದನೆಗೆ ಪತ್ರಿಕೆ ಮತ್ತು ಉತ್ತಮ ಪುಸ್ತಕಗಳ ಓದುವಿಕೆ ಅತಿ ಮುಖ್ಯ. ನೂತನ ಗ್ರಂಥಾಲಯದಲ್ಲಿ ಪತ್ರಕರ್ತರ ಜ್ಞಾನ ವೃದ್ಧಿಸುವ, ಪ್ರೇರಣೆ ನೀಡುವ ಪುಸ್ತಗಳಿಗೆ ಆದ್ಯತೆ ನೀಡುವಂತಾಗಲಿ ಎಂದು ಆಶಿಸಿದರು.

    ಇದೇ ಸಂದರ್ಭ ಶಿವಾನಂದ ತಗಡೂರು ಅವರನ್ನು ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಎಸ್‍ಇಝಡ್‍ನ ಸಾರ್ವಜನಿಕ ಸಂಪರ್ಕಾಧಿಕಾರಿ ರಾಮಚಂದ್ರ ಭಂಡಾರ್ಕರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಸ್ವಾಗತಿಸಿದರು. ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಪುಷ್ಪರಾಜ್ ಬಿ.ಎನ್.ಕಾರ್ಯಕ್ರಮ ನಿರೂಪಿಸಿದರು.