Tag: ಮಂಗಳೂರು ದಸರಾ

  • ಮಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ `ಪಿಲಿನಲಿಕೆ’ – ಕಿಚ್ಚ ಸುದೀಪ್, ಜಿತೇಶ್ ಶರ್ಮಾ ಸೇರಿ ಸೆಲೆಬ್ರಿಟಿಗಳ ದಂಡು

    ಮಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ `ಪಿಲಿನಲಿಕೆ’ – ಕಿಚ್ಚ ಸುದೀಪ್, ಜಿತೇಶ್ ಶರ್ಮಾ ಸೇರಿ ಸೆಲೆಬ್ರಿಟಿಗಳ ದಂಡು

    – ಹುಲಿವೇಷ ತಂಡಕ್ಕೆ 2 ಲಕ್ಷ ರೂ. ಬಹುಮಾನ ಘೋಷಿಸಿದ ಝೈದ್ ಖಾನ್

    ಮಂಗಳೂರಿನಲ್ಲಿ ದಸರಾ (Mangaluru Dasara) ಹಿನ್ನೆಲೆ ಮಿಥುನ್ ರೈ ಅವರು ಆಯೋಜಿಸಿದ್ದ `ಪಿಲಿನಲಿಕೆ’ (Pilinalike) ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ತೆರೆದಿದ್ದು, ಕಾರ್ಯಕ್ರಮಕ್ಕೆ ನಟ ಕಿಚ್ಚ ಸುದೀಪ್ (Kiccha Sudeep), ಬಾಲಿವುಡ್ ನಟಿ ಪೂಜಾ ಹೆಗ್ಡೆ, ಕ್ರಿಕೆಟಿಗ ಜಿತೇಶ್ ಶರ್ಮಾ ಸೇರಿ ಸೆಲೆಬ್ರಿಟಿಗಳ ದಂಡೇ ಆಗಮಿಸಿತ್ತು.

    ದಸರಾ ಹಿನ್ನೆಲೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅನೇಕ ತಂಡಗಳು ಹುಲಿಕುಣಿತ ಮಾಡಿತ್ತು. ಈ ಕಲಾವಿದರಾದ ಕಿಚ್ಚ ಸುದೀಪ್, ಸುನೀಲ್ ಶೆಟ್ಟಿ, ಝೈದ್ ಖಾನ್, ಪೂಜಾ ಹೆಗ್ಡೆ, ಕ್ರಿಕೆಟಿಗ ಅಜಿಂಕ್ಯ ರಹಾನೆ, ಜಿತೇಶ್ ಶರ್ಮ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ಅಖಂಡ 2 ಸಿನಿಮಾ ರಿಲೀಸ್ ಡೇಟ್ ಫಿಕ್ಸ್ : ಬಾಲಯ್ಯ ನಟನೆಯ ಸಿನಿಮಾ

    ಕಾರ್ಯಕ್ರಮದಲ್ಲಿ ಒಂದು ತಂಡದ ನೃತ್ಯವನ್ನು ವೀಕ್ಷಿಸಿ ಬಹಳ ಸಂತೋಷಪಟ್ಟ ನಟ ಝೈದ್ ಖಾನ್ ಸ್ಥಳದಲ್ಲೇ ಆ ತಂಡಕ್ಕೆ 2 ಲಕ್ಷ ರೂ. ಬಹುಮಾನವನ್ನು ಘೋಷಣೆ ಮಾಡುವ ಮೂಲಕ ಹುಲಿಕುಣಿತಕ್ಕೆ ಪ್ರೋತ್ಸಾಹ ನೀಡಿದರು. ಇದನ್ನೂ ಓದಿ: ಕೊತ್ತಲವಾಡಿ ನಿರ್ದೇಶಕರ ಜೊತೆಗೆ ಪುಷ್ಪಮ್ಮ ಮತ್ತೊಂದು ಸಿನಿಮಾ

    ತುಂಬಾ ಸೊಗಸಾಗಿ ಹುಲಿನೃತ್ಯ ಮಾಡಿದ ಹುಡುಗನ ಪ್ರತಿಭೆಗೆ ಮನಸೋತ ಝೈದ್ ಖಾನ್, ಆತನಿಗೆ 50,000 ರೂ. ಹಣ ನೀಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. ಪ್ರಸ್ತುತ ಝೈದ್ ಖಾನ್ ಅವರು ನಾಯಕನಾಗಿ ನಟಿಸುತ್ತಿರುವ `ಕಲ್ಟ್’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಾಗೂ ಟೀಸರ್ ಪ್ರೇಕ್ಷಕರ ಮನ ಗೆದ್ದಿದೆ.

  • ಹುಲಿವೇಷದ ಹಿಂದಿದೆ ವಿಶೇಷ ಧಾರ್ಮಿಕ ನಂಬಿಕೆ!

    ಹುಲಿವೇಷದ ಹಿಂದಿದೆ ವಿಶೇಷ ಧಾರ್ಮಿಕ ನಂಬಿಕೆ!

    ಗಂತೂ ಎಲ್ಲರ ಬಾಯಲ್ಲೂ ಒಂದೇ ಪದ.. ಅದೇನೆಂದರೆ ಮೈಸೂರು ದಸರಾ (Mysuru Dasara). ಆದರೆ ನಮ್ಮ ಕರಾವಳಿ ಭಾಗದ ಜನರಲ್ಲಿ ನವರಾತ್ರಿ (Navratri) ಅಂದರೆ ನೆನಪಾಗೋದೇ ಹುಲಿವೇಷ (Hulivesha). ಹೌದು, ನವರಾತ್ರಿಯಲ್ಲಿ ಮಂಗಳೂರು, ಉಡುಪಿ ಭಾಗದಲ್ಲಂತೂ ಠಾಸೆ, ಡೋಲುಗಳದ್ದೇ ಸದ್ದು. ಮತ್ತೊಂದೆಡೆ ಹುಲಿ ವೇಷಗಳದ್ದೇ ದರ್ಬಾರ್‌.

    ತುಳುನಾಡಿನ ಸಂಪ್ರದಾಯಗಳಲ್ಲಿ ಪಿಲಿ ವೇಷವೂ ಒಂದು. ಮಂಗಳೂರು ದಸರಾದಲ್ಲಿ (Mangaluru Dasara) ಈ ಹುಲಿಗಳ ನರ್ತನವೇ ಒಂದು ಆಕರ್ಷಣೆ. ಮೊದಲೆಲ್ಲ ಬರೀ ಕರಾವಳಿ ಭಾಗದ ಜನರಿಗೆ ಮಾತ್ರ ಇದರ ಬಗ್ಗೆ ಗೊತ್ತಿತ್ತು. ಆದರೆ ಈ ಹುಲಿವೇಷಗಳನ್ನು ಸಿನಿಮಾ, ರಿಯಾಲಿಟಿ ಶೋಗಳಿಂದ ದೇಶ ವಿದೇಶದ ಜನರಿಗೂ ಈ ಹುಲಿವೇಷ ಚಿರಪರಿಚಿತವಾಗಿದೆ. ಇಷ್ಟೆಲ್ಲ ಹೇಳಿದ ಮೇಲೆ ಈ ಹುಲಿ ಕುಣಿತ ಹೇಗೆ ಶುರು ಆಯ್ತು ಅಂತ ತಿಳ್ಕೋಬೇಕು ಅಂದ್ರೆ ಮುಂದೆ ಓದಿ..

    ಹುಲಿವೇಷ ಹುಟ್ಟಿಕೊಂಡಿದ್ದು ಹೇಗೆ?
    ಇಷ್ಟಾರ್ಥ ಸಿದ್ಧಿಗಾಗಿ ಜನರು ದೇವರಿಗೆ ನಾನಾ ರೀತಿಯ ಹರಕೆಯನ್ನು ಹೊರುತ್ತಾರೆ. ಇದೇ ರೀತಿ ಹರಕೆಯ ರೂಪವಾಗಿ ಹುಲಿವೇಷ ಧರಿಸುವ ಸಂಪ್ರದಾಯದ ಹಿಂದೆಯೂ ಐಹಿತ್ಯಗಳಿವೆ. ತಾಯಿಯೊಬ್ಬರು ತನ್ನ ಮಗು ಹುಷಾರಾಗಿ ನಡೆಯಲು ಆರಂಭಿಸಿದರೆ ಮಗುವಿಗೆ ಹುಲಿ ವೇಷ ಹಾಕಿಸಿ ದೇವಸ್ಥಾನದ ಅಂಗಳದಲ್ಲಿ ನೃತ್ಯ ಮಾಡಿಸುವುದಾಗಿ ಹರಕೆ ಹೊತ್ತಿದ್ದರು ನಂಬಿಕೆಯಿದೆ.

    ದೈಹಿಕ ಸಮಸ್ಯೆಯ ಕಾರಣ ಮಗು ಕಾಲುಗಳಿದ್ದರೂ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಚಿಂತೆಗೊಳಗಾದ ತಾಯಿ ಮಂಗಳಾದೇವಿ ದೇವಾಲಯಕ್ಕೆ ಬಂದು ಕೈ ಮುಗಿದು, ನನ್ನ ಮಗು ಗುಣಮುಖವಾಗಿ ನಡೆದಾಡಲು ಪ್ರಾರಂಭಿಸಿದರೆ ಮುಂದಿನ ವರ್ಷ ನವರಾತ್ರಿ ಹಬ್ಬಕ್ಕೆ ಮಗುವಿಗೆ ಹುಲಿ ವೇಷ ಹಾಕಿಸಿ ಇದೇ ದೇವಸ್ಥಾನದ ಅಂಗಳದಲ್ಲಿ ಮಗುವಿನಿಂದ ಪಿಲಿ ನಲಿಕೆಯನ್ನು ಹರಕೆ ರೂಪದಲ್ಲಿ ಸಲ್ಲಿಸುವುದಾಗಿ ಪ್ರಾರ್ಥನೆ ಸಲ್ಲಿಸಿದ್ದರು.

    ಇದಾದ ಕೆಲ ದಿನಗಳ ಬಳಿಕ ಆ ಮಗು ಸಂಪೂರ್ಣವಾಗಿ ಗುಣಮುಖವಾಗಿ ನಡೆದಾಡಲು ಪ್ರಾರಂಭಿಸಿದನಂತೆ. ತಾಯಿ ತಾನು ಕೊಟ್ಟ ಮಾತಿನಂತೆ ಮರು ವರ್ಷವೇ ನವರಾತ್ರಿ ಹಬ್ಬದ ಸಮಯದಲ್ಲಿ ತಮ್ಮ ಮಗನಿಗೆ ಹುಲಿ ವೇಷವನ್ನು ಹಾಕಿಸಿ ಮಂಗಳಾದೇವಿ ದೇವಾಲಯದಲ್ಲಿ ಹುಲಿವೇಷದ ಹರಕೆಯನ್ನು ಸಲ್ಲಿಸಿದರು. ಅಂದಿನಿಂದ ನವರಾತ್ರಿಯ ಸಂದರ್ಭದಲ್ಲಿ ದುರ್ಗಾದೇವಿಗೆ ಗೌರವ ಸಲ್ಲಿಸಲು ಯುವಕರಿಂದ ಹಿಡಿದು ಪುಟ್ಟ ಮಕ್ಕಳವರೆಗೆ ಭಕ್ತಿ ಹಾಗೂ ಶ್ರದ್ಧಾಪೂರ್ವಕವಾಗಿ ಹುಲಿವೇಷವನ್ನು ಹಾಕುವ ಸಂಪ್ರದಾಯ ನಡೆದುಕೊಂಡು ಬಂದಿದೆ.

    ನವರಾತ್ರಿ ಬಂತೆಂದರೆ ಕರಾವಳಿಗರ ಕಣ್ಣಿಗಂತು ಹಬ್ಬವೇ ಸರಿ. ಎತ್ತ ನೋಡಿದರೂ ಹುಲಿಕುಣಿತ ಮೆರುಗು. ಈಗಂತೂ ಪಿಲಿಗೊಬ್ಬು, ಪಿಲಿಪಜ್ಜೆ, ಪಿಲಿನಲಿಕೆ ಎಂದು ನವರಾತ್ರಿಯಲ್ಲೇ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಕಡೆಯಿಂದ ಹುಲಿವೇಷದ ತಂಡಗಳು ಭಾಗವಹಿಸಿ, ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತಾರೆ. ಇಲ್ಲಿ ಕಿನ್ನಿ ಪಿಲಿಯಿಂದ ಹಿಡಿದು ದೊಡ್ಡವರು ಸಹ ಈ ಹುಲಿವೇಷ ಧರಿಸಿ ನರ್ತಿಸುತ್ತಾರೆ.

  • ಅದ್ಧೂರಿಯಾಗಿ ನಡೆದ ಮಂಗಳೂರು ದಸರಾ; ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಭಾಗಿ

    ಅದ್ಧೂರಿಯಾಗಿ ನಡೆದ ಮಂಗಳೂರು ದಸರಾ; ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಭಾಗಿ

    – ದಸರಾ ಮೆರವಣಿಗೆಗೆ ಮೆರುಗು ನೀಡಿದ ವಿವಿಧ ಸ್ತಬ್ಧ ಚಿತ್ರಗಳು

    ಮಂಗಳೂರು: ಜಗತ್ ಪ್ರಸಿದ್ಧ ಮಂಗಳೂರು ದಸರಾ (Mangaluru Dasara) ಮೆರವಣಿಗೆ ಭಾನುವಾರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ (Kudroli Gokarnanatha Temple) ಸಂಜೆ 4 ಗಂಟೆಗೆ ಆರಂಭಗೊಂಡಿತು. ಸುಮಾರು 60ಕ್ಕೂ ಅಧಿಕ ಸ್ತಬ್ಧಚಿತ್ರಗಳು ಈ ದಸರಾ ಮೆರವಣಿಗೆಗೆ ಮೆರುಗು ನೀಡಿತು. ದೇಶ – ವಿದೇಶಗಳಿಂದ ಬಂದ ಲಕ್ಷಾಂತರ ಮಂದಿ ಭಕ್ತರು ಈ ದಸರಾ ಮೆರವಣಿಗೆಗೆ ಸಾಕ್ಷಿಯಾದರು.

    ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕಳೆದ 10 ದಿನಗಳಿಂದ ಅದ್ಧೂರಿಯಾಗಿ ನಡೆದ ನವರಾತ್ರಿ ಮಹೋತ್ಸವಕ್ಕೆ ದಸರಾ ಮೆರವಣಿಗೆಯೊಂದಿಗೆ ತೆರೆ ಕಾಣಲಿದೆ. ಅಕ್ಟೋಬರ್ 3 ರಂದು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ದೀಪ ಬೆಳಗಿಸುವುದರೊಂದಿಗೆ ಆರಂಭಗೊಂಡ ಈ ದಸರಾ ಮೆರವಣಿಗೆ ಇಂದು ಬೃಹತ್ ಮೆರವಣಿಗೆಯೊಂದಿಗೆ ಸಂಪನ್ನಗೊಳ್ಳಲಿದೆ. ಸಂಜೆ ಸುಮಾರು 4 ಗಂಟೆಗೆ ಕ್ಷೇತ್ರದಿಂದ ಹೊರಟ ಈ ಬೃಹತ್ ದಸರಾ ಮೆರವಣಿಗೆಯಲ್ಲಿ ವಿಘ್ನನಿವಾರಕ ಗಣೇಶ, ಆದಿಶಕ್ತಿ, ನವದುರ್ಗೆಯರು ಹಾಗೂ ಶಾರದಾ ಮಾತೆಯರ ಮೂರ್ತಿಗಳನ್ನು ಸ್ತಬ್ಧ ಚಿತ್ರದೊಂದಿಗೆ ಕೊಂಡೊಯ್ಯಲಾಯಿತು. ದಸರಾ ಮಹೋತ್ಸವದ ರೂವಾರಿ ಬಿ.ಜನಾರ್ದನ ಪೂಜಾರಿ ನೇತೃತ್ವದಲ್ಲಿ ಈ ಬೃಹತ್ ದಸರಾ ಮೆರವಣಿಗೆ ನಡೆಯುತ್ತಿದೆ. ಸರ್ಕಾರದ ಯಾವುದೇ ಅನುದಾನವಿಲ್ಲದೆ ಇಷ್ಟು ಅಚ್ಚುಕಟ್ಟಾಗಿ ನಡೆಯುವ ಈ ದಸರಾವನ್ನು ಭಕ್ತರ ಸಹಕಾರದಿಂದ ಅದ್ಧೂರಿಯಾಗಿ ನಡೆಸಲಾಗುತ್ತದೆ. ಇದನ್ನೂ ಓದಿ: ಮಂಚಹಳ್ಳಿ, ಕೋಟೆಕೆರೆಯಲ್ಲಿ ಆನೆ ದಾಳಿಗೆ ರೈತರ ಟೊಮೆಟೊ, ತೆಂಗು ನಾಶ

    ಸುಮಾರು ಒಂದು ಸಾವಿರ ಆಕರ್ಷಕ ಕೇರಳ ಕೊಡೆಗಳು, ನೂರಕ್ಕೂ ಅಧಿಕ ಬ್ಯಾಂಡ್ ಸೆಟ್‌ಗಳು, ಸುಮಾರು 50 ಜಾನಪದ ಕುಣಿತಗಳ ತಂಡ, ಕೇರಳ ಚೆಂಡೆವಾದನ, ಕೊಂಬು ಕಹಳೆ, ದೇಶದ ಇತಿಹಾಸವನ್ನು ಬಿಂಬಿಸುವ ಸುಮಾರು 63 ಸ್ತಬ್ಧಚಿತ್ರಗಳು ಈ ದಸರಾ ಮೆರವಣಿಗೆಗೆ ಮೆರಗು ನೀಡಿತು. ದಾರಿಯುದ್ದಕ್ಕೂ ಆಕರ್ಷಕ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದರು. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ: ಪೊಲೀಸ್‌ ಕಸ್ಟಡಿಗೆ ಓರ್ವ ಕೊಲೆ ಆರೋಪಿ

    ಶ್ರೀ ಕ್ಷೇತ್ರದಿಂದ ಇಂದು ಸಂಜೆ ಹೊರಟ ಈ ಮೆರವಣಿಗೆ ನಗರದ ಸುಮಾರು 7 ಕಿಲೋ ಮೀಟರ್ ಸಾಗಿದ್ದು, ಸೋಮವಾರ ಮುಂಜಾನೆ 8 ಗಂಟೆಗೆ ಮತ್ತೆ ಶ್ರೀ ಕ್ಷೇತ್ರಕ್ಕೆ ತಲುಪಲಿದೆ. ಕ್ಷೇತ್ರದ ಪುಷ್ಕರಣಿಯಲ್ಲಿ ಗಣೇಶ, ಆದಿಶಕ್ತಿ, ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಯನ್ನು ವಿಸರ್ಜಿಸಲಾಗುವುದು. ಇದರೊಂದಿಗೆ ಈ ದಸರಾ ಮೆರವಣಿಗೆಗೆ ತೆರೆ ಬೀಳಲಿದೆ. ಇದನ್ನೂ ಓದಿ: ರಾಜ್ಯದ ಜನರ ಆಶೀರ್ವಾದ ಇರೋವರೆಗೂ ನನ್ನ ಯಾರೂ ಅಲ್ಲಾಡಿಸೋಕೆ ಆಗಲ್ಲ: ಸಿದ್ದರಾಮಯ್ಯ

  • ಮಂಗಳೂರು ದಸರಾದಲ್ಲಿ ಆಕರ್ಷಿಸಲ್ಪಡುವ ದೇವಿ ಮೂರ್ತಿಯ ತಯಾರಕರು ಇವರೇ ನೋಡಿ!

    ಮಂಗಳೂರು ದಸರಾದಲ್ಲಿ ಆಕರ್ಷಿಸಲ್ಪಡುವ ದೇವಿ ಮೂರ್ತಿಯ ತಯಾರಕರು ಇವರೇ ನೋಡಿ!

    ಮಂಗಳೂರು: ಮಂಗಳೂರು ದಸರಾ (Mangaluru Dasara) ನಡೆಯುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ (Kudroli Shri Gokarnath Kshetra) ಪೂಜಿಸಲ್ಪಡುವ ಮೂರ್ತಿಗಳೇ ಎಲ್ಲರನ್ನು ಆಕರ್ಷಿಸುತ್ತವೆ. ಮುದ್ದು ಮುಖದ ಶಾರದಾ ಮಾತೆ ಸೇರಿ ಎಲ್ಲಾ ದೇವರ ಮಣ್ಣಿನ ಮೂರ್ತಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬದ ವಾತಾವರಣದಂತಿರುತ್ತದೆ. ನವರಾತ್ರಿಯಲ್ಲಿ ಬರುವ ಎಲ್ಲ ಲಕ್ಷಾಂತರ ಜನರಿಗೆ ಅಲ್ಲಿನ ದೇವಿಯ ಮೂರ್ತಿಗಳೇ ಮುಖ್ಯವಾಗಿ ಸೆಳೆಯುತ್ತವೆ.

    ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಸಂಭ್ರಮಕ್ಕೆ ಮೆರಗು ನೀಡುವುದೇ ಗಣಪತಿ, ಆದಿಶಕ್ತಿ, ನವದುರ್ಗೆಯರು ಹಾಗೂ ಶಾರದಾ ಮಾತೆಯ ಮಣ್ಣಿನ ಮೂರ್ತಿಗಳು. ಈ ಮೂರ್ತಿಗಳನ್ನ ನೋಡುವ ಸಲುವಾಗಿ ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಬರುತ್ತಾರೆ. ಜೊತೆಗೆ ಒಂದೇ ಸೂರಿನಡಿ ನವದುರ್ಗೆಯರು, ಶಾರದಾ ಮಾತೆಯ ಪ್ರತಿಷ್ಟಾಪನೆ, ಆರಾಧನೆ ದೇಶದ ಬೇರೆಲ್ಲೂ ನಡೆಯುವುದಿಲ್ಲ. ಇಂತಹ ಅದ್ಬುತ ಮೂರ್ತಿಗಳಿಗೆ ಜೀವ ತುಂಬುವ ಕಲೆಗಾರರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಈ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೊಳ್ಳುವ ಮೂರ್ತಿಗಳನ್ನು ನೋಡಿ ಕಲಾವಿದನ ಕೈಚಳಕಕ್ಕೆ ಎಲ್ಲರೂ ಸೈ ಎನ್ನುತ್ತಾರೆ. ಆ ಕಲಾವಿದರು ಕಲೆಯ ಹಿಂದೆ ಇರುತ್ತಾರೆಯೇ ಹೊರತು ಎಲ್ಲಿಯೂ ಕಾಣಿಸಿಕೊಳ್ಳೋದಿಲ್ಲ. ಮೂರ್ತಿಗಳನ್ನು ರಚಿಸಿ ಅದಕ್ಕೆ ಜೀವ ತುಂಬುವ ಆ ಕಲಾವಿದರ ಕೈಚಳಕವೇ ಅದ್ಭುತ.

    ನವರಾತ್ರಿ ಉತ್ಸವ ಆರಂಭವಾದ ದಿನಗಳಲ್ಲಿ ಶಿವಮೊಗ್ಗದ ಬಿ.ಜೆ.ರಾಜಶೇಖರ್ ಹಾಗೂ ಅವರ ತಂಡದವರು ಮೂರ್ತಿ ರಚನೆ ಮಾಡುತ್ತಿದ್ದರು. ಇದೀಗ ಅದೇ ತಂಡದಲ್ಲಿ ಕಲಾವಿದನಾಗಿ ಶಿವಮೊಗ್ಗದ ಕುಬೇರ ತನ್ನ 18 ವರ್ಷದ ಪ್ರಾಯದಲ್ಲಿಯೇ ಕೆಲಸ ಆರಂಭಿಸಿದ್ದರು. ಶಿವಮೊಗ್ಗದ ಕುಬೇರ ಹಾಗೂ ಅವರ ಬಳಗ ಕಳೆದ ಏಳು ವರ್ಷದಿಂದ ನವರಾತ್ರಿಯ ಎಲ್ಲಾ 12 ಮೂರ್ತಿಗಳನ್ನು ರಚಿಸುತ್ತಾರೆ. ದೇವತೆಯ ಸ್ವರೂಪವಾದ ಮೂರ್ತಿಗಳನ್ನು ರಚಿಸುವಾಗ ಈ ಎಲ್ಲಾ ಕಲಾವಿದರು ಶ್ರದ್ದೆ, ನಿಷ್ಠೆ, ಭಕ್ತಿಯ ಜೊತೆ ವೃತಾಚರಣೆ, ಜಪವನ್ನು ಮಾಡಿ ಮೂರ್ತಿಗಳನ್ನು ರಚಿಸುತ್ತಾರೆ. ಆದೇ ಮಣ್ಣಿನಿಂದಲೇ ಪರಿಸರ ಪ್ರೇಮಿ ಬಣ್ಣಗಳನ್ನು ಬಳಸಿ ಮೂರ್ತಿಗಳ ರಚನೆ ಮಾಡುತ್ತಾರೆ. ದೇವಿಯೇ ನಮ್ಮ ಕೈಯಿಂದ ಈ ರೀತಿ ಸುಂದರವಾಗಿ ಮಾಡಿಸುತ್ತಾರೆ ಎನ್ನುವುದು ಕಲಾವಿದರ ಮಾತು.

    ಸುಮಾರು 40 ದಿನಗಳ ಕಾಲ ರಾತ್ರಿ-ಹಗಲು ಈ 12 ಮೂರ್ತಿಗಳನ್ನು 15 ಮಂದಿ ಕಲಾವಿದರು ಸೇರಿ ರಚನೆ ಮಾಡಿದ್ದಾರೆ. ಪ್ರತೀ ವರ್ಷವೂ ವಿಸರ್ಜನೆಗೊಳ್ಳುವ ಈ ಮೂರ್ತಿಗಳು ಮತ್ತೆ ಮುಂದಿನ ವರ್ಷ ಪ್ರತ್ಯಕ್ಷವಾಗಿದೆಯೇ ಅನ್ನುವಷ್ಟರ ಮಟ್ಟಿಗೆ ಅಷ್ಟೇ ಸುಂದರವಾಗಿ ಈ ಕಲಾವಿದರ ತಂಡ ಪ್ರತಿ ವರ್ಷ ಮೂರ್ತಿಗಳನ್ನು ರಚಿಸುತ್ತಾರೆ.

  • Photo Gallery | ಮಂಗಳೂರು ದಸರಾ ವೈಭವ – ಶಾರದಾ ಮಾತೆಗೆ ಅಷ್ಟ ದಿನದ ಅಲಂಕಾರ

    Photo Gallery | ಮಂಗಳೂರು ದಸರಾ ವೈಭವ – ಶಾರದಾ ಮಾತೆಗೆ ಅಷ್ಟ ದಿನದ ಅಲಂಕಾರ

    ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಮಹೋತ್ಸವದ ಸಂಭ್ರಮ ಮನೆಮಾಡಿದೆ. 9 ದಿನಗಳ ಕಾಲ ಈ ಕ್ಷೇತ್ರದಲ್ಲಿ ಪೂಜಿಸಲ್ಪಡುವ ನವದುರ್ಗೆಯರ ಮೂರ್ತಿಯೊಂದಿಗೆ ಶಾರದಾ ಮಾತೆಯ ಮೂರ್ತಿಯೂ ಪ್ರತಿಷ್ಠಾಪನೆಗೊಂಡಿದೆ. ಶಾರದಾ ಮಾತ್ರೆಗೆ ದಿನಕ್ಕೊಂದು ರೀತಿಯಲ್ಲಿ ವಿಶೇಷ ಅಲಂಕಾರ ಮಾಡುವ ಮೂಲಕ ದಸರಾ ವೈಭವಕ್ಕೆ ಮೆರುಗು ನೀಡಲಾಗುತ್ತಿದೆ. ಮಾತೆ ದರ್ಶನಕ್ಕೆ ಬರುವ ಭಕ್ತರು ಅದ್ಧೂರಿ ಅಲಂಕಾರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಹಾಗೆಯೇ ಕುದ್ರೋಳಿ‌ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಪೂಜಿಸಲ್ಪಡುವ ಶಾರದಾ ಮಾತೆಗೆ ನವರಾತ್ರಿಯ 8ನೇ ದಿನದ ದಿವ್ಯಾಲಂಕಾರ SPOTLIGHT PRODUCTIONS ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ…

  • ಕೈ ಬೀಸಿ ಕರೆಯುತ್ತಿದೆ ಮಂಗಳೂರು ದಸರಾ – ಬರೋಬ್ಬರಿ 22 ಲಕ್ಷ ಬಲ್ಬುಗಳಿಂದ ಅಲಂಕಾರ

    ಕೈ ಬೀಸಿ ಕರೆಯುತ್ತಿದೆ ಮಂಗಳೂರು ದಸರಾ – ಬರೋಬ್ಬರಿ 22 ಲಕ್ಷ ಬಲ್ಬುಗಳಿಂದ ಅಲಂಕಾರ

    ಮಂಗಳೂರು: ದಸರಾ ಎಂದರೆ ಮೊದಲು ನೆನಪಾಗುವುದು ಮೈಸೂರು ದಸರಾ(Mysuru Dasara). ಇತ್ತೀಚಿನ ದಿನಗಳಲ್ಲಿ ಮಂಗಳೂರು ದಸರಾ (Mangaluru Dasara) ಕೂಡ ಮೈಸೂರು ದಸರಾದಷ್ಟೇ ಪ್ರಖ್ಯಾತಿ ಪಡೆದಿದೆ. ಇದೀಗ ದಸರಾ ಸಂಭ್ರಮದಲ್ಲಿ ಬೆಳಕಿನ ಚಿತ್ತಾರದಿಂದ ಎಲ್ಲರನ್ನೂ ಸ್ವಾಗತಿಸಲು ಸಿದ್ಧವಾಗಿ ನಿಂತಿದೆ.

    ಮಂಗಳೂರು ದಸರಾ ನಡೆಯುತ್ತಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ (Kudroli Shri Gokarnanatheshwara Kshetra) ಸಂಜೆಯಾಗುತ್ತಿದ್ದಂತೆ ಭೂಲೋಕದ ಸ್ವರ್ಗದಂತೆ ಕಂಗೊಳಿಸುತ್ತದೆ. ದಸರಾ ಮೆರವಣಿಗೆ (Dasara Procession) ಹಾದುಹೋಗುವ ನಗರದ ಸುಮಾರು 7ಕಿ.ಮೀ. ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಬರೋಬ್ಬರಿ 22 ಲಕ್ಷ ಬಲ್ಬುಗಳನ್ನು ಬಳಸಿ ದೀಪಾಲಂಕಾರ ಮಾಡಲಾಗಿದೆ. ಈ ಬೆಳಕಿನ ಚಿತ್ತಾರ ಮಂಗಳೂರು ದಸರಾವನ್ನು ಮತ್ತಷ್ಟು ಕಂಗೊಳಿಸುವಂತೆ ಮಾಡಿದೆ.ಇದನ್ನೂ ಓದಿ: BBK 11: ಕಂಟೆಂಟ್‌ಗೋಸ್ಕರ ಲವ್ ಆಗುತ್ತಾ?: ಚೈತ್ರಾಗೆ ಅನುಷಾ ಪ್ರಶ್ನೆ

    7 ಕಿ.ಮೀ. ರಸ್ತೆಯುದ್ದಕ್ಕೂ ಮಾಡಿರುವ ವಿದ್ಯುತ್ ದೀಪಾಲಂಕಾರದಲ್ಲಿ 10 ಲಕ್ಷ ದೊಡ್ಡ ಪ್ರಮಾಣದ ಬಲ್ಬ್ಗಳು ಸೇರಿದಂತೆ ಒಟ್ಟು 22 ಲಕ್ಷಕ್ಕೂ ಅಧಿಕ ಬಲ್ಬ್ಗಳಿಂದ ಶೃಂಗರಿಸಲಾಗಿದೆ. ದಸರಾದ ಹಿನ್ನೆಲೆಯಲ್ಲಿ ನವರಾತ್ರಿ ಆರಂಭಗೊಂಡ ಮೊದಲ ದಿನದಿಂದ 10 ದಿನಗಳ ಕಾಲ ಸಂಜೆ 7 ಗಂಟೆಯಾಗುತ್ತಿದ್ದAತೆ ನಗರವು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತದೆ. ವಾಹನ ಜನಜಂಗುಳಿಯಿಂದ ಕೂಡಿದ ರಸ್ತೆಗಳು ಇದೀಗ ಬೆಳಕಿನ ಚಿತ್ತಾರದಿಂದ ಮಧುವಣಗಿತ್ತಿಯಂತೆ ಅಲಂಕೃತಗೊಂಡಿದೆ.

    ಮಂಗಳೂರು ದಸರಾವನ್ನು ಕಟ್ತುಂಬಿಕೊಳ್ಳಲು ರಾಜ್ಯದ ಬೇರೆ ಬೇರೆ ಕಡೆಯಿಂದ ಜನರು ಆಗಮಿಸುತ್ತಾರೆ. ಅ.13 ರಂದು ಅದ್ದೂರಿ ದಸರಾ ಮೆರವಣಿಗೆ ನಡೆಯಲಿದ್ದು, ಭರ್ಜರಿಯಾಗಿ ಅಲಂಕೃತಗೊಂಡಿದೆ.ಇದನ್ನೂ ಓದಿ: ಇವಿಎಂ ಹ್ಯಾಕ್‌ ಮಾಡಲಾಗಿದೆ: ಹರಿಯಾಣ ಸೋಲಿನ ಬಗ್ಗೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ದೂರು

  • Photo Gallery | ಮಂಗಳೂರು ನವರಾತ್ರಿ ಉತ್ಸವ – ಶಾರದಾ ಮಾತೆಗೆ 6ನೇ ದಿನದ ಶೃಂಗಾರ

    Photo Gallery | ಮಂಗಳೂರು ನವರಾತ್ರಿ ಉತ್ಸವ – ಶಾರದಾ ಮಾತೆಗೆ 6ನೇ ದಿನದ ಶೃಂಗಾರ

    ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಮಹೋತ್ಸವ ಕಳೆಗಟ್ಟಿದೆ. 9 ದಿನಗಳ ಕಾಲ ಈ ಕ್ಷೇತ್ರದಲ್ಲಿ ಆರಾಧನೆಗೊಳ್ಳಲಿರುವ ನವದುರ್ಗೆಯರ ಮೂರ್ತಿಯೊಂದಿಗೆ ಶಾರದಾ ಮಾತೆಯ ಮೂರ್ತಿಯನ್ನೂ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿದಿನ ಶಾರದಾ ಮಾತೆಗೆ ವಿಭಿನ್ನ ಅಲಂಕಾರ ಮಾಡುವ ಮೂಲಕ ಗಮನ ಸೆಳೆಯಲಾಗುತ್ತಿದೆ. ಹಾಗೆಯೇ ಕುದ್ರೋಳಿ‌ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ‌ಪ್ರತಿಷ್ಠಾಪನೆಗೊಂಡಿರುವ ಶಾರದಾ ಮಾತೆಗೆ ನವರಾತ್ರಿಯ ಆರನೇ ದಿನದ ಶೃಂಗಾರ ಮಾಡಿದ್ದು, ವೈಭವಪೂರಿತ ಅಲಂಕಾರ ದೃಶ್ಯ SPOTLIGHT PRODUCTIONS ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ…

  • Photo Gallery | ಮಂಗಳೂರಿನಲ್ಲಿ ಕಳೆಗಟ್ಟಿದ ದಸರಾ ಸಂಭ್ರಮ – ಶಾರದಾ ಮಾತೆಗೆ ದಿವ್ಯಾಲಂಕಾರ

    Photo Gallery | ಮಂಗಳೂರಿನಲ್ಲಿ ಕಳೆಗಟ್ಟಿದ ದಸರಾ ಸಂಭ್ರಮ – ಶಾರದಾ ಮಾತೆಗೆ ದಿವ್ಯಾಲಂಕಾರ

    ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಉತ್ಸವಕ್ಕೆ ವೈಭವೋಪೇತ ಚಾಲನೆ ಸಿಕ್ಕಿದೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ಈ ಕ್ಷೇತ್ರದಲ್ಲಿ ಆರಾಧನೆಗೊಳ್ಳಲಿರುವ ನವದುರ್ಗೆಯರ ಮೂರ್ತಿಯೊಂದಿಗೆ ಶಾರದಾ ಮಾತೆಯ ಮೂರ್ತಿಯನ್ನೂ ಪ್ರತಿಷ್ಠಾಪನೆ ಮಾಡಲಾಗಿದೆ. ಗಣಪತಿ, ಶಾರದಾ ಮಾತೆ, ಆದಿಶಕ್ತಿಯೊಂದಿಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸಿದ್ಧಿಧಾತ್ರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತೆ ಮಹಾಗೌರಿಯರಬನ್ನೂ ಇಲ್ಲಿನ ಸುಂದರ ಕಲಾಕೃತಿಗಳ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಸಂದರ್ಭದಲ್ಲಿ ಶಾರದಾ ಮಾತೆಯ ಅದ್ಧೂರಿ ಅಲಂಕಾರ, ದಸರಾ ಸಂಭ್ರಮದ ಕ್ಷಣಗಳು SPOTLIGHT PRODUCTIONS ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ…

     

  • ಮಂಗಳೂರು ದಸರಾಕ್ಕೆ ಅದ್ಧೂರಿ ಚಾಲನೆ – ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ನವದುರ್ಗೆ ಸಹಿತ ಶಾರದಾ ಮಾತೆ ಪ್ರತಿಷ್ಠಾಪನೆ

    ಮಂಗಳೂರು ದಸರಾಕ್ಕೆ ಅದ್ಧೂರಿ ಚಾಲನೆ – ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ನವದುರ್ಗೆ ಸಹಿತ ಶಾರದಾ ಮಾತೆ ಪ್ರತಿಷ್ಠಾಪನೆ

    – ದಸರಾಕ್ಕೆ ಚಾಲನೆ ನೀಡಿದ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ

    ಮಂಗಳೂರು: ಇಲ್ಲಿನ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ (Kudroli Shri Gokarnanatheshwara Kshetra) ನಡೆಯುವ ಮಂಗಳೂರು ದಸರಾಕ್ಕೆ ಗುರುವಾರ ಚಾಲನೆ ದೊರೆಯಿತು. ನವರಾತ್ರಿಯ ಒಂಬತ್ತು ದಿನಗಳ ಕಾಲ ಈ ಕ್ಷೇತ್ರದಲ್ಲಿ ಆರಾಧನೆಗೊಳ್ಳಲಿರುವ ನವದುರ್ಗೆಯರ ಮೂರ್ತಿ (Navadurga Idol) ಪ್ರತಿಷ್ಠಾನೆ ನಡೆಯಿತು. ಈ ಬಾರಿಯ ದಸರಾಕ್ಕೆ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಚಾಲನೆ ನೀಡಿದರು.

    ಮಂಗಳೂರು ದಸರಾ ಮಹೋತ್ಸವವನ್ನು ಆಯೋಜಿಸುತ್ತಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಇಂದಿನಿಂದ ಒಂಬತ್ತು ದಿನಗಳ ಕಾಲ ನಡೆಯಲಿರುವ ನವರಾತ್ರಿ ಮಹೋತ್ಸವ ‘ಮಂಗಳೂರು ದಸರಾ’ಕ್ಕಿಂದು (Mangaluru Dasara) ವಿದ್ಯುಕ್ತ ಚಾಲನೆ ದೊರೆಯಿತು. ಕ್ಷೇತ್ರದಲ್ಲಿ ವಿಘ್ನವಿನಾಶಕ ಗಣೇಶ, ವಿದ್ಯಾದೇವಿ ಶಾರದಾ ಮಾತೆ, ಆದಿಶಕ್ತಿ ಹಾಗೂ ನವದುರ್ಗೆಯರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಇದನ್ನೂ ಓದಿ: ಈ ಮೈಸೂರು ದಸರಾದ ಗಜಪಡೆ – ಅಭಿಮನ್ಯು & ಟೀಂ ಬಗ್ಗೆ ಇಲ್ಲಿದೆ ಫುಲ್‌ ಡಿಟೇಲ್ಸ್‌ 

    ಎಲ್ಲಾ ದೇವರನ್ನು ಏಕಕಾಲಕ್ಕೆ ಪ್ರತಿಷ್ಠಾಪಿಸಲಾಗಿದ್ದು, 9 ದಿನಗಳ ಕಾಲ ಪೂಜಾ ಕೈಂಕರ್ಯ ನೆರವೇರಲಿದೆ. ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಈ ಬಾರಿಯ ಮಂಗಳೂರು ದಸರಾಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಇದನ್ನೂ ಓದಿ: ಶಿವಮೊಗ್ಗ ದಸರಾಗೆ ವೈಭವದ ಚಾಲನೆ

    ಈ ಸುಂದರ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೊಂಡ ನವದುರ್ಗೆಯರು ದೇಶ ವಿದೇಶದ ಭಕ್ತರನ್ನು ಸೆಳೆಯುತ್ತದೆ. ಗಣಪತಿ, ಶಾರದಾ ಮಾತೆ, ಆದಿಶಕ್ತಿಯೊಂದಿಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸಿದ್ದಿದಾತ್ರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತೆ, ಮಹಾಗೌರಿಯರನ್ನ ಇಲ್ಲಿನ ಸುಂದರ ಕಲಾಕೃತಿಗಳ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದೆ. ಭೂಲೋಕದ ಸ್ವರ್ಗದಂತಿರುವ ಸಭಾಂಗಣದಲ್ಲಿ ಅತ್ಯಾಕರ್ಷ ಸಂಯೋಜನೆಯಲ್ಲಿ ಈ 12 ದೇವರುಗಳನ್ನು ನೋಡುವುದು ಭಕ್ತರ ಕಣ್ಣಿಗೊಂದು ಹಬ್ಬವೇ ಸರಿ. ಇದನ್ನೂ ಓದಿ: ವಿಜಯನಗರ ಸಾಮ್ರಾಜ್ಯದಿಂದ ಮೈಸೂರಿಗೆ ದಸರಾ ಸಾಗಿಬಂದ ಹಾದಿ – ನಾಡಹಬ್ಬ ಸಂಸ್ಕೃತಿ ನಿಮಗೆಷ್ಟು ಗೊತ್ತು?

    ಮೈಸೂರು ದಸರಾಕ್ಕೆ ಇದು ಸರಿಸಾಟಿ ಎಂದು ಭಕ್ತರು ಬಣ್ಣಿಸುತ್ತಾರೆ. ಈ ರೀತಿ ನವರಾತ್ರಿಯ ಸಂದರ್ಭ ದೇವರ ಪ್ರತಿಷ್ಠಾಪನೆ ದೇಶದ ಬೇರೆಲ್ಲೂ ಆಗೋದಿಲ್ಲ ಅನ್ನುವುದು ಇಲ್ಲಿನ ವಿಶೇಷತೆ. ಇದನ್ನೂ ಓದಿ: ದಿನೇಶ್ ಗುಂಡೂರಾವ್ ಗೋಹತ್ಯೆಗೆ ಬೆಂಬಲ ನೀಡುತ್ತಿದ್ದಾರೋ, ಗೋಮಾಂಸ ತಿನ್ನೋದನ್ನ ಸಮರ್ಥನೆ ಮಾಡ್ತಿದ್ದಾರೋ?- ಸಿ.ಟಿ.ರವಿ

    ಕ್ಷೇತ್ರದಲ್ಲಿ ಒಂಬತ್ತು ದಿನಗಳ ಕಾಲ ಪೂಜೆಗೊಳ್ಳುವ ಈ ಎಲ್ಲಾ ಮೂರ್ತಿಗಳನ್ನು ಅಕ್ಟೋಬರ್ 13 ರಂದು ದೇವಸ್ಥಾನದಲ್ಲೇ ವಿಸರ್ಜನಾ ಪೂಜೆ ನಡೆಸಿ ಕ್ಷೇತ್ರಕ್ಕೆ ಪ್ರದಕ್ಷಿಣೆ ಹಾಕಿ, ಬಳಿಕ ಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜಿಸಲಾಗುವುದು. ಸಂಭ್ರಮದ ಮಂಗಳೂರು ದಸರಾಕ್ಕೆ ನೀವೂ ಬನ್ನಿ.

  • ಅದ್ಧೂರಿಯಾಗಿ ತೆರೆಕಂಡ ಮಂಗಳೂರು ದಸರಾ

    ಅದ್ಧೂರಿಯಾಗಿ ತೆರೆಕಂಡ ಮಂಗಳೂರು ದಸರಾ

    ಮಂಗಳೂರು: ಇಲ್ಲಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ (Kudroli Gokarnanath Temple) ಕಳೆದ 9 ದಿನಗಳಿಂದ ಅದ್ದೂರಿಯಾಗಿ ನಡೆದ ನವರಾತ್ರಿ ಮಹೋತ್ಸವಕ್ಕೆ ದಸರಾ ಮೆರವಣಿಗೆಯೊಂದಿಗೆ ತೆರೆ ಬಿದ್ದಿತು.

    ಮಂಗಳವಾರ ಸಂಜೆ ಸುಮಾರು 4 ಗಂಟೆಗೆ ಕುದ್ರೋಳಿ ಕ್ಷೇತ್ರದಿಂದ ಹೊರಟ ಬೃಹತ್ ದಸರಾ ಮೆರವಣಿಗೆಯಲ್ಲಿ ವಿಘ್ನನಿವಾರಕ ಗಣೇಶ, ಆದಿಶಕ್ತಿ, ನವದುರ್ಗೆಯರು ಹಾಗೂ ಶಾರದಾ ಮಾತೆಯರ ಮೂರ್ತಿಗಳನ್ನು ಸ್ತಬ್ಧಚಿತ್ರದೊಂದಿಗೆ (Tableau) ಕೊಂಡೊಯ್ಯಲಾಯಿತು. ಬೃಹತ್ ದಸರಾ ಮೆರವಣಿಗೆ ಕೇಂದ್ರದ ಮಾಜಿ ಸಚಿವ ದಸರಾ ಮಹೋತ್ಸವದ ರೂವಾರಿ ಬಿ.ಜನಾರ್ದನ ಪೂಜಾರಿ (Janardhan Poojary) ನೇತೃತ್ವದಲ್ಲಿ ನಡೆಯಿತು. ಸರ್ಕಾರದ ಯಾವುದೇ ಅನುದಾನವಿಲ್ಲದೆ ಇಷ್ಟು ಅಚ್ಚುಕಟ್ಟಾಗಿ ನಡೆಯುವ ಈ ದಸರಾವನ್ನು ಎಲ್ಲರು ಕೊಂಡಾಡಿದರು.

    ಸುಮಾರು ಒಂದು ಸಾವಿರ ಆಕರ್ಷಕ ಕೇರಳ (Kerala) ಕೊಡೆಗಳು, ನೂರಕ್ಕೂ ಅಧಿಕ ಬ್ಯಾಂಡ್ ಸೆಟ್‍ಗಳು, ಸುಮಾರು 40 ಜಾನಪದ ಕುಣಿತಗಳ ತಂಡ, ಕೇರಳ ಚೆಂಡೆವಾದನ, ಕೊಂಬು ಕಹಳೆ ದೇಶದ ಇತಿಹಾಸವನ್ನು ಬಿಂಬಿಸುವ ಸುಮಾರು 60 ಕ್ಕೂ ಅಧಿಕ ಸ್ತಬ್ಧಚಿತ್ರಗಳು ಈ ದಸರಾ ಮೆರವಣಿಗೆಗೆ ಮೆರುಗು ನೀಡಿತು. ದಾರಿಯುದ್ದಕ್ಕೂ ಆಕರ್ಷಕ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು. ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದರು. ಇದೊಂದು ಜಗತ್ ಪ್ರಸಿದ್ಧ ದಸರಾ ಮೆರವಣಿಗೆ ಎಂದು ನೋಡಿದ ಜನ ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಬನ್ನಿಮಂಟಪದಲ್ಲಿ ದಸರಾಗೆ ವರ್ಣರಂಜಿತ ತೆರೆ; See You In 2024

    ಶ್ರೀ ಕ್ಷೇತ್ರದಿಂದ ಸಂಜೆ ಹೊರಟ ಮೆರವಣಿಗೆ ನಗರದ ಸುಮಾರು 7 ಕಿಲೋ ಮೀಟರ್ ಸಾಗಿದ್ದು, ಬುಧವಾರ ಮುಂಜಾನೆ ಮತ್ತೆ ಶ್ರೀ ಕ್ಷೇತ್ರಕ್ಕೆ ತಲುಪಲಿದೆ. ಕ್ಷೇತ್ರದ ಪುಷ್ಕರಣಿಯಲ್ಲಿ ಗಣೇಶ, ಆದಿಶಕ್ತಿ, ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಯನ್ನು ವಿಸರ್ಜಿಸಲಾಗಿದೆ. ಇದರೊಂದಿಗೆ ಈ ದಸರಾ ಮೆರವಣಿಗೆಗೆ ತೆರೆಬಿದ್ದಿದೆ. ಈ ದಸರಾ ಇನ್ನಷ್ಟು ಪ್ರಸಿದ್ಧಿ ಹೊಂದಲಿ ಅನ್ನೋದು ಭಕ್ತರ ಆಶಯ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]