Tag: ಮಂಗಳೂರು ಗೋಲಿಬಾರ್

  • ಮಂಗ್ಳೂರಿನಲ್ಲಿ ಇಬ್ಬರು ಅಮಾಯಕರನ್ನು ಪೊಲೀಸರೇ ಕೊಂದ್ರು: ಸಿದ್ದರಾಮಯ್ಯ ಆರೋಪ

    ಮಂಗ್ಳೂರಿನಲ್ಲಿ ಇಬ್ಬರು ಅಮಾಯಕರನ್ನು ಪೊಲೀಸರೇ ಕೊಂದ್ರು: ಸಿದ್ದರಾಮಯ್ಯ ಆರೋಪ

    – ಪೊಲೀಸ್ ಇಲಾಖೆ ಸರ್ಕಾರದ ಕೈಗೊಂಬೆ

    ಬೀದರ್: ಮಂಗಳೂರಿನಲ್ಲಿ ನಡೆದ ಗೋಲಿಬಾರ್ ನಲ್ಲಿ ಇಬ್ಬರು ಅಮಾಯಕರನ್ನು ಪೊಲೀಸಿನವರೇ ದುರುದ್ದೇಶದಿಂದ ಕೊಂದು ಬಿಟ್ಟರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪೊಲೀಸ್ ಇಲಾಖೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಭಾನುವಾರ ಪೌರತ್ವ ಕಾಯ್ದೆ ವಿರೋಧಿಸಿ ಜಂಟಿ ಕ್ರಿಯಾ ಸಮಿತಿಯಿಂದ ಬಸವಕಲ್ಯಾಣದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಪೊಲೀಸ್ ಇಲಾಖೆ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಸರ್ಕಾರದ ಕೈಗೊಂಬೆಯಂತೆ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದ್ದು, ಮಂಗಳೂರಿನಲ್ಲಿ ನಡೆದ ಗೋಲಿಬಾರ್‍ನಲ್ಲಿ ಇಬ್ಬರು ಅಮಾಯಕರು ಸತ್ತರು ಎಂದರು.

    ಸತ್ತವರು ಅಮಾಯಕರು ಅಲ್ಲಾ ಎಂದು ಬಿಜೆಪಿ ಹೇಳುತ್ತದೆ. ಆದರೆ ಕೋರ್ಟ್ ಅವರನ್ನು ಅಮಾಯಕರು ಎಂದು ಹೇಳುತ್ತದೆ ಎಂದು ಬಿಜೆಪಿ ಮೇಲೆ ಕಿಡಿಕಾರಿದರು. ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಶಾಸಕರಾದ ರಹೀಂಖಾನ್, ರಾಜಶೇಖರ್ ಪಾಟೀಲ್, ಬಿ ನಾರಾಯಣ್, ಬಂಡೆಪ್ಪ ಕಾಶೆಂಪೂರ್, ಎಂಎಲ್‍ಸಿ ಅರವಿಂದ ಅರಳಿ, ಹಲವು ಹೋರಾಟಗಾರು, ಪಕ್ಷದ ಮುಖಂಡರು ಹಾಗೂ ಸಾವಿರಾರು ಜನರು ಭಾಗಿಯಾಗಿದ್ದರು.

  • ಸಿಐಡಿಯಿಂದ ಮಂಗಳೂರು ಗೋಲಿಬಾರ್ ತನಿಖೆ ಪ್ರಾರಂಭ

    ಸಿಐಡಿಯಿಂದ ಮಂಗಳೂರು ಗೋಲಿಬಾರ್ ತನಿಖೆ ಪ್ರಾರಂಭ

    ಬೆಂಗಳೂರು: ರಾಜ್ಯ ಸರ್ಕಾರದ ಆದೇಶದ ಮೇರೆಗೆ ಸಿಐಡಿ ವಿಶೇಷ ತನಿಖಾ ತಂಡದಿಂದ ಮಂಗಳೂರು ಗೋಲಿಬಾರ್ ಬಗ್ಗೆ ತನಿಖೆ ಶುರುವಾಗಿದೆ.

    ಸಿಐಡಿಯ ಎಸ್‍ಪಿ ರಾಹುಲ್ ಕುಮಾರ್ ಮತ್ತು ಡಿಎಸ್‍ಪಿ ಬಾಲರಾಜ್ ನೇತೃತ್ವದ ತಂಡದಿಂದ ತನಿಖೆ ಪ್ರಾರಂಭವಾಗಿದೆ. ಪೌರತ್ವ ತಿದ್ದುಪಡಿ ವಿರೋಧಿಸಿ ನಡೆದಿದ್ದ ಭಾರಿ ಪ್ರತಿಭಟನೆ ಗಲಭೆಯಾಗಿ ಪರಿವರ್ತನೆಯಾಗಿತ್ತು. ಡಿಸೆಂಬರ್ 19 ರಂದು ಪೊಲೀಸರು ನಡೆಸಿದ್ದ ಗೋಲಿಬಾರ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಅಬ್ದುಲ್ ಜಲೀನ್ ಹಾಗೂ ನೌಶೀನ್ ಗೋಲಿಬಾರ್ ನಲ್ಲಿ ಸಾವನ್ನಪ್ಪಿದ್ದರು.

    ಸಾವನ್ನಪ್ಪಿದವರನ್ನು ಸೇರಿಸಿ ಆರೋಪಿಗಳನ್ನಾಗಿಸಿ ಒಟ್ಟು 29 ಮಂದಿಯ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿತ್ತು. ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಗೋಲಿಬಾರ್ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಮಂಗಳೂರಿಗೆ ತೆರಳಿದ ಸಿಐಡಿ ತಂಡ, ಗೋಲಿಬಾರ್ ನಡೆದ ಸ್ಥಳ ಹಾಗೂ ಸಿಸಿಟಿವಿ ಸಾಕ್ಷಿಗಳನ್ನು ಈಗ ಕಲೆ ಹಾಕಿ ತನಿಖೆ ಆರಂಭಿಸಿದೆ.

  • ಆಯ್ದ ವಿಡಿಯೋಗಳನ್ನು ಮಾತ್ರ ಬಿಡುಗಡೆ ಮಾಡೋದನ್ನು ನಿಲ್ಲಿಸಿ: ಮಂಗಳೂರು ಕಮಿಷನರ್

    ಆಯ್ದ ವಿಡಿಯೋಗಳನ್ನು ಮಾತ್ರ ಬಿಡುಗಡೆ ಮಾಡೋದನ್ನು ನಿಲ್ಲಿಸಿ: ಮಂಗಳೂರು ಕಮಿಷನರ್

    ಮಂಗಳೂರು: ಸಿಐಡಿ ಮತ್ತು ಮ್ಯಾಜಿಸ್ಟ್ರೀಯಲ್ ತನಿಖೆ ಬಳಿಕ ಮಂಗಳೂರು ಗಲಭೆಯ ಮೂಲ ಸತ್ಯ ಬಯಲಾಗಲಿದೆ. ಅಲ್ಲಿಯವರೆಗೆ ಎಡಿಟ್ ಮಾಡಿದ ವಿಡಿಯೋಗಳನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸಿ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್ ಹರ್ಷ ಹೇಳಿದ್ದಾರೆ.

    ಮಂಗಳೂರು ಗಲಭೆ ಸಂಬಂಧ ನಿನ್ನೆ ಮಾಜಿ ಸಿ.ಎಂ ಕುಮಾರಸ್ವಾಮಿ ರಿಲೀಸ್ ಮಾಡಿರುವ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿರುವ ಅವರು ಇತ್ತೀಚೆಗೆ ಕೆಲವರು ಆಯ್ದ ವಿಡಿಯೋವನ್ನು ತಮಗೆ ಬೇಕಾದ ರೀತಿ ಎಡಿಟ್ ಮಾಡಿ ಬಿಡುಗಡೆ ಮಾಡಿದ್ದಾರೆ. ಆದ್ರೆ ಗಲಭೆಯ ಸತ್ಯಾಂಶ ಮುಂದೆ ತನಿಖೆಯಲ್ಲಿ ತಿಳಿದು ಬರಲಿದೆ ಎಂದರು.

    ಈಗಾಗಲೇ ಪೊಲೀಸರು ಗಲಭೆಯ ಎಲ್ಲಾ ವಿಡಿಯೋಗಳನ್ನು ತನಿಖಾ ಸಂಸ್ಥೆಗಳಿಗೆ ನೀಡಿದ್ದಾರೆ, ಡಿ.19 ರಂದು ಮಂಗಳೂರು ಪೊಲೀಸರು ಗಲಭೆ ನಿಯಂತ್ರಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು. ಶುಕ್ರವಾರ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಮಂಗಳೂರು ಗಲಭೆಗೆ ಸಂಬಂಧಿಸಿದ ಕೆಲ ವಿಡಿಯೋ ಮತ್ತು ಫೋಟೋಗಳನ್ನು ಬಿಡುಗಡೆ ಮಾಡಿ ಮಂಗಳೂರು ಗಲಭೆ ಪೊಲೀಸರ ಪೂರ್ವ ನಿಯೋಜಿತ ಕೃತ್ಯ ಎಂದು ಆರೋಪ ಮಾಡಿದ್ದರು.

  • ಸಿಡಿಯ ಸತ್ಯಾಸತ್ಯತೆ ಬಗ್ಗೆ ತಜ್ಞರಿಂದ ವರದಿ ತರಿಸಿಕೊಳ್ಳುವ ಧೈರ್ಯ ನಿಮಗಿದೆಯೇ? ಹೆಚ್‍ಡಿಕೆ ಸವಾಲ್

    ಸಿಡಿಯ ಸತ್ಯಾಸತ್ಯತೆ ಬಗ್ಗೆ ತಜ್ಞರಿಂದ ವರದಿ ತರಿಸಿಕೊಳ್ಳುವ ಧೈರ್ಯ ನಿಮಗಿದೆಯೇ? ಹೆಚ್‍ಡಿಕೆ ಸವಾಲ್

    ಬೆಂಗಳೂರು: ಮಂಗಳೂರು ಗೋಲಿಬಾರ್ ಗೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಶುಕ್ರವಾರ ಕೆಲ ವಿಡಿಯೋಗಳನ್ನು ಬಿಡುಗಡೆಗೊಳಿಸಿದ್ದರು. ಈ ಸಿಡಿಗೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ, ಅದೆಲ್ಲಾ ಕಟ್ ಆಂಡ್ ಪೇಸ್ಟ್ ವೀಡಿಯೋ ಎಂದಿದ್ದಾರೆ. ಸಿಎಂ ಹೇಳಿಕೆ ಉತ್ತರ ನೀಡಿರುವ ಮಾಜಿ ಸಿಎಂ, ಸಿ.ಡಿ.ಯ ಸತ್ಯಾಸತ್ಯತೆ ಬಗ್ಗೆ ತಜ್ಞರಿಂದ ವರದಿ ತರಿಸಿಕೊಳ್ಳುವ ಧೈರ್ಯ ನಿಮಗಿದೆಯೇ ಎಂದು ಪ್ರಶ್ನಿಸಿದ್ದಾರೆ.

    ಇಂದು ಟ್ವಿಟ್ಟರ್ ನಲ್ಲಿ ಸಾಲು ಸಾಲು ಟ್ವೀಟ್ ಗಳ ಮೂಲಕ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.

    “ಅದಕ್ಕೆಲ್ಲಾ ಅರ್ಥ ಇದ್ಯೇನ್ರೀ, ಅದೆಲ್ಲಾ ಕಟ್ ಆಂಡ್ ಪೇಸ್ಟ್ ವೀಡಿಯೋ” ಎಂದಿದ್ದಾರೆ ಸಿಎಂ. ಸಿ.ಡಿ. ಬಿಡುಗಡೆ ವೇಳೆಯೇ ಇಂತಹ ಬಾಲಿಶತನದ ಪ್ರತಿಕ್ರಿಯೆ ಬಿಟ್ಟು ಮತ್ತೇನು ಬಿಜೆಪಿ ನಾಯಕರಿಂದ ನಿರೀಕ್ಷಿಸಲು ಸಾಧ್ಯ? ಎಂದಿದ್ದೆ. ಅದನ್ನು ರುಜುವಾತುಪಡಿಸಿದಿರಿ. ಸಿ.ಡಿ.ಯ ಸತ್ಯಾಸತ್ಯತೆ ಬಗ್ಗೆ ತಜ್ಞರಿಂದ ವರದಿ ತರಿಸಿಕೊಳ್ಳುವ ಧೈರ್ಯ ನಿಮಗಿದೆಯೇ? ಅದಕ್ಕೂ ಮಿಗಿಲಾಗಿ ನಿಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಿ. ನಾನು ಬಿಡುಗಡೆ ಮಾಡಿರುವ ‘ಸಿಡಿ’ಯನ್ನು ನೀವು ಸೃಷ್ಟಿಸಿಕೊಂಡಂತೆ ‘ಕಟ್ ಅಂಡ್ ಪೇಸ್ಟ್’ ಬಿಜೆಪಿ ಸರ್ಕಾರ ಎಂದುಕೊಂಡಿರಾ?

    ಉಪ ಚುನಾವಣೆಯಲ್ಲಿ ಸೋತ ಹತಾಶೆಯಿಂದ ಸ್ಥಿಮಿತ ಕಳೆದುಕೊಂಡ ಕುಮಾರಸ್ವಾಮಿ ಮಂಗಳೂರು ಗಲಭೆ ವಿಡಿಯೊ ಬಿಡುಗಡೆ ಮಾಡಿದ್ದಾರೆ ಎಂದು ಡಿಸಿಎಂ ಲಕ್ಮಣ ಸವದಿ ಆರೋಪಿಸಿದ್ದಾರೆ. ಸರಿ. ಹಾಗಾದರೆ ಸವದಿ ಅದ್ಯಾವ ಸ್ಥಿಮಿತ ಕಳೆದುಕೊಂಡು ಸದನದಲ್ಲಿ ನೀಲಿ ಚಿತ್ರ ನೋಡಿದರು? ಈ ಬಾರಿ ಅವರು ಯಾವ ಚುನಾವಣೆ ಗೆದ್ದಿದ್ದಾರೆ? ಸ್ಥಿಮಿತ ಉಳಿದಿದೆಯೇ? ಪೊಲೀಸರು ಗಲಭೆ ಮಾಡುವುದಿಲ್ಲ, ನಿಯಂತ್ರಿಸುತ್ತಾರೆ. ಕುಮಾರಸ್ವಾಮಿ ಕಾಲದಲ್ಲೂ ಅದೇ ಪೋಲೀಸರೇ ಇದ್ದರು ಎಂದಿದ್ದಾರೆ ಗೃಹ ಸಚಿವ. ಬೊಮ್ಮಾಯಿ ಅವರೇ ಅದು ನನ್ನ ಕಾಲ. ಶಾಂತಿ-ಸುವ್ಯವಸ್ಥೆಗಷ್ಟೇ ಪೊಲೀಸರ ಸೇವೆ ಪಡೆಯುತ್ತಿದ್ದೆವು. ಇದು ನಿಮ್ಮ ಕಾಲ. ಗಲಭೆ, ಗುಂಡೇಟಿಗೆ ನೀವು ಪೊಲೀಸರನ್ನು ಬಳಸಿಕೊಳ್ಳುತ್ತಿದ್ದೀರಿ.

    ನನ್ನ ಕಾಲದಲ್ಲೂ ಇದೇ ಪೊಲೀಸರಿದ್ದರು. ಹೌದು. ಆದರೆ ನನ್ನ ಕಾಲದಲ್ಲಿ ಗಲಭೆಗಳು ಯಾಕೆ ಆಗಲಿಲ್ಲ? ಗೋಲಿಬಾರ್ ಗಳು ಯಾಕೆ ಆಗಲಿಲ್ಲ? ಇದಕ್ಕೆ ನೀವು ಉತ್ತರಿಸುವಿರಾ? ಗಲಭೆಯ ಸಿಡಿ ಬಿಡುಗಡೆ ಮಾಡಿದ್ದಕ್ಕೆ ಸದಾನಂದಗೌಡ ವ್ಯಂಗ್ಯವಾಡಿದ್ದಾರೆ. ಸಿಡಿ ಹಲವರಿಗೆ ರಾಜಕೀಯ ಅಸ್ತಿತ್ವದ ಸ್ವತ್ತು ಎಂದಿದ್ದಾರೆ. ಬಿಜೆಪಿಯಲ್ಲಿ ಸದ್ದು ಮಾಡಿದ ಸಿಡಿಗಳ ಸಂಖ್ಯೆ ಒಂದೆರಡೇ? ಎಲ್ಲ ಸಿಡಿಗಳು ಬಯಲಾದರೆ ಬಿಜೆಪಿಗರು ಬೆತ್ತಲಾಗುತ್ತಾರಷ್ಟೇ. ಸಿಡಿಗಳು ಬಿಜೆಪಿಯ ಸ್ವತ್ತು. ಸಿಡಿ ಬಗ್ಗೆ ಮಾತಾಡುವಾಗ ಸದಾನಂದಗೌಡ ಎಚ್ಚರವಾಗಿರಲಿ.

    ಮಂಗಳೂರು ಶಾಂತಿಯಿಂದಿದೆ, ಮರಳಿ ಗಲಭೆ ಎಬ್ಬಿಸಿ ಅಲ್ಲಿ ಅಸ್ತಿತ್ವವೇ ಇಲ್ಲದ ತಮ್ಮ ಪಕ್ಷಕ್ಕೆ ನೆಲೆ ಕಲ್ಪಿಸಲು ಕುಮಾರಸ್ವಾಮಿ ಪ್ರಯತ್ನಿಸುತ್ತಿದ್ದಾರೆ ಎಂದು ಸೋದರಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಮಂಗಳೂರಿನ ಭಿನ್ನ ಧ್ವನಿಗಳ ಕೊರಳು ಬಿಗಿ ಹಿಡಿದು, ಉಸಿರುಗಟ್ಟಿಸಿ, ಸದ್ದು ಬಾರದಂತೆ ಮಾಡಿರುವುದು ನಿಮ್ಮ ಪ್ರಕಾರ ‘ಶಾಂತಿ’ಯೇ? ಮೆಕ್ಕಾಕ್ಕೆ ಹೋದಾಗ ಮುಸಲ್ಮಾನರು ಸೈತಾನನಿಗೆ ಕಲ್ಲು ಹೊಡೆಯುತ್ತಾರೆ. ಪೊಲೀಸರ ಮೇಲೆ ಕಲ್ಲು ತೂರಲು ಅವರೇನು ಸೈತಾನರೇ ಎಂದು ಸೋದರಿ ಶೋಭಾ ಪ್ರಶ್ನೆ ಮಾಡಿದ್ದಾರೆ. ಹಾಗಾದರೆ ಪೊಲೀಸರು ಕಲ್ಲು ತೂರಾಟ ಮಾಡಿದರಲ್ಲ. ಹೋರಾಟಗಾರರೇನು ಸೈತಾನರೇ? ಉತ್ತರಿಸುವಿರಾ ಶೋಭಾ ಅವರೇ?

    ಮಂಗಳೂರಿನಲ್ಲಿ ನಾನು ರಾಜಕಾರಣ ಮಾಡಬೇಕಿಲ್ಲ. ಅಲ್ಲಿ ರಾಜಕಾರಣ ಮಾಡುತ್ತಿರುವುದು ನೀವು. ಅಲ್ಲಿ ಕೋಮು ಗಲಭೆ ಉಂಟು ಮಾಡುತ್ತಿರುವುದು ನೀವು. ವಾಣಿಜ್ಯ ನಗರಿಯಾಗಬೇಕಿದ್ದ ಮಂಗಳೂರು ಕೋಮು ರಾಜಕಾರಣದ ಕಣವಾಗಿದ್ದು ಬಿಜೆಪಿಯಿಂದ. ಸಮುದ್ರ ತೀರದ ಜಗತ್ತಿನ ಹಲವು ಪ್ರದೇಶಗಳು ವಾಣಿಜ್ಯ ನಗರಿಗಳಾಗಿವೆ. ಅಷ್ಟೇ ಏಕೆ, ಮುಂಬೈ, ಚೆನ್ನೈ, ಕೊಚ್ಚಿ ನಮ್ಮ ದೇಶದ ಉದಾಹರಣೆಗಳು. ಮಂಗಳೂರಿಗೂ ಅಂಥದ್ದೇ ಅವಕಾಶಗಳಿದ್ದವು, ಇದೆ. ದೇಶಕ್ಕೆ ದೊಡ್ಡ ಬ್ಯಾಂಕ್ ಗಳನ್ನು ಕೊಟ್ಟದ್ದು ಇದೇ ಕರಾವಳಿ. ಆದರೆ ನಿಮ್ಮ ಚಿಲ್ಲರೆ ರಾಜಕಾರಣ ಮಂಗಳೂರಿನ ವಾಣಿಜ್ಯಿಕ ಬೆಳವಣಿಗೆಗೆ ಅಡ್ಡಗಾಲಾಗಿದೆ.

    ಮಂಗಳೂರು ಶಾಂತವಾದರೆ ಅದು ವಾಣಿಜ್ಯಿಕವಾಗಿ ಬೆಳವಣಿಗೆಯಾಗುತ್ತದೆ. ದೇಶಕ್ಕೆ ಮಾದರಿಯಾಗುವ ತನ್ನ ಐತಿಹಾಸಿಕ ಗುಣವನ್ನು ಮುಂದುವರಿಸಿಕೊಂಡು ಹೋಗುತ್ತದೆ. ಶಾಂತಿ ಸ್ಥಾಪನೆಯಾಗಬೇಕಿದ್ದರೆ ಬಿಜೆಪಿ ತೆಪ್ಪಗಿರಬೇಕಷ್ಟೇ. ಮಂಗಳೂರಿನಲ್ಲಿ ನಾನು ರಾಜಕಾರಣ ಮಾಡಬಾರದು ಎನ್ನುತ್ತಾರೆ ಸೋದರಿ ಶೋಭಾ. ಆದರೆ, ರಾಜಕೀಯ ಪಕ್ಷವೊಂದರ ಶಾಸಕಾಂಗ ಪಕ್ಷದ ನಾಯಕನಾದ ನಾನು ಮಂಗಳೂರಲ್ಲಿ ಏಕೆ ರಾಜಕಾರಣ ಮಾಡಬಾರದು? ಹಾಗೇನಾದರೂ ನನಗೆ ನಿರ್ಬಂಧವಿದೆಯೇ? ಮಂಗಳೂರಲ್ಲಿ ನಾನೂ ರಾಜಕಾರಣ ಮಾಡುತ್ತೇನೆ. ಆದರೆ ಬಿಜೆಪಿಯಂತಲ್ಲ. ಸಾತ್ವಿಕವಾಗಿ.

  • ಕುಮಾರಸ್ವಾಮಿ ಸಿಗ್ನಲ್ ಇಲ್ಲದೇ ಯೂಟರ್ನ್ ಹೊಡೆಯುತ್ತಾರೆ: ಸಿಟಿ ರವಿ

    ಕುಮಾರಸ್ವಾಮಿ ಸಿಗ್ನಲ್ ಇಲ್ಲದೇ ಯೂಟರ್ನ್ ಹೊಡೆಯುತ್ತಾರೆ: ಸಿಟಿ ರವಿ

    ಬಳ್ಳಾರಿ: ಮಂಗಳೂರು ಗಲಬೆಗೆ ಪೊಲೀಸ್ ಇಲಾಖೆಯೇ ಕಾರಣ ಎಂದು ಮಂಗಳೂರು ಎಸ್‍ಪಿ ಹರ್ಷ ಅವರನ್ನು ಅಮಾನತ್ತು ಮಾಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಸಚಿವ ಸಿಟಿ ರವಿ ಅವರು ತಿರುಗೇಟು ನೀಡಿದ್ದಾರೆ.

    ಹಂಪಿ ಉತ್ಸವದ ಮಳಿಗೆಗಳ ಉದ್ಘಾಟನೆ ಮಾಡಿ ಮಾತನಾಡಿದ ಸಿ.ಟಿ ರವಿ, ಪೊಲೀಸರು ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಎಂದು ಇರಲ್ಲಾ ಅವರೆಲ್ಲಾ ಈ ರಾಜ್ಯದ ಪೊಲೀಸರು. ಕುಮಾರಸ್ವಾಮಿ ಅವರು ಎರಡು ಸಾರಿ ಮುಖ್ಯಮಂತ್ರಿ ಆದವರು ಹೀಗಾಗಿ ಮಾತನಾಡುವ ಮುನ್ನ ಒಂದು ಸಾರಿ ವಿಚಾರ ಮಾಡಬೇಕು ಎಂದರು.

    ಅಲ್ಲದೆ ಪೊಲೀಸರ ಬಗ್ಗೆ ಹಗುರವಾಗಿ ಮಾತನಾಡಿ ಅವರ ನೈತಿಕ ಸ್ಥೈರ್ಯ ಕಡಿಮೆ ಮಾಡಿದ್ದಾರೆ. ಮಂಗಳೂರಿನಲ್ಲಿ ಕಲ್ಲು ಹೊಡೆದವರು ಪೊಲೀಸರಾ? ಬೆಂಕಿ ಹಚ್ಚಿದ್ದು ಪೊಲೀಸರಾ? ಎಂದು ಕುಮಾರಸ್ವಾಮಿ ಅವರಿಗೆ ಪ್ರಶ್ನೆ ಮಾಡಿದ್ದಾರೆ.

    ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬಾಂಗ್ಲಾ ವಲಸಿಗರನ್ನು ಹೊರ ಹಾಕಬೇಕು ಎನ್ನುತ್ತಿದ್ದರು. ಆದರೆ ಆದ್ರೆ ಈಗ ಯಾಕೆ ಈ ವಿರೋಧ. ಕುಮಾರಸ್ವಾಮಿ ಅವರ ಈ ನಡೆಯನ್ನು ನೋಡಿದರೆ ಸಿಗ್ನಲ್ ಇಲ್ಲದೇ ಯೂಟರ್ನ್ ಹೊಡೆಯುತ್ತಾರೆ ಎಂದು ಎನಿಸುತ್ತದೆ. ಜೆಡಿಎಸ್ ಒಂದು ಸೆಕ್ಯೂಲರ್ ಪಾರ್ಟಿ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರ ಹೇಳಿಕೆಯಿಂದ ಇದು ಅಪ್ಪ-ಮಕ್ಕಳ ಪಕ್ಷ ಎನಿಸತ್ತೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • ಮಂಗ್ಳೂರನ್ನು ‘ಕಾಶ್ಮೀರ’ ಮಾಡಲು ಹೊರಟಿದೆ, ಇದನ್ನು ತೋರಿಸಲು 35 ವಿಡಿಯೋ ರಿಲೀಸ್ – ‘ಸಿಡಿ’ದ ಎಚ್‍ಡಿಕೆ

    ಮಂಗ್ಳೂರನ್ನು ‘ಕಾಶ್ಮೀರ’ ಮಾಡಲು ಹೊರಟಿದೆ, ಇದನ್ನು ತೋರಿಸಲು 35 ವಿಡಿಯೋ ರಿಲೀಸ್ – ‘ಸಿಡಿ’ದ ಎಚ್‍ಡಿಕೆ

    ಬೆಂಗಳೂರು: ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು 35 ದೃಶ್ಯಗಳ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೊಂದು ಕಾಶ್ಮೀರ ಮಾಡಲು ಸರ್ಕಾರ ಹೊರಟಿದೆ. ಇದನ್ನು ತೋರಿಸಲು ಈ ವಿಡಿಯೋ ಬಿಡುಗಡೆ ಮಾಡಿದ್ದೇನೆ ಎಂದು ಹೇಳಿದರು.

    ಸರ್ಕಾರ ಯಾವುದೇ ತಪ್ಪು ಮಾಡದೇ ಇದ್ದಿದ್ದರೆ, ಪೊಲೀಸರು ಇಂತಹ ವರ್ತನೆ ತೋರಿಸದೇ ಹೋಗಿದ್ದರೆ ಏನು ಆಗುತ್ತಿರಲಿಲ್ಲ. ಎಲ್ಲಾ ಜಿಲ್ಲೆಯಲ್ಲಿ ಪ್ರತಿಭಟನೆ ನಡೆದಿದೆ. ಆದರೆ ಮಂಗಳೂರಿನಲ್ಲಿ ಮಾತ್ರ ಇಂತಹ ಘಟನೆ ನಡೆದಿದ್ದು, ಇದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರು. ಈ ಎಲ್ಲ ಘಟನೆಗಳಿಗೆ ಪೊಲೀಸ್ ಆಯುಕ್ತ ಹರ್ಷ ಅವರೇ ಕಾರಣ. ಕೂಡಲೇ ಅವರನ್ನು ಅಮಾನತುಗೊಳಿಸಬೇಕೆಂದು ಎಚ್‍ಡಿಕೆ ಆಗ್ರಹಿಸಿದರು.

    ಪ್ರಕರಣದ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ತನಿಖೆ ಮಾಡುತ್ತಿದ್ದಾರೆ. ಸರ್ಕಾರ ಹೇಳಿದಂತೆ ಅವರು ವರದಿ ನೀಡುತ್ತಾರೆ. ಜನತಾ ಅದಾಲತ್ ನಲ್ಲಿ ಜನರೇ ಈ ವಿಡಿಯೋ ಮಾಹಿತಿ ಕೊಟ್ಟಿದ್ದಾರೆ. ಪೊಲೀಸರೇ ಇಲ್ಲಿ ತಪ್ಪು ಮಾಡಿದ್ದಾರೆ ಎಂದು ಕುಮಾರಸ್ವಾಮಿ ದೂರಿದರು.

    ಅಂಗಡಿ ಮುಂದೆ ನಿಂತವರ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ. ಕಲ್ಲು ತುಂಬಿದ್ದ ಗಾಡಿ 4 ಟ್ರಿಪ್ ಬೇರೆ ಕಡೆ ಹೊಡೆದಿತ್ತು. ಉದ್ದೇಶ ಪೂರ್ವಕವಾಗಿ ಕಲ್ಲು ತುಂಬಿಸಿಕೊಂಡು ಬಂದಿರಲಿಲ್ಲ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಬಿಡುಗಡೆ ಮಾಡಿದ್ದೇನೆ ಎಂದು ತಿಳಿಸಿದರು.

    ಸಿಟಿಜನ್ ಫೋರಂನಿಂದ ಜನತಾ ಆಂದೋಲನ ಮಾಡಲು ತೀರ್ಮಾನ ಮಾಡಲಾಗಿತ್ತು. ಈ ಸಂಬಂಧ ನಿವೃತ್ತ ನ್ಯಾ.ಗೋಪಾಲಗೌಡ, ಸುಗತ ಶ್ರೀನಿವಾಸ್ ಸೇರಿ 3 ಜನತಾ ತಂಡ ರಚನೆ ಮಾಡಿ ಜನತಾ ಅದಾಲತ್ ಮಾಡಲಾಗಿತ್ತು. ಮಂಗಳೂರು ಗಲಭೆ ಸಂಬಂಧ ದಾಖಲಾತಿ ಸಂಗ್ರಹ ಮಾಡಿದ್ದೇನೆ. ವಿಧಾನಸಭೆಯಲ್ಲಿ ಈ ವಿಚಾರದ ಬಗ್ಗೆ ಮಾಡುತ್ತೇನೆ. ಪೊಲೀಸರು ಮಾಡಿದ ತಪ್ಪನ್ನು ಚರ್ಚೆ ಮಾಡುತ್ತೇನೆ. ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು ಪ್ರಕರಣ ತಿರುಚಲು ಹೋಗುತ್ತಿದೆ. ಮೊನ್ನೆ ಜನತಾ ಅದಾಲತ್ ಮಾಡಲು ಹೋದಾಗ ಅಲ್ಲಿನ ಎಸ್‍ಐ ಅದಕ್ಕೆ ಅವಕಾಶ ನೀಡಲಿಲ್ಲ. ಪೊಲೀಸರಿಗೆ ಈ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದರು.

  • ಭಾರತ್ ಮಾತಾಕೀ ಜೈ ಎನ್ನುವುದಿಲ್ಲ – ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲಿಯಾಸ್ ಮಹ್ಮದ್ ತುಂಬೆ

    ಭಾರತ್ ಮಾತಾಕೀ ಜೈ ಎನ್ನುವುದಿಲ್ಲ – ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲಿಯಾಸ್ ಮಹ್ಮದ್ ತುಂಬೆ

    – ಕರ್ನಾಟಕ, ಉತ್ತರ ಪ್ರದೇಶದಲ್ಲಿ ಪೊಲೀಸರದ್ದು ಪೂರ್ವಯೋಜಿತ ಕೃತ್ಯ

    ಕಾರವಾರ: ನಾವು ಯಾವುದೇ ಕಾರಣಕ್ಕೂ ಭಾರತ್ ಮಾತಾಕೀ ಜೈ ಎನ್ನುವುದಿಲ್ಲ ಎಂದು ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಇಲಿಯಾಸ್ ಮಹ್ಮದ್ ತುಂಬೆ ಹೇಳಿದ್ದಾರೆ.

    ಸಿ.ಎ.ಎ ಮತ್ತು ಎನ್.ಆರ್.ಸಿ ವಿರುದ್ಧ ಪ್ರತಿಭಟಿಸುತಿದ್ದ ಜನರ ಮೇಲೆ ಮಂಗಳೂರಿನಲ್ಲಿ ಲಾಠಿ ಚಾರ್ಜ್ ಹಾಗೂ ಗೋಲಿಬಾರ್ ನಲ್ಲಿ ಇಬ್ಬರ ಜೀವ ಬಲಿಯಾಗಿದ್ದು ಹಲವಾರು ಜನರು ಗಾಯಗೊಂಡಿರುವ ಘಟನೆ ನಾಗರೀಕ ಸಮಾಜವನ್ನು ತೀವ್ರ ಘಾಸಿ ಗೊಳಿಸಿದೆ ಎಂದು ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಇಲಿಯಾಸ್ ಮಹ್ಮದ್ ತುಂಬೆ ಬೇಸರ ವ್ಯಕ್ತಪಡಿಸಿದರು.

    ಇಂದು ಕಾರವಾರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಹತ್ತು ದಿನಗಳಿಂದ ದೆಹಲಿಯಲ್ಲಿ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ವಿಪರ್ಯಾಸ ಅಂದ್ರೆ ಕೇಂದ್ರ ಸರ್ಕಾರಕ್ಕೆ ಕಣ್ಣು ಕಿವಿ ಸರಿಯಾಗಿಲ್ಲ. ಕೇವಲ ಬಿಜೆಪಿ ಆಡಳಿತದಲ್ಲಿರುವ ರಾಜ್ಯದಲ್ಲಿ ಮಾತ್ರ ಹಿಂಸಾಚಾರಗಳು ನಡೆಯುತ್ತಿವೆ. ಸಾವಿರಾರು ಮಂದಿ ಆಸ್ಪತ್ರೆ ಸೇರುವಂತಾಗಿದೆ ಬಿಜೆಪಿ ಅಧಿಕಾರದಲ್ಲಿಲ್ಲದ ರಾಜ್ಯಗಳಲ್ಲಿ ಪೊಲೀಸರು ಯಾವುದೇ ಹಿಂಸಾಚಾರವನ್ನೂ ನಡೆಸಿಲ್ಲ ಎಂದು ತಿಳಿಸಿದರು.

    ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಾವು ಪ್ರತಿಕಾರ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಇದು ಏನನ್ನ ಸೂಚಿಸುತ್ತದೆ. ನಮ್ಮ ಪ್ರಜಾಪ್ರಭುತ್ವ ರಾಷ್ಟ್ರ, ಕಾನೂನಿನ ಪ್ರಕಾರ ದೇಶದ ಎಲ್ಲರೂ ಸಮಾನರು, ಸಂವಿಧಾನವನ್ನು ಕಾಲಡಿ ಹಾಕಿ ತುಳಿಯುವಂತೆ ನಿಯಮಗಳನ್ನು ರೂಪಿಸುವುದನ್ನು ವಿರೋಧಿಸುವವರನ್ನ ಹತ್ತಿಕ್ಕುವ ಕೆಲಸವನ್ನ ಸರ್ಕಾರವೇ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ಮೇಲೆ ಕಿಡಿಕಾರಿದರು.

    ಸೆಕ್ಷನ್ 144ನ್ನ ತರಾತುರಿಯಲ್ಲಿ ರಾತ್ರಿ ವೇಳೆ ಜಾರಿ ಮಾಡಿದ್ದರು, ಮಂಗಳೂರಿನಲ್ಲಿ ಪ್ರತಿಭಟನೆಗೆ ಮೊದಲೇ ಅನುಮತಿ ಪಡೆದುಕೊಂಡಿದ್ದು ಹಿಂದಿನ ರಾತ್ರಿ ನಿಷೇಧಾಜ್ಞೆ ಜಾರಿ ಮಾಡಿದ್ದು ಸಾಕಷ್ಟು ಪ್ರತಿಭಟನಾಕಾರರಿಗೆ ಗೊತ್ತಿರಲಿಲ್ಲ. ಈ ವೇಳೆ ಸಿಂಡಿಕೇಟ್ ಬ್ಯಾಂಕ್ ವೃತ್ತದಲ್ಲಿ ಏನೂ ಅರಿಯದೇ ನಿಂತಿದ್ದವರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನೆಗೆ ಬಂದವರು ಕಲ್ಲು ತೂರಾಟ ಮಾಡದೇ ಬೇರೆ ದಾರಿ ಇರಲಿಲ್ಲ. ಈ ಹಿಂದೆ ನಿಷೇಧಾಜ್ಞೆ ಇದ್ದಾಗ ಸಾಕಷ್ಟು ಕಡೆ ಪ್ರತಿಭಟನೆಗಳಾಗಿವೆ, ಮೆರವಣಿಗೆಗಳು ನಡೆದಿವೆ. ಆದರೆ ಯಾವ ಕಡೆಗಳಲ್ಲೂ ಈ ರೀತಿ ಗುಂಡಿನ ದಾಳಿ ಲಾಠಿ ಚಾರ್ಜ್ ನಡೆದಿಲ್ಲ. ಮಂಗಳೂರಿನಲ್ಲಿ ಮಾತ್ರ ಯಾಕೆ? ಎಂದು ಪ್ರಶ್ನೆ ಮಾಡಿದರು.

    ಪೊಲೀಸರು ಬಂದರು ರಸ್ತೆಯಲ್ಲಿ ನಿಂತಿದ್ದವರ ಮೇಲೆ ಎದೆಗೆ ಗುಂಡು ಹೊಡೆದು ಸಾಯಿಸುತ್ತೇನೆ ಎಂದು ಹೇಳಿಕೊಂಡು ಗುಂಡು ಹಾರಿಸಿದ್ದಾರೆ. ನಮ್ಮಲ್ಲಿ ಇಬ್ಬರು, ಉತ್ತರ ಪ್ರದೇಶದಲ್ಲಿ 23ಕ್ಕೂ ಅಧಿಕ ಮಂದಿಯ ಮೇಲೆ ಗುಂಡು ಹಾರಿಸಿದ್ದಾರೆ. ಹೈಲ್ಯಾಂಡ್ ಆಸ್ಪತ್ರೆ ಒಳಹೊಕ್ಕು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಬೇರೆ ರಾಜ್ಯಗಳಲ್ಲಿ ಈ ರೀತಿ ಹಿಂಸಾಚಾರ ನೋಡಿದ್ದೆವು, ಮಂಗಳೂರನಲ್ಲಿ ಇಂತಹ ಘಟನೆ ನೋಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಮೃತರ ಮನೆಗೆ ಭೇಟಿ ನೀಡಿದ ಸಿಎಂ ಸಾಂತ್ವನ ಹೇಳಿ 5 ಲಕ್ಷ ಪರಿಹಾರ ಘೋಷಣೆ ಮಾಡಿದರು. ಆದರೆ ಬೆಂಗಳೂರಿಗೆ ಹೋದ ಬಳಿಕ ಪರಿಹಾರ ಕೊಡಲ್ಲ ಎಂದು ಮಾತು ಬದಲಿಸಿದ್ದಾರೆ. ಯಾರಾದರೂ ಕಕ್ಕಿದ್ದನ್ನ ವಾಪಸ್ ತಿಂತಾರಾ? ಎಂದು ಮುಖ್ಯಮಂತ್ರಿಗಳ ನಡೆಗೆ ಅಕ್ರೋಶ ವ್ಯಕ್ತಪಡಿಸಿದರು. ಮೂರು ಪೊಲೀಸ್ ಅಧಿಕಾರಿಗಳ ದಡ್ಡತನ, ದರ್ಪದಿಂದ ಈ ರೀತಿ ಹಿಂಸಾಚಾರ ನಡೆಯುವಂತಾಗಿದೆ. ಆದರೆ ಯಾವುದೇ ಗುಂಡುಗಳಿಂದ ಲಾಠಿ ಚಾರ್ಜ್ ನಿಂದ ಜನರ ಪ್ರತಿಭಟನೆಗಳನ್ನ ಹತ್ತಿಕ್ಕಲು ಸಾಧ್ಯವಿಲ್ಲ. ನಮ್ಮ ಆಸ್ತಿತ್ವದ ಪ್ರಶ್ನೆ ಬಂದಾಗ ಸುಮ್ಮನೆ ಕೂರುವುದು ಸಾಧ್ಯವಿಲ್ಲ ಇಂತಹ ಸರ್ಕಾರವನ್ನು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

    ಎನ್.ಆರ್.ಸಿ ಯನ್ನು ದೇಶದಾದ್ಯಂತ ಜಾರಿ ಮಾಡ್ತೀವಿ ಎಂದು ಅಮಿತ್ ಶಾ ಹೇಳ್ತಾರೆ. ಆದರೆ ಪ್ರಧಾನಿ 2014-19 ರ ಅವಧಿಯಲ್ಲಿ ನಾವು ಎನ್.ಆರ್.ಸಿ ಬಗ್ಗೆ ಮಾತನಾಡಿಲ್ಲ ಅಂತಾರೆ. ಗೃಹಮಂತ್ರಿಗಳು ನಾವು ಕರ್ನಾಟಕದಲ್ಲಿ ಮೊದಲು ಎನ್.ಆರ್.ಸಿ ಜಾರಿ ಮಾಡ್ತೀವಿ ಅಂತಾರೆ. ಒಬ್ಬ ವ್ಯಕ್ತಿ ಎಷ್ಟು ಬಾರಿ ಸುಳ್ಳು ಹೇಳಿ ನಂಬಿಸಲು ಸಾಧ್ಯವಿದೆ. ಇದು ಕೇವಲ ಮುಸ್ಲಿಮರ ಪ್ರಶ್ನೆಯಲ್ಲ, ಬುಡಕಟ್ಟು, ದಲಿತರು, ಬಡವರಿಗೂ ತೊಂದರೆಯಾಗುತ್ತದೆ. ಇದು ದೇಶದ ಮತ್ತೊಂದು ಸ್ವಾತಂತ್ರ್ಯ ಸಮರ ಪ್ರಾರಂಭವಾಗಿದೆ. ನಾವು ಈ ನಿಟ್ಟಿನಲ್ಲೇ ಹೋರಾಟ ಮುಂದುವರೆಸುತ್ತೇವೆ ಎಂದರು.

    ಭಾರತ ಮಾತಕೀ ಜೈ ಎನ್ನುವುದಿಲ್ಲ
    ಅಲ್ಲಾಹು ಅಕ್ಬರ್ ಎನ್ನುವ ಜೊತೆ ಭಾರತ್ ಮಾತಾಕೀ ಜೈ ಎನ್ನಬಹುದಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಇಲಿಯಾಸ್ ಮಹ್ಮದ್ ತುಂಬಿ ನಾವು ಯಾವುದೇ ಕಾರಣಕ್ಕೂ ಭಾರತ್ ಮಾತಾಕೀ ಜೈ ಎನ್ನುವುದಿಲ್ಲ ಎಂದರು. ಇದೇ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಗಾಗಿ ತಂದಿದ್ದ ಪತಂಜಲಿ ನೀರಿನ ಬಾಟಲ್ ನಲ್ಲಿ ಇದ್ದ ಪತಾಂಜಲಿ ದಿವ್ಯ ಜಲ್ ಎಂಬ ಲೇಬಲ್ ಅನ್ನು ಹರಿದುಹಾಕಿ ನಂತರ ನೀರನ್ನು ಕುಡಿಯುವ ಮೂಲಕ ಪರೋಕ್ಷವಾಗಿ ಧಾರ್ಮಿಕ ಮುಖಂಡರ ವಿರುದ್ಧ ಕಿಡಿ ಕಾರಿದರು.

  • ಗೋಲಿಬಾರ್ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ: ಮುಸ್ಲಿಂ ಸೆಂಟ್ರಲ್ ಕಮಿಟಿ

    ಗೋಲಿಬಾರ್ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ: ಮುಸ್ಲಿಂ ಸೆಂಟ್ರಲ್ ಕಮಿಟಿ

    ಮಂಗಳೂರು: ನಗರದಲ್ಲಿ ನಡೆದ ಗೋಲಿಬಾರ್ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ದಕ್ಷಿಣ ಕನ್ನಡ-ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿ ಒತ್ತಾಯಿಸಿದೆ.

    ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಿಟಿಯ ಅಧ್ಯಕ್ಷ ಎಂ.ಕೆ.ಮಸೂದ್, ಮಂಗಳೂರಿನ ಗೋಲಿಬಾರ್ ಘಟನೆಗೆ ಕಾರಣ ಯಾರು ಎಂದು ಪ್ರಶ್ನಿಸಿದ್ದು, ಆವತ್ತು ಕಫ್ರ್ಯೂ ವಿಧಿಸಿ, ಫೈರಿಂಗ್ ಮಾಡಿದ್ದಾರೆ. ಕಫ್ರ್ಯೂ ವಿಧಿಸಿರುವ ಬಗ್ಗೆ ಜನರಿಗೆ ತಿಳಿಸದೇ ಫೈರ್ ಮಾಡಿದ್ದು ಯಾಕೆ? ಕಫ್ರ್ಯೂ ವಿಧಿಸಿದ್ದ ಬಗ್ಗೆ ಜನತೆಗೆ ಯಾವುದೇ ಮಾಹಿತಿ ನೀಡದ ಪೊಲೀಸರು ಗೋಲಿಬಾರ್ ನಡೆಸುವ ಬಗ್ಗೆಯೂ ಜನತೆಯನ್ನು ಎಚ್ಚರಿಸಿಲ್ಲ. ಹೀಗಾಗಿ ಈ ಘಟನೆಗೆ ಕಾರಣವಾದ ಅಧಿಕಾರಿಗಳನ್ನು ಶಿಕ್ಷಿಸಬೇಕು. ನಿಜವಾದ ವಿಚಾರ ಹೊರ ಬರಬೇಕಾದ್ರೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

    ಸಿಎಎ ವಿರುದ್ಧ ಸೆಂಟ್ರಲ್ ಕಮಿಟಿಯಡಿ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಪ್ರತಿಭಟಿಸುತ್ತೇವೆ. ಕ್ರಿಸ್ಮಸ್ ಹಿನ್ನೆಲೆ ಡಿ.28ರಂದು ನಡೆಸಬೇಕಿದ್ದ ಪ್ರತಿಭಟನೆಯನ್ನು ಮುಂದೂಡಿಕೆ ಮಾಡಲಾಗಿದೆ. ಜ.4 ರಂದು ಪೊಲೀಸ್ ಅನುಮತಿ ಪಡೆದು ಪ್ರತಿಭಟಿಸುತ್ತೇವೆ. ಪ್ರತಿಭಟಿಸಲು ಖಂಡಿತವಾಗಿಯೂ ಪ್ರಜಾಪ್ರಭುತ್ವದಲ್ಲಿ ಆಸ್ಪದವಿದೆ. ಹೀಗಾಗಿ ಅನುಮತಿ ಸಿಗುವ ನಂಬಿಕೆ ಇದೆ ಎಂದರು. ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರು ಮತ್ತು ಗಾಯಾಳು ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು. ಈಗ ಸರ್ಕಾರ ಮೃತರ ಕುಟುಂಬಸ್ಥರಿಗೆ ಘೋಷಿಸಿದ 10 ಲಕ್ಷ ರೂ. ಅವರ ಸಂಸಾರ ನಿರ್ವಹಣೆಗೆ ಸಾಕಾಗೋದಿಲ್ಲ. ಹೀಗಾಗಿ ಹೆಚ್ಚಿನ ಪರಿಹಾರ ಸರ್ಕಾರ ಘೋಷಿಸಬೇಕು. ಮೃತರ ಕುಟುಂಬದ ಓರ್ವರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಎಂ.ಕೆ.ಮಸೂದ್ ಆಗ್ರಹಿಸಿದರು.

  • ಮಂಗ್ಳೂರಿನಲ್ಲಿ ನಡೆದಿದ್ದು ಪ್ರೀಪ್ಲಾನ್ ಗೋಲಿಬಾರ್- ಆ್ಯಂಟಿ ಫ್ಯಾಸಿಸ್ಟ್ ಪೀಪಲ್ಸ್ ಫ್ರಂಟ್ ಆಕ್ರೋಶ

    ಮಂಗ್ಳೂರಿನಲ್ಲಿ ನಡೆದಿದ್ದು ಪ್ರೀಪ್ಲಾನ್ ಗೋಲಿಬಾರ್- ಆ್ಯಂಟಿ ಫ್ಯಾಸಿಸ್ಟ್ ಪೀಪಲ್ಸ್ ಫ್ರಂಟ್ ಆಕ್ರೋಶ

    ಬೆಂಗಳೂರು: ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಹಿನ್ನೆಲೆ ಆ್ಯಂಟಿ ಫ್ಯಾಸಿಸ್ಟ್ ಪೀಪಲ್ಸ್ ಫ್ರಂಟ್ ಬೆಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

    ಸುದ್ದಿಗೋಷ್ಠಿಯಲ್ಲಿ ಆ್ಯಂಟಿ ಫ್ಯಾಸಿಸ್ಟ್ ಪೀಪಲ್ಸ್ ಫ್ರಂಟ್‍ನ ಸಂಚಾಲಕ ವಕೀಲ ಬಾಲನ್ ಅವರು ಪೊಲೀಸರ ಗೋಲಿಬಾರ್ ವಿರುದ್ಧ ಹರಿಹಾಯ್ದರು. ಮಂಗಳೂರಿನ ಗೋಲಿಬಾರ್ ಹತ್ಯೆಯಲ್ಲಿ ಪೊಲೀಸರ ಕೈವಾಡ ಇದೆ. ಎನ್‍ಆರ್‍ಸಿ(ರಾಷ್ಟ್ರೀಯ ನಾಗರಿಕ ನೊಂದಣಿ), ಸಿಎಎ(ಪೌರತ್ವ ತಿದ್ದುಪಡಿ ಕಾಯ್ದೆ) ಇವುಗಳು ಬಿಜೆಪಿಯ ಆರ್‍ಎಸ್‍ಎಸ್‍ನಿಂದ ಜಾರಿಗೆ ಬಂದಿರುವಂತಹದ್ದು. ಈ ಕಾಯ್ದೆಗಳು ದೇಶ ವಿರೋಧಿಯಾಗಿವೆ. ಇವುಗಳ ವಿರುದ್ಧ ಹೋರಾಟ ಮಾಡೋದು ನಮ್ಮ ಅಭಿಪ್ರಾಯವಾಗಿದೆ. ಆದರೆ ಅದನ್ನು ಈ ಬಿಜೆಪಿ ಸಂಘಪರಿವಾರದವರು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಮಂಗಳೂರಿನಲ್ಲಿ ಯಾವ ಪೊಲೀಸ್ ಸಿಬ್ಬಂದಿ ಫೈರಿಂಗ್ ಮಾಡಿದ್ದಾರೋ ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಇಷ್ಟು ಸುತ್ತು ಫೈರಿಂಗ್ ಮಾಡಿದರೂ ಯಾವುದೇ ಹೆಣ ಬಿದ್ದಿಲ್ಲವೇ ಎಂದು ಅಲ್ಲಿನ ಕಮೀಷನರ್ ಪ್ರಶ್ನೆ ಮಾಡುತ್ತಾರೆ. ಎಲ್ಲವೂ ಪೂರ್ವಯೋಜಿತ ಕ್ರಮ. ಲಾಠಿ ಜಾರ್ಜ್ ಸಹ ಮಾಡುವ ಪರಿಸ್ಥಿತಿ ಇಲ್ಲದ ಕಡೆ ಪೊಲೀಸರು ಗೋಲಿಬಾರ್ ಮಾಡಿದ್ದಾರೆ. ಇದೆಲ್ಲದರ ಬಗ್ಗೆ ತನಿಖೆ ಆಗಬೇಕು. ಪೊಲೀಸರ ಪ್ರೀಪ್ಲಾನ್‍ನಿಂದಾಗಿಯೇ ಗೋಲಿಬಾರ್ ಆಗಿದೆ. ದೇಶದಲ್ಲಿ 25 ಕೋಟಿ ಮುಸಲ್ಮಾನರು ಭಯದಲ್ಲಿ ಬದುಕುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.