Tag: ಮಂಗಳಮುಖಿಯರು

  • ಮಂಗಳಮುಖಿಯರಿಗೆ ಕಿಚ್ಚನ ನೆರವು

    ಮಂಗಳಮುಖಿಯರಿಗೆ ಕಿಚ್ಚನ ನೆರವು

    ಬೆಂಗಳೂರು: ಲಾಕ್‍ಡೌನ್‍ನಿಂದ ಕಷ್ಟ ಅನುಭವಿಸುತ್ತಿರುವ ಮಂಗಳಮುಖಿಯರಿಗೆ ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಫುಡ್ ಕಿಟ್ ನೀಡುವ ಮೂಲಕವಾಗಿ ನೆರವಾಗಿದ್ದಾರೆ.

    ಒಂದುಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ ಮಂಗಳಮುಖಿಯರು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಗೆ ಕರೆ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ತಕ್ಷಣವೇ ನೆರವಿಗೆ ಬಂದ ಕಿಚ್ಚನ ಚಾರಿಟೇಬಲ್ ಸೊಸೈಟಿ, ಚಿತ್ರದುರ್ಗದ ಮಂಗಳಮುಖಿಯರ ಮನೆಗೆ ದಿನಸಿ ಕಿಟ್‍ಗಳನ್ನು ವಿತರಿಸಿದ್ದಾರೆ. ಇದನ್ನೂ ಓದಿ: ಒಂದೊಳ್ಳೆ ಕಾರಣಕ್ಕೆ ಬೀದಿಗಿಳಿದಿದ್ದೇನೆ: ಸತೀಶ್ ನೀನಾಸಂ

    ಕಿಚ್ಚ ಸರ್ ಕೊರೊನಾ ಸಂದರ್ಭದಲ್ಲಿ ಕಳೆದ ವರ್ಷದಿಂದ ಜನರ ಪರವಾಗಿ ನಿಂತಿದ್ದಾರೆ. ಮಂಗಳಮುಖಿಯರು ಖುಷಿಪಟ್ಟು ಧನ್ಯವಾದ ತಿಳಿಸಿದ್ದಾರೆ. ದಿನಸಿ ವ್ಯವಸ್ಥೆ ಮಾಡಿದ್ದು, ಮಾತ್ರವಲ್ಲದೇ, ಹಣಕಾಸಿನ ಸಹಾಯವನ್ನು ಕಿಚ್ಚ ಸುದೀಪ್ ಮಾಡಿದ್ದಾರೆ ಧನ್ಯವಾದಗಳು ಎಂದು ಮಂಗಳಮುಖಿಯರು ಹೇಳಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪ್ರಣಿತಾ ಸುಭಾಷ್- ನಿತಿನ್ ರಾಜ್ ಯಾರು..?

    ಮೊದಲು ಮಾನವನಾಗು ಅನ್ನೋ ಒಂದು ಧ್ಯೇಯ ವಾಕ್ಯವನ್ನು ಮೂಲ ಮಂತ್ರವಾಗಿಟ್ಟುಕೊಂಡು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಸಾಕಷ್ಟು ಜನರಿಗೆ ಕಿಚ್ಚ ಸುದೀಪ್ ತಂಡ ನೆರವಿನ ಹಸ್ತ ಚಾಚಿದೆ. ಹಸಿವು ಅಂದವರಿಗೆ ಊಟ, ಕಷ್ಟ ಅಂದವರಿಗೆ ದಿನಸಿಕಿಟ್‍ಗಳನ್ನು ನೀಡುತ್ತಿದ್ದಾರೆ. ಇದನ್ನೂ ಓದಿ: ಗುರುಗಳಿಗೆ ಕಿಚ್ಚನ ನಮನ- ಗೌರವಧನ ನೀಡಲು ಮುಂದಾದ ನಟ

    ಕೋವಿಡ್-19 ಎರಡನೇ ಅಲೆ ಮತ್ತು ಲಾಕ್‍ಡೌನ್‍ನಿಂದಾಗಿ ಅನೇಕ ಶಿಕ್ಷಕರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಂತಹ ಶಿಕ್ಷಕರಿಗೆ ನೆರವಾಗಲು ಸುದೀಪ್ ಮನಸ್ಸು ಮಾಡಿದ್ದಾರೆ. ಗುರುಗಳಿಗೆ ಕಿಚ್ಚನ ನಮನ ಕಾರ್ಯಕ್ರಮದ ಮೊದಲ ಹಂತವಾಗಿ ಕಷ್ಟದಲ್ಲಿರುವ 50 ಜನ ಶಿಕ್ಷಕರಿಗೆ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ತಲಾ ಎರಡು ಸಾವಿರ ರೂಪಾಯಿ ಗೌರವಧನ ನೀಡಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಕಿಚ್ಚ ಸುದೀಪ್ ಮತ್ತು ಅವರ ತಂಡದ ಈ ಕಾರ್ಯಗಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

  • ವೇಷತೊಟ್ಟು ಹಣ ಕಲೆಕ್ಟ್ ಮಾಡ್ತಿದ್ದ ವ್ಯಕ್ತಿಯ ಕೊಲೆಗೈದ ಮಂಗಳಮುಖಿಯರು

    ವೇಷತೊಟ್ಟು ಹಣ ಕಲೆಕ್ಟ್ ಮಾಡ್ತಿದ್ದ ವ್ಯಕ್ತಿಯ ಕೊಲೆಗೈದ ಮಂಗಳಮುಖಿಯರು

    – ಹತ್ಯೆಗೈದ ಮೂವರ ಬಂಧನ

    ಆನೇಕಲ್: ಮಂಗಳಮುಖಿಯರಂತೆ ವೇಷತೊಟ್ಟು ಹಣ ಕಲೆಕ್ಟ್ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆಗೈದು, ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಮೂವರು ಮಂಗಳಮುಖಿಯರನ್ನು ಬಂಧನ ಮಾಡುವಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಆರೋಪಿಗಳನ್ನು ದೇವಿ, ಭಾವನ ಹಾಗೂ ನಿತ್ಯ ಎಂದು ಗುರುತಿಸಲಾಗಿದೆ. ಕೊಲೆಯಾದ ವ್ಯಕ್ತಿ ರಾಮನಗರ ಮೂಲದ ರಾಜೇಂದ್ರ ಆಗಿದ್ದು, ಈತ ಬೆಳಗ್ಗಿನ ಜಾವದಲ್ಲಿ ಗಾರ್ಮೆಂಟ್ಸ್ ಉದ್ಯೋಗಿಯಾಗಿ ಕೆಲಸ ಮಾಡಿಕೊಂಡು ಸಂಜೆ ವೇಳೆ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ಮಂಗಳಮುಖಿ ವೇಷ ತೊಟ್ಟು ಓಡಾಡುವ ವಾಹನಗಳಲ್ಲಿ ಹಣ ಕಲೆಕ್ಷನ್ ಮಾಡುತ್ತಿದ್ದ.

    ಈ ಸಂದರ್ಭದಲ್ಲಿ ರಾಜೇಂದ್ರನನ್ನು ಗಮನಿಸಿದ ಮಂಗಳಮುಖಿಯರು, ಆತನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದು ಬಳಿಕ ಶುಕ್ರವಾರ ರಾತ್ರಿಯೇ ಆರೋಪಿಗಳು ರಾಜೇಂದ್ರನ ಮೃತ ದೇಹವನ್ನು ರಾಮನಗರ ಆಸ್ಪತ್ರೆಗೆ ಕೊಂಡೊಯ್ದು ಅನಾಥ ಶವ ಎಂದು ಬಿಂಬಿಸಿದ್ದರು. ಆಗ ಆಸ್ಪತ್ರೆ ಸಿಬ್ಬಂದಿಗೆ ಅನುಮಾನ ಬಂದು ರಾಮನಗರ ಪೊಲೀಸರಿಗೆ ಮಾಹಿತಿ ತಿಳಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.

    ಕೂಡಲೇ ಕಾರ್ಯ ಪ್ರವೃತ್ತರಾದ ರಾಮನಗರ ಪೊಲೀಸರು ಕೊಲೆ ನಡೆದಿರುವ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೋಲಿಸರಿಗೆ ಸಂಪೂರ್ಣ ಮಾಹಿತಿ ನೀಡಿ ಇದೀಗ ಮೂವರು ಆರೋಪಿಗಳನ್ನು ಬಂಧನ ಮಾಡಿ ಜೈಲಿಗಟ್ಟಿದ್ದಾರೆ.

  • ಭಿಕ್ಷಾಟನೆಗೆ ಬೈ ಹೇಳಿ ಅನ್ನದಾತರಾದ ಮಂಗಳಮುಖಿಯರು

    ಭಿಕ್ಷಾಟನೆಗೆ ಬೈ ಹೇಳಿ ಅನ್ನದಾತರಾದ ಮಂಗಳಮುಖಿಯರು

    ಚಾಮರಾಜನಗರ: ಲಾಕ್‍ಡೌನ್ ನಲ್ಲಿ ಹಲವರು ಉದ್ಯೋಗ ಇಲ್ಲದೇ ಸಂಕಷ್ಟ ಅನುಭವಿಸುತ್ತಿದ್ದವರ ನಡುವೆ ಇವರಿಬ್ಬರು ಮಾದರಿ ಬದುಕು ನಡೆಸಲು ಮುಂದಡಿ ಇಟ್ಟಿದ್ದಾರೆ, ಅಷ್ಟಕ್ಕೂ ಇವರು ಸಾಮಾನ್ಯರಲ್ಲ ಸದಾ ಸಮಾಜದಲ್ಲಿ ಅವಮಾನಿತರಾಗುವ ಲೈಂಗಿಕ ಅಲ್ಪಸಂಖ್ಯಾತರು.

    ಹೌದು. ಚಾಮರಾಜನಗರ ಜಿಲ್ಲೆಯ ಯಾನಗಹಳ್ಳಿ ಗ್ರಾಮದ ಮೀನಾ ಹಾಗೂ ರಾಗಿಣಿ ಎಂಬ ಲೈಂಗಿಕ ಅಲ್ಪಸಂಖ್ಯಾತರು ಲಾಕ್‍ಡೌನ್ ಬಳಿಕ ಭಿಕ್ಷಾಟನೆ ಬಿಟ್ಟು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ಸ್ವಾವಲಂಬಿ ಜೀವನ ನಡೆಸಲು ಪ್ರಾರಂಭಿಸಿದ್ದಾರೆ. ಮೀನಾ, ಕಳೆದ 5 ವರ್ಷದ ಹಿಂದೆಯೇ ಮುಂಬೈನಿಂದ ಹಿಂತಿರುಗಿದ್ದಾರೆ. ರಾಗಿಣಿ 4 ವರ್ಷದ ಹಿಂದೆ ಗ್ರಾಮಕ್ಕೆ ವಾಪಾಸ್ಸಾಗಿದ್ದಾರೆ.

    ಆಗಾಗ್ಗೆ ಇವರು ಭಿಕ್ಷಾಟನೆಗೆ ತೆರಳುತ್ತಿದ್ದರೂ ಲಾಕೌಡೌನ್ ನಲ್ಲಿ ಇವರ ಕಲೆಕ್ಷನ್ ಕಾರ್ಯ ನಿಂತಿತ್ತು. ಪಾಲಕರ ಬೆಂಬಲದಿಂದ ರೈತರಾಗಿ ಬಾಳಲು ಮುಂದಾಗಿದ್ದು ರಾಗಿಣಿ ಹೈನುಗಾರಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಮೀನಾ ಅವರ ಬಳಿ ತಂದೆ ಆಸ್ತಿಯಾದ 2.5 ಜಮೀನಿದ್ದು ಬಿದ್ದ ಮಳೆಗೆ ಭೂಮಿಯನ್ನು ಹದಗೊಳಿಸಿ ಜೋಳ ಬೆಳೆಯಲು ತೀರ್ಮಾನಿಸಿದ್ದಾರೆ. ಸರ್ಕಾರದ ಯೋಜನೆಯಡಿ ಕೊಳವೆಬಾವಿಯನ್ನು ಕೊರೆಯಿಸಿ ಕೊಟ್ಟರೇ ಬದುಕಿಗೊಂದು ದಾರಿಯಾಗುತ್ತದೆ ಎಂದು ಮನವಿ ಮಾಡಿಕೊಂಡಿದ್ದಾರೆ.

    ರಾಗಿಣಿ ಅವರು ತಂದೆ ನಡೆಸುತ್ತಿದ್ದ ಹೈನುಗಾರಿಕೆ ಮುಂದುವರಿಸಿ 8 ಹಸುಗಳನ್ನು ಸಾಕುತ್ತಿದ್ದಾರೆ. ಬರುವ ಆದಾಯದಲ್ಲಿ ಸಂಸಾರದ ನೊಗವನ್ನು ನಡೆಸುತ್ತಿದ್ದು ಸ್ವಾವಲಂಬಿ ಬದುಕನ್ನು ನಡೆಸುತ್ತಿದ್ದಾರೆ. ವಿಶೇಷ ಎಂದರೆ ಇವರಿಬ್ಬರೂ ತಮ್ಮ ತಾಯಂದಿರನ್ನು ನೋಡಿಕೊಳ್ಳುತ್ತಿದ್ದು ಒಂದು ಕಾಲದಲ್ಲಿ ಮನೆಯವರಿಂದ ದೂಷಣೆಗೆ ಒಳಗಾಗಿದ್ದರು. ಆದರೆ, ಅದೇ ಅವಮಾನಿತ ಮಕ್ಕಳು ಈಗ ಮನೆಯನ್ನು ನಡೆಸಿಕೊಂಡು ಹೋಗುತ್ತಿದ್ದು ಪಾಲಕರನ್ನು ಸಾಕದಿರುವ ಎಷ್ಟೋ ಮಕ್ಕಳಿಗೆ ಇವರು ಆದರ್ಶಪ್ರಾಯರಾಗಿದ್ದಾರೆ.

  • ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್‍ನಿಂದ ಮಂಗಳಮುಖಿಯರಿಗೆ ಫುಡ್ ಕಿಟ್

    ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್‍ನಿಂದ ಮಂಗಳಮುಖಿಯರಿಗೆ ಫುಡ್ ಕಿಟ್

    ಬೆಂಗಳೂರು: ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್‍ನಿಂದ ಮಂಗಳಮುಖಿಯರಿಗೆ ಫುಡ್ ಕಿಟ್ ಜೊತೆ ಅವಶ್ಯಕ ವಸ್ತುಗಳನ್ನು ವಿತರಿಸಲಾಯ್ತು.

    ಕೊರೊನಾದಿಂದಾಗಿ ಮಂಗಳಮುಖಿಯರು ಸಂಕಷ್ಟದಲ್ಲಿ ಸಿಲುಕಿದ್ದನ್ನು ಮನಗಂಡ ಬೆಂಗಳೂರಿನ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ 50 ಜನರಿಗೆ ನಗರದ ಪ್ರೆಸ್ ಕ್ಲಬ್ ಆವರಣದಲ್ಲಿ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯ್ತು.

    ಹಂಚಿಕೆಯ ಜೊತೆ ಕಾಳಜಿ (ಶೇರಿಂಗ್ ಇಸ್ ಕೇರಿಂಗ್) ಅನ್ನುವಂತೆ ನಿರ್ಲಕ್ಷಿಸಲ್ಪಟ್ಟ ತೃತೀಯ ಲಿಂಗ ಸಮುದಾಯಕ್ಕೆ ಫುಡ್ ಕಿಟ್ ವಿತರಿಸಲು ಬೆಂಗಳೂರಿನ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ನಿರ್ಧರಿಸಿತ್ತು. ಇನ್ನಷ್ಟು ದಾನಿಗಳು, ಸಂಘ ಸಂಸ್ಥೆಗಳು ಮಂಗಳಮುಖಿಯರ ಸಹಾಯಕ್ಕೆ ಮುಂದಾಗಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ.

  • ಅಗತ್ಯವಿದ್ದವರಿಗೆ ಕಿಟ್ ನೀಡಿ ಮಾದರಿಯಾದ ಮಂಗಳಮುಖಿಯರು

    ಅಗತ್ಯವಿದ್ದವರಿಗೆ ಕಿಟ್ ನೀಡಿ ಮಾದರಿಯಾದ ಮಂಗಳಮುಖಿಯರು

    ಚಿಕ್ಕಮಗಳೂರು: ದಾನಿಗಳು ನೀಡಿದ ದಿನಸಿ ಕಿಟ್ ಸಂಗ್ರಹಿಸಿಟ್ಟುಕೊಂಡು ಬಡವರಿಗೂ ಸಿಗದಹಾಗೆ ಮಾಡುವ ಜನರಿದ್ದಾರೆ. ಆದರೆ ಈ ವಿಚಾರದಲ್ಲಿ ಮಂಗಳಮುಖಿಯರು ಮಾದರಿಯಾಗಿದ್ದು, ದಾನಿಗಳು ತಮಗೆ ನೀಡಿದ ಕಿಟ್‍ನ್ನು ಕಷ್ಟದಲ್ಲಿರುವವರಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ಹಲವು ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಧನವಂತರು ಬಡವರಿಗೆ ಸಹಾಯ ಮಾಡುತ್ತಿದ್ದಾರೆ, ಅದೇ ರೀತಿ ಮಂಗಳಮುಖಿಯರಿಗೂ ನೀಡಿದ್ದಾರೆ. ಆದರೆ ಮಂಗಳಮುಖಿಯರು ಸಾಮಾನ್ಯ ಜನರಂತೆ ಸಂಗ್ರಹಿಸಿಟ್ಟುಕೊಳ್ಳದೆ, ಬೇಕಾದಷ್ಟು ಇಟ್ಟುಕೊಂಡು ಉಳಿದಿದ್ದನ್ನು ಮತ್ತೊಬ್ಬರಿಗೆ ನೀಡುತ್ತಿದ್ದಾರೆ. ಸ್ವತಃ ಮಂಗಳಮುಖಿಯರೇ ಕಿಟ್‍ಗಳನ್ನು ಬಡವರಿಗೆ ಹಂಚುತ್ತಿದ್ದಾರೆ.

    ಇಂತಹ ಕೆಲಸ ಸೇವೆಯಾಗಿರಬೇಕು, ಪ್ರಚಾರವಾಗಬಾರದು ಎಂದು ವಿಡಿಯೋ ಕೂಡ ಮಾಡಿಕೊಂಡಿಲ್ಲ. ತಮ್ಮ ನೆನಪು ಹಾಗೂ ಸಮಾಧಾನಕ್ಕಾಗಿ ಫೋಟೋ ಮಾತ್ರ ಕ್ಲಿಕ್ಕಿಸಿಕೊಂಡು ಯಾರಿಗೂ ಹೇಳದೆ ಏನೂ ಗೊತ್ತಿಲ್ಲದಂತೆ ಇದ್ದಾರೆ. ಜಿಲ್ಲೆಯ ಬಹುತೇಕ ಭಾಗಗಳಿಗೆ ತೆರಳಿ ಬಡವರಿಗೆ ಕಿಟ್ ಕೊಡುತ್ತಿದ್ದಾರೆ.

    ಜಿಲ್ಲೆಯ ಮಂಗಳಮುಖಿಯರ ಮಡಿಲು ಸಂಘದಿಂದ ಕಿಟ್ ವಿತರಿಸುತ್ತಿದ್ದಾರೆ. ಕೊರೊನಾ ಆರಂಭವಾದಾಗಿನಿಂದ ಇವರು ಕಿಟ್ ವಿತರಿಸುತ್ತಿದ್ದು, ಇದು ಯಾರಿಗೂ ತಿಳಿದಿಲ್ಲ. ತಮಗೆ ಬೇಕಾದಷ್ಟು ದಿನಸಿ ಇಟ್ಟಿಕೊಂಡು ಇಳಿದದ್ದೆಲ್ಲವನ್ನೂ ದಾನ ಮಾಡಿದ್ದಾರೆ.

  • ಮಂಗಳಮುಖಿಯರು ಸೇರಿ ಹಲವು ಬಡವರಿಗೆ ರಾಧಿಕಾ ಸಹಾಯ ಹಸ್ತ

    ಮಂಗಳಮುಖಿಯರು ಸೇರಿ ಹಲವು ಬಡವರಿಗೆ ರಾಧಿಕಾ ಸಹಾಯ ಹಸ್ತ

    ಬೆಂಗಳೂರು: ಕೊರೊನಾ ವೈರಸ್ ಯಾವ ರೀತಿಯ ಅವಂತಾರ ಸೃಷ್ಟಿಸಿದೆ ಎಂಬುದು ತಿಳಿದೇ ಇದೆ. ಬಡವರು ಕೊರೊನಾ ವೈರಸ್ ಹಾಗೂ ಲಾಕ್‍ಡೌನ್ ಸುಳಿಗೆ ಸಿಕ್ಕಿ ನಲುಗಿ ಹೋಗಿದ್ದಾರೆ. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಹತೋಟಿಗೆ ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ ಹಲವು ನಟ, ನಟಿಯರು ಹಾಗೂ ಧನಿಕರು ಸಹಾಯಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಸಹ ನೆರವಾಗುತ್ತಿದ್ದಾರೆ.

    ಸದಾ ಭಿಕ್ಷಾಟನೆ ಮಾಡಿಯೇ ಜೀವನ ಸಾಗಿದುತ್ತಿದ್ದ ಮಂಗಳಮುಖಿಯರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಅಲ್ಲದೆ ಲಾಕ್‍ಡೌನ್ ಸುಳಿಗೆ ಹಲವು ದಿನಗೂಲಿ ಕಾರ್ಮಿಕರು ಸಹ ಸಿಲುಕಿಕೊಂಡಿದ್ದಾರೆ. ಅಂತಹವರಿಗೆ ರಾಧಿಕಾ ಕುಮಾರಸ್ವಾಮಿಯವರು ಸಹಾಯ ಮಾಡಿದ್ದಾರೆ.

    ಮಂಗಳಮುಖಿಯರು ಹಾಗೂ ಬಡವರನ್ನು ಹುಡುಕಿಕೊಂಡು ಹೋಗಿ ಅಕ್ಕಿ, ಬೇಳೆ ಸೇರಿದಂತೆ ವಿವಿಧ ರೀತಿಯ ಆಹಾರ ಸಾಮಗ್ರಿಗಳನ್ನು ದಾನ ಮಾಡುತ್ತಿದ್ದಾರೆ. ಈ ಮೂಲಕ ಅವರ ಕಷ್ಟಕ್ಕೆ ನೆರವಾಗುತ್ತಿದ್ದಾರೆ. ಸಹಾಯ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವಿವಿಧ ರೀತಿಯ ಆಹಾರ ಸಾಮಾಗ್ರಿಗಳನ್ನು ಸ್ವತಃ ಅವರೇ ಕೈಯಾರೇ ಹಂಚಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ವಿಡಿಯೋ ಪೋಸ್ಟ್ ಮಾಡಿರುವ ಅವರು, ನಾವೆಲ್ಲರೂ ಮಾನವರು, ಇಂತಹ ಸಮಯದಲ್ಲಿ ದುರ್ಬಲರಿಗೆ, ಅಗತ್ಯವಿರುವವರಿಗೆ ಸಹಾಯ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಭಾವಿಸುತ್ತೇನೆ. ಹೀಗಾಗಿ ಬೆಂಗಳೂರಿನಲ್ಲಿ ಅಗತ್ಯವಿರುವವರಿಗೆ ಸ್ವಯಂ ಪ್ರೇರಣೆಯಿಂದ ಆಹಾರ ಪದಾರ್ಥ ವಿತರಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ ನಟಿ ರಾಧಿಕಾ ಕುಮಾರಸ್ವಾಮಿಯವರು ಮಾಗಡಿ ರೋಡ್, ಕೆಂಗೇರಿ, ನಾಯಂಡಹಳ್ಳಿ ಮುಂತಾದ ಏರಿಯಾಗಳಲ್ಲಿ ದಿನಸಿ ವಿತರಿಸಿದ್ದು, 1200ಕ್ಕೂ ಹೆಚ್ಚು ಮನೆಗಳಿಗೆ ಹಂಚಿಕೆ ಮಾಡಿದ್ದಾರೆ. ವಿಶೇಷವಾಗಿ ಮಂಗಳ ಮುಖಿಯರಿಗೆ ರಾಧಿಕಾ, ದಿನಸಿ ಹಂಚಿದ್ದಾರೆ.

    ಈಗಾಗಲೇ ಹಲವು ನಟ, ನಟಿಯರು ಸಹಾಯ ಮಾಡಿದ್ದು, ಪಿಎಂ ಕೇರ್ಸ್ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಸಂದಾಯ ಮಾಡಿದ್ದಾರೆ. ಇನ್ನೂ ಕೆಲವರು ನೇರವಾಗಿ ಸಿನಿಮಾ ದಿನಗೂಲಿ ಕಾರ್ಮಿಕರು ಹಾಗೂ ಬಡವರ ಖಾತೆಗೆ ನೇರವಾಗಿ ಹಣ ಹಾಕಿದ್ದಾರೆ. ಇನ್ನೂ ಹಲವರು ಅಗತ್ಯ ಇರುವವರ ಮನೆಗಳಿಗೆ ಆಹಾರ ಪದಾರ್ಥ ಹಾಗೂ ಅಗತ್ಯ ವಸ್ತುಗಳನ್ನು ತಲುಪಿಸುತ್ತಿದ್ದಾರೆ. ಇದೆಲ್ಲದರ ಮಧ್ಯೆ ಇದೀಗ ರಾಧಿಕಾ ಕುಮಾರಸ್ವಾಮಿಯವರು ಸಹಾಯ ಮಾಡಿದ್ದಾರೆ.

  • ಕೊರೊನಾ ಲಾಕ್‍ಡೌನ್ ಬಿಸಿ- ಊಟಕ್ಕಾಗಿ ಮಂಗಳಮುಖಿಯರ ಪರದಾಟ

    ಕೊರೊನಾ ಲಾಕ್‍ಡೌನ್ ಬಿಸಿ- ಊಟಕ್ಕಾಗಿ ಮಂಗಳಮುಖಿಯರ ಪರದಾಟ

    ರಾಯಚೂರು: ಕೊರೊನಾ ವೈರಸ್ ಸೋಂಕಿನ ಭೀತಿಗೆ ಇಡೀ ದೇಶ ಲಾಕ್‍ಡೌನ್ ಆಗಿರುವ ಹಿನ್ನೆಲೆ ಜಿಲ್ಲೆಯಲ್ಲಿ ಊಟವಿಲ್ಲದೆ ಮಂಗಳಮುಖಿಯರು ಪರದಾಡುತ್ತಿದ್ದಾರೆ.

    ಸಿಂಧನೂರು ನಗರದ ಸುಕಾಲಪೇಟೆಯಲ್ಲಿರುವ 30ಕ್ಕೂ ಹೆಚ್ಚು ಮಂಗಳಮುಖಿಯರು ದಯವಿಟ್ಟು ಸಹಾಯ ಮಾಡಿ ನಮ್ಮನ್ನೂ ಇತರರಂತೆ ಪರಿಗಣಿಸಿ ಅಂತ ಗೋಗರೆದಿದ್ದಾರೆ. ಭಿಕ್ಷಾಟನೆ ಮಾಡಿ ಬದುಕುತ್ತಿದ್ದ ಮಂಗಳಮುಖಿಯರಿಗೆ ಲಾಕ್‍ಡೌನ್ ನಿಂದ ಭಿಕ್ಷಾಟನೆಗೂ ಬ್ರೇಕ್ ಬಿದ್ದಿದ್ದರಿಂದ ಊಟಕ್ಕೆ ತೊಂದರೆಯಾಗಿದೆ. ಕಾಟಾಚಾರಕ್ಕೆ ಒಂದು ಬಾರಿ ಊಟ ಕೊಟ್ಟಿರುವ ತಾಲೂಕು ಆಡಳಿತ ಅವರ ಕಡೆ ಗಮನ ಹರಿಸಿರಲಿಲ್ಲ. ನಿತ್ಯ ಊಟ, ಇಲ್ಲವೆ ಪಡಿತರ ಕೊಡುವಂತೆ ಮಂಗಳಮುಖಿಯರು ಒತ್ತಾಯಿಸಿದ್ದಾರೆ.

    ದಯವಿಟ್ಟು ತಾರತಮ್ಯ ಮಾಡಬೇಡಿ ಎಲ್ಲರಂತೆ ನಮ್ಮಕಡೆ ಗಮನಹರಿಸಿ. ಕೂಡಲೆ ನಮ್ಮ ನೆರವಿಗೆ ಧಾವಿಸಿ ನಮಗೆ ಊಟ ಕೊಡಿ ಅಂತ ತಾಲೂಕು ಆಡಳಿತಕ್ಕೆ ಮಂಗಳಮುಖಿಯರು ಅಂಗಲಾಚಿದ್ದಾರೆ. ಮಂಗಳಮುಖಿಯರು ವಾಸಿಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿರುವ ಸಿಂಧನೂರು ತಹಶೀಲ್ದಾರ್ ಮಂಜುನಾಥ್ ಸದ್ಯ ಊಟಕ್ಕೆ ವ್ಯವಸ್ಥೆ ಮಾಡಿದ್ದು, ಮುಂದೆ ಮಂಗಳಮುಖಿಯರಿಗೆ ಪಡಿತರ ವಿತರಿಸುವುದಾಗಿ ಭರವಸೆ ನೀಡಿದ್ದಾರೆ.

  • ಆಹಾರ ಸಿಗದೆ ಮಂಗಳಮುಖಿಯರು ಕಂಗಾಲು- ನೆರವಿಗೆ ನಿಂತ ಶಿ ಫಾರ್ ಸೊಸೈಟಿ

    ಆಹಾರ ಸಿಗದೆ ಮಂಗಳಮುಖಿಯರು ಕಂಗಾಲು- ನೆರವಿಗೆ ನಿಂತ ಶಿ ಫಾರ್ ಸೊಸೈಟಿ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದೆ. ದೇಶಾದಂತ್ಯ ಲಾಕ್‍ಡೌನ್‍ನಿಂದ ಜನ ಮನೆಯಲ್ಲಿಯೇ ಬಂಧಿಯಾಗಿದ್ದಾರೆ. ಆದರೆ ಭಿಕ್ಷೆ ಬೇಡಿ ಜೀವನ ಸಾಗುಸ್ತಿರುವ ಮಂಗಳಮುಖಿಯರ ಪಾಡು ಹೇಳತೀರದಾಗಿದ್ದು, ಹಸಿವಿನಿಂದಾಗಿ ಕಂಗೆಟ್ಟಿದ್ದಾರೆ.

    ಮಂಗಳಮುಖಿಯರ ಹಸಿವಿನ ಸಂಕಟಕ್ಕೆ ಮಿಡಿದ ಶಿ ಫಾರ್ ಸೊಸೈಟಿ ಎಂಬ ಎನ್‍ಜಿಓ ಒಂದು ತಿಂಗಳಿಗೆ ಬೇಕಾಗುವಷ್ಟು ಅಗತ್ಯ ವಸ್ತುಗಳು ಹಾಗೂ ಹಣವನ್ನು ವಿತರಣೆ ಮಾಡುವ ಮೂಲಕ ಅವರ ನೆರವಿಗೆ ನಿಂತಿದೆ. ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣ ಬಳಿ 125ಕ್ಕೂ ಹೆಚ್ಚು ಕುಟುಂಬಗಳಿಗೆ ಹಾಗೂ ಸ್ಲಂ ನಿವಾಸಿಗಳಿಗೆ ಇಂದು ದಿನಸಿಯನ್ನ ಹಂಚಲಾಯಿತು. ಕಳೆದ ಒಂದು ವಾರದಿಂದ ಶಿ ಫಾರ್ ಸೊಸೈಟಿಯ 15 ಸದಸ್ಯೆಯರ ತಂಡ ಬೆಂಗಳೂರಿನ ಕೆಂಗೇರಿ ಉಪನಗರ, ರಾಮಸಂದ್ರ ಸೇರಿದಂತೆ ಹಲವು ಕಡೆ ದಿನಸಿಯನ್ನು ವಿತರಿಸಿದೆ.

    ಅನೇಕರು ಮಂಗಳಮುಖಿಯರ ಬಗ್ಗೆ ಯೋಚನೆ ಮಾಡುತ್ತಿಲ್ಲ ಎಂದು ಆದಿ ಶಕ್ತಿ ದೇವಸ್ಥಾನದ ಅರ್ಚಕರಾಗಿರುವ ರಾಜೇಶ್ವರಿ ಅವರು ನಮ್ಮ ಗಮನಕ್ಕೆ ತಂದಿದ್ದರು. ಅಷ್ಟೇ ಅಲ್ಲದೆ ಅವರೇ ಮುಂದೆ ನಿಂತು ಆರ್.ಪಿ.ಸಿ. ಲೇಔಟ್, ಸ್ಯಾಟಲೈಟ್ ಬಸ್ ನಿಲ್ದಾಣ ಸೇರಿದಂತೆ ವಿವಿಧ ಪ್ರದೇಶಗಳಿಂದ ಮಂಗಳಮುಖಿಯರನ್ನು ಕರೆದುಕೊಂಡು ಬಂದಿದ್ದಾರೆ. ಮಂಗಳಮುಖಿಯರೊಂದಿಗೆ ಮಾತನಾಡಿದಾಗ ಅವರು ಪಡುತ್ತಿದ್ದ ಕಷ್ಟ ನಮಗೆ ನೋವು ತಂದಿದೆ ಎಂದು ಶಿ ಫಾರ್ ಸೊಸೈಟಿ ಸದ್ಯಸೆಯರು ತಿಳಿಸಿದ್ದಾರೆ.

    ಮಂಗಳಮುಖಿಯರಿಗೆ ವೈದ್ಯಕೀಯ ಸಮಸ್ಯೆ ಕೂಡ ಇದೆ. ಈ ಕುರಿತು ಮಾಹಿತಿ ಪಡೆದುಕೊಂಡು ಸಹಾಯ ಮಾಡುತ್ತೇವೆ. ಸದ್ಯಕ್ಕೆ ಒಂದು ತಿಂಗಳಿಗೆ ಆಗುವಷ್ಟು ರೇಷನ್ ನೀಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

  • ಅನಾಥರಿಗೆ, ನಿರ್ಗತಿಕರಿಗೆ ಬಿಸಿಬಿಸಿ ಚಿತ್ರಾನ್ನ ಹಂಚಿದ ಮಂಗಳಮುಖಿಯರು

    ಅನಾಥರಿಗೆ, ನಿರ್ಗತಿಕರಿಗೆ ಬಿಸಿಬಿಸಿ ಚಿತ್ರಾನ್ನ ಹಂಚಿದ ಮಂಗಳಮುಖಿಯರು

    ಬಳ್ಳಾರಿ: ಕೊರೊನಾ ವೈರಸ್ ಎಫೆಕ್ಟ್ ನಿಂದ ಇಡೀ ದೇಶವೇ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಗಣಿನಗರಿ ಬಳ್ಳಾರಿಯಲ್ಲಿ ಮಂಗಳಮುಖಿಯರು ಚಿತ್ರಾನ್ನ ತಯಾರಿಸಿಕೊಂಡು ಅನಾಥರು ಹಾಗೂ ನಿರ್ಗತಿಕರಿಗೆ ಹಂಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಮಹಾನಗರ ಪಾಲಿಕೆ ವ್ಯಾಪ್ತಿಯ ನಾಲ್ಕನೇಯ ವಾರ್ಡಿನ ಮಾಜಿ ಸದಸ್ಯೆ ಪರ್ವೀನ್ ಬಾನು ನೇತೃತ್ವದಲ್ಲಿ ಮಂಗಳಮುಖಿಯರು ಸೇರಿ ಈ ಕೆಲಸ ಮಾಡುತ್ತಿದ್ದಾರೆ. ಪಾದಾಚಾರಿ ರಸ್ತೆ, ಬಸ್ ಹಾಗೂ ರೈಲ್ವೇ ನಿಲ್ದಾಣ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ರಾತ್ರಿ ವೇಳೆಯಲ್ಲಿ ಹಸಿವಿನಿಂದ ಮಲಗಿಕೊಂಡಿದ್ದ ಅನಾಥರು, ನಿರ್ಗತಿಕರು ಹಾಗೂ ಬಸ್‍ಗಳಿಲ್ಲದೇ ಅಲ್ಲಿಯೇ ಠೀಕಾಣಿ ಹೂಡಿದ್ದ ದೂರದೂರಿನ ಪ್ರಯಾಣಿಕರಿಗೂ ಬಿಸಿಬಿಸಿ ಚಿತ್ರಾನ್ನ ಪ್ಯಾಕೇಟ್ ನೀಡುವ ಮೂಲಕ ಅವರ ಹಸಿವಿನ ಚೀಲ ತುಂಬಿಸಲು ಮುಂದಾಗಿದ್ದಾರೆ.

    ಸಾಮಾನ್ಯವಾಗಿ ಸಂಘ, ಸಂಸ್ಥೆಗಳು, ಎನ್‍ಜಿಓಗಳು ಹಾಗೂ ರಾಜಕಾರಣಿಗಳ ಹಿಂಬಾಲಕರು ಅಥವಾ ಧನಿಕರು ಊಟದ ಪ್ಯಾಕೇಟ್ ಹಂಚಿಕೆ ಮಾಡೋದನ್ನು ನಾವು ನೀವೆಲ್ಲರೂ ನೋಡಿದ್ದೇವೆ. ಆದರೆ ಗಣಿನಗರಿಯ ಮಂಗಳಮುಖಿಯರು ಇಂತಹ ಸಾಮಾಜಿಕ ಕಾರ್ಯಕ್ಕೆ ಮುಂದಾಗಿರೋದು ಶ್ಲಾಘನಾರ್ಹ.

  • ಕಲೆಕ್ಷನ್ ಹಣಕ್ಕಾಗಿ ಜಗಳ – ನಡುರೋಡಿನಲ್ಲಿ ಬಡಿದಾಡಿಕೊಂಡ ಮಂಗಳಮುಖಿಯರು

    ಕಲೆಕ್ಷನ್ ಹಣಕ್ಕಾಗಿ ಜಗಳ – ನಡುರೋಡಿನಲ್ಲಿ ಬಡಿದಾಡಿಕೊಂಡ ಮಂಗಳಮುಖಿಯರು

    ಆನೇಕಲ್: ಏರಿಯಾಗಳ ಹಂಚಿಕೆ ಹಾಗೂ ಕಲೆಕ್ಷನ್ ಹಣಕ್ಕಾಗಿ ಮಂಗಳಮುಖಿಯರು ಬೀದಿಯಲ್ಲಿ ಬಡಿದಾಡಿಕೊಂಡು ಓರ್ವ ಮಂಗಳಮುಖಿಯನ್ನು ಹಿಗ್ಗಾಮುಗ್ಗಾ ಥಳಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಬೆಂಗಳೂರು ಹೊರವಲಯ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಮಂಗಳಮುಖಿ ಕುಮಾರಿ ಕನ್ನಡದವಳಾಗಿದ್ದು ತಮಿಳು ಮಾತನಾಡುವ ಮಂಗಳಮುಖಿಯರು ತಮ್ಮ ಏರಿಯಾದಲ್ಲಿ ಕಲೆಕ್ಷನ್ ಮಾಡದಂತೆ ತಡೆದಿದ್ದಾರೆ. ಜೊತೆಗೆ ಕಲೆಕ್ಷನ್ ಮಾಡಿರುವ ಹಣವನ್ನು ನೀಡುವಂತೆ ಕೇಳಿದ್ದು, ಹಣ ನೀಡಲು ಒಪ್ಪದ ಮಂಗಳಮುಖಿ ಕುಮಾರಿ ಮೇಲೆ ತಮಿಳುನಾಡಿನ ಮಂಗಳಮುಖಿಯರು ಗುಂಪು ಕಟ್ಟಿಕೊಂಡು ಬಂದು ನಡು ರಸ್ತೆಯಲ್ಲಿ ಕಾಲಿನಿಂದ ಒದ್ದು ತಲೆ ಕೂದಲು ಹಿಡಿದು ಎಳೆದಾಡಿ ಹಿಗ್ಗಾಮುಗ್ಗ ಥಳಿಸಿದ್ದಾರೆ.

    ಇದರ ಜೊತೆಗೆ ಮತ್ತೊಮ್ಮೆ ಈ ಏರಿಯಾದಲ್ಲಿ ಕಲೆಕ್ಷನ್ ಮಾಡಿದರೆ ಆ್ಯಸಿಡ್ ಹಾಕಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹಲ್ಲೆಗೊಳಗಾದ ಮಂಗಳಮುಖಿ ಕುಮಾರಿ ತಿಳಿಸಿದ್ದಾರೆ. ಸದ್ಯ ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಮಾಡಿದವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.