Tag: ಮಂಗನ ಜ್ವರ

  • ಮತ್ತಿಬ್ಬರನ್ನು ಬಲಿ ಪಡೆದ ಮಂಗನ ಕಾಯಿಲೆ!

    ಮತ್ತಿಬ್ಬರನ್ನು ಬಲಿ ಪಡೆದ ಮಂಗನ ಕಾಯಿಲೆ!

    ಶಿವಮೊಗ್ಗ: ಮಹಾಮಾರಿ ಮಂಗನಜ್ವರಕ್ಕೆ ಜಿಲ್ಲೆಯಲ್ಲಿ ಮತ್ತೆ ಇಬ್ಬರು ಮೃತಪಟ್ಟಿದ್ದಾರೆ.

    ಸಾಗರ ತಾಲೂಕು ಬಿಳಿಗಾರು ಗ್ರಾಮದ 49 ವರ್ಷದ ಭೀಮರಾಜ್ ಮಂಗನ ಜ್ವರದಿಂದ ಮೃತಪಟ್ಟ ವ್ಯಕ್ತಿ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಏಳು ಜನರು ಮಂಗನ ಜ್ವರಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಭೀಮ್‍ರಾಜ್ ಭಾನುವಾರ ರಾತ್ರಿ ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಅರಳಗೋಡು ಗ್ರಾ.ಪಂ. ವ್ಯಾಪ್ತಿಯ ವಾಟೆಮಕ್ಕಿಯ 45 ವರ್ಷದ ಸವಿತಾ ಸೋಮವಾರ ಸಂಜೆ ಮೃತಪಟ್ಟಿದ್ದಾರೆ. ಇದೂವರೆಗೂ ತೀರ್ಥಹಳ್ಳಿ ಹಾಗೂ ಸಾಗರ ತಾಲೂಕಿನಲ್ಲಿ ಇದ್ದ ಮಂಗನಜ್ವರ ಈಗ ಭದ್ರಾವತಿ ತಾಲೂಕಿಗೂ ಹರಡುವ ಭೀತಿ ಎದುರಾಗಿದೆ. ಭದ್ರಾವತಿ ತಾಲೂಕು ಸಂಕ್ಲಿಪುರದಲ್ಲಿ ಕಳೆದ ವಾರ ಒಂದು ಮಂಗ ಮೃತಪಟ್ಟಿತ್ತು. ಸೋಮವಾರ ಮತ್ತೊಂದು ಮಗ ಸತ್ತು ಬಿದ್ದಿರುವುದು ಬೆಳಕಿಗೆ ಬಂದಿದೆ.

    ಶಿವಮೊಗ್ಗ ಜಿಲ್ಲೆಯ ಗಡಿಭಾಗದ ತಾಲೂಕುಗಳಾದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಹಾಗೂ ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಕಾರ್ಕಳ ತಾಲೂಕುಗಳಲ್ಲೂ ಮಂಗಗಳು ಸತ್ತು ಬಿದ್ದಿದ್ದು, ತೀವ್ರ ಆತಂಕ ಮೂಡಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾವಿನ ಜ್ವರಕ್ಕೆ ಬೆಚ್ಚಿಬಿದ್ದ ಮಲೆನಾಡು ಮಂದಿ- 7 ಜನರ ಸಾವಿನ ಬಳಿಕ ಎಚ್ಚೆತ್ತ ಸರ್ಕಾರ..!

    ಸಾವಿನ ಜ್ವರಕ್ಕೆ ಬೆಚ್ಚಿಬಿದ್ದ ಮಲೆನಾಡು ಮಂದಿ- 7 ಜನರ ಸಾವಿನ ಬಳಿಕ ಎಚ್ಚೆತ್ತ ಸರ್ಕಾರ..!

    ಶಿವಮೊಗ್ಗ: ಜಿಲ್ಲೆಗೆ ಮಹಾಮಾರಿಯಂತೆ ದಾಳಿ ಮಾಡಿರುವ ಮಂಗನ ಜ್ವರಕ್ಕೆ ಏಳು ಜನ ಬಲಿಯಾದ ಮೇಲೆ ಸರ್ಕಾರ ಎಚ್ಚೆತ್ತಿದೆ.

    ಮಲೆನಾಡಿನಲ್ಲಿ ಮಂಗನಜ್ವರ ಅಥವಾ ಕ್ಯಾಸನೂರು ಡಿಸೀಸ್ ಅಂತ ಕರೆಯಲಾಗುವ ಸಾವಿನ ಜ್ವರಕ್ಕೆ 7 ದಶಕಗಳ ನಂಟಿದೆ. 1957ರಲ್ಲಿ ಮೊಟ್ಟಮೊದಲು ಸೊರಬ ತಾಲೂಕಿನ ಕ್ಯಾಸನೂರಿನಲ್ಲಿ ಕಾಣಿಸಿಕೊಂಡಿತು. ಅಲ್ಲಿನ ಕಾಡಿನಲ್ಲಿ ಮಂಗಗಳು ಸತ್ತು ಬೀಳತೊಡಗಿದವು. ಅಂದಿನಿಂದ ಇಂದಿನವರೆಗೂ ಪ್ರತೀ ವರ್ಷ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಜ್ವರ ಕಾಣಿಸುತ್ತಲೇ ಇದೆ. ಈ ವರ್ಷ ನೂರಕ್ಕೂ ಹೆಚ್ಚು ಜನ ಜ್ವರದಿಂದ ಬಳಲುತ್ತಿದ್ದು, ಏಳು ಜನ ಮೃತಪಟ್ಟಿದ್ದಾರೆ. ಹತ್ತಕ್ಕೂ ಹೆಚ್ಚು ಜನ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ಸೊರಬ ತಾಲೂಕಿನ ಕ್ಯಾಸನೂರು ಬಳಿಯ ಗುಡವಿ ಪಕ್ಷಿಧಾಮಕ್ಕೆ ರಷ್ಯಾದಿಂದ ಇಲ್ಲಿಗೆ ಪಕ್ಷಿಗಳು ವಲಸೆ ಬರುತ್ತವೆ. ಈ ಪಕ್ಷಿಗಳ ಮೂಲಕ ಜೈವಿಕ ಅಸ್ತ್ರವಾಗಿ ಭಾರತಕ್ಕೆ ಕಾಯಿಲೆಯನ್ನು ಕಳುಹಿಸಿಲಾಗಿದೆ ಅಂತ ಪಕ್ಷಿತಜ್ಞ ಸಲೀಂ ಅಲಿ ದಶಕಗಳ ಮುಂಚೆಯೇ ಹೇಳಿದ್ದರು. ಈ ಕುರಿತ ಸಂಶೋಧನೆಗಳು ಸರ್ಕಾರಗಳ ನಿರ್ಲಕ್ಷ್ಯದಿಂದ ಸ್ಥಗಿತಗೊಂಡಿವೆ. ಈಗ 7 ಮಂದಿ ಬಲಿಯಾಗಿದ್ದು, ಇದರಲ್ಲಿ ಸರ್ಕಾರದ ನಿರ್ಲಕ್ಷ್ಯ ಇರುವುದನ್ನು ನಾವು ಒಪ್ಪಿಕೊಂಡಿದ್ದೇವೆ. ಈ ಬಗ್ಗೆ ತನಿಖೆಗೆ ಸಮಿತಿ ರಚಿಸಲಾಗುವುದು. ಮೃತ ಕುಟುಂಬಗಳಿಗೆ ಪರಿಹಾರ ಘೋಷಿಸಲಾಗಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.

    ವೈದ್ಯಕೀಯ ಲೋಕಕ್ಕೆ ಸವಾಲಾಗಿರುವ ಈ ಜ್ವರಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಸರ್ಕಾರ ಸಂಪೂರ್ಣ ವಿಫಲಗೊಂಡಿದೆ. ಪ್ರತೀ ವರ್ಷ ಜನ ಸಾಯುತ್ತಲೇ ಇದ್ದಾರೆ. ಜನ ಸತ್ತಾಗ ಸಚಿವರು ಬಂದು ಸಾಂತ್ವನ ಹೇಳುತ್ತಿದ್ದಾರೆ. ಆದರೆ ಅಮಾಯಕರು ಮಾತ್ರ ನರಳುತ್ತಲೇ ಇದ್ದಾರೆ ಎಂದು ಸ್ಥಳೀಯ ಶಾಂತಮ್ಮ ತಿಳಿಸಿದ್ದಾರೆ.

    ಸಾಗರದ ಮಂಡವಳ್ಳಿಯ ಪಾರ್ಶ್ವನಾಥ ಜೈನ್, ವಾಟೆಮಕ್ಕಿಯ ಕೃಷ್ಣಪ್ಪ, ಕಂಚಿಕಾಯಿ ಮಂಜುನಾಥ್ ಮತ್ತು ತೀರ್ಥಹಳ್ಳಿಯ ಗಂಟೆ ಜಾನಗಲು ಗ್ರಾಮದ ಸುಂದರಿ, ಕಂಚಿಕಾಯಿ ರಾಮಕ್ಕ, ಅರಕಲಗೋಡು ಗ್ರಾಮದ ಶ್ವೇತ ಎಂಬವರು ಮಂಗನ ಜ್ವರಕ್ಕೆ ತುತ್ತಾದ ದುರ್ದೈವಿಗಳು. ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ, ಸೊರಬ ತಾಲೂಕುಗಳಲ್ಲಿ ಪ್ರತೀ ವರ್ಷ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಂಗನ ಜ್ವರ ಈ ವರ್ಷ ಮೂರು ತಿಂಗಳು ಮೊದಲೇ ಕಾಣಿಸಿಕೊಂಡು ಏಳು ಜನರನ್ನು ಬಲಿ ತೆಗೆದುಕೊಂಡಿದೆ.

    ಸಾವಿನ ಕೂಪಕ್ಕೆ ತಳ್ಳವ ಮಂಗನ ಕಾಯಿಲೆಯಿಂದ ಸಾವು ಸಂಭವಿಸಿದ ವೇಳೆ ಸರ್ಕಾರ ಕೇವಲ ಭರವಸೆ ನೀಡಲು ಸೀಮಿತವಾಗದೇ ಶಾಶ್ವತ ಪರಿಹಾರ ಹುಡುಕಲು ಮುಂದಾಗಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಗನ ಕಾಯಿಲೆಗೆ 7 ಬಲಿ – ಏನಿದು ಮಂಗನ ಕಾಯಿಲೆ-ಹೇಗೆ ಬರುತ್ತೆ..?

    ಮಂಗನ ಕಾಯಿಲೆಗೆ 7 ಬಲಿ – ಏನಿದು ಮಂಗನ ಕಾಯಿಲೆ-ಹೇಗೆ ಬರುತ್ತೆ..?

    ಶಿವಮೊಗ್ಗ: ಮಲೆನಾಡಿನ ಜಿಲ್ಲೆಗಳನ್ನು ಬೇಸಿಗೆಯಲ್ಲಿ ಕಾಡುವ ಕ್ಯಾಸನೂರು ಫಾರೆಸ್ಟ್ ಡೀಸಿಸ್ ಈ ವರ್ಷ ಮುಂಚಿತವಾಗಿ ಕಾಣಿಸಿಕೊಂಡು ಏಳು ಜನರನ್ನು ಬಲಿ ತೆಗೆದುಕೊಂಡಿದೆ. ಮಂಗನ ಜ್ವರ ಎಂದು ಕರೆಯಲಾಗುವ ಈ ಮಹಾಮಾರಿಗೆ ಮಲೆನಾಡಿನ ಜನ ತತ್ತರಿಸಿದ್ದಾರೆ.

    ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ, ಸೊರಬ ತಾಲೂಕುಗಳಲ್ಲಿ ಪ್ರತೀ ವರ್ಷ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಂಗನ ಜ್ವರ ಈ ವರ್ಷ ಮೂರು ತಿಂಗಳು ಮೊದಲೇ ಕಾಣಿಸಿಕೊಂಡು ಏಳು ಜನರನ್ನು ಬಲಿ ತೆಗೆದುಕೊಂಡಿದೆ. ತೀರ್ಥಹಳ್ಳಿಯಲ್ಲಿ ಒಬ್ಬರು ಮತ್ತು ಸಾಗರದಲ್ಲಿ ಇಬ್ಬರು ಮಹಾಮಾರಿಗೆ ಬಲಿಯಾಗಿದ್ದಾರೆ.

    ಸಾಗರದ ಮಂಡವಳ್ಳಿಯ ಪಾರ್ಶ್ವನಾಥ ಜೈನ್, ವಾಟೆಮಕ್ಕಿಯ ಕೃಷ್ಣಪ್ಪ, ಕಂಚಿಕಾಯಿ ಮಂಜುನಾಥ್ ಮತ್ತು ತೀರ್ಥಹಳ್ಳಿಯ ಗಂಟೆ ಜಾನಗಲು ಗ್ರಾಮದ ಸುಂದರಿ, ಕಂಚಿಕಾಯಿ ರಾಮಕ್ಕ, ಅರಕಲಗೋಡು ಗ್ರಾಮದ ಶ್ವೇತ ಎಂಬವರು ಮಂಗನ ಜ್ವರಕ್ಕೆ ತುತ್ತಾದ ದುರ್ದೈವಿಗಳು. ಈ ಜ್ವರದಿಂದ ಪೀಡಿತರಾಗಿರುವ ಐವತ್ತಕ್ಕೂ ಹೆಚ್ಚು ಜನ ಸಾಗರ, ಮಣಿಪಾಲ ಹಾಗೂ ಶಿವಮೊಗ್ಗದ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವರನ್ನು ನಾವು ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ಮಾಡಿದ್ದೇವೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.

    ಏನಿದು ಮಂಗನ ಕಾಯಿಲೆ?
    ಕಾಡಿನಲ್ಲಿ ಮಂಗಗಳು ಸತ್ತು ಬಿದ್ದಿರುತ್ತವೆ. ಹೀಗೆ ಸತ್ತ ಮಂಗಗಳಿಂದ ಹರಡುವ ಉಣ್ಣೆಗಳು ಜಾನುವಾರು, ಕಾಡು-ತೋಟಕ್ಕೆ ಹೋದ ಮನುಷ್ಯರನ್ನು ಸೇರಿಕೊಳ್ಳುತ್ತವೆ. ಈ ಉಣ್ಣೆಯಿಂದ ಕಂಡು ಬರುವ ಜ್ವರವೇ ಮಂಗನಕಾಯಿಲೆ ಅಥವಾ ಕ್ಯಾಸನೂರು ಫಾರೆಸ್ಟ್ ಡೀಸಿಸ್ ಎಂದು ಕರೆಯಲಾಗುತ್ತಿದೆ. ನಾಲ್ಕು ದಶಕಗಳ ಹಿಂದೆ ಮೊದಲಿಗೆ ಸೊರಬ ತಾಲೂಕಿನ ಕ್ಯಾಸನೂರಿನಲ್ಲಿ ಈ ರೋಗ ಕಾಣಿಸಿಕೊಂಡಿತ್ತು. ಬಳಿಕ ತೀರ್ಥಹಳ್ಳಿ ತಾಲೂಕಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈ ಬಾರಿ ಸಾಗರ ತಾಲೂಕಿಗೂ ವ್ಯಾಪಿಸಿದೆ ಎಂದು ಸ್ಥಳೀಯ ಬಸವರಾಜ್ ತಿಳಿಸಿದ್ದಾರೆ.

    ಪ್ರತಿವರ್ಷ ಬೇಸಿಗೆ ಕಾಲದಲ್ಲಿ ಮಂಗನ ಕಾಯಿಲೆ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಚುಚ್ಚುಮದ್ದು ನೀಡಲಾಗುತ್ತಿತ್ತು. ಈ ಜ್ವರ ನಿಯಂತ್ರಣಕ್ಕೆ ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಪಶುಸಂಗೋಪನಾ ಇಲಾಖೆ ಹಾಗೂ ರೆವಿನ್ಯೂ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕಿದೆ. ಈ ಸಮನ್ವಯತೆಯ ಕೊರತೆಯಿಂದಾಗಿ ಈ ಬಾರಿ ಏಳು ಜನ ಬಲಿಯಾಗಿದ್ದಾರೆ. ಸಮರೋಪಾದಿಯಲ್ಲಿ ಕೆಲಸ ಮಾಡಿದರೆ ಮಾತ್ರ ಮಲೆನಾಡಿನ ಜನರ ಜೀವ ರಕ್ಷಣೆ ಮಾಡಲು ಸಾಧ್ಯ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv