Tag: ಮಂಗನ ಕಾಯಿಲೆ

  • ಕಾರಿನ ಮೇಲೆ ಮಂಗನಕಾಯಿಲೆ ಬೋರ್ಡ್ ಹಾಕಿ ಎಂಟ್ರಿ ಕೊಟ್ಟ ಐಟಿ ಅಧಿಕಾರಿಗಳು

    ಕಾರಿನ ಮೇಲೆ ಮಂಗನಕಾಯಿಲೆ ಬೋರ್ಡ್ ಹಾಕಿ ಎಂಟ್ರಿ ಕೊಟ್ಟ ಐಟಿ ಅಧಿಕಾರಿಗಳು

    – ಸೆಕ್ಯೂರಿಟಿ ಗಾರ್ಡ್ ಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಐಟಿ ಅಧಿಕಾರಿಗಳು

    ಉಡುಪಿ: ಭ್ರಷ್ಟರು ರಂಗೋಲಿ ಕೆಳಗೆ ತೂರಿದರೆ ಐಟಿ ಅಧಿಕಾರಿಗಳು ಟೈಲ್ಸ್ ಕೆಳಗೆ ತೂರಿ ಶಾಕ್ ಕೊಟ್ಟಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಮಂಗನಕಾಯಿಲೆ ಜಾಗೃತಿ ಕಾರ್ಯಕ್ರಮ ಎಂದು ಕಾರಿಗೆ ಬೋರ್ಡ್ ಹಾಕಿಕೊಂಡು ಐಟಿ ಅಧಿಕಾರಿಗಳು ರಾಜಕಾರಣಿ, ಉದ್ಯಮಿ ಮನೆ ಮೇಲೆ ದಾಳಿ ಮಾಡಿದ್ದಾರೆ.

    ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ ಮೇಲೆ ಬುಧವಾರ ಐಟಿ ದಾಳಿ ನಡೆದಿದ್ದು, 2ನೇ ದಿನವೂ ಅಧಿಕಾರಿಗಳ ತಪಾಸಣೆ ಮುಂದುವರಿದಿದೆ. ಉಡುಪಿಯ ಮಣಿಪಾಲದಲ್ಲಿರುವ ಮನೆ, ಉಡುಪಿಯ ಕಚೇರಿ, ಮುನಿಯಾಲು ಗ್ರಾಮದ ಮನೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಬೀಡು ಬಿಟ್ಟು ಕಡತಗಳ ಪರಿಶೀಲನೆ ಮಾಡುತ್ತಿದ್ದಾರೆ. ಉಡುಪಿ, ಶಿವಮೊಗ್ಗದಲ್ಲಿ ಪಸರಿಸಿರುವ ಮಂಗನ ಕಾಯಿಲೆಯನ್ನು ಐಟಿ ಅಧಿಕಾರಿಗಳು ದಾಳಿಯ ದಾಳವನ್ನಾಗಿ ಉಪಯೋಗಿಸಿದ್ದಾರೆ.

    ಅಧಿಕಾರಿಗಳು ದಾಳಿಗೆ ಉಪಯೋಗಿಸಿದ ಕಾರಿನ ಮುಂಭಾಗ ಮಂಗನ ಕಾಯಿಲೆ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಅಂತ ಬೋರ್ಡ್ ಹಾಕಿಕೊಂಡಿದ್ದರು. ಸಾಯಿರಾಧಾ ಲೇಔಟ್ ಒಳಗಿರುವ ಮುನಿಯಾಲು ಉದಯಕುಮಾರ್ ಮನೆಗೆ ಟೈಟ್ ಸೆಕ್ಯೂರಿಟಿ ಇರುತ್ತದೆ. ಮಂಗನ ಕಾಯಿಲೆ ಬೋರ್ಡ್ ನೋಡಿದ ಸೆಕ್ಯೂರಿಟಿ ಗಾರ್ಡ್ ಗಳು ಐಟಿ ಅಧಿಕಾರಿಗಳಿದ್ದ ವಾಹನ ಒಳಗೆ ಬಿಟ್ಟಿದ್ದಾರೆ.

    ಉದಯಕುಮಾರ್ ಮನೆಯ ಮನೆಯ ಬೆಲ್ ಬಾರಿಸಿದಾಗಲೇ ಐಟಿ ದಾಳಿಯ ಬಗ್ಗೆ ಮನವರಿಕೆಯಾಗಿದೆ. ಮಂಗನ ಕಾಯಿಲೆ ಹೆಸರಿನಲ್ಲಿ ಲೇಔಟ್‍ನ ಟೈಟ್ ಸೆಕ್ಯೂರಿಟಿ ಗಾರ್ಡ್ ಗಳಿಗೆ ಚಳ್ಳೆಹಣ್ಣು ತಿನ್ನಿಸಿ, ಕೋಟ್ಯಾಧೀಶ ಉದ್ಯಮಿಗೆ ಗಾಳ ಹಾಕಿದ್ದಾರೆ. ಇದೊಂತರ ಡಿಫರೆಂಟ್ ರೈಡ್ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

    https://www.youtube.com/watch?v=GMaRXTGIRQ4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಗಗಳ ಸಾವಿನ ಸಂಖ್ಯೆ 20 ಕ್ಕೆ ಏರಿಕೆ-ಕೆಎಂಸಿ ಮಣಿಪಾಲದಲ್ಲಿ 73 ಜನರಿಗೆ ಚಿಕಿತ್ಸೆ

    ಮಂಗಗಳ ಸಾವಿನ ಸಂಖ್ಯೆ 20 ಕ್ಕೆ ಏರಿಕೆ-ಕೆಎಂಸಿ ಮಣಿಪಾಲದಲ್ಲಿ 73 ಜನರಿಗೆ ಚಿಕಿತ್ಸೆ

    -ಮಂಗನ ಕಾಯಿಲೆ ಭಯದಲ್ಲಿ ಉಡುಪಿ ಜನರು

    ಉಡುಪಿ: ಮಂಗನ ಕಾಯಿಲೆ ಕರಾವಳಿ ಮತ್ತು ಮಲೆನಾಡಿನ ಜನರ ನಿದ್ದೆಗೆಡಿಸಿದೆ. ಉಡುಪಿ ಜಿಲ್ಲೆಗಳಲ್ಲಿ ಮಂಗನ ಕಾಯಿಲೆಯಿಂದ ಜನರು ಸಾವನ್ನಪ್ಪುತ್ತಿರುವ ಸಂಖ್ಯೆ 20ಕ್ಕೆರಿದೆ. ಮಣಿಪಾಲದಲ್ಲಿ ಈವರೆಗೆ 73 ಮಂದಿ ಪೀಡಿತರಿಗೆ ಚಿಕಿತ್ಸೆ ನೀಡಲಾಗಿದೆ. ರೋಗ ಹರಡೋದನ್ನು ತಪ್ಪಿಸಲು ಡಿಸಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಲಾಯ್ತು.

    ರಾಜ್ಯದಲ್ಲಿ ಮತ್ತೊಮ್ಮೆ ಮಂಗನ ಕಾಯಿಲೆ ಸದ್ದು ಮಾಡಿದೆ. ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಮಂಗನ ಕಾಯಿಲೆಯ ತೀವ್ರತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಈ ಕಾಯಿಲೆ ನೆರೆ ಜಿಲ್ಲೆ ಉಡುಪಿಯಲ್ಲೂ ಭೀತಿ ಹುಟ್ಟಿಸಿದೆ. ಮುಖ್ಯವಾಗಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮಂಗಗಳ ಸಾವು ಪ್ರಕರಣಗಳು ದಿನೇದಿನೇ ಹೆಚ್ಚುತ್ತಲೇ ಇವೆ. ಸಹಜವಾಗಿಯೇ ಇದು ಈ ಭಾಗದ ಜನರಲ್ಲಿ ಆತಂಕವನ್ನು ಹೆಚ್ಚುವಂತೆ ಮಾಡಿದೆ. ಕಳೆದ ಒಂದು ವಾರದ ಅಂತರದಲ್ಲಿ ಜಿಲ್ಲೆಯಲ್ಲಿ ಒಟ್ಟು ಇಪ್ಪತ್ತು ಕೋತಿಗಳು ಸಾವನ್ನಪ್ಪಿದೆ. ಜಿಲ್ಲಾ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಪೈಕಿ ಹನ್ನೇರಡು ಮಂಗಗಳ ಮರಣೋತ್ತರ ಪರೀಕ್ಷೆಯನ್ನು ಹೆಚ್ಚಿನ ತಪಾಸಣೆಗೆ ಕಳಿಸಲಾಗಿದೆ. ಜೊತೆಗೆ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಔಷಧಿಯನ್ನು ಸಿದ್ಧಮಾಡಿಟ್ಟುಕೊಳ್ಳಲು ಸೂಚನೆ ನೀಡಲಾಗಿದೆ. 1080 ಬಾಟಲಿ ಡಿಎಂಪಿ ತೈಲ ವನ್ನು ಶಿವಮೊಗ್ಗ ದಿಂದ ತರಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಕಾರ್ಕಳ ಮತ್ತು ಕುಂದಾಪುರ ತಾಲೂಕಿನಲ್ಲಿ ಮಂಗಗಳ ಸಾವು ಸಂಭವಿಸುತ್ತಿರುವುದರಿಂದ ಈ ತಾಲೂಕುಗಳಲ್ಲಿ ಕರಪತ್ರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಪ್ರದೇಶಗಳಲ್ಲಿ ಮಂಗಗಳ ಸಾವು ಸಂಭವಿಸಿದ್ರೆ ತಕ್ಷಣ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡುವಂತೆ ಕೋರಲಾಗಿದೆ. ಕಾಯಿಲೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು. ಕೇರಳದ ತಜ್ಞ ವೈದ್ಯರನ್ನೂ ಈ ಸಭೆಗೆ ಕರೆಸಲಾಗಿತ್ತು. ಮಣಿಪಾಲದ ಕೆಎಂಸಿ ಆಸ್ಪತ್ರೆಯೊಂದರಲ್ಲೇ 73 ರೋಗಿಗಳಿಗೆ ಚಿಕಿತ್ಸೆ ನೀಡಲಾಗ್ತಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ಪೈಕಿ 50 ಮಂದಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ. ಈಗ ಹನ್ನೇರಡು ರೋಗಿಗಳಿಗೆ ಮಣಿಪಾಲದಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ವಿಶೇಷ ವಾರ್ಡ್ ವ್ಯವಸ್ಥೆ, ತಜ್ಞ ವೈದ್ಯರನ್ನು ನೇಮಿಸಲಾಗಿದೆ. ಉಚಿತವಾಗಿ ಚಿಕಿತ್ಸೆ ನೀಡಲಿ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಸದ್ಯ ಕಾರ್ಕಳ ಮತ್ತು ಕುಂದಾಪುರ ತಾಲೂಕುಗಳು ಪಶ್ಚಿಮ ಘಟ್ಟದ ತಪ್ಪಲಿನಲ್ಲಿದ್ದು ದಟ್ಟ ಕಡಿನಿಂದ ಆವೃತವಾಗಿದೆ. ಹೀಗಾಗಿ ಈ ಭಾಗದ ಜನರು ಮಂಗನ ಕಾಯಿಲೆಯ ಭೀತಿಯಲ್ಲೇ ದಿನ ಕಳೆಯುವಂತಾಗಿದೆ. 30 ವರ್ಷಗಳ ಹಿಂದೆ ಉಡುಪಿ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿತ್ತು. ಇದೀಗ ಶಿವಮೊಗ್ಗ, ಸಾಗರದಿಂದ ಜಿಲ್ಲೆಗೆ ಪಸರಿಸಿದ್ದು ಅಧಿಕಾರಿಗಳು ಸೂಕ್ತ ಮುನ್ನೇಚ್ಚರಿಕೆಗೆ ಮುಂದಾಗಿದ್ದಾರೆ. ಕಳೆದ 48 ಗಂಟೆಗಳಲ್ಲಿ ಯಾರಿಗೂ ಸೋಂಕು ತಗುಲಿಲ್ಲ ಎಂಬುವುದು ಕೊಂಚ ನೆಮ್ಮದಿಯ ವಿಚಾರ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕರಾವಳಿಯಲ್ಲೂ ಮಂಗನ ಕಾಯಿಲೆ ಭೀತಿ – ಮೃತ ಮಂಗಗಳ ಕಳೇಬರ ಪತ್ತೆ

    ಕರಾವಳಿಯಲ್ಲೂ ಮಂಗನ ಕಾಯಿಲೆ ಭೀತಿ – ಮೃತ ಮಂಗಗಳ ಕಳೇಬರ ಪತ್ತೆ

    ಉಡುಪಿ: ಶಿವಮೊಗ್ಗ ಜಿಲ್ಲೆಯಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಂಗನ ಕಾಯಿಲೆ ಈಗ ಕರಾವಳಿ ಭಾಗಕ್ಕೂ ಹಬ್ಬಿರುವ ಭೀತಿ ವ್ಯಕ್ತವಾಗಿದ್ದು, ಶಿವಮೊಗ್ಗ ಜಿಲ್ಲೆಗೆ ತಾಗಿಕೊಂಡಿರುವ ಗ್ರಾಮಗಳಲ್ಲಿ ಮೃತ ಮಂಗಗಳ ಶವ ಪತ್ತೆಯಾಗಿದೆ.

    ಜಿಲ್ಲೆಯ ಶಿರೂರು ಮೇಲ್ಪಂಕ್ತಿ ಎಂಬಲ್ಲಿ ಎರಡು ಮಂಗಗಳ ಶವ ದೊರೆತಿದೆ. ಸಿದ್ದಾಪುರ ಕಾಡಲ್ಲಿ ಈವರೆಗೆ 9 ಮತ್ತು ಹಳ್ಳಿಹೊಳೆಯಲ್ಲಿ 2 ಮಂಗನ ಕಳೇಬರ ಪತ್ತೆಯಾಗಿದೆ. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿ ಆರೋಗ್ಯ ಅಧಿಕಾರಿಗಳು ಮೃತ ಕೋತಿಯ ದೇಹದ ಕೆಲವು ಭಾಗಗಳನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗೆ ಶಿವಮೊಗ್ಗಕ್ಕೆ ಕಳುಹಿಸಿಕೊಟ್ಟಿದ್ದಾರೆ. ಇದನ್ನು ಓದಿ: ಸಾವಿನ ಜ್ವರಕ್ಕೆ ಬೆಚ್ಚಿಬಿದ್ದ ಮಲೆನಾಡು ಮಂದಿ- 7 ಜನರ ಸಾವಿನ ಬಳಿಕ ಎಚ್ಚೆತ್ತ ಸರ್ಕಾರ..!

    ಕಿವಿಯಲ್ಲಿ ರಕ್ತಸ್ರಾವವಾಗಿ ಮೃತಪಟ್ಟ ರೀತಿಯಲ್ಲಿ ಕೆಲ ಮಂಗಗಳ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ವರದಿ ಬಳಿಕ ಈ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ. ಅಲ್ಲದೇ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತ ಮಂಗಗಳನ್ನು ದಹಿಸಲಾಗಿದೆ.

    ಶಿವಮೊಗ್ಗದಲ್ಲಿ ಈಗಾಗಲೇ 7 ಜನರನ್ನು ಬಲಿ ಪಡೆದಿರುವ ಮಂಗನ ಕಾಯಿಲೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಹಾಗೂ ಆರೋಗ್ಯ ಅಧಿಕಾರಿಗಳು ಶ್ರಮವಹಿಸುತ್ತಿದ್ದಾರೆ. ಇತ್ತ ಕರಾವಳಿ ಭಾಗದಲ್ಲೂ ಮಂಗಗಳು ಅನುಮಾನಸ್ಪದವಾಗಿ ಮೃತ ಪಟ್ಟಿರುವುದು ಸ್ಥಳೀಯರ ಅಂತಕಕ್ಕೆ ಕಾರಣವಾಗಿದೆ.  ಇದನ್ನು ಓದಿ:ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಲೆನಾಡಿನಲ್ಲಿ ಈಗ ಮಂಗನ ಜ್ವರದ ಹಾವಳಿ ಈಗ ಹೆಚ್ಚಾಗಿದೆ. ಮಂಗನಜ್ವರ ಅಥವಾ ಕ್ಯಾಸನೂರು ಡಿಸೀಸ್ ಎಂದು ಕರೆಯಲ್ಪಡುವ ಸಾವಿನ ಜ್ವರಕ್ಕೆ 7 ದಶಕಗಳ ಇತಿಹಾಸವಿದೆ. ಪ್ರತೀ ವರ್ಷ ಬೇಸಿಗೆಯಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತಿತ್ತು. ಆದರೆ ಈ ವರ್ಷ ಮೂರು ತಿಂಗಳು ಮೊದಲೇ ಕಾಣಿಸಿಕೊಂಡಿದ್ದು, ಈಗಾಗಲೇ ಒಂದು ತಿಂಗಳಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಏಳು ಮಂದಿಯನ್ನು ಬಲಿತೆಗೆದುಕೊಂಡಿದೆ. ಹೀಗಾಗಿ ಇಲ್ಲಿ ಮಂಗನ ಜ್ವರ ಎಂದರೇನು? ಯಾಕೆ ಬರುತ್ತದೆ? ಏನೆಲ್ಲ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

    ಆರಂಭಗೊಂಡಿದ್ದು ಹೇಗೆ?
    ಭಾರತಕ್ಕೆ ಸ್ವಾತಂತ್ರ್ಯ ಬಂದು ಹತ್ತು ವರ್ಷಗಳಾದ ಬಳಿಕ ಅಂದರೆ 1957ರಲ್ಲಿ ಬೇಸಗೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿಗೆ ಸೇರಿದ ಕ್ಯಾಸನೂರು ಗ್ರಾಮದಲ್ಲಿ ಮೊದಲ ಬಾರಿಗೆ ಮಂಗನ ಜ್ವರ ಕಾಣಿಸಿಕೊಂಡಿತ್ತು. ಈ ಕಾಯಿಲೆ ಕಾಡಿನಲ್ಲಿ ಮಂಗಗಳು ಮೃತಪಟ್ಟಾಗ ಅದರಿಂದ ಜನರಿಗೆ ಹರಡುತ್ತಿತ್ತು. ಆದ್ದರಿಂದ ಈ ಕಾಯಿಲೆಗೆ `ಮಂಗನ ಕಾಯಿಲೆ ಎಂದು ಜನ ಕರೆದಿದ್ದರು. ಆದರೆ ವೈದ್ಯ ವಿಜ್ಞಾನಿಗಳು ಪ್ರಪಂಚದಲ್ಲಿ ಎಲ್ಲೂ ಕಾಣದ ಈ ಕಾಯಿಲೆ ಕ್ಯಾಸನೂರು ಗ್ರಾಮದಲ್ಲಿ ಮಾತ್ರ ಕಂಡು ಬಂದಿರುವುದರಿಂದ ಈ ಕಾಯಿಲೆಗೆ `ಕ್ಯಾಸನೂರು ಕಾಡಿನ ಕಾಯಿಲೆ’ ಎಂದು ಕರೆದರು.

    ಕಾಯಿಲೆ ಹುಟ್ಟಿ ಎರಡು ದಶಕಗಳಾಗಿದ್ದು, ಮನುಷ್ಯರು ಕಾಡನ್ನು ನಾಶ ಮಾಡುವುದರಿಂದ ರೋಗ ಪೀಡಿತ ಮಂಗಗಳು ಕಾಡನ್ನು ಹುಡುಕುತ್ತಾ ಹೋಗುತ್ತವೆ. ಆಗ ಅವುಗಳು ಹೋದಂತೆಲ್ಲಾ ಕಾಯಿಲೆ ಕೂಡ ವಿಸ್ತರಿಸುತ್ತಾ ಹೋಗುತ್ತದೆ. ಅದರಂತೆಯೇ ಶಿಕಾರಿಪುರ, ಹೊಸನಗರ, ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನ ಹಲವು ಕಡೆ ಕಾಯಿಲೆ ಕಂಡು ಬಂದಿತ್ತು. ಬಳಿಕ ಕ್ಯಾಸನೂರು ಕಾಡಿನ ಕಾಯಿಲೆ ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೂ ಹರಡಿತ್ತು. ಈ ಕಾಯಿಲೆ ಸುಮಾರು 6,000 ಚದರ ಕಿಲೋ ಮೀಟರ್ ಪ್ರದೇಶವನ್ನು ಆಕ್ರಮಿಸಿದ್ದು, ಪ್ರತಿವರ್ಷ ಈ ಕಾಯಿಲೆಗೆ ಅನೇಕ ಮಂದಿ ಬಲಿಯಾಗುತ್ತಿದ್ದಾರೆ.

    ಯಾವ ವೈರಣ್ ಕಾರಣ?
    ಕ್ಯಾಸನೂರು ಮಂಗನ ಕಾಯಿಲೆ (KFD) ಯು KFDV ವೈರಾಣು (Kyasanur Forest disease virus) ಕುಟುಂಬಕ್ಕೆ ಸೇರಿದ ವೈರಾಣುವಾಗಿದೆ. ಇದನ್ನು 1957ರಲ್ಲಿ ಮರಣ ಹೊಂದಿದ ಮಂಗನ ದೇಹದಲ್ಲಿ ಪತ್ತೆ ಮಾಡಲಾಗಿದೆ.

    ಹೇಗೆ ಹರಡುತ್ತದೆ?
    ಕ್ಯಾಸನೂರ ಕಾಯಿಲೆ ಮೂಲತಃ ಪ್ರಾಣಿಗಳ ರೋಗವಾಗಿದ್ದು, ಮುಖ್ಯವಾಗಿ KFDV ವೈರಾಣು ಇರುವ ಉಣ್ಣಿ ಅಥವಾ ಉಣುಗು (Ticks) ಕಚ್ಚಿದಾಗ ರೋಗಕಾರಕ ವೈರಸ್‍ಗಳನ್ನು ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಹರಡುತ್ತದೆ. ಸಾಮಾನ್ಯವಾಗಿ ಈ ರೋಗಗ್ರಸ್ತ ಉಣ್ಣೆಗಳು ಮಾನವನನ್ನು ಕಚ್ಚುವುದರಿಂದ ಆಕಸ್ಮಿಕವಾಗಿ ಮಾನವನಿಗೆ ಸೋಂಕು ತಗಲುತ್ತದೆ. ಆದರೆ ಮಾನವನಿಂದ ಮಾನವನಿಗೆ ಈ ಸೋಂಕು ಹರಡುವುದಿಲ್ಲ.

    ರೋಗ ಲಕ್ಷಣ ಏನು?
    – ಉಣುಗು ಕಡಿತದಿಂದ ವೈರಸ್‍ ಗಳು ದೇಹ ಸೇರಿದ ಒಂದು ವಾರದ ನಂತರ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
    – ವಿಪರೀತ, ಜ್ವರ, ತಲೆನೋವು, ನರದೌರ್ಬಲ್ಯ, ಮಾಂಸಖಂಡಗಳ ಸೆಳೆತ, ವಾಂತಿ ಪ್ರಾರಂಭವಾಗುತ್ತದೆ.
    – ಆಯಾಸ ಉಂಟಾಗುವುದಲ್ಲದೆ ಬಾಯಿ, ವಸಡು ಮೂಗು ಹಾಗೂ ಕರುಳಿನಲ್ಲಿ ರಕ್ತಸ್ರಾವವಾಗುತ್ತದೆ. ಆದರೆ ಶೇ.10-20 ಜನರಲ್ಲಿ ಈ ಕಾಯಿಲೆಯು 2ನೇ ಹಂತಕ್ಕೆ ತಲುಪುವ ಸಾಧ್ಯತೆ ಇರುತ್ತದೆ.

    – ಜ್ವರದ ಜೊತೆಗೆ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ, ಮೂರನೇ ವಾರದ ಪ್ರಾರಂಭದಲ್ಲಿ ತಲೆನೋವು, ಮಾನಸಿಕ ಅಸ್ವಸ್ಥತೆಯ ಲಕ್ಷಣ, ಕಣ್ಣು ಮಂಜಾಗುತ್ತದೆ.
    – ರೋಗಿಯು ಕಡಿಮೆ ರಕ್ತದೊತ್ತಡ ಹಾಗೂ ಪ್ಲೇಟ್‍ಲೇಟ್, ಕೆಂಪು ರಕ್ತಕಣ ಸಂಖ್ಯೆ ಮತ್ತು ಬಿಳಿರಕ್ತಕಣಗಳ ಕೊರತೆಯಿಂದ ಬಳಲುತ್ತಾನೆ.
    – ರೋಗನಿರೋಧಕ ಶಕ್ತಿಯಿರುವ ವ್ಯಕ್ತಿಯು ಒಂದೆರೆಡು ವಾರಗಳಲ್ಲಿ ಚೇತರಿಸಿಕೊಳ್ಳಬಹುದಾದ ಸಾಧ್ಯತೆ ಇರುತ್ತದೆ.
    – 15-20 ದಿನಗಳವರೆಗೆ ರೋಗಿಯ ಸ್ಥಿತಿ ಗಂಭೀರವಾಗಿರುತ್ತದೆ. ಈ ಕಾಯಿಲೆಯಿಂದ ಮರಣ ಹೊಂದುವವರ ಸಂಖ್ಯೆ 3-5%.

    ಯಾವ ಅವಧಿಯಲ್ಲಿ ಬರುತ್ತೆ?
    ಶುಷ್ಕವಾತಾವರಣದ ಸಮಯದಲ್ಲಿ ಅಂದರೆ ನವೆಂಬರ್-ಜೂನ್ ತಿಂಗಳವರೆಗೆ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಕಾಡುತ್ಪನ್ನಗಳನ್ನು ಸಂಗ್ರಹಿಸುವ, ಬೇಟೆಗೆ ಹೋಗುವ, ಅರಣ್ಯದಲ್ಲಿ ಕೆಲಸ ಮಾಡುವ ಅಥವಾ ರೈತರಿಗೆ ಈ KFDV ವೈರಾಣು ತಗಲುವ ಸಾಧ್ಯತೆ ಹೆಚ್ಚಿರುತ್ತದೆ.

    ರೋಗ ಪತ್ತೆ ಹೇಗೆ?
    ಪ್ರಾಥಮಿಕ ಹಂತದಲ್ಲೆ ರಕ್ತ ಪರೀಕ್ಷೆಯ ಮೂಲಕ ವೈರಾಣುವಿನ ಪತ್ತೆ ಮಾಡುವುದು ಸಾಧ್ಯ. ನಂತರದ ಹಂತದಲ್ಲಿ ಎಲಿಸಾ (Enzyme-linked imunosorbent serologic assay) ಪರೀಕ್ಷೆಯ ಮೂಲಕ ಪತ್ತೆ ಮಾಡಲಾಗುತ್ತದೆ.

    ಚಿಕಿತ್ಸೆ ಹೇಗೆ?
    ನಿಖರವಾದ ಚಿಕಿತ್ಸಾ ಕ್ರಮ ಲಭ್ಯವಿಲ್ಲದಿದ್ದರೂ, ಸರಿಯಾದ ಸಮಯಕ್ಕೆ ಆಸ್ಪತ್ರೆಯ ವೈದ್ಯರಿಂದ ಚಿಕಿತ್ಸೆ ಕೊಡಿಸುವುದು ಅತಿಮುಖ್ಯವಾಗಿದೆ. ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು ಹಾಗೂ ರಕ್ತಸ್ರಾವ ಆಗದಂತೆ ಚಿಕಿತ್ಸೆ ನೀಡುವುದು ಈ ಹಂತದಲ್ಲಿ ಬಹಳ ಮುಖ್ಯವಾಗಿವೆ. ಮಂಗನ ಕಾಯಿಲೆಯಿಂದ ರಕ್ಷಣೆ ನೀಡುವ ಲಸಿಕೆ ಲಭ್ಯವಿದೆ. ರೋಗ ಆರಂಭವಾದ ಅನಂತರ ಈ ಲಸಿಕೆ ಬಳಸುವುದರಿಂದ ಯಾವುದೇ ಪ್ರಯೋಜನವಿಲ್ಲ. ರೋಗ ಆರಂಭಗೊಳ್ಳುವ ಮೂರು ತಿಂಗಳ ಮುಂಚೆ ತಿಂಗಳಿಗೆ ಒಂದು ಇಂಜೆಕ್ಷನ್ ಅಂತೆ ಎರಡು ಇಂಜೆಕ್ಷನ್ ತೆಗೆದುಕೊಂಡಲ್ಲಿ ಮಾತ್ರ ಲಸಿಕೆಯಿಂದ ರಕ್ಷಣೆ ದೊರೆಯುತ್ತದೆ.

    ಮುಂಜಾಗ್ರತಾ ಕ್ರಮ ಏನು?
    – ಮಂಗನ ಕಾಯಲೆ ಪೀಡಿತ ಪ್ರದೇಶಗಳಲ್ಲಿ ವಾಸಿಸುವವರು, ಶುಷ್ಕವಾದ ವಾತಾವರಣ ಹಾಗೂ ಉಣುಗು ಜಾಗೃತವಾಗಿರುವ ಸಮಯದಲ್ಲಿ ದಪ್ಟನೆಯ ಬಟ್ಟೆ ಧರಿಸುವುದು, ಕಾಲಿಗೆ ಬೂಟು ಧರಿಸುವುದು ಉತ್ತಮ
    – ಮಂಗಗಳು ಸತ್ತು ಬೀಳುತ್ತಿರುವುದು ಗೊತ್ತಾದ ತಕ್ಷಣ ಆ ಪ್ರದೇಶದ ಕಾಡಿಗೆ ಹೆಲಿಕಾಪ್ಟರ್ ಮೂಲಕ ಉಣುಗು ನಾಶಕ ಔಷಧಿ ಸಿಂಪಡಿಸಬೆಕು.- ಉಣುಗುಗಳು ನಿಗದಿತ ಪ್ರದೇಶದಲ್ಲಿ ಹಾಗೂ ಅನುಕೂಲಕರವಾದ ವಾತಾವರಣದಲ್ಲಿ ತಮ್ಮ ಸಂಖ್ಯೆಯನ್ನು ವೃದ್ಧಿಸಿಕೊಳ್ಳುತ್ತವೆ. ಹೀಗೆ ಸಂಖ್ಯೆ ವೃದ್ಧಿಸಿಕೊಳ್ಳುವುದಕ್ಕೆ ನೇರವಾಗಿ ನಮ್ಮಗಳ ಚಟುವಟಿಕೆಗಳು ಕಾರಣವಾಗಿರುತ್ತದೆ. ಉದಾ: ಮಲೆನಾಡಿನಲ್ಲಿ ಮನೆಯ ಹಿಂಭಾಗ ಮತ್ತು ಕಾಡಿನಂಚಿನಲ್ಲಿ ಬೆಂಕಿ ಹಾಕುವುದು ಸರ್ವೇಸಾಮಾನ್ಯವಾಗಿದೆ. ಇದರಿಂದ ಕಾಡಂಚಿನಲ್ಲಿಯ ನೈಸರ್ಗಿಕ ಮರಗಳು ಮತ್ತು ಸಸ್ಯಗಳು ನಾಶವಾಗಿ ಅಲ್ಲಿ ಯುಪಟೋರಿಯಂ ಕಳೆ ಯಥೇಚ್ಛವಾಗಿ ಬೆಳೆಯುತ್ತದೆ. ಯುಪಟೋರಿಯಂ ಗಿಡಗಳು ಉಣುಗುಗಳ ಸಂಖ್ಯಾವೃದ್ಧಿಗೆ ಪೂರಕ ಕಳೆಯಾಗಿದೆ.

    – ಬೆಂಕಿಯ ನಂತರದಲ್ಲಿ ಯುಪಟೋರಿಯಂ ಕಳೆಗಿಡಗಳು ವೇಗವಾಗಿ ತಮ್ಮ ಸಂಖ್ಯೆಯನ್ನು ವೃದ್ಧಿಸಿಕೊಳ್ಳುವ ಜೊತೆಗೆ ಉಣ್ಣಿಗಳ ಸಂಖ್ಯೆಯನ್ನು ಹೆಚ್ಚು ಮಾಡುತ್ತದೆ. ಇದರಿಂದ KFDV ವೈರಾಣು ಹರಡುವ ಸಾಧ್ಯತೆ ತೀರಾ ಹೆಚ್ಚಾಗಿರುತ್ತದೆ. ಆದ್ದರಿಂದ ಯಾವುದೇ ಉದ್ಧೇಶವನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಕಾಡಿಗೆ ಅಥವಾ ಕಾಡಿನಂಚಿಗೆ ಬೆಂಕಿ ಹಚ್ಚುವುದನ್ನು ಅಲ್ಲಿನ ವಾಸಿಗಳು ಕಡ್ಡಾಯವಾಗಿ ನಿಲ್ಲಿಸುವುದು ಈ ರೋಗವನ್ನು ತಡೆಗಟ್ಟುವ ಪ್ರಥಮ ಮಾರ್ಗವಾಗಿದೆ.
    – ಕಾಯಿಲೆ ಆರಂಭಗೊಂಡಾಗ ಜನರು ಕಾಡಿಗೆ ಹೋಗುವುದನ್ನು ಬಿಡಬೇಕು. ಅನಿವಾರ್ಯವಾಗಿ ಕಾಡಿಗೆ ಹೊಗಲೇಬೇಕಾದರೆ ಮೈತುಂಬಾ ಬಟ್ಟೆ ಕಾಲಿಗೆ ಬೂಟು, ಕೈಗೆ ಗ್ಲೌಸ್, ತಲೆಗೆ ಟೋಪಿ ಧರಿಸಿಕೊಳ್ಳಬೇಕು. ತಮ್ಮ ಮತ್ತು ತಮ್ಮ ಜಾನುವಾರುಗಳ ಮೈಗೆ ಉಣ್ಣೆ ನಾಶಕ ಪುಡಿ ಲೇಪಿಸಿಕೊಳ್ಳಬೇಕು.
    – ಕಾಡಿನಲ್ಲಿ ಕೂರುವುದು, ಮಲಗುವುದು, ಅನಾವಶ್ಯಕ ತಿರುಗಾಡುವುದು ಮಾಡಬಾರದು. ಕಾಡಿನಿಂದ ಹಿಂದಿರುಗಿದ ತಕ್ಷಣ ಸ್ನಾನ ಮಾಡಬೇಕು. ಜಾನುವಾರುಗಳ ಮೈಗೆ ಹತ್ತಿದ ಉಣ್ಣೆಗಳನ್ನು ಕಿತ್ತೆಸೆಯಬೇಕು.


    ವೈರಾಣುವಿನ 4 ಜೀವನ ಕ್ರಮಗಳು:
    ಏಗಿಆಗಿ ವೈರಾಣುಗಳ ಜೀವನ ಚಕ್ರದಲ್ಲಿ ನಾಲ್ಕು ವಿಧಗಳು, 1.ಮೊಟ್ಟೆ (Egg), 2. ಶೈಶಾವಸ್ಥೆ (ಲಾರ್ವಾ), 3. ಬಾಲ್ಯಾವಸ್ಥೆ (Nimph) ಮತ್ತು 4. ಪ್ರೌಢಾವಸ್ಥೆ (Adult). ವೈರಾಣುಗಳನ್ನು ವಾನರ ಅಥವಾ ಮನುಷ್ಯರಿಗೆ ಅಂಟಿಸುವವ ಕೆಲಸ ಮಾಡುವುದು ನಿಂಫ್ ಅವಸ್ಥೆಯಲ್ಲಿರುವ ಉಣುಗು ಮಾತ್ರವಾಗಿದೆ. ಈ ರೋಗಕ್ಕೆ ಈಗಾಗಲೇ ಮುಂಜಾಗರೂಕತಾ ಲಸಿಕೆಯನ್ನು ಸಿದ್ಧ ಪಡಿಸಲಾಗಿದ್ದು, ವೈದ್ಯರ ಸಲಹೆಯಂತೆ ತೆಗೆದುಕೊಂಡಲ್ಲಿ KFDV ವೈರಾಣುವಿನಿಂದ ಸಾಯುವ ಪ್ರಮಾಣ 83% ಕಡಿಮೆಯಾಗುತ್ತದೆ.

    -ಹಾಲಸ್ವಾಮಿ/ ಮಂಜುಳ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಗನ ಕಾಯಿಲೆಗೆ ಮತ್ತಿಬ್ಬರು ಬಲಿ – ಮಗ ಸತ್ತ ವಾರಕ್ಕೆ ತಾಯಿ ಸಾವು

    ಮಂಗನ ಕಾಯಿಲೆಗೆ ಮತ್ತಿಬ್ಬರು ಬಲಿ – ಮಗ ಸತ್ತ ವಾರಕ್ಕೆ ತಾಯಿ ಸಾವು

    ಶಿವಮೊಗ್ಗ: ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಮತ್ತಿಬ್ಬರು ಮೃತಪಟ್ಟಿದ್ದು, ಇದರೊಂದಿಗೆ ಈ ಕಾಯಿಲೆಗೆ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆ ಆಗಿದೆ.

    ಸಾಗರ ತಾಲೂಕು ಅರಲಗೋಡು ಗ್ರಾಮದ ಶ್ವೇತಾ (17) ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಮೃತಪಟ್ಟಿದ್ದು, ಮಧ್ಯಾಹ್ನ ವಾಟೆಮಕ್ಕಿ ಗ್ರಾಮದ ರಾಮಕ್ಕ ಎಂಬ ಮಹಿಳೆ ಮೃತಪಟ್ಟಿದ್ದಾರೆ.

    ಕಳೆದ ಒಂದು ವಾರದಿಂದ ಇಬ್ಬರು ಮಂಗನ ಕಾಯಿಲೆಯಿಂದ ಜ್ವರದಿಂದ ಬಳಲುತ್ತಿದ್ದರು ಎಂಬ ಮಾಹಿತಿ ಲಭಿಸಿದ್ದು, ಮೃತ ರಾಮಕ್ಕನ ಮಗ ಮಂಜುನಾಥ್ ಕಳೆದ ವಾರ ಹಿಂದೆಯಷ್ಟೇ ಮಂಗನ ಕಾಯಿಲೆಗೆ ಬಲಿಯಾಗಿದ್ದ. ಪ್ರಮುಖವಾಗಿ ಸಾಗರ ತಾಲೂಕಿನ ಐದು ಜನ ಮಂಗನ ಕಾಯಿಲೆಗೆ ಮೃತಪಟ್ಟಿದ್ದಾರೆ, ತೀರ್ಥಹಳ್ಳಿ ತಾಲೂಕಿನ ಇಬ್ಬರು ಮೃತಪಟ್ಟಿದ್ದರು.

    ಜಿಲ್ಲೆಯ ಸಾಗರ, ತೀರ್ಥಹಳ್ಳಿ ತಾಲೂಕಿನ ಐವತ್ತಕ್ಕೂ ಹೆಚ್ಚು ಜನ ಸ್ಥಳೀಯ ಹಾಗೂ ಶಿವಮೊಗ್ಗ, ಮಣಿಪಾಲ ಆಸ್ಪತ್ರೆಗಳಲ್ಲಿ ದಾಖಲಾಗಿದ್ದು, ಪ್ರತಿ ವರ್ಷ ಬೇಸಿಗೆಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಈ ಕಾಯಿಲೆ ಪ್ರಸಕ್ತ ವರ್ಷ ಮುಂಚಿತವಾಗಿಯೇ ಕಾಣಿಸಿಕೊಂಡಿದೆ. ಅಂದಹಾಗೇ ಕಾಡಿನಲ್ಲಿ ಸತ್ತು ಬೀಳುತ್ತಿರುವ ಮಂಗಗಳಿಂದ ಮನುಷ್ಯರಿಗೆ ಈ ಸೋಂಕು ಹರಡುತ್ತಿದ್ದು, ಸೂಕ್ತ ಮುಂಜಾಗ್ರತಾ ವಹಿಸುವಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ವಿಫಲವಾಗಿದೆ. ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಸಾಗರ, ತೀರ್ಥಹಳ್ಳಿ ತಾಲೂಕಿನ ಜನರಲ್ಲಿ ಆತಂಕ ಹೆಚ್ಚಾಗಿದೆ.

    ಕ್ಯಾಸಣೂರ್ ಫಾರೆಸ್ಟ್ ಡಿಸೀಸ್ (ಕೆಎಫ್‍ಡಿ) ಅಥವಾ ಮಂಗನ ಕಾಯಿಲೆ ಎಂದು ಇದನ್ನು ಕರೆಯುತ್ತಾರೆ. ಪ್ರತಿ ವರ್ಷ ಈ ಭಾಗದಲ್ಲಿ ಸುಮಾರು 400ಕ್ಕೂ ಹೆಚ್ಚು ಕೆಎಫ್‍ಡಿ ಪ್ರಕರಣಗಳು ಇಲ್ಲಿ ಪತ್ತೆಯಾಗುತ್ತದೆ. ಜ್ವರ, ವಾಂತಿ, ಅತಿಸಾರ ಮತ್ತು ರಕ್ತಸ್ರಾವ ಈ ಕಾಯಿಲೆಯ ಲಕ್ಷಣಗಳಾಗಿದೆ. ಅಂದಹಾಗೇ ಈ ಮಂಗನ ಕಾಯಿಲೆ 1957 ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಕಾಯಿಲೆಗೆ ಕಾರಣವಾದ ವೈರಾಣು ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಕಾಡಿನಲ್ಲಿ ಮೊದಲ ಬಾರಿಗೆ ಗುರುತಿಸಿದ್ದ ಕಾರಣ ಇಕ್ಕೆ ಕ್ಯಾಸನೂರು ಫಾರೆಸ್ಟ್ ಡಿಸೀಸ್ ಎಂದು ಹೆಸರು ನೀಡಲಾಗಿದೆ. ಇದು ಸಾಂಕ್ರಾಮಿಕ ರೋಗವಾಗಿದ್ದು, ಮಂಗಗಳಲ್ಲಿದ್ದ ಉಣ್ಣೆಗಳು ಬಂದು ಮನುಷ್ಯರಿಗೆ ಕಚ್ಚಿದಾಗ ಮಂಗನ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಈ ಸೋಂಕಿನಿಂದ ಮಂಗಗಳು ಸಾಯುತ್ತಿದ್ದ ಕಾರಣ ಇದನ್ನು ಮಂಗನ ಕಾಯಿಲೆ ಎಂದು ಕರೆಯಲಾಗಿತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv