Tag: ಮಂಗನ ಕಾಯಿಲೆ

  • ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಸಾವು

    ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಸಾವು

    – ಕಳೆದ 2 ತಿಂಗಳಲ್ಲಿ ಮೂವರು ಸಾವು

    ಶಿವಮೊಗ್ಗ: ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ಕಸಗುಪ್ಪೆ ಗ್ರಾಮದ ನಿವಾಸಿ ಕೋಮರಾಜ್ ಜೈನ್ (32) ಎಂದು ಗುರುತಿಸಲಾಗಿದೆ. ಈ ಘಟನೆಯಿಂದಾಗಿ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಮಂಗನ ಕಾಯಿಲೆಗೆ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದಂತಾಗಿದೆ.

    ಮೂಲತಃ ಕೃಷಿಕರಾಗಿದ್ದ ಮೃತ ಕೋಮರಾಜ್ ಜೈನ್ ಕಳೆದೊಂದು ವಾರದಿಂದ ಜ್ವರ ಹಾಗೂ ದೊಡ್ಡ ಕರಳು ಬೇನೆಯಿಂದ ಬಳಲುತ್ತಿದ್ದರು. ಹೀಗಾಗಿ ಈ ಮೊದಲು ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವೈದ್ಯರು ಪರಿಕ್ಷೀಸಿದಾಗ ಮಂಗನ ಕಾಯಿಲೆ ಇರುವುದು ಪತ್ತೆಯಾಗಿತ್ತು.

    ಅಲ್ಲದೇ ಕಳೆದ ನಾಲ್ಕು ದಿನಗಳ ಹಿಂದೆ ಮತ್ತೆ ಜ್ವರ ಕಾಣಿಸಿಕೊಂಡಿದ್ದರಿಂದ ಕೋಮರಾಜ್ ಜೈನ್‍ರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೋಮರಾಜ್ ಜೈನ್ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

  • ಮಲೆನಾಡಿನಲ್ಲಿ ಮಂಗನ ಕಾಯಿಲೆ ಭೀತಿ – ಸೋಂಕು ತಗುಲಿ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಶಂಕೆ

    ಮಲೆನಾಡಿನಲ್ಲಿ ಮಂಗನ ಕಾಯಿಲೆ ಭೀತಿ – ಸೋಂಕು ತಗುಲಿ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಶಂಕೆ

    ಶಿವಮೊಗ್ಗ: ಮಂಗನ ಕಾಯಿಲೆ ಸೋಂಕು ತಗುಲಿ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

    ಮೃತಪಟ್ಟವರನ್ನು ಜಿಲ್ಲೆಯ ಸಾಗರ ತಾಲೂಕಿನ ಮಂಡವಳ್ಳಿ ಗ್ರಾಮದ ಚೌಡಪ್ಪ(33) ಎಂದು ಗುರುತಿಸಲಾಗಿದೆ. ಕಳೆದ ಮೂರು ದಿನಗಳಿಂದ ಜ್ವರದಿಂದ ಚೌಡಪ್ಪ ಬಳಲುತ್ತಿದ್ದರು. ಮಂಗನ ಕಾಯಿಲೆ ಹಿನ್ನೆಲೆಯಲ್ಲಿ ಮಲೆನಾಡಿನ ಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಎಫ್‍ಡಿ ಲಸಿಕೆ ಹಾಕಲಾಗಿತ್ತು. ಆದರೆ ಕೆಎಫ್‍ಡಿ ಲಸಿಕೆ ಹಾಕಿಸಿಕೊಳ್ಳಲು ಚೌಡಪ್ಪ ನಿರಾಕರಿಸಿದ್ದರು ಎನ್ನಲಾಗಿದೆ.

    ಕಳೆದ ಮೂರ್ನಾಲ್ಕು ತಿಂಗಳಿನಿಂದ ಈ ಭಾಗದಲ್ಲಿ ಕೆಎಫ್‍ಡಿ ಸಂಬಂಧ ನಿರಂತರವಾಗಿ ಲಸಿಕೆ ನೀಡಲಾಗುತ್ತಿದೆ. ಅಲ್ಲದೇ ಮಂಡವಳ್ಳಿ ಭಾಗದಲ್ಲಿ ಕಳೆದ 5 ತಿಂಗಳಿನಿಂದ ಸುಮಾರು 14 ಮಂಗಗಳು ಕೂಡ ಸಾವನಪ್ಪಿರುವ ಪ್ರಕರಣ ವರದಿಯಾಗಿದ್ದು, ಈಗಾಗಲೇ ಇಲ್ಲಿನ 6 ಜನರಿಗೆ ಮಂಗನ ಕಾಯಿಲೆ ಸೋಂಕು ತಗುಲಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಈ 6 ಜನರಿಗೂ ನಿರಂತರವಾಗಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.

    ಇತ್ತ ಜಿಲ್ಲಾ ಆರೋಗ್ಯಾಧಿಕಾರಿಗಳು ಮಾತ್ರ ಚೌಡಪ್ಪ ಮಂಗನ ಕಾಯಿಲೆ ಸೋಂಕಿನಿಂದ ಮೃತಪಟ್ಟಿಲ್ಲ ಎಂದು ತಿಳಿಸಿದ್ದಾರೆ. ಆದರೂ ಕೆಎಫ್‍ಡಿ ಲಸಿಕೆ ಹಾಕಿಸಿಕೊಳ್ಳದ ಕಾರಣ ಮಂಗನ ಕಾಯಿಲೆ ಸೋಂಕು ತಗುಲಿಯೇ ಚೌಡಪ್ಪ ಸಾವನ್ನಪ್ಪಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

  • ಮಂಗನ ಕಾಯಿಲೆಗೆ ಉತ್ತರ ಕನ್ನಡ ಜಿಲ್ಲೆಯ ವ್ಯಕ್ತಿ ಬಲಿ

    ಮಂಗನ ಕಾಯಿಲೆಗೆ ಉತ್ತರ ಕನ್ನಡ ಜಿಲ್ಲೆಯ ವ್ಯಕ್ತಿ ಬಲಿ

    ಕಾರವಾರ: ಮಂಗನಕಾಯಿಲೆಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಬಲಿ ತೆಗೆದುಕೊಂಡಿದೆ. ಜಿಲ್ಲೆಯ ಸಿದ್ದಾಪುರ ತಾಲೂಕಿನ ಕ್ಯಾದಗಿ ಸಮೀಪದ ಗಿಳಸೆ ಗ್ರಾಮದಲ್ಲಿ ಘಟನೆ ನಡೆದಿದೆ.

    ಗಿಳಸೆ ಗ್ರಾಮದ ಭಾಸ್ಕರ್ ಗಣಪತಿ ಹೆಗಡೆ (64) ಮೃತ ದುರ್ದೈವಿ. ಕೆಲವು ದಿನಗಳಿಂದ ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಸಿದ್ದಾಪುರದ ಖಾಸಗಿ ಅಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ಒಯ್ಯಲಾಗಿತ್ತು. ಆದರೆ ಅಲ್ಲಿಯೂ ಚಿಕಿತ್ಸೆಗೆ ಸ್ಪಂದಿಸಿದ ಕಾರಣ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಭಾಸ್ಕರ್ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಹೇಗೆ ಹರಡುತ್ತದೆ?
    ಕ್ಯಾಸನೂರ ಕಾಯಿಲೆ ಮೂಲತಃ ಪ್ರಾಣಿಗಳ ರೋಗವಾಗಿದ್ದು, ಮುಖ್ಯವಾಗಿ ಏಈಆಗಿ ವೈರಾಣು ಇರುವ ಉಣ್ಣಿ ಅಥವಾ ಉಣುಗು (Ticks) ಕಚ್ಚಿದಾಗ ರೋಗಕಾರಕ ವೈರಸ್‍ಗಳನ್ನು ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಹರಡುತ್ತದೆ. ಸಾಮಾನ್ಯವಾಗಿ ಈ ರೋಗಗ್ರಸ್ತ ಉಣ್ಣೆಗಳು ಮಾನವನನ್ನು ಕಚ್ಚುವುದರಿಂದ ಆಕಸ್ಮಿಕವಾಗಿ ಮಾನವನಿಗೆ ಸೋಂಕು ತಗಲುತ್ತದೆ. ಆದರೆ ಮಾನವನಿಂದ ಮಾನವನಿಗೆ ಈ ಸೋಂಕು ಹರಡುವುದಿಲ್ಲ. ಇದನ್ನೂ ಓದಿ: ಮಂಗನ ಕಾಯಿಲೆಗೆ ಹೆದರಿ ಊರು ತೊರೆಯುತ್ತಿದ್ದಾರೆ ಮಲೆನಾಡಿಗರು!

    ಆರಂಭಗೊಂಡಿದ್ದು ಹೇಗೆ?
    ಭಾರತಕ್ಕೆ ಸ್ವಾತಂತ್ರ್ಯ ಬಂದು ಹತ್ತು ವರ್ಷಗಳಾದ ಬಳಿಕ ಅಂದರೆ 1957ರಲ್ಲಿ ಬೇಸಗೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿಗೆ ಸೇರಿದ ಕ್ಯಾಸನೂರು ಗ್ರಾಮದಲ್ಲಿ ಮೊದಲ ಬಾರಿಗೆ ಮಂಗನ ಜ್ವರ ಕಾಣಿಸಿಕೊಂಡಿತ್ತು. ಈ ಕಾಯಿಲೆ ಕಾಡಿನಲ್ಲಿ ಮಂಗಗಳು ಮೃತಪಟ್ಟಾಗ ಅದರಿಂದ ಜನರಿಗೆ ಹರಡುತ್ತಿತ್ತು. ಆದ್ದರಿಂದ ಈ ಕಾಯಿಲೆಗೆ `ಮಂಗನ ಕಾಯಿಲೆ ಎಂದು ಜನ ಕರೆದಿದ್ದರು. ಆದರೆ ವೈದ್ಯ ವಿಜ್ಞಾನಿಗಳು ಪ್ರಪಂಚದಲ್ಲಿ ಎಲ್ಲೂ ಕಾಣದ ಈ ಕಾಯಿಲೆ ಕ್ಯಾಸನೂರು ಗ್ರಾಮದಲ್ಲಿ ಮಾತ್ರ ಕಂಡು ಬಂದಿರುವುದರಿಂದ ಈ ಕಾಯಿಲೆಗೆ `ಕ್ಯಾಸನೂರು ಕಾಡಿನ ಕಾಯಿಲೆ’ ಎಂದು ಕರೆದರು. ಇದನ್ನೂ ಓದಿ: ಕಾರಿನ ಮೇಲೆ ಮಂಗನಕಾಯಿಲೆ ಬೋರ್ಡ್ ಹಾಕಿ ಎಂಟ್ರಿ ಕೊಟ್ಟ ಐಟಿ ಅಧಿಕಾರಿಗಳು

  • ಚಿಕ್ಕಮಗಳೂರಿನಲ್ಲಿ ಮಂಗನ ಕಾಯಿಲೆ ಭೀತಿ – ಮೂವರು ಕಾರ್ಮಿಕರಲ್ಲಿ ಸೋಂಕು ಪತ್ತೆ

    ಚಿಕ್ಕಮಗಳೂರಿನಲ್ಲಿ ಮಂಗನ ಕಾಯಿಲೆ ಭೀತಿ – ಮೂವರು ಕಾರ್ಮಿಕರಲ್ಲಿ ಸೋಂಕು ಪತ್ತೆ

    ಚಿಕ್ಕಮಗಳೂರು: ಮಧ್ಯಪ್ರದೇಶ ಹಾಗೂ ಅಸ್ಸಾಂನಿಂದ ಕಾಫಿ ತೋಟದ ಕೆಲಸಕ್ಕೆ ಬಂದಿದ್ದ ಕಾರ್ಮಿಕರಲ್ಲಿ ಮೂವರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಮಡಬೂರು ಗ್ರಾಮದ ಸುತ್ತಮುತ್ತಲಿನ ಎಸ್ಟೇಟಿನಲ್ಲಿ ಕೆಲಸ ಮಾಡುವ ಕೆಲಸಗಾರರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದೆ.

    ಮೂವರು ಕಾರ್ಮಿಕರ ರಕ್ತದ ಮಾದರಿಯನ್ನ ಶಿವಮೊಗ್ಗದ  ವೈರಸ್ ಪರಿಶೋಧನ ಪ್ರಯೋಗಾಲಯಕ್ಕೆ(ವಿಡಿಎಲ್) ಕಳುಹಿಸಲಾಗಿದೆ. ಮೂವರು ಸೋಂಕಿತರಲ್ಲಿ ಇಬ್ಬರು ಮಧ್ಯಪ್ರದೇಶಕ್ಕೆ ಹಿಂದಿರುಗಿದ್ದು, ಓರ್ವ ಮಹಿಳೆಗೆ ಎನ್.ಆರ್ ಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ತೋಟದ ಉಳಿದ ಕಾರ್ಮಿಕರಿಗೂ ಸೋಂಕು ಹರಡದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ. ಮಂಗನ ಕಾಯಿಲೆ ಪತ್ತೆಯಾಗಿರೋ ಜಾಗವನ್ನ ಹಾಟ್ ಸ್ಪಾಟ್ ಎಂದು ಗುರುತಿಸಿರೋ ಜಿಲ್ಲಾಡಳಿತ, ಆ ಜಾಗದ ಐದು ಕಿ.ಮೀ ಸುತ್ತಳತೆಯಲ್ಲಿ ಕೆಎಫ್‍ಡಿ ರೋಗ ನಿರೋಧಕ ಔಷಧಿಯನ್ನ ಸಿಂಪಡಿಸಿದೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಧಿಕಾರಿ ಸುಭಾಷ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಮಹಿಳೆಯಿಂದಲೂ ರೋಗ ಇನ್ನಿತರರಿಗೆ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಮಡಬೂರು ಸುತ್ತಮುತ್ತಲಿನ ಗ್ರಾಮಗಳ 6ರಿಂದ 65 ವರ್ಷದ ಎಲ್ಲಾ ವಯೋಮಾನದವರಿಗೂ ಕೆಎಫ್‍ಡಿ ನಿರೋಧಕ ಲಸಿಕೆ ಹಾಕಲಾಗ್ತಿದೆ.

  • ಮಲೆನಾಡಿನಲ್ಲಿ ಕೆಎಫ್‍ಡಿ ಸೋಂಕಿಗೆ ಮೊದಲ ಬಲಿ

    ಮಲೆನಾಡಿನಲ್ಲಿ ಕೆಎಫ್‍ಡಿ ಸೋಂಕಿಗೆ ಮೊದಲ ಬಲಿ

    ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಶೀಗೆಮಕ್ಕಿ ಗ್ರಾಮದಲ್ಲಿ ಮಂಗನ ಕಾಯಿಲೆಗೆ ತುತ್ತಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಈ ವರ್ಷ ಮತ್ತೆ ಕೆಎಫ್‍ಡಿ ಸೋಂಕಿನ ಆತಂಕ ಮಲೆನಾಡಿಗರಲ್ಲಿ ಕಾಡಲಾರಂಭಿಸಿದೆ.

    ಮೃತಪಟ್ಟ ಮಹಿಳೆಯನ್ನು ಹೂವಮ್ಮ(58) ಎಂದು ಗುರುತಿಸಲಾಗಿದೆ. ಹೂವಮ್ಮ ಜ. 8ರಂದು ಜ್ವರದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಹೂವಮ್ಮ ಅವರ ಕುಟುಂಬಸ್ಥರು ತಾಲೂಕಿನ ತುಮರಿ ಪ್ರಾರ್ಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಕೆಎಫ್‍ಡಿ ಸೋಂಕು ತಗುಲಿರಬಹುದು ಎಂಬ ಶಂಕೆಯಿಂದ ಮಣಿಪಾಲ್ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದರು. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಮಣಿಪಾಲ್ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ನಂತರ ಮೃತ ಮಹಿಳೆಗೆ ಕೆಎಫ್‍ಡಿ ಸೋಂಕು ತಗುಲಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ವೈದ್ಯರು ಚಿಕಿತ್ಸೆ ಮುಂದುವರಿಸಿದ್ದರೂ ಆರೋಗ್ಯದಲ್ಲಿ ಸುಧಾರಣೆ ಕಂಡು ಬರದೇ ಮಹಿಳೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.

    ಕೆಎಫ್‍ಡಿ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಆರೋಗ್ಯ ಇಲಾಖೆ ಮಲೆನಾಡಿನ ಭಾಗದ ಜನರಿಗೆ ಲಸಿಕೆ ಹಾಕಿಸಲಾಗಿತ್ತು. ಹೂವಮ್ಮನ ಕುಟುಂಬಸ್ಥರು ಲಸಿಕೆ ಹಾಕಿಸಿಕೊಂಡಿದ್ದರು. ಆದರೆ ಹೂವಮ್ಮ ಮಾತ್ರ ಲಸಿಕೆ ಹಾಕಿಸಿಕೊಂಡಿರಲಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಕಳೆದ ವರ್ಷ ಜಿಲ್ಲೆಯಲ್ಲಿ ಕೆಎಫ್‍ಡಿ ಸೋಂಕಿಗೆ 23 ಮಂದಿ ಬಲಿಯಾಗಿದ್ದರು.

  • ಶಿವಮೊಗ್ಗದಲ್ಲಿ ಮತ್ತೆ ಕಾಣಿಸಿದ ಮಂಗನ ಜ್ವರ

    ಶಿವಮೊಗ್ಗದಲ್ಲಿ ಮತ್ತೆ ಕಾಣಿಸಿದ ಮಂಗನ ಜ್ವರ

    ಶಿವಮೊಗ್ಗ: ಕಳೆದ ವರ್ಷ ನಿದ್ದೆಗೆಡಿಸಿದ್ದ ಮಂಗನ ಕಾಯಿಲೆ ಇದೀಗ ಮಲೆನಾಡಿಗೆ ಮತ್ತೊಮ್ಮೆ ಕಾಲಿಟ್ಟಿದೆ.

    ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತೋಟದ ಕೊಪ್ಪ ಗ್ರಾಮದಲ್ಲಿ ಕಳೆದೊಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ತಿಮ್ಮಪ್ಪ ಎಂಬ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ರಕ್ತ ಪರೀಕ್ಷಿಸಿದಾಗ ಮಂಗನ ಕಾಯಿಲೆ ಇರೋದು ದೃಢಪಟ್ಟಿದೆ.

    ವಿಷಯ ತಿಳಿಯುತ್ತಿದ್ದಂತೆ ಆರೋಗ್ಯ ಇಲಾಖೆ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ನಂತರ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿರೋ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲೆಯಲ್ಲಿ ಇದೂವರೆಗೆ ಯಾವುದೇ ಮಂಗನ ಕಾಯಿಲೆ ಪತ್ತೆಯಾಗಿಲ್ಲ. ತೋಟದ ಕೊಪ್ಪದ ವ್ಯಕ್ತಿಯ ರಕ್ತದ ಮಾದರಿಯನ್ನು ಸಂಗ್ರಹಿಸಿ ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಲಾಗಿದೆ. ಈಗಾಗಲೇ ಹಲವೆಡೆ ಚುಚ್ಚುಮದ್ದು ಲಸಿಕೆ ಹಾಕುವ ಕಾರ್ಯ ಸಹ ನಡೆಯುತ್ತಿದೆ. ಹೀಗಾಗಿ ಮಂಗನ ಕಾಯಿಲೆ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

  • ಮಂಗನ ಕಾಯಿಲೆಗೆ ಹೆದರಿ ಊರು ತೊರೆಯುತ್ತಿದ್ದಾರೆ ಮಲೆನಾಡಿಗರು!

    ಮಂಗನ ಕಾಯಿಲೆಗೆ ಹೆದರಿ ಊರು ತೊರೆಯುತ್ತಿದ್ದಾರೆ ಮಲೆನಾಡಿಗರು!

    ಶಿವಮೊಗ್ಗ: ಮರಣ ಮೃದಂಗ ಭಾರಿಸುತ್ತಿರುವ ಮಾರಕ ಮಂಗನ ಕಾಯಿಲೆಗೆ ಮಲೆನಾಡಿಗರು ತತ್ತರಿಸಿ ಹೋಗಿದ್ದಾರೆ. ಅಲ್ಲದೆ ಸರ್ಕಾರ ನೀಡುತ್ತಿರುವ ಔಷಧಿಗಳು ಕೂಡ ಈ ಮಾರಣಾಂತಿಕ ಕಾಯಿಲೆಯನ್ನು ನಿಯಂತ್ರಿಸಲು ಆಗುತ್ತಿಲ್ಲ. ಆದರಿಂದ ಮಂಗನ ಕಾಯಿಲೆಗೆ ಹೆದರಿ ಮಲೆನಾಡಿನ ಕೆಲವು ಭಾಗಗಳಲ್ಲಿ ಜನರು ಊರು ಬಿಡುತ್ತಿದ್ದಾರೆ.

    ಹೌದು, ಮಂಗನ ಕಾಯಿಲೆ ಮಲೆನಾಡಿನ ಜನರಿಗೆ ಬೆನ್ನುಬಿಡದೇ ಕಾಡುತ್ತಿದೆ. ಅಲ್ಲದೆ ಈ ಬಗ್ಗೆ ಸರ್ಕಾರ ಎಷ್ಟೇ ಕ್ರಮಗಳನ್ನು ತೆಗೆದುಕೊಂಡಿದ್ದರು ಮಂಗನ ಜ್ವರ ನಿಯಂತ್ರಣ ಮಾಡುವಲ್ಲಿ ಸೋತಿದೆ. ವ್ಯಾಕ್ಸನ್, ಡಿಎಂಪಿ ತೈಲ ಬಳಸಿದ ಮೇಲೂ ಕೂಡ ಜನ ಮಂಗನ ಜ್ವರದಿಂದ ಸಾಯುತ್ತಿದ್ದಾರೆ. ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೇ ಈ ಮಾರಕ ಕಾಯಿಲೆಗೆ ಹದಿನೈದು ಜನ ಮೃತಪಟ್ಟಿದ್ದಾರೆ. ಇದರಿಂದ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಮಂಡವಳ್ಳಿ, ಕೊಪ್ಪರಿಗೆ, ಬಣ್ಣುಮನೆ ಸೇರಿ ಈ ಭಾಗದ ಪ್ರತೀ ಹಳ್ಳಿಯಲ್ಲೂ ಸಾವುಗಳು ಸಂಭವಿಸಿವೆ. ಇದನ್ನೂ ಓದಿ:ಹಾಸನದಲ್ಲೂ ಮಂಗನ ಕಾಯಿಲೆ ವೈರಸ್ ಪತ್ತೆ

    ಮಂಗನ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಏನೂ ಮಾಡಲಾಗದೆ ಅಸಹಾಯಕರಾಗಿರುವ ಇಲ್ಲಿನ ಜನ ಊರು ಬಿಡುತ್ತಿದ್ದಾರೆ. ಕಾಡಿನ ನಡುವೆ ಇರುವ ಒಂಟಿ ಮನೆಗಳಿಗೆ ಈಗ ಬೀಗ ಹಾಕಲಾಗಿದೆ. ಐತುಮನೆ ಎಂಬ ಊರಿನ ಎಲ್ಲಾ ಮನೆಗಳಿಗೆ ಬೀಗ ಹಾಕಲಾಗಿದೆ. ಉಳಿದ ಗ್ರಾಮದವರು ಬೇರೆ ಊರುಗಳಿಗೆ ಹೋಗಲು ಸಿದ್ಧವಾಗುತ್ತಿದ್ದಾರೆ. ಇದನ್ನೂ ಓದಿ:ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಅಲ್ಲದೆ ಕೃಷಿ ಮಾಡುತ್ತಲೇ ಬದುಕು ಕಟ್ಟಿಕೊಂಡಿರುವ ಇಲ್ಲಿನ ಜನ ತಮ್ಮ ತೋಟ ಗದ್ದೆಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಆದರಿಂದ ಕೊಯ್ಲಿಗೆ ಬಂದ ಅಡಕೆಗಳು ತೋಟದಲ್ಲೇ ಹಣ್ಣಾಗಿ ಉದುರುತ್ತಿದೆ. ಜಾನುವಾರುಗಳನ್ನು ಮನೆಯಲ್ಲೇ ಕಟ್ಟಿ ಮೇವು ಹಾಕಬೇಕಾದ ಪರಿಸ್ಥಿತಿ ಈ ಭಾಗಗಳಲ್ಲಿ ಮಂಗನ ಕಾಯಿಲೆಯಿಂದ ನಿರ್ಮಾಣವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಾಸನದಲ್ಲೂ ಮಂಗನ ಕಾಯಿಲೆ ವೈರಸ್ ಪತ್ತೆ

    ಹಾಸನದಲ್ಲೂ ಮಂಗನ ಕಾಯಿಲೆ ವೈರಸ್ ಪತ್ತೆ

    ಹಾನಸ: ಮಲೆನಾಡಿಗರ ನಿದ್ದೆ ಗೆಡಿಸಿದ್ದ ಮಂಗನ ಕಾಯಿಲೆ ಭೀತಿ ಇದೀಗ ಹಾಸನ ಜಿಲ್ಲೆಯಲ್ಲಿಯೂ ಮಾರಕ ರೋಗದ ವೈರಸ್ ಪತ್ತೆಯಾಗಿದೆ.

    ಹಾಸನ ಜಿಲ್ಲೆಯ ಎರಡು ಗ್ರಾಮಗಳಲ್ಲಿ ದನ ಕರುಗಳ ಉಣ್ಣೆಯಲ್ಲಿ ವೈರಸ್ ಕಂಡು ಬಂದಿದೆ. ಹಾಸನ ತಾಲೂಕಿನ ಚಿಕ್ಕ ಬಸವನಹಳ್ಳಿ ಗ್ರಾಮ ಹಾಗೂ ಸಕಲೇಶಪುರ ಬಸವನಗುಡಿ ಗ್ರಾಮದಲ್ಲಿ ಮಂಗನ ಕಾಯಿಲೆ ವೈರಸ್ ಪತ್ತೆಯಾಗಿದೆ.

    ವೈರಸ್ ಪತ್ತೆಯಾದ ಹಳ್ಳಿಗಳಿಗೆ ಜಿಲ್ಲಾ ಪಂಚಾಯತ್ ಸಿಇಓ ವಿಜಯ್ ಹಾಗೂ ಡಿಎಚ್‍ಓ ಸತೀಶ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಗ್ರಾಮಸ್ಥರಿಗೆ ಈ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

    ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ತಂಡ ಮನೆ ಮನೆಗೆ ಔಷಧ ನೀಡಿ, ಬಿತ್ತಿ ಪತ್ರ ಹಂಚಿ ಜಾಗೃತಿ ಮೂಡಿಸಲು ಗ್ರಾಮದಲ್ಲೇ ಬಿಡು ಬಿಟ್ಟಿದ್ದಾರೆ. ಈಗಾಗಲೇ ಜಿಲ್ಲೆಯ 625 ದನ-ಕರುಗಳು, ಕುರಿ, ಮೇಕೆಯ ರಕ್ತದ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎರಡು ಸ್ಯಾಂಪಲ್ ಗಳಲ್ಲಿ ಮಂಗನ ಕಾಯಿಲೆ ವೈರಸ್ ಪಾಸಿಟಿವ್ ಆಗಿ ಬಂದಿದೆ.

    ಈಗಾಗಲೇ ಮಲೆನಾಡಿನ ಭಾಗದಲ್ಲಿ ಮಂಗನ ಕಾಯಿಲೆಯಿಂದ ಅನೇಕರು ಮೃತಪಟ್ಟಿದ್ದಾರೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಆರೋಗ್ಯ ಇಲಾಖೆ, ಜನರಿಗೆ ಒಂದು ಔಷಧಿ (Oil)ಯನ್ನು ಕೊಡುತ್ತಿದ್ದಾರೆ. ಅದನ್ನು ಪ್ರಾಣಿಗಳನ್ನು ಕಾಡಿನಲ್ಲಿ ಮೇಯಿಸಲು ಹೋದಾಗ ಅದನ್ನು ತಮ್ಮ ದೇಹಕ್ಕೆ ಹಂಚಿಕೊಂಡು ಹೋಗಬೇಕು ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಳೇಬರ ಪತ್ತೆ – ರಾಮನಗರಕ್ಕೂ ಮಂಗನ ಕಾಯಿಲೆ ಎಂಟ್ರಿ?

    ಕಳೇಬರ ಪತ್ತೆ – ರಾಮನಗರಕ್ಕೂ ಮಂಗನ ಕಾಯಿಲೆ ಎಂಟ್ರಿ?

    ರಾಮನಗರ: ಮಲೆನಾಡಿಗರ ನಿದ್ದೆಗೆಡಿಸಿದ್ದ ಮಂಗನ ಕಾಯಿಲೆ ಭೀತಿ ಇದೀಗ ರಾಮನಗರಕ್ಕೂ ಕಾಲಿಟ್ಟಿರುವ ಸಂಶಯ ಮೂಡಿದೆ.

    ರಾಮನಗರ ಹೊರವಲಯದಲ್ಲಿ ಅನಾರೋಗ್ಯದಿಂದ ಮೃತಪಟ್ಟಿರುವ ಮಂಗದ ದೇಹ ಪತ್ತೆಯಾಗಿದ್ದು, ಮಂಗನ ಕಾಯಿಲೆ ಶಂಕೆ ಹಿನ್ನೆಲೆಯಲ್ಲಿ ಮೃತ ಮಂಗದ ಮರಣೋತ್ತರ ಪರೀಕ್ಷೆ ನಡೆಸಿ ದೇಹದ ಕೆಲ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

    ರಾಮನಗರ ಹೊರವಲಯದ ಕಾಮತ್ ಹೋಟೆಲ್ ಬಳಿ ಮಂಗ ಮೃತಪಟ್ಟಿದ್ದು, ಸುಮಾರು 5 ವರ್ಷದ ಹೆಣ್ಣು ಮಂಗ ಸಾವನ್ನಪ್ಪಿದೆ. ಬೆಳಗ್ಗೆ ಹೋಟೆಲ್ ಸಿಬ್ಬಂದಿ ಮಂಗ ಸಾವನ್ನಪ್ಪಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿಗಳು ಪಶುವೈಧ್ಯಾಧಿಕಾರಿಗಳ ಮೂಲಕ ಸಾವನ್ನಪ್ಪಿರುವ ಕೋತಿಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮರಣೋತ್ತರ ಪರೀಕ್ಷೆಯ ವೇಳೆ ಮಂಗನ ದೇಹದಲ್ಲಿ ಗೆಡ್ಡೆಯೊಂದು ಕಾಣಿಸಿಕೊಂಡಿದೆ. ಅದು ಮೇಲ್ನೋಟಕ್ಕೆ ಅನಾರೋಗ್ಯದಿಂದ ಆಹಾರ ಸೇವಿಸದೇ ಸಾವನ್ನಪ್ಪಿರುವ ಸಂದೇಹವನ್ನು ವೈದ್ಯಾಧಿಕಾರಿಗಳು ಹೊರಹಾಕಿದ್ದಾರೆ.

    ಮರಣೋತ್ತರ ಪರೀಕ್ಷೆ ನಡೆಸಿ ಮಾದರಿಗಳನ್ನ ಪುಣೆ ಹಾಗೂ ಬೆಂಗಳೂರಿನ ಪ್ರಯೋಗಾಲಯಗಳಿಗೆ ರವಾನಿಸಲಾಗಿದೆ. ರಾಮನಗರ ಹೊರವಲಯದ ಕಾಮತ್ ಹೋಟೆಲ್, ಜನಪದಲೋಕ, ಕೆಂಗಲ್ ಆಂಜನೇಯ ದೇವಾಲಯದ ಬಳಿ ಸುಮಾರು ಐನೂರಕ್ಕು ಹೆಚ್ಚು ಮಂಗಗಳು ವಾಸ ಮಾಡುತ್ತಿದ್ದು, ಇತ್ತೀಚೆಗೆ ಕೆಲವು ಮಂಗಗಳು ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ರಾಜ್ಯದಲ್ಲಿ ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡು ಹಲವರು ಸಾವನ್ನಪ್ಪಿರುವ ಬಗ್ಗೆ ಇದೀಗ ಜನರಲ್ಲಿ ಆತಂಕವನ್ನುಂಟು ಮಾಡಿದೆ. ಸಾವನ್ನಪ್ಪಿರುವ ಕೋತಿಯ ಮರಣೋತ್ತರ ಪರೀಕ್ಷೆಯನ್ನ ಮುಂಜಾಗ್ರತಾ ಕ್ರಮವಾಗಿ ನಡೆಸಲಾಗಿದೆ. ಅಲ್ಲದೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರಕ್ತ ಹಾಗೂ ದೇಹದ ಕೆಲವು ಭಾಗಗಳನ್ನು ಕಳುಹಿಸಲಾಗಿದೆ ಎಂದು ಅರಣ್ಯ ಇಲಾಖೆಯ ಎಸಿಎಫ್ ರಾಮಕೃಷ್ಣಪ್ಪ ಮಾಹಿತಿ ನೀಡಿದ್ದಾರೆ. ಇತ್ತ ಮಂಗನ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಹೋಟೆಲ್ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪೂಜೆ ಪುನಸ್ಕಾರ ನಡೆಸಿ ಕೋತಿಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಾಫಿ ನಾಡಿಗೂ ಕಾಲಿಡ್ತಾ ಹೆಮ್ಮಾರಿ ಮಂಗನ ಕಾಯಿಲೆ?

    ಕಾಫಿ ನಾಡಿಗೂ ಕಾಲಿಡ್ತಾ ಹೆಮ್ಮಾರಿ ಮಂಗನ ಕಾಯಿಲೆ?

    ಚಿಕ್ಕಮಗಳೂರು: ವಿಜ್ಞಾನಿಗಳು ಮಂಗನಿಂದ ಮಾನವ ಎಂದಿದ್ರು. ಆದ್ರೆ ಈಗ ಮಲೆನಾಡಿಗರು ಮಂಗನಿಂದ ಮರಣ ಅಂತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಜನರ ನಿದ್ದೆಗೆಡಿಸಿದ್ದ ಮಂಗನ ಕಾಯಿಲೆ ಈಗ ಚಿಕ್ಕಮಗಳೂರಿಗೂ ಕಾಲು ಇಟ್ಟಿದಿಯಾ ಎನ್ನುವ ಅನುಮಾನ ಸೃಷ್ಟಿಯಾಗಿದೆ.

    ಮೊದಲೆಲ್ಲ ದೇವಸ್ಥಾನದಲ್ಲಿ ಮಂಗನನ್ನ ಕಂಡರೆ ಆಂಜನೇಯನ ಸ್ವರೂಪ ಅಂತಿದ್ದರು. ಆದ್ರೆ ಮಲೆನಾಡಲ್ಲಿ ಮಂಗನನ್ನ ಕಂಡರೆ ಅದು ನಡುಗ್ತಿದ್ಯಾ, ಬಳಲುತ್ತಿದ್ಯಾ ಅಂತ ನೋಡ್ತಾರೆ. ಒಂದು ವೇಳೆ ನಡುಗ್ತಿದ್ದರೆ ಎದ್ನೋ-ಬಿದ್ನೋ ಅಂತ ಜನ ಮಂಗಗಳಿಂದ ದೂರ ಓಡ್ತಾರೆ. ಯಾಕಂದ್ರೆ ಮಲೆನಾಡಿನ ಭಾಗದಲ್ಲಿ ಮಂಗ ಅನ್ನೋ ಪದ ಹುಟ್ಟಿಸಿರೋ ಭಯ ಅಂತದ್ದು. ಮಂಗನ ಕಾಯಿಲೆ ಹೆಸರು ಕೇಳಿದ್ರೇನೆ ಒಂದು ಕ್ಷಣ ವಿಚಲಿತಗೊಳ್ತೀವಿ. ಶಿವಮೊಗ್ಗದಲ್ಲಿ ತನ್ನ ಅಟ್ಟಹಾಸ ತೋರಿದ್ದ ಈ ಕಾಯಿಲೆ ಇದೀಗ ಕಾಫಿನಾಡಿನ ಮಲೆನಾಡು ಭಾಗಕ್ಕೂ ಆವರಿಸಿರೋ ಅನುಮಾನ ಹುಟ್ಟಿದೆ. ಜಿಲ್ಲೆಯ ಶೃಂಗೇರಿ, ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕಿನ ಒಂಬತ್ತು ಕಡೆ ಮಂಗಗಳು ಸಾವನ್ನಪ್ಪುತ್ತಿವೆ. ಈ ಮಂಗಗಳ ಸಾವು ಜಿಲ್ಲೆಯ ಜನರ ನಿದ್ದೆಗೆಡಿಸಿದ್ದು, ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಎನ್.ಆರ್ ಪುರದ ಬಾಳೆಹೊನ್ನೂರು, ಶೃಂಗೇರಿಯ ಮೇಲ್ಪಾಲ್ ಸೇರಿದಂತೆ ಐದಾರು ಕಡೆ ಮಂಗಗಳ ಸಾವಿನಿಂದ ಗ್ರಾಮೀಣ ಭಾಗದ ಜನ ಆತಂಕದಲ್ಲಿ ಬದುಕುತ್ತಿದ್ದಾರೆ. ಈಗಾಗಲೇ ಸಾಕಷ್ಟು ಜನರನ್ನ ಬಲಿ ಪಡೆದಿರೋ ಈ ಮಂಗನ ಕಾಯಿಲೆ ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲೂ ಆತಂಕ ಸೃಷ್ಟಿಸಿದೆ. ಸತ್ತ ಮಂಗಗಳ ಶವಪರೀಕ್ಷೆ ನಡೆಸಿ ಬೆಂಗಳೂರು, ಶಿವಮೊಗ್ಗ, ಪುಣೆ ಹಾಗೂ ಮಣಿಪಾಲ್ ಸಂಶೋಧನಾ ಕೇಂದ್ರಕ್ಕೆ ಪರೀಕ್ಷೆಗೆಂದು ರಕ್ತದ ಮಾದರಿಯನ್ನ ಕಳುಹಿಸಲಾಗಿದೆ. ಅಷ್ಟೇ ಅಲ್ಲದೆ, ಮಂಗಗಳು ಸತ್ತಿರೋ ಗ್ರಾಮದ ಸುತ್ತಮುತ್ತಲಿನ ಜನರ ರಕ್ತದ ಮಾದರಿಯನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ.

    ತೀರ್ಥಹಳ್ಳಿ, ಸಾಗರದ ಮಲೆನಾಡಲ್ಲಿ ಮರಣ ಮೃದಂಗ ಬಾರಿಸುತ್ತಿರೋ ಈ ಕಾಯಿಲೆ ಎಲ್ಲಿ ನಮಗೂ ತಟ್ಟುತ್ತೋ ಅಂತ ಕಾಫಿನಾಡ ಮಲೆನಾಡು ಭಾಗದ ಜನ ಕೂಡ ಆತಂಕದಲ್ಲಿದ್ದಾರೆ. ಮಲೆನಾಡಲ್ಲಿ ಮೊದಲೇ ಸುಸರ್ಜಿತ ಸರ್ಕಾರಿ ಆಸ್ಪತ್ರೆಗಳಿಲ್ಲ. ಖಾಸಗಿ ಆಸ್ಪತ್ರೆಗಳಿಗೇ ಹೋಗಬೇಕು. ಜನಸಾಮಾನ್ಯರಿಗೆ ಕೂಲಿ ಹಾಗೂ ಹಣದ ಸಮಸ್ಯೆ ಇದೆ. ಒಂದು ವೇಳೆ, ಲ್ಯಾಬ್‍ನಿಂದ ವರದಿ ಪಾಸಿಟಿವ್ ಎಂದು ಬಂದರೆ ಈ ಹೆಮ್ಮಾರಿ ಕಾಯಿಲೆ ಕಾಫಿನಾಡಲ್ಲಿ ಇನ್ನೆಷ್ಟು ಬಲಿ ಪಡಿಯುತ್ತೋ ಗೊತ್ತಿಲ್ಲ. ಹಾಗಾಗಿ, ಜಿಲ್ಲಾಡಳಿತ ಈಗಾಗಲೇ ಮುಂಜಾಗೃತ ಕ್ರಮವಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ರಾಜ್ಯ ಸರ್ಕಾರಕ್ಕೆ 2000 ಚುಚ್ಚು ಮದ್ದುಗಳಿಗೆ ಮನವಿ ಮಾಡಲಾಗಿದೆ. ಜಾನುವಾರುಗಳನ್ನ ಕಾಡಿಗೆ ಕರೆದುಕೊಂಡು ಹೋಗುವವರಿಗೆ ಡಿಎಂಪಿ ತೈಲವನ್ನು ನೀಡಲಾಗಿದೆ. ಈ ಕುರಿತು ಮಲೆನಾಡಿನ ಪ್ರತಿ ಆಸ್ಪತ್ರೆಯ ವೈದ್ಯರಿಗೂ ಸೂಚನೆ ನೀಡಲಾಗಿದೆ. ಹಾಗೆಯೇ ಸುತ್ತಮುತ್ತಲಿನ ಪರಿಸರವನ್ನ ಸ್ವಚ್ಛವಾಗಿಡಲು ಆದೇಶಿಸಿದೆ. ಅಷ್ಟೇ ಅಲ್ಲದೆ ಅಗತ್ಯ ಬಿದ್ದರೆ ಮುನ್ನೇಚ್ಛರಿಕೆಯಾಗಿ ಜನಸಾಮಾನ್ಯರಿಗೆ ಔಷಧಿಗಳನ್ನ ನೀಡೋದಕ್ಕೂ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

    ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಈ ಮಹಾಮಾರಿಗೆ 1993 ರಿಂದ 1995ರ ಅವಧಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇದೀಗ ಮತ್ತೆ ಆ ಹೆಮ್ಮಾರಿ ಬರುವ ಸೂಚನೆ ಸಿಕ್ಕಿರೋದು ಜಿಲ್ಲಾಡಳಿತಕ್ಕೆ ಬಿಸಿ ತುಪ್ಪವಾಗಿದೆ. ಅದೇನೆ ಆಗಲಿ ಮಂಗನ ಕಾಯಿಲೆ ಸೋಂಕು ನಮಗೆ ತಗುಲದೆ ಇರಲಿ ಅಂತ ಮಲೆನಾಡಿಗರು ಆಂಜನೇಯನ ಬಳಿ ಹರಕೆ ಕಟ್ಟಿಕೊಳ್ಳುತ್ತಿದ್ದಾರೆ. ಆದ್ರೆ, ಲ್ಯಾಬ್‍ನಿಂದ ವರದಿ ಬಂದ್ಮೇಲಷ್ಟೆ ಇಲ್ಲಿನ ವಾಸ್ತವ ಸ್ಥಿತಿಗತಿಯ ಬಗ್ಗೆ ಮನವರಿಕೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv