Tag: ಮಂಗಗಳು

  • ಚಾರ್ಮಾಡಿ ಘಾಟಿನಲ್ಲಿ ನೀರವ ಮೌನ – ಮಂಗಗಳ ಹಸಿವಿನ ರೋಧನೆ

    ಚಾರ್ಮಾಡಿ ಘಾಟಿನಲ್ಲಿ ನೀರವ ಮೌನ – ಮಂಗಗಳ ಹಸಿವಿನ ರೋಧನೆ

    ಮಂಗಳೂರು: ಚಾರ್ಮಾಡಿ ಘಾಟಿಯಲ್ಲೀಗ ನೀರವ ಮೌನ ಆವರಿಸಿದ್ದು, ಹೆದ್ದಾರಿ ಬಂದ್ ಆದ ಬಳಿಕ ಮನುಷ್ಯ, ವಾಹನಗಳ ಪ್ರವೇಶ ಇಲ್ಲದೆ ಅಲ್ಲಿನ ಬೆಟ್ಟಗಳು ಮಂಜು ಹೊದ್ದುಕೊಂಡು ಮಲಗಿಬಿಟ್ಟಿದೆ. ಆದರೆ ಅಲ್ಲಿನ ಮೂಕ ಪ್ರಾಣಿಗಳ ರೋದನೆ ಮಾತ್ರ ಹೇಳತೀರದ್ದಾಗಿದೆ.

    ಚಾರ್ಮಾಡಿ ವೀವ್ ಪಾಯಿಂಟ್ ಬಳಿಯಿರುವ ಅಣ್ಣಪ್ಪ ಸ್ವಾಮಿ ಗುಡಿಗೆ ಬಾಗಿಲು ಮುಚ್ಚಿ ತಿಂಗಳಾಗುತ್ತಾ ಬಂದಿದೆ. ಹೀಗಾಗಿ ಅಲ್ಲಿರುವ ಮಂಗಗಳು ಆಹಾರ ಇಲ್ಲದೆ ಪರದಾಡುತ್ತಿವೆ. ಯಾರಾದರೂ ಅಲ್ಲಿಗೆ ಹೋದಲ್ಲಿ ಹಿಂದಿನಿಂದ ಓಡುತ್ತಾ ಬಂದು ಕೈಚಾಚುತ್ತವೆ. ಮಂಗಗಳು ಹಸಿವಿನಿಂದ ರೋದಿಸುತ್ತಾ ತನ್ನ ಮರಿಗಳೊಂದಿಗೆ ಓಡಿಬರುವುದು ಮನ ಕಲಕುತ್ತದೆ.

    ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರು ಕೊಡುವ ಬಾಳೆಹಣ್ಣು, ಬಿಸ್ಕಟ್‍ಗಳೇ ಈ ಮಂಗಗಳಿಗೆ ಆಹಾರವಾಗಿತ್ತು. ಆದರೆ ಈಗ ಒಂದು ತಿಂಗಳಲ್ಲಿ ಎಲ್ಲಿ ನೋಡಿದರೂ ನೀರವ ಮೌನ ಆವರಿಸಿದ್ದು, ಬೀದಿನಾಯಿಗಳು ಹಾಗೂ ಮಂಗಗಳು ಹಸಿವಿನಿಂದ ರೋದಿಸುವಂತೆ ಮಾಡಿದೆ.

    ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸುರಿದ ಮಹಾಮಳೆಗೆ ಮಂಗಳೂರು ಮತ್ತು ಚಿಕ್ಕಮಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿನಲ್ಲಿ ಭೂ ಕುಸಿತ ಉಂಟಾಗಿ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ ಮಣ್ಣು ತೆರವು ಕಾರ್ಯಾಚರಣೆ ಮುಗಿದು ಪೂರ್ಣಗೊಳ್ಳುವವರೆಗೂ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

  • ಹಸಿವಿನಿಂದ ಬಳಲಿದ್ದ ಮಂಗಗಳಿಗೆ ಹಾಲುಣಿಸಿದ ಕಾಮಧೇನು

    ಹಸಿವಿನಿಂದ ಬಳಲಿದ್ದ ಮಂಗಗಳಿಗೆ ಹಾಲುಣಿಸಿದ ಕಾಮಧೇನು

    ಜೈಪುರ: ರಾಜಸ್ಥಾನದ ಸಿರೊಹಿಯಲ್ಲಿ ಭಾರೀ ಬಿಸಿಲಿನಿಂದಾಗಿ ಜನಸಾಮಾನ್ಯರ ಜೊತೆಗೆ ಪ್ರಾಣಿಗಳು ತತ್ತರಿಸಿವೆ. ಹೀಗೆ ಒಂದೆಡೆ ಬಿಸಿಲು ಇನ್ನೊಂದೆಡೆ ತಿನ್ನಲು ಆಹಾರವಿಲ್ಲದೆ ಹಸಿವಿನಿಂದ ಬಳಲುತ್ತಿದ್ದ ಮಂಗಗಳಿಗೆ ಹಸುವೊಂದು ಹಾಲುಣಿಸಿ ತಾಯಿಯಾಗಿದೆ.

    ಹೌದು. ಸಿರೋಹಿ ಜಿಲ್ಲೆಯ ಪಿಂಡ್ವಾಲಾ ಪ್ರದೇಶದಲ್ಲಿ ವಿಪಿನ್ ಸಮೀಪದ ರೋಹಿಡಾದ ಜಬೇಶ್ವರ ಮಹಾದೇವ್ ದೇವಾಲಯದಲ್ಲಿ ಇರುವ ಹಸು ಈಗ ಭಾರೀ ಸುದ್ದಿಯಾಗಿದೆ. ಈ ಹಸು ಈ ದಿನಗಳಲ್ಲಿ ಇಡೀ ಜಿಲ್ಲೆಯಲ್ಲಿ ಚರ್ಚೆಯ ವಿಷಯವಾಗಿಬಿಟ್ಟಿದೆ. ಯಾಕೆಂದರೆ ಹಸು ಹಸಿವಿನ ಬೇಗೆಯಲ್ಲಿ ಬಳಲಿ, ರೋಸಿಹೋಗಿದ್ದ ಮಂಗಗಳಿಗೆ ಹಾಲು ನೀಡಿ ತಾಯಿಯಾಗಿ ಪೋಷಿಸುತ್ತಿದೆ.

    ಬಹಳ ವರ್ಷಗಳಿಂದ ರೋಹಿಡಾದ ಜಬೇಶ್ವರ ಮಹಾದೇವ್ ದೇವಾಲಯದಲ್ಲಿಯೇ ವಾಸಿಸುತ್ತಿರುವ ಈ ಹಸು ಪ್ರತಿನಿತ್ಯ ಮಂಗಗಳಿಗೆ ಹಾಲು ನೀಡಿ ಅವುಗಳ ಜೀವ ಉಳಿಸಿದೆ.

    ಬೇಸಿಗೆ ಬೇಗೆಗೆ ನೀರು, ಆಹಾರವಿಲ್ಲದೆ ಪ್ರಾಣಿಗಳು ಪರದಾಡುತ್ತಿವೆ. ಹೀಗೆ ಆಹಾರ, ನೀರಿಗಾಗಿ ಹಸಿವಿನಿಂದ ಬಳಲಿದ್ದ ದೇವಸ್ಥಾನದ ಸಮೀಪದಲ್ಲಿದ್ದ ಮಂಗಗಳಿಗೆ ಹಸು ಒಂದು ಬಾರಿ ಹಾಲು ನೀಡಿತ್ತು. ಆ ಬಳಿಕ ಈಗ ಪ್ರತಿದಿನವೂ ಈ ಮಂಗಗಳಿಗೆ ಹಾಲು ನೀಡಿ ಅವುಗಳ ಹೊಟ್ಟೆ ತುಂಬಿಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಈ ಮೂಲಕ ಈ ವಿಶೇಷ ಹಸು ಜಿಲ್ಲೆಯಲ್ಲಿ ಸಿಕ್ಕಪಟ್ಟೆ ಫೇಮಸ್ ಆಗಿಬಿಟ್ಟಿದೆ. ಹೀಗಾಗಿ ಇದನ್ನು ನೋಡಲು ಅಕ್ಕ-ಪಕ್ಕದ ಗ್ರಾಮದಿಂದ ಜನರು ದೇವಸ್ಥಾನದತ್ತ ಆಗಮಿಸುತ್ತಿದ್ದಾರೆ. ಹಾಗೆಯೇ ತಾಯಿಯ ಸ್ಥಾನದಲ್ಲಿ ನಿಂತು ಮಂಗಗಳಿಗೆ ಹಾಲು ನೀಡಿ ಪೋಷಿಸುತ್ತಿರುವ ಹಸುವನ್ನು ಕಂಡು ಖುಷಿಪಡುತ್ತಿದ್ದಾರೆ.

  • ಕಾಫಿ ನಾಡಿಗೂ ಕಾಲಿಡ್ತಾ ಹೆಮ್ಮಾರಿ ಮಂಗನ ಕಾಯಿಲೆ?

    ಕಾಫಿ ನಾಡಿಗೂ ಕಾಲಿಡ್ತಾ ಹೆಮ್ಮಾರಿ ಮಂಗನ ಕಾಯಿಲೆ?

    ಚಿಕ್ಕಮಗಳೂರು: ವಿಜ್ಞಾನಿಗಳು ಮಂಗನಿಂದ ಮಾನವ ಎಂದಿದ್ರು. ಆದ್ರೆ ಈಗ ಮಲೆನಾಡಿಗರು ಮಂಗನಿಂದ ಮರಣ ಅಂತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಜನರ ನಿದ್ದೆಗೆಡಿಸಿದ್ದ ಮಂಗನ ಕಾಯಿಲೆ ಈಗ ಚಿಕ್ಕಮಗಳೂರಿಗೂ ಕಾಲು ಇಟ್ಟಿದಿಯಾ ಎನ್ನುವ ಅನುಮಾನ ಸೃಷ್ಟಿಯಾಗಿದೆ.

    ಮೊದಲೆಲ್ಲ ದೇವಸ್ಥಾನದಲ್ಲಿ ಮಂಗನನ್ನ ಕಂಡರೆ ಆಂಜನೇಯನ ಸ್ವರೂಪ ಅಂತಿದ್ದರು. ಆದ್ರೆ ಮಲೆನಾಡಲ್ಲಿ ಮಂಗನನ್ನ ಕಂಡರೆ ಅದು ನಡುಗ್ತಿದ್ಯಾ, ಬಳಲುತ್ತಿದ್ಯಾ ಅಂತ ನೋಡ್ತಾರೆ. ಒಂದು ವೇಳೆ ನಡುಗ್ತಿದ್ದರೆ ಎದ್ನೋ-ಬಿದ್ನೋ ಅಂತ ಜನ ಮಂಗಗಳಿಂದ ದೂರ ಓಡ್ತಾರೆ. ಯಾಕಂದ್ರೆ ಮಲೆನಾಡಿನ ಭಾಗದಲ್ಲಿ ಮಂಗ ಅನ್ನೋ ಪದ ಹುಟ್ಟಿಸಿರೋ ಭಯ ಅಂತದ್ದು. ಮಂಗನ ಕಾಯಿಲೆ ಹೆಸರು ಕೇಳಿದ್ರೇನೆ ಒಂದು ಕ್ಷಣ ವಿಚಲಿತಗೊಳ್ತೀವಿ. ಶಿವಮೊಗ್ಗದಲ್ಲಿ ತನ್ನ ಅಟ್ಟಹಾಸ ತೋರಿದ್ದ ಈ ಕಾಯಿಲೆ ಇದೀಗ ಕಾಫಿನಾಡಿನ ಮಲೆನಾಡು ಭಾಗಕ್ಕೂ ಆವರಿಸಿರೋ ಅನುಮಾನ ಹುಟ್ಟಿದೆ. ಜಿಲ್ಲೆಯ ಶೃಂಗೇರಿ, ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕಿನ ಒಂಬತ್ತು ಕಡೆ ಮಂಗಗಳು ಸಾವನ್ನಪ್ಪುತ್ತಿವೆ. ಈ ಮಂಗಗಳ ಸಾವು ಜಿಲ್ಲೆಯ ಜನರ ನಿದ್ದೆಗೆಡಿಸಿದ್ದು, ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಎನ್.ಆರ್ ಪುರದ ಬಾಳೆಹೊನ್ನೂರು, ಶೃಂಗೇರಿಯ ಮೇಲ್ಪಾಲ್ ಸೇರಿದಂತೆ ಐದಾರು ಕಡೆ ಮಂಗಗಳ ಸಾವಿನಿಂದ ಗ್ರಾಮೀಣ ಭಾಗದ ಜನ ಆತಂಕದಲ್ಲಿ ಬದುಕುತ್ತಿದ್ದಾರೆ. ಈಗಾಗಲೇ ಸಾಕಷ್ಟು ಜನರನ್ನ ಬಲಿ ಪಡೆದಿರೋ ಈ ಮಂಗನ ಕಾಯಿಲೆ ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲೂ ಆತಂಕ ಸೃಷ್ಟಿಸಿದೆ. ಸತ್ತ ಮಂಗಗಳ ಶವಪರೀಕ್ಷೆ ನಡೆಸಿ ಬೆಂಗಳೂರು, ಶಿವಮೊಗ್ಗ, ಪುಣೆ ಹಾಗೂ ಮಣಿಪಾಲ್ ಸಂಶೋಧನಾ ಕೇಂದ್ರಕ್ಕೆ ಪರೀಕ್ಷೆಗೆಂದು ರಕ್ತದ ಮಾದರಿಯನ್ನ ಕಳುಹಿಸಲಾಗಿದೆ. ಅಷ್ಟೇ ಅಲ್ಲದೆ, ಮಂಗಗಳು ಸತ್ತಿರೋ ಗ್ರಾಮದ ಸುತ್ತಮುತ್ತಲಿನ ಜನರ ರಕ್ತದ ಮಾದರಿಯನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ.

    ತೀರ್ಥಹಳ್ಳಿ, ಸಾಗರದ ಮಲೆನಾಡಲ್ಲಿ ಮರಣ ಮೃದಂಗ ಬಾರಿಸುತ್ತಿರೋ ಈ ಕಾಯಿಲೆ ಎಲ್ಲಿ ನಮಗೂ ತಟ್ಟುತ್ತೋ ಅಂತ ಕಾಫಿನಾಡ ಮಲೆನಾಡು ಭಾಗದ ಜನ ಕೂಡ ಆತಂಕದಲ್ಲಿದ್ದಾರೆ. ಮಲೆನಾಡಲ್ಲಿ ಮೊದಲೇ ಸುಸರ್ಜಿತ ಸರ್ಕಾರಿ ಆಸ್ಪತ್ರೆಗಳಿಲ್ಲ. ಖಾಸಗಿ ಆಸ್ಪತ್ರೆಗಳಿಗೇ ಹೋಗಬೇಕು. ಜನಸಾಮಾನ್ಯರಿಗೆ ಕೂಲಿ ಹಾಗೂ ಹಣದ ಸಮಸ್ಯೆ ಇದೆ. ಒಂದು ವೇಳೆ, ಲ್ಯಾಬ್‍ನಿಂದ ವರದಿ ಪಾಸಿಟಿವ್ ಎಂದು ಬಂದರೆ ಈ ಹೆಮ್ಮಾರಿ ಕಾಯಿಲೆ ಕಾಫಿನಾಡಲ್ಲಿ ಇನ್ನೆಷ್ಟು ಬಲಿ ಪಡಿಯುತ್ತೋ ಗೊತ್ತಿಲ್ಲ. ಹಾಗಾಗಿ, ಜಿಲ್ಲಾಡಳಿತ ಈಗಾಗಲೇ ಮುಂಜಾಗೃತ ಕ್ರಮವಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ರಾಜ್ಯ ಸರ್ಕಾರಕ್ಕೆ 2000 ಚುಚ್ಚು ಮದ್ದುಗಳಿಗೆ ಮನವಿ ಮಾಡಲಾಗಿದೆ. ಜಾನುವಾರುಗಳನ್ನ ಕಾಡಿಗೆ ಕರೆದುಕೊಂಡು ಹೋಗುವವರಿಗೆ ಡಿಎಂಪಿ ತೈಲವನ್ನು ನೀಡಲಾಗಿದೆ. ಈ ಕುರಿತು ಮಲೆನಾಡಿನ ಪ್ರತಿ ಆಸ್ಪತ್ರೆಯ ವೈದ್ಯರಿಗೂ ಸೂಚನೆ ನೀಡಲಾಗಿದೆ. ಹಾಗೆಯೇ ಸುತ್ತಮುತ್ತಲಿನ ಪರಿಸರವನ್ನ ಸ್ವಚ್ಛವಾಗಿಡಲು ಆದೇಶಿಸಿದೆ. ಅಷ್ಟೇ ಅಲ್ಲದೆ ಅಗತ್ಯ ಬಿದ್ದರೆ ಮುನ್ನೇಚ್ಛರಿಕೆಯಾಗಿ ಜನಸಾಮಾನ್ಯರಿಗೆ ಔಷಧಿಗಳನ್ನ ನೀಡೋದಕ್ಕೂ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

    ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಈ ಮಹಾಮಾರಿಗೆ 1993 ರಿಂದ 1995ರ ಅವಧಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇದೀಗ ಮತ್ತೆ ಆ ಹೆಮ್ಮಾರಿ ಬರುವ ಸೂಚನೆ ಸಿಕ್ಕಿರೋದು ಜಿಲ್ಲಾಡಳಿತಕ್ಕೆ ಬಿಸಿ ತುಪ್ಪವಾಗಿದೆ. ಅದೇನೆ ಆಗಲಿ ಮಂಗನ ಕಾಯಿಲೆ ಸೋಂಕು ನಮಗೆ ತಗುಲದೆ ಇರಲಿ ಅಂತ ಮಲೆನಾಡಿಗರು ಆಂಜನೇಯನ ಬಳಿ ಹರಕೆ ಕಟ್ಟಿಕೊಳ್ಳುತ್ತಿದ್ದಾರೆ. ಆದ್ರೆ, ಲ್ಯಾಬ್‍ನಿಂದ ವರದಿ ಬಂದ್ಮೇಲಷ್ಟೆ ಇಲ್ಲಿನ ವಾಸ್ತವ ಸ್ಥಿತಿಗತಿಯ ಬಗ್ಗೆ ಮನವರಿಕೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 6,000 ವರ್ಷದ ಇತಿಹಾಸ – ಆಂಜನೇಯನ ಮಂಗಳಾರತಿಗೆ ವಾನರ ದಂಡು

    6,000 ವರ್ಷದ ಇತಿಹಾಸ – ಆಂಜನೇಯನ ಮಂಗಳಾರತಿಗೆ ವಾನರ ದಂಡು

    ಬೀದರ್: ಕಾರ್ಗಿಲ್ ಯುದ್ದದಲ್ಲಿ ಯೋಧರು ಹೋರಾಟ ಮಾಡಿದ್ದನ್ನು ನೀವು ಕೇಳಿದ್ದೀರಿ. ಆದರೆ ಗಡಿ ಜಿಲ್ಲೆಯಲ್ಲಿ ನಿಜಾಮರಿಂದ ಹಿಂದೂಗಳ ಮೇಲೆ ದೌರ್ಜನ್ಯ, ಅತ್ಯಾಚಾರಗಳು ನಡೆಯುತ್ತಿದ್ದಾಗ ನಿಜಾಮನ ವಿರುದ್ಧ ವಾನರಗಳು ಹೋರಾಡಿದ ಇತಿಹಾಸವಿದೆ.

    ಹೌದು. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಾಳಕಾಪೂರ್ ಗ್ರಾಮದಲ್ಲಿರುವ ಪವಾಡ ಪುರುಷ ಆಂಜನೇಯನ ದೇವಸ್ಥಾನದಲ್ಲಿ ಚಮತ್ಕಾರ ನಡೆಯುತ್ತಿದೆ. 6 ಸಾವಿರ ವರ್ಷ ಇತಿಹಾಸವಿರುವ ಆಂಜನೇಯ ದೇವಸ್ಥಾನದಲ್ಲಿ ಪ್ರತಿ ಶನಿವಾರ ವಿಶೇಷ ಪೂಜೆ, ಮಹಾಮಂಗಳಾರತಿ ನಡೆಯುತ್ತದೆ. ಆ ಸಮಯಕ್ಕೆ ಸರಿಯಾಗಿ ನೂರಾರು ಕೋತಿಗಳು ಹಾಜರಾಗಿ ಒಗಟ್ಟು ತೋರಿಸುತ್ತವೆ.

    ಬೇರೆ ಸಮಯದಲ್ಲಿ ನೋಡಲು ಒಂದು ಮಂಗಗಳು ಸಿಗುವುದಿಲ್ಲ. ಆದರೆ ಮಹಾಮಂಗಳಾರತಿ ಸಮಯಕ್ಕೆ ಸರಿಯಾಗಿ ನೂರಾರು ಮಂಗಗಳು ಎಲ್ಲಿಂದ ಬರುತ್ತವೆ ಎಂಬುದು ಆಶ್ಚರ್ಯಕ್ಕೆ ಕಾರಣವಾಗಿದೆ. ಜೊತೆಗೆ 200 ವರ್ಷಗಳ ಹಿಂದೆ ನಿಜಾಮರ ದೌಬ್ಬಾಳಿಕೆ, ದೌರ್ಜನ್ಯ, ಅತ್ಯಾಚಾರ ನಡೆಯುತ್ತಿದ್ದಾಗ ಸಾವಿರಾರು ಮಂಗಳು ಒಟ್ಟಾಗಿ ಸೇರಿ ನಿಜಾಮರ ವಿರುದ್ಧ ಹೋರಾಡಿ ನಿಜಾಮರಿಂದ ಮುಕ್ತಿ ನೀಡುತ್ತಿದ್ದು, ಅಂದಿನಿಂದ ಹಿಂದೂಗಳು ನಿರಾಳವಾಗಿ ಬದುಕುತ್ತಿದ್ದಾರೆ ಎಂದು ಸ್ಥಳೀಯ ಭಕ್ರ ಅನೀಲ್‍ಕುಮಾರ್ ಕೋರೆ ಹೇಳಿದ್ದಾರೆ.

    ಈ ದೇವಸ್ಥಾನಕ್ಕೆ ಬಹುದೊಡ್ಡ ಇತಿಹಾಸವಿದ್ದು, ಶ್ರೀರಾಮ, ಲಕ್ಷ್ಮಣ ವನವಾಸದಲ್ಲಿ ಇರುವಾಗ ಈ ಚಳಕಾಪೂರ್ ಅರಣ್ಯದಲ್ಲಿ ವಾಸವಾಗಿದ್ದರಂತೆ. ಚಳಕಾ ದೇವಿಯ ಮಾತಿನಂತೆ ಶ್ರೀರಾಮ ಅಸುರನ್ನು ಸಂಹಾರ ಮಾಡಿದ್ದರಿಂದ “ಚಳಕಾಪೂರ್” ಎಂದು ಹೆಸರು ಬಂದಿದೆ ಎನ್ನುವ ಪ್ರತೀತಿ ಇದೆ. ಇನ್ನು ಹನುಮಂತ ಸಂಜೀನಿ ಪರ್ವತ ಅಂಗೈಯಲ್ಲಿ ತೆಗೆದುಕೊಂಡು ಹೋಗಬೇಕಾದರೆ ಒಂದು ಸಣ್ಣ ತುಂಡು ಈ ಸ್ಥಳದಲ್ಲಿ ಬಿದ್ದಿರುವ ಕಾರಣ ಇಲ್ಲಿ ಆಂಜನೇಯ ನೆಲೆಸಿದ್ದಾನೆ. ಈ ದೇವಸ್ಥಾಕ್ಕೆ ಬಂದು ಹರಕೆ ಬೇಡಿಕೊಂಡರೆ ಮನಸ್ಸಿನ ಇಷ್ಟಾರ್ಥ ದಯ ಪಾಲಿಸುತ್ತಾನೆ ಎಂಬ ನಂಬಿಕೆ ಭಕ್ತರದ್ದಾಗಿದೆ.

    ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ್ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಬಂದು ಪವರ್ ಫುಲ್ ಆಂಜನೇಯನ ದರ್ಶನ ಪಡೆದುಕೊಂಡು ಹೋಗುತ್ತಾರೆ. ಈ ದೇವರ ವಿಶೇಷತೆ ಜೊತೆಗೆ ಭಕ್ತರು ಮಂಗಗಳ ಪವಾಡ ನೋಡಿ ಆಶ್ಚರ್ಯಚಕಿತರಾಗಿ ಮಂಗಗಳಿಗೆ ಹಣ್ಣು, ಹಂಪಲು ನೀಡಿ ದರ್ಶನ ಪಡೆಯುತ್ತಾರೆ ಎಂದು ಭಕ್ತ ಆಕಾಶ್ ಮಾಳೆ ತಿಳಿಸಿದ್ದಾರೆ.

    ನಾವು ಹಲವಾರು ರೀತಿಯ ಪವಾಡಗಳನ್ನು ನೋಡಿದ್ದೇವೆ. ಆದರೆ ಈ ರೀತಿ ಮಂಗಗಳ ಪವಾಡ ನೋಡುತ್ತಿರುವುದು ಇದೇ ಮೊದಲು ಎನ್ನಬಹುದು. ಮಂಗಗಳಲ್ಲಿ ದೇವರು ಸ್ವರೂಪ ಇದೆ ಎನ್ನುವುದಕ್ಕೆ ಈ ದೇವಸ್ಥಾನಕ್ಕೆ ಬರುವ ಕೋತಿಗಳ ಸಮೂಹವೇ ಸಾಕ್ಷಿಯಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಟ್ಟಿಗೆ ಎಸೆದು ವ್ಯಕ್ತಿಯನ್ನು ಹತ್ಯೆಗೈದ ಕೋತಿಗಳು!

    ಇಟ್ಟಿಗೆ ಎಸೆದು ವ್ಯಕ್ತಿಯನ್ನು ಹತ್ಯೆಗೈದ ಕೋತಿಗಳು!

    ಲಕ್ನೋ: ಕೋತಿಗಳು ಇಟ್ಟಿಗೆ ಕಲ್ಲು ಎಸೆದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಾಘಪತ್‍ನ ಟಿಕ್ರಿ ಪ್ರದೇಶದಲ್ಲಿ ನಡೆದಿದೆ.

    ಧರ್ಮಪಾಲ್ ಸಿಂಗ್(72) ಮಂಗಗಳ ದಾಳಿಗೆ ಬಲಿಯಾದ ವ್ಯಕ್ತಿ. ಪೊಲೀಸರ ಪ್ರಕಾರ ಸಿಂಗ್ ಅವರು ಒಣ ಕಟ್ಟಿಗೆಯ ತುಂಡುಗಳನ್ನು ಸಂಗ್ರಹಿಸುತ್ತಿರುವಾಗ ಮಂಗಗಳು ಅವರ ಮೇಲೆ ಇಟ್ಟಿಗೆಯ ತುಂಡುಗಳನ್ನು ಎಸೆದಿವೆ. ಇದರ ಪರಿಣಾಮ ಸಿಂಗ್ ಅವರ ತಲೆ ಮತ್ತು ಎದೆಯ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

    ಈ ಘಟನೆ ಕುರಿತು ಸಿಂಗ್ ಅವರ ಕುಟುಂಬಸ್ಥರು ಮಂಗಗಳ ಮೇಲೆ ದೂರು ದಾಖಲಿಸಲು ಮುಂದಾಗಿದ್ದು, ಆದರೆ ಪೊಲೀಸರು ಈ ಅವಘಡ ಆಕಸ್ಮಿಕ ಘಟನೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಿಂದಾಗಿ ಕೋಪಗೊಂಡ ಕುಟುಂಬಸ್ಥರು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ.

     

    ಧರ್ಮಪಾಲ್ ಅವರ ಸಹೋದರ ಕೃಷ್ಣಪಾಲ್ ಸಿಂಗ್ ಪ್ರತಿಕ್ರಿಯಿಸಿ, 20 ಕ್ಕೂ ಅಧಿಕ ಇಟ್ಟಿಗೆ ಕಲ್ಲುಗಳನ್ನು ಮಂಗಗಳು ಎಸೆದಿದ್ದು, ಧರ್ಮಪಾಲ್ ತಲೆ ಎದೆ ಮತ್ತು ಕಾಲಿನ ಭಾಗಕ್ಕೆ ಬಿದ್ದಿದೆ. ಈ ಘಟನೆ ಮಂಗಗಳಿಂದಲೇ ಆಗಿದ್ದು, ಅವುಗಳ ಮೇಲೆ ದೂರು ದಾಖಲಿಸದೇ ಪೊಲೀಸರು ಅದನ್ನು ಆಕಸ್ಮಿಕ ಘಟನೆ ಎಂದು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ ಇದರಿಂದಾಗಿ ನಮಗೆ ನ್ಯಾಯ ಸಿಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಮಂಗಗಳ ಹಾವಳಿಯಿಂದ ಇಡೀ ಹಳ್ಳಿಯೇ ನರಕಯಾತನೆಯನ್ನು ಅನುಭವಿಸುವಂತಾಗಿದೆ. ಇದೀಗ ಧರ್ಮಪಾಲ್ ಅವರ ಜೀವವನ್ನೇ ಕಸಿದುಕೊಂಡಿದೆ. ಇದೇ ರೀತಿ ಗ್ರಾಮಸ್ಥರು ಕೂಡ ಇಲ್ಲಿನ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ ಎಂದು ಸ್ಥಳೀಯರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

    ಡೊಘಾಟ್ ಪೊಲೀಸ್ ಠಾಣೆಯ ಅಧಿಕಾರಿ ಚಿತ್ವಾನ್ ಸಿಂಗ್ ಪ್ರತಿಕ್ರಿಯಿಸಿ, ಕೋತಿಗಳ ವಿರುದ್ಧ ನಾವು ಹೇಗೆ ಪ್ರಕರಣ ದಾಖಲಿಸಬಹುದು? ಇದು ಅಪಹಾಸ್ಯಕ್ಕೆ ದಾರಿ ಮಾಡಿ ಕೊಡುತ್ತದೆ. ನಾವು ಖಂಡಿತವಾಗಿಯೂ ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದೇವೆ ಹಾಗೂ ಈ ಪ್ರಕರಣ ಕುರಿತು ಡೈರಿಯಲ್ಲಿ ನೊಂದಾಯಿಸಿದ್ದೇವೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೂ ಕೂಡ ಒಳಪಡಿಸಲಾಗಿದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾರು ಡಿಕ್ಕಿ ಹೊಡೆದು 6 ಮಂಗಗಳು ಸಾವು- ಗ್ರಾಮಸ್ಥರಿಂದ ಅಂತ್ಯಸಂಸ್ಕಾರ

    ಕಾರು ಡಿಕ್ಕಿ ಹೊಡೆದು 6 ಮಂಗಗಳು ಸಾವು- ಗ್ರಾಮಸ್ಥರಿಂದ ಅಂತ್ಯಸಂಸ್ಕಾರ

    ಬೆಳಗಾವಿ: ಅಪರಿಚಿತ ವಾಹನ ಡಿಕ್ಕಿ ಹೊಡೆದು 6 ಮಂಗಗಳ ಸಾವನ್ನಪ್ಪಿರುವ ಮನ ಕಲಕುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನರಶಿಂಗಪೂರ ಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ.

    ಹೆದ್ದಾರಿ ದಾಟುವಾಗ ವೇಗವಾಗಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ 3 ತಾಯಿ ಮಂಗ ಹಾಗೂ 4 ಮರಿಗಳ ಮಂಗಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಒಂದು ಮರಿ ಮಂಗವನ್ನ ರಕ್ಷಿಸಲು ಹೋಗಿ ತಾಯಿ ಮರಿ ಸಹಿತ 7 ಮಂಗಗಳು ಸಾವನ್ನಪ್ಪಿವೆ. ಮಂಗಗಳ ಅಂತ್ಯಕ್ರಿಯೆಯನ್ನ ಸ್ಥಳೀಯರು ನೆರವೇರಿಸಿದ್ದು ಘಟನೆಗೆ ಸಾಕಷ್ಟು ಜನರು ಮರುಕ ವ್ಯಕ್ತ ಪಡಿಸಿದ್ದಾರೆ.

    ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾನರ ಸೈನ್ಯದೊಂದಿಗೆ 3 ವರ್ಷದ ಬಾಲಕನ ಒಡನಾಟ- ಬೆಳಗ್ಗೆ ಬಂದು ಮಗುವನ್ನ ಎಬ್ಬಿಸ್ತವಂತೆ ಈ ಮಂಗಗಳು

    ವಾನರ ಸೈನ್ಯದೊಂದಿಗೆ 3 ವರ್ಷದ ಬಾಲಕನ ಒಡನಾಟ- ಬೆಳಗ್ಗೆ ಬಂದು ಮಗುವನ್ನ ಎಬ್ಬಿಸ್ತವಂತೆ ಈ ಮಂಗಗಳು

    ಹುಬ್ಬಳ್ಳಿ: ಸಾಮಾನ್ಯವಾಗಿ ಮಂಗಗಳನ್ನು ಕಂಡರೆ, ಅವು ಮೈ ಮೇಲೆ ಎರಗುತ್ತವೆಂಬ ಭಯದಿಂದ ಹೆದರಿ ಓಡವವರೇ ಹೆಚ್ಚು. ಆದರೆ ಇಲ್ಲೊಬ್ಬ ಬಾಲಕ ಪ್ರತಿನಿತ್ಯ ಮಂಗಗಳ ಜೊತೆಗೆ ಆಟ ಊಟ ಎಲ್ಲವನ್ನು ಮಾಡುತ್ತಾನೆ. ಇಂತಂಹ ಅಚ್ಚರಿಯ ಲವ್ ಕಹಾನಿಯೊಂದು ಜಿಲ್ಲೆಯಲ್ಲಿ ನಡೆದಿದೆ.

    ಮಂಗಗಳ ಜೊತೆ ಒಡನಾಟ ಬೆಳೆಸಿಕೊಂಡಿರೋ ಬಾಲಕನ ಹೆಸರು ಸಮರ್ಥ ಬಂಗಾರಿ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದ ನಂದಾ ಮತ್ತು ಸುನೀಲ್ ಅವರ ಪುತ್ರ. ಈತನಿಗೆ ಸುಮಾರು ಮೂರು ವರ್ಷ ವಯಸ್ಸು. ಆದರೆ ಮಂಗಗಳನ್ನು ಕಂಡರೆ ಭಯ ಪಡದೆ ದಿನಾಲೂ ಅವುಗಳ ಜೊತೆ ಆಟವಾಡುತ್ತಾನೆ. ಅವುಗಳು ಕೂಡ ಈ ಸಮರ್ಥ ಜೊತೆ ಸಲಿಗೆಯಿಂದ ಇರುತ್ತವೆ.

    ಕೆಲ ದಿನಗಳ ಹಿಂದೆ ಸಮರ್ಥ ಮನೆ ಮುಂದೆ ರೊಟ್ಟಿ ತಿನ್ನುತ್ತಾ ಕುಳಿತ್ತಿದ್ದಾಗ ಮಂಗಗಳು ಬಂದಿದ್ದವು. ಮೊದಲ ದಿನ ಮಂಗಗಳನ್ನು ನೋಡಿ ಹೆದರಿದ್ದ. ಆದರೆ ಮರುದಿನವೇ ಮತ್ತೆ ಮಂಗಗಳು ಬಂದಿದ್ದು, ಆಗ ಅವುಗಳಿಗೆ ರೊಟ್ಟಿಯನ್ನು ಕೊಟ್ಟಿದ್ದ. ಅಂದು ಆರಂಭವಾದ ಮಂಗಗಳ ಸ್ನೇಹ ಇನ್ನೂ ಹಾಗೇ ಮುಂದುವರೆದಿದೆ.

    ಮುಂಜಾನೆ ಅವುಗಳೇ ಬಂದು ಸಮರ್ಥ ಇನ್ನೂ ಮಲಗಿಕೊಂಡಿದ್ದರೆ ನಿದ್ದೆಯಿಂದ ಎಬ್ಬಿಸುತ್ತವೆ. ಮನೆ ಒಳಗೆ ಬಂದು ಹಾಸಿಗೆಯಿಂದ ಎಬ್ಬಿಸಿ ಆಟ ಆಡಲು ಕರೆದುಕೊಂಡು ಹೋಗುತ್ತವೆ. ಸಮರ್ಥ ಅವುಗಳಿಗೆ ಆಹಾರ ನೀಡಿ ಅವುಗಳೊಂದಿಗೆ ಆಟ ಆಡುತ್ತಾನೆ. ನಂತರ ಮಂಗಳಗಳು ಮುಂಜಾನೆ ಕೆಲವು ಸಮಯ ಸಮರ್ಥನೊಂದಿಗೆ ಕಾಲವನ್ನು ಕಳೆದು ಆಹಾರ ಅರಸಿಕೊಂಡು ಹೋಗುತ್ತವೆ.

    ಹೀಗೆ ದಿನ ನಿತ್ಯ ಸಮರ್ಥ ಸುಮಾರು ಒಂದು ಗಂಟೆಗಳ ಕಾಲ ಈ ವಾನರ ಸೈನ್ಯದೊಂದಿಗೆ ಕಳೆಯುತ್ತಾನೆ.

    https://www.youtube.com/watch?v=IA77D_kFC68

     

     

  • ಕೋಟೆನಾಡಿಗೆ ಮಂಗಗಳ ಕಾಟ – ಕೋತಿಗಳ ಟಾರ್ಚರ್‍ಗೆ ಪ್ರವಾಸಿಗರು ಹೈರಾಣ

    ಕೋಟೆನಾಡಿಗೆ ಮಂಗಗಳ ಕಾಟ – ಕೋತಿಗಳ ಟಾರ್ಚರ್‍ಗೆ ಪ್ರವಾಸಿಗರು ಹೈರಾಣ

    ಚಿತ್ರದುರ್ಗ: ಕೋಟೆನಾಡು ಐತಿಹಾಸಿಕ ತಾಣಗಳಿಗೆ ಪ್ರಸಿದ್ಧವಾದ ಸ್ಥಳವಾಗಿದೆ. ಆದ್ದರಿಂದ ಪ್ರತಿದಿನ ನೂರಾರು ಜನ ಪ್ರವಾಸಿಗರು ಈ ಸುಂದರ ತಾಣಗಳ ವೀಕ್ಷಣೆಗಾಗಿ ಭೇಟಿ ನೀಡುತ್ತಾರೆ. ಆದರೆ ಚಂದ್ರವಳ್ಳಿ ಅರಣ್ಯದ ಬಳಿ ಮಾತ್ರ ಮಂಗಗಳ ಕಾಟದಿಂದಾಗಿ ಪ್ರವಾಸಿಗರು ಹೈರಾಣಾಗುವಂತಾಗಿದೆ.

    ಜಿಲ್ಲೆಯ ಚಂದ್ರವಳ್ಳಿಯ ಅರಣ್ಯ ಪ್ರದೇಶವಿದ್ದು, ಇಲ್ಲಿನ ಬೆಟ್ಟಗುಡ್ಡಗಳ ಮಧ್ಯೆ ಐತಿಹಾಸಿಕ ಗುಹಾಂತರ ದೇವಾಲಯಗಳಿವೆ. ಹೀಗಾಗಿ ನಿತ್ಯ ನೂರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಆದರೆ ಯಾರೊಬ್ಬರು ತಮ್ಮ ಕೈಯಲ್ಲಿ ಏನೂ ತರುವಂತಿಲ್ಲ. ಪ್ರವಾಸಿಗರು ತರುವಂತಹ ಹಣ್ಣು, ಬಿಸ್ಕಟ್, ಊಟ, ಉಪಹಾರ ಏನೇ ತಂದರೂ ಸಹ ಇಲ್ಲಿ ಬೀಡು ಬಿಟ್ಟಿರುವ ಮಂಗಗಳ ಪಾಲಾಗುತ್ತದೆ.

    ಅಷ್ಟೇ ಅಲ್ಲದೇ ಇಲ್ಲಿ ಪಾರ್ಕಿಂಗ್ ಮಾಡಿದ ಬೈಕ್‍ಗಳ ಸೀಟು, ಸೈಡ್ ಬ್ಯಾಗ್ ಹಾಗೂ ಕಾರುಗಳ ಕನ್ನಡಿ ಮಂಗಗಳ ದಾಳಿಗೆ ಎಲ್ಲಾ ಹಾಳಾಗಿರುತ್ತವೆ. ಇವುಗಳ ಬಗ್ಗೆ ಗೊತ್ತಿರುವ ಕೆಲವರು ಬೈಕಿನ ಮೇಲೆ ಮುಳ್ಳಿನ ಬೇಲಿಯನ್ನಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಶಾಲಾ ವಿದ್ಯಾರ್ಥಿಗಳು, ಮಹಿಳೆಯರಂತೂ ಇಲ್ಲಿಗೆ ಬಂದು ಖುಷಿ ಪಡುವ ಬದಲು ಮಂಗಗಳಿಂದ ಭಯಪಡುವುದೇ ಹೆಚ್ಚಾಗಿದೆ ಎಂದು ಪ್ರವಾಸಿಗರಾದ ಪರಮೇಶ್ ಹೇಳಿದ್ದಾರೆ.

    ಇಲ್ಲಿನ ವ್ಯಾಪಾರಿಗಳು ಸಹ ಮಂಗಗಳ ಹಾವಳಿಯಿಂದ ಬೇಸತ್ತು ಹೋಗಿದ್ದಾರೆ. ಈ ಬಗ್ಗೆ ಅರಣ್ಯ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಕೀಲರಾದ ಅಶೋಕ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

    ಸದ್ಯಕ್ಕೆ ಈ ಚಂದ್ರವಳ್ಳಿ ಅರಣ್ಯ ಪ್ರದೇಶದಲ್ಲಿ ಸುಮಾರು 300 ಮಂಗಗಳು ಬೀಡು ಬಿಟ್ಟಿವೆ. ಈ ಮಂಗಗಳ ಚೇಷ್ಟೆ ಒಂದು ಕ್ಷಣ ಮನರಂಜನೆ ನೀಡಿದ್ರೆ ಮತ್ತೊಂದು ಕ್ಷಣ ಭಯವನ್ನು ಸೃಷ್ಠಿಸುತ್ತಿದೆ.

     

  • ಬೊಂಬೆನಾಡಿನಲ್ಲಿ ಅದ್ಧೂರಿಯಾಗಿ ನಡೆಯಿತು ಮಂಗಗಳ ತಿಥಿ

    ಬೊಂಬೆನಾಡಿನಲ್ಲಿ ಅದ್ಧೂರಿಯಾಗಿ ನಡೆಯಿತು ಮಂಗಗಳ ತಿಥಿ

    ರಾಮನಗರ: ನವೆಂಬರ್ 4ರಂದು ಪೇಟೆಯ ಬಳಿ ಮನೆಯ ಮೇಲಿದ್ದ ವಿದ್ಯುತ್ ತಂತಿಯನ್ನ ಸ್ಪರ್ಶಿಸಿ ಆರು ಕೋತಿಗಳು ಸಾವನ್ನಪ್ಪಿದ್ದವು. ಅಂದು ಮೃತಪಟ್ಟಿದ್ದ ಕೋತಿಗಳ ತಿಥಿ ಕಾರ್ಯವನ್ನು ಮನುಷ್ಯರ ತಿಥಿಗಿಂತ ಅದ್ಧೂರಿಯಾಗಿ ಗ್ರಾಮದ ಜನರು ಮಾಡಿದ್ದಾರೆ.

    ಸಾಮೂಹಿಕವಾಗಿ ಅಂತ್ಯ ಸಂಸ್ಕಾರವಾಗಿದ್ದ ಮಂಗಗಳಿಗಾಗಿ ಸ್ಥಳೀಯರೊಬ್ಬರು ಕೇಶ ಮುಂಡನ ಮಾಡಿಸಿಕೊಂಡು ತಿಥಿ ಕಾರ್ಯವನ್ನು ನೆರವೇರಿಸಿದ್ದಾರೆ. ಸಮಾಧಿ ಮೇಲೆ ನಾನಾ ಬಗೆಯ ತಿಂಡಿ ತಿನಿಸುಗಳನ್ನು ಇಟ್ಟಿದ್ದಾರೆ. ಅಷ್ಟೇ ಅಲ್ಲದೇ ಜನರಿಗೆ ಪಲಾವ್, ಮೊಸರು ಅನ್ನವನ್ನು ಬಡಿಸಿ ಶ್ರಧ್ಧಾಭಕ್ತಿಯಿಂದ ಕಾರ್ಯವನ್ನು ನೆರವೇರಿಸಿದ್ದಾರೆ.

    ಕಳೆದ 4 ನೇ ತಾರೀಕು ಮಂಗಳವಾರ ಪೇಟೆಯ ಬಳಿ ಮನೆಯ ಮೇಲಿದ್ದ ವಿದ್ಯುತ್ ತಂತಿಯನ್ನ ಸ್ಪರ್ಶಿಸಿ ನಾಲ್ಕು ಕೋತಿಗಳು ನರಳಾಡುತ್ತಿದ್ದವು. ಈ ವೇಳೆ ಮತ್ತೆರೆಡು ಕೋತಿಗಳು ಪ್ರಾಣಾಪಾಯದಲ್ಲಿದ್ದ ಕೋತಿಗಳ ರಕ್ಷಿಸಲು ಹೋಗಿ 6 ಕೋತಿಗಳು ಸಹ ಸಾವನ್ನಪ್ಪಿದ್ದವು. ನಾವು ಎಲ್ಲಾ ಕೋತಿಗಳ ಅಂತ್ಯ ಸಂಸ್ಕಾರವನ್ನ ನೆರವೇರಿಸಿದ್ದೆವು. ಇಂದು ಕೋತಿಗಳಿಗೆ ಇಷ್ಟವಾಗಿದ್ದ ಪಧಾರ್ಥಗಳನ್ನು ಎಡೆಯಿಟ್ಟು, ತಿಥಿ ಕಾರ್ಯದಲ್ಲಿ ಪಾಲ್ಗೊಂಡಿದ್ದವರಿಗೆ ಅನ್ನದಾನ ಮಾಡಿದ್ದೇವೆ ಎಂದು ಸ್ಥಳೀಯ ಅಶೋಕ್ ಹೇಳಿದ್ದಾರೆ.

    ಮಂಗಗಳ ಸಾವು ಕಂಡು ಮರುಗಿದ ಗ್ರಾಮಸ್ಥರು ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡಿದ್ದರು. ಮನುಷ್ಯರ ತಿಥಿಯಂತೆ ಪುರೋಹಿತರ ಮೂಲಕ ಪ್ರಾರ್ಥನೆ ಸಲ್ಲಿಸಿ ಮಂಗಗಳಿಗೆ ಇಷ್ಟವಾದ ರಸಾಯನ, ಪಂಚಾಮೃತ, ಕಡಲೇಕಾಯಿ, ಕಡ್ಲೆಪುರಿ, ಬಗೆ ಬಗೆಯ ಹಣ್ಣುಗಳು, ವಿವಿಧ ಸ್ವೀಟ್‍ಗಳು, ಅಲ್ಲದೆ ರೈಸ್‍ಬಾತ್, ಮೊಸರನ್ನ ಇನ್ನು ಅನೇಕ ತಿಂಡಿಗಳನ್ನು ಸಮಾಧಿಯ ಮೇಲೆ ನೈವೇದ್ಯವಾಗಿಟ್ಟು ತಿಥಿ ಮಾಡಿದ್ದೇವೆ. ಇನ್ನೂ ಮಂಗಗಳಿಗಾಗಿ ಮಿಡಿದ ಸೋಮು ಎಂಬವರು ಕೇಶಮುಂಡನ ಸಹ ಮಾಡಿಸಿಕೊಂಡಿದ್ದಾರೆ ಎಂದು ಶ್ರೀನಿವಾಸ್ ತಿಳಿಸಿದರು.

    ಇಂದು ಯಾರೋ ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದರೆ. ಆತನ ಅಂತ್ಯಸಂಸ್ಕಾರ ನೆರವೇರಿಸೋಕೆ ಜನ ಮುಂದಾಗೋದಿಲ್ಲ. ಅಂತಹದರಲ್ಲಿ ಮೂಕಪ್ರಾಣಿಗಳಾದ ಮಂಗಗಳ ಸಾವಿಗೆ ಮಿಡಿದ ಜನ ಅಂತ್ಯಸಂಸ್ಕಾರ ನಡೆಸಿ ತಿಥಿಯನ್ನು ಕೂಡಾ ಮಾಡಿದ್ದಾರೆ. ಅಲ್ಲದೇ ಸಮಾಧಿ ಸ್ಥಳದಲ್ಲಿ ದೇಗುಲವೊಂದನ್ನು ನಿರ್ಮಿಸೋಕು ಸಹ ಮುಂದಾಗಿದ್ದಾರೆ.

  • ಮನುಷ್ಯತ್ವವನ್ನೇ ಮರೆತ ಜನ- 20 ಕ್ಕೂ ಹೆಚ್ಚು ಮಂಗಗಳ ಮಾರಣಹೋಮ

    ಮನುಷ್ಯತ್ವವನ್ನೇ ಮರೆತ ಜನ- 20 ಕ್ಕೂ ಹೆಚ್ಚು ಮಂಗಗಳ ಮಾರಣಹೋಮ

    ಉಡುಪಿ: 20 ಕ್ಕೂ ಹೆಚ್ಚು ಮಂಗಗಳಿಗೆ ವಿಷಪ್ರಾಶನ ಮಾಡಿ ಹತ್ಯೆ ಮಾಡಿರುವ ಹೃದಯವಿದ್ರವಾಕ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಸೋಮೇಶ್ವರ ಬಳಿ ನಡೆದಿದೆ.

    ಬೇರೆ ಪ್ರದೇಶದಲ್ಲಿ ಮಂಗಗಳಿಗೆ ವಿಷಪ್ರಾಶನ ಮಾಡಿರುವ ದುಷ್ಕರ್ಮಿಗಳು, ನಾಲ್ಕು ಮೂಟೆಗಳಲ್ಲಿ ಮಂಗಗಳನ್ನು ತಂದು ಆಗುಂಬೆ ಘಾಟ್ ಎರಡನೇ ಸುತ್ತಿನಲ್ಲಿ ಎಸೆದು ಹೋಗಿದ್ದಾರೆ.

    ಮೂಕಪ್ರಾಣಿಗಳ ನರಳಾಟ ಕಂಡು ಮರುಗಿದ ಪ್ರವಾಸಿಗರು ತಕ್ಷಣ ಅವುಗಳಿಗೆ ನೀರು ಕುಡಿಸಿ ಆರೈಕೆ ಮಾಡಿದರಾದ್ರೂ, ಸ್ವಲ್ಪ ಸಮಯದಲ್ಲಿಯೇ ಮಂಗಗಳು ನರಳಿ ನರಳಿ ಸಾವನ್ನಪ್ಪಿವೆ.

    ಮಂಗಗಳು ತೋಟಗಳಿಗೆ ನುಗ್ಗಿ ಬೆಳೆಹಾನಿ ಮಾಡುತ್ತವೆ ಎಂಬ ಕಾರಣದಿಂದ ತೋಟದ ಮಾಲೀಕರು ಮಂಗಗಳಿಗೆ ವಿಷಪ್ರಾಶನ ಮಾಡಿ ಇಲ್ಲಿ ತಂದು ಎಸೆದಿರಬಹುದು ಎಂಬ ಶಂಕೆ ಸ್ಥಳೀಯರಲ್ಲಿ ಮೂಡಿದೆ.