Tag: ಮಂಗಗಳು

  • ಆಹಾರಕ್ಕಾಗಿ ಮೂಕ ರೋಧನೆ – ಮರಿ ಪಾಲನೆಗೆ ತುತ್ತು ಆಹಾರಕ್ಕಾಗಿ ತಾಯಿ ಪರದಾಟ

    ಆಹಾರಕ್ಕಾಗಿ ಮೂಕ ರೋಧನೆ – ಮರಿ ಪಾಲನೆಗೆ ತುತ್ತು ಆಹಾರಕ್ಕಾಗಿ ತಾಯಿ ಪರದಾಟ

    ಹುಬ್ಬಳ್ಳಿ: ದೇಶಾದ್ಯಂತ ಲಾಕ್‍ಡೌನ್ ಜಾರಿಯಿರುವ ಹಿನ್ನೆಲೆ ಜನರು ಆಹಾರಕ್ಕಾಗಿ ಪರದಾಡುವಂತ ಸ್ಥಿತಿಯನ್ನು ನೋಡಿದ್ದೇವೆ. ಜನರ ನೆರವಿಗೆ ಸಾಕಷ್ಟು ಮಂದಿ ಮುಂದೆ ಬಂದಿದ್ದಾರೆ. ಆದರೇ ಮೂಕ ಪ್ರಾಣಿಗಳು ಕೂಡ ಆಹಾರವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದು, ತಾಯಿ ಮಂಗವೊಂದು ತನ್ನ ಮರಿ ಪಾಲನೆಗೆ ತುತ್ತು ಆಹಾರಕ್ಕಾಗಿ ಪರಿತಪಿಸುತ್ತಿರುವ ದೃಶ್ಯ ಮನಕಲಕುವಂತಿದೆ.

    ತಾಯಿ ಮಂಗವೊಂದು ತನ್ನ ಪುಟ್ಟ ಮರಿಗಾಗಿ ಆಹಾರ ಹುಡುಕಿಕೊಂಡು ಆಹಾರ ಅರಸಿ ಸಾಗುತ್ತಿರುವ ದೃಶ್ಯ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಕಂಡುಬಂದಿದೆ. ಅರಣ್ಯ ಹಾಗೂ ಉದ್ಯಾನವನಗಳಲ್ಲಿ ಆಹಾರ ಪಡೆದುಕೊಂಡು ಜೀವನ ನಡೆಸುತ್ತಿದ್ದ ಮಂಗಗಳು ಈಗ ಎಲ್ಲಿಯೂ ಕೂಡ ಆಹಾರವಿಲ್ಲದೆ ಪರದಾಡುವಂತಾಗಿದೆ. ಲಾಕ್‍ಡೌನ್ ಬಿಸಿ ಮನುಷ್ಯನಿಗೆ ಮಾತ್ರವಲ್ಲದೆ ಪ್ರಾಣಿಗಳಿಗೂ ತಟ್ಟಿದ್ದು, ಆಹಾರ ಅರಸಿಕೊಂಡು ಮಂಗಗಳು ನಗರದತ್ತ ಮುಖ ಮಾಡಿವೆ. ಕಾಲೋನಿಗಳಲ್ಲಿ ಜನರು ಹಾಕುತ್ತಿದ್ದ ಅಳಿದು ಉಳಿದ ಆಹಾರವನ್ನು ನೆಚ್ಚಿಕೊಂಡು ಜೀವನಕ್ಕೆ ದಾರಿ ಮಾಡಿಕೊಂಡಿರುವ ಮಂಗಗಳು ಈಗ ಆಹಾರವಿಲ್ಲದೆ ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡಿವೆ. ಜನರಿಗೆ ಆಹಾರವಿಲ್ಲದಿದ್ದರೆ ಕಷ್ಟವನ್ನು ಹೇಳಿಕೊಂಡು ಆಹಾರ ಪಡೆಯುತ್ತಾರೆ. ಆದರೇ ಮೂಕ ಪ್ರಾಣಿಗಳ ರೋಧನ ಹೇಳ ತೀರದಾಗಿದೆ.

    ತುತ್ತು ಆಹಾರಕ್ಕಾಗಿ ಮಂಗಗಳು ಪಡುತ್ತಿರುವ ಕಷ್ಟ ಮನಕಲಕುವಂತಿದೆ. ಅದರಲ್ಲೂ ತಾಯಿ ಮಂಗವೊಂದು ತನ್ನ ಪುಟ್ಟ ಕಂದಮ್ಮನನ್ನು ಉದರದಲ್ಲಿ ಹೊತ್ತಿಕೊಂಡು ಆಹಾರವನ್ನು ಹುಡುಕುತ್ತಿರುವ ದೃಶ್ಯ, ಸ್ಥಳದಲ್ಲಿ ಬಿಸಾಡಿದ ಹಾಲಿನ ಪ್ಯಾಕೆಟ್‍ನಲ್ಲಿ ಉಳಿದ ಹಾಲನ್ನು ಮಂಗ ಕುಡಿಯುತ್ತಿರುವುದು, ನೆಲದಲ್ಲಿ ಚೆಲ್ಲಿದ ಹಾಲನ್ನು ಮಂಗಗಳು ಕುಡಿಯುತ್ತಿರುವುದು, ಕಸದ ರಾಶಿಯಲ್ಲಿ ಸಿಕ್ಕ ಅಲ್ಪಸ್ವಲ್ಪ ಆಹಾರವನ್ನು ಆರಿಸಿ ತಿನ್ನುತ್ತಿರುವ ಮಂಗಗಳ ದೃಶ್ಯಗಳನ್ನು ನೋಡಿದರೆ ಕಣ್ಣಂಚಲ್ಲಿ ನೀರು ತುಂಬುತ್ತದೆ.

  • ಬೆಂಗ್ಳೂರಿನ ಹಾಟ್ ಫೇವರೆಟ್ ಪಿಕ್ನಿಕ್ ಸ್ಪಾಟ್‍ನಲ್ಲಿ ಕೋತಿಗಳ ಮೂಕರೋಧನೆ

    ಬೆಂಗ್ಳೂರಿನ ಹಾಟ್ ಫೇವರೆಟ್ ಪಿಕ್ನಿಕ್ ಸ್ಪಾಟ್‍ನಲ್ಲಿ ಕೋತಿಗಳ ಮೂಕರೋಧನೆ

    ಚಿಕ್ಕಬಳ್ಳಾಪುರ: ಭಾರತ ಲಾಕ್‍ಡೌನ್ ಹಿನ್ನೆಲೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿರುವ ವಿಶ್ವವಿಖ್ಯಾತ ನಂದಿಗಿರಿಧಾಮ ಸಂಪೂರ್ಣ ಬಂದ್ ಆಗಿದ್ದು, ನಂದಿಗಿರಿಧಾಮದಲ್ಲಿನ ಮೂಕ ಪ್ರಾಣಿಗಳ ರೋದನೆ ಮನಕಲಕುವಂತಿದೆ.

    ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಆ ಪ್ರವಾಸಿ ತಾಣವನ್ನು ಬಂದ್ ಮಾಡಿದ ಹಿನ್ನೆಲೆ, ಅಲ್ಲಿರುವ ಸಾವಿರಾರು ಕೋತಿಗಳು ಅನ್ನ, ಆಹಾರ, ಹಣ್ಣು ಹಂಪಲು ಹಾಗೂ ನೀರು ಇಲ್ಲದೆ ಪ್ರಾಣ ಕೈಯಲ್ಲಿಡಿದು ನಿತ್ರಾಣವಾಗಿ ಉಸಿರಾಡುತ್ತಿವೆ. ಸದಾ ಮರದಿಂದ ಮರಕ್ಕೆ ಜಿಗಿಯುತ್ತಾ ಕಪಿಚೇಷ್ಠೆ ಮಾಡುತ್ತಿದ್ದ ಕೋತಿಗಳು ಈಗ ನಡೆದಾಡಲು ಕಷ್ಟಪಡುತ್ತಿದ್ದವೆ.

    ಬೆಂಗಳೂರಿಗರ ಹಾಟ್ ಫೇವರೆಟ್ ಪಿಕ್ನಿಕ್ ಸ್ಪಾಟ್ ಆಗಿದ್ದ ನಂದಿ ಹಿಲ್ಸ್ ಈಗ ಬಿಕೋ ಎನ್ನುತ್ತಿದೆ. ಕೊರೊನಾ ಸೋಂಕು ಹರಡದಂತೆ ತಡೆಯಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕಳೆದ ಒಂದು ತಿಂಗಳಿಂದ ನಂದಿಗಿರಿಧಾಮಕ್ಕೆ ಬೀಗ ಹಾಕಿ ಪ್ರವಾಸಿಗರ ಪ್ರವೇಶ ನಿರ್ಬಂಧ ಮಾಡಿದೆ. ಇದರ ನೇರ ಪರಿಣಾಮ ಗಿರಿಧಾಮದಲ್ಲಿದ್ದ ವಾನರ ಸೈನ್ಯದ ಮೇಲೆ ಬಿದ್ದಿದ್ದು, ಗಿರಿಧಾಮದ ಮೇಲೆ ಇರುವ ಕೋತಿಗಳಿಗೆ ಅನ್ನ ಆಹಾರ, ಹಣ್ಣು, ಹಂಪಲು, ನೀರು ಇಲ್ಲದೆ ಪ್ರಾಣ ಕೈಯಲ್ಲಿಡಿದು ನಿತ್ರಾಣಗೊಂಡಿವೆ.

    ಹತ್ತಾರು ವರ್ಷಗಳಿಂದಲೂ ಗಿರಿಧಾಮವನ್ನೇ ತಮ್ಮ ಆವಾಸ ಸ್ಥಾನ ಮಾಡಿಕೊಂಡಿರುವ ಸಾವಿರಾರು ಕೋತಿಗಳು, ಈಗ ಇದ್ದಕ್ಕಿದ್ದ ಹಾಗೆ ಕೆಳಗೆ ಬರಲಾಗದೆ ಮೇಲೆಯೂ ಇರಲಾರದೆ ಗಿರಿಧಾಮದಲ್ಲಿ ಸಿಗುವ ಹುಲ್ಲನ್ನೆ ತಿಂದು ಉಸಿರಾಡುವಂತಾಗಿವೆ. ಇನ್ನೂ ಒಂದಷ್ಟು ಕೋತಿಗಳು, ಗಿರಿಧಾಮದ ಅಕ್ಕ ಪಕ್ಕ ಇರುವ ಹಳ್ಳಿಗಳತ್ತಾ ವಲಸೆ ಹೋಗಿವೆ. ಕೋತಿಗಳ ಹಸಿವು ಸಂಕಷ್ಟ ನೋಡಲಾಗದೆ ಕೆಲವು ಸ್ಥಳೀಯ ಗ್ರಾಮಸ್ಥರು ತಮ್ಮ ಗ್ರಾಮಗಳ ಬಳಿ ಬಂದ ಕೋತಿಗಳಿಗೆ, ತರಕಾರಿ ಹಾಕಿ ಮಾನವೀಯತೆ ಮೆರೆಯುತ್ತಿದ್ದಾರೆ.

    ಆದರೆ ಪ್ರತಿದಿನ ಹಾಕಲು ಸಾಧ್ಯವಾಗುತ್ತಿಲ್ಲ. ಗಿರಿಧಾಮಕ್ಕೆ ಬರುವ ಕಲರ್ ಫುಲ್ ಪ್ರೇಮಿಗಳಿಗೆ ತರ್ಲೆ ತಮಾಷೆ ಮಾಡುತ್ತಾ, ಅವರಿಗೆ ಉಚಿತ ಮನರಂಜನೆ ನೀಡಿ ಅವರ ಕೈಯಲ್ಲಿದ್ದ ತಿಂಡಿ ತಿನಿಸು ಕಸಿದು ತಿನ್ನುತ್ತಿದ್ದ ಕೋತಿಗಳು, ಈಗ ಅನ್ನ-ನೀರು ಇಲ್ಲದೆ ಕೊನೆಗೆ ಹುಲ್ಲನ್ನು ತಿಂದು ಪ್ರಾಣ ಉಳಿಸಿಕೊಳ್ಳುತ್ತಿರುವ ದೃಶ್ಯ ನೋಡಿದರೆ ಕರಳು ಕಿತ್ತುಬರುತ್ತೆ. ಗಿರಿಧಾಮದಲ್ಲಿರುವ ಕೋತಿಗಳಿಗೆ ಯಾರಾದರೂ ಹಣ್ಣು-ಹಂಪಲು ತರಕಾರಿ ಹಾಕಿ ಅವುಗಳು ಬದುಕುಳಿಯಲು ಸಹಾಯ ಮಾಡಬೇಕಿದೆ.

  • ಪ್ರವಾಸಿಗರನ್ನೇ ನಂಬಿ ಬದುಕ್ತಿರೋ ಕೋತಿಗಳಿಗೂ ತಟ್ಟಿತು ಕೊರೊನಾ ಎಫೆಕ್ಟ್

    ಪ್ರವಾಸಿಗರನ್ನೇ ನಂಬಿ ಬದುಕ್ತಿರೋ ಕೋತಿಗಳಿಗೂ ತಟ್ಟಿತು ಕೊರೊನಾ ಎಫೆಕ್ಟ್

    ಕೋಲಾರ: ಕಾಶಿ ವಿಶ್ವನಾಥಸ್ವಾಮಿಯ ಪುಣ್ಯ ಕ್ಷೇತ್ರದಲ್ಲೂ ಕೊರೊನಾ ಮಾಹಾಮಾರಿಯ ಕರಿ ನೆರಳು ಬಿದ್ದಿದೆ. ದೇವರನ್ನೇ ನಂಬಿ ಬದುಕುತ್ತಿದ್ದ ವಾನರ ಸೈನ್ಯಕ್ಕೆ ಕೊರೊನಾದಿಂದಾಗಿ ಹಸಿವು ಅನ್ನೋ ಕಾಯಿಲೆ ತಂದಿಟ್ಟು ಹಿಂಸಿಸುತ್ತಿದೆ. ನಿಶ್ಯಕ್ತಿಯಿಂದ ಎದ್ದು ನಿಲ್ಲಲು ಸಹ ಸಾಧ್ಯವಾಗದೇ ನರಳುತ್ತಿರುವ ವಾನರ ಸೈನ್ಯ ಒಂದೆಡೆ. ಇನ್ನೊಂದೆಡೆ ಹಸಿವು, ಬಾಯಾರಿಕೆಗಳಿಂದ ಬಳಲುತ್ತಿರುವ ಮಂಗಗಳನ್ನು ನೋಡಿದ್ರೆ ನಿಜಕ್ಕೂ ಎಂಥವರ ಕರುಳು ಚುರುಕ್ ಅನ್ನದೇ ಇರದು.

    ಕೊರೊನಾ ಮಹಾಮಾರಿ ಜನರ ಜೀವನ ದುಸ್ಥರ ಮಾಡಿದ್ದಲ್ಲದೇ, ಅದೆಷ್ಟೋ ಮೂಕ ಪ್ರಾಣಿಗಳ ಜೀವನವನ್ನು ಬರ್ಬರಗೊಳಿಸಿದೆ. ಕೋಲಾರದ ಪ್ರಸಿದ್ಧ ಕ್ಷೇತ್ರ ಅಂತರಗಂಗೆಯಲ್ಲಿ ಪ್ರವಾಸಿಗರನ್ನೇ ನಂಬಿ ಸಾವಿರಾರು ಸಂಖ್ಯೆಯ ಕೋತಿಗಳು ಬದುಕುತ್ತಿವೆ. ಆದರೆ ಲಾಕ್‍ಡೌನ್ ಹಿನ್ನೆಲೆ ಕಾಶಿವಿಶ್ವೇಶ್ವರ ಸ್ವಾಮಿ ದೇವಾಲಯಕ್ಕೆ ಬರುವವರಿಲ್ಲದೆ ಮಂಗಗಳಿಗೂ ಆಹಾರವಿಲ್ಲವಾಗಿದೆ.

    ಅರಣ್ಯ ಇಲಾಖೆ, ಯುವ ಫೌಂಡೇಶನ್, ಇಲ್ಲಿನ ಸ್ಥಳೀಯ ನಿವಾಸಿಗಳು, ಸಂಸದ ಎಸ್.ಮುನಿಸ್ವಾಮಿ ಬೆಂಬಲಿಗರು ಪ್ರತಿನಿತ್ಯ ಇಲ್ಲಿರುವ ಕೋತಿಗಳಿಗೆ ಬಿಸ್ಕತ್, ತರಕಾರಿ, ಹಣ್ಣುಗಳನ್ನು ವಿತರಿಸುತ್ತಿದ್ದಾರೆ. ಆದರೆ ಇಲ್ಲಿ ವಾಸಿಸುತ್ತಿರುವ ಮಂಗಗಳ ಸಂಖ್ಯೆಗೆ ಇದು ಅರೆಕಾಸಿನ ಮಜ್ಜಿಗೆಯಾಗಿದೆ. ಕೊರೊನಾ ಜೊತೆಗೆ ಬೇಸಿಗೆಯ ಬಿಸಿ ಇಲ್ಲಿನ ಕೋತಿಗಳು ಜೀವ ಉಳಿಸಿಕೊಳ್ಳೋದೆ ದುಸ್ಥರ ಎನ್ನುವ ಸ್ಥಿತಿ ತಂದೊಡ್ಡಿದೆ ಎಂದು ವನ್ಯ ಜೀವ ಪರಿಪಾಲಕ ತ್ಯಾಗರಾಜ್ ಹೇಳುತ್ತಾರೆ.

    ಒಟ್ಟನಲ್ಲಿ ಮನುಷ್ಯರು ಸೋಂಕಿನಿಂದ ಪಾರಾಗಲು ಲಾಕ್‍ಡೌನ್‍ನಿಂದ ಮನೆಯಲ್ಲಿದ್ದರೆ ಮೂಕ ಪ್ರಾಣಿಗಳು ಮಾತ್ರ ಹಸಿವಿನಿಂದ ಬಳಲುತ್ತಿವೆ.

  • ಮನೆಗೆ ಬಂದ ಭಜರಂಗಿಗಳಿಗೆ ಹೊಟ್ಟೆ ತುಂಬ ನೀಡಿದ ಭಾಯಿಜಾನ್

    ಮನೆಗೆ ಬಂದ ಭಜರಂಗಿಗಳಿಗೆ ಹೊಟ್ಟೆ ತುಂಬ ನೀಡಿದ ಭಾಯಿಜಾನ್

    ಧಾರವಾಡ: ಲಾಕ್‍ಡೌನ್ ನಡುವೆ ಆಹಾರ ಅರಸಿ ಮನೆಗೆ ಬಂದಿದ್ದ ಕೋತಿಗಳಿಗೆ ಆಹಾರ ನೀಡುವ ಮೂಲಕ ಧಾರವಾದ ಗೌಸ್ ಖಾನ್ ಮಾನವೀಯತೆ ಮರೆದಿದ್ದಾರೆ.

    ಧಾರವಾಡದ ಬಸವನಗರದ ನಿವಾಸಿಯಾದ ಗೌಸ್ ಖಾನ್ ನವಲೂರು ಊಟಕ್ಕೆ ಕುಳಿತಾಗ ಮನೆಗೆ ಇಂದು ಎರಡು ಮಂಗಗಳು ಬಂದಿದ್ದವು. ಮಂಗಗಳನ್ನು ನೋಡಿದ ಗೌಸ್ ಖಾನ್ ಶೇಂಗಾ, ಚಪಾತಿ, ಬಾಳೆಹಣ್ಣು ನೀಡಿದ್ದಾರೆ. ಎಂದು ಬರದ ಮಂಗಗಳು ನಮ್ಮ ಮನೆಗೆ ಬಂದಿದ್ದರಿಂದ ಊಟ ನೀಡಿದ್ದೇವೆ ಎಂದು ಗೌಸ್ ಹೇಳುತ್ತಾರೆ.

    ಇಂದು ಶನಿವಾರ ಆಂಜನೇಯನ ವಾರ ಎಂದು ಹೇಳುತ್ತಾರೆ. ಮನೆಗೆ ಅತಿಥಿಗಳ ರೂಪದಲ್ಲಿ ಬಂದಿದ್ದವು. ನಾವು ಮಾಡುತ್ತಿದ್ದ ಊಟವನ್ನೇ ಮಂಗಗಳಿಗೆ ನೀಡಿದ್ದೇವೆ ಎಂದು ಗೌಸ್ ಕುಟುಂಬಸ್ಥರು ಹೇಳುತ್ತಾರೆ. ಇನ್ನು ಮಂಗಗಳು ಬಂದಿರೋದನ್ನು ನೋಡಿದ ಜನ, ಭಾಯಿಜಾನ್ ಮನೆಗೆ ಭಜರಂಗಿಗಳು ಬಂದಿವೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

  • ಆಹಾರಕ್ಕಾಗಿ ಮೂಕ ರೋಧನೆ – ಅಂಜನಾದ್ರಿ ಬೆಟ್ಟದಲ್ಲಿ ಆಹಾರ, ನೀರಿಗಾಗಿ ಮಂಗಗಳ ನರಳಾಟ

    ಆಹಾರಕ್ಕಾಗಿ ಮೂಕ ರೋಧನೆ – ಅಂಜನಾದ್ರಿ ಬೆಟ್ಟದಲ್ಲಿ ಆಹಾರ, ನೀರಿಗಾಗಿ ಮಂಗಗಳ ನರಳಾಟ

    ಕೊಪ್ಪಳ: ಮಹಾಮಾರಿ ಕೊರೊನಾ ವೈರಸ್ ವಿಶ್ವದ ಮನುಕುಲವನ್ನೇ ಬೆಚ್ಚಿ ಬೀಳಿಸಿದ್ದಲ್ಲದೇ ಮೂಕ ಪ್ರಾಣಿಗಳನ್ನು ಕಂಗಾಲಾಗಿಸಿದೆ. ಕೊರೊನಾ ಭೀತಿಯಿಂದ ದೇಶವನ್ನು ಲಾಕ್‍ಡೌನ್ ಮಾಡಿ ಜನರಿಗೆ ಅಗತ್ಯ ವಸ್ತು, ಆಹಾರ ಒದಗಿಸುವ ಪ್ರಯತ್ನವೆನೋ ನಡೆಯುತ್ತಿದೆ. ಆದರೆ ಲಾಕ್‍ಡೌನಿಂದ ಆಹಾರ ಸಿಗದೇ ಮೂಕ ಪ್ರಾಣಿಗಳು ನರಳುತ್ತಿವೆ.

    ಕೊಪ್ಪಳ ಜಿಲ್ಲೆಯಲ್ಲಿರುವ ಆಂಜನೇಯ ಹುಟ್ಟಿದ ಸ್ಥಳ ಎಂದೇ ಪ್ರಖ್ಯಾತಿ ಪಡೆದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿರುವ ಸಾವಿರಾರು ಮಂಗಗಳು ನಿತ್ಯ ಆಹಾರಕ್ಕಾಗಿ ಪರದಾಡುವಂತಾಗಿದೆ. ಲಾಕ್‍ಡೌನ್‍ನಿಂದಾಗಿ ಕಳೆದ ಒಂದು ತಿಂಗಳನಿಂದ ದೇವಸ್ಥಾನದ ಬಾಗಿಲು ಮುಚ್ಚಿದ್ದು, ದೇವಸ್ಥಾನದಲ್ಲಿ ಭಕ್ತರು ನೀಡುತ್ತಿದ್ದ ಹಣ್ಣು, ಆಹಾರವನ್ನೇ ತಿಂದು ಬದುಕುತ್ತಿದ್ದ ಮಂಗಗಳು ಆಹಾರ ಸಿಗದೇ ಪರಿತಪಿಸುವಂತಾಗಿದೆ.

    ಸಾವಿರಾರು ಭಕ್ತರು ದೇವಸ್ಥನಕ್ಕೆ ಭೇಟಿ ನೀಡಿ ಮಂಗಗಳಿಗೂ ಆಹಾರ ನೀಡುತ್ತಿದ್ದರು. ಈಗ ದೇಗುಲಕ್ಕೆ ಭಕ್ತರು ಭೇಟಿ ನೀಡುತ್ತಿಲ್ಲ. ಹೀಗಾಗಿ ಮಂಗಗಳ ಸ್ಥಿತಿ ಮನಗಂಡ ದೇವಸ್ಥಾನದ ಆಡಳಿತ ಮಂಡಳಿ ಮಂಗಗಳಿಗೆ ನಿತ್ಯ ಆಹಾರ ಪೂರೈಕೆ ಮಾಡುತ್ತಿದೆ. ಈಗ ಪ್ರತಿನಿತ್ಯ ದೇವಸ್ಥಾನದಿಂದ ಮಂಗಗಳಿಗೆ ಮೂರು ಹೊತ್ತು ಶೇಂಗಾ, ಕಡಲೆ ಕಾಳು ಹಾಗೂ ಬಾಳೆಹಣ್ಣು ನೀಡಲಾಗುತ್ತಿದೆ.

    ಆದರೆ ನಿತ್ಯ ದೇವಸ್ಥಾನಕ್ಕೆ ಆಗಮಿಸುತ್ತಿದ್ದ ಭಕ್ತರಿಂದಲು ಆಹಾರ ಸಿಗುತ್ತಿದ್ದ ಮಂಗಗಳಿಗೆ ಈಗ ಆಹಾರಕ್ಕೆ ಅಲೆದಾಡುವಂತ ಸ್ಥಿತಿ ಕೊರೊನಾದಿಂದ ನಿರ್ಮಾಣವಾಗಿದೆ. ದೇವಸ್ಥಾನದ ಕೆಳಗೆ ಇರುವ ಮಂಗಗಳು ಅಲ್ಲಿನ ಸಿಬ್ಬಂದಿ ನೀಡುತ್ತಿರುವ ಆಹಾರ ತಿಂದು ಜೀವ ಉಳಿಸಿಕೊಂಡಿವೆ. ಆದ್ರೆ ಬೆಟ್ಟದ ಮೇಲಿರುವ ಸಾವಿರಾರು ಮಂಗಗಳು ಆಹಾರ, ನೀರು ಸಿಗದೇ ನರಳಾಡುತ್ತಿವೆ.

  • ಗುಂಪು ಸೇರುವುದಕ್ಕಿಂತ 500 ಕೋತಿಗಳಿಗೆ ಆಹಾರ ನೀಡುವುದು ಒಳ್ಳೆಯದು: ಚಂದನ್

    ಗುಂಪು ಸೇರುವುದಕ್ಕಿಂತ 500 ಕೋತಿಗಳಿಗೆ ಆಹಾರ ನೀಡುವುದು ಒಳ್ಳೆಯದು: ಚಂದನ್

    – ನಂದಿ ಬೆಟ್ಟದಲ್ಲಿರುವ ಮಂಗಳಿಗೆ ಬಾಳೆಹಣ್ಣು ನೀಡಿದ ನಟ

    ಬೆಂಗಳೂರು: ಗುಂಪು ಸೇರುವುದಕ್ಕಿಂತ 500 ಕೋತಿಗಳಿಗೆ ಆಹಾರ ನೀಡುವುದು ಒಳ್ಳೆಯದು ಎಂದು ಬಿಗ್ ಬಾಸ್ ಖ್ಯಾತಿಯ ನಟ ಚಂದನ್ ಅವರು ಹೇಳಿದ್ದಾರೆ.

    ಕೊರೊನಾ ವೈರಸ್ ಭೀತಿಯಿಂದ ದೇಶ ಲಾಕ್‍ಡೌನ್ ಆಗಿದೆ. ಜನರಿಗೆ ಊಟ ಸಿಗದೆ ಪರಾದಾಡುತ್ತಿದ್ದಾರೆ. ಇನ್ನೂ ಈ ದಿನಗಳಲ್ಲಿ ಪ್ರಾಣಿ ಪಕ್ಷಿಗಳ ಕಷ್ಟವಂತು ಹೇಳತೀರದು. ಹಾಗಾಗಿ ಹಲವಾರು ಈ ಲಾಕ್‍ಡೌನ್ ಸಮಯದಲ್ಲಿ ಪ್ರಾಣಿ ಪಕ್ಷಿಗಳ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಅಂತಯೇ ನಟ ಚಂದನ್ ಅವರು ಕೂಡ ನಂದಿ ಬೆಟ್ಟಕ್ಕೆ ತೆರಳಿ ಅಲ್ಲಿನ ಕೋತಿಗಳಿಗೆ ಬಾಳೆಹಣ್ಣು ನೀಡಿ ಬಂದಿದ್ದಾರೆ.

    https://www.instagram.com/p/B-cJpFwAw91/

    ಈ ವಿಚಾರವಾಗಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಚಂದನ್, ಪಾಠವನ್ನು ಕಲಿತೆ. ಸಾಮಾಜಿಕ ಅಂತರ ಎಂಬುದನ್ನು ನಾವು ಯಾವಾಗ ಕಲಿಯುತ್ತೆವೆ ಎಂದರೆ, 500 ಮಂಗಗಳಿಗೆ ಆಹಾರ ನೀಡುವುದು ಗುಂಪು ಸೇರುವುದಕ್ಕಿಂತ ಒಳ್ಳೆಯದು ಎಂದು ನಮಗೆ ಅರ್ಥವಾದಾಗ ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಕೋತಿಗೆ ಬಾಳೆಹಣ್ಣು ನೀಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

    https://www.instagram.com/p/B-CN2ddgZeM/

    ನಂದಿ ಬೆಟ್ಟದಲ್ಲಿ ಸಾಕಷ್ಟು ಮಂಗಗಳು ಇದ್ದಾವೆ. ಇವುಗಳು ಅಲ್ಲಿಗೆ ಬರುವ ಪ್ರವಾಸಿಗರು ನೀಡುವ ಆಹಾರವನ್ನು ನಂಬಿ ಮತ್ತು ಅಲ್ಲಿನ ಅಂಗಡಿಗಳನ್ನು ನಂಬಿ ಬದುಕುತ್ತಿದ್ದವು. ಈಗ ದೇಶವೇ ಲಾಕ್‍ಡೌನ್ ಆಗಿದೆ. ಜೊತೆಗೆ ನಂದಿ ಬೆಟ್ಟದ ಬಾಗಿಲು ಮುಚ್ಚಿದೆ. ಅಲ್ಲಿಗೆ ಯಾವುದೇ ಪ್ರವಾಸಿಗರು ಹೋಗುತ್ತಿಲ್ಲ. ಅಂಗಡಿಗಳು ತೆರೆಯುತ್ತಿಲ್ಲ. ಆದ್ದರಿಂದ ಅಲ್ಲಿರುವ ಸಾವಿರಾರು ಮಂಗಗಳು ಹಸಿವಿನಿಂದ ಬಳಲುತ್ತಿವೆ. ಇದನ್ನು ಅರಿತ ಚಂದನ್ ಅಲ್ಲಿಗೆ ಹೋಗಿ ಅವುಗಳಿಗೆ ಆಹಾರ ನೀಡಿದ್ದಾರೆ.

    https://www.instagram.com/p/B9WlVsagIVt/

    ಸಾಕಷ್ಟು ಸಿನಿಮಾ ನಟ-ನಟಿಯರು ಕೂಡ ತಮ್ಮ ಮನೆ ಅಕ್ಕಪಕ್ಕ ನಾಯಿಗಳು ಮತ್ತು ಬೀದಿನಾಯಿಗಳಿಗೆ ಊಟ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿ ಐಂದ್ರಿಂತಾ ರೇ ಅವರು ತಮ್ಮ ಮನೆಯ ಅಕ್ಕಪಕ್ಕದ ಬೀದಿನಾಯಿಗಳಿಗೆ ಊಟ ನೀಡಿದ್ದರು. ಈ ಹಿಂದೆ ಸಂಯುಕ್ತ ಹೊರನಾಡು ಅವರು ಕೂಡ ತಮ್ಮ ಸ್ನೇಹಿತ ಬಳಗವನ್ನು ಕಟ್ಟಿಕೊಂಡು ಬೆಂಗಳೂರಿನ ಹಲವಡೆ ಬೀದಿನಾಯಿಗಳಿಗೆ ಆಹಾರ ನೀಡಿದ್ದರು.

  • ಮಂಗಗಳ ಹಾವಳಿ ತಪ್ಪಿಸಲು ನಾಯಿಗೆ ಹುಲಿಯ ಬಣ್ಣ ಬಳಿದ ರೈತ

    ಮಂಗಗಳ ಹಾವಳಿ ತಪ್ಪಿಸಲು ನಾಯಿಗೆ ಹುಲಿಯ ಬಣ್ಣ ಬಳಿದ ರೈತ

    ಶಿವಮೊಗ್ಗ: ಮಲೆನಾಡಿನಲ್ಲಿ ಹೆಚ್ಚುತ್ತಿರುವ ಮಂಗಗಳ ಹಾವಳಿಯನ್ನು ತಡೆಯಲು ರೈತರು ವಿವಿಧ ಉಪಾಯಗಳ ಮೊರೆ ಹೋಗುತ್ತಿದ್ದಾರೆ.

    ಮಂಗಗಳ ಹಾವಳಿಯಿಂದ ಬೆಳೆ ರಕ್ಷಿಸಲು ಇಲ್ಲೊಬ್ಬ ರೈತ ಭರ್ಜರಿ ಪ್ಲಾನ್ ಮಾಡಿದ್ದು, ನಾಯಿಗೆ ಹುಲಿಯ ಬಣ್ಣವನ್ನು ಬಳಿದಿದ್ದಾರೆ. ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಲ್ಲೂರು ಗ್ರಾಮದ ಶ್ರೀಕಾಂತ ಗೌಡ ಎಂಬವರು ಈ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ರೈತರೊಬ್ಬರು ಹುಲಿಯ ರೀತಿಯ ದೊಡ್ಡ ಗೊಂಬೆಯನ್ನು ಇಡುವ ಮೂಲಕ ಮಂಗಗಳಿಂದ ಬೆಳೆ ರಕ್ಷಿಸಲು ಮುಂದಾಗಿದ್ದರು. ಇದರಿಂದಾಗಿ ಮಂಗಗಳು ಬೆಳೆ ಹತ್ತಿರ ಬಂದಿರಲಿಲ್ಲ. ಅಲ್ಲದೆ ಎರಡು ದಿನಗಳ ನಂತರ ಈ ಗೊಂಬೆಯನ್ನು ಬೇರೆ ಸ್ಥಳದಲ್ಲಿ ಇರಿಸಿದ್ದರು. ಇದೂ ಫಲಕಾರಿಯಾಗಿತ್ತು. ಇದನ್ನೂ ಓದಿ: ಮಗನನ್ನು ರೈತನನ್ನಾಗಿ ಮಾಡಲು 90 ಸಾವಿರ ಸಂಬಳದ ಸರ್ಕಾರಿ ಕೆಲಸ ಬಿಟ್ಟ ತಾಯಿ

    ಇದೇ ರೀತಿಯ ಉಪಾಯವನ್ನು ಶ್ರೀಕಾಂತ ಗೌಡ ಅವರು ಮಾಡಿದ್ದಾರೆ. ಆದರೆ ಇದರ ಮೇಲೆಯೇ ಹೆಚ್ಚು ದಿನಗಳ ಕಾಲ ಅವಲಂಬಿತವಾಗಿರಲು ಸಾಧ್ಯವಿಲ್ಲ ಎಂಬುದನ್ನು ಅರಿತು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ನಾಯಿಗೆ ಹುಲಿಯ ರೀತಿಯ ಬಣ್ಣ ಬಳಿಯಲು ನಿರ್ಧರಿಸಿದ್ದಾರೆ. ನಾಯಿಗೆ ಹುಲಿಯ ರೀತಿಯ ಬಣ್ಣವನ್ನು ಬಳಿದು ತೋಟದಲ್ಲಿಯೇ ಇರುವಂತೆ ನೋಡಿಕೊಳ್ಳುತ್ತಿದ್ದಾರೆ.

    ಇದು ಹೇರ್ ಡೈ ಆಗಿದ್ದರಿಂದ ಬೇಗ ಬಣ್ಣ ಹೋಗುವುದಿಲ್ಲ. ತಿಂಗಳ ಕಾಲ ಇರಲಿದೆ. ಅಲ್ಲದೆ ಇದರಿಂದ ನಾಯಿಗೂ ಯಾವುದೇ ಅನಾರೋಗ್ಯ ಉಂಟಾಗುವುದಿಲ್ಲ. ಹೀಗೆ ಮಾಡಿದ್ದರಿಂದ ಮಂಗಗಳ ಹಾವಳಿ ತಪ್ಪಿದೆ ಎಂದು ಶ್ರೀಕಾತ ಗೌಡ ಅವರು ವಿವರಿಸಿದ್ದಾರೆ.

    ಸೊರಬ ತಾಲೂಕಿನ ಕಕ್ಕರಸಿಯ ಮತ್ತೋರ್ವ ರೈತ ಜೆ.ಎಸ್.ಚಿದಾನಂದಗೌಡ ಅವರು, ಇನ್ನೊಂದು ವಿಭಿನ್ನ ಪ್ರಯತ್ನ ಮಾಡಿದ್ದು, ನಾಯಿಗಳು ಬೊಗಳುವ ಶಬ್ದದ ಆಡಿಯೋವನ್ನು ಹೊಲದ ವಿವಿಧ ಭಾಗಗಳಲ್ಲಿ ಕೇಳುವಂತೆ ಮಾಡಿದ್ದಾರೆ. ಇದಕ್ಕಾಗಿ ಸ್ಪೀಕರ್ ಗಳನ್ನು ಅಳವಡಿಸಿಕೊಂಡಿದ್ದು, ಇದರಿಂದಲೂ ಮಂಗಗಳು ತೋಟದ ಹತ್ತಿರ ಬರದಂತೆ ತಡೆಯುತ್ತಿದ್ದಾರೆ.

    ಮಲೆನಾಡಿನ ಭಾಗದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಈ ಕುರಿತು ಸರ್ಕಾರ ಸಹ ಕ್ರಮ ಕೈಗೊಳ್ಳಲು ಮುಂದಾಗಿದೆ. ಅರಣ್ಯ ಪ್ರದೇಶದಲ್ಲಿ ಮಂಕಿ ಪಾರ್ಕ್ ನಿರ್ಮಿಸಿ ಅಲ್ಲಿಯೇ ಮಂಗಗಳ ವಾಸಕ್ಕೆ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಈ ಕುರಿತು ಕಾರ್ಯ ಪ್ರಗತಿಯಲ್ಲಿದ್ದು, ಕೆಲವೇ ತಿಂಗಳಲ್ಲಿ ಮಂಕಿ ಪಾರ್ಕ್ ನಿರ್ಮಾಣವಾಗಲಿದೆ.

  • ಸಿಕ್ಕಸಿಕ್ಕವರನ್ನು ಕಚ್ಚಿ, ದಾಳಿ ಮಾಡ್ತಿರೋ ವಾನರ ಸೇನೆ

    ಸಿಕ್ಕಸಿಕ್ಕವರನ್ನು ಕಚ್ಚಿ, ದಾಳಿ ಮಾಡ್ತಿರೋ ವಾನರ ಸೇನೆ

    – 8ರಿಂದ 10 ಮಂದಿ ಮೇಲೆ ದಾಳಿ

    ಬೀದರ್: ದರೋಡೆಕೋರರಿಗೆ ಹೆದರಿ ಜನರು ಮನೆಯಿಂದ ಹೊರಗೆ ಬಾರದ ಪ್ರಕರಣ ಬಗ್ಗೆ ಕೇಳಿರುತ್ತೇವೆ, ನೋಡಿರುತ್ತೇವೆ. ಆದರೆ ಬೀದರ್‌ನ ಗ್ರಾಮವೊಂದರಲ್ಲಿ ಮಂಗಗಳಿಗೆ ಹೆದರಿ ಗ್ರಾಮಸ್ಥರು ಮನೆಯಲ್ಲಿ ಕೂರುವಂತ ಸ್ಥಿತಿ ನಿರ್ಮಾಣವಾಗಿದೆ.

    ಹೌದು ಜಿಲ್ಲೆಯ ಭಾಲ್ಕಿ ತಾಲೂಕಿನ ಜವಳಗಾ ಗ್ರಾಮಸ್ಥರು ಮಂಗಗಳ ಹಾವಳಿಗೆ ಹೆದರಿ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಜವಳಗಾ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಸುಮಾರು 2 ತಿಂಗಳಲ್ಲಿ ಗ್ರಾಮದ 8 ರಿಂದ 10 ಮಂದಿ ಮೇಲೆ ಮಂಗಗಳು ಕಚ್ಚಿ, ದಾಳಿ ನಡೆಸಿವೆ. ರಸ್ತೆಯಲ್ಲಿ ಓಡಾಡುವ ಜನರ ಮೇಲೆ ಕಾರಣವಿಲ್ಲದೆ ಮಂಗಗಳು ದಾಳಿ ಮಾಡುತ್ತಿವೆ. ಜನರನ್ನು ಕಂಡರೆ ಸಾಕು ಅವರ ಮೇಲೆ ಎಗರಿ, ಕಚ್ಚಿ ಗಾಯಗೊಳಿಸುತ್ತಿವೆ. ಆದ್ದರಿಂದ ಮಂಗಗಳು ಯಾವಾಗ? ಯಾರ ಮೇಲೆ ದಾಳಿ ಮಾಡುತ್ತವೋ ಎನ್ನುವ ಭಯದಲ್ಲಿ ಇಲ್ಲಿನ ಜನರು ಬದುಕುತ್ತಿದ್ದಾರೆ.

    ಈ ಗ್ರಾಮದ ಜನರು ವಾನರ ಸೈನ್ಯದ ದಾಳಿಗೆ ಹೆದರಿ ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಮಂಗಗಳು ಹಿಂಡು ಹಿಂಡಾಗಿ ಬಂದು ಜನರ ಮೇಲೆ ದಾಳಿ ಮಾಡುತ್ತಿದ್ದು, ಗಾಯಗಳಿಗೆ 15-20 ಹೊಲಿಗೆಗಳು ಹಾಕುವ ರೀತಿ ತೀವ್ರವಾಗಿ ಮಂಗಗಳು ಜನರನ್ನು ಗಾಸಿಗೊಳಿಸುತ್ತಿದೆ. ದರೋಡೆಕೋರು ಚಾಕುವಿನಿಂದ ಭೀಕರವಾಗಿ ಹಲ್ಲೆ ಮಾಡುವ ರೀತಿ ಮಂಗಗಳು ಜನರ ಮೇಲೆ ದಾಳಿ ಮಾಡುತ್ತಿವೆ.

    ಸತತ ಎರಡು ತಿಂಗಳಿನಿಂದ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಜನರ ಮೇಲೆ ದಾಳಿ ಮಾಡುತ್ತಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ಕ್ರಮ ತೆಗೆದುಕೊಂಡು ಮಂಗಗಳ ಕಾಟದಿಂದ ಮುಕ್ತಿಗೊಳಿಸಿ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

  • ಮಂಗಗಳ ಪಾರ್ಕ್ ನಿರ್ಮಾಣದಿಂದ ಯುವಕರ ವಲಸೆ ತಪ್ಪಲಿದೆ – ಅರಗ ಜ್ಞಾನೇಂದ್ರ

    ಮಂಗಗಳ ಪಾರ್ಕ್ ನಿರ್ಮಾಣದಿಂದ ಯುವಕರ ವಲಸೆ ತಪ್ಪಲಿದೆ – ಅರಗ ಜ್ಞಾನೇಂದ್ರ

    ಬೆಂಗಳೂರು: ಮಂಗಗಳ ಪಾರ್ಕ್ ನಿರ್ಮಾಣದಿಂದಾಗಿ ಕೃಷಿ ಬಿಟ್ಟು ಪಟ್ಟಣಗಳಿಗೆ ವಲಸೆ ಬರುತ್ತಿರುವ ಯುವಕರನ್ನು ತಡೆಯಬಹುದಾಗಿದೆ ಎಂದು ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಅಭಿಪ್ರಾಯಪಟ್ಟಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ರೀತಿಯ ಪ್ರಾಣಿಗಳ ತೊಂದರೆಯಿಂದ ಯುವ ಸಮೂಹ ಕೃಷಿ ಮಾಡದೇ ಪಟ್ಟಣಗಳಿಗೆ ವಲಸೆ ಬರುತ್ತಿದ್ದಾರೆ. ಆ ಭಾಗದಲ್ಲಿ ಪ್ರಾಣಿಗಳ ಸಂತತಿ ತುಂಬಾ ಹೆಚ್ಚಾಗಿದೆ. ವಿಶೇಷವಾಗಿ ಕಾಡುಕೋಣ, ಮಂಗ ಹಾಗೂ ಹಂದಿ ಸಾಕಷ್ಟು ಹಾನಿ ಮಾಡುತ್ತಿವೆ ಎಂದು ವಿವರಿಸಿದರು. ಇದನ್ನೂ ಓದಿ: ಮಲೆನಾಡಿನಲ್ಲಿ ಹೆಚ್ಚುತ್ತಿದೆ ಮಂಗಗಳ ಹಾವಳಿ – ತೋಟ ಆಯ್ತು, ಈಗ ಮನೆಗೆ ಪ್ರವೇಶ

    ಬೇಸಾಯದ ಬದುಕನ್ನು ಹಾಳು ಮಾಡುತ್ತಿರುವ ಪ್ರಾಣಿಗಳ ಬಗ್ಗೆ ಸಭೆ ನಡೆಸಿದ್ದಾರೆ. ಈ ವೇಳೆ ಮಲೆನಾಡು ಭಾಗದಲ್ಲಿ ಮಂಗನ ಪಾರ್ಕ್ ನಿರ್ಮಿಸಲು ಸಹ ಚರ್ಚಿಸಿದ್ದಾರೆ. ಮೂವರು ಮಂತ್ರಿಗಳು ಹಾಗೂ ಸಿಎಂ ಸೇರಿದಂತೆ ರೈತ ಮುಖಂಡರ ಸಭೆ ನಡೆಸಿದ್ದಾರೆ. ಆದರೆ ಮಂಗನ ವಿಚಾರಕ್ಕೆ ಇಷ್ಟೊಂದು ದೊಡ್ಡ ಮಟ್ಟದ ಸಭೆಯೇ ಎಂದು ಕೆಲವರು ಕೇಳಿದ್ದಾರೆ. ರೈತರ ಕಷ್ಟ ಇವರಿಗೇನು ಗೊತ್ತು ಎಂದು ಪ್ರಶ್ನಿಸಿದ್ದಾರೆ.

    ಮಂಗಗಳು ಗಿಡಬಳ್ಳಿಗಳನ್ನು ಹಾಳು ಮಾಡುತ್ತಿವೆ. ಮಂಗಗಳ ಹಾವಳಿಯಿಂದ ಏಲಕ್ಕಿ ಹಾಳಾಗುತ್ತಿದೆ. ಪ್ರಾಣಿಗಳ ಹಾವಳಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ 2 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ. ನಮ್ಮ ಕಷ್ಟವನ್ನು ಅರ್ಥ ಮಾಡಿಕೊಂಡಿರುವುದರಿಂದ ಸಿಎಂ ಸಭೆ ಮಾಡಿದ್ದಾರೆ ಎಂದರು.

    ಕಾಡುಕೋಣಗಳಿಂದ ಬೆಳೆ ಹಾಳಾಗದಂತೆ ತಡೆಯಲು ಸರ್ಕಾರವೇ ಸೋಲಾರ್ ಫೆನ್ಸ್ ಮಾಡಿಕೊಡಬೇಕು. ಸೋಲರ್ ಫೆನ್ಸ್ ಗಳಿಂದ ಬೆಳೆ ರಕ್ಷಣೆ ಮಾಡಬಹುದು. ಅಲ್ಲದೆ ಮಂಗಗಳ ಹಾವಳಿ ತಡೆಯಲು ಮಂಕಿ ಪಾರ್ಕ್ ಅಗತ್ಯವಿದೆ. ಈ ಕುರಿತು ಈಗಾಗಲೇ ಮನವಿ ಮಾಡಿದ್ದೇವು. ಈ ಕುರಿತು ಮುಖ್ಯಮಂತ್ರಿಗಳು ಸಭೆ ಕರೆದು ಚರ್ಚಿಸಿದ್ದಾರೆ ಎಂದರು.

    ಹೊಸನಗರ ತಾಲೂಕಿನ ನಾಗೋಡಿಯಲ್ಲಿ ಮಂಕಿ ಪಾರ್ಕ್ ನಿರ್ಮಾಣಕ್ಕೆ 100 ಎಕರೆಗೆ ಸರ್ಕಾರ ಒಪ್ಪಿದೆ. ಮಂಗಗಳನ್ನು ಆ ಪಾರ್ಕಿನಲ್ಲಿ ಹಾಕುವುದರಿಂದ ಅವುಗಳನ್ನು ರಕ್ಷಣೆ ಮಾಡಿದಂತೆ ಆಗುತ್ತದೆ. ಅಲ್ಲದೆ ರೈತರಿಗೆ ಇದರಿಂದ ಭಾರೀ ಅನುಕೂಲವಾಗಲಿದೆ. ಬೆಳೆ ನಷ್ಟ ತಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.

    ನಾಗೋಡಿಯಲ್ಲಿ ಜಮೀನು ಗುರುತಿಸಲು ಜಿಲ್ಲಾಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ. ಹಣವನ್ನು ಸರ್ಕಾರ ನೀಡುತ್ತದೆ. ಇದರ ಬಗ್ಗೆ ವರದಿ ನೀಡಬೇಕಿದೆ ಎಂದರು.

  • ಮಲೆನಾಡಿನಲ್ಲಿ ಹೆಚ್ಚುತ್ತಿದೆ ಮಂಗಗಳ ಹಾವಳಿ – ತೋಟ ಆಯ್ತು, ಈಗ ಮನೆಗೆ ಪ್ರವೇಶ

    ಮಲೆನಾಡಿನಲ್ಲಿ ಹೆಚ್ಚುತ್ತಿದೆ ಮಂಗಗಳ ಹಾವಳಿ – ತೋಟ ಆಯ್ತು, ಈಗ ಮನೆಗೆ ಪ್ರವೇಶ

    – ಮಂಕಿ ಪಾರ್ಕ್ ಸ್ಥಾಪನೆಗೆ ಆಗ್ರಹ

    ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಮಂಗಗಳ ಕಾಟ ವಿಪರೀತವಾಗುತ್ತಿದ್ದು, ಬೆಳೆಗಳನ್ನು ರಕ್ಷಿಸಿಕೊಳ್ಳುವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ.

    ಅತೀವೃಷ್ಟಿಯಿಂದ ಕಂಗೆಟ್ಟ ರೈತರಿಗೆ ಮಂಗಗಳ ಕಾಟ ಇನ್ನೊಂದು ರೀತಿಯ ಸವಾಲಾಗಿದ್ದು, ಬೆಳೆಗಳನ್ನು ರಕ್ಷಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ದಶಕದಿಂದಲೂ ಮಂಗಗಳ ಕಾಟವಿದ್ದು, ಕಳೆದೆರಡು ವರ್ಷಗಳಿಂದ ಮಿತಿಮೀರಿದೆ.

    ಮಂಗಗಳು ತೋಟ, ಗದ್ದೆಗಳಿಗೆ ಲಗ್ಗೆ ಇಡುತ್ತಿದ್ದು, ಮನುಷ್ಯರ ಭಯವೇ ಇಲ್ಲದಂತೆ ಮನೆಯೊಳಕ್ಕೆ ನುಗ್ಗಲಾರಂಭಿಸಿವೆ. ಮಲೆನಾಡು ಭಾಗದಲ್ಲಿ ಬೆರಳೆಣಿಕೆಯಷ್ಟಿದ್ದ ಕೆಂಪು ಮೂತಿ ಮಂಗಗಳ ಸಂಖ್ಯೆ ಇಂದು ಹತ್ತಾರು ಪಟ್ಟು ಹೆಚ್ಚಿದೆ. ತಂಡೋಪತಂಡವಾಗಿ ಕೃಷಿ ಜಮೀನಿಗೆ ನುಗ್ಗಿ, ಫಸಲನ್ನು ಹಾಳು ಮಾಡುವ ಮಂಗಗಳು ಜಿಲ್ಲೆಯ ಅನ್ನದಾತರನ್ನು ಹೈರಣಾಗಿಸಿದೆ.

    ಮಲೆನಾಡಿನ ತೀರ್ಥಹಳ್ಳಿ, ಸಾಗರ ಹಾಗೂ ಹೊಸನಗರ ಭಾಗದ ಅರಣ್ಯದಂಚಿನ ರೈತರು ತಮ್ಮ ಬೆಳೆಗಳನ್ನು ಮಂಗಗಳ ಕಾಟದಿಂದ ಕಳೆದುಕೊಂಡು ಕಂಗಾಲಾಗಿದ್ದಾರೆ. ಅಡಿಕೆ, ಎಳನೀರು, ಶುಂಠಿ, ತರಕಾರಿಗಳನ್ನು ಕಿತ್ತು ತಿನ್ನುವ ಮಂಗಗಳು, ಬಾಳೆಮರದ ಮೊಳಕೆಗಳನ್ನು ಸಹ ಬಿಡುತ್ತಿಲ್ಲ. ನಾಯಿ, ಏರ್‍ಗನ್, ಪಟಾಕಿಗಳ ಸದ್ದಿಗೆ ಕ್ಯಾರೇ ಎನ್ನದ ಮಂಗಗಳ ಉಪಟಳ ಇಂದು ರೈತರ ನಿದ್ದೆಗೆಡಿಸಿವೆ. ಕೆಲವು ಬೆಳೆಗಳನ್ನು ಎಳವೆಯಲ್ಲಿಯೇ ಕಿತ್ತು ತಿಂದರೆ, ಇನ್ನೇನು ಫಸಲು ಕಟಾವಿಗೆ ಬರಬೇಕು ಎನ್ನುವ ಹಂತದಲ್ಲಿ ಏಕಾಏಕಿ ದಾಳಿ ಬೆಳೆಗಳನ್ನು ನಾಶ ಮಾಡುತ್ತಿವೆ.

    ಬಯಲು ಸೀಮೆ ಪ್ರದೇಶಗಳಲ್ಲಿ ಸೆರೆ ಹಿಡಿದ ಮಂಗಗಳನ್ನು ಸಹ ಮಲೆನಾಡಿಗೆ ತಂದು ಬಿಡುತ್ತಿರುವುದು ಇಲ್ಲಿನ ರೈತರಿಗೆ ಮತ್ತಷ್ಟು ತಲೆ ನೋವಾಗಿ ಪರಿಣಮಿಸಿದೆ. ಸಮಸ್ಯೆಯ ಬಗ್ಗೆ ಅರಣ್ಯ ಇಲಾಖೆ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ರೈತರು ಆರೋಪಿಸಿದ್ದಾರೆ.

    ಮಂಗಗಳ ಉಪಟಳಕ್ಕೆ ಇತಿಶ್ರೀ ಹಾಡಲು ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ದೆಹಲಿ, ಅಸ್ಸಾಂ ರಾಜ್ಯಗಳಲ್ಲಿ ಸ್ಥಾಪಿಸಿರುವ ಮಾದರಿಯಲ್ಲಿ ಮಂಕಿ ಪಾರ್ಕ್ ಸ್ಥಾಪನೆ ಮಾಡಬೇಕು. ಮಂಗಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಬೇಕು ಎನ್ನುವ ಬೇಡಿಕೆಯನ್ನೂ ಇಟ್ಟಿದ್ದಾರೆ. ಅರಣ್ಯ ಕಾಯ್ದೆಯಡಿಯಲ್ಲಿ ಈ ಮಂಗಗಳಿಗೆ ಮಕಾಕ ರೆಡಿಯಾಟ್ ಎಂದು ಹೆಸರಿಸಿದರೆ ಈ ಮಂಗಗಳು ವನ್ಯಜೀವಿ ವ್ಯಾಪ್ತಿಯಲ್ಲಿ ಬರಲಿದ್ದು ಇದಕ್ಕೆ ಕೂಡಲೇ ಸರ್ಕಾರ ಪರಿಹಾರ ಸೂಚಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

    ಮಲೆನಾಡಿನಲ್ಲಿ ಅಡಕೆ ಹಾಗೂ ಇತರ ಪ್ರಮುಖ ಬೆಳೆ ಬೆಳೆಯುವವರಿಗೆ ಮಂಗಗಳ ಹಾವಳಿ ಶಾಪವಾಗಿ ಪರಿಣಮಿಸಿದ್ದು, ಶೇ.30 ರಿಂದ 50ರಷ್ಟು ಬೆಳೆ ನಷ್ಟವಾಗುತ್ತಿದೆ. ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಮೂಲಕ ಮಲೆನಾಡಿನಲ್ಲಿ ಕಾಣಿಸಿಕೊಂಡಿರುವ ಮಂಗನ ಖಾಯಿಲೆ ತಡೆಗಟ್ಟುವಿಕೆಗೂ ಇದು ಸಹಕಾರಿಯಾಗಲಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.