Tag: ಭೋಪಾಲ್ ಅನಿಲ ದುರಂತ

  • ಭೋಪಾಲ್‌ ಅನಿಲ ದುರಂತಕ್ಕೆ 39 ವರ್ಷ – ಇನ್ನೂ ಮಾಸಿಲ್ಲ 3,000ಕ್ಕೂ ಹೆಚ್ಚು ಜನರನ್ನ ಬಲಿ ಪಡೆದ ಕಹಿ ನೆನಪು

    ಭೋಪಾಲ್‌ ಅನಿಲ ದುರಂತಕ್ಕೆ 39 ವರ್ಷ – ಇನ್ನೂ ಮಾಸಿಲ್ಲ 3,000ಕ್ಕೂ ಹೆಚ್ಚು ಜನರನ್ನ ಬಲಿ ಪಡೆದ ಕಹಿ ನೆನಪು

    – ಚುನಾವಣಾ ಫಲಿತಾಂಶದ ಹೊತ್ತಿನಲ್ಲಿ ಸಿಎಂ ಶ್ರದ್ಧಾಂಜಲಿ ಸಲ್ಲಿಕೆ

    ಭೋಪಾಲ್‌: ಮಧ್ಯಪ್ರದೇಶದ ಚುನಾವಣಾ ಫಲಿತಾಂಶದ ಹೊತ್ತಿನಲ್ಲಿ ಹಾಲಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, 1984ರ ಡಿಸೆಂಬರ್‌ 2ರ ತಡರಾತ್ರಿ ನಡೆದ ಭೀಕರ ಅನಿಲ ದುರಂತವನ್ನು ನೆನಪಿಸಿಕೊಂಡಿದ್ದಾರೆ. ಅಂದು ದುರ್ಮರಣ ಹೊಂದಿದ 3 ಸಾವಿರಕ್ಕೂ ಹೆಚ್ಚು ಮಂದಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ಅಂದು ಮಡಿದ ಜನರಿಗೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಅಂತಹ ದುರಂತ ಮತ್ತೆಂದಿಗೂ ಮರುಕಳಿಸಬಾರದು. ಅದಕ್ಕಾಗಿ ನಿರಂತರವಾಗಿ ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: Madhya Pradesh: ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಸಿಎಂ ಅಭಿನಂದನೆ ಪೋಸ್ಟರ್‌ ಹಾಕಿದ ಕಾಂಗ್ರೆಸ್‌

    ಸಾವಿರಾರು ಜೀವಗಳನ್ನ ಬಲಿ ಪಡೆದ ದುರಂತ:
    1984ರ ಡಿ. 2ರ ಮಧ್ಯ ರಾತ್ರಿ (ಡಿಸೆಂಬರ್‌ 3ರ ಹೊತ್ತಿಗೆ) ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ವಿಷಕಾರಿ ಮಿಥೇಲ್ ಐಸೊಸೈನೇಟ್ (Methyl Isocyanate) ಅನಿಲವು ಸೋರಿಕೆಯಾಗಿತ್ತು. ಇದರಿಂದ ಉಂಟಾದ ಅನಾಹುತದಲ್ಲಿ ಸರಿಸುಮಾರು 3,800 ಮಂದಿ ಜೀವ ಕಳೆದುಕೊಂಡರು. 1 ಲಕ್ಷಕ್ಕೂ ಹೆಚ್ಚು ಜನರಿಗೆ ಆರೋಗ್ಯ ಸಮಸ್ಯೆ ಉಂಟಾಗಿತ್ತು. 5 ಲಕ್ಷಕ್ಕೂ ಹೆಚ್ಚು ಮಂದಿ ವಿಷಾನೀಲ ಸೇವಿಸಿದ್ದ ಪರಿಣಾಮ ಹೆಚ್ಚು ಜನರ ಮೇಲೆ ದೀರ್ಘಕಾಲದ ಆರೋಗ್ಯ ಪರಿಣಾಮ ಉಂಟು ಮಾಡಿತ್ತು. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ: ನರೋತ್ತಮ ಮಿಶ್ರಾ

    ಯುಎನ್ ಕಾರ್ಮಿಕ ಸಂಸ್ಥೆ, ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ILO) ಬಿಡುಗಡೆ ಮಾಡಿದ 2020ರ ವರದಿಯು, 1984 ರಲ್ಲಿ ಭೋಪಾಲ್‌ನಲ್ಲಿನ ಯೂನಿಯನ್ ಕಾರ್ಬೈಡ್ ಕೀಟನಾಶಕ ಘಟಕದಿಂದ ಬಿಡುಗಡೆಯಾದ ಕನಿಷ್ಠ 30 ಟನ್ ಮೀಥೈಲ್ ಐಸೊಸೈನೇಟ್ ವಿಷ ಅನಿಲವು 6 ಲಕ್ಷಕ್ಕೂ ಹೆಚ್ಚು ಮಂದಿ ಮೇಲೆ ಪರಿಣಾಮ ಬೀರಿತು ಎಂಬ ಅಂಶವನ್ನು ಉಲ್ಲೇಖಿಸಿತ್ತು. ನಂತರ ಈ ದುರಂತವು 1919ರ ನಂತರ ನಡೆದ ವಿಶ್ವದ ಪ್ರಮುಖ ಕೈಗಾರಿಕಾ ಅಪಘಾತಗಳ ಪಟ್ಟಿಯನ್ನು ಸೇರಿತು.

    ನಂತರದ ವರ್ಷಗಳಲ್ಲಿ ಸರ್ಕಾರವು ದಾಖಲಿಸಿದ ಅಂಕಿ-ಅಂಶಗಳಲ್ಲಿ ಸುಮಾರು 15,000 ಸಾವುಗಳು ಸಂಭವಿಸಿದೆ ಎಂದು ಅಂದಾಜಿಸಲಾಗಿತ್ತು. ದುರಂತದಲ್ಲಿ ಬದುಕುಳಿದವರು ಉಸಿರಾಟ ಕಾಯಿಲೆ, ಅಂಗಾಗಳ ವೈಫಲ್ಯ, ಮಧುಮೇಹ ಇನ್ನಿತರ ಕಾಯಿಲೆಗಳಿಗೆ ತುತ್ತಾದರು ಎಂಬ ಅಂಶವನ್ನೂ ದಾಖಲಿಸಲಾಗಿತ್ತು. ಆದ್ರೆ ಇಂದಿಗೂ ಬದುಕುಳಿದ ಕೆಲ ಸಂತ್ರಸ್ತರಲ್ಲಿ ಕಾಯಿಲೆಗಳು ವಾಸಿಯಾಗಿಲ್ಲ ಎಂದು ಕಣ್ಣೀರಿಡುತ್ತಿದ್ದಾರೆ ಸ್ಥಳೀಯರು. ಇದನ್ನೂ ಓದಿ: ರಾಜಸ್ಥಾನದಲ್ಲಿ ಈ ಬಾರಿಯೂ ಕಾಂಗ್ರೆಸ್‌ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ: ಅಶೋಕ್‌ ಗೆಹ್ಲೋಟ್‌ ವಿಶ್ವಾಸ

  • ಭೋಪಾಲ್ ಅನಿಲ ದುರಂತ – ಸುಪ್ರೀಂ ಕೋರ್ಟ್‍ನಲ್ಲಿ ಕೇಂದ್ರಕ್ಕೆ ಭಾರೀ ಹಿನ್ನಡೆ

    ಭೋಪಾಲ್ ಅನಿಲ ದುರಂತ – ಸುಪ್ರೀಂ ಕೋರ್ಟ್‍ನಲ್ಲಿ ಕೇಂದ್ರಕ್ಕೆ ಭಾರೀ ಹಿನ್ನಡೆ

    ನವದೆಹಲಿ: ಭೋಪಾಲ್ ಅನಿಲ ದುರಂತ ಪ್ರಕರಣದ (Bhopal Gas Tragedy) ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ (compensation) ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಕೇಂದ್ರಕ್ಕೆ ಭಾರೀ ಹಿನ್ನಡೆ ಉಂಟಾಗಿದೆ. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ವಜಾಗೊಳಿಸಿದೆ.

    ಭೋಪಾಲ್‍ನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ 1984ರಲ್ಲಿ ವಿಷಕಾರಿ ಮೀಥೈಲ್ ಐಸೊಸೈನೇಟ್ ಅನಿಲ ಸೋರಿಕೆಯಾಗಿತ್ತು. ಈ ಅನಿಲ ದುರಂತದಲ್ಲಿ 3,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಈ ದುರಂತ ವಿಶ್ವದ ಅತ್ಯಂತ ಕೆಟ್ಟ ಕೈಗಾರಿಕಾ ವಿಪತ್ತುಗಳಲ್ಲಿ ಒಂದಾಗಿತ್ತು.

    ಈ ಪ್ರಕರಣವನ್ನು ಮತ್ತೆ ತೆರೆಯಬೇಕು. ಅನಿಲ ಸೋರಿಕೆಯಿಂದ ತೊಂದರೆಗೀಡಾದ ಸಂತ್ರಸ್ತರಿಗೆ ಹೆಚ್ಚುವರಿಯಾಗಿ 7,844 ಕೋಟಿ ರೂ.ವನ್ನು ಅಮೆರಿಕ ಮೂಲದ ಯೂನಿಯನ್ ಕಾರ್ಬೈಡ್‍ನ ಉತ್ತರಾಧಿಕಾರಿ ಸಂಸ್ಥೆಗಳು ನೀಡಬೇಕು ಎಂದು ಕೇಂದ್ರವು ಸುಪ್ರೀಂ ಕೋರ್ಟ್‍ನ ಮೊರೆ ಹೋಗಿತ್ತು. ಅಷ್ಟೇ ಅಲ್ಲದೇ ಅನಿಲ ದುರಂತದಿಂದ ಜೀವ ಹಾನಿ ಮತ್ತು ಪರಿಸರಕ್ಕೆ ಅಗಾಧ ಪ್ರಮಾಣದಲ್ಲಿ ಹಾನಿ ಉಂಟಾಗಿದೆ ಎಂದು ವಾದಿಸಿತ್ತು.

    ಪ್ರಕರಣವನ್ನು ಆಲಿಸಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಅಭಯ್ ಎಸ್ ಓಕಾ, ವಿಕ್ರಮ್‍ನಾಥ್ ಮತ್ತು ಜೆ.ಕೆ ಮಹೇಶ್ವರಿ ಅವರನ್ನು ಒಳಗೊಂಡ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಅರ್ಜಿಗೆ ಸಂಬಂಧಿಸಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ. ಯೂನಿಯನ್ ಕಾರ್ಬೈಡ್ ಕಾರ್ಪೋರೇಷನ್ ಸಂಸ್ಥೆಗೆ ಹೆಚ್ಚಿನ ಹೊಣೆಗಾರಿಕೆಯನ್ನು ಹೊರಿಸುವುದು ಅಗತ್ಯವಿಲ್ಲ. ಪ್ರಕರಣವನ್ನು ಮರು ಆರಂಭಿಸುವುದು ಮತ್ತಷ್ಟು ಜಟಿಲತೆಗೆ ಕಾರಣವಾಗುವುದಲ್ಲದೆ, ಅರ್ಹ ಸಂತ್ರಸ್ತರಿಗೆ ತೊಂದರೆಯುಂಟು ಮಾಡಲಿದೆ ಎಂದಿದೆ.

    ವಂಚನೆ ನಡೆದರೆ ಮಾತ್ರ ಪರಿಹಾರವನ್ನು ನೀಡುವುದರ ಬಗ್ಗೆ ಯೋಚಿಸಬಹುದು. ಆದರೆ ಕೇಂದ್ರವು ಈ ವಿಷಯದಲ್ಲಿ ವಾದಿಸಿಲ್ಲ. 2 ದಶಕಗಳ ನಂತರವೂ ಈ ವಿಷಯವನ್ನು ಪ್ರಸ್ತಾಪಿಸಲು ಕೇಂದ್ರವು ಯಾವುದೇ ತರ್ಕವನ್ನು ಒದಗಿಸಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

    ಹೆಚ್ಚಿನ ಪರಿಹಾರದ ಹೊಣೆಗಾರಿಯನ್ನು ಯುಸಿಸಿ ಮೇಲೆ ವಿಧಿಸುವ ಅಗತ್ಯ ಕಾಣುತ್ತಿಲ್ಲ. ಸಂತ್ರಸ್ತರಿಗೆ ಪ್ರಮಾಣಾನುಗುಣವಾಗಿ ಇದಾಗಲೇ 6 ಬಾರಿ ಪರಿಹಾರವನ್ನು ವಿತರಿಸಲಾಗಿದೆ. ಭೋಪಾಲ್ ಅನಿಲ ದುರಂತ ಸಂತ್ರಸ್ತರ ಅಗತ್ಯವನ್ನು ಪೂರೈಸಲು ಆರ್‍ಬಿಐ ಬಳಿ ಇದಾಗಲೇ 50 ಕೋಟಿ ರೂ.ವನ್ನು ಇರಿಸಲಾಗಿದೆ. ಕೇಂದ್ರ ಸರ್ಕಾರವು ಬಾಕಿ ಉಳಿದಿರುವ ಕ್ಲೈಮ್‍ಗಳನ್ನು ಪೂರೈಸಲು ಬಳಸಿಕೊಳ್ಳಬೇಕು. ಒಂದೊಮ್ಮೆ ಪ್ರಕರಣವನ್ನು ಮರು ಆರಂಭಿಸಿದರೆ ಅದು ಮತ್ತಷ್ಟು ಜಟಿಲತೆಗೆ ಸಿಲುಕಬಹುದು. ಯುಸಿಸಿಗೆ ಅನುಕೂಲಕರವಾಗಿ ಪರಿಣಮಿಸಲಿದೆ. ಇದರಿಂದ ಸಂತ್ರಸ್ತರಿಗೆ ತೊಡಕಾಗಲಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

    ಭೋಪಾಲ್ ಅನಿಲ ದುರಂತಕ್ಕೆ ಸಂಬಂಧಸಿ ಆಗಿನ ಯೂನಿಯನ್ ಕಾರ್ಬೈಡ್ ಅಧ್ಯಕ್ಷ ವಾರೆನ್ ಆಂಡರ್ಸನ್ ಪ್ರಮುಖ ಆರೋಪಿಯಾಗಿದ್ದ. ಆದರೆ ವಿಚಾರಣೆಗೆ ಹಾಜರಾಗಲಿಲ್ಲ. 1992ರಲ್ಲಿ ಭೋಪಾಲ್ ನ್ಯಾಯಾಲಯವು ಆತನನ್ನು ಪರಾರಿ ಎಂದು ಘೋಷಿಸಿತ್ತು. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಟಿಕೆಟ್ ಫೈಟ್- ದೆಹಲಿಯಲ್ಲಿ ದಲಿತ ಎಡ ನಾಯಕರ ಠಿಕಾಣಿ

    2014ರಲ್ಲಿ ಆಂಡರ್ಸನ್ ಸಾಯುವ ಮೊದಲು ಎರಡು ಜಾಮೀನು ರಹಿತ ವಾರಂಟ್‍ಗಳನ್ನು ಹೊರಡಿಸಲಾಗಿತ್ತು. 2010ರ ಜೂನ್ 7ರಂದು, ಭೋಪಾಲ್ ನ್ಯಾಯಾಲಯವು ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್‍ನ 7 ಅಧಿಕಾರಿಗಳಿಗೆ 7 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಇದನ್ನೂ ಓದಿ: ಸುದ್ದಿಗೋಷ್ಠಿಯಲ್ಲಿ ಸೋಮಣ್ಣ ಕಣ್ಣೀರು – ಬಿಜೆಪಿ ಬಿಡಲ್ಲ ಎಂದು ಸ್ಪಷ್ಟನೆ