Tag: ಭೋಜೇಗೌಡ

  • ಅಂಗಾರ ವಿರುದ್ಧ ಭೋಜೇಗೌಡ ಕಿಡಿ – ಡಿಸಿ ಕಚೇರಿ ಬಳಿ ಏಕಾಂಗಿ ಪ್ರತಿಭಟನೆ

    ಅಂಗಾರ ವಿರುದ್ಧ ಭೋಜೇಗೌಡ ಕಿಡಿ – ಡಿಸಿ ಕಚೇರಿ ಬಳಿ ಏಕಾಂಗಿ ಪ್ರತಿಭಟನೆ

    ಚಿಕ್ಕಮಗಳೂರು: ಜಿಲ್ಲಾಡಳಿತ ನನ್ನನ್ನು ನಿರ್ಲಕ್ಷ್ಯ ಮಾಡಿದೆ. ಜಿಲ್ಲಾಧಿಕಾರಿ ಉದ್ದೇಶ ಪೂರ್ವಕವಾಗಿ ಮಾಡಿದ್ದರೆ ಪ್ರಿವಿಲೇಜ್ ಮೂವ್ ಮಾಡಿ ಏನೆಂದು ತೋರಿಸುತ್ತಿದ್ದೆ. ಆದರೆ, ಇಲ್ಲಿ ಜಿಲ್ಲಾಧಿಕಾರಿಯನ್ನು ರಾಜಕಾರಣದ ಕೈಗೊಂಬೆ ಮಾಡಿಕೊಂಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ ಭೋಜೇಗೌಡರು, ಇಂದು ಜಿಲ್ಲಾಡಳಿತ ನನ್ನನ್ನು ನಿರ್ಲಕ್ಷ್ಯ ಮಾಡಿದೆ. ಯಾವುದೇ ಸಭೆ-ಕಾರ್ಯಕ್ರಮಗಳಿಗೆ ಕರೆಯುವುದಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿಯಾಗಿ ಕೂತು ಪ್ರತಿಭಟನೆ ನಡೆಸಿದರು.

    ಜಿಲ್ಲಾ ಮಂತ್ರಿಗಳಿಗೆ ಪ್ರೋಟೋಕಾಲ್ ಏನೆಂದು ಗೊತ್ತಿಲ್ಲವೇ? ಎಂಟು ಬಾರಿ ಶಾಸಕರಾಗಿದ್ದಾರೆ, ನಾನು ಹೇಳಿಕೊಡಬೇಕಾ? ಒಂದು-ಎರಡು ಬಾರಿಯಲ್ಲ ಹಲವು ಬಾರಿ ಹೇಳಿದ್ದೇನೆ. ಅವರು ನಮಗೆ ಬುದ್ಧಿ ಹೇಳಬೇಕು. ಸರ್ಕಾರ ಅವರಿಗೆ ಜನರ ದುಡ್ಡಲ್ಲಿ ಎಲ್ಲಾ ಅಧಿಕಾರಿಗಳನ್ನು ನೀಡಿದೆ. ಕೈಗೊಬ್ಬ-ಕಾಲಿಗೊಬ್ಬ ಪಿಎಗಳು ಇದ್ದಾರೆ. ಪಿಎಗಳ ಮೂಲಕ ಶಾಸಕರಿಗೆ ನಿಮ್ಮ ಪ್ರವಾಸದ ಕಾರ್ಯಕ್ರಮವನ್ನು ತಿಳಿಸಲು ಆಗುವುದಿಲ್ಲವೇ? ನಿಮ್ಮ ತಿಂಗಳ ಪ್ರವಾಸದ ಕಾಪಿ ಹಾಕುವುದಿಲ್ಲವೇ, ಕಾರ್ಯಕ್ರಮದ ಕಾಪಿಯನ್ನು ಶಾಸಕರಿಗೆ ಏಕೆ ಕಳಿಸುವುದಿಲ್ಲ ಎಂದು ಸಚಿವ ಅಂಗಾರ ವಿರುದ್ಧ ಕಿಡಿಕಾರಿದ್ದಾರೆ.

    ಆರಂಭದಲ್ಲೇ ಜಿಲ್ಲಾ ಮಂತ್ರಿಗಳಿಗೂ ಹೇಳಿದ್ದೇನೆ. ಪ್ರಾಣೇಶ್ ಇದ್ದರೂ ನಿನ್ನದು ಬರಬೇಕು ಕಣಯ್ಯ ಎಂದಿದ್ದೇನೆ. ಅವರು ಉಪಸಭಾಪತಿ ಗೌರವವಿದೆ, ಸಮಾಧಾನದಲ್ಲಿ ಹೇಳಿದ್ದೇನೆ. ಅಧಿಕಾರಿಗಳ ಸಭೆಗಳಲ್ಲಿ ಭೋಜೇಗೌಡ ಇರುವುದಿಲ್ಲ ಸಭೆಯಲ್ಲಿ ಶಾಸಕರು, ಸಂಸದರು ಕೂತಾಗ ನಮಗೆ ಬೇರೆಯವರು ಕೇಳುತ್ತಾರೆ. ನಾನೊಬ್ಬ ಜನಪ್ರತಿನಿಧಿಯಾಗಿ ಸಭೆಗೆ ಹೋಗಿಲ್ಲ ಅಂದರೆ ಜನ ಏನೆಂದು ತಿಳಿದುಕೊಳ್ಳುತ್ತಾರೆ. ನೀವು ಶಿಷ್ಟಾಚಾರವನ್ನು ಪಾಲನೆ ಮಾಡಿದ್ದೀರಾ? ನಾನು ಶಾಸಕ ಅಲ್ವಾ. 6 ಜಿಲ್ಲೆ 39 ತಾಲೂಕಿನಲ್ಲಿ ನನಗೆ ಪ್ರೋಟೋಕಾಲ್ ಇದೆ ಎಂದು ಹೇಳಿದರು. ಇದನ್ನೂ ಓದಿ: ಉತ್ತಮ ಆಡಳಿತ ಕೊಡುವ ಮನೋಭಾವ ಇದ್ರೆ ಖಾತೆ ಕ್ಯಾತೆ ಬರಲ್ಲ- ಅಸಮಾಧಾನಿತರನ್ನು ಚಿವುಟಿದ ಅಂಗಾರ

    ಇದು ನನ್ನ ನೋಡೆಲ್ ಕ್ಷೇತ್ರ. ನಿಮ್ಮ ಗುಂಪುಗಾರಿಕೆ ಇದ್ದರೆ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ. ಜಿಲ್ಲಾ ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ ನನಗೆ ಅದು ಗೊತ್ತಿದೆ. ಆ ಶಾಸಕರು, ಈ ಶಾಸಕರನ್ನು ಕರೆಯಬಾರದು ಎಂದು ನಿಮ್ಮ ಗುಂಪುಗಾರಿಕೆಯಿಂದ ನಿಮ್ಮ ಪಕ್ಷದ ಕಚೇರಿಯಲ್ಲಿ ಅಥವಾ ಮನೆಯಲ್ಲಿ ಇಟ್ಟುಕೊಳ್ಳಿ ಎಂದು ಹೇಳಿ ಅಂಗಾರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

  • ವಿಶ್ರಾಂತಿಗಾಗಿ ಕಾಡಿನ ಮಧ್ಯೆ ಇರೋ ಕಾಫಿ ಎಸ್ಟೇಟ್ ಸೇರಿದ ಎಚ್‍ಡಿಕೆ

    ವಿಶ್ರಾಂತಿಗಾಗಿ ಕಾಡಿನ ಮಧ್ಯೆ ಇರೋ ಕಾಫಿ ಎಸ್ಟೇಟ್ ಸೇರಿದ ಎಚ್‍ಡಿಕೆ

    ಚಿಕ್ಕಮಗಳೂರು: ರಾಜಕೀಯ ಜಂಜಾಟದಿಂದ ಬೇಸತ್ತು, ವಿಶ್ರಾಂತಿಗಾಗಿ ಜೆಡಿಎಸ್ ನಾಯಕರೊಂದಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಚಿಕ್ಕಮಗಳೂರಿನ ಕಾಡಿನ ಮಧ್ಯದಲ್ಲಿ ಇರುವ ಕಾಫಿ ಎಸ್ಟೇಟ್‍ನಲ್ಲಿ ವಾಸ್ತವ್ಯ ಹೂಡಿದ್ದಾರೆ.

    ಉದ್ಯಮಿ ವಿ.ಜಿ ಸಿದ್ದಾರ್ಥ್ ಅವರ ಅಂತ್ಯಕ್ರಿಯೆಗೆ ಚಿಕ್ಕಮಗಳೂರಿಗೆ ಹೆಚ್‍ಡಿಕೆ ಆಗಮಿಸಿದ್ದರು. ಅಂದಿನಿಂದ ಚಿಕ್ಕಮಗಳೂರಿನಲ್ಲೇ ಮಾಜಿ ಸಿಎಂ ಇದ್ದಾರೆ. ಆತ್ಮೀಯ ಸ್ನೇಹಿತ ರಂಗನಾಥ್ ಅವರ ಮನೆಯಲ್ಲಿ ಹೆಚ್‍ಡಿಕೆ ವಾಸ್ತವ್ಯ ಹೂಡಿದ್ದಾರೆ.

    ಕೊಪ್ಪದ ಗುಡ್ಡೆತೋಟದಲ್ಲಿ ರಂಗನಾಥ್ ಅವರ ಮನೆಯಿದ್ದು ಅಲ್ಲಿಯೇ ಹೆಚ್‍ಡಿಕೆ ಅವರು ತಂಗಿದ್ದಾರೆ. ಅವರಿಗೆ ಮಾಜಿ ಸಚಿವ ಸಾ.ರಾ ಮಹೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಕೂಡ ಸಾಥ್ ನೀಡಿದ್ದಾರೆ.

    ಕೆಲ ದಿನಗಳಿಂದ ರಾಜ್ಯದಲ್ಲಿ ನಡೆದ ರಾಜಕೀಯ ಜಂಜಾಟದಿಂದ ಜೆಡಿಎಸ್ ನಾಯಕರು ರೋಸಿಹೋಗಿದ್ದರು. ಹೀಗಾಗಿ ಕಾಡಿನ ಮಧ್ಯೆ ಇರುವ ಕಾಫಿ ಎಸ್ಟೇಟ್‍ನಲ್ಲಿ ವಾಸ್ತವ್ಯ ಹೂಡಿ, ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

  • ಹಾಲು ಕುಡಿದವರೇ ಬದುಕಲ್ಲ, ಎಣ್ಣೆ ಕುಡಿದವ್ರು ಬದುಕ್ತಾರಾ: ಬಿಜೆಪಿಗೆ ಮಾತಿನಲ್ಲೇ ಕುಕ್ಕಿದ ಭೋಜೇಗೌಡ

    ಹಾಲು ಕುಡಿದವರೇ ಬದುಕಲ್ಲ, ಎಣ್ಣೆ ಕುಡಿದವ್ರು ಬದುಕ್ತಾರಾ: ಬಿಜೆಪಿಗೆ ಮಾತಿನಲ್ಲೇ ಕುಕ್ಕಿದ ಭೋಜೇಗೌಡ

    ಉಡುಪಿ: ರಾಮನಗರ ಬೆಳವಣಿಗೆ ಬಿಜೆಪಿಗೆ ನಮ್ಮ ಸಮ್ಮಿಶ್ರ ಸರ್ಕಾರದ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿಯ ಕೊಡುಗೆ ಅಂತ ವಿಧಾನಪರಿಷತ್ ಸದಸ್ಯ ಭೋಜೇಗೌಡ ವ್ಯಂಗ್ಯವಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಮನಗರ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿಗೆ 63ನೇ ರಾಜ್ಯೋತ್ಸವ ಕೊಡುಗೆ ಇದು. ದೀಪಾವಳಿ ಹಬ್ಬದ ಉಡುಗೊರೆಯನ್ನು ಫಲಿತಾಂಶದ ದಿನ ಸಮ್ಮಿಶ್ರ ಸರಕಾರ ಕೊಡುತ್ತದೆ. ಹಾಲು ಕುಡಿದವರೇ ಬದುಕಲ್ಲ, ವಿಷ ಕುಡಿದವರೇ ಬದುಕ್ತಾರೇನ್ರೀ? 1 ಲಕ್ಷ ಮತಗಳ ಅಂತರದಲ್ಲಿ ರಾಮನಗರದಲ್ಲಿ ಗೆಲ್ಲುತ್ತೇವೆ. ರಾಮನಗರದ ಬೆಳವಣಿಗೆಗೆ ಅಭ್ಯರ್ಥಿಯೇ ಮಾಸ್ಟರ್ ಮೈಂಡ್ ಎಂದು ಬಿಜೆಪಿಯವರಿಗೆ ಮಾತಿನಲ್ಲೇ ಕುಕ್ಕಿದರು.

    ಇದೇ ವೇಳೆ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಯಡಿಯೂರಪ್ಪ ಮಾತಿನ ಮೇಲೆ ನಿಗಾ ಇರಿಸಲಿ. ನಮ್ಮ ಅಭ್ಯರ್ಥಿಯನ್ನು ಕಂಡವರ ಮಕ್ಕಳೆಂದು ಹೇಳುತ್ತಾರೆ. ಮಧು ಬಂಗಾರಪ್ಪ ಕಂಡವರ ಮಕ್ಕಳಾ? ರಾಮನಗರದಲ್ಲಿ ಯಾರು ಯಾರ ಮಕ್ಕಳನ್ನು ತಂದು ನೀವು ನಿಲ್ಲಿಸಿದ್ರಿ? ಹುಟ್ಟಿಸಿ, ಬೆಳೆಸಿದ ವ್ಯಕ್ತಿಗೆ ನಾಮಕರಣ ಮಾಡಿದರೆ, ನಿಮ್ಮ ಮಕ್ಕಳಗಲ್ಲ ಸ್ವಾಮಿ ಅಂತ ದೂರಿದರು.

    ಬಿಜೆಪಿ ತಟ್ಟೆಯಲ್ಲಿ ಹೆಗ್ಗಣ ಸತ್ತಿದೆ. ಪಕ್ಕದ ತಟ್ಟೆಯ ನೋಣವನ್ನು ಕಂಡು ಹೀಯಾಳಿಸಬೇಡಿ. ಯಡಿಯೂರಪ್ಪ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ರಾಮನಗರ ಬೆಳವಣಿಗೆ ರಾಷ್ಟ್ರೀಯ ಪಕ್ಷಕ್ಕೆ ಬಹಳ ಆಘಾತ ಆಗಿದೆ. ಪ್ರಜಾಪ್ರಭುತ್ವ ಮಾರಕ ಅಂತ ನೀವು ಹೇಳ್ತೀರಿ, ಆದರೆ ಆಪರೇಷನ್ ಕಮಲ ಮಾರಕ ಅಲ್ವಾ? ಗೆದ್ದ ಶಾಸಕರನ್ನೇ ಖರೀದಿ ಮಾಡಿದ್ದು ಮರೆತು ಹೋಯ್ತೇ ನಿಮಗೆ ಎಂದು ಸವಾಲು ಹಾಕಿದರು.

    ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ರಾಜಕೀಯವನ್ನು ರಾಜಕೀಯವಾಗಿ ಎದುರಿಸಿದ್ದಾರೆ. ಡಿಕೆಶಿಯವರು ರೆಡ್ಡಿಯಂತೆ ಹೇಡಿಯ ರಾಜಕೀಯ ಮಾಡಿಲ್ಲ. ರೆಡ್ಡಿ ಬ್ರದರ್ಸ್ ಭೂಗತವಾಗಿ ಕೆಲಸ ಮಾಡುವವರು. ರೆಡ್ಡಿ ಅಂಡರ್ ಗ್ರೌಂಡ್ ವ್ಯಾಪಾರದವರು. ಜನಾರ್ದನ ರೆಡ್ಡಿ ಸಮಾಜಘಾತುಕ ಶಕ್ತಿ. ಅವರು ಮತ್ತೆ ಭೂಗತ ಲೋಕಕ್ಕೆ ಹೋಗೋದು ಸೂಕ್ತ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv