Tag: ಭೋಗನಂದೀಶ್ವರ

  • ಶ್ರೀ ಭೋಗ ನಂದೀಶ್ವರನಿಗೆ 2 ಕೋಟಿ ಮೌಲ್ಯದ ಭವ್ಯ ರಥ ಮಾಡಿಸಿದ ಭಕ್ತ!

    ಶ್ರೀ ಭೋಗ ನಂದೀಶ್ವರನಿಗೆ 2 ಕೋಟಿ ಮೌಲ್ಯದ ಭವ್ಯ ರಥ ಮಾಡಿಸಿದ ಭಕ್ತ!

    ಚಿಕ್ಕಬಳ್ಳಾಪುರ: ಜಿಲ್ಲೆಯ ನಂದಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಭೋಗನಂಧೀಶ್ವರನ ಶ್ರೀ ಭೋಗ ನಂದೀಶ್ವರ ದೇವಾಲಯಕ್ಕೆ (Bhoga Nandishwara Gudi) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹುರುಳಗುರ್ಕಿ ಗ್ರಾಮದ ವೆಂಕಟೇಗೌಡ ಹಾಗೂ ಕುಟುಂಬಸ್ಥರು ಬರೋಬ್ಬರಿ 2 ಕೋಟಿಗೂ ಅಧಿಕ ಮೊತ್ತದ ಹಣ ಖರ್ಚು ಮಾಡಿ ಭವ್ಯವಾದ ರಥ (Chariot) ಮಾಡಿಸಿ ಅರ್ಪಿಸಿದ್ದಾರೆ.

    ಅಂದಹಾಗೆ ಮಹಾಶಿವರಾತ್ರಿ ಹಬ್ಬದ ಮರುದಿನ ಶ್ರೀ ಭೋಗನಂದೀಶ್ವರ ಸ್ವಾಮಿ ಹಾಗೂ ಅರುಣಾಚಲೇಶ್ವರ ಸ್ವಾಮಿಯ ಜೋಡಿ ಬ್ರಹ್ಮರಥೋತ್ಸವ ಪ್ರತಿ ವರ್ಷವೂ ವಿಜೃಂಭಣೆಯಿಂದ ನೆರವೇರುತ್ತದೆ. ಆದ್ರೆ ಪುರಾತನ ಕಾಲದ ಹಳೆಯ ಕಾಲದ ರಥ ಬಳಕೆಗೆ ಯೋಗ್ಯವಾಗಿರಲಿಲ್ಲ. ರಥೋತ್ಸವದ ವೇಳೆ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿತ್ತು. ಇನ್ನೂ ಕಳೆದ ಬಾರಿ ರಥದ ಅಚ್ಚು ಮುರಿದು ರಥ ಕದಲೇ ಇಲ್ಲ. ಇದ್ರಿಂದ ಭಕ್ತರಿಗೆ ಸಾಕಷ್ಟು ಬೇಸರ ಸಹ ಆಗಿತ್ತು. ಹಾಗಾಗಿ ಶಿವನ ಭಕ್ತನೂ ಆಗಿರುವ ಉದ್ಯಮಿ ವೆಂಕಟೇಗೌಡ ಎಂಬುವವರು ಈಗ ಕುಂದಾಪುರ ಕುಂಭಾಶಿಯ ವಿಶ್ವಕರ್ಮ ಕರಕುಶಲ ಕೇಂದ್ರದಲ್ಲಿ ಸಾಗುವಾನಿ ಹಾಗೂ ಭೋಗಿ ಮರ ಬಳಸಿ ಭವ್ಯವಾದ ರಥ ನಿರ್ಮಾಣ ಮಾಡಿಸಿದ್ದಾರೆ. ಇದನ್ನೂ ಓದಿ: ಉಪಚುನಾವಣೆ ಮೂಲಕ ಬಿಜೆಪಿಯವರಿಗೆ ಜನ ಮಂಗಳಾರತಿ ಮಾಡಿದ್ದಾರೆ- ಹೆಚ್.ಕೆ ಪಾಟೀಲ್

    ರಥ ನೋಡಲು ಬಲು ಅಕರ್ಷಕವಾಗಿದ್ದು, ಭಕ್ತರ ಕಣ್ಮನ ಸೆಳೆಯುತ್ತಿದೆ. ನೂತನ ರಥವನ್ನ ಇದೇ ಕಾರ್ತಿಕ ಸೋಮವಾರದಂದು ಅಧಿಕೃತವಾಗಿ ಬ್ರಹ್ಮರಥೋತ್ಸವ ಮಾಡುವ ಮೂಲಕ ಚಾಲನೆ ಕೊಡಲಾಗುತ್ತಿದೆ. ಇದಕ್ಕೂ ಮುನ್ನ ಭಾನುವಾರದಂದು ಹೋಮ ಹವನ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ. ಈ ಬಗ್ಗೆ ದೇವಾಲಯದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡ ರಥದಾನಿ ವೆಂಕಟೇಗೌಡ, ನಾನು ನಂದಿ ಗ್ರಾಮದಲ್ಲೇ ಓದಿದವನಾಗಿದ್ದು ಬಹಳಷ್ಟು ವರ್ಷಗಳಿಂದ ಜಾತ್ರೆ ಹಾಗೂ ರಥೋತ್ಸವವನ್ನ ಕಣ್ತುಂಬಿಕೊಂಡಿದ್ದೇನೆ. ನಾನು ಶಿವರಾತ್ರಿ ಸಮಯದಲ್ಲೂ ಈ ದೇವಾಲಯಕ್ಕೆ ಬಂದು ಹೋಗುತ್ತಿದ್ದೆ, ದೇವಾಲಯಕ್ಕೆ ಬಂದಾಗ ಭಗವಂತ ನನಗೆ ಶಕ್ತಿ ಕೊಡು ಅಂತ ಬೇಡಿಕೊಂಡಿದ್ದೆ. ಹಾಗೆಯೇ ಧರ್ಮಸ್ಥಳ ಮಂಜುನಾಥಸ್ವಾಮಿ ದೇವರ ದರ್ಶನ ಪಡೆದು ಶ್ರೀ ಭೋಗ ನಂದೀಶ್ವರ ರಥ ಮಾಡಿಸುವ ಶಕ್ತಿ ಕೊಡಪ್ಪ ಅಂತ ಕೈ ಮುಗಿದು ಬೇಡಿಕೊಂಡಿದ್ದೆ. ಆ ದೇವರ ಪ್ರೇರಣೆ ಎಂಬಂತೆ ಈಗ ರಥ ನಿರ್ಮಾಣವಾಗಿದೆ ಎಂದು ಸ್ಮರಿಸಿದ್ದಾರೆ.

    ಸೋಮವಾರ (ನ.25) ವಿಜೃಂಭಣೆಯಿಂದ ಬ್ರಹ್ಮರಥೋತ್ಸವ ನಡೆಯಲಿದ್ದು ಭಕ್ತಾದಿಗಳು ಭಾಗವಹಿಸುವಂತೆ ರಥದಾನಿ ವೆಂಕಟೇಗೌಡ ಮನವಿ ಮಾಡಿಕೊಂಡಿದ್ದಾರೆ. ಇನ್ನೂ ಈ ಬಗ್ಗೆ ಮಾತನಾಡಿದ ರಥ ಶಿಲ್ಪಿ ರಾಜಗೋಪಾಲ್ ಆಚಾರ್. ವೆಂಕಟೇಗೌಡರು ರಥ ಮಾಡಿಸಲು ನಮ್ಮ ಬಳಿ ಬಂದಾಗ ಬಹಳಷ್ಟು ರಥಧ ಮಾದರಿಗಳನ್ನ ತೋರಿಸಿದ್ದೆವು. ಆಗ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿನ ರಥ ಕಂಡ ವೆಂಕಟೇಗೌಡರು ಅದೇ ಮಾದರಿಯ ರಥ ಬೇಕು ಅಂತ ತಿಳಿಸಿದರು. ಈಗ ಅದೇ ಮಾದರಿಯಲ್ಲೇ ರಥ ಸುಂದರವಾಗಿ ಮೂಡಿ ಬಂದಿದೆ.

    ಇದು ಶೈವಾಗಮ ಶೈಲಿಯಲ್ಲಿದ್ದು, ಶಿವನಿಗೆ ಸಂಬಂಧಪಟ್ಟ ಕಥಾ ಪ್ರಾಕಾರಗಳನ್ನ ಕೆತ್ತನೆ ಮಾಡಲಾಗಿದೆ. ರಥದ ಚಕ್ರಗಳು 8 ಅಡಿ ಎತ್ತರವಿದೆ, ರಥದ ಜಿಡ್ಡೆ ಭಾಗ 15 ಅಡಿ ಇದ್ದು, ದೇವರ ಪೀಠ 3 ಅಡಿ ಎತ್ತರವಿದೆ. 5 ಅಡಿಯ ಕಳಶ ಹೊಂದಿದೆ. ಒಟ್ಟು 54 ಅಡಿ ಎತ್ತರ ಇರಲಿದೆ. 6 ಚಕ್ರ ಹೊಂದಿರುವ ರಥವನ್ನ ಬ್ರಹ್ಮರಥ ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದಿದೆ: ಮಹಾರಾಷ್ಟ್ರದಲ್ಲಿ ಮಹಾಯುತಿ ಗೆಲುವಿಗೆ ಮೋದಿ ಕೃತಜ್ಞತೆ

    ಭಾನುವಾರ ವಿಶೇಷ ಪೂಜೆ ಹೋಮ-ಹವನ ನಡೆಸಿದ ನಂತರ ಧರ್ಮಸ್ಥಳದ ಪ್ರಧಾನ ಅರ್ಚಕರು ತಮ್ಮ ತಂಡದೊಂದಿಗೆ ದೇವಾಲಯಕ್ಕೆ ರಥ ಸಮರ್ಪಣೆ ಮಾಡಲಿದ್ದಾರೆ. ಸೋಮವಾರ ಬೆಳಗ್ಗೆ 11 ಗಂಟೆಗೆ ರಥಕ್ಕೆ ಚಾಲನೆ ನೀಡಲಾಗುತ್ತದೆ. ಕಾರ್ತಿಕ ಸೋಮವಾರದಂದು ಆಗಮಿಸುವ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಸಹ ಮಾಡಲಾಗಿದೆ. ಇದನ್ನೂ ಓದಿ: ಮಂಗಳೂರು | ಎದುರಾಳಿ ವಿರುದ್ಧ ಸಂಚು ಮಾಡ್ತಿದ್ದಾಗ್ಲೇ ನಟೋರಿಯಸ್ ರೌಡಿಶೀಟರ್ ಅರೆಸ್ಟ್!

  • ನಂದಿ ಗ್ರಾಮದಲ್ಲಿ ಅದ್ಧೂರಿ ಶಿವೋತ್ಸವ

    ನಂದಿ ಗ್ರಾಮದಲ್ಲಿ ಅದ್ಧೂರಿ ಶಿವೋತ್ಸವ

    ಚಿಕ್ಕಬಳ್ಳಾಪುರ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಇಂದು ಚಿಕ್ಕಬಳ್ಳಾಪುರ ತಾಲೂಕು ನಂದಿ ಗ್ರಾಮದಲ್ಲಿರುವ ಐತಿಹಾಸಿಕ ಪುರಾಣ ಪ್ರಸಿದ್ಧ ಶ್ರೀ ಭೋಗನಂದೀಶ್ವರ ದೇವಾಲಯದ ಆವರಣದಲ್ಲಿ ಶಿವೋತ್ಸವ ಕಾರ್ಯಕ್ರಮ ವಿಜ್ರಂಭಣೆಯಿಂದ ಆರಂಭವಾಗಿದೆ.

    ಕ್ಷೇತ್ರದ ಶಾಸಕ, ಸಚಿವ ಡಾ.ಕೆ ಸುಧಾಕರ್ ಫೌಂಡೇಶನ್ ವತಿಯಿಂದ ಇದೇ ಪ್ರಪ್ರಥಮ ಬಾರಿಗೆ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ನಂದಿ ಶಿವೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಶಿವೋತ್ಸವಕ್ಕೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಿರಿಗೆರೆ ಶಿವಾಚಾರ್ಯ ಶ್ರೀಗಳು ಹಾಗೂ ಸದ್ಗುರು ಮಧುಸೂದನಸಾಯಿ ಶಂಖ ಊದುವ ಮೂಲಕ ಚಾಲನೆ ನೀಡಿದರು. ಇದನ್ನೂ ಓದಿ: ಗೋಕರ್ಣ, ಮುರುಡೇಶ್ವರದಲ್ಲಿ ವಿಜ್ರಂಭಣೆಯ ಶಿವರಾತ್ರಿ ಆಚರಣೆ

    ಶಿವಲಿಂಗಕ್ಕೆ ಅಭಿಷೇಕ ಮಾಡುವ ಮೂಲಕ ಶಿವೋತ್ಸವ ಕಾರ್ಯಕ್ರಮ ಅರಂಭವಾಯಿತು. ಶಿವರಾತ್ರಿ ಜಾಗರಣೆ ಪ್ರಯುಕ್ತ ವೇದಿಕೆ ಕಾರ್ಯಕ್ರಮದ ನಂತರ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುಲಿವೆ. ಈ ನಂದಿ ಶಿವೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಹಾಡುಗಾರರಾದ ಅನನ್ಯ ಭಟ್, ರಘು ದೀಕ್ಷಿತ್, ವಿಜಯ್ ಪ್ರಕಾಶ್, ಭರತನಾಟ್ಯ ಕಲಾವಿದೆ ಲಕ್ಷ್ಮೀ ಗೋಪಾಲಸ್ವಾಮಿ, ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿ ತಮ್ಮ ಕಲಾ ಪ್ರದರ್ಶನ ಮಾಡಲಿದ್ದಾರೆ. ಜೊತೆಗೆ ನಗೆ ಹಬ್ಬ ಕಾರ್ಯಕ್ರಮ ಸಹ ಆಯೋಜನೆ ಮಾಡಲಾಗಿದ್ದು ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಲೇಸರ್ ಶೋ ಹಾಗೂ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಶಿವರಾತ್ರಿ ಪ್ರಯುಕ್ತ ಜೆಪಿ ಪಾರ್ಕ್‌ನಲ್ಲಿ ಅಹೋರಾತ್ರಿ ಕಾರ್ಯಕ್ರಮ – 1 ಸಾವಿರ ಸಾಧಕರಿಗೆ ಸನ್ಮಾನ

    ವೈಭವದ ಶಿವೋತ್ಸವದ ಅಂಗವಾಗಿ ಇಡೀ ದೇವಾಲಯಕ್ಕೆ ಹೂವಿನ ಅಲಂಕಾರ ಮಾಡಲಾಗಿದ್ದು, ನಾಳೆ ನಂದಿ ಶ್ರೀ ಭೋಗನಂದಿಶ್ವರನ ಜೋಡಿ ಬ್ರಹ್ಮ ರಥೋತ್ಸವ ನೆರವೇರಲಿದೆ. ಶಿವರಾತ್ರಿ ಹಿನ್ನೆಲೆ ಈಗಾಗಲೇ ಸಾವಿರಾರು ಮಂದಿ ಭಕ್ತರು ನಂದಿ ಗ್ರಾಮದ ಭೋಗನಂದೀಶ್ವರನ ಆಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ – ಭಕ್ತರಲ್ಲಿ ಸಂಭ್ರಮ

  • ಪುರಾಣ ಪ್ರಸಿದ್ಧ ಭೋಗನಂದೀಶ್ವರ ದೇಗುಲದಲ್ಲಿ ದೀಪ ಬೆಳಗಲು ಬ್ರೇಕ್!

    ಪುರಾಣ ಪ್ರಸಿದ್ಧ ಭೋಗನಂದೀಶ್ವರ ದೇಗುಲದಲ್ಲಿ ದೀಪ ಬೆಳಗಲು ಬ್ರೇಕ್!

    – ಶಿವನ ಭಕ್ತರ ಭಾವನೆಗೆ ನೋವು ತಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ!
    – ದೀಪ ಹಚ್ಚುವ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ್ದಕ್ಕೆ ಭಕ್ತರ ಆಕ್ರೋಶ

    ಚಿಕ್ಕಬಳ್ಳಾಪುರ: ನೂರಾರು ವರ್ಷಗಳ ಇತಿಹಾಸವಿರುವ ಪುರಾಣಪ್ರಸಿದ್ಧ, ದಕ್ಷಿಣ ಕಾಶಿ ಎಂದೇ ಕರೆಯಲ್ಪಡುತ್ತಿರುವ ಭೋಗನಂದೀಶ್ವರ ದೇವಾಲಯದಲ್ಲಿ ದೀಪವನ್ನು ಬೆಳಗದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದ್ದಕ್ಕೆ ಭಕ್ತರಿಂದ ಆಕ್ರೋಶ ಕೇಳಿ ಬಂದಿದೆ.

    ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿರುವ ಪುರಾತನ ಐತಿಹಾಸ ಪ್ರಸಿದ್ಧ ಶ್ರೀ ಭೋಗನಂದೀಶ್ವರ ದೇವಾಲಯದಲ್ಲಿ ಶಿವ ಪಾರ್ವತಿ, ಅರುಣಾಚಲೇಶ್ವರ, ಗಿರಿಜಾಂಭ ಸೇರಿದಂತೆ ಪ್ರಮುಖ ದೇವರುಗಳು ನೆಲೆಸಿದ್ದಾರೆ ಎನ್ನುವ ನಂಬಿಕೆಯಿದೆ.

    ಬೆಂಗಳೂರಿಗೆ ಹತ್ತಿರದಲ್ಲಿರುವ ಶಿವ ದೇವಸ್ಥಾನ ಎನ್ನುವ ಕಾರಣಕ್ಕೆ ಪ್ರತಿದಿನ ಸಾವಿರಾರು ಜನ ಶಿವನ ಭಕ್ತರು ಈ ದೇವಸ್ಥಾನಕ್ಕೆ ಬರುತ್ತಾರೆ. ಕಾರ್ತಿಕ ಮಾಸ ಬಂದರೆ ಸಾಕು ಪ್ರತಿದಿನ ಜನಜಾತ್ರೆ ಇಲ್ಲಿರುತ್ತದೆ. ಅದರಲ್ಲೂ ಕಾರ್ತಿಕ ಮಾಸದ ಸೋಮವಾರ ದಿನವಂತೂ ಜನಜಂಗುಳಿಯೇ ಇಲ್ಲಿರುತ್ತದೆ.

    ದೇವಸ್ಥಾನಕ್ಕೆ ಬಂದ ಶಿವನ ಭಕ್ತರು, ದೇವಾಲಯದ ವರಾಂಡದಲ್ಲಿ, ಒಳಾಂಗಣ ಪ್ರಾಂಗಣದಲ್ಲಿ ತಮ್ಮ ಇಷ್ಟಾರ್ಥ ಕೋರಿಕೆಗಳನ್ನು ಈಡೇರಿಸುವಂತೆ ಪ್ರಾರ್ಥಿಸಿ, ತುಪ್ಪ, ಎಳ್ಳೆಣ್ಣೆ, ಅರಳೆಣ್ಣೆ ದೀಪ ಹಚ್ಚುವುದು ವಾಡಿಕೆ. ಆದರೆ ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ದೇವಸ್ಥಾನದ ಒಳಾಂಗಣದ ಪ್ರಾಂಗಣದಲ್ಲಿ ದೀಪ ಹಚ್ಚುವುದನ್ನು ನಿಷೇಧಿಸಿದೆ.

    ನಿಷೇಧ ಯಾಕೆ?
    ಶ್ರೀ ಭೋಗನಂದೀಶ್ವರ ದೇವಾಲಯ ಭಾರತೀಯ ಪುರಾತತ್ವ ಹಾಗೂ ಸರ್ವೇಕ್ಷಣ ಇಲಾಖೆ ಅಧೀನದಲ್ಲಿದೆ. ಆದರೆ ದೇವಸ್ಥಾನದ ಪೂಜಾ ಕೈಕಂರ್ಯಗಳು ಮಾತ್ರ ಮುಜರಾಯಿ ಇಲಾಖೆಯ ಅಧೀನದಲ್ಲಿದೆ. ಇವರಿಬ್ಬರ ಮಧ್ಯೆ ದೇವಸ್ಥಾನದ ಸ್ವಚ್ಛತೆಯನ್ನು ನೀವು ಮಾಡಿ ತಾವು ಮಾಡಿ ಅಂತ ಭಿನ್ನಾಭಿಪ್ರಾಯಗಳಿವೆ. ಹೀಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದೀಪ ಹಚ್ಚುವುದನ್ನು ದೇವಸ್ಥಾನದ ಪ್ರಾಂಗಣದಲ್ಲಿ ಅವಕಾಶ ಕೊಟ್ಟರೆ ಎಣ್ಣೆಯ ಹೊಳೆ ಹರಿದು ಕೊನೆಗೆ ದೇವಸ್ಥಾನಕ್ಕೆ ಧಕ್ಕೆ ಆಗುತ್ತದೆ. ಈ ಕಾರಣಕ್ಕೆ ದೇವಸ್ಥಾನ ಸಂರಕ್ಷಣೆಗೆ ಕಠಿಣ ನಿರ್ಧಾರ ಕೈಗೊಳ್ಳಬೇಕಾಯಿತು. ಭಕ್ತರು ಸಹಕರಿಸುವಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಮನವಿ ಮಾಡಿದ್ದಾರೆ.

    ದೇವಸ್ಥಾನ ಸಂರಕ್ಷಣೆ ಹಿತ ದೃಷ್ಟಿಯಿಂದ ದೇವಸ್ಥಾನ ಒಳಾಂಗಣ ಪ್ರಾಂಗಣದಲ್ಲಿ ದೀಪದ ಎಣ್ಣೆ ಹಚ್ಚುವುದನ್ನು ಚಿಕ್ಕಬಳ್ಳಾಪರ ಜಿಲ್ಲಾಡಳಿತ ನಿಷೇಧ ಮಾಡಿದೆ. ಆದರೆ ವಾಡಿಕೆಯಂತೆ ದೇವಸ್ಥಾನದಲ್ಲಿ ದೀಪ ಹಚ್ಚಲು ಬಂದ ಶಿವನ ಭಕ್ತರು, ಈ ಬದಲಾವಣೆಯಿಂದ ಅಸಮಾಧಾನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವರ ಮೇಲಿನ ಭಕ್ತಿಯಿಂದ ಬಯಲು ಪ್ರದೇಶದಲ್ಲಿ ದೀಪ ಹಚ್ಚಲು ಹೋದರೆ ದೀಪ ನಿಲ್ಲದೆ ಗಾಳಿಗೆ ಹಾರಿ ಹೋಗುತ್ತಿದ್ದು ಮತ್ತೊಂದೆಡೆ ಚಪ್ಪಲಿ ಬಿಡೋ ಜಾಗದಲ್ಲಿ ದೀಪ ಹಚ್ಚೋದು ಹೇಗೆ ಎನ್ನುವುದು ಭಕ್ತರ ಪ್ರಶ್ನೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv