Tag: ಭೇಟಿ

  • ಕರುಣಾನಿಧಿ ಮನೆಗೆ ಪುನೀತ್ ಭೇಟಿ!

    ಕರುಣಾನಿಧಿ ಮನೆಗೆ ಪುನೀತ್ ಭೇಟಿ!

    ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಕರುಣಾನಿಧಿ ಅವರ ಮನೆಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

    ಪುನೀತ್ ರಾಜ್‍ಕುಮಾರ್ ಚೆನ್ನೈನ ಗೋಪಾಲಪುರಂನಲ್ಲಿರುವ ಕರುಣಾನಿಧಿ ಅವರ ಮನೆಗೆ ಭೇಟಿ ನೀಡಿ ಅವರ ಮಗ ಸ್ಟಾಲಿನ್ ಹಾಗೂ ಕುಟುಂಬಸ್ಥರ ಜೊತೆ ಮಾತನಾಡಿ ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

    ಕರುಣಾನಿಧಿ ಅವರ ಮನೆಗೆ ಭೇಟಿ ನೀಡಿದ ಬಳಿಕ ಪುನೀತ್ ಮಾಧ್ಯಮಗಳ ಜೊತೆ ಮಾತನಾಡಿ, “ಕರುಣಾನಿಧಿ ದಿಗ್ಗಜ ನಾಯಕ. ಅವರ ನಿಧನಕ್ಕೆ ಸಂತಾಪ ಸೂಚಿಸಬೇಕಾಗಿರುವುದು ನಮ್ಮ ಕರ್ತವ್ಯ. ಹಾಗಾಗಿ ಅವರ ಮನೆಗೆ ಬಂದಿದ್ದೇನೆ. ನಮ್ಮ ತಂದೆ ರಾಜ್‍ಕುಮಾರ್ ಕಿಡ್ನಾಪ್ ಆಗಿದ್ದ ವೇಳೆ ಕರುಣಾನಿಧಿ ನಮಗೆ ತುಂಬಾ ಸಹಾಯ ಮಾಡಿದ್ದರು. ಅಂದಿನಿಂದ ಕರುಣಾನಿಧಿ ಅವರ ಕುಟುಂಬದ ಜೊತೆ ನಮ್ಮ ಕುಟುಂಬದ ಒಳ್ಳೆಯ ನಂಟು ಹೊಂದಿದೆ. ನಾನು ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಲು ಬಂದೆ ಎಂದು ಪುನೀತ್ ಹೇಳಿದರು.

    ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ. ಕಲೈನರ್ ಕರುಣಾನಿಧಿ(94) ಮಂಗಳವಾರ (7.8.2018) ವಿಧಿವಶರಾಗಿದ್ದರು. ಉಸಿರಾಟದ ತೊಂದರೆ, ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಕರುಣಾನಿಧಿ ಅವರನ್ನು ಜುಲೈ 22ರ ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಜೆ 6.10ಕ್ಕೆ ಕೊನೆಯುಸಿರೆಳೆದಿದ್ದಾರೆ.

    ಕರುಣಾನಿಧಿ ಅವರು 1924 ಜೂನ್ 3ರಂದು ಮದ್ರಾಸ್ ನ ನಾಗಪಟ್ಟಿನಂ ಜಿಲ್ಲೆಯ ಥಿರುಕ್ಕುವಲೈ ನಲ್ಲಿ ಜನಿಸಿದ್ದರು. ತಮಿಳುನಾಡಿನ ಮೂರನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಇವರು ತಮಿಳುನಾಡಿನ ರಾಜಕೀಯ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂನ ಅಧ್ಯಕ್ಷರಾಗಿದ್ದರು. 1969 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಮತ್ತೆ 2006 ಮೇ 13 ರಂದು ಐದನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರತ ರಾಯಭಾರಿಯಿಂದ ಇಮ್ರಾನ್ ಖಾನ್‍ಗೆ ಗಿಫ್ಟ್!

    ಭಾರತ ರಾಯಭಾರಿಯಿಂದ ಇಮ್ರಾನ್ ಖಾನ್‍ಗೆ ಗಿಫ್ಟ್!

    ಇಸ್ಲಾಮಾಬಾದ್: ಭಾರತದ ಪಾಕ್ ರಾಯಭಾರಿ ಅಜಯ್ ಬಿಸಾರಿಯಾ ಅವರು ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿರುವ ಪಾಕಿಸ್ತಾನ್ ತೆಹ್ರೇಕ್ ಇ ಇಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ರನ್ನು ಭೇಟಿ ಮಾಡಿ ಟೀಂ ಇಂಡಿಯಾ ಆಟಗಾರರು ಸಹಿ ಮಾಡಿದ ಕ್ರಿಕೆಟ್ ಬ್ಯಾಟನ್ನು ಕಾಣಿಕೆಯಾಗಿ ನೀಡಿದ್ದಾರೆ.

    ಭಾರತದ ಹೈ ಕಮಿಷನರ್ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಶುಕ್ರವಾರ ಇಮ್ರಾನ್ ಖಾನ್ ರನ್ನು ಭೇಟಿ ಮಾಡಿ ಎರಡು ದೇಶಗಳ ನಡುವಿನ ಸಹಕಾರ ವೃದ್ಧಿ ಬಗ್ಗೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಭೇಟಿಯ ವೇಳೆ ನೆನಪಿನ ಕಾಣಿಕೆಯಾಗಿ ಬ್ಯಾಟ್ ನೀಡಿದ್ದಾರೆ.

    ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೇಕ್ ಇ ಇಸಾಫ್ ಪಕ್ಷ ಜುಲೈ 25 ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆಗಸ್ಟ್ 18 ರಂದು ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಿಟಿಐ ಪಕ್ಷದ ಮೂಲಗಳು ಮಾಹಿತಿ ನೀಡಿದೆ. ಅಲ್ಲದೇ ಟೀಂ ಇಂಡಿಯಾ ಮಾಜಿ ಆಟಗಾರರದ ಕಪಿಲ್ ದೇವ್, ನವಜೋಥ್ ಸಿಂಗ್ ಸಿಧು ಹಾಗೂ ಸುನೀಲ್ ಗವಾಸ್ಕರ್ ಅವರಿಗೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

    65 ವರ್ಷದ ಇಮ್ರಾನ್ ಖಾನ್ ಪಾಕ್ ಕ್ರಿಕೆಟ್ ತಂಡದ ನಾಯಕರಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು, ಬಳಿಕ ರಾಜಕೀಯಕ್ಕೆ ಪ್ರವೇಶ ನೀಡಿ ತಮ್ಮದೇ ಪಕ್ಷವನ್ನು ಸ್ಥಾಪಿಸಿದ್ದರು. ಹಲವು ಏಳುಬೀಳುಗಳ ಬಳಿಕ ಈ ಬಾರಿಯ ಚುನಾವಣೆಯಲ್ಲಿ ಪಕ್ಷವೂ ಬಹುದೊಡ್ಡ ಸಂಖ್ಯೆಯಲ್ಲಿ ಸ್ಥಾನ ಗಳಿಸಿತ್ತು. ಈ ವೇಳೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ ಇಮ್ರಾನ್ ಖಾನ್ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಹಕಾರ ವೃದ್ಧಿ ಹೆಚ್ಚಿನಗೆ ಒತ್ತು ನೀಡಲಾಗವುದು ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಬ್ರೀಮ್ಸ್ ಆಸ್ಪತ್ರೆಯ ನಿರ್ದೇಶಕರಿಗೆ ಬಿಎಸ್‍ವೈ ತರಾಟೆ

    ಬ್ರೀಮ್ಸ್ ಆಸ್ಪತ್ರೆಯ ನಿರ್ದೇಶಕರಿಗೆ ಬಿಎಸ್‍ವೈ ತರಾಟೆ

    ಬೀದರ್: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಬ್ರೀಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಯನ್ನು ಕಂಡು ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ನಿರ್ದೇಶಕ ಡಾ. ಚನ್ನಣ್ಣ ಅವರಿಗೆ ಆಸ್ಪತ್ರೆಯ ಅವ್ಯವಸ್ಥೆ ನೋಡಿ, ನಡೆಸಲು ಸಾಧ್ಯವಿಲ್ಲಿದ್ದರೆ ಆಸ್ಪತ್ರೆಗೆ ಬೀಗ ಹಾಕಿ. ನನ್ನ ಜೀವನದಲ್ಲಿ ಇಂಥಾ ಆಸ್ಪತ್ರೆ ನೋಡಿಲ್ಲ ಎಂದು ಬಿಎಸ್‍ವೈ ತರಾಟೆಗೆ ತೆಗೆದುಕೊಂಡರು.

    ಜಿಲ್ಲಾ ಉಸ್ತುವಾರಿ ಸಚಿವರು ಬದುಕಿದ್ದಾರೋ, ಸತ್ತಿದ್ದಾರೋ ಗೊತ್ತಿಲ್ಲಾ. ನಾವು ಈ ಆಸ್ಪತ್ರೆಗೆ ಬಂದ್ರೆ ಬೇರೆ ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿ ಇಲ್ಲಿದೆ. ನನ್ನ ಜೀವನದಲ್ಲಿ ಈ ರೀತಿಯ ದುಸ್ಥಿತಿ ಆಸ್ಪತ್ರೆ ನೋಡಿಲ್ಲ ಎಂದು ಹೇಳಿ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ್ ವಿರುದ್ಧ ವಾಗ್ದಾಳಿ ನಡೆಸಿದರು.

    ಈ ಆಸ್ಪತ್ರೆಯನ್ನು ಯಾವ ಪದದಿಂದ ವರ್ಣನೆ ಮಾಡಬೇಕೋ ಗೊತ್ತಿಲ್ಲ. ಇಲ್ಲಿದ್ದರೆ ನನ್ನ ಆರೋಗ್ಯ ಎಲ್ಲಿ ಕೆಡುತ್ತದೋ ಎಂದು ನಾನು ಬೇಗ ವೀಕ್ಷಣೆ ಮಾಡಿ ಹೊರ ಬಂದೆ ಎಂದು ಬಿಎಸ್‍ವೈ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಆಪರೇಷನ್ ಕಮಲ ಮಾಡ್ತಾನೂ ಇಲ್ಲ, ಅದರ ಅಗತ್ಯನೂ ನಮಗಿಲ್ಲ: ಬಿಎಸ್‍ವೈ

    ಆಪರೇಷನ್ ಕಮಲ ಮಾಡ್ತಾನೂ ಇಲ್ಲ, ಅದರ ಅಗತ್ಯನೂ ನಮಗಿಲ್ಲ: ಬಿಎಸ್‍ವೈ

    ಬೆಂಗಳೂರು: ನಾವು ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ ಹಾಗೂ ಅದರ ಅವಶ್ಯಕತೆಯೂ ನಮಗಿಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟಾಂಗ್ ನೀಡಿದ್ದಾರೆ.

    ನಗರದ ಡಾಲರ್ ಕಾಲೋನಿಯಲ್ಲಿ ಮಾತನಾಡಿದ ಅವರು, ಸಚಿವ ಡಿ.ಕೆ.ಶಿವಕುಮಾರ್ ಆರೋಪಿಸಿದ್ದ ಆಪರೇಷನ್ ಕಮಲದ ಕುರಿತು ಪ್ರತಿಕ್ರಿಯಿಸಿ ನಾವು ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನಮಗಿಲ್ಲ, ಡಿಕೆಶಿ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕಿಡಿಕಾರಿದರು.

    ಮಂಗಳವಾರ ತುರ್ತು ಸಭೆಯ ಹಿನ್ನೆಲೆಯಲ್ಲಿ ದೆಹಲಿಗೆ ಪ್ರಯಾಣ ಬೆಳಸಿದ್ದೆ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಭೇಟಿಗೆ ಮಂಗಳವಾರ ಸಮಯ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾರವರನ್ನು ಭೇಟಿಯಾಗಿ, ಪ್ರಸಕ್ತ ರಾಜ್ಯ ರಾಜಕಾರಣ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ನಾವು ವಿರೋಧ ಪಕ್ಷದ ಸ್ಥಾನದಲ್ಲಿಯೇ ಕುಳಿತು ಆಡಳಿತ ಪಕ್ಷದ ವಿರುದ್ಧ ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ತಿಳಿಸಿದರು.

    ನಮ್ಮ ರಾಜ್ಯಕ್ಕೆ ಆಗಬೇಕಿರುವ ಕೆಲಸಗಳ ಬಗ್ಗೆ ಕೇಂದ್ರ ಸಚಿವರ ಬಳಿ ಮಾತಾಡಿದ್ದೇನೆ. ಮುಂದೆ ಇಡಬೇಕಾದ ಹೆಜ್ಜೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಗುರವಾರದಿಂದ ಬೀದರ್ ಜಿಲ್ಲೆಯಿಂದ ಪ್ರವಾಸ ಆರಂಭಿಸುತ್ತಿದ್ದೇನೆ. ಅಲ್ಲದೇ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಾವು ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಿದೆ. ಕೆಲವು ಜಿಲ್ಲೆಗಳಲ್ಲಿ ಬರದ ಪರಿಸ್ಥಿತಿ ಇದೆ. ಪ್ರವಾಸದ ವೇಳೆ ಇದೆಲ್ಲವನ್ನೂ ಅವಲೋಕಿಸುತ್ತೇವೆ ಎಂದರು.

    ಈ ವೇಳೆ ಕರುಣಾನಿಧಿಯವರಿಗೆ ಸಂತಾಪ ಸೂಚಿಸಿ, ಕರುಣಾನಿಧಿಯವರು ಮುಖ್ಯಮಂತ್ರಿ ಆಗಿದ್ದಾಗ ನನ್ನ ವಿಶೇಷ ಪ್ರಯತ್ನದಿಂದ ತಮಿಳುನಾಡಿನಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪನೆ ಆಯಿತು. ಇದಕ್ಕೆ ಅವರು ವಿಶೇಷ ಸಹಕಾರವನ್ನು ಸಹ ನೀಡಿದ್ದರು. ತಿರುವಳ್ಳುವರ್ ಪ್ರತಿಮೆಯನ್ನು ವಿಧಾನಸೌಧಕ್ಕೆ ಕಳುಹಿಸಿಕೊಟ್ಟಿದ್ದರು. ಇಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಮಾಡಲಾಯಿತು. ಆದರೆ ಕೆಲವು ಕಾರಣಗಳಿಂದಾಗಿ ಕಳೆದ ಒಂಬತ್ತು ವರ್ಷದಿಂದ ಈ ಯೋಜನೆ ಹಾಗೆ ನೆನೆಗುದಿಗೆ ಬಿದ್ದಿದೆ ಎಂದರು.

    ಕರುಣಾನಿಧಿಯವರು ನನ್ನೊಂದಿಗೆ ಮಾತನಾಡಿದ ರೀತಿ ಯಾವುದನ್ನೂ ಮರೆಯುವಂತಿಲ್ಲ, 5 ಬಾರಿ ಮುಖ್ಯಮಂತ್ರಿ ಆಗಿದ್ದವರು ಕರುಣಾನಿಧಿಯವರು ಈಗ ದೈವಾಧೀನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ರಾಜಭವನದಿಂದ ಸಾರ್ವಜನಿಕರಿಗೆ ಸ್ವಾತಂತ್ರ್ಯೋತ್ಸವದ ಗಿಫ್ಟ್

    ರಾಜಭವನದಿಂದ ಸಾರ್ವಜನಿಕರಿಗೆ ಸ್ವಾತಂತ್ರ್ಯೋತ್ಸವದ ಗಿಫ್ಟ್

    ಬೆಂಗಳೂರು: ಕೇವಲ ವಿಐಪಿ ಹಾಗೂ ವಿವಿಐಪಿಗಳಿಗೆ ಮಾತ್ರ ಸಿಮೀತವಾಗಿದ್ದ ರಾಜಭವನ ಪ್ರವೇಶವನ್ನು ಸ್ವಾತಂತ್ರೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

    ರಾಜಭವನದಿಂದ ಸಾರ್ವಜನಿಕರಿಗೆ ಸ್ವಾತಂತ್ರೋತ್ಸವದ ಗಿಫ್ಟ್ ನೀಡಲಾಗಿದ್ದು, ಈ ಮೂಲಕ ರಾಜಭವನ ಸಾಮಾನ್ಯ ಜನರಿಗೆ ಇನ್ನಷ್ಟು ಹತ್ತಿರವಾಗುವ ಪ್ರಯತ್ನಕ್ಕೆ ಕೈ ಹಾಕಿದೆ. ಇದೇ ಆಗಸ್ಟ್ 16 ರಿಂದ 31 ರವರೆಗೆ ಸಾರ್ವಜನಿಕರ ಪ್ರವೇಶ ಕಲ್ಪಿಸಿಕೊಟ್ಟಿದ್ದು, ರಾಜಭವನ ನಿರ್ಧರಿಸಿರುವಂತೆ ಸಂಜೆ 4 ರಿಂದ 6.30 ರವರೆಗೆ ಸಾರ್ವಜನಿಕರು ಪ್ರವೇಶಿಸಬಹುದಾಗಿದೆ.

    ರಾಜಭವನದ ವಿಶೇಷತೆ ಏನು? ಒಳಗೆ ಏನೇನಿದೆ?
    ಬ್ರಿಟಿಷ್ ಕಮಿಷನರ್ ಆಗಿದ್ದ ಮಾರ್ಕ್ ಕಬ್ಬನ್ ರಾಜಭವನದ ನಿರ್ಮಾಣ ಮಾಡಿದ್ದರು. ಈ ಕಟ್ಟಡವು ಸುಮಾರು 42,380 ಅಡಿ ವ್ಯಾಪ್ತಿಯನ್ನು ಹೊಂದಿದ್ದು, ಇಂಡೋ ಸಾರ್ಥಾನಿಕ್ ಶೈಲಿಯ ಹೊರಾಂಗಣ ಮತ್ತು ಒಳಾಂಗಣ ವಿನ್ಯಾಸವನ್ನು ಹೊಂದಿದೆ. ಕಟ್ಟಡದೊಳಗೆ 19ನೇ ಶತಮಾನದ ಕಲಾಕೃತಿಗಳಿದ್ದು, ಭಾರತೀಯ ಪರಂಪರೆಯನ್ನು ಬಿಂಬಿಸುವ ಅನೇಕ ಕಲಾಕೃತಿಗಳನ್ನು ಕಾಣಬಹುದಾಗಿದೆ.

    ಪ್ರಮುಖವಾಗಿ ಗ್ಲಾಸ್ ಹೌಸ್ ಸೇರಿದಂತೆ ಸುಮಾರು 16 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹರಡಿರುವ ಗುಲಾಬಿ ಉದ್ಯಾನವನ, ಮಲ್ಲಿಗೆ ಸೇರಿದಂತೆ ವಿವಿಧ ಹೂ ಗಿಡಗಳ ಉದ್ಯಾನವನಗಳನ್ನು ಕಾಣಬಹುದು. ಅಲ್ಲದೇ ಕೂಕ್‍ಪೈನ್ ಮರಗಳು ಆಕರ್ಷಣೀಯ ಕೇಂದ್ರಬಿಂದುವಾಗಿದೆ.

    ರಾಜಭವನಕ್ಕೆ ಪ್ರವೇಶ ಹೇಗೆ?
    ರಾಜಭವನದ ಭೇಟಿಗೆ ಸಾರ್ವಜನಿಕರನ್ನು ತಂಡಗಳಾಗಿ ವಿಂಗಡಿಸಿ ಪ್ರವೇಶ ಕಲ್ಪಿಸಿಕೊಡಲಾಗುತ್ತಿದ್ದು, ಒಂದು ತಂಡದಲ್ಲಿ 30 ಜನರು ಹೋಗಬಹುದಾಗಿದೆ. ಒಂದು ತಂಡ ಸುಮಾರು 20 ರಿಂದ 30 ನಿಮಿಷಗಳ ಕಾಲ ರಾಜಭವನದೊಳಗಿನ ಪರಿಸರ, ವಿಶೇಷತೆಯನ್ನು ವೀಕ್ಷಿಸಬಹುದಾಗಿದೆ.

    ರಾಜಭವನಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಸಾರ್ವಜನಿಕರು ಆನ್‍ಲೈನ್ ಮೂಲಕ ಬುಕ್ಕಿಂಗ್ ಮಾಡಬಹುದಾಗಿದೆ. ಬುಕ್ಕಿಂಗ್ ಮಾಡಿದ ನಂತರ ರಾಜಭವನದಿಂದ ಅಧಿಕೃತವಾಗಿ ಈ-ಮೇಲ್ ಅಥವಾ ಮೊಬೈಲ್ ಎಸ್‍ಎಂಎಸ್ ಮೂಲಕ ಭೇಟಿಯ ದಿನಾಂಕ ಹಾಗೂ ಸಮಯವನ್ನು ತಿಳಿಸಲಾಗುತ್ತದೆ.

    ಸಾರ್ವಜನಿಕರ ಪ್ರವೇಶದ ವೇಳೆಯಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಹೊಣೆಯನ್ನು ರಾಜಭವನ ಈಗಾಗಲೇ ಬಿಬಿಎಂಪಿಗೆ ನೀಡಿದೆ. ಹೀಗಾಗಿ ರಾಜಭವನದ ಒಳಗಡೆ ಸಾರ್ವಜನಿಕರಿಗಾಗಿ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ, ಸಾರ್ವಜನಿಕ ತಂಗುದಾಣಗಳನ್ನು ಬಿಬಿಎಂಪಿ ನಿರ್ಮಿಸಲಿದೆ. ದೆಹಲಿಯಲ್ಲಿನ ರಾಷ್ಟ್ರಪತಿ ಭವನ ಮಾದರಿಯಲ್ಲಿ ರಾಜಭವನ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

    ರಾಜಭನದ ಭೇಟಿಗೆ www.rajbhavan.kar.nic.in ವೆಬ್‌ಸೈಟ್‌ ಗೆ ಭೇಟಿ ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಸಾರ್ಜಜನಿಕರು ರಾಜಭವನದ ಪ್ರವೇಶಕ್ಕೂ ಮುನ್ನ ಕಡ್ಡಾಯವಾಗಿ ಯಾವುದಾದರೂ ಮೂಲ ದಾಖಲೆಗಳನ್ನು ಹಾಜರುಪಡಿಸುವಂತೆ ಆದೇಶಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಆರೋಗ್ಯ ಸ್ಥಿತಿ ಗಂಭೀರ

    ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಆರೋಗ್ಯ ಸ್ಥಿತಿ ಗಂಭೀರ

    ಚೆನ್ನೈ: ತಮಿಳುನಾಡಿನ ಡಿಎಂಕೆ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಆರೋಗ್ಯ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

    ಜ್ವರ ಹಾಗೂ ಮೂತ್ರನಾಳ ಸೋಂಕಿನಿಂದ ಬಳಲುತ್ತಿದ್ದ ಕರುಣಾನಿಧಿಯವರನ್ನು ಜುಲೈ 28ರಂದು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಇಂದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಕಾವೇರಿ ಆಸ್ಪತ್ರೆ ಆಡಳಿತ ಮಂಡಳಿ ಪುತ್ರಿ ಕನಿಮೋಳಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

    ಕಳೆದ ವಾರದಿಂದ ಚಿಕಿತ್ಸೆಗೆ ಸ್ಪಂದಿಸಿದ್ದ ಅವರು ಸ್ವಲ್ಪ ಚೇತರಿಕೆ ಕಂಡಿದ್ದರು. ಆದರೆ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿರುವುದರಿಂದ ಅವರ ಆರೋಗ್ಯ ಮತ್ತಷ್ಟು ಗಂಭೀರವಾಗಿದೆ. ಕರುಣಾನಿಧಿಯವರಿಗೆ ಉನ್ನತ ವೈದ್ಯರುಗಳು ಚಿಕಿತ್ಸೆ ಮುಂದುವರಿಸಿದ್ದು, ಆರೋಗ್ಯ ಸುಧಾರಣೆ ಕಾಣುವವರೆಗೂ ಆಸ್ಪತ್ರೆಯಲ್ಲೇ ದಾಖಲಾಗಿರುತ್ತಾರೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಹೇಳಿದೆ.

    ಕರುಣಾನಿಧಿಯವರು ಆಸ್ಪತ್ರೆಗೆ ದಾಖಲಿಸಿದ ದಿನದಿಂದಲೂ ಆಸ್ಪತ್ರೆ ಬಳಿಯೇ ಜಮಾಯಿಸುವ ಅಭಿಮಾನಿಗಳಿಗೆ ವೈದ್ಯರ ಹೇಳಿಕೆಯಿಂದಾಗಿ ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ. ಅಲ್ಲದೇ ಅಭಿಮಾನಿಗಳು ಕರುಣಾನಿಧಿಯವರು ಆದಷ್ಟು ಬೇಗ ಗುಣಮುಖರಾಗಿಬರಲೆಂದು ಹಾರೈಸುತ್ತಿದ್ದಾರೆ.

    ಭಾನುವಾರ ರಾಷ್ಟ್ರಪತಿ ರಾಮನಾಥ ಕೋವಿಂದರವರು ಕಾವೇರಿ ಆಸ್ಪತ್ರೆಗೆ 5 ಬಾರಿ ಭೇಟಿ ನೀಡಿ ಕರುಣಾನಿಧಿಯವರ ಆರೋಗ್ಯವನ್ನು ಖುದ್ದು ವಿಚಾರಿಸಿದ್ದಾರೆ. ಅವರ ಆರೋಗ್ಯದ ಬಗ್ಗೆ ಪುತ್ರ ಸ್ಟಾಲಿನ್ ಹಾಗೂ ವೈದ್ಯರ ಬಳಿ ದೀರ್ಘ ಮಾತುಕತೆಯನ್ನು ನಡೆಸಿದ್ದರು. ಭೇಟಿಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿತಿಸಿದ ಅವರು, ಕರುಣಾನಿಧಿಯವರು ಶೀಘ್ರವೇ ಗುಣಮುಖರಾಗಿ ಸಹಜ ಸ್ಥಿತಿಗೆ ಮರಳುತ್ತಾರೆಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಯೋಧ ವಿಜಯಾನಂದ ನಾಯ್ಕ ಮನೆಗೆ ಆರ್ ವಿ ದೇಶಪಾಂಡೆ ಭೇಟಿ

    ಯೋಧ ವಿಜಯಾನಂದ ನಾಯ್ಕ ಮನೆಗೆ ಆರ್ ವಿ ದೇಶಪಾಂಡೆ ಭೇಟಿ

    ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರದ ಹುತಾತ್ಮ ಯೋಧ ವಿಜಯಾನಂದ ನಾಯ್ಕ ಮನೆಗೆ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಇಂದು ಭೇಟಿ ನೀಡಿ ಶ್ರದ್ಧಾಂಜಲಿ ಅರ್ಪಿಸಿದರು.

    ಕಳೆದ ಆರು ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಬಿಎಸ್‍ಎಫ್ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ವಿಜಯಾನಂದ ಅವರು, ಕಳೆದ ತಿಂಗಳು ಛತ್ತೀಸಗಡದಲ್ಲಿ ನಕ್ಸಲ್ ಕಾರ್ಯಾಚರಣೆ ವೇಳೆ ನೆಲಬಾಂಬ್ ದಾಳಿಗೆ ಸಿಕ್ಕು ವೀರ ಮರಣವನ್ನಪ್ಪಿದ್ದರು. ಇಂದು ಆರ್ ವಿ ದೇಶಪಾಂಡೆ ನಗರದ ಕುಮಾರ ಪಂಥವಾಡಾದಲ್ಲಿರುವ ವಿಜಯಾನಂದರವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದಲ್ಲದೇ, ಮನೆಯವರ ಯೋಗಕ್ಷೇಮ ವಿಚಾರಿಸಿದರು.

    ಈ ವೇಳೆ ತಮ್ಮ ಎರಡನೇ ಮಗನಿಗೆ ಸರ್ಕಾರಿ ಉದ್ಯೋಗ ಹಾಗೂ ನಗರದ ರಾಕ್ ಗಾರ್ಡನ್ ಅಥವಾ ವಾರ್ ಶಿಪ್ ಮ್ಯೂಸಿಯಂ ಬಳಿ ಯೋಧ ವಿಜಯಾನಂದನರ ಪುತ್ಥಳಿಯನ್ನು ನಿರ್ಮಿಸುವಂತೆ ಕುಟುಂಬಸ್ಥರು ಸಚಿವ ದೇಶಪಾಂಡೆ ಬಳಿ ಮನವಿ ಮಾಡಿದರು.

  • ಶಿವರಾಜ್ ಕುಮಾರ್ ದಂಪತಿಯಿಂದ ಸಿಎಂ ಎಚ್‍ಡಿಕೆ ಭೇಟಿ

    ಶಿವರಾಜ್ ಕುಮಾರ್ ದಂಪತಿಯಿಂದ ಸಿಎಂ ಎಚ್‍ಡಿಕೆ ಭೇಟಿ

    ಬೆಂಗಳೂರು: ನಟ ಶಿವರಾಜ್ ಕುಮಾರ್ ಪತ್ನಿ ಸಮೇತ ಇಂದು ಕುಮಾರಸ್ವಾಮಿ ಅವರನ್ನು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ್ದಾರೆ.

    ಸಿಎಂ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಅವರ ಸಮಾಧಿ ಸ್ಮಾರಕ ಸ್ಥಳ ಅಭಿವೃದ್ಧಿ ಕುರಿತಂತೆ ಸಿಎಂ ಜೊತೆ ಮಾತನಾಡಿದ್ದೇವೆ. ಶಕ್ತಿಧಾಮ ಕುರಿತು ಕೆಲವು ಮಾಹಿತಿಯನ್ನು ನೀಡಿದ್ದೇವೆ. ಈ ಕುರಿತು ಪರಿಶೀಲನೆ ನಡೆಸಿದ ಬಳಿಕ ಚರ್ಚೆ ನಡೆಸುವುದಾಗಿ ಸಿಎಂ ತಿಳಿಸಿದರು. ಆದರೆ ಈ ವೇಳೆ ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆಸಿಲ್ಲ ಎಂದರು.

    ಇದೇ ವೇಳೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಿಂದ ಪತ್ನಿ ಗೀತಾ ಶಿವರಾಜ್ ಕುಮಾರ್ ಕಣಕ್ಕಿಳಿಸುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಆದರೆ ಅವರು ಸ್ಪರ್ಧಿಸಬೇಕು ಗೆಲ್ಲಬೇಕೆಂದು ದೇವರ ಇಚ್ಛೆ ಇದ್ದರೆ ಯಾರೂ ತಪ್ಪಿಸಲಾಗದು ಎಂದು ಹೇಳಿದರು.

    ಬಳಿಕ ಮಾತನಾಡಿದ ಗೀತಾ ಶಿವರಾಜ್ ಕುಮಾರ್, ಚುನಾವಣೆಯ ಕುರಿತು ಇದುವರೆಗೂ ಯಾವುದೇ ಯೋಚನೆ ಮಾಡಿಲ್ಲ. ಚುನಾವಣೆಗೆ ಇನ್ನು ಸಾಕಷ್ಟು ಸಮಯ ಇದೆ. ಈ ಕುರಿತು ನನ್ನ ಸಹೋದರನ ಜೊತೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

    ಇದೇ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಮಧು ಬಂಗಾರಪ್ಪ ಅವರಿಗೆ ನೀಡುವ ಕುರಿತು ಪ್ರಶ್ನೆಗೆ ಉತ್ತರಿಸಿ, ಸಿಎಂ ಕುಮಾರಸ್ವಾಮಿ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಕುರಿತು ಇದುವರೆಗೂ ಯಾವುದೇ ಚರ್ಚೆ ನಡೆಸಿಲ್ಲ. ಸೂಕ್ತ ವ್ಯಕ್ತಿಯನ್ನು ನೇಮಕ ಮಾಡುವ ಆಶಾಭಾವನೆ ಇದೆ. ಅವರು ಯಾವುದೇ ತೀರ್ಮಾನ ತೆಗೆದುಕೊಂಡರು ಸ್ವಾಗತ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕರುಣಾನಿಧಿ ಆರೋಗ್ಯ ವಿಚಾರಿಸಿದ ಮಾಜಿ ಪ್ರಧಾನಿ ಎಚ್‍ಡಿಡಿ

    ಕರುಣಾನಿಧಿ ಆರೋಗ್ಯ ವಿಚಾರಿಸಿದ ಮಾಜಿ ಪ್ರಧಾನಿ ಎಚ್‍ಡಿಡಿ

    ಚೆನ್ನೈ: ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ತಮಿಳುನಾಡಿನ ಡಿಎಂಕೆ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರನ್ನು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಮುಖ್ಯಸ್ಥ ಎಚ್.ಡಿ.ದೇವೇಗೌಡರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

    ಶುಕ್ರವಾರ ಸಂಜೆ ಚೆನ್ನೈನ ಕಾವೇರಿ ಆಸ್ಪತ್ರೆಗೆ ಭೇಟಿ ನೀಡಿದ ದೇವೇಗೌಡರು ಕರುಣಾನಿಧಿಯವರ ಪುತ್ರ ಸ್ಟಾಲಿನ್ ಹಾಗೂ ಪುತ್ರಿ ಕನಿಮೋಳಿಯೊಂದಿಗೆ ಮಾತುಕತೆ ನಡೆಸಿ ಕರುಣಾನಿಧಿಯವರ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡರು.

    ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕರುಣಾನಿಧಿಯವರು ಶೀಘ್ರವೇ ಗುಣಮುಖರಾಗಲೆಂದು ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ. ಅವರು ಶತಮಾನವನ್ನು ಪೂರೈಸುತ್ತಾರೆ ಎನ್ನುವ ನಂಬಿಕೆ ನನಗಿದೆ. ಕರುಣಾನಿಧಿಯವರು ರಾಷ್ಟ್ರದ ಹಿರಿಯ ರಾಜಕಾರಣಿಯಾಗಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದ್ದಾರೆ.

    94 ವರ್ಷದ ಕರುಣಾನಿಧಿಯವರು ಮೂತ್ರನಾಳದ ಸೋಂಕು, ಜ್ವರ ಹಾಗೂ ವಯೋಸಹಜ ತೊಂದರೆಯಿಂದ ಬಳಲುತ್ತಿದ್ದ ಪರಿಣಾಮ ಅವರನ್ನು ಜುಲೈ 27ರಂದು  ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮಮತಾ ಬ್ಯಾನರ್ಜಿ ಹೋರಾಟಕ್ಕೆ ಎಚ್‍ಡಿಡಿ ಬೆಂಬಲ

    ಮಮತಾ ಬ್ಯಾನರ್ಜಿ ಹೋರಾಟಕ್ಕೆ ಎಚ್‍ಡಿಡಿ ಬೆಂಬಲ

    ನವದೆಹಲಿ: ತೃತೀಯ ರಂಗದ ಸಾರಥ್ಯ ಹೊತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮಾಜಿ ಪ್ರಧಾನಿ ದೇವಗೌಡರನ್ನು ಇಲ್ಲಿನ ಕರ್ನಾಟಕ ಭವನದಲ್ಲಿ ಭೇಟಿಮಾಡಿದ್ದಾರೆ.

    ಮಾಜಿ ಪ್ರಧಾನಿ ದೇವೇಗೌಡರನ್ನು ಇಂದು 4.30 ರಲ್ಲಿ ಮಮತಾ ಬ್ಯಾನರ್ಜಿಯವರು ಕರ್ನಾಟಕ ಭವನದಲ್ಲಿ ಭೇಟಿಯಾಗಿ ಒಂದು ಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದ್ದಾರೆ. ಅಸ್ಸಾಂ ಸರ್ಕಾರದ ಎನ್‌ಆರ್‌ಸಿ ಕರಡು ವಿರೋಧಿಸುತ್ತಿರುವ ಮಮತಾ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದು, ಮಮತಾ ಬ್ಯಾನರ್ಜಿಯವರ ಮನವಿಗೆ ಒಪ್ಪಿಕೊಂಡ ದೇವೇಗೌಡರು ಬೆಂಬಲ ಸೂಚಿಸಿದ್ದಾರೆ.

    ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ನೂತನವಾಗಿ ಆಯ್ಕೆಗೊಂಡ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪ್ರಮಾಣ ವಚನ ಕಾರ್ಯಕ್ರಮದ ಬಳಿಕ ಮೊದಲ ಬಾರಿ ದೇವೇಗೌಡರನ್ನು ಭೇಟಿ ಮಾಡಿದ ಅವರು, ತೃತೀಯ ರಂಗ ಬಲ ಪಡಿಸುವ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ.

    ಕೇಂದ್ರದಲ್ಲಿರುವ ಎನ್‍ಡಿಎ ಸರ್ಕಾರದ ವಿರುದ್ದ ಹೋರಾಟ ನಡೆಸುವ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದು, ಪ್ರಮುಖವಾಗಿ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎನ್ನುವ ವಿಚಾರವಾಗಿ ಮಹತ್ವದ ಚರ್ಚೆ ನಡೆದಿದೆ ಎನ್ನಲಾಗಿದೆ. ಇತರೆ ಪ್ರಾದೇಶಿಕ ಪಕ್ಷಗಳ ಒಗ್ಗೂಡಿಸುವಿಕೆಯಲ್ಲಿ ಸಹಾಯ ಮಾಡುವಂತೆ ಮಮತಾ ಬ್ಯಾನರ್ಜಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ರಾಷ್ಟ್ರೀಯ ನಾಗರಿಕ ನೋಂದಣಿ ಮಾಡಿಸಲು 40 ಲಕ್ಷ ಮಂದಿ ವಿಫಲ: ಏನಿದು ಎನ್‌ಆರ್‌ಸಿ? ಅಸ್ಸಾಂನಲ್ಲೇ ಮಾತ್ರ ಏಕೆ?

    ಭೇಟಿ ಬಳಿಕ ಮಾತನಾಡಿದ ಮಮತಾ ಬ್ಯಾನರ್ಜಿ ದೇವೇಗೌಡರು ಪ್ರಧಾನಿಯಾಗಿದ್ದಾಗ ನಾನು ಸಂಸದೆಯಾಗಿದ್ದೆ ಅವರ ಮೇಲೆ ಅಪಾರ ಗೌರವಿದ್ದು ಸೌಜನ್ಯಕ್ಕಾಗಿ ಭೇಟಿಯಾಗಿದ್ದೇನೆ. ಭೇಟಿ ವೇಳೆ ಕೆಲವು ರಾಜಕೀಯ ವಿಷಯಗಳ ಬಗ್ಗೆ ಚರ್ಚೆಯಾಗಿದ್ದು, ಪಕ್ಷಗಳ ಒಗ್ಗೂಡಿಸುವಿಕೆ ಹಾಗೂ ಎನ್‌ಆರ್‌ಸಿ  ವಿರೋಧಕ್ಕೆ ಬೆಂಬಲಿಸುವಂತೆ ಮನವಿ ಮಾಡಿದ್ದು, ಅದಕ್ಕೆ ದೇವೇಗೌಡರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.