Tag: ಭೇಟಿ

  • ಅಭಿಮಾನಿಯನ್ನು ಭೇಟಿ ಮಾಡಲು ಬುರ್ಖಾ ಧರಿಸಿದ ಶ್ರದ್ಧಾ ಕಪೂರ್

    ಅಭಿಮಾನಿಯನ್ನು ಭೇಟಿ ಮಾಡಲು ಬುರ್ಖಾ ಧರಿಸಿದ ಶ್ರದ್ಧಾ ಕಪೂರ್

    ಮುಂಬೈ: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ತನ್ನ ಅಭಿಮಾನಿಯನ್ನು ಭೇಟಿ ಮಾಡಲು ಬುರ್ಖಾ ಧರಿಸಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

    13 ವರ್ಷದ ಸುಮಯ್ಯ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದಳು. ಸುಮಯ್ಯ, ಶ್ರದ್ಧಾ ಕಪೂರ್ ಅಭಿಮಾನಿ ಆಗಿದ್ದು, ನೆಚ್ಚಿನ ನಟಿಯನ್ನು ಒಮ್ಮೆ ಭೇಟಿ ಮಾಡಬೇಕು ಎಂದು ತನ್ನ ಆಸೆಯನ್ನು ಹೇಳಿಕೊಂಡಿದ್ದಳು. ಹಾಗಾಗಿ ಶ್ರದ್ಧಾ ತಮ್ಮ ಬ್ಯುಸಿ ಶೆಡ್ಯೂಲ್‍ನಲ್ಲೂ ಅಭಿಮಾನಿಯನ್ನು ಭೇಟಿ ಮಾಡಲು ಆಸ್ಪತ್ರೆಗೆ ಆಗಮಿಸಿದ್ದರು.

    ಬಾಲಕಿಯೊಬ್ಬಳು ಶ್ರದ್ಧಾ ಕಪೂರ್ ಅವರನ್ನು ಭೇಟಿ ಮಾಡಲು ಇಷ್ಟಪಡುತ್ತಿದ್ದಾಳೆ ಎಂದು ಸಂಸ್ಥೆಯೊಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿತ್ತು. ಈ ಪೋಸ್ಟ್ ಶ್ರದ್ಧಾ ಕಪೂರ್ ಅವರು ನೋಡಿ ಆ ಸಂಸ್ಥೆ ಬಳಿ ಬಾಲಕಿಯ ಮಾಹಿತಿ ಪಡೆದರು. ಬಳಿಕ ತಮ್ಮ ಬ್ಯುಸಿ ಕೆಲಸದ ನಡುವೆ ಶ್ರದ್ಧಾ ಬಾಲಕಿಯನ್ನು ಭೇಟಿ ಮಾಡಿದ್ದಾರೆ.

    ಶ್ರದ್ಧಾ ಕಪೂರ್ ತನ್ನ ಅಭಿಮಾನಿಯನ್ನು ಭೇಟಿ ಮಾಡಿದ ಬಳಿಕ ಆಕೆಯ ಜೊತೆಗಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿ ಅದಕ್ಕೆ, “ಇಂದು ನನಗೆ ಸುಮಯ್ಯಳನ್ನು ಭೇಟಿ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಖುಷಿ ಆಗಿದ್ದೇನೆ. ಸುಮಯ್ಯ ಮುದ್ದು ಏಂಜಲ್ ಆಗಿದ್ದು, ಆಕೆ ಬೇಗ ಚೇತರಿಸಿಕೊಳ್ಳಲಿ ಎಂದು ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಅಲ್ಲದೇ ಆಕೆಯ ಚಿಕಿತ್ಸೆಗೆ ನನ್ನಿಂದ ಏನಾದರೂ ಸಹಾಯ ಬೇಕೆಂದರೆ ನನ್ನನ್ನು ಕೇಳಿ” ಎಂದು ಶ್ರದ್ಧಾ ಸಂಸ್ಥೆ ಬಳಿ ಕೇಳಿಕೊಂಡಿದ್ದಾರೆ.

    ತಮ್ಮಿಂದ ಆಸ್ಪತ್ರೆಯ ಇತರ ರೋಗಿಗಳಿಗೆ ತೊಂದರೆ ಆಗದಿರಲು ಶ್ರದ್ಧಾ ಬುರ್ಕಾ ಧರಿಸಿ ಆಸ್ಪತ್ರೆಗೆ ಭೇಟಿ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಜ್ಯೂಸ್ ಕುಡಿದ ನರ್ಸ್ ದಿಢೀರ್ ಅಸ್ವಸ್ಥ

    ಜ್ಯೂಸ್ ಕುಡಿದ ನರ್ಸ್ ದಿಢೀರ್ ಅಸ್ವಸ್ಥ

    ಚಿಕ್ಕಬಳ್ಳಾಪುರ: ನಗರದಲ್ಲಿ ಜ್ಯೂಸ್ ಕುಡಿದ ನರ್ಸ್ ಒಬ್ಬರು ದಿಢೀರ್ ಅಸ್ವಸ್ಥಗೊಂಡ ಘಟನೆ ನಡೆದಿದೆ. ಅಸ್ವಸ್ಥರಾದ ಶುಶ್ರೂಷಕಿಯನ್ನು ರಾಜೇಶ್ವರಿ ಎಂದು ಗುರುತಿಸಲಾಗಿದೆ.

    ನರ್ಸ್ ಹೇಮಾವತಿಯನ್ನು ಭೇಟಿ ಮಾಡಲು ವಿಶಾಖಪಟ್ಟಣ ಮೂಲದ ಪ್ರಶಾಂತ್ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಬಂದಿದ್ದನು. ಹೀಗೆ ಭೇಟಿ ವೇಳೆ ಆಸ್ಪತ್ರೆ ಎದುರಿದ್ದ ಬೇಕರಿಯಲ್ಲಿ ಜ್ಯೂಸ್ ಖರೀದಿಸಿ ಹೇಮಾವತಿ ಹಾಗೂ ಮತ್ತೊಬ್ಬ ನರ್ಸ್ ರಾಜೇಶ್ವರಿಗೆ ತಂದುಕೊಟ್ಟಿದ್ದಾನೆ.

    ಜ್ಯೂಸ್ ಕುಡಿದ ಕೆಲ ನಿಮಿಷಗಳ ನಂತರ ರಾಜೇಶ್ವರಿ ಅಸ್ವಸ್ಥರಾಗಿದ್ದಾರೆ. ನರ್ಸ್ ಹೇಮಾವತಿ ಹಾಗೂ ಪ್ರಶಾಂತ್ ಸ್ನೇಹಿತರು ಮಾತ್ರೆ ಬೆರೆಸಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ಪೊಲೀಸರು ಪ್ರಶಾಂತ್ ಹಾಗೂ ಹೇಮಾವತಿ, ಹಾಗೂ ಬೇಕರಿ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮಂತ್ರಾಲಯಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭೇಟಿ

    ಮಂತ್ರಾಲಯಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭೇಟಿ

    ರಾಯಚೂರು: ಸ್ಯಾಂಡಲ್‍ವುಡ್ ಬಹುನಿರೀಕ್ಷಿತ ‘ನಟಸಾರ್ವಭೌಮ’ ಸಿನಿಮಾ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಂದು ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು.

    ಪತ್ನಿ ಅಶ್ವಿನಿ ಜೊತೆ ಮಠಕ್ಕೆ ಆಗಮಿಸಿದ ಪುನೀತ್ ರಾಜಕುಮಾರ್ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ಆಶೀರ್ವಾದ ಪಡೆದರು. ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಬಹಳ ದಿನಗಳಿಂದ ಮಂತ್ರಾಲಯಕ್ಕೆ ಬರಲು ಆಗಿರಲಿಲ್ಲ. ಈಗ ಫೆಬ್ರವರಿ 7ರಂದು ಸಿನಿಮಾ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ರಾಯರ ಆಶೀರ್ವಾದ ಪಡೆಯಲು ಬಂದಿದ್ದೇನೆ. ಅಲ್ಲದೇ ಮಂತ್ರಾಲಯದಲ್ಲಿನ ರಾಜ್‍ಕುಮಾರ್ ಭವನದ ನವೀಕರಣ ಕಾರ್ಯ ಪೂರ್ಣಗೊಂಡಿದ್ದು, ಈಗ ಸಾರ್ವಜನಿಕರ ಉಪಯೋಗಕ್ಕೆ ಬರುತ್ತದೆ” ಎಂದು ಹೇಳಿದ್ದಾರೆ.

    ಇದೇ ವೇಳೆ ಪುನೀತ್ ರಾಜ್‍ಕುಮಾರ್ ಅವರಿಗೆ ಐಟಿ ದಾಳಿ ಬಗ್ಗೆ ಪ್ರಶ್ನಿಸಿದ್ದಾಗ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಬಳಿಕ ಫೆಬ್ರವರಿ 8, 9 ಹಾಗೂ 10ರಂದು ನಡೆಯುವ ಸುಜಯೀಂದ್ರ ತೀರ್ಥರ ದಶಮಾನೋತ್ಸವ ಕಾರ್ಯಕ್ರಮಕ್ಕೆ ಸ್ವಾಮಿಗಳು ಆಹ್ವಾನ ನೀಡಿದ್ದಾರೆ ಎಂದು ಪುನೀತ್ ಹೇಳಿದ್ದಾರೆ. ಈ ವೇಳೆ ಪುನೀತ್ ರಾಜಕುಮಾರ್ ಅವರನ್ನು ನೋಡಲು ಬಂದ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು. ಇದರಿಂದಾಗಿ ಅಲ್ಲಿ ಕೆಲ ಹೊತ್ತು ನೂಕು ನುಗ್ಗಲು ಉಂಟಾಯಿತು.

    ನಟಸಾರ್ವಭೌಮ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶನ ಮಾಡಿದ್ದು, ರಾಕ್‍ಲೈನ್ ವೆಂಕಟೇಶ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅವರಿಗೆ ನಾಯಕಿಯಾಗಿ ಡಿಂಪಲ್ ಬೆಡಗಿ ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ನಟಿಸಿದ್ದಾರೆ. ಈ ಹಿಂದೆ ಪವನ್ ಒಡೆಯರ್, ಪುನೀತ್ ರಾಜ್‍ಕುಮಾರ್ ಅವರ `ರಣವಿಕ್ರಮ’ ಚಿತ್ರವನ್ನು ನಿರ್ದೇಶಿಸಿದ್ದರು.

    https://www.youtube.com/watch?v=qZ-3tkezU3c&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಕ್ತರ ಮನೆಗೆ ಪೂಜೆಗೆಂದು ಬಂದು ಪಾದುಕೆ ಬಿಟ್ಟು ಹೋಗಿದ್ರು!

    ಭಕ್ತರ ಮನೆಗೆ ಪೂಜೆಗೆಂದು ಬಂದು ಪಾದುಕೆ ಬಿಟ್ಟು ಹೋಗಿದ್ರು!

    ಚಾಮರಾಜನಗರ: ನಡೆದಾಡುವ ದೇವರು ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳು ಹತ್ತು ವರ್ಷಗಳ ಹಿಂದೆ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು.

    ಇಲ್ಲಿನ ನಿಜಗುಣ ರಾಜು ಮನೆಗೆ ಪೂಜೆಗೆಂದು ಬಂದಿದ್ದ ಶ್ರೀಗಳು ಪೂಜೆಯ ನಂತರ ತಮ್ಮ ಪಾದುಕೆಗಳನ್ನು ಬಿಟ್ಟು ಹೋಗಿದ್ದಾರೆ. ಅಂದಿನಿಂದಲೂ ಈ ಭಕ್ತರ ಮನೆಯಲ್ಲಿ ಶ್ರೀಗಳ ಪಾದುಕೆಗೂ ನಿತ್ಯ ಪೂಜೆ ನಡೆಯುತ್ತಿದೆ. ಅಂದು 101 ವರ್ಷಗಳಾಗಿದ್ದರೂ ದೂರದ ತುಮಕೂರಿನಿಂದ ಚಾಮರಾಜನಗರದವರೆಗೂ ಕಾರಿನಲ್ಲಿ ಬಂದಿದ್ದರು.

    ಬೆಳಗ್ಗೆಯಿಂದ ಸಂಜೆಯವರೆಗೂ ಇಲ್ಲಿಯೇ ಇದ್ದು ಭಕ್ತರಿಗೆ ದರ್ಶನ ಭಾಗ್ಯ ನೀಡಿದ್ದ ಡಾ. ಶಿವಕುಮಾರ ಸ್ವಾಮಿಗಳು ಎಲ್ಲರನ್ನು ಲವಲವಿಕೆಯಿಂದಲೇ ಮಾತನಾಡಿಸಿದ್ದರು. ಈ ಪಾದುಕೆಗಳನ್ನು ತಮ್ಮ ಮನೆಯಲ್ಲಿ ಬಿಟ್ಟು ಹೋದ ನಂತರ ತಮಗೆ ಎಲ್ಲಾ ರೀತಿಯ ಅನುಕೂಲಗಳು ಉಂಟಾಗಿವೆ. ಶ್ರೀಗಳ ಪಾದುಕೆಗಳೇ ತಮಗೆ ಶ್ರೀರಕ್ಷೆಯಾಗಿವೆ ಎನ್ನುವ ಅವರು ಪ್ರತಿನಿತ್ಯ ಈ ಪಾದುಕೆಗಳನ್ನು ಪೂಜಿಸಿದ ನಂತರವಷ್ಟೇ ತಮ್ಮ ಇತರ ಕೆಲಸಗಳನ್ನು ಆರಂಭಿಸುತ್ತೇವೆ ಎನ್ನುತ್ತಾರೆ.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ(111) ಇಂದು ನಿಧನರಾಗಿದ್ದಾರೆ. ನಡೆದಾಡುವ ದೇವರೇ ಎಂದು ಕರೆಸಿಕೊಳ್ಳುತ್ತಿದ್ದ ಶ್ರೀಗಳು ಅಪಾರ ಭಕ್ತರನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಈಗಾಗಲೇ ನಾಡಿನಾದ್ಯಂತ ಮೌನ ಆವರಿಸಿದ್ದು, ಶ್ರೀಗಳ ಅಂತಿಮ ದರ್ಶನ ಪಡೆಯಲು ಭಕ್ತರು ಕಾಯುತ್ತಿದ್ದಾರೆ. ಸಿದ್ದಗಂಗಾ ಮಠದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾರ್ವಜನಿಕರು ಶಾಂತಿಯಿಂದ ಇರಬೇಕು ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀಗಳ ಆರೋಗ್ಯ ವಿಚಾರಿಸಿದ್ರು ಯದುವೀರ್ ಒಡೆಯರ್

    ಶ್ರೀಗಳ ಆರೋಗ್ಯ ವಿಚಾರಿಸಿದ್ರು ಯದುವೀರ್ ಒಡೆಯರ್

    ತುಮಕೂರು: ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದರಿಂದ ಕಾಯಕಯೋಗಿ ಸಿದ್ದಗಂಗಾ ಶ್ರೀಗಳನ್ನು ಇಂದು ಬೆಳಗಿನ ಜಾವ ಮಠಕ್ಕೆ ಶಿಫ್ಟ್ ಮಾಡಲಾಗಿದೆ. ಮೈಸೂರಿನ ಮಹರಾಜ ಯದುವೀರ್ ಒಡೆಯರ್ ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯವನ್ನು ವಿಚಾರಿಸಿದ್ದಾರೆ.

    ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಯದುವೀರ್ ಒಡೆಯರ್, ನಾನು ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದೆ. ಹಾಗೇ ಶ್ರೀಗಳನ್ನು ನೋಡಲು ಬಂದಿದ್ದೇನೆ. ಶ್ರೀಗಳು ಆರೋಗ್ಯವಾಗಿದ್ದಾರೆ. ಅವರು ಬೇಗ ಚೇತರಿಸಿಕೊಳ್ಳಲಿ ಅಂತ ಚಾಮುಂಡೇಶ್ವರಿ ತಾಯಿಯಲ್ಲಿ ಪ್ರಾರ್ಥನೆ ಮಾಡ್ತೇನೆ. ಶ್ರೀಗಳು ವಿಶ್ರಾಂತಿಯಲ್ಲಿದ್ದರಿಂದ ಅವರನ್ನು ಎಚ್ಚರಿಸಲು ಹೋಗಲಿಲ್ಲ. ಅವರ ಜೊತೆ ಮಾತನಾಡುವ ಅವಕಾಶ ಸಿಗಲಿಲ್ಲ. ಹಾಗಾಗಿ ನಾನು ಅವರ ಆಶೀರ್ವಾದ ಪಡೆದುಕೊಂಡು, ಅವರನ್ನು ನೋಡಿಕೊಂಡು ಬಂದೆ” ಎಂದು ಹೇಳಿದರು.

    ಸ್ವಾಮೀಜಿಗಳ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಏರುಪೇರು ಬಂದಿಲ್ಲ. ರಾತ್ರಿಯಿಂದ ಮಠಕ್ಕೆ ಹೋಗುವಂತೆ ಸ್ವಾಮೀಜಿಗಳು ಸೂಚನೆ ನೀಡುತ್ತಿದ್ದರು. ಇಂದು ಅಥವಾ ನಾಳೆ ಶಿಫ್ಟ್ ಮಾಡಬೇಕಂತ ಮಠದ ಹಿರಿಯರು ಹಾಗೂ ಎಸ್‍ಪಿ ಸೇರಿ ಸಭೆ ನಡೆಸಿ ನಿರ್ಧಾರ ಮಾಡಿದ್ದೇವು. ಆದರೆ ರಾತ್ರಿಯಿಂದ ಸ್ವಾಮೀಜಿಗಳು ಮಠಕ್ಕೆ ಹೋಗಬೇಕೆಂದು ಚಡಪಡಿಸುತ್ತಿದ್ದರು. ಆದ್ದರಿಂದ ಬೆಳಗಿನ ಜಾವ ಈ ರೀತಿ ನಿರ್ಧಾರ ತೆಗೆದುಕೊಂಡು ಶಿಫ್ಟ್ ಮಾಡಲಾಗಿದೆ ಎಂದು ಕಿರಿಯ ಶ್ರೀಗಳು ತಿಳಿಸಿದ್ದಾರೆ.

    ಶ್ರೀಗಳು ಆಸ್ಪತ್ರೆಯಿಂದ ಮಠಕ್ಕೆ ಹೋಗುವ ಹಂಬಲ ವ್ಯಕ್ತಪಡಿಸಿದ್ದರು. ಹಾಗಾಗಿ ಶ್ರೀಗಳನ್ನು ಮಠಕ್ಕೆ ಶಿಫ್ಟ್ ಮಾಡಿದ್ದೇವೆ. ಆಸ್ಪತ್ರೆಯಲ್ಲಿ ನೀಡುತ್ತಿದ್ದ ಚಿಕಿತ್ಸೆ ಮಠದಲ್ಲೇ ಮುಂದುವರೆಸಿದ್ದೇವೆ. ನಿಶ್ಯಕ್ತಿ ಮತ್ತು ಉಸಿರಾಟದ ತೊಂದರೆ ಹೊರತುಪಡಿಸಿದರೆ ಬೇರೆ ಎಲ್ಲಾ ಪ್ಯಾರಾಮೀಟರ್ಸ್ ಸರಿಯಾಗಿದೆ. ಶ್ವಾಸಕೋಶದ ಸೋಂಕು ಕಡಿಮೆಯಾಗಿದೆ. ಆಪರೇಷನ್ ಮಾಡಿದ ಗಾಯ ವಾಸಿಯಾಗಿದೆ. ಭಕ್ತಾದಿಗಳು ಆತಂಕಪಡುವ ಅವಶ್ಯ ಇಲ್ಲ ಎಂದು ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆತ್ಮಹತ್ಯೆಗೆ ಶರಣಾಗಿದ್ದ ಅಭಿಮಾನಿ ಮನೆಗೆ ಸುಮಲತಾ, ಅಭಿಷೇಕ್ ಭೇಟಿ

    ಆತ್ಮಹತ್ಯೆಗೆ ಶರಣಾಗಿದ್ದ ಅಭಿಮಾನಿ ಮನೆಗೆ ಸುಮಲತಾ, ಅಭಿಷೇಕ್ ಭೇಟಿ

    ಮಂಡ್ಯ: ರೆಬಲ್ ಸ್ಟಾರ್ ಅಂಬರೀಶ್ ಅವರ ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ ಅಭಿಮಾನಿ ಮನೆಗೆ ನಟಿ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಭೇಟಿ ನೀಡಿದ್ದಾರೆ.

    ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೊಟ್ಟೇಗೌಡನದೊಡ್ಡಿ ಗ್ರಾಮದ ತಮ್ಮಯ್ಯ ಆತ್ಮಹತ್ಯೆಗೆ ಶರಣಾಗಿದ್ದರು. ತಮ್ಮಯ್ಯ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ವಿಷಯ ತಿಳಿದ ಸುಮಲತಾ ಅವರು ಇಂದು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ನೀಡಿದ್ದರು.

    ಸುಮಲತಾ ಅವರು ತಮ್ಮಯ್ಯ ಮನೆಯವರಿಗೆ ಹೆದರಬೇಡಿ. ಕಷ್ಟ ಇದ್ದರೆ ನಮ್ಮನ್ನು ಭೇಟಿ ಮಾಡಿ. ನಿಮ್ಮ ಜೊತೆ ನಾವಿರುತ್ತೇವೆ ಎಂದು ಸಾಂತ್ವನ ಹೇಳಿ 30 ಸಾವಿರ ರೂ. ಪರಿಹಾರ ಚೆಕ್ ವಿತರಿಸಿದ್ದಾರೆ. ಇದೇ ವೇಳೆ ಸುಮಲತಾ ಅವರಿಗೆ ಹಿರಿಯ ನಟ ದೊಡ್ಡಣ್ಣ ಹಾಗೂ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಸಾಥ್ ನೀಡಿದ್ದರು.

    ಅಲ್ಲದೇ ಸುಮಲತಾ ಹಾಗೂ ಅಭಿಷೇಕ್ ಅವರು ಮದ್ದೂರು ತಾಲೂಕಿನ ಗೊರವನ ಹಳ್ಳಿ ಗ್ರಾಮಕ್ಕೂ ಭೇಟಿ ನೀಡಿದ್ದಾರೆ. ಗೊರವನ ಹಳ್ಳಿಯ ಅಂಬಿ ಅಭಿಮಾನಿ ಸುರೇಂದ್ರ(50) ನೇಣಿಗೆ ಶರಣಾಗಿದ್ದರು. ಸುಮಲತಾ ಹಾಗೂ ಅಭಿಷೇಕ್ ಸುರೇಂದ್ರ ಅವರ ಕುಟುಂಬಕ್ಕೂ ಸಾಂತ್ವನ ಹೇಳಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಗಳ ಕುಟುಂಬಸ್ಥರಿಗೆ ಅದನ್ನು ಭರಿಸುವ ಶಕ್ತಿ ನೀಡಲಿ ಎಂದು ಸುಮಲತಾ ಗೊರವನ ಹಳ್ಳಿಯಲ್ಲಿ ಹೇಳಿದ್ದಾರೆ. ಅವರ ಸಾವು ದೈವ ಇಚ್ಚೆ. ಆದರೆ ಇಲ್ಲಿ ಆಗ ಬಾರದಿತ್ತು. ನಮ್ಮ ಕೈಯಲ್ಲಿ ಸಾಂತ್ವನ ಹೇಳಲಿಕ್ಕಷ್ಟೆ ಆಗುವುದು ಎಂದು ಸುಮಲತಾ ಅವರು ಅಂಬಿಯನ್ನು ನೆನೆದು ಗದ್ಗದಿತರಾದರು.

    ಸುಮಲತಾ, ಅಭಿಷೇಕ್, ದೊಡ್ಡಣ್ಣ ಹಾಗೂ ರಾಕ್ ಲೈನ್ ವೆಂಕಟೇಶ್ ಅವರು ಮೃತ ಸುರೇಶ್ ಮನೆಯಲ್ಲಿ ಎಳನೀರು ಕುಡಿದು ಕುಟುಂಬಸ್ಥರ ಜೊತೆ ಸ್ವಲ್ಪ ಸಮಯ ಕಳೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಫೇಸ್‍ಬುಕ್ ಗೆಳತಿ ಜೊತೆಗಿನ ಮೊದಲ ಭೇಟಿಯಲ್ಲೇ ಓಡಿ ಹೋದ ಯುವಕ!

    ಫೇಸ್‍ಬುಕ್ ಗೆಳತಿ ಜೊತೆಗಿನ ಮೊದಲ ಭೇಟಿಯಲ್ಲೇ ಓಡಿ ಹೋದ ಯುವಕ!

    ಪಾಟ್ನಾ: ಯುವಕನೊಬ್ಬ ತನ್ನ ಫೇಸ್‍ಬುಕ್ ಗೆಳತಿಯನ್ನು ಮೊದಲ ಬಾರಿ ಭೇಟಿಯಾಗಲು ಹೋದಾಗ ಆಕೆಯನ್ನು ನೋಡಿ ಪಾರ್ಕ್ ನಿಂದಲೇ ಓಡಿ ಹೋದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

    ಯುವಕನೊಬ್ಬ ಫೇಸ್‍ಬುಕ್‍ನಲ್ಲಿ ಸುಂದರವಾದ ಯುವತಿಯ ಖಾತೆಯನ್ನು ನೋಡಿ ಆಕೆಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಯುವತಿ ಕೂಡ ಆ ಯುವಕನ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ್ದಾಳೆ. ನಂತರ ಯುವಕ ಯುವತಿಗೆ ಮೆಸೇಜ್ ಮಾಡಲು ಆರಂಭಿಸಿ ಹತ್ತಿರವಾಗಿದ್ದಾನೆ. ಯುವತಿ ಕೂಡ ಆತನ ಮೆಸೇಜ್‍ಗೆ ಪ್ರತಿಕ್ರಿಯಿಸುತ್ತಿದ್ದಳು. ಹೀಗೆ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದಾರೆ.

    ಮದುವೆ ಆಗುವ ಮೊದಲು ನಾವಿಬ್ಬರು ಭೇಟಿ ಆಗೋಣ ಎಂದು ಯುವಕ ಯುವತಿ ಬಳಿ ಕೋರಿಕೆ ಇಟ್ಟಿದ್ದಾನೆ. ಯುವತಿ ಈ ಕೋರಿಕೆಯನ್ನು ಸ್ವೀಕರಿಸಿ ಭೇಟಿಗೆ ಒಪ್ಪಿಕೊಂಡಿದ್ದಾಳೆ. ಹೊಸ ವರ್ಷದಂದು ಇಬ್ಬರು ಪಾರ್ಕ್ ವೊಂದರಲ್ಲಿ ಭೇಟಿ ಆಗಲು ನಿರ್ಧರಿಸಿದ್ದಾರೆ. ಭೇಟಿಯಾದ ಬಳಿಕ ತಮ್ಮ ಮುಂದಿನ ಜೀವನದ ಬಗ್ಗೆ ಚರ್ಚೆ ನಡೆಸೋಣ ಎಂದು ಇಬ್ಬರು ಮಾತನಾಡಿಕೊಂಡಿದ್ದರು.

    ತನ್ನ ಫೇಸ್‍ಬುಕ್ ಗೆಳತಿಯನ್ನು ಭೇಟಿ ಮಾಡಲು ಯುವಕ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಮೊದಲೇ ಹೂಗುಚ್ಚವನ್ನು ತೆಗೆದುಕೊಂಡು ಪಾರ್ಕಿಗೆ ಬಂದಿದ್ದ. ಯುವತಿ ಪಾರ್ಕಿಗೆ ಬಂದ ಬಳಿಕ ಆಕೆಯನ್ನು ನೋಡಿ ಯುವಕ ಒಂದು ಕ್ಷಣ ದಂಗಾಗಿದ್ದಾನೆ. ಫೇಸ್‍ಬುಕ್ ನಲ್ಲಿದ್ದ ಯುವತಿ ಬೇರೆ ಹಾಗೂ ಎದುರಿಗೆ ಇದ್ದ ಯುವತಿ ಬೇರೆ ಎಂದು ತಿಳಿದ ಯುವಕ ಪಾರ್ಕಿನಿಂದಲೇ ಓಡಿ ಹೋಗಿದ್ದಾನೆ.

    ಯುವಕನಿಂದ ಮೋಸ ಹೋಗಿದ್ದೇನೆ ಎಂದು ಯುವತಿ ಜನವರಿ 2ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆಗ ಪೊಲೀಸರು ಯುವಕನನ್ನು ಠಾಣೆಗೆ ಕರೆಸಿ ಮಾತನಾಡಿಸಿದ್ದಾರೆ. ಆಗ ಯುವಕ “ಈ ಯುವತಿ ಫೇಸ್‍ಬುಕ್‍ನಲ್ಲಿ ಬೇರೆ ಫೋಟೋ ಹಾಕಿ ನನಗೆ ಮೋಸ ಮಾಡಿದಲ್ಲದೇ ನನ್ನ ಬಳಿ ಸುಳ್ಳು ಹೇಳಿದ್ದಾಳೆ. ನಾನು ಶ್ರೀಮಂತೆ ಎಂದು ಆಕೆ ನನ್ನ ಬಳಿ ಹೇಳಿದ್ದಳು. ಆದರೆ ಆಕೆ ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತಾಳೆ” ಎಂದು ತಿಳಿಸಿದ್ದಾನೆ.

    ಯುವಕನ ಮಾತು ಕೇಳಿ ಯುವತಿ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ್ದಾಳೆ. ಅಲ್ಲದೇ ಇಬ್ಬರು ಪೊಲೀಸ್ ಠಾಣೆಯಲ್ಲೇ ಆರೋಪ, ಪ್ರತ್ಯಾರೋಪ ಮಾಡಿದ್ದಾರೆ. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಗಲಾಟೆಯನ್ನು ನಿಲ್ಲಿಸಿ, ಇಬ್ಬರಿಗೂ ಬುದ್ಧಿ ಹೇಳಿ ಅವರ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
  • ಕಿಚ್‍ಗುತ್ ಮಾರಮ್ಮ ದೇವಿ ವಿಷ ಪ್ರಸಾದ ದುರಂತ – ಮಂಗಳವಾರ ಸುಳ್ವಾಡಿಗೆ ಸಿಎಂ ಭೇಟಿ

    ಕಿಚ್‍ಗುತ್ ಮಾರಮ್ಮ ದೇವಿ ವಿಷ ಪ್ರಸಾದ ದುರಂತ – ಮಂಗಳವಾರ ಸುಳ್ವಾಡಿಗೆ ಸಿಎಂ ಭೇಟಿ

    ಚಾಮರಾಜನಗರ: ಸುಳ್ವಾಡಿ ಕಿಚ್‍ಗುತ್ ಮಾರಮ್ಮ ದೇವಿ ವಿಷ ಪ್ರಸಾದ ಸೇವನೆಯಿಂದ ದುರಂತ ತಾಣವಾಗಿರುವ ಹನೂರಿನ ಸುಳ್ವಾಡಿಗೆ ನಾಳೆ ಸಿಎಂ ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ.

    ಇಂದು ಸಚಿವ ಸಾರಾ ಮಹೇಶ್ ಅವರು ಸುಳ್ವಾಡಿ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಇತ್ತ ಮಲೆಮಹದೇಶ್ವರ ಬೆಟ್ಟದ ಸಾಲೂರು ಮಠ ಇದೀಗ ಬಿಕೋ ಎನ್ನುತ್ತಿದ್ದು, ಸಾಲೂರು ಮಠದ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣ 1ನೇ ಆರೋಪಿ ಇಮ್ಮಡಿ ಮಹದೇವಸ್ವಾಮಿ ವಿರುದ್ಧ ಸಿಡಿದೆದ್ದಿರುವ ಭಕ್ತರು, ಸಾಲೂರು ಮಠದಲ್ಲಿದ್ದ ಕಿರಿಯ ಸ್ವಾಮೀಜಿ ಫೋಟೋ ಹರಿದು ಆಕ್ರೋಶ ಹೊರಹಾಕಿದ್ದಾರೆ.

    ಇತ್ತ ಕೀಟನಾಶಕ ಸೇವಿಸಿ ಅಸ್ವಸ್ಥರಾದವರಿಗೆ 11ನೇ ದಿನವೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 33 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ 8 ಮಂದಿಗೆ ಐಸಿಯೂನಲ್ಲಿ ಚಿಕಿತ್ಸೆ ನೀಡುತ್ತಿದ್ದರೆ, 12 ಮಂದಿಗೆ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, 13 ಮಂದಿಗೆ ಸಾಮಾನ್ಯ ವಾರ್ಡ್ ನಲ್ಲಿ ನೀಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಲ್ಲೂರಿನಿಂದ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಯಶ್ ಭೇಟಿ

    ಕೊಲ್ಲೂರಿನಿಂದ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಯಶ್ ಭೇಟಿ

    ಮಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರು ಇಂದು ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಈ ವಾರ ಬಹುನಿರೀಕ್ಷಿತ `ಕೆಜಿಎಫ್’ ಸಿನಿಮಾ ರಿಲೀಸ್ ಹಿನ್ನೆಲೆಯಲ್ಲಿ ಯಶ್ ಚಿತ್ರತಂಡದ ಜೊತೆ ಸೇರಿ ದೇವಸ್ಥಾನಗಳಿಗೆ ಭೇಟಿ ಮಾಡುತ್ತಿದ್ದಾರೆ. ನಟ ಯಶ್ ಮತ್ತು ಚಿತ್ರತಂಡ ಬೆಂಗಳೂರಿನಿಂದ ಹೊರಟು ಮೊದಲು ಕೊಲ್ಲೂರು ದೇವಸ್ಥಾನ ನಂತರ ಧರ್ಮಸ್ಥಳ ಬಳಿಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ. ಇದೇ ವೇಳೆ ಉಜಿರೆಯಲ್ಲಿರೋ ಪ್ರಸಿದ್ಧ ಸುರ್ಯ ದೇವಸ್ಥಾನಕ್ಕೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.  ಇದನ್ನೂ ಓದಿ: ಕೊಲ್ಲೂರು ದೇವಸ್ಥಾನಕ್ಕೆ ನಟ ಯಶ್ ಭೇಟಿ

    ಯಶ್ ಹೆಲಿಕಾಫ್ಟರ್ ನಿಂದ ಕೊಲ್ಲೂರಿಗೆ ಬಂದು ನೇರವಾಗಿ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದು ನಂತರ ಧರ್ಮಸ್ಥಳ, ಕುಕ್ಕೆಗೆ ಭೇಟಿ ನೀಡಿದ್ದಾರೆ. ತಂದೆಯಾದ ಬಳಿಕ ಯಶ್ ಮೊದಲ ಬಾರಿಗೆ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಕೆಜಿಎಫ್ ಚಿತ್ರದ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

    ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಬಿಡುಗಡೆ ಹಿನ್ನೆಲೆಯಲ್ಲಿ ಪೂಜೆ ಸಲ್ಲಿಸಿದ್ದು, ಯಶ್, ನಿರ್ಮಾಪಕ ವಿಜಯ್ ಕಿರಗಂದೂರ್ ಸ್ನೇಹಿತರ ಜೊತೆ ಸೇರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದೇ ವಾರ 21ರಂದು ಕೆಜಿಎಫ್ ಸಿನಿಮಾ ರಿಲೀಸ್ ಆಗಲಿದೆ. ಹೀಗಾಗಿ ಚಿತ್ರದ ಒಳಿತಿಗಾಗಿ ಕೆಜಿಎಫ್ ಟೀಮ್ ದೇವಸ್ಥಾನಕ್ಕೆ ಭೇಟಿ ನೀಡುತ್ತಿದೆ ಎಂದು ಹೇಳಲಾಗುತ್ತಿದೆ.

    ‘ಕೆಜಿಎಫ್’ ಸಿನಿಮಾದ ಹಿಂದಿಯ ಸ್ಪೆಷಲ್ ಹಾಡೊಂದು ಈಗಾಗಲೇ ರಿಲೀಸ್ ಆಗಿದ್ದು, ಮೌನಿ ರಾಯ್ ಹಾಗೂ ಯಶ್ ‘ಗಲಿ ಗಲಿ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸದ್ಯ ಹಾಡು ಹೊಸ ದಾಖಲೆಯನ್ನು ನಿರ್ಮಿಸಿದೆ. ಕಳೆದ ಬುಧವಾರ ಕೆಜಿಎಫ್ ಸಿನಿಮಾದ ‘ಗಲಿ ಗಲಿ’ ಹಾಡು ಬಿಡುಗಡೆಯಾಗಿತ್ತು. ಬಿಡುಗಡೆಯಾದ ಮೊದಲ ದಿನವೇ ಈ ಹಾಡು 13 ಮಿಲಿಯನ್ ವ್ಯೂ ಪಡೆದುಕೊಂಡಿದೆ. ವಿಶ್ವದ ಯಾವ ಸಿನಿಮಾ ಹಾಡು ಕೂಡ ಒಂದು ದಿನಕ್ಕೆ ಈ ಮಟ್ಟಿನ ಹಿಟ್ಸ್ ಪಡೆದುಕೊಂಡಿಲ್ಲ. ಈಗ ಕೆಜಿಎಫ್ ಚಿತ್ರದ ಈ ಹಾಡು ಬಿಡುಗಡೆಯಾಗಿ ಹೊಸ ದಾಖಲೆ ಸೃಷ್ಟಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎ.ಆರ್ ರೆಹಮಾನ್‍ರನ್ನು ಭೇಟಿ ಮಾಡಿದ ಕೊಪ್ಪಳದ ಗಂಗಮ್ಮ

    ಎ.ಆರ್ ರೆಹಮಾನ್‍ರನ್ನು ಭೇಟಿ ಮಾಡಿದ ಕೊಪ್ಪಳದ ಗಂಗಮ್ಮ

    ಬೆಂಗಳೂರು: ಸಂಗೀತ ಮಾಂತ್ರಿಕ ಆಸ್ಕರ್ ಪ್ರಶಸ್ತಿ ವಿಜೇತ್ ಎರ್.ಆರ್ ರೆಹಮಾನ್ ಅವರನ್ನು ಕೊಪ್ಪಳದ ಗಂಗಮ್ಮ ಭೇಟಿ ಮಾಡಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದ ಮೂಲಕ ಎಲ್ಲರ ಗಮನ ಸೆಳೆದಿದ್ದ ಗಂಗಮ್ಮನ ಬಗ್ಗೆ ಎ.ಆರ್ ರೆಹಮಾನ್ ತಿಳಿದುಕೊಂಡಿದ್ದಾರೆ. 500 ರೂಪಾಯಿಗೆ ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದ ಗಾಯಕಿ ಈಗ ರಾಜ್ಯಮಟ್ಟದಲ್ಲಿ ಹೆಸರು ಮಾಡುತ್ತಿರುವ ವಿಷಯ ಕೇಳಿ ಎ.ಆರ್ ರೆಹಮಾನ್ ಸಂತಸ ವ್ಯಕ್ತಪಡಿಸಿದ್ದರು.

    ಇದೇ ತಿಂಗಳು 22ಕ್ಕೆ ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಸಿದ್ಧತೆಗಾಗಿ ಎ.ಆರ್ ರೆಹಮಾನ್ ಬೆಂಗಳೂರಿಗೆ ಆಗಮಿಸಿದ್ದರು. ಇದೇ ವೇಳೆ ಗಂಗಮ್ಮರನ್ನು ಎ.ಆರ್ ರೆಹಮಾನ್ ಭೇಟಿ ಮಾಡಿ ಶುಭ ಹಾರೈಸಿದ್ದಾರೆ.

    ಗಂಗಮ್ಮ 20 ವರ್ಷದಿಂದಲೂ ಹಾಡುತ್ತಿದ್ದು, ಫೇಸ್‍ಬುಕ್ ವಿಡಿಯೋದಿಂದಾಗಿ ಎಲ್ಲೆಡೆ ಫೇಮಸ್ ಆಗಿದ್ದರು. ಇವರು ಹಾಡುತ್ತಿದ್ದ ವಿಡಿಯೋವನ್ನು ಸ್ಟುಡಿಯೋ ಮಾಲೀಕ ಶಿವಪ್ರಸಾದ್ ಲೈವ್ ಮಾಡಿದ್ದರು. ಆ ವಿಡಿಯೋ 24 ಗಂಟೆಯಲ್ಲಿ ಬರೋಬ್ಬರಿ 5 ಲಕ್ಷಕ್ಕೂ ಹೆಚ್ಚು ಜನ ಹಾಡು ಕೇಳಿದ್ದರು.

    ನಾನು ಚಿಕ್ಕವಯಸ್ಸಿನಿಂದಲೂ ಹಾಡನ್ನು ಹಾಡಲು ಶುರು ಮಾಡಿದೆ. ಆದರೆ ಆಗ ಆರ್ಕೆಸ್ಟ್ರಾ ಇರಲಿಲ್ಲ. ನಂತರ ಕೊಪ್ಪಳದಲ್ಲಿ ಆರ್ಕೆಸ್ಟ್ರಾ ಶುರುವಾದಾಗ 20 ವರ್ಷದಿಂದ ಹಾಡಲು ಶುರು ಮಾಡಿದ್ದೇನೆ. ಈಗ ನಾನು ಗುರುತಿಸಿಕೊಳ್ಳುತ್ತಿದ್ದೇನೆ. ವಿಡಿಯೋ ವೈರಲ್ ಆಗಿದ್ದಕ್ಕೆ ನನ್ನ ಕುಟುಂಬದವರು ಸಂತೋಷವಾಗಿದ್ದಾರೆ ಎಂದು ಗಂಗಮ್ಮ ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv