Tag: ಭೇಟಿ

  • ನಿನ್ನೆಯೇ ಭೇಟಿ ಮಾಡಬೇಕಿತ್ತು- ಡಿಕೆಶಿ ಜೊತೆ ಮಾತುಕತೆಯ ಬಳಿಕ ಸಿದ್ದು ಹೇಳಿಕೆ

    ನಿನ್ನೆಯೇ ಭೇಟಿ ಮಾಡಬೇಕಿತ್ತು- ಡಿಕೆಶಿ ಜೊತೆ ಮಾತುಕತೆಯ ಬಳಿಕ ಸಿದ್ದು ಹೇಳಿಕೆ

    ಬೆಂಗಳೂರು: ಇಡಿ ಬಂಧನದ ಬಳಿಕ ಷರತ್ತು ಬದ್ಧ ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

    ಡಿಕೆ ಶಿವಕುಮಾರ್ ಭೇಟಿ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಿದ್ದರಾಮಯ್ಯ, ದೆಹಲಿಯ ಆಸ್ಪತ್ರೆಯಲ್ಲಿರುವಾಗಲೇ ಡಿಕೆಶಿ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಆದರೆ ಅದಕ್ಕೆ ಇಡಿ ಅಧಿಕಾರಿಗಳು ಅವಕಾಶ ನೀಡಿರಲಿಲ್ಲ. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಆಗಲೂ ನನಗೆ ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ ಎಂದರು.

    ಡಿಕೆಶಿ ಅವರನ್ನು ಶನಿವಾರವೇ ಭೇಟಿ ಮಾಡಬೇಕಿತ್ತು. ಆದರೆ ನನಗೆ ಬೇರೆ ಕೆಲಸ ಇದ್ದ ಕಾರಣ ಗದಗಕ್ಕೆ ಹೋಗಿದ್ದೆ. ಆದ್ದರಿಂದ ಇಂದು ಅವರ ಮನೆಗೆ ಬಂದಿದ್ದೇನೆ. ಅವರನ್ನು ಮಾತನಾಡಿಸಿದ್ದೇನೆ. ಅವರ ಆರೋಗ್ಯ ಈಗ ಸುಧಾರಿಸಿದೆ. ನ್ಯಾಯಾಂಗ ಬಂಧನದಲ್ಲಿ ಇದ್ದಾಗ ಸ್ವಲ್ಪ ಬಿಪಿ ಶುಗರ್ ಜಾಸ್ತಿಯಾಗಿತ್ತು ಎಂದು ಹೇಳಿದ್ದರು. ಆದರೆ ಈಗ ಪರವಾಗಿಲ್ಲ ಚೆನ್ನಾಗಿ ಇದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

    ಇದೇ ವೇಳೆ ಡಿ.ಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡಲಾಗುತ್ತದೆ ಎಂದು ಕೇಳಿದಾಗ ಅದು ಹೈಕಮಾಂಡ್‍ಗೆ ಬಿಟ್ಟ ವಿಚಾರ, ಅದನ್ನು ನಾವು ಹೇಳಲು ಆಗುವುದಿಲ್ಲ. ಹೈಕಮಾಂಡ್ ಅದನ್ನು ತೀರ್ಮಾನ ಮಾಡುತ್ತದೆ ಎಂದರು. ಉಪಚುನಾವಣೆ ಬಗ್ಗೆ ಕೇಳಿದಾಗ ಈಗ ಆ ವಿಚಾರವನ್ನು ಮಾತನಾಡುವುದು ಬೇಡ ಅದರ ಬಗ್ಗೆ ಇನ್ನೊಂದು ದಿನ ಚರ್ಚೆ ಮಾಡೋಣ ಎಂದು ಹೇಳಿದರು.

    ಶನಿವಾರ ಬೆಂಗಳೂರಿಗೆ ಬಂದಿದ್ದ ಡಿಕೆಶಿಗೆ ಅಭಿಮಾನಿಗಳು, ಕಾರ್ಯಕರ್ತರಿಂದ ಭರ್ಜರಿ ಸ್ವಾಗತ ಸಿಕ್ಕಿತ್ತು. ಆದರೆ ಸಿದ್ದರಾಮಯ್ಯ ಮಾತ್ರ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯರನ್ನು ತರಾಟೆಗೆ ತೆಗೆದುಕೊಂಡಿದ್ದು, ಹೈಕಮಾಂಡ್ ಸೂಚನೆಯಂತೆ ಇಂದು ಅವರು ಡಿಕೆಶಿಯನ್ನು ಅವರ ನಿವಾಸ ಸದಾಶಿವನಗರದಲ್ಲಿ ಭೇಟಿ ಮಾಡಿದ್ದು, ಡಿಕೆಶಿಯನ್ನು ಆಲಂಗಿಸಿಕೊಂಡು ನೈತಿಕ ಧೈರ್ಯ ತುಂಬಿದ್ದಾರೆ.

    ಈ ವೇಳೆ ಸಿದ್ದು ಮತ್ತು ಪರಮೇಶ್ವರ್ ಬಳಿ ಡಿಕೆಶಿ ತಂದೆಗೆ ಎಡೆ ಇಡುವುದು ತಪ್ಪಿಹೋದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಗೌರಿ ಹಬ್ಬದ ಸಂದರ್ಭದಲ್ಲಿ ತಂದೆಗೆ ಎಡೆ ಇಡಬೇಕಿತ್ತು. ಆದರೆ ಆಗ ಐಟಿ ವಿಚಾರಣೆಯಿಂದ ಅದು ಕೂಡ ಆಗಲಿಲ್ಲ. ಈಗ ಇನ್ನೊಂದು ದಿನ ನೋಡಿ ನಾನು, ಸುರೇಶ್ ಎಡೆ ಇಟ್ಟು ಪೂಜೆ ಮಾಡಬೇಕು ಎಂದು ಡಿಕೆಶಿ ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ.

  • ‘ಪೈಲ್ವಾನ್’ ಸುದೀಪ್ ನಿವಾಸಕ್ಕೆ ಕಮಿಷನರ್ ಭಾಸ್ಕರ್ ರಾವ್ ಭೇಟಿ!

    ‘ಪೈಲ್ವಾನ್’ ಸುದೀಪ್ ನಿವಾಸಕ್ಕೆ ಕಮಿಷನರ್ ಭಾಸ್ಕರ್ ರಾವ್ ಭೇಟಿ!

    ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರದ ಪೈರಸಿಯ ಸುತ್ತಾ ಹಲವಾರು ದಿಕ್ಕಿನ ಚರ್ಚೆ, ಅಭಿಮಾನಿಗಳ ನಡುವಿನ ತಿಕ್ಕಾಟದ ವಿದ್ಯಮಾನಗಳು ಕೆಲ ದಿನಗಳಿಂದ ಜೋರಾಗಿವೆ. ಇದೆಲ್ಲದರ ನಡುವೆಯೇ ಪೈಲ್ವಾನ್ ಯಶಸ್ವಿ ಪ್ರದರ್ಶನ ಕಾಣುತ್ತಾ, ಅದಕ್ಕೆ ತಕ್ಕುದಾದ ಕಲೆಕ್ಷನ್ನಿನೊಂದಿಗೆ ಮುಂದುವರಿಯುತ್ತಿದೆ. ಪೈರಸಿ ಬಗೆಗಿನ ವಾದ ವಿವಾದಗಳು ಚಾಲ್ತಿಯಲ್ಲಿರುವಾಗಲೇ ಇಂದು ಅಚ್ಚರಿಯ ವಿದ್ಯಮಾನವೊಂದು ನಡೆದಿದೆ. ಸುದೀಪ್ ಮನೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಟಿ ನೀಡಿದ್ದಾರೆ.

    ಸುದೀಪ್ ಇಂದು ಭಾಸ್ಕರ್ ರಾವ್ ಅವರೊಂದಿಗಿರೋ ಫೋಟೋವನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ಅತ್ತ ಅಭಿಮಾನಿಗಳ ನಡುವಿನ ಕಲಹ ತಾರಕಕ್ಕೇರಿರೋ ಘಳಿಗೆಯಲ್ಲಿಯೇ ಈ ದಿನ ಬೆಳ್ಳಂಬೆಳಗ್ಗೆ ಸುದೀಪ್ ಮನೆ ಮುಂದೆ ಪೊಲೀಸರು ಬೀಡು ಬಿಟ್ಟಿದ್ದರಿಂದ ಜನ ಈ ಬಗ್ಗೆ ಕುತೂಹಲಗೊಂಡಿದ್ದರು. ಬಳಿಕ ಭಾಸ್ಕರ್ ರಾವ್, ಸುದೀಪ್ ಮನೆಗೆ ಭೇಟಿ ನೀಡಿದ್ದಾರೆನ್ನಲಾಗಿದೆ. ಆದರೆ ಈ ಭೇಟಿಯ ಹಿಂದಿನ ಉದ್ದೇಶವೇನೆಂಬುದು ಮಾತ್ರ ಜಾಹೀರಾಗಿಲ್ಲ.

    ಭಾಸ್ಕರ್ ರಾವ್ ಅವರು ಸುದೀಪ್ ಮತ್ತು ಅವರ ಕುಟುಂಬದೊಂದಿಗೆ ಒಂದಷ್ಟು ಕಾಲ ಕಳೆದಿದ್ದಾರೆ. ಕಿಚ್ಚ ಹಾಗೂ ಅವರ ತಂದೆಯೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಕಮಿಷನರ್ ಭೇಟಿಯ ಸುತ್ತಲೂ ಈಗ ಕ್ಯೂರಿಯಾಸಿಟಿ ಮಡುಗಟ್ಟಿಕೊಂಡಿದೆ. ಬೇರೆ ಸಮಯದಲ್ಲಾಗಿದ್ದರೆ ಇದು ಇಷ್ಟೊಂದು ಮಹತ್ವದ ಸಂಗತಿಯಾಗುತ್ತಿರಲಿಲ್ಲವೇನೋ. ಆದರೆ ಇತ್ತೀಚೆಗಷ್ಟೇ ಪೈಲ್ವಾನ್ ಪೈರಸಿ ವಿರುದ್ಧ ಪೈಲ್ವಾನ್ ಚಿತ್ರತಂಡ ಸೈಬರ್ ಕ್ರೈಂಗೆ ದೂರು ಸಲ್ಲಿಸಿದೆ. ಈ ಹೊತ್ತಿನಲ್ಲಿಯೇ ಪೊಲೀಸ್ ಆಯುಕ್ತರ ಭೇಟಿ ಸಹಜವಾಗಿಯೇ ಕುತೂಹಲಕ್ಕೆ ಕಾರಣವಾಗಿದೆ.

  • ಒಂದು ರಾಷ್ಟ್ರ ಒಂದು ಸಂವಿಧಾನ ಅಭಿಯಾನ – ಕಣವಿಯನ್ನು ಭೇಟಿ ಮಾಡಿದ ಕೋಟಾ

    ಒಂದು ರಾಷ್ಟ್ರ ಒಂದು ಸಂವಿಧಾನ ಅಭಿಯಾನ – ಕಣವಿಯನ್ನು ಭೇಟಿ ಮಾಡಿದ ಕೋಟಾ

    – ಸಿದ್ದರಾಮಯ್ಯ ಟೀಕೆ ಮಾಡುವುದು ಸಹಜ

    ಧಾರವಾಡ: ಒಂದು ರಾಷ್ಟ್ರ ಒಂದು ಸಂವಿಧಾನ ಅಭಿಯಾನ ಹಿನ್ನೆಲೆ ಮೀನುಗಾರಿಕೆ, ಬಂದರು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಿರಿಯ ಕವಿ ನಾಡೋಜ ಚನ್ನವೀರ ಕಣವಿ ಅವರ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ್ದಾರೆ.

    ಸಾಹಿತಿಗಳ ಭೇಟಿಯಾಗಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ 370 ಕಾಯಿದೆ ರದ್ದು ಮಾಡಿದ ಹಿನ್ನೆಲೆ ನಾವೆಲ್ಲ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇವೆ. ಕಾಯ್ದೆ ರದ್ಧತಿ ಹಾಗೂ ಒಂದು ರಾಷ್ಟ್ರ ಒಂದು ಧ್ವಜದ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲಿದ್ದೇವೆ ಎಂದು ತಿಳಿಸಿದರು.

    ಈ ವೇಳೆ ಹಿಂದಿ ವಿಚಾರದಲ್ಲಿ ಅಮಿತ್ ಶಾ ಅವರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಆ ವಿಚಾರದ ಬಗ್ಗೆ ಅಮಿತ್ ಶಾ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಒಂದು ಭಾಷೆಯಾಗಿ ಹಿಂದೆ ಕಲಿಯಬೇಕು ಎಂದಿದ್ದಾರೆ ಹೀಗಾಗಿ ಆ ಬಗ್ಗೆ ಗೊಂದಲ ಬೇಡ. ನಮ್ಮ ನಿಲುವಿನಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ಇರಲಿದೆ ಎಂದು ಸ್ಪಷ್ಟಪಡಿಸಿದರು.

    ಉಡುಪಿ ಉಸ್ತುವಾರಿ ಕೈ ತಪ್ಪಿದೆ ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಕೋಟಾ, ಶಾಸಕರೆಲ್ಲ ಹೋಗಿ ಸಿಎಂ ಭೇಟಿ ಮಾಡಿದ್ದಾರೆ. ಸ್ವಾಭಾವಿಕವಾಗಿ ತಮ್ಮ ಕ್ಷೇತ್ರದ ಬಗ್ಗೆ ಮಾತನಾಡಲು ಭೇಟಿ ಮಾಡುವುದು ರೂಢಿ. ಉಸ್ತುವಾರಿ ವಿಚಾರದ ಬಗ್ಗೆ ಏನು ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ಇವತ್ತು ಹೋದ ನಂತರ ಎಲ್ಲವನ್ನು ನೋಡಿ ಸರಿ ಮಾಡುತ್ತೇವೆ. ದೊಡ್ಡ ಜಿಲ್ಲೆಯಾಗಿರುವ ಹಿನ್ನೆಲೆ ನನಗೆ ಒಂದೇ ಜಿಲ್ಲೆ ಕೊಟ್ಟಿರಬಹುದು. ಆ ಜಿಲ್ಲೆಯ ಶಾಸಕನಾದ ಕಾರಣ ದಕ್ಷಿಣ ಕನ್ನಡ ಕೊಟ್ಟಿದ್ದಾರೆ. ಕಾರ್ಯಕರ್ತನಾಗಿ ನನ್ನ ಕೆಲಸ ನಾನು ಮಾಡುವೆ ಎಂದು ಹೇಳಿದರು.

    ಸದ್ಯ 17 ಜನರ ಸಂಪುಟ ಆಗಿದೆ ಮುಂದೆ ವಿಸ್ತರಣೆಯಾದಾಗ ಮತ್ತೆ ಕೆಲವರಿಗೆ ಆದ್ಯತೆ ಕೊಡುತ್ತಾರೆ. ಸಿದ್ದರಾಮಯ್ಯ ಆಡಳಿತ ಪಕ್ಷದ ಲೋಪದೋಷ ನೋಡಿ ಟೀಕೆ ಮಾಡುವುದು ಸಹಜ. ಅವರೇನು ಹೊಗಳುತ್ತಾರೆ ಎಂದು ನಾವು ಭಾವಿಸಿಲ್ಲ. ಅವರ ಟೀಕೆಗಳಿಗೆ ತಕ್ಕ ಉತ್ತರ ಕೊಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಿ ತೋರಿಸುತ್ತೇವೆ. ಡಿಕೆಶಿ ಇಡಿ ವಿಚಾರ ಬಿಜೆಪಿಗೆ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದರು.

  • ಕುರ್ತಾ, ಸಿಹಿ ಉಡುಗೊರೆಯೊಂದಿಗೆ ಮೋದಿ ಭೇಟಿ ಮಾಡಿದ ದೀದಿ

    ಕುರ್ತಾ, ಸಿಹಿ ಉಡುಗೊರೆಯೊಂದಿಗೆ ಮೋದಿ ಭೇಟಿ ಮಾಡಿದ ದೀದಿ

    ನವದೆಹಲಿ: ಸದಾ ಪ್ರಧಾನಿ ಮೋದಿಯವರನ್ನು ಟೀಕಿಸುತ್ತಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇಂದು ಕುರ್ತಾ, ಸಿಹಿ ತಿನಿಸಿನ ಉಡುಗೊರೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ.

    ಬಂಗಾಳದ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸುವುದರ ಹೊರತಾಗಿ ಮಮತಾ ಬ್ಯಾನರ್ಜಿಯವರು ಪ್ರಧಾನಿ ಮೋದಿಯೊಂದಿಗೆ ಖುಷಿಯ ಕ್ಷಣಗಳನ್ನು ಕಳೆದಿದ್ದು, ಕುರ್ತಾ, ಸಿಹಿ ನೀಡಿ ಆತ್ಮೀಯವಾಗಿ ಮಾತನಾಡಿದ್ದಾರೆ. ಭೇಟಿಯ ನಂತರ ಪ್ರತಿಕ್ರಿಯಿಸಿರುವ ಮಮತಾ ಪ್ರಧಾನಿ ಮೋದಿಯವರ ಭೇಟಿಯು ಸಂತೃಪ್ತಿ ತಂದಿದೆ ಹಾಗೂ ಫಲಪ್ರದವಾಗಿತ್ತು ಎಂದು ತಿಳಿಸಿದ್ದಾರೆ. ಇದನ್ನು ಓದಿ: ರಸಗುಲ್ಲಾ, ಗಿಫ್ಟ್ಸ್ ಕೊಡುತ್ತೇವೆ ಆದ್ರೆ ನಿಮಗೆ ಮತ ಕೊಡಲ್ಲ: ಮೋದಿಗೆ ದೀದಿ ಟಾಂಗ್

    ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಬಂಗಾಳಕ್ಕೆ ಆಹ್ವಾನಿಸಿದ್ದು, ಬಿರ್ಭಮ್‍ನಲ್ಲಿನ ಕಲ್ಲಿದ್ದಲು ಕ್ಷೇತ್ರ ಯೋಜನೆಗೆ ಚಾಲನೆ ನೀಡಲು ಆಗಮಿಸುವಂತೆ ತಿಳಿಸಿದ್ದೇನೆ. ಪಶ್ಚಿಮ ಬಂಗಾಳದಲ್ಲಿ ಸ್ಥಾಪನೆಯಾಗುತ್ತಿರುವ ವಿಶ್ವದ ಎರಡನೇ ಅತಿದೊಡ್ಡ ಕಲ್ಲಿದ್ದಲು ಬ್ಲಾಕ್‍ನ್ನು ಉದ್ಘಾಟಿಸಲು ಮೋದಿಯವರನ್ನು ಆಮಂತ್ರಿಸಿದ್ದೇನೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

    ರಾಜ್ಯದ ವೆಸ್ಟ್ ಬೆಂಗಾಲ್(ಪಶ್ಚಿಮ ಬಂಗಾಳ) ಹೆಸರನ್ನು ಬೆಂಗಾಲ್(ಬಂಗಾಳ) ಎಂದು ಮರುನಾಮಕರಣ ಮಾಡವುದು ಸೇರಿದಂತೆ ರಾಜ್ಯದ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿದ್ದೇನೆ ಎಂದು ಭೇಟಿ ನಂತರ ಮಮತಾ ತಿಳಿಸಿದ್ದಾರೆ. ಇದನ್ನು ಓದಿಮಮತಾ ಬ್ಯಾನರ್ಜಿ ಪ್ರತಿ ವರ್ಷ ಕುರ್ತಾ ಉಡುಗೊರೆ ನೀಡ್ತಾರೆ: ಮೋದಿ

    ಇತ್ತೀಚೆಗೆ ರಾಜ್ಯ ಸರ್ಕಾರ ಸಹ ರಾಜ್ಯದ ವಿವಿಧ ಸಮಸ್ಯೆಗಳ ಕುರಿತು ಗೃಹ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಅಲ್ಲದೆ, ತೃಣಮೂಲ ಕಾಂಗ್ರೆಸ್(ಟಿಎಂಸಿ) ನಿಯೋಗ ಸಹ ಕಳೆದ ಅಧಿವೇಶನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತ್ತು.

    ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಹೂಡಿಕೆ ಮಾಡುವುದರ ಕುರಿತು ಸಹ ಮೋದಿ ಅವರೊಂದಿಗೆ ಚರ್ಚಿಸಲಾಗಿದೆ. ಇದು ರಾಜಕೀಯ ಭೇಟಿಯಲ್ಲ ಕೇವಲ ಕುಶಲೋಪರಿಯ ಭೇಟಿ. ಅಮಿತ್ ಶಾ ಅವರು ಸಮಯ ನೀಡಿದರೆ ಸೌಜನ್ಯಕ್ಕಾಗಿ ನಾಳೆ ಅವರನ್ನೂ ಒಮ್ಮೆ ಭೇಟಿ ಮಾಡಲು ಬಯಸುತ್ತೇನೆ ಎಂದು ಇದೇ ವೇಳೆ ದೀದಿ ತಿಳಿಸಿದರು.

    ಎನ್‍ಆರ್ ಸಿ  ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಮತಾ, ಮೋದಿಯವರೊಂದಿಗೆ ಎನ್‍ಆರ್ ಸಿ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಬಿಜೆಪಿಯವರು ಎಲ್ಲಿ ಬೇಕಾದರೂ ರಾಜಕೀಯ ಹೇಳಿಕೆಗಳನ್ನು ನೀಡಬಹುದು. ಆದರೆ ಪ್ರಧಾನಿಯವರೊಂದಿಗಿನ ನನ್ನ ಭೇಟಿ ರಾಜಕೀಯವಾಗಿರಲಿಲ್ಲ ಎಂದು ತಿಳಿಸಿ ರಾಜಕೀಯದ ಕುರಿತು ಪ್ರಶ್ನೆಗಳಿಗೆ ಉತ್ತರಿಸುವುದನ್ನೂ ನಿರಾಕರಿಸಿದ್ದಾರೆ.

    ಮಂಗಳವಾರ ದೆಹಲಿಗೆ ತೆರಳುತ್ತಿರುವ ಸಂದರ್ಭದಲ್ಲಿ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಕೇಂದ್ರ ಹಾಗೂ ರಾಜ್ಯಗಳ ಜಂಟಿ ಕಾರ್ಯಕ್ರಮಗಳಡಿ ಪಶ್ಚಿಮ ಬಂಗಾಳಕ್ಕೆ ನೀಡಲು ಬಾಕಿ ಇರುವ ಹಣವನ್ನು ಕೇಳಲು ಪ್ರಧಾನಿ ಮೋದಿಯರವನ್ನು ಭೇಟಿ ಮಾಡುತ್ತಿದ್ದೇನೆ ಎಂದು ತಿಳಿಸಿದ್ದರು.

  • ಮಂಗಳವಾರ ಮೋದಿ ಭೇಟಿಯಾಗಲಿದ್ದಾರೆ ಮಮತಾ

    ಮಂಗಳವಾರ ಮೋದಿ ಭೇಟಿಯಾಗಲಿದ್ದಾರೆ ಮಮತಾ

    ನವದೆಹಲಿ: ಸಮಯ ಸಿಕ್ಕಾಗಲೆಲ್ಲ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಮಮತಾ ಬ್ಯಾನರ್ಜಿಯವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದು, ಭಾರೀ ಕುತೂಹಲ ಕೆರಳಿಸಿದೆ. ಈ ಮೂಲಕ ಲೋಕಸಭಾ ಚುನಾವಣೆ ನಂತರ ಮೋದಿ ಹಾಗೂ ದೀದಿಯವರ ಮೊದಲ ಭೇಟಿ ಇದಾಗಿದೆ.

    ಮೂಲಗಳ ಪ್ರಕಾರ ನಾಳೆ ದೆಹಲಿಗೆ ತೆರಳಲಿರುವ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದ ಸಮಸ್ಯೆಗಳ ಕುರಿತು ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯದ ಹೆಸರು ಬದಲಾವಣೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಅಲ್ಲದೆ ಇಂಗ್ಲಿಷಿನ ‘ವೆಸ್ಟ್’ ತೆಗೆದು ಬಂಗಾಳ ಎಂದು ಬದಲಿಸಲು ಬಯಸಿದೆ. ಈ ಹಿಂದೆ ಬಜೆಟ್ ಅಧಿವೇಶನದ ವೇಳೆ ಸುದೀಪ್ ಬಂದೋಪಾಧ್ಯಾಯ ನೇತೃತ್ವದ ಪಕ್ಷದ ನಿಯೋಗವು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಈ ಬೇಡಿಕೆಯನ್ನು ಇಟ್ಟಿತ್ತು. ಆದರೆ, ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ.

    ಅಜೆಂಡಾದಲ್ಲಿ ಡನ್‍ಲಾಪ್ ಕಾರ್ಖಾನೆಯನ್ನು ರಾಜ್ಯದ ಸುಪರ್ದಿಗೆ ಪಡೆಯುವುದು ಸಹ ಸೇರಿದೆ. ಈ ಕುರಿತು ರಾಷ್ಟ್ರಪತಿಗಳ ಅಂಕಿತ ಹಾಕುವುದನ್ನು ನಿರೀಕ್ಷಿಸಲಾಗುತ್ತಿದೆ. ಅಲ್ಲದೆ, ಮನ್ರೇಗಾ(ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಇದರ ಧನಸಹಾಯದ ಕುರಿತು ಸಹ ಚರ್ಚಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಪ್ರಧಾನಿ ನರೇಂದ್ರ ಮೋದಿಯವರನ್ನು ಸದಾ ಟೀಕಿಸುವ ಮಮತಾ ಬ್ಯಾನರ್ಜಿ ರಾಜ್ಯದ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವುದು ಸೇರಿದಂತೆ ಅನೇಕ ವಿಷಯಗಳ ಕುರಿತು ಕೇಂದ್ರ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಟಿಎಂಸಿ ಮತ್ತು ಎಡ ಪಕ್ಷಗಳಿಗೆ ಶಾಕ್ ನೀಡಿತ್ತು.

    ಇತ್ತೀಚೆಗೆ ಪ್ರಧಾನಿ ಮೋದಿ ಚಂದ್ರಯಾನದ-2ನ ವಿಕ್ರಂ ಲ್ಯಾಂಡರ್ ಚಂದ್ರನಲ್ಲಿ ಲ್ಯಾಂಡ್ ಅಗುವುದನ್ನು ವೀಕ್ಷಿಸಲು ಬೆಂಗಳೂರಿಗೆ ಆಗಮಿಸಿದಾಗಲೂ ಟೀಕಿಸಿದ್ದರು. ಈ ಹಿಂದೆ ಯಾವುದೇ ಸರ್ಕಾರ ಚಂದ್ರಯಾನದಂತಹ ಪ್ರಯತ್ನ ಮಾಡಿಲ್ಲವೇ ಬಿಜೆಪಿ ಸರ್ಕಾರ ಮಾತ್ರ ಮೊದಲ ಬಾರಿಗೆ ಮಾಡುತ್ತಿದೆಯೇ ಎಂದು ಹರಿಹಾಯ್ದಿದ್ದರು.

    ಕಳೆದ ವರ್ಷ ಮಾರ್ಚ್‍ನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದರು. ಈ ವೇಳೆ ರಾಜ್ಯ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿದ್ದರು. ಆಗ ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದರು.

  • ಮೊದಲ ಭೇಟಿಯಲ್ಲಿ ಅನುಷ್ಕಾಗೆ ಹೇಳಿದ್ದನ್ನು ಬಹಿರಂಗಪಡಿಸಿದ ಕೊಹ್ಲಿ

    ಮೊದಲ ಭೇಟಿಯಲ್ಲಿ ಅನುಷ್ಕಾಗೆ ಹೇಳಿದ್ದನ್ನು ಬಹಿರಂಗಪಡಿಸಿದ ಕೊಹ್ಲಿ

    ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ಪತ್ನಿ ಅನುಷ್ಕಾರನ್ನು ಮೊದಲ ಬಾರಿಗೆ ಭೇಟಿಯಾದಾಗ ಹೇಳಿದ ಮಾತುಗಳನ್ನು ಬಹಿರಂಗಪಡಿಸಿದ್ದಾರೆ.

    ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಡಿಸೆಂಬರ್ 2017 ರಲ್ಲಿ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಅವರು 2013ರಲ್ಲಿ ಮೊದಲ ಬಾರಿಗೆ ಜಾಹೀರಾತಿನಲ್ಲಿ ನಟಿಸುವ ಮೂಲಕ ಪರಸ್ಪರ ಭೇಟಿಯಾದಾಗ ಇಬ್ಬರ ನಡುವೆ ಪ್ರೀತಿ ಪ್ರಾರಂಭವಾಯಿತು.

    ಈಗ ತಮ್ಮ ಮೊದಲ ಭೇಟಿಯ ಬಗ್ಗೆ ಅಮೆರಿಕದ ಟೆಲಿವಿಷನ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿರುವ ಕೊಹ್ಲಿ, ನಾನು ಮೊದಲು ಅನುಷ್ಕಾಳನ್ನು ಭೇಟಿಯಾದಾಗ ಜೋಕ್ ಮಾಡಲು ಹೋಗಿ ನಗೆಪಾಟಲಿಗೆ ಒಳಗಾಗಿದ್ದೆ ಎಂದು ಹೇಳಿದ್ದಾರೆ. ನಾನು ಶಾಂಪೂ ಒಂದರ ಜಾಹೀರಾತು ಶೂಟಿಂಗ್‍ನಲ್ಲಿ ಮೊದಲು ಅನುಷ್ಕಾಳನ್ನು ಭೇಟಿಯಾಗಿದ್ದು, ನನ್ನ ಮ್ಯಾನೇಜರ್ ಬಂದು ನೀವು ಅನುಷ್ಕಾ ಅವರ ಜೊತೆ ನಟನೆ ಮಾಡಬೇಕು ಎಂದು ಹೇಳಿದಾಗ ನಾನು ನರ್ವಸ್ ಆಗಿದ್ದೆ ಎಂದು ಹೇಳಿದ್ದಾರೆ.

    ಮೊದಲು ಸೆಟ್‍ಗೆ ಹೋದಾಗ ಅನುಷ್ಕಾ ಇನ್ನೂ ಬಂದಿರಲಿಲ್ಲ. ಆಕೆ ವೃತ್ತಿಪರ ನಟಿ ನನಗೆ ನಟನೆ ಬರುವುದಿಲ್ಲ. ನಾನು ಹೇಗೆ ಅವರ ಜೊತೆ ನಟಿಸುವುದು ಎಂದು ಭಯಪಟ್ಟಿದೆ. ನಂತರ ಅನುಷ್ಕಾ ಬಂದಾಗ ನಾನು ನನ್ನ ಭಯವನ್ನು ಹೋಗಿಸಲು ಜೋಕ್ ಮಾಡಬೇಕು ಎಂದುಕೊಂಡೆ. ಆ ದಿನ ಅನುಷ್ಕಾ ಹೀಲ್ಸ್ ಹಾಕಿಕೊಂಡು ಬಂದಿದ್ದರು. ಆ ಹೀಲ್ಸ್ ಧರಿಸಿದ್ದರಿಂದ ಆಕೆ ನನಗಿಂತ ಎತ್ತರವಾಗಿ ಕಾಣುತ್ತಿದ್ದರು. ಅದನ್ನು ಕಂಡ ನಾನು ತಮಾಷೆ ಮಾಡಿದೆ ಎಂದು ಹೇಳಿದ್ದಾರೆ.

    ತನ್ನ ಹೀಲ್ಸ್ ಬಗ್ಗೆ ಕಮೆಂಟ್ ಮಾಡಿದ ತಕ್ಷಣ ಅನುಷ್ಕಾ ನನ್ನ ಮೇಲೆ ಗರಂ ಆಗಿದ್ದರು. ನಂತರ ನಾನು ಆ ರೀತಿ ಹೇಳಿದ್ದು, ತಮಾಷೆಗಾಗಿ ಎಂದು ಹೇಳಿದೆ. ಈ ಜೋಕ್ ನನಗೆ ನನ್ನ ಜೀವನದಲ್ಲಿ ವಿಲಕ್ಷಣ ಕ್ಷಣವಾಗಿತ್ತು. ನಾನು ನಿಜವಾಗಿಯೂ ಮೂರ್ಖನಾಗಿದ್ದೆ. ಆಕೆಗೆ ನಟನೆ ಮಾಡುವ ಸಮಯದಲ್ಲಿ ತುಂಬಾ ಆತ್ಮ ವಿಶ್ವಾಸದಲ್ಲಿ ಇರುತ್ತಾಳೆ ಎಂದು ಕೊಹ್ಲಿ ಹೇಳಿದ್ದಾರೆ.

    ಅನುಷ್ಕಾ ತಮ್ಮ ಮದುವೆಯನ್ನು ಇಟಲಿಯಲ್ಲಿ ಯಾವ ರೀತಿ ಆಯೋಜನೆ ಮಾಡಿದ್ದರು ಎಂದು ಹೇಳಿರುವ ಕೊಹ್ಲಿ, ನಾವು ಮದುವೆಯಾಗುವ ಜಾಗದ ಬಗ್ಗೆ ಯಾರಿಗೂ ಗೊತ್ತಾಗದ ರೀತಿಯಲ್ಲಿ ಅನುಷ್ಕಾ ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿದ್ದರು. ಅವರು ಯಾವ ಮಟ್ಟಕ್ಕೆ ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿದ್ದರು ಎಂದರೆ ನಾವು ಮದುವೆಯಾಗುವ ಜಾಗ ಮದುವೆಗೆ ಬರುವ ವಿಐಪಿಗಳಿಗೂ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.

    ಈಗ ಯಾವುದೇ ಚಿತ್ರದಲ್ಲಿ ನಟನೆ ಮಾಡದೇ ಇರುವ ಅನುಷ್ಕಾ ಕೊನೆಯ ಬಾರಿಗೆ ನಟನೆ ಮಾಡಿದ್ದು, ಅನಂದ್ ಎಲ್ ರಾಯ್ ನಿರ್ದೇಶನ ಝಿರೋ ಚಿತ್ರದಲ್ಲಿ. ಈ ಚಿತ್ರದಲ್ಲಿ ಅನುಷ್ಕಾ ಜೊತೆ ಕತ್ರಿನಾ ಕೈಫ್ ಮತ್ತು ಶಾರೂಖ್ ಖಾನ್ ಅಭಿನಯ ಮಾಡಿದ್ದರು. ಈ ಚಿತ್ರದ ನಂತರ ಅನುಷ್ಕಾ ಮುಂದಿನ ಯಾವುದೇ ಚಿತ್ರವನ್ನು ಒಪ್ಪಿಕೊಂಡಿಲ್ಲ.

    ಈಗ ಪ್ರಸ್ತುತ ವಿಂಡೀಸ್ ಪ್ರವಾಸದಲ್ಲಿರುವ ಕೊಹ್ಲಿ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವುದರ ಜತೆಗೆ ಭಾರತ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎನ್ನುವ ದಾಖಲೆ ಬರೆದಿದ್ದಾರೆ. ಇದರ ಜೊತೆಗೆ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಟೆಸ್ಟ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಜಾರಿದ್ದಾರೆ.  ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ಮೊದಲ ಸ್ಥಾನಕ್ಕೇರಿದ್ದಾರೆ.

  • ಎರಡನೇ ಬಾರಿಯೂ ನೋವು ಕೇಳಲು ಬಾರದ ಸಿಎಂ: ಸಂತ್ರಸ್ತರು ಅಕ್ರೋಶ

    ಎರಡನೇ ಬಾರಿಯೂ ನೋವು ಕೇಳಲು ಬಾರದ ಸಿಎಂ: ಸಂತ್ರಸ್ತರು ಅಕ್ರೋಶ

    ಕಾರವಾರ: ಎರಡನೇ ಬಾರಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಭೇಟಿ ಕಾರ್ಯಕ್ರಮ ರದ್ದಾಗಿರುವುದಕ್ಕೆ ಸಂತ್ರಸ್ತರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಂದು ಮುಂಜಾನೆಯಿಂದ ಕಾರವಾರದ ಸರ್ಕಿಟ್ ಹೌಸ್ ಬಳಿ ನರೆದಿದ್ದು ನೆರೆ ಸಂತ್ರಸ್ತರು ತಮ್ಮ ಊರಿನ ಸಮಸ್ಯೆ ಕುರಿತು ಸಿಎಂ ಬಳಿ ಮನವಿ ಸಲ್ಲಿಸುವವರಿದ್ದರು. ಆದರೆ ಹವಾಮಾನ ವೈಪರಿತ್ಯದಿಂದ ಸಿಎಂ ಅವರ ಅಧಿಕೃತ ಕಾರ್ಯಕ್ರಮ ಮೊಟಕುಗೊಳಿಸಿ, ಹಾವೇರಿಗೆ ಮಾತ್ರ ನಿಗದಿಮಾಡಲಾಗಿತ್ತು. ಇದರಿಂದ ಸಿಎಂ ಬಿಎಸ್‍ವೈಗಾಗಿ ಕಾದು ಕುಳಿತ ಜನರು ಅಸಮಾಧಾನ ಹೊರ ಹಾಕಿದರು.

    ಸಿಎಂ ಬಾರದ ಕಾರಣ ಸಂತ್ರಸ್ತರು ಆಕ್ರೋಶಗೊಂಡಿದ್ದು, ಈ ಹಿಂದೆ ಸಹ ಕಾರ್ಯಕ್ರಮ ನಿಗದಿಯಾಗಿತ್ತು ಆದರೆ ರದ್ದಾಗಿತ್ತು. ಜಿಲ್ಲೆಗೆ ಕೇಂದ್ರ ನಿಯೋಗ ಸಹ ಬರಲಿಲ್ಲ. ವಿರೋಧ ಪಕ್ಷದ ನಾಯಕರೂ ಬರಲಿಲ್ಲ. ನಮ್ಮ ಕಷ್ಟವನ್ನು ಕೇಳಲು ನಾಯಕರಿಗೆ ಸಮಯ ಇಲ್ಲ. ಪ್ರವಾಹ ಪೀಡಿತ ಎಲ್ಲಾ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ಮಲತಾಯಿ ಧೋರಣೆ ತೋರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಎಂಗಾಗಿ ಕಾದು ಕುಳಿತ ಅಧಿಕಾರಿಗಳಿಂದ ಹಿಡಿದು ಎಲ್ಲರೂ ಮರಳಿ ಹೋದರು.

  • ಸೋದೆ ವಾಧಿರಾಜ ಮಠಕ್ಕೆ ಅಣ್ಣಾಮಲೈ ಭೇಟಿ

    ಸೋದೆ ವಾಧಿರಾಜ ಮಠಕ್ಕೆ ಅಣ್ಣಾಮಲೈ ಭೇಟಿ

    ಕಾರವಾರ: ಇಂದು ಉತ್ತರ ಕರ್ನಾಟಕದ ಸೋದೆ ವಾಧಿರಾಜ ಮಠಕ್ಕೆ ಮಾಜಿ ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಭೇಟಿ ನೀಡಿದ್ದರು.

    ಉತ್ತರ ಕನ್ನಡ ಜಿಲ್ಲೆ ಶಿರಸಿಯ ಸೋಂದಾ ಊರಿನಲ್ಲಿರುವ ವಾಧಿರಾಜ ಮಠಕ್ಕೆ ತಮ್ಮ ಸ್ನೇಹಿತರೊಂದಿಗೆ ಆಗಮಿಸಿದ ಅಣ್ಣಾಮಲೈ ಸೋದೆ ಮಠದ ಶ್ರೀಗಳೊಂದಿಗೆ ಆಧ್ಯಾತ್ಮದ ಬಗ್ಗೆ ಚರ್ಚೆ ಮಾಡಿದರು.

    ತಮ್ಮ ಏಳು ಜನ ಗೆಳಯರ ಜೊತೆ ಬಂದಿದ್ದ ಅಣ್ಣಾಮಲೈ ಅವರು ಶ್ರೀ ವಿಶ್ವ ವಲ್ಲಭತೀರ್ಥ ಶ್ರೀಪಾದರಿಂದ ಮಂತ್ರಾಕ್ಷತೆ ಪಡೆದರು. ಈ ವೇಳೆ ಮಠವೆಲ್ಲವನ್ನು ಸುತ್ತಾಡಿ ನೋಡಿದ ಅವರು ಮಠದಲ್ಲಿರುವ ಪುಟ್ಟ ಮಕ್ಕಳ ಜೊತೆ ಕೆಲ ಕಾಲ ಮಾತನಾಡಿದರು. ದೇವರ ಕಡೆ ಜಾಸ್ತಿ ಒಲವು ಇರುವ ಅಣ್ಣಾಮಲೈ ಇತ್ತೀಚಿಗೆ ಶಬರಿಮಲೆಗೆ ಹೋಗಿ ಬಂದಿದ್ದರು.

    ಕರ್ನಾಟಕ ಸಿಂಗಂ ಎಂದೇ ಖ್ಯಾತಿಯಾಗಿದ್ದ ಅಣ್ಣಾಮಲೈ ಅವರು ತಮ್ಮ 9 ವರ್ಷದ ಐಪಿಎಸ್ ಹುದ್ದೆಗೆ ಇದೇ ವರ್ಷ ಜೂನ್ ತಿಂಗಳಿನಲ್ಲಿ ರಾಜೀನಾಮೆ ನೀಡಿದ್ದರು. ತಮಿಳುನಾಡಿನ ಕೊಯಮತ್ತೂರಿನವಾರದ ಅವರು, 2011ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದರು. ನಂತರ 2013ರಲ್ಲಿ ಕಾರ್ಕಳ ಎಎಸ್‍ಪಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದ ಅವರು, ಬಳಿಕ 2015ರಲ್ಲಿ ಉಡುಪಿ ಜಿಲ್ಲಾ ಎಸ್‍ಪಿ, ಚಿಕ್ಕಮಗಳೂರು ಎಸ್‍ಪಿಯಾಗಿ ದಕ್ಷ ಸೇವೆ ಮಾಡಿದ್ದಾರೆ.

  • ಅನರ್ಹ ಶಾಸಕರ ಜೊತೆ ಸಿಎಂ ಬಿಎಸ್‍ವೈರನ್ನ ಭೇಟಿಯಾದ ಜಿಟಿಡಿ

    ಅನರ್ಹ ಶಾಸಕರ ಜೊತೆ ಸಿಎಂ ಬಿಎಸ್‍ವೈರನ್ನ ಭೇಟಿಯಾದ ಜಿಟಿಡಿ

    ಬೆಂಗಳೂರು: ಅಚ್ಚರಿಯ ಬೆಳವಣಿಗೆ ಎಂಬಂತೆ ಮಾಜಿ ಸಚಿವ ಜಿಟಿ ದೇವೇಗೌಡ ಅವರು ಇಂದು ಸಿಎಂ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

    ಅನರ್ಹ ಶಾಸಕ ವಿಶ್ವನಾಥ್, ಎಸ್.ಟಿ.ಸೋಮಶೇಖರ್ ಅವರೊಂದಿಗೆ ಬಿಎಸ್‍ವೈ ಅವರ ಧವಳಗಿರಿ ನಿವಾಸಕ್ಕೆ ಆಗಮಿಸಿದ್ದ ಜಿ.ಟಿ.ದೇವೇಗೌಡ ಅವರು, ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದರು. ಈ ಭೇಟಿ ಜೆಡಿಎಸ್‍ನ ಮತ್ತೊಂದು ವಿಕೆಟ್ ಪತನಕ್ಕೆ ಕಾರಣವಾಗುತ್ತಾ ಎಂಬ ಅನುಮಾನ ಮೂಡಿದೆ.

    ಬಿಎಸ್‍ವೈರನ್ನ ಭೇಟಿ ಮಾಡಿದ್ದ ಜಿಟಿ ದೇವೇಗೌಡರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಚುನಾವಣೆ ಕಳೆದ ತಿಂಗಳ 9 ರಂದು ನಿಗದಿಯಾಗಿತ್ತು. ಆದರೆ ಚುನಾವಣೆಯಲ್ಲಿ ಗೊಂದಲ ಉಂಟಾಗಿದ್ದು, ಈ ಬಗ್ಗೆ ಸಿಎಂ ಅವರೊಂದಿಗೆ ಮಾತುಕತೆ ನಡೆಸಲು ಆಗಮಿಸಿದ್ದೆ. ಡೈರಿ ಚುನಾವಣೆ ನಡೆಯದ ಕಾರಣ ಹುದ್ದೆ ಖಾಲಿ ಇದ್ದು, ಪರಿಣಾಮ ರೈತರಿಗೆ ಬಿಡುಗಡೆಯಾಗಬೇಕಾದ ಹಣ ಲಭಿಸುತ್ತಿಲ್ಲ ಎಂದರು.

    ರೈತರ ಸಮಸ್ಯೆಯಿಂದ ನಾನೇ ಬಂದು ಈ ಬಗ್ಗೆ ಸಿಎಂ ಅವರಿಗೆ ಮನವರಿಕೆ ಮಾಡಿದ್ದೇನೆ. ಸಿಎಂ ಅವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ಬಿಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ಹಿಂದೆಯೇ ಹಲವು ಬಾರಿ ಸ್ಪಷ್ಟ ಪಡಿಸಿದ್ದು, ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಬಳಿಕ ಮಾತನಾಡಿದ ಬಿಎಸ್‍ವೈ ಅವರು, ಈ ಭೇಟಿಯಲ್ಲಿ ಯಾವುದೇ ವಿಶೇಷ ಇಲ್ಲ. ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡಲು ಅವರು ಬಂದಿದ್ದರು ಅಷ್ಟೇ ಎಂದರು.

    ಈ ಹಿಂದೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದ ಜಿಟಿ ದೇವೇಗೌಡ ಅವರು, ಪರೋಕ್ಷವಾಗಿ ಜೆಡಿಎಸ್ ದಳಪತಿಗಳ ವಿರುದ್ಧ ಅಸಮಾದಾನ ಹೊರ ಹಾಕಿದ್ದರು. ಮೈತ್ರಿ ಸರ್ಕಾರದ ಆರಂಭದ ಒಂದು ತಿಂಗಳು ನಾನು ಸಚಿವ ಸ್ಥಾನ ಪಡೆಯಲಿಲ್ಲ. ಸಚಿವ ಸ್ಥಾನ ಸ್ವೀಕರಿಸಿದ ಬಳಿಕ ದಸರಾ, ಮಹಾನಗರ ಪಾಲಿಕೆ ಮತ್ತು ಲೋಕಸಭಾ ಚುನಾವಣೆ, ವಿಶ್ವವಿದ್ಯಾಲಯಗಳ ಘಟಿಕೋತ್ಸವ, ನಿರಂತರ ಸಭೆಗಳಲ್ಲಿ ಭಾಗಿಯಾಗಿದ್ದರಿಂದ ಸ್ವ-ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಈ ಹಿಂದೆ ಸಿಗುತ್ತಿದ್ದ ಜಿ.ಟಿ.ದೇವೇಗೌಡ ಸಿಗುತ್ತಿಲ್ಲ ಎಂದು ಕ್ಷೇತ್ರದ ಜನತೆ ನನ್ನ ಮೇಲೆ ಮುನಿಸಿಕೊಂಡಿದ್ದರು. ರಾಜಕೀಯದಲ್ಲಿ ಸಹ ವಿವಿಧ ಬೆಳವಣಿಗೆಗಳು ನಡೆದಿದ್ದರಿಂದ ಮೈತ್ರಿ ಸರ್ಕಾರ ಸಹ ಪತನಗೊಂಡಿತು. ಈ ಎಲ್ಲ ಕಾರಣಗಳಿಂದ ರಾಜಕಾರಣ ಸಾಕು ಎಂಬ ನಿರ್ಣಯಕ್ಕೆ ಬಂದಿದ್ದೇನೆ. ಬೇರೆಯವರಿಗಿಂತ ನಮ್ಮ ಪಕ್ಷದ ನಾಯಕರೇ ನನ್ನ ವಿರುದ್ಧ ಕೆಲಸ ಮಾಡಿದ್ದರಿಂದ ತುಂಬಾ ನೋವಾಯ್ತು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಬೇಕೆಂದು ತಾಯಿ ಚಾಮುಂಡಿಯಲ್ಲಿ ನನ್ನ ಕುಟುಂಬವೇ ಪ್ರಾರ್ಥನೆ ಮಾಡಿದೆ. ಆದರೆ ಅವರ ಬಳಿ ನಾನು ಪ್ರೀತಿ ಮತ್ತು ವಿಶ್ವಾಸವನ್ನು ನೋಡಲೇ ಇಲ್ಲ. ಹಾಗಾಗಿ ನನ್ನನ್ನು ನಿರ್ಲಕ್ಷ್ಯ ಮಾಡಲಾಯ್ತು ಎಂದು ಪರೋಕ್ಷವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಟಿಡಿ ಹಾಗೂ ಬಿಎಸ್‍ವೈ ಅವರ ಭೇಟಿಗೆ ಹೆಚ್ಚಿನ ಮಹತ್ವ ಲಭಿಸಿತ್ತು.

  • ನಟಿ ಕಾಜಲ್‍ಗಾಗಿ 60 ಲಕ್ಷ ರೂ. ಕಳೆದುಕೊಂಡ ಅಭಿಮಾನಿ

    ನಟಿ ಕಾಜಲ್‍ಗಾಗಿ 60 ಲಕ್ಷ ರೂ. ಕಳೆದುಕೊಂಡ ಅಭಿಮಾನಿ

    ಹೈದರಾಬಾದ್: ಟಾಲಿವುಡ್ ನಟಿ ಕಾಜಲ್ ಅಗರ್‌ವಾಲ್ ಅವರನ್ನು ಭೇಟಿ ಮಾಡಲು ಅಭಿಮಾನಿಯೊಬ್ಬ ಬರೋಬ್ಬರಿ 60 ಲಕ್ಷ ರೂ. ಕಳೆದುಕೊಂಡಿದ್ದಾನೆ.

    ತಮಿಳುನಾಡಿನ ರಾಮನಾಥಪುರಂ ನಿವಾಸಿಯಾಗಿರುವ ಅಭಿಮಾನಿ ಕಾಜಲ್ ಅಗರ್‌ವಾಲ್ ನ ಅಪ್ಪಟ ಅಭಿಮಾನಿ. ಕಾಜಲ್ ಅವರನ್ನು ಜೀವನದಲ್ಲಿ ಒಮ್ಮೆಯಾದರೂ ಭೇಟಿ ಆಗಬೇಕು ಎಂದುಕೊಂಡಿದ್ದನು. ಈ ವೇಳೆ ಇನ್‍ಸ್ಟಾಗ್ರಾಂ ಪೇಜ್ ಒಂದು ಕಾಜಲ್ ಅಗರ್‌ವಾಲ್ ಅವರನ್ನು ಭೇಟಿಯಾಗುವ ಅವಕಾಶವನ್ನು ನೀಡಿತ್ತು. ಇದನ್ನು ನೋಡಿದ ಅಭಿಮಾನಿ ವೆಬ್‍ಪೇಜ್ ಆಡ್ಮಿನ್‍ನನ್ನು ಸಂಪರ್ಕಿಸಿ ಕಾಜಲ್‍ರನ್ನು ಭೇಟಿ ಮಾಡಿಸಿ ಎಂದು ಕೇಳಿಕೊಂಡಿದ್ದನು.

    ವೆಬ್‍ಪೇಜ್ ಆಡ್ಮಿನ್ ಮೊದಲು ಅಭಿಮಾನಿಯ ಬಳಿ 50 ಸಾವಿರ ರೂ. ತೆಗೆದುಕೊಂಡಿದ್ದಾನೆ. ಅಲ್ಲದೆ ಅಭಿಮಾನಿಯ ಫೋಟೋ ಹಾಗೂ ವೈಯಕ್ತಿಕ ಮಾಹಿತಿಯನ್ನು ಕೇಳಿದ್ದಾನೆ. ಕಾಜಲ್‍ರನ್ನು ಭೇಟಿ ಮಾಡುವ ಖುಷಿಯಲ್ಲಿ ಅಭಿಮಾನಿ ಯೋಚಿಸದೇ ಎಲ್ಲ ವಿವರವನ್ನು ಆಡ್ಮಿನ್ ಬಳಿ ಹಂಚಿಕೊಂಡಿದ್ದಾನೆ. ಈ ವೆಬ್‍ಪೇಜ್ ಕ್ರಿಮಿನಲ್ ಗ್ಯಾಂಗ್ ನಡೆಸುತ್ತಿದ್ದು, ಕಾಜಲ್ ಅಭಿಮಾನಿಯನ್ನು ಯಾಮಾರಿಸಿದೆ.

    ಅಭಿಮಾನಿ ಆಗರ್ಭ ಶ್ರೀಮಂತ ಕುಟುಂಬಕ್ಕೆ ಸೇರಿದ್ದಾನೆ ಎನ್ನುವುದು ಗೊತ್ತಾದ ಬಳಿಕ ಈ ಗ್ಯಾಂಗ್ ಸದಸ್ಯರು ಪ್ರತಿದಿನ ಆತನಿಂದ ಹಣ ವಸೂಲಿ ಮಾಡುತ್ತಿದ್ದರು. ಹಣ ಪಡೆದ ನಂತರ ಕಾಜಲ್ ಭೇಟಿ ಬಗ್ಗೆ ಮಾತನಾಡದೇ ಇದ್ದಾಗ ಅಭಿಮಾನಿಗೆ ಅನುಮಾನ ಬಂದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಅಭಿಮಾನಿ ಗ್ಯಾಂಗ್‍ಗೆ ಬೆದರಿಕೆ ಹಾಕಿದ್ದಾನೆ. ಅಭಿಮಾನಿ ಬೆದರಿಕೆ ಹಾಕಿದ್ದಕ್ಕೆ ಗ್ಯಾಂಗ್ ಸದಸ್ಯರು ಆತನ ವೈಯಕ್ತಿಕ ಫೋಟೋವನ್ನು ಮಾರ್ಫ್ ಮಾಡಿ ವೈಯಕ್ತಿಕ ಮಾಹಿತಿಯನ್ನು ಲೀಕ್ ಮಾಡುತ್ತೇವೆ ಎಂದು ಹೆದರಿಸಿ 60 ಲಕ್ಷ ರೂ. ಕಸಿದುಕೊಂಡಿದ್ದಾರೆ.

    ಅಭಿಮಾನಿ 60 ಲಕ್ಷ ರೂ. ಕಳೆದುಕೊಂಡ ಮೇಲೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾನೆ.