Tag: ಭೇಟಿ

  • ಎಚ್‍ಡಿಡಿ ನಿವಾಸಕ್ಕೆ ಲಿಂಗಾಯತ ಸ್ವಾಮೀಜಿಗಳು ಭೇಟಿ!

    ಎಚ್‍ಡಿಡಿ ನಿವಾಸಕ್ಕೆ ಲಿಂಗಾಯತ ಸ್ವಾಮೀಜಿಗಳು ಭೇಟಿ!

    ಬೆಂಗಳೂರು: ಮಂತ್ರಿಗಿರಿಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೈಕಮಾಂಡ್ ಗೆ ದುಂಬಾಲು ಹೂಡುತ್ತಿದ್ದು, ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಅಧಿಕಾರಿ ಎಚ್.ಡಿ ದೇವೇಗೌಡರ ಮನೆಗೆ ಲಿಂಗಾಯತ ಸ್ವಾಮೀಜಿಗಳು ಭೇಟಿ ನೀಡಿದ್ದಾರೆ.

    ದೇವೇಗೌಡರ ಪದ್ಮನಾಭನಗರದಲ್ಲಿರುವ ನಿವಾಸಕ್ಕೆ ತುಮಕೂರಿನ ಮತ್ತು ನೆಲಮಂಗಲ ಮಠದ ಸ್ವಾಮೀಜಿಗಳು ಆಗಮಿಸಿದ್ದಾರೆ. ಸ್ವಾಮೀಜಿಗಳು ತುಮಕೂರು ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಕೇಳಲು ಆಗಮಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

    ತುಮಕೂರು ಗ್ರಾಮಾಂತರ ಶಾಸಕ ಗೌರಿ ಶಂಕರ್ ಗೆ ಸಚಿವ ಸ್ಥಾನ ನೀಡುವಂತೆ ಸ್ವಾಮೀಜಿಗಳು ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಸಿದ್ದಲಿಂಗೇಶ್ವರ ಮಠದ ಶಿವ ಪಂಚಾಕ್ಷರಿ ಸ್ವಾಮೀಜಿ, ಪಿರಂಗೀಶ್ವರ ಮಠದ ಶಿವ ರುದ್ರ ಶಿವಾಚಾರ್ಯ ಸ್ವಾಮೀಜಿ, ರುದ್ರ ಮುನೇಶ್ವರ್ ಮಠದ ಚಂದ್ರ ಶೇಖರ ಸ್ವಾಮೀಜಿ, ಅಳ್ಳೂರು ಮಠದ ಚೆನ್ನಬಸವ ಸ್ವಾಮೀಜಿ ಹಾಗೂ ವನಕಲ್ಲು ಮಠದ ರಮಾನಂದ ಸ್ಬಾಮೀಜಿಗಳು ದೇವೇಗೌಡರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

    ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ವನಕಲ್ಲು ಮಠದ ರಮಾನಂದ ಸ್ವಾಮೀಜಿ ಮಾತನಾಡಿ, ಯಾವುದೇ ರಾಜಕೀಯ ಚರ್ಚೆ ಆಗಿಲ್ಲ. ದೇವೇಗೌಡರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಶುಭಾಶಯ ಕೋರಲು ಬಂದಿದ್ದೇವೆ. ಮಠದ ಕಾರ್ಯಕ್ರಮವೊಂದಕ್ಕೆ ಆಹ್ವಾನ ನೀಡಲು ಬಂದಿದ್ದು, ಯಾವುದೇ ರಾಜಕೀಯ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • ಕೋಲಾರದಲ್ಲಿ ರಾಕಿಂಗ್ ಸ್ಟಾರ್ ಯಶ್ ದಿಢೀರ್ ಪ್ರತ್ಯಕ್ಷ

    ಕೋಲಾರದಲ್ಲಿ ರಾಕಿಂಗ್ ಸ್ಟಾರ್ ಯಶ್ ದಿಢೀರ್ ಪ್ರತ್ಯಕ್ಷ

    ಕೋಲಾರ: ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ ಬಿಡುಗಡೆಗೂ ಮುನ್ನವೇ ರಾಕಿಂಗ್ ಸ್ಟಾರ್ ಯಶ್ ಕೋಲಾರದಲ್ಲಿ ಪ್ರತ್ಯಕ್ಷರಾಗಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

    ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಹುದುಕುಳ ಬಳಿ ಇರುವ ಜೋಯನ್ ಗಾಲ್ಫ್‍ಗೆ ನಟ ಯಶ್ ಬುಧವಾರ ಭೇಟಿ ನೀಡಿದ್ದಾರೆ. ಈ ವೇಳೆ ಗಾಲ್ಫ್ ಅಧ್ಯಕ್ಷ ರೈ ಹಾಗೂ ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿಯನ್ನು ಯಶ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

    ಯಶ್ ಭೇಟಿ ನೀಡಿರುವ ಫೋಟೋಗಳನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ರಾಕಿಂಗ್ ಸ್ಟಾರ್ ಜೊತೆ ಪೀಪಲ್ ಸ್ಟಾರ್ ಎಂಎಲ್‍ಎ ಎಂದು ಹಣೆ ಪಟ್ಟಿ ಬರೆದು ಹಂಚಿಕೊಂಡಿದ್ದಾರೆ. ಭೇಟಿ ವೇಳೆ ನಟ ಯಶ್ ವಿಧಾನಸಭಾ ಚುನಾವಣೆಯಲ್ಲಿ ಜಯ ಗಳಿಸಿ ನೂತನ ಶಾಸಕರಾಗಿ ಆಯ್ಕೆ ಆಗಿರುವ ಶಾಸಕ ಎಸ್‍ಎನ್ ನಾರಾಯಣಸ್ವಾಮಿ ಅವರಿಗೆ ಶುಭಾಶಯ ಕೋರಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸಕ್ರೀಯರಾಗಿದ್ದ ನಟ ಯಶ್ ತಮ್ಮ ಆಪ್ತ ವಲಯದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು.

    ಸದ್ಯ ಸ್ಯಾಂಡಲ್‍ವುಡ್ ಸಿನಿಮಾ ಅಭಿಮಾನಿಗಳು ಯಶ್ ಅವರ ಕೆಜಿಎಫ್ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದು, ಚಿತ್ರ ತಂಡ ಆರಂಭದಿಂದಲೇ ಚಿತ್ರ ಕಥೆಯ ಕುರಿತ ರೋಚಕತೆಯನ್ನು ಉಳಿಸಿಕೊಂಡು ಬರುತ್ತಿದೆ. ಚಿತ್ರದಲ್ಲಿ ಯಶ್ ಅವರ ಲುಕ್ ಸಹ ಅಭಿಮಾನಿಗಳಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಕೆಲ ದಿನಗಳ ಹಿಂದೆ ಯಶ್ ರ ಹೊಸ ಲುಕ್ ನ ಫೋಟೋವನ್ನು ಅಭಿಮಾನಿಗಳೇ ಸಿದ್ಧಗೊಳಿಸಿ ಬಿಡುಗಡೆಗೊಳಿಸಿದ್ದರು. ಸದ್ಯಕ್ಕೆ ಕೆಜಿಎಫ್ ಚಿತ್ರೀಕರಣ ನಡೆಯುತ್ತಿದ್ದು, ಒಂದು ಹಾಡಿನ ಶೂಟಿಂಗ್ ಮಾತ್ರ ಬಾಕಿಯಿದೆ.

  • ಪ್ರಧಾನಿ ಮೋದಿ ಭೇಟಿಗೆ ತೆರಳಲಿರುವ ಸಿಎಂ ಹೆಚ್‍ಡಿಕೆ

    ಪ್ರಧಾನಿ ಮೋದಿ ಭೇಟಿಗೆ ತೆರಳಲಿರುವ ಸಿಎಂ ಹೆಚ್‍ಡಿಕೆ

    ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಹೆಚ್.ಡಿ ಕುಮಾರಸ್ವಾಮಿ ಮೊದಲ ಬಾರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.

    ಇಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಿಂದ ದೆಹಲಿಗೆ ತೆರಳಲಿರುವ ಹೆಚ್.ಡಿ ಕುಮಾರಸ್ವಾಮಿ ದೆಹಲಿಯ ರಾಜ್‍ಘಾಟ್‍ನಲ್ಲಿರುವ ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಲಿದ್ದಾರೆ. ಬಳಿಕ ಮಧ್ಯಾಹ್ನ 3:30 ಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ.

    ಪ್ರಧಾನಿ ಭೇಟಿ ವೇಳೆ ರಾಜ್ಯದ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದು, ಆಡಳಿತಾತ್ಮಕ ಸಹಕಾರ ನೀಡುವಂತೆ ಮನವಿ ಮಾಡಿಕೊಳ್ಳಲಿದ್ದಾರೆ. ಇದರ ಜೊತೆಗೆ ರಾಜ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಿದ್ದಾರೆ.

    ಪ್ರಧಾನಿ ಭೇಟಿ ಬಳಿಕ ಕೇಂದ್ರದ ರೈಲು ಹಾಗೂ ಇಂಧನ ಸಚಿವರನ್ನು ಹೆಚ್.ಡಿ ಕುಮಾರಸ್ವಾಮಿ ಭೇಟಿಯಾಗಲಿದ್ದು, ರೈಲ್ವೆ ಯೋಜನೆಗಳು ಹಾಗೂ ಕಲ್ಲಿದ್ದಲು ಪೂರೈಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲಿದ್ದಾರೆ.

  • ಕೃಷ್ಣಾದಲ್ಲಿ ಮುಖ್ಯಮಂತ್ರಿ ಹೆಚ್‍ಡಿಕೆ ಭೇಟಿ ಅವಕಾಶಕ್ಕೆ ಸಮಯ ನಿಗದಿ!

    ಕೃಷ್ಣಾದಲ್ಲಿ ಮುಖ್ಯಮಂತ್ರಿ ಹೆಚ್‍ಡಿಕೆ ಭೇಟಿ ಅವಕಾಶಕ್ಕೆ ಸಮಯ ನಿಗದಿ!

    ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಇರುವ ದಿನಗಳಲ್ಲಿ ಪ್ರತಿದಿನ ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಸಾರ್ವಜನಿಕರು, ಗಣ್ಯರ ಭೇಟಿಗೆ ಲಭ್ಯರಿರುತ್ತಾರೆ.

    ಅವರ ಜೆಪಿ ನಗರದ ಖಾಸಗಿ ನಿವಾಸದಲ್ಲಿ ಜನದಟ್ಟಣಿಯಿಂದ ಬಡಾವಣೆಯ ಇತರ ನಿವಾಸಿಗಳಿಗೆ ಅಡಚಣಿಯಾಗುವುದರಿಂದ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಇಚ್ಚಿಸುವವರು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗುವಂತೆ ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

    ಕುಮಾರಸ್ವಾಮಿಯವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಜನತಾ ದರ್ಶನವನ್ನು ಆರಂಭಿಸಿದ್ದರು. ಈಗ ಈ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಇದನ್ನು ಮುಂದುವರಿಸಿದ್ದಾರೆ.

    ರಾಜ್ಯದಲ್ಲಿ ಕುಮಾರಪರ್ವ ಆರಂಭ ಆಗಿದೆ. ಈ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮುಂದಿರೋ ಸವಾಲು ಶುಕ್ರವಾರ ಸದನದಲ್ಲಿ ವಿಶ್ವಾಸಮತ ಗೆಲ್ಲೋದು. ಈ ಹಿನ್ನೆಲೆಯಲ್ಲಿ ಉಭಯ ಪಕ್ಷಗಳು ತಮ್ಮ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕಸರತ್ತು ಮುಂದುವರೆಸಿದ್ದಾರೆ. ಜೆಡಿಎಸ್ ಶಾಸಕರು ಇರೋ ರೆಸಾರ್ಟ್‍ಗೆ ತೆರಳಿದ ಕುಮಾರಸ್ವಾಮಿ ಅಲ್ಲೇ ರಾತ್ರಿ ಕಳೆದಿದ್ದಾರೆ.

    ಯಾವುದೇ ಆಮಿಷಗಳಿಗೆ ಬಲಿಯಾಗಬೇಡಿ ಅಂತಾ ಕಿವಿ ಮಾತು ಹೇಳಿದ್ದಾರೆ. ಅತ್ತ ಕಾಂಗ್ರೆಸ್ ಶಾಸಕರಿಗೂ ಇದೇ ರೀತಿಯ ಕಿವಿ ಮಾತನ್ನು ನಾಯಕರು ಹೇಳ್ತಿದ್ದಾರೆ. ನಿನ್ನೆ ಸೋನಿಯಾ ಮತ್ತು ರಾಹುಲ್ ಖುದ್ದು ಶಾಸಕರನ್ನು ಭೇಟಿ ಮಾಡಿ ನಮ್ಮೊಂದಿಗೆ ಇರಿ ಎಂದಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಮುಖ ನಾಯಕರು ಸಂಜೆ ನಗರದ ಖಾಸಗಿ ಹೋಟೆಲ್‍ನಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ.

    ವಿಶ್ವಾಸಮತಯಾಚನೆ ಹಿನ್ನೆಲೆಯಲ್ಲಿ ಅನುರಿಸಬೇಕಾದ ತಂತ್ರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮಧ್ಯಾಹ್ನ ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇನ್ನು ಸ್ಪೀಕರ್ ಆಯ್ಕೆಗೆ ವಿಧಾನಸಭೆ ಸಚಿವಾಲಯದಿಂದ ಅಧಿಸೂಚನೆ ಪ್ರಕಟವಾಗಿದೆ. ಮಧ್ಯಾಹ್ನ 12 ಗಂಟೆಯೊಳಗೆ ನಾಮಪತ್ರ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ನಾಳೆ ಸ್ಪೀಕರ್ ಆಯ್ಕೆಗೆ ಚುನಾವಣೆ ನಡೆಯಲಿದೆ.

  • ನಾಳೆ ಪ್ರಧಾನಿ ಮೋದಿ ಉಡುಪಿಗೆ- ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್

    ನಾಳೆ ಪ್ರಧಾನಿ ಮೋದಿ ಉಡುಪಿಗೆ- ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್

    ಉಡುಪಿ: ಪ್ರಧಾನಿಯಾದ ಮೇಲೆ ಮೊದಲ ಬಾರಿಗೆ ನರೇಂದ್ರ ಮೋದಿ ಅವರು ಮಂಗಳವಾರ ಉಡುಪಿಗೆ ಆಗಮಿಸುತ್ತಿದ್ದು, ಪಕ್ಷದ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಭರ್ಜರಿ ಸಿದ್ಧತೆ ಮಾಡಿದ್ದು, ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿದೆ.

    ನಾಳೆ ಮಧ್ಯಾಹ್ನ 2.45 ಕ್ಕೆ ಮೋದಿ ಉಡುಪಿಗೆ ಹೆಲಿಕಾಪ್ಟರ್ ನಲ್ಲಿ ಆಗಮಿಸಲಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ರಿಂದ ಸಂಜೆ 4.30 ರ ವರೆಗೆ ನಗರಕ್ಕೆ ವಾಹನ ಪ್ರವೇಶ ನಿಷೇಧ ಮಾಡಲಾಗಿದೆ. ಎಂಜಿಎಂ ಮೈದಾನದಲ್ಲಿ ಬಿಜೆಪಿ ಸಮಾವೇಶ ನಡೆಯಲಿರುವ ಕಾರಣ ಕರಾವಳಿ ಜಂಕ್ಷನ್ ನಿಂದ ಇಂದ್ರಾಣಿ ಜಂಕ್ಷನ್ ವರೆಗೆ ಪೊಲೀಸರು ನೋ ವೆಹಿಕಲ್ ಝೋನ್ ನಿರ್ಮಾಣ ಮಾಡುತ್ತಾರೆ. ಸಾರ್ವಜನಿಕರಿಗೆ ತೊಂದರೆ ಆಗದಿರಲು ನಗರದ ಹೊರ ವಲಯದ ಮೂಲಕ ಬದಲಿ ರಸ್ತೆಗಳ ವ್ಯವಸ್ಥೆಯನ್ನು ಮಾಡಲಾಗಿದೆ.

    ಸಮಾವೇಶದಲ್ಲಿ 60 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಲ್ಲಿ ಎಲ್‍ಇಡಿ ಸ್ಕ್ರೀನ್ ಅಳವಡಿಸಲಾಗಿದೆ. ಸಮಾವೇಶದಲ್ಲಿ ಉಡುಪಿ, ಉತ್ತರಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಎಂಜಿಎಂ ಮೈದಾನ ಸುತ್ತಮುತ್ತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

    ಈ ಕುರಿತು ಮಾಹಿತಿ ನೀಡಿರುವ ಉಡುಪಿ ಎಸ್ ಪಿ ಲಕ್ಷ್ಮಣ ಬ. ನಿಂಬರ್ಗಿ ಪ್ರಧಾನಿ ಮೋದಿ ಆಗಮನದಿಂದ ನಗರದಾದ್ಯಂತ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು. ನಗರದಲ್ಲಿ ಮತ್ತು ಪ್ರಧಾನಿ ಸಂಚರಿಸುವ ರಸ್ತೆಗಳ ಇಕ್ಕೆಲದ ಯಾವುದೇ ಅಂಗಡಿಗಳನ್ನು ಮುಚ್ಚಿಸುವುದಿಲ್ಲ. ಸಾರ್ವಜನಿಕ ಸಭೆಯಲ್ಲಿ ಮಾತ್ರ ಮಾಧ್ಯಮಗಳು ಪಾಲ್ಗೊಳ್ಳಬಹುದು ಎಂದು ಎಸ್‍ಪಿ ಮಾಹಿತಿ ನೀಡಿದ್ದಾರೆ.

    ಇನ್ನು ನಗರದಲ್ಲಿ ಕಾರ್ಕಳ, ಮಣಿಪಾಲ ಕಡೆಯಿಂದ ಉಡುಪಿಗೆ ಪ್ರವೇಶಿಸುವ ಮಾರ್ಗವನ್ನು ಬದಲಿಸಲಾಗಿದೆ. ಮಂಗಳೂರು ಕಡೆಯಿಂದ ಉಡುಪಿಗೆ ಬರುವ ಮತ್ತು ಕುಂದಾಪುರದಿಂದ ಉಡುಪಿಗೆ ಬರುವ ರಸ್ತೆಗಳಿಗೆ ಬದಲಿ ಮಾರ್ಗ ವ್ಯವಸ್ಥೆಗೊಳಲಾಗಿದೆ. ಜಿಲ್ಲೆಗೆ ಬರುವ ಹೊಸಬರಿಗೆ ಬದಲಿ ಮಾರ್ಗಗಳನ್ನು ವ್ಯವಸ್ಥೆ ಮಾಡಲಾಗಿದೆ. ಉಡುಪಿ, ದಕ್ಷಿಣಕನ್ನಡ, ಉತ್ತರ ಕನ್ನಡ ಜಿಲ್ಲೆಯ ಸುಮಾರು ಒಂದು ಸಾವಿರ ಪೊಲೀಸರು ಪ್ರಧಾನಿಗಳ ಕಾರ್ಯಕ್ರಮದ ಬಂದೋಬಸ್ತ್ ನಲ್ಲಿ ತೊಡಗಲಿದ್ದಾರೆ. ಎಸ್ ಪಿ ಜಿ, ಬಿಎಸ್ ಎಫ್ ಅಧಿಕಾರಿಗಳು ಗಸ್ತು ಶುರು ಮಾಡಿದ್ದಾರೆ ಎಂದು ವಿವರಿಸಿದರು.

     

  • ಹುತಾತ್ಮ ಯೋಧರ ಕುಟುಂಬವನ್ನು ಹೊರಗೆ ನಿಲ್ಲಿಸಿ 1 ಗಂಟೆ ಕಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು!

    ಹುತಾತ್ಮ ಯೋಧರ ಕುಟುಂಬವನ್ನು ಹೊರಗೆ ನಿಲ್ಲಿಸಿ 1 ಗಂಟೆ ಕಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು!

    ದಾವಣಗೆರೆ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಬಂದಿದ್ದ ಯೋಧರೊಬ್ಬರ ಕುಟುಂಬವನ್ನು ಕಾಂಗ್ರೆಸ್ ಕಾರ್ಯಕರ್ತರು ಹೊರಗೆ ನಿಲ್ಲಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ಹುತಾತ್ಮ ಯೋಧ ಜಾವೀದ್ ಹಾಗೂ ಅವರ ಕುಟುಂಬಸ್ಥರು ಜಿಲ್ಲೆಯ ಹರಿಹರ ತಾಲೂಕಿನವರು. ಮಂಗಳವಾರ ಜಾವೀದ್ ಅವರ ಕುಟುಂಬವನ್ನು ಭೇಟಿ ಮಾಡಿ ರಾಹುಲ್ ಗಾಂಧಿ ಸಾಂತ್ವಾನ ಹೇಳಿದ್ದರು. ಅಷ್ಟೇ ಅಲ್ಲದೇ ಇಂದು ಭೇಟಿಯಾಗುವಂತೆ ಕೂಡ ಹೇಳಿದ್ದರು.

    ಹೀಗಾಗಿ ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಬಂದ ಯೋಧರ ಕುಟುಂಬಸ್ಥರಿಗೆ ಪೊಲೀಸ್ ಅಧಿಕಾರಿಗಳು ಭೇಟಿಯಾಗಲು ಪಾಸ್ ಕೇಳುತ್ತಿದ್ದು, ಇಬ್ಬರು ಪುಟ್ಟ ಮಕ್ಕಳು ಜೊತೆ ಯೋಧ ಜಾವೀದ್ ಅವರ ಮಡದಿ ಹಾಗೂ ಕುಟುಂಬಸ್ಥರು ರಾಗಾ ಭೇಟಿಗೆಂದು ಒಂದು ಗಂಟೆಯಿಂದ ಕಾಯುತ್ತಿದ್ದಾರೆ.

    ರಾಹುಲ್ ಗಾಂಧಿ ಯೋಧರ ಕುಟುಂಬವನ್ನು ಇಂದು ತಮ್ಮ ಗೆಸ್ಟ್ ಹೌಸ್‍ಗೆ ಬಂದು ಭೇಟಿಯಾಗುವಂತೆ ಹೇಳಿದ್ದರು. ಅಲ್ಲಿದ್ದ ಸಿಬ್ಬಂದಿ ಯೋಧ ಜಾವೀದ್ ಅವರ ಕುಟುಂಬಕ್ಕೆ ರಾಹುಲ್ ಗಾಂಧಿ ಭೇಟಿಗೆ ಅವಕಾಶ ನೀಡಲಿಲ್ಲ. ಬೆಳಗ್ಗೆನೇ ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಬಂದಿದ್ದರೂ, ಭೇಟಿಗೆ ಅವಕಾಶ ನೀಡಲಿಲ್ಲ ಎಂದು ಜಾವೀದ್ ಅವರ ಕುಟುಂಬದವರು ಕಾದುಕಾದು ವಾಪಸ್ಸಾಗಿದ್ದಾರೆ.

    ರಾಜಸ್ಥಾನದ ಪೋಖ್ರಾನ್‍ನಲ್ಲಿ ಯೋಧ ಜಾವೀದ್ ಹುತಾತ್ಮರಾಗಿದ್ದರು.

  • ರಾಜಮಾತೆ ಪ್ರಮೋದಾ ದೇವಿ ಜೊತೆ ಶಾ ಮಹತ್ವದ ಚರ್ಚೆ – ಇನ್‍ಸೈಡ್ ಸ್ಟೋರಿ ಇಲ್ಲಿದೆ

    ರಾಜಮಾತೆ ಪ್ರಮೋದಾ ದೇವಿ ಜೊತೆ ಶಾ ಮಹತ್ವದ ಚರ್ಚೆ – ಇನ್‍ಸೈಡ್ ಸ್ಟೋರಿ ಇಲ್ಲಿದೆ

    ಮೈಸೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೊದಲ ಬಾರಿಗೆ ಮೈಸೂರು ಅರಮನೆಗೆ ಭೇಟಿ ನೀಡಿ ರಾಜ ಮನೆತನದವರ ಜೊತೆ ಮಾತುಕತೆ ನಡೆಸಿದ್ದಾರೆ.

    ರಾಜ್ಯ ವಿಧಾನಸಭಾ ಚುನಾವಣೆಯಲ್ಲೇ ಅಮಿತ್ ಶಾ ಅವರ ಮೈಸೂರು ಭೇಟಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.ಇಂದು ಮೈಸೂರಿನ ಖಾಸಗಿ ಅರಮನೆಗೆ ಭೇಟಿ ನೀಡಿದ ಅಮಿತ್ ಶಾ ರಾಜಮಾತೆ ಪ್ರಮೋದಾ ದೇವಿ ಹಾಗೂ ಯದುವೀರ್ ಒಡೆಯರ್ ಅವರ ಚರ್ಚೆ ನಡೆಸಿದರು. ಬಳಿಕ ಮೈಸೂರು ಅರಮನೆಯ ಗಣಪತಿ ದೇವಸ್ಥಾನ ಮುಂಭಾಗ ಅಮಿತ್ ಶಾ ಹಾಗೂ ಪ್ರಮೋದಾ ದೇವಿ ಒಡೆಯರ್ ಅವರು ಗೌಪ್ಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಯದುವೀರ್ ಒಡೆಯರ್ ಅವರನ್ನು ಬಿಟ್ಟು ಇಬ್ಬರೇ ಮಾತುಕತೆ ನಡೆಸಿದರು.

    ಅಮಿತ್ ಶಾ ಅವರು ತಮ್ಮ ಮಾತುಕತೆ ವೇಳೆ ಒಡೆಯರ್ ಅವರಿಗೆ ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಡಬೇಕು. ಇದಕ್ಕಾಗಿ ಬಿಜೆಪಿಗೆ ಸೇರ್ಪಡೆಯಾಗಬೇಕು ಎಂದು ಮನವಿ ಮಾಡಿದ್ದಾರೆ. ಒಂದು ವೇಳೆ ರಾಜಕೀಯ ಪ್ರವೇಶಕ್ಕೆ ಒಪ್ಪಿಗೆ ಸೂಚಿಸಿದರೆ ಮೈಸೂರಿನ ಕೃಷ್ಣರಾಜ ಕ್ಷೇತ್ರದಿಂದ ಟಿಕೆಟ್ ನೀಡಲಾಗುವುದು ಎಂದು ಖಚಿತ ಭರವಸೆ ನೀಡಿದರು ಎಂಬುದಾಗಿ ಮೂಲಗಳು ತಿಳಿಸಿವೆ.

    ಅಮಿತ್ ಶಾ ಅವರ ರಾಜಕೀಯ ಪ್ರವೇಶದ ಮನವಿಯನ್ನು ಪ್ರಮೋದಾ ದೇವಿ ಅವರು ನಯವಾಗಿ ತಿರಸ್ಕರಿಸಿದ್ದಾರೆ. ಈ ಕುರಿತು ಒಡೆಯರ್ ಅವರು ಸಮಾನ ಅಭಿಪ್ರಾಯ ವ್ಯಕ್ತಪಡಿಸಿದ್ದು, ರಾಜಕೀಯ ಪ್ರವೇಶದ ಕುರಿತು ಆಸಕ್ತಿ ಇದೆ. ಆದರೆ ಇದು ಸೂಕ್ತ ಸಮಯವಲ್ಲ ಎಂದು ಅಮಿತ್ ಶಾ ಅವರ ಮನವಿಯನ್ನು ನಗುತ್ತಲೇ ತಿರಸ್ಕರಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಇದನ್ನೂ ಓದಿ: ರಾಜಕೀಯ ಎಂಟ್ರಿ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟ ಯದುವೀರ್ ಒಡೆಯರ್

    ಭೇಟಿ ವೇಳೆ ಯದುವೀರ್ ಪುತ್ರ ಆದ್ಯವೀರ್ ನನ್ನು ಶಾ ಮುದ್ದಾಡಿದರು. ರಾಜಮನೆತನದ ಭೇಟಿ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್, ಸಂಸದ ಪ್ರತಾಪ್ ಸಿಂಹ ಉಪಸ್ಥಿತರಿದ್ದರು.

  • ಚಿಕ್ಕಮಗಳೂರು ಜಿ.ಪಂ ಅಧ್ಯಕ್ಷೆ ಚೈತ್ರಶ್ರೀಗೆ ಮೋದಿ ಭೇಟಿ ಅವಕಾಶ

    ಚಿಕ್ಕಮಗಳೂರು ಜಿ.ಪಂ ಅಧ್ಯಕ್ಷೆ ಚೈತ್ರಶ್ರೀಗೆ ಮೋದಿ ಭೇಟಿ ಅವಕಾಶ

    ಚಿಕ್ಕಮಗಳೂರು: ಜಿಲ್ಲೆಯನ್ನ ಅಭಿವೃದ್ಧಿಪಡಿಸೋ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಅವಕಾಶ ಕೋರಿದ್ದ ಚಿಕ್ಕಮಗಳೂರು ಜಿ.ಪಂ ಅಧ್ಯಕ್ಷೆಯ ಪತ್ರಕ್ಕೆ ಪ್ರಧಾನಿ ಕಚೇರಿಯಿಂದ ಸ್ಪಂದನೆ ದೊರೆತಿದೆ.

    ಜಿ.ಪಂ ಅಧ್ಯಕ್ಷೆ ಬಿ.ಎಸ್.ಚೈತ್ರಶ್ರೀ ಪ್ರಧಾನಿ ಮೋದಿ ಭೇಟಿಯ ಅವಕಾಶಕ್ಕಾಗಿ ಕೋರಿ ಪತ್ರ ಬರೆದಿದ್ದರು. ಇದೀಗ ಇವರ ಪತ್ರಕ್ಕೆ ಸ್ಪಂದನೆ ಸಿಕ್ಕಿದ್ದು, ಭೇಟಿ ದಿನಾಂಕ ಹಾಗೂ ಸಮಯ ಇನ್ನಷ್ಟೆ ನಿಗದಿಯಾಗಬೇಕಿದೆ. ಪತ್ರಕ್ಕೆ ಸ್ಪಂದನೆ ದೊರೆತಿರೋದು ಚೈತ್ರಶ್ರೀ ಅವರಿಗೆ ಸಂತಸ ತಂದಿದೆ. ತಳ ಸಮುದಾಯದಿಂದ ಬಂದು, ವಿದ್ಯಾವಂತೆಯಾಗಿ ಸಣ್ಣ ವಯಸ್ಸಿನಲ್ಲೇ ಜಿ.ಪಂ ಅಧ್ಯಕ್ಷೆ ಸ್ಥಾನದಂತಹ ಮಹತ್ವದ ಹುದ್ದೇಗೇರಿದ ಸಾಧನೆ ಹಿನ್ನೆಲೆಯಲ್ಲಿ ಪ್ರಧಾನಿ ಕಚೇರಿಯಿಂದ ವಾರದ ಹಿಂದಷ್ಟೇ ಕರೆ ಬಂದಿದೆ.

    ಪ್ರಧಾನಿ ಮೋದಿ ಅವರ ಆಪ್ತ ಸಹಾಯಕರು ಕರೆ ಮಾಡಿ ಚೈತ್ರಶ್ರೀ ಬರೆದಿದ್ದ ಪತ್ರದ ಬಗ್ಗೆ ಚರ್ಚಿಸಿದ್ದಾರೆ. ಸದ್ಯಕ್ಕೆ ಪ್ರಧಾನಿಯವರಿಗೆ ಬಿಡುವಿಲ್ಲದ ಕಾರಣ ಶ್ರೀಘ್ರದಲ್ಲೇ ಪ್ರಧಾನಿಯೊಂದಿಗೆ ಮಾತುಕತೆಗೆ ಸಮಯ ನಿಗದಿ ಮಾಡಲಾಗುವುದು ಎಂದು ಮೋದಿ ಆಪ್ತ ಸಹಾಯಕರು ಕರೆ ಮಾಡಿದ್ದಾಗ ತಿಳಿಸಿದ್ದಾರೆ.

     

    ಬಿಜೆಪಿಯ ಆಂತರಿಕ ಒಪ್ಪಂದದಂತೆ ಜಿ.ಪಂ ಅಧ್ಯಕ್ಷ ಸ್ಥಾನದಿಂದ ಕಳೆದ ತಿಂಗಳು ಚೈತ್ರಶ್ರೀ ಕೆಳಗಿಳಿಯಬೇಕಿತ್ತು. ಆದ್ರೆ ಚೈತ್ರಶ್ರೀ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡದೆ ಹಠ ಮಾಡಿ ಜಿಲ್ಲಾ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿರೋ ಬೆನ್ನಲ್ಲೇ ಮೋದಿ ಭೇಟಿಗೆ ಕರೆ ಬಂದಿರೋದು ಚೈತ್ರಶ್ರೀ ಗೆ ಸಂತಸ ತಂದಿದೆ.

    ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಚೃತ್ರಶ್ರೀ, ನನಗೆ ತುಂಬಾ ಖುಷಿಯಾಗಿದೆ. ಮೋದಿ ಅವರಿಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಚಿಕ್ಕಮಗಳೂರಿನಲ್ಲಿ ಅಲೆಮಾರಿ ಜನಾಂಗವಾದ ‘ಸುಡುಗಾಡು ಸಿದ್ದ’ ಎಂಬ ತುಂಬಾ ಹಿಂದುಳಿದ ಸಮುದಾಯದಲ್ಲಿ ಹುಟ್ಟಿದ್ದೇನೆ. ಜಿ.ಪಂ ಅಧ್ಯೆಕ್ಷೆಯಾಗಿ ಅಭಿವೃದ್ಧಿ ಕಾರ್ಯಗಳನ್ನ ಮಾಡಬೇಕೆಂಬ ಉದ್ದೇಶದಿಂದ ಮೋದಿ ಅವರಿಗೆ ಪತ್ರ ಬರೆದಿದ್ದೇನೆ ಎಂದರು.

    ಜಿಲ್ಲೆಯಲ್ಲಿ ಪೆಪ್ಪರ್ ಪಾರ್ಕ್, ವುಡ್ ಪಾರ್ಕ್ ಮಾಡಬೇಕು, ಮಕ್ಕಳ ಶೈಕ್ಷಿಣಿಕ ಗುಣಮಟ್ಟ ಹೆಚ್ಚಿಸಬೇಕು, ಶೌಚಾಲಯ- ಕಟ್ಟಡ ಅಭಿವೃದ್ಧಿಗೆ ಅನುದಾನ ಬೇಕು. ಜಿ.ಪಂ ಅಧ್ಯಕ್ಷರಾಗಿ ಇದುವರೆಗೂ ಯಾರೂ ಗ್ರಾಮ ವಾಸ್ತವ್ಯ ಮಾಡಿರಲಿಲ್ಲ. ನಮ್ಮ ಜಿಲ್ಲೆಯಲ್ಲಿ ನಾನು ಗ್ರಾಮ ವಾಸ್ತವ್ಯ ಮಾಡಿದ್ದೇನೆ. ಮೂಡಿಗೆರೆ ತಾಲೂಕು ಕಳಸಾ ಹೋಬಳಿ ಸಂಸೆ ಗ್ರಾ.ಪಂ ವ್ಯಾಪ್ತಿಯಲ್ಲಿ ಜೋಗಿ ಕುಂಬ್ರಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದೆ. ಅದು ನಕ್ಸಲೈಟ್‍ಗಳಿರುವ ತುಂಬಾ ಹಿಂದುಳಿದ ಗ್ರಾಮ. ಅಲ್ಲಿ ಜನರಿಗೆ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಹಲವಾರು ಸಮಸ್ಯೆ ಆ ಭಾಗದಲ್ಲಿ ಇರೋದ್ರಿಂದ ಆ ಉದ್ದೇಶ ಇಟ್ಟುಕೊಂಡು ಹಾಗೂ ಜಿಲ್ಲೆಯ ಹಲವು ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ಮಾಡಲು ಅವಕಾಶ ಕೋರಿದ್ದೇನೆ ಎಂದು ಚೈತ್ರಶ್ರೀ ಹೇಳಿದ್ರು.

     

  • ಕರ್ನಾಟಕದಲ್ಲಿ ಪವನ್ ಕಲ್ಯಾಣ್ ಪಕ್ಷದ ಮೊದಲ ಅಭ್ಯರ್ಥಿ ಆಗ್ತಾರಾ ನವೀನ್ ಕಿರಣ್?

    ಕರ್ನಾಟಕದಲ್ಲಿ ಪವನ್ ಕಲ್ಯಾಣ್ ಪಕ್ಷದ ಮೊದಲ ಅಭ್ಯರ್ಥಿ ಆಗ್ತಾರಾ ನವೀನ್ ಕಿರಣ್?

    ಚಿಕ್ಕಬಳ್ಳಾಪುರ: ನಗರ ಹೊರವಲಯದ ಕೆವಿ ಕ್ಯಾಂಪಸ್ ಗೆ ಆಗಮಿಸಿದ ನಟ ಪವನ್‍ಕಲ್ಯಾಣ್ ಅವರಿಗೆ ಅಭಿಮಾನಿಗಳು ಹೂ ಮಳೆಯನ್ನು ಸುರಿಸಿದ್ದಾರೆ.

    ನಟ ಪವನ್ ರಾಜ್ಯಕ್ಕೆ ಆಗಮಿಸಿದ್ದರಿಂದ ರಾಜ್ಯದ ತೆಲುಗು ಪ್ರಭಾವ ಹೊಂದಿರುವ ಕ್ಷೇತ್ರಗಳಲ್ಲಿ ಜನಸೇನಾ ಪಕ್ಷದ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸುತ್ತಾರೆ ಎನ್ನಲಾಗಿದೆ. ಪ್ರಮುಖವಾಗಿ ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರಿನ ಪಾವಗಡ, ರಾಯಚೂರು, ಕಲಬುರ್ಗಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕ್ಷೇತ್ರಗಳ್ಲಿ ಪವನ್ ಪಾಲಿಟಿಕ್ಸ್ ಆರಂಭವಾಲಿದೆ ಎನ್ನಲಾಗುತ್ತಿದೆ. ಈ ಕ್ಷೇತ್ರಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಜನಸೇನಾ ಅಭ್ಯರ್ಥಿಗಳನ್ನು ನಿಲ್ಲಿಸಲು ಚಿಂತನೆ ನಡೆಸಲಾಗುತ್ತದೆ ಎನ್ನಲಾಗಿದ್ದು ಪವನ್ ಕಲ್ಯಾಣ್ ನಡೆಯಿಂದ ರಾಷ್ಟ್ರೀಯ ಪಕ್ಷಗಳಲ್ಲಿ ತಳಮಳ ಶುರುವಾಗಿದೆ.

    ಇಂದು ಸಂಜೆ ಚಿಕ್ಕಬಳ್ಳಾಪುರದ ಕೆವಿ ಕ್ಯಾಂಪಸ್ ನ ಆವರಣಕ್ಕೆ ಆಗಮಿಸಿದ್ದರು. ಇದಕ್ಕೂ ಮುನ್ನ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಲು ತೀರ್ಮಾನಿಸಿರುವ ಕೆವಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ನವೀನ್ ಕಿರಣ್ ಅವರ ಮನೆಗೆ ಭೇಟಿ ನೀಡಿದರು. ಈ ವೇಳೆ ಕೆಲ ಕಾಲ ಮಾತುಕತೆ ನಡೆಸಿದರು.

    ಪ್ರಸ್ತುತ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕರಾಗಿರುವ ಸುಧಾಕರ್ ಅವರನ್ನು ಸೋಲಿಸುವ ತಂತ್ರ ಎಂದೇ ಪವನ್ ಭೇಟಿಯನ್ನು ವಿಶ್ಲೇಷಿಸಲಾಗುತ್ತಿದೆ. ನವೀನ್ ಕಿರಣ್ ಅವರ ರಾಜಕೀಯ ಮಹತ್ವಕಾಂಕ್ಷಿಗೆ ಪವನ್ ಕಲ್ಯಾಣ್ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದ್ದು, ಮುಂದಿನ ಚುನಾವಣೆಯಲ್ಲಿ ಜನಸೇನಾ ಪಕ್ಷದಿಂದ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸುವ ಮುನ್ಸೂಚನೆಯಾಗಿದೆ.

    ಪ್ರಸ್ತುತ ಪವನ್ ಕಲ್ಯಾಣ್ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಂತೆ ಕಾಣುತ್ತಿದ್ದು, ರಾಜಕೀಯದಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದಾರೆ. 2014 ಮಾರ್ಚ್ ನಲ್ಲಿ ತಮ್ಮದೇ `ಜನ ಸೇನಾ’ ಎಂಬ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಿದ್ದ ಪವನ್ ಕಲ್ಯಾಣ್ ಪಕ್ಷದ ಮೂರನೇ ವರ್ಷದ ವಾರ್ಷಿಕೋತ್ಸವದಲ್ಲಿ ಜನಸೇನಾ 2019ರ ವಿಧಾನಸಭಾ ಚುನವಾಣೆಯಲ್ಲಿ ಆಂಧ್ರ ಮತ್ತು ತೆಲಂಗಾಣ ಎರಡೂ ರಾಜ್ಯಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಸಹೋದರ ಚಿರಂಜೀವಿ ಜನಸೇನಾ ಪಕ್ಷಕ್ಕೆ ಸೇರ್ಪಡೆಯಾಗಲ್ಲ. ರಾಜಕೀಯವಾಗಿ ನನ್ನ ಆಲೋಚನೆಗಳು ಅವರೊಂದಿಗೆ ಹೊಂದಾಣಿಕೆ ಆಗುವುದಿಲ್ಲ. 2019ರ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಶೇ.60ರಷ್ಟು ಕ್ಷೇತ್ರಗಳಲ್ಲಿ ಯುವಕರು ಸ್ಪರ್ಧಿಸಲಿದ್ದು, ನಾನು ಅನಂತಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂದು ತಿಳಿಸಿದ್ದರು.

    https://www.youtube.com/watch?v=dxqHOQ9lLic

  • ಕರ್ನಾಟಕ ರಾಜಕೀಯ ಅಖಾಡಕ್ಕೆ ಧುಮುಕ್ತಾರಾ ನಟ ಪವನ್ ಕಲ್ಯಾಣ್?

    ಕರ್ನಾಟಕ ರಾಜಕೀಯ ಅಖಾಡಕ್ಕೆ ಧುಮುಕ್ತಾರಾ ನಟ ಪವನ್ ಕಲ್ಯಾಣ್?

    ಚಿಕ್ಕಬಳ್ಳಾಪುರ: ಜಿಲ್ಲೆಯ ವಿಧಾನಸಭಾ ಕ್ಷೇತ್ರದ ರಾಜಕೀಯ ವಲಯದಲ್ಲಿ ಇಂದು ಹೊಸ ಸಂಚಲನ ಮೂಡಲಿದೆ. ಇದಕ್ಕೆ ಕಾರಣ ತೆಲುಗು ನಟ ಹಾಗೂ ಜನಸೇನಾ ಪಕ್ಷದ ಅಧ್ಯಕ್ಷ ಪವರ್ ಸ್ಟಾರ್ ಪವನ್ ಕಲ್ಯಾಣ್ ಜಿಲ್ಲೆಗೆ ಆಗಮಿಸಿತ್ತಿರುವುದು.

    ಪ್ರಸ್ತುತ ಆಂಧ್ರ ಪ್ರದೇಶದ ಹಿಂದೂಪುರಂ ನಲ್ಲಿ ಜನಸೇನಾ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಿರುವ ನಟ ಪವನ್ ಕಲ್ಯಾಣ್ ಸಂಜೆ 5 ಗಂಟೆಗೆ ಚಿಕ್ಕಬಳ್ಳಾಪುರಕ್ಕೆ ಆಗಮಿಸಲಿದ್ದಾರೆ. ನಗರದ ಹೊರವಲಯದ ಕೆ ವಿ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ನಲ್ಲಿ ಸಮಾರಂಭ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿದೆ.

    ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕೆ ವಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಕೆ ವಿ ನವೀನ್ ಕಿರಣ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದಾರೆ. ನವೀನ್ ಕಿರಣ್ ಜೊತೆ ಪವನ್ ಕಲ್ಯಾಣ್ ಮಾತುಕತೆ ನಡೆಸಲಿದ್ದಾರೆ. ಹೀಗಾಗಿ ಚಿಕ್ಕಬಳ್ಳಾಪುರ ವಿಧಾನಸಭಾಕ್ಷೇತ್ರದ ರಾಜಕೀಯ ವಲಯದಲ್ಲಿ ನಟ ಪವನ್ ಕಲ್ಯಾಣ್ ಭೇಟಿ ಸಂಚಲನ ಮೂಡಿಸಿದೆ. ಹಿಂದೂಪುರಂ ನಲ್ಲಿ ಸಮಾವೇಶ ಮುಗಿದ ಬಳಿಕ ಚಿಕ್ಕಬಳ್ಳಾಪುರಕ್ಕೆ ಆಗಮಿಸಲಿರುವ ಪವನ್ ಕಲ್ಯಾಣ್ ಆಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

    ಈಗಾಗಲೇ ಪವನ್ ಕಲ್ಯಾಣ್ ಗೆ ಸ್ವಾಗತ ಕೋರಲು ಅಭಿಮಾನಿಗಳು ಸನ್ನದ್ಧರಾಗಿದ್ದಾರೆ. ಕೆವಿ ಕ್ಯಾಂಪಸ್ ನ ಆವರಣದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದೆ. ಆದರೆ ಈ ಸಮಾರಂಭದ ಕುರಿತು ಮಾತನಾಡಿದ ನವೀನ್ ಕುಮಾರ್ ಕೇವಲ ಅಭಿಮಾನದ ಭೇಟಿ ಅಷ್ಟೇ, ರಾಜಕೀಯದ ಭೇಟಿ ಅಲ್ಲ ಎಂದು ತಿಳಿಸಿದ್ದಾರೆ.

    ಈ ಹಿಂದೆ ಜೆಡಿಎಸ್ ಪಕ್ಷದ ಪರ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸುತ್ತಾರೆ ಎಂದು ಜೆಡಿಎಸ್ ಮೂಲಗಳಿಂದ ತಿಳಿದು ಬಂದಿತ್ತು. ಈ ಕುರಿತು ಮಾಹಿ ಸಿಎಂ ಕುಮಾರಸ್ವಾಮಿ ಹಾಗೂ ಪವನ್ ಅವರ ನಡುವೆ ಮೂರು ಸುತ್ತಿನ ಮಾತುಕತೆ ಸಹ ನಡೆದಿದೆ ಎನ್ನಲಾಗಿತ್ತು. ಕರ್ನಾಟಕ ಹಾಗೂ ಆಂಧ್ರ ಗಡಿ ಭಾಗದ ಜಿಲ್ಲೆಗಳಾದ ರಾಯಚೂರು, ಕೋಲಾರ, ತುಮಕೂರು, ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪು ಜಿಲ್ಲೆಗಳಲ್ಲಿ ಪ್ರಚಾರ ನಡೆಸುವ ಮಾಹಿತಿ ಲಭಿಸಿತ್ತು.

    ಪವನ್ ಕಲ್ಯಾಣ್ ಸಿನಿಮಾ ಜೊತೆಗೆ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದು, 2014 ಮಾರ್ಚ್ ನಲ್ಲಿ ತಮ್ಮದೇ `ಜನ ಸೇನಾ’ ಎಂಬ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಿದ್ದಾರೆ. ಪಕ್ಷದ ಮೂರನೇ ವರ್ಷದ ವಾರ್ಷಿಕೋತ್ಸವದಲ್ಲಿ `ಜನಸೇನಾ’ 2019ರ ವಿಧಾನಸಭಾ ಚುನವಾಣೆಯಲ್ಲಿ ಆಂಧ್ರ ಮತ್ತು ತೆಲಂಗಾಣ ಎರಡೂ ರಾಜ್ಯಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಸಹೋದರ ಚಿರಂಜೀವಿ `ಜನಸೇನಾ’ ಪಕ್ಷಕ್ಕೆ ಸೇರ್ಪಡೆಯಾಗಲ್ಲ. ರಾಜಕೀಯವಾಗಿ ನನ್ನ ಆಲೋಚನೆಗಳು ಅವರೊಂದಿಗೆ ಹೊಂದಾಣಿಕೆ ಆಗುವುದಿಲ್ಲ. 2019ರ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಶೇ.60ರಷ್ಟು ಕ್ಷೇತ್ರಗಳಲ್ಲಿ ಯುವಕರು ಸ್ಪರ್ಧಿಸಲಿದ್ದು, ನಾನು ಅನಂತಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂದು ತಿಳಿಸಿದ್ದರು.