Tag: ಭೇಟಿ

  • ಕೊಡಗಿಗೆ ಸರ್ಕಾರದಿಂದಾಗಿರುವ ಅನ್ಯಾಯದ ವಿರುದ್ಧ ಗುಡುಗಿದ ಬಾಲಕ – ಸಿಎಂ ಎಚ್‍ಡಿಕೆ ಪ್ರತಿಕ್ರಿಯೆ ಏನು ಗೊತ್ತಾ?

    ಕೊಡಗಿಗೆ ಸರ್ಕಾರದಿಂದಾಗಿರುವ ಅನ್ಯಾಯದ ವಿರುದ್ಧ ಗುಡುಗಿದ ಬಾಲಕ – ಸಿಎಂ ಎಚ್‍ಡಿಕೆ ಪ್ರತಿಕ್ರಿಯೆ ಏನು ಗೊತ್ತಾ?

    ಮಡಿಕೇರಿ: 7ನೇ ತರಗತಿ ಬಾಲಕನೊಬ್ಬ ಕೊಡಗಿಗೆ ಸರ್ಕಾರದಿಂದಾಗಿರುವ ಅನ್ಯಾಯದ ಬಗ್ಗೆ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸರ್ಕಾರದ ನಿರ್ಲಕ್ಷ್ಯ ಧೋರಣೆಯ ವಿರುದ್ಧ ವಿಡಿಯೋದಲ್ಲಿ ಬಾಲಕ ಕಿಡಿಕಾರಿದ್ದಾನೆ.

    ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಎಮ್ಮೆಮಾಡು ಗ್ರಾಮದ ಉಮ್ಮರ್ ಎಂಬವರ ಪುತ್ರ ಫತಹ್ ಸರ್ಕಾರ ನೀತಿಯ ವಿರುದ್ಧ ಮಾತನಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಬಳಿಕ ಸದ್ಯ ಸಿಎಂ ಕುಮಾರಸ್ವಾಮಿ ಅವರು ಬಾಲಕನ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ವಿಡಿಯೋದಲ್ಲಿ ನೇರ ಸಿಎಂ ಕುಮಾರಸ್ವಾಮಿ ಅವರನ್ನು ಪ್ರಶ್ನೆ ಮಾಡಿರುವ ಬಾಲಕ, ಸಿಎಂ ಸರ್ ಕೊಡಗನ್ನು ಯಾಕೆ ಆನಾಥ ಮಾಡಿದ್ದೀರಾ, ನಿಮಗೆ ಕೊಡಗಿನ ನೀರು ಬೇಕು ನಮಗೆ ಅಭಿವೃದ್ಧಿ ಬೇಡ್ವಾ, ವಿಪಕ್ಷ ನಾಯಕರೇ ನೀವು ಪ್ರಧಾನಿಗಳ ಗಮನಕ್ಕೆ ತರಬಹುದಲ್ಲ ಎಂದು ತನ್ನದೇ ಸ್ಟೈಲ್ ನಲ್ಲಿ ಜಿಲ್ಲೆಯ ಪ್ರಮುಖ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾನೆ.

    ಜಿಲ್ಲೆಯಿಂದ ಲಾಭ ಪಡೆದುಕೊಳ್ಳುವ ಸರ್ಕಾರ ಕೊಡಗನ್ನು ಮರೆತಿದೆ. ಕೊಡಗಿಲ್ಲಿ ನೂರಾರೂ ಸಮಸ್ಯೆಗಳಿವೆ ಇಡೀ ರಾಜ್ಯ ಸೇರಿದಂತೆ ನೆರೆ ರಾಜ್ಯಕ್ಕೆ ನೀರು ನೀಡುವುದು ಕೊಡಗು, ನಿಮಗೆ ನಮ್ಮ ನೀರು ಬೇಕು ನಮಗೆ ಅಭಿವೃದ್ಧಿ ಬೇಡ್ವಾ? ಅಲ್ಲದೇ ಜಿಲ್ಲೆಯ ರೈತರು ಬೆಳೆ ನಾಶದಿಂದ ಪರದಾಡುತ್ತಿದ್ದಾರೆ. ಮೊದಲು ಇಲ್ಲಿನ ರೈತರಿಗೆ ಪರಿಹಾರ ನೀಡಿ ಎಂದು ಆಗ್ರಹಿಸಿದ್ದಾನೆ. ಮಳೆಯಿಂದ ಕೊಡಗಿನ ಮಕ್ಕಳಿಗೆ ಕಷ್ಟವಾಗಿದೆ. ಶಾಲೆಗೆ ತೆರಳಲು ಸಮಸ್ಯೆಯಾಗಿದೆ. ಮಳೆಯ ಅಬ್ಬರಕ್ಕೆ ಬೆಳೆಗಳಿಗೆ ನಷ್ಟ ಉಂಟಾಗಿದೆ. ಮೊದಲು ರೈತಪರ ನಿಲುವು ಪ್ರದರ್ಶಿಸಿ ಎಂದು ಮನವಿ ಮಾಡಿದ್ದಾನೆ.

    ವಿಡಿಯೋದಲ್ಲಿ ವಿಪಕ್ಷ ನಾಯಕರಿಗೂ ಸಲಹೆ ನೀಡಿರುವ ಬಾಲಕ, ಯಡಿಯೂರಪ್ಪ ಜೀ ನೀವು ಸದನದ ಹೊರಗೆ, ಒಳಗೆ ಕಿರುಚಾಡಿದರೆ ಯಾವುದೇ ಪ್ರಯೋಜನವಿಲ್ಲ, ಮೊದಲು ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿ ಕೊಡಗಿನ ಬಗ್ಗೆ ಗಮನ ಸೆಳೆಯಿರಿ ಎಂದು ಹೇಳಿದ್ದಾನೆ.

    ರಾಜ್ಯ ಸರ್ಕಾರದ ವಿರುದ್ದ ತನ್ನದೇ ಶೈಲಿಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಈ ಬಾಲಕ ಇದೀಗ ಕೊಡಗಿನ ಜನರ ಪ್ರಶಂಸೆಗೂ ಪಾತ್ರವಾಗಿದ್ದಾನೆ. ಸಾಮಾಜಿಕ ಜಾಲತಾಣವನ್ನು ಇಂದು ದುರ್ಬಳಕೆ ಮಾಡಿಕೊಳ್ಳುವರೇ ಹೆಚ್ಚು ಆದರೆ ಇದರ ನಡುವೆ ಈ ಬಾಲಕ ವಿಡಿಯೋದಲ್ಲಿ ಜಿಲ್ಲೆಯ ಸಮಸ್ಯೆಗಳನ್ನು ತಿಳಿಸಿ ರಾಜ್ಯದ ಮುಖ್ಯ ಮಂತ್ರಿಗಳ ಗಮನ ಸೆಳೆದಿದ್ದಾನೆ.

    ಸಿಎಂ ಪ್ರತಿಕ್ರಿಯೆ: ಕೊಡಗು ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಮಳೆಯಾಗಿದ್ದು, ಸರ್ಕಾರ ಇದನ್ನು ನಿರ್ಲಕ್ಷ್ಯವಹಿಸಿದೆ ಎಂದು ಬಾಲಕ ಆರೋಪ ಮಾಡಿದ್ದಾನೆ. ಆದರೆ ಕಳೆದ ಎರಡು ದಿನಗಳ ಹಿಂದೆಯೇ ಸದನದಲ್ಲಿ ಕೊಡಗು ಜಿಲ್ಲೆಗೆ ಭೇಟಿ ನೀಡುವುದಾಗಿ ವಿರಾಜಪೇಟೆ ಶಾಸಕ ಬೋಪಯ್ಯ ಅವರಿಗೆ ತಿಳಿಸಿದ್ದೇನೆ. ಅಲ್ಲದೇ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ತಾನು ಜಿಲ್ಲೆಯಲ್ಲಿ ಪ್ರವಾಸ ಮಾಡುವುದಾಗಿ ಆಶ್ವಾಸನೆ ನೀಡಿದ್ದೆ, ಈ ವೇಳೆ ಜನರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡಲಾಗುತ್ತದೆ. ಆದರೆ ನನ್ನ ವಿರುದ್ಧ ಆರೋಪ ಮಾಡುವ ಮೊದಲು ಈ ಹಿಂದಿನ 70 ವರ್ಷ ಆಳ್ವಿಕೆ ನಡೆಸಿದ ಸರ್ಕಾರ ಸಮಸ್ಯೆ ಏನು ಪರಿಹಾರ ನೀಡಿವೆ. 70 ವರ್ಷಗಳ ಸಮಸ್ಯೆಗಳು 2 ತಿಂಗಳಲ್ಲಿ ಪ್ರಾರಂಭವಾಗಿದೆಯಾ? ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ಜುಲೈ 19ಕ್ಕೆ ಕೊಡಗು ಭೇಟಿ: ಇದೇ ವೇಳೆ 19 ಕ್ಕೆ ಕೊಡಗಿಗೆ ಭೇಟಿ ನೀಡುವುದಾಗಿ ಖಚಿತ ಪಡಿಸಿದ ಸಿಎಂ, ವಿಡಿಯೋದಲ್ಲಿ ಮಾತನಾಡಿದ ಹುಡುಗನ ಮನೆಗೇ ಹೋಗುತ್ತೇನೆ. ಕೊಡಗಿನ ನೋವಿಗೆ ಸ್ಪಂದಿಸಿಲ್ಲ ಎಂದು ಆರೋಪ ಮಾಡಿದ್ದೀರಿ.  ಬಿಜೆಪಿ ಅವರು ಹುಡುಗನ ಕೈಯಲ್ಲಿ ವಿಡಿಯೋ ಮಾಡಿಸಿ ವೈರಲ್ ಆಗುವಂತೆ ಮಾಡಿದ್ದೀರಿ. ಇದೆಲ್ಲವೂ ಬೇಕು ಎಂದು ಮಾಡಿಸುತ್ತಿದ್ದಾರೆ. ರಾಜ್ಯದ ರೈತರು ಸೇರಿದಂತೆ ತಮಿಳುನಾಡಿನ ಜನ ನಾಲ್ಕು ವರ್ಷದಿಂದ ಕಷ್ಟ ಅನುಭವಿಸುತ್ತಿದ್ದಾರೆ. ತಾಯಿ ಚಾಮುಂಡೇಶ್ವರಿ ದಯೆಯಿಂದ ಕೆಆರ್ ಎಸ್ ತುಂಬಿದೆ. ಮಂಡ್ಯಗಳ ಕೆರೆ ತುಂಬಿಸಲು ಸೂಚನೆ ನೀಡಲಾಗಿದೆ. ಅಲ್ಲದೇ ತಮಿಳುನಾಡಿಗೆ ನೀರು ಬಿಡಲು ಹೇಳಿದ್ದೇನೆ ಎಂದರು.

  • ಭಾರತಕ್ಕೆ ಬರಲಿದ್ದಾರೆ ಹೈಪರ್‌ಲೂಪ್‌ ಜನಕ ಎಲಾನ್ ಮಸ್ಕ್!

    ಭಾರತಕ್ಕೆ ಬರಲಿದ್ದಾರೆ ಹೈಪರ್‌ಲೂಪ್‌ ಜನಕ ಎಲಾನ್ ಮಸ್ಕ್!

    ನವದೆಹಲಿ: ಹೈಪರ್‌ಲೂಪ್‌ ಜನಕ ಹಾಗೂ ಸ್ಪೇಸ್-ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್ ರವರು ಭಾರತಕ್ಕೆ ಬರುತ್ತೇನೆ ಎಂದು ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ.

    ಎಲಾನ್ ಮಸ್ಕ್ ರವರು ಗುರುವಾರ ಚೀನಾ ಪ್ರವಾಸದಲ್ಲಿನ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ವೇಳೆ ಭಾರತೀಯರು ನೀವು ಯಾವಾಗ ಭಾರತಕ್ಕೆ ಬರುವಿರಿ ಎಂದು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಲಾನ್ ಮಸ್ಕ್ 2018ರೊಳಗೆ ಭಾರತಕ್ಕೆ ಭೇಟಿ ನೀಡುವ ಕುರಿತು ಮಾಹಿತಿ ನೀಡಿದ್ದಾರೆ.

    ಎಲಾನ್ ಮಸ್ಕ್ ರವರು ಮೂಲತಃ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದವರಾಗಿದ್ದು, ಸದ್ಯ ಅಮೆರಿಕದ ಲಾಸ್ ಎಂಜಲೀಸ್‍ನಲ್ಲಿ ನೆಲೆಸಿದ್ದಾರೆ. ಇವರು ಟೆಸ್ಲಾ ಇಲೆಕ್ಟ್ರಿಕ್ ಕಾರು ಹಾಗೂ ಖಾಸಗಿ ಬಾಹ್ಯಾಕಾಶ ಸಂಸ್ಥೆಯಾದ ಸ್ಪೇಸ್ ಎಕ್ಸ್ ನ ಸಂಸ್ಥಾಪಕರಾಗಿದ್ದಾರೆ.

    2017ರಲ್ಲಿ ತಮ್ಮ ಟೆಸ್ಲಾ ಸಂಸ್ಥೆಯ ಇಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲಿ ಪರಿಚಯಿಸುವ ಕುರಿತು ಭಾರತ ಸರ್ಕಾರದೊಂದಿಗೆ ಮಾತನಾಡಿದ್ದರು. ಆದರೆ ಕೇಂದ್ರ ಸರ್ಕಾರದ ನಿಯಮ-ಷರತ್ತುಗಳ ಪ್ರಕ್ರಿಯೆ ವಿಳಂಬವಾದ ಕಾರಣ ಭಾರತದಲ್ಲಿ ಟೆಸ್ಲಾ ಕಾರುಗಳು ತಡವಾಗಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಈ ಹಿಂದೆ ತಿಳಿಸಿದ್ದರು. ಇದನ್ನೂ ಓದಿ: ಮುಂಬೈ ನಿಂದ ಪುಣೆಗೆ ಜಸ್ಟ್ 25 ನಿಮಿಷ ಸಾಕು- ಹೈಪರ್‍ಲೂಪ್ ಪಡೆಯುವಲ್ಲಿ ಭಾರತವೇ ಮೊದಲ ದೇಶವಾಗೋ ನಿರೀಕ್ಷೆ

    ಏನಿದು ಹೈಪರ್‌ಲೂಪ್‌?
    ಹೈಪರ್‌ಲೂಪ್‌ ಮುಂದಿನ ಪೀಳಿಗೆಯ ರೈಲ್ವೇ ವ್ಯವಸ್ಥೆಯಾಗಿದ್ದು, ಅಯಸ್ಕಾಂತಿಯ ಶಕ್ತಿಯಿಂದ ಸಂಚರಿಸುತ್ತದೆ. ಗಂಟೆಗೆ 1126 ಕಿ.ಮೀ ವೇಗ ಇರಲಿದೆ ಎಂದು ನಿರೀಕ್ಷಿಸಬಹುದಾಗಿದೆ. ಕೊಳವೆಯಾಕಾರದ ಈ ವಾಹನ ಶಬ್ದದ ವೇಗದಲ್ಲಿ ಚಲಿಸಲಿದೆ ಎಂದು ವರದಿಯಾಗಿದೆ. ಪ್ರಸ್ತುತ ಭಾರತದಲ್ಲಿ ಅತ್ಯಂತ ವೇಗದ ರೈಲು ಟಾಲ್ಗೋ ಗಂಟೆಗೆ 180 ಕಿ.ಮೀ ವೇಗದಲ್ಲಿ ಸಂಚರಿಸುತ್ತದೆ. ಆದ್ರೆ ಇದು ಇನ್ನೂ ಪರೀಕ್ಷಾರ್ಥ ಸಂಚಾರದಡಿ ಇದೆ.

    ಲಾಭ ಏನು?
    ಪ್ರಸ್ತಾವಿತ 149 ಕಿಮಿ ಇರೋ ಪುಣೆ-ಮುಂಬೈ ಮಾರ್ಗಕ್ಕೆ ಬರೋದಾದ್ರೆ ಇದು ಪುಣೆ, ನವೀಮುಂಬೈ ಅಂತರಾಷ್ಟ್ರಿಯ ವಿಮಾನ ನಿಲ್ದಾಣ ಹಾಗೂ ಮುಂಬೈ ನಗರಗಳನ್ನ ಸಂಪರ್ಕಿಸಲಿದ್ದು, 25 ನಿಮಿಷ ಪ್ರಯಾಣ ಸಮಯ ಇರಲಿದೆ. ರಿಚರ್ಡ್ ಬ್ರಾನ್ಸನ್ ಅವರ ಪ್ರಕಾರ ಈ ವ್ಯವಸ್ಥೆಯಿಂದ 2.6 ಕೋಟಿ ಜನರಿಗೆ ನೆರವಾಗಲಿದ್ದು, 9 ಕೋಟಿ ಗಂಟೆಗೂ ಹೆಚ್ಚು ಪ್ರಯಾಣ ಸಮಯ ಉಳಿತಾಯವಾಗಲಿದೆ. ಮಾರ್ಗವು ಸಂಪುರ್ಣವಾಗಿ ವಿದ್ಯುತ್ ಶಕ್ತಿಯಿಂದ ಕೂಡಿರಲಿದ್ದು, ವರ್ಷಕ್ಕೆ 1.5 ಲಕ್ಷ ಟನ್‍ನಷ್ಟು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನ ಕಡಿಮೆ ಮಾಡಲಿದೆ.

  • ವೃದ್ಧಾಶ್ರಮದ ವಯೋವೃದ್ಧರ ಆಸೆಯನ್ನು ಎಸ್‍ಪಿ ಅಣ್ಣಾಮಲೈ ನೆರವೇರಿಸಿದ್ರು: ವಿಡಿಯೋ ನೋಡಿ

    ವೃದ್ಧಾಶ್ರಮದ ವಯೋವೃದ್ಧರ ಆಸೆಯನ್ನು ಎಸ್‍ಪಿ ಅಣ್ಣಾಮಲೈ ನೆರವೇರಿಸಿದ್ರು: ವಿಡಿಯೋ ನೋಡಿ

    ಚಿಕ್ಕಮಗಳೂರು: ಪ್ರತಿದಿನ ಟಿವಿಯಲ್ಲಿ ಚಿಕ್ಕಮಗಳೂರು ಎಸ್‍ಪಿ ಕಾರ್ಯವೈಖರಿಯನ್ನು ವೀಕ್ಷಿಸುತ್ತಿದ್ದ ವಯೋವೃದ್ಧರ ಆಸೆಯನ್ನು ಅಣ್ಣಾಮಲೈ ನೆರವೇರಿಸಿದ್ದಾರೆ.

    ಚುನಾವಣೆ ಪೂರ್ವದಿಂದಲೂ ಪ್ರತಿದಿನ ಟಿವಿಯಲ್ಲಿ ಅಣ್ಣಾಮಲೈ ಕಾರ್ಯವೈಖರಿಯನ್ನು ವೀಕ್ಷಿಸುತ್ತಿದ್ದ ಚಿಕ್ಕಮಗಳೂರಿನ ಗೌರಿ ಕಾಲುವೆಯಲ್ಲಿರೋ ಅನ್ನಪೂರ್ಣ ವೃದ್ಧಾಶ್ರಮದ ವಯೋವೃದ್ಧರು ಎಸ್‍ಪಿ ಅವರನ್ನು ಕಣ್ತುಂಬ ನೋಡಬೇಕೆಂದು ಇಂಗಿತ ವ್ಯಕ್ತಪಡಿಸಿದ್ದರು.

    ವಿಷಯ ತಿಳಿದ ಅಣ್ಣಾಮಲೈ ಸ್ಥಳಕ್ಕೆ ಭೇಟಿ ನೀಡಿ ವಯೋವೃದ್ಧರ ಯೋಗಕ್ಷೇಮ, ಕಷ್ಟವನ್ನು ವಿಚಾರಿಸಿದ್ದಾರೆ. ಮಂಗಳವಾರ ಸಂಜೆ ದಿಢೀರನೇ ವೃದ್ಧಾಶ್ರಮಕ್ಕೆ ಭೇಟಿ ನೀಡಿದ ಅಣ್ಣಾಮಲೈ ಅಲ್ಲಿನ ಹಿರಿ ಜೀವಗಳ ನೋವನ್ನು ಆಲಿಸಿದ್ದಾರೆ.

    ಎಸ್‍ಪಿ ಅಣ್ಣಾಮಲೈ ಅವರನ್ನು ನೋಡುತ್ತಿದ್ದಂತೆ ವಯೋವೃದ್ಧರು ಆನಂದಭಾಷ್ಪ ಸುರಿಸಿದರು. ಎಸ್‍ಪಿ ಪಕ್ಕದಲ್ಲಿ ಮಕ್ಕಳಂತೆ ಕೂತು ಹಿರಿಯ ಜೀವಗಳು ತಮ್ಮ ನೋವಗಳನ್ನು ಹೇಳಿ ಕಣ್ಣೀರಿಟ್ಟರು. ಒಬ್ಬೊಬ್ಬರ ನೋವನ್ನು ಕೇಳಿದ ಅಣ್ಣಾಮಲೈ ಅವರಿಗೆ ಸಾಂತ್ವಾನ ಹೇಳಿದ್ದರು.\

  • ಮತ್ತೇ ರಾಜಕೀಯದಲ್ಲಿ ಸಕ್ರಿಯರಾಗಿ: ಮಾಜಿ ಸಿಎಂರನ್ನು ಹುರಿದುಂಬಿಸಿದ ಕುರುಬ ಸಮುದಾಯದ ಮುಖಂಡರು

    ಮತ್ತೇ ರಾಜಕೀಯದಲ್ಲಿ ಸಕ್ರಿಯರಾಗಿ: ಮಾಜಿ ಸಿಎಂರನ್ನು ಹುರಿದುಂಬಿಸಿದ ಕುರುಬ ಸಮುದಾಯದ ಮುಖಂಡರು

    ಮಂಗಳೂರು: ಸರ್ ನೀವು ಯಾವುದೇ ಒತ್ತಡಗಳಿಗೆ ಒಳಗಾಗಬೇಡಿ, ನಿಮ್ಮೊಂದಿಗೆ ಇಡಿ ಕುರುಬ ಸಮುದಾಯವೇ ಇದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕುರುಬ ಸಮುದಾಯದ ಜನರು ಧೈರ್ಯ ತುಂಬಿದ್ದಾರೆ.

    ಮಂಗಳೂರಿನ ಕುರುಬ ಸಂಘದ ಭವನಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರಿಗೆ ಸಾಂತ್ವಾನ ಹೇಳಲು ಅನೇಕ ಜನರು ನೆರೆದಿದ್ದರು. ಕಳೆದ ಐದು ವರ್ಷದಿಂದ ನಾವು ಕುರುಬರು ಅಂತಾ ಹೇಳಿಕೊಂಡು ರಾಜ್ಯದಲ್ಲಿ ಹೆಮ್ಮೆಯಿಂದ ಜೀವನ ಮಾಡಿದ್ದೇವೆ. ರಾಜಕೀಯದಲ್ಲಿ ನಾವು ಸುಮ್ಮನೆ ಕುರಬಾರದು, ಮತ್ತೇ ನಮ್ಮನ್ನು ಕಂಡರೆ ಭಯ ಬರಬೇಕು. ನಿಮ್ಮ ಹಿಂದೆ ನಾವು ಸದಾ ಇರುತ್ತೇವೆ ಎಂದು ಸಮುದಾಯದ ಜನರು ಸಿದ್ದರಾಮಯ್ಯ ಅವರನ್ನು ಹುರಿದುಂಬಿಸಿದರು.

    ಬಾದಾಮಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ ಮುಖಂಡರು ಮಂಗಳೂರಿನ ಕುರುಬ ಸಂಘದ ಭವನಕ್ಕೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ನಾನು ಈಗ ಖಾಸಗಿ ಕಾರ್ಯಕ್ರಮದಲ್ಲಿ ಇರುವೆ. ಹೀಗಾಗಿ ಏನು ಹೇಳುಬೇಕಿದೆಯೋ ಅದನ್ನು ಬೆಂಗಳೂರಿಗೆ ಬಂದು ಹೇಳುತ್ತೇನೆ ಎಂದು ಗರಂ ಆದರು.

  • ಅಹಿಂದ ಮಂತ್ರ ಜಪಿಸಲು ಮುಂದಾದ ಸಿದ್ದುಗೆ ಶಾಕ್ ಟ್ರೀಟ್‍ಮೆಂಟ್ ಕೊಡಲು `ಕೈ’ಕಮಾಂಡ್ ತಂತ್ರ

    ಅಹಿಂದ ಮಂತ್ರ ಜಪಿಸಲು ಮುಂದಾದ ಸಿದ್ದುಗೆ ಶಾಕ್ ಟ್ರೀಟ್‍ಮೆಂಟ್ ಕೊಡಲು `ಕೈ’ಕಮಾಂಡ್ ತಂತ್ರ

    ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ನಾನು ಹೇಳಿದ ಮಾತೇ ನಡೆಯಬೇಕು ಅಂತಿರುವ ಮಾಜಿ ಸಿಎಂ ಸಿದ್ದರಾಮಯ್ಯಗೆ ಬ್ರೇಕ್ ಹಾಕಲು ಹೈಕಮಾಂಡ್ ಮುಂದಾಗಿದೆ.

    ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರ ಐದು ವರ್ಷ ಇರತ್ತೋ ಇಲ್ಲವೋ ಹೇಳೋಕೆ ಆಗಲ್ಲ ಎಂಬ ವಿವಾದಾತ್ಮಕ ಹೇಳಿಕೆಯನ್ನು ಹೇಳಿದ್ದರು. ಆದ್ದರಿಂದ ಸಿದ್ದರಾಮಯ್ಯ ತಮ್ಮ ಈ ವರ್ತನೆಯ ಬಗ್ಗೆ ಈಗ ಸ್ಪಷ್ಟನೆ ನೀಡಬೇಕಿರುವುದು ಹೈಕಮಾಂಡ್ ನಾಯಕರಿಗಲ್ಲ. ರಾಜ್ಯದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಕೊಡಬೇಕು. ನಿಮ್ಮ ಸಮಸ್ಯೆ ಏನೇ ಇದ್ದರೂ ಖರ್ಗೆ ಬಳಿ ಚರ್ಚಿಸಿ ಎಂದು ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯಗೆ ಸಂದೇಶ ರವಾನಿಸಿದೆಯಂತೆ.

    ಇಂದು ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆಯನ್ನು ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಮಹತ್ವದ ಭೇಟಿ ನಡೆಯಲಿದೆ. ಭೇಟಿ ವೇಳೆ ಸಿದ್ದರಾಮಯ್ಯ ತಮ್ಮ ಅಸಮಧಾನ ಮತ್ತು ಅಸಹನೆ ಎಲ್ಲವನ್ನು ಖರ್ಗೆ ಬಳಿ ಹೇಳಿಕೊಳ್ಳಬೇಕು. ಬಳಿಕ ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಹೈಕಮಾಂಡ್ ನಾಯಕರ ಜೊತೆ ಖರ್ಗೆ ಮಾತುಕತೆ ನಡೆಸಲಿದ್ದಾರೆ.

    ಈ ಮೂಲಕ ರಾಜ್ಯದಲ್ಲಿ ನೀವು ಪ್ರಶ್ನಾತೀತ ನಾಯಕರಲ್ಲ. ನೀವೊಬ್ಬರೇ ಎಲ್ಲಾ ಅಲ್ಲ. ನೀವು ಮಾಡಿದ ಎಲ್ಲವೂ ಸರಿಯಲ್ಲ. ನಿಮ್ಮ ತಪ್ಪನ್ನ ತಿದ್ದೋರು ರಾಜ್ಯದಲ್ಲೇ ಇದ್ದಾರೆ ಎಂಬ ಸಂದೇಶವನ್ನು ಸಿದ್ದರಾಮಯ್ಯಗೆ ಹೈಕಮಾಂಡ್ ರವಾನಿಸಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.

  • ಕೇಂದ್ರ ಕಾರ್ಮಿಕ ಭವನಕ್ಕೆ ಸಚಿವರ ದಿಢೀರ್ ಭೇಟಿ – ಅಧಿಕಾರಿಗಳು ಕಂಗಾಲು

    ಕೇಂದ್ರ ಕಾರ್ಮಿಕ ಭವನಕ್ಕೆ ಸಚಿವರ ದಿಢೀರ್ ಭೇಟಿ – ಅಧಿಕಾರಿಗಳು ಕಂಗಾಲು

    ಬೆಂಗಳೂರು: ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರು ಇಂದು ದಿಢೀರ್ ಆಗಿ ಕೇಂದ್ರ ಕಾರ್ಮಿಕಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

    ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರ್ಮಿಕ ಇಲಾಖೆಯಲ್ಲಿ ಕೆಲ ಹೊಸ ವ್ಯವಸ್ಥೆಗಳನ್ನು ಮಾಡಬೇಕು. ಅಲ್ಲದೇ ವೇಗದ ಕಾರ್ಯಕ್ಕೆ ಚುರುಕು ಮುಟ್ಟಿಸಬೇಕು ಎಂದು ದಿಢೀರ್ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದೇನೆ. ಯಾವ ಕೆಲಸ ನಡೆಯಬೇಕಿದೆ. ಯಾವೆಲ್ಲ ಕೆಲಸಗಳನ್ನು ಅರ್ಥದಲ್ಲೇ ನಿಲ್ಲಿಸಲಾಗಿದೆ. ಕಾರ್ಮಿಕರಿಗೆ ಏನು ಅನುಕೂಲವಾಗಿದೆ ಎಂದು ಮಾಹಿತಿ ಪಡೆಯಲು ಆಗಮಿಸಿದ್ದಾಗಿ ತಿಳಿಸಿದರು.

    ಇದೇ ವೇಳೆ ಕಾರ್ಮಿಕಭವನದ ಕೆಲ ಕುಂದುಕೊರತೆಗಳು ಗಮನಕ್ಕೆ ಬಂದಿರುವುದಾಗಿ ತಿಳಿಸಿದ ಅವರು, ಅಧಿಕಾರಿಗಳ ಹಾಜರಾತಿ, ಮೂಮೆಂಟ್ ಬುಕ್ ನಲ್ಲಿ ಸರಿಯಾಗಿ ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಅಲ್ಲದೇ ಬಾಲ ಕಾರ್ಮಿಕರ ಬಳಕೆ ಕುರಿತು ಮಾಹಿತಿ ಪಡೆದು, ಬಾಲ ಕಾರ್ಮಿರನ್ನು ಎಲ್ಲಯಾದರೂ ದುಡಿಮೆ ಮಾಡಿಕೊಳ್ಳುವ ಕುರಿತು ತಿಳಿದು ಬಂದರೆ ಕಠಿಣ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

    ಆಯುಕ್ತೆ ಇರುಸು ಮುರುಸು: ತಮ್ಮ ದಿಢೀರ್ ಭೇಟಿ ವೇಳೆ ಸಚಿವರು ಕಾರ್ಮಿಕ ಭವನದ ಶೌಚಾಲಯಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಶೌಚಾಲಯದ ಅವ್ಯವಸ್ಥೆ ಕಂಡು ಕಾರ್ಮಿಕ ಇಲಾಖೆ ಆಯುಕ್ತೆ ಚೈತ್ರಗೆ ಪುರುಷರ ಶೌಚಾಲಯ ದರ್ಶನ ಮಾಡಿಸಿದರು. ದೂರದಲ್ಲಿದ್ದ ಆಯುಕ್ತೆ ಚೈತ್ರರವರನ್ನು ಕರೆದು ಏನು ಪರಿಸ್ಥಿತಿ ಎಂದು ಪ್ರಶ್ನಿಸಿ ಶೌಚಲಯಕ್ಕೆ ಹೋಗಲು ಹೇಳಿದರು. ಇದರಿಂದ ಕೆಲ ಸಮಯ ಆಯುಕ್ತೆ ಚೈತ್ರಾ ಇರುಸು ಮುರುಸುಗೊಂಡರು. ಇನ್ನು ಇದಕ್ಕೂ ಮೊದಲು ಕಚೇರಿ ಬಂದಾಗ ಅಲ್ಲಿರುವ ನೌಕರರನ್ನು ಗುರುತು ಹಿಡಿಯಲಿಲ್ಲ. ಆಗ ಸಚಿವರು ತಮ್ಮ ರೀತಿಯಲ್ಲಿ ಮಾತನಾಡಿದ ವೇಳೆ ನೌಕರರು ಅವರ ಗುರುತು ಹಿಡಿದರು.

    ಅಧಿಕಾರಿ ಸಸ್ಪೆಂಡ್: ಇದೇ ವೇಳೆ ಕೆಲಸದ ಸಮಯದಲ್ಲಿ ಸೂಕ್ತ ಕಾರಣವಿಲ್ಲದೇ ಗೈರುಹಾಜರಾಗಿದ್ದ ಕಾರ್ಮಿಕ ಇಲಾಖೆಯ ಇನ್ಸ್ ಪೆಕ್ಟರ್ ನಾಗರಾಜಯ್ಯ ರನ್ನು ಅಮಾನತು ಮಾಡುವಂತೆ ಸಚಿವರು ಆಯುಕ್ತೆಗೆ ಆದೇಶ ನೀಡಿದರು. ಬಳಿಕ ಕಚೇರಿ ಸಮಯದಲ್ಲಿ ಆಫೀಸ್ ಕೆಲಸ ಬಿಟ್ಟು ಬಿಟ್ಟು ಬೇರೆಡೆ ಹೋಗಿದ್ದು ಕುರಿತು ವಿಚಾರಣೆ ನಡೆಸಿದರು. ಬಳಿಕ ಹಾಜರಾತಿ ಇಲ್ಲದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವಂತೆ ಸೂಚನೆ ನೀಡಿದರು.

  • ಸಿಎಂ ನಿವಾಸದ ಮುಂದೆ ಜಮಾಯಿಸಿದ 50ಕ್ಕೂ ಹೆಚ್ಚು ರೈತರು!

    ಸಿಎಂ ನಿವಾಸದ ಮುಂದೆ ಜಮಾಯಿಸಿದ 50ಕ್ಕೂ ಹೆಚ್ಚು ರೈತರು!

    ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಭೇಟಿಗೆ ಮೈಸೂರು ಜಿಲ್ಲೆಯ ಸುಮಾರು 50ಕ್ಕೂ ಹೆಚ್ಚು ರೈತರು ಬಂದಿದ್ದಾರೆ.

    ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ರೈತರು ಬಂದಿದ್ದಾರೆ. ರೈತರು 2002-2003 ರಲ್ಲಿ ರೈತರು ಸಾಲ ಹೆಚ್ಚು ಮಾಡಿದ್ದಾರೆ. 2002 ರಿಂದ ಸಾಲ ಮನ್ನಾ ಮಾಡಬೇಕು ಎಂದು ಮನವಿ ಮಾಡಿದ್ದರು. ಆದರೂ ಇದುವರೆಗೂ ಸಾಲ ಮನ್ನಾ ಮಾಡಿಲ್ಲವಾದ್ದರಿಂದ ಮನವಿ ಮಾಡಲು ಮೈಸೂರು ಜಿಲ್ಲೆ ರೈತರು ಬಂದಿದ್ದರು.

    ಸಿಎಂ ಭೇಟಿ ಮಾಡಲು ಬಿಡಿ, ಸಾಲ ಮನ್ನ ವಿಚಾರವಾಗಿ ಮಾತನಾಡಬೇಕು. ಮನವಿ ಪತ್ರ ನೀಡಲು ಬಂದಿದ್ದೇವೆ ಎಂದು ಅಧಿಕಾರಿಗಳಿಗೆ ರೈತರು ಒತ್ತಾಯ ಮಾಡುತ್ತಿದ್ದರು. ಆದರೆ ಅಧಿಕಾರಿಗಳು ರೈತರ ಮನವೊಲಿಸುವ ಯತ್ನ ಮಾಡಿದ್ದರು. ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲೇಬೇಕು ಎಂದು ರೈತರು ಪಟ್ಟು ಹಿಡಿದಿದ್ದು, ಲಾಠಿ ಚಾರ್ಜ್ ಮಾಡಿ ಬೇಕಿದ್ದರೆ, ನಾವು ಸಿಎಂ ಭೇಟಿ ಮಾಡಲೇಬೇಕು ಎಂದು ರೈತರು ಆಗ್ರಹಿಸಿದ್ದರು.

    ಅಧಿಕಾರಿಗಳು ಕೊನೆಗೆ ರೈತರ ಆಗ್ರಹಕ್ಕೆ ಮಣಿದು ಕೆಲ ರೈತರನ್ನು ಸಿಎಂ ಕುಮಾರಸ್ವಾಮಿ ಭೇಟಿಗೆ ಮನೆಯೊಳಗೆ ಕಳುಹಿಸಿದ್ದಾರೆ.

  • ಸಿಂಗಾಪುರದಲ್ಲೇ ಟ್ರಂಪ್-ಕಿಮ್ ಭೇಟಿಯಾಗಿದ್ದು ಯಾಕೆ?

    ಸಿಂಗಾಪುರದಲ್ಲೇ ಟ್ರಂಪ್-ಕಿಮ್ ಭೇಟಿಯಾಗಿದ್ದು ಯಾಕೆ?

    ಸಿಂಗಾಪುರ: ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿಂಗಾಪುರದಲ್ಲಿ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದು, ಆದರೆ ಎರಡು ದೇಶಗಳ ಗಣ್ಯರ ಭೇಟಿಗೆ ಸಿಂಗಾಪುರ ಆಯ್ಕೆ ಆಗಿದ್ದು ಮಾತ್ರ ಮಹತ್ವದಾಗಿದೆ.

    ಸತತ 7 ದಶಕಗಳ ಬಳಿಕ ಅಮೆರಿಕ ಹಾಗೂ ಉತ್ತರ ಕೊರಿಯಾ ನಡುವೆ ಮಾತುಕತೆ ನಡೆದಿದ್ದು, ವಿಶ್ವದ ಗಮನವನ್ನು ಸೆಳೆದಿದೆ. ಆದರೆ ಎರಡು ದೇಶಗಳ ನಾಯಕರ ಭೇಟಿಗೆ ಈ ಹಿಂದೆ ಹಲವು ರಾಷ್ಟ್ರಗಳ ಹೆಸರುಗಳು ಕೇಳಿ ಬಂದಿತ್ತು. ಅಂತಿಮವಾಗಿ ಐತಿಹಾಸಿಕ ಘಟನೆಗೆ ಸಿಂಗಾಪುರ ಸಾಕ್ಷಿಯಾಗಿದೆ.

    ಈ ಮೊದಲು ದಕ್ಷಿಣ ಕೊರಿಯಾದ ಮಿಲಿಟರಿ ಚಟುವಟಿಕೆ ನಿಷೇಧಿತ ಪ್ರದೇಶವನ್ನು (Korean Demilitarized Zone) ನಾಯಕರ ಸೂಕ್ತ ಭದ್ರತೆಯ ಸ್ಥಳವಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಬಳಿಕ ಈ ಪಟ್ಟಿಯಲ್ಲಿ ಸ್ವೀಡನ್, ಮಂಗೋಲಿಯಾ, ಜಿನೀವಾ ಹೆಸರು ಕೇಳಿ ಬಂದಿತ್ತು. ಆದರೆ ಅಂತಿಮವಾಗಿ ಪಟ್ಟಿಯಲ್ಲಿ ಇಲ್ಲದ ಸಿಂಗಾಪುರ ಕಾರ್ಯಕ್ರಮದ ಜವಾಬ್ದಾರಿ ಪಡೆಯಿತು.

    ಸಿಂಗಾಪುರವೇ ಯಾಕೆ?
    ಸಿಂಗಾಪುರ ಭೇಟಿಯ ಹಿಂದೆ ಹಲವು ರಾಜತಾಂತ್ರಿಕ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಲಾಗಿದ್ದು, ವಿಶ್ವದ ಅತ್ಯಂತ ಸುರಕ್ಷಿತಾ ಸ್ಥಳ ಎಂಬ ಕಾರಣಕ್ಕೆ ಆಯ್ಕೆ ಮಾಡಲಾಗಿತ್ತು. ಸಿಂಗಾಪುರ ಕೊರಿಯಾದೊಂದಿಗೆ ಕಳೆದ 4 ದಶಕಗಳಿಂದ ಉತ್ತಮ ರಾಜತಾಂತ್ರಿಕ ಸಂಬಂಧವನ್ನು ಹೊಂದಿದೆ. ಅಲ್ಲದೇ ಅಮೆರಿಕದೊಂದಿಗೆ ಉತ್ತಮ ವ್ಯಾಪಾರಿ ಸಂಬಂಧವನ್ನು ಹೊಂದಿದ್ದು, ತಜ್ಞರ ಅಭಿಪ್ರಾಯದ ಮೇಲೆ ನಿರ್ಧಾರ ಕೈಗೊಳ್ಳಲಾಗಿದೆ.

    ಇದೇ ಮೊದಲಲ್ಲ: ಸಿಂಗಾಪುರ ಭಾರತ ಹಾಗೂ ಚೀನಾ ನಡುವಿನ ಶಾಂಘಿಲಾ ಸಭೆಯನ್ನು ಸಹ ಯಶಸ್ವಿಯಾಗಿ ಆಯೋಜಿಸಿತ್ತು. ಅಲ್ಲದೇ 2015 ರಲ್ಲಿ ಚೀನಾ ಬದ್ಧ ವೈರಿ ತೈವಾನ್ ಅಧ್ಯಕ್ಷ ಹಾಗೂ ಕ್ಸಿ ಜಿನ್ ಪಿಂಗ್ ರ ದ್ವಿಪಕ್ಷೀಯ ಸಭೆಯನ್ನು ಏರ್ಪಡಿಸಿತ್ತು.

    ಬದ್ಧ ವೈರಿಗಳಾಗಿ ಗುರುತಿಸಿಕೊಂಡಿದ್ದ ಎರಡು ರಾಷ್ಟ್ರಗಳ ನಾಯಕರ ಭೇಟಿ ಹಲವು ರಾಷ್ಟ್ರಗಳ ಗಮನಸೆಳೆದಿದೆ. ಸದ್ಯ ಸಿಂಗಾಪುರದ ಐತಿಹಾಸಿಕ ಸಭೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಿಮ್ ಜಾಂಗ್ ಉನ್ ನಮ್ಮ ಇಂದಿನ ಭೇಟಿ ಅಷ್ಟು ಸುಲಭದ ಮಾತಲ್ಲ, ಈ ಹಿಂದಿನ ಹಳೆಯ ಅಡೆತಡೆಗಳನ್ನು ಮೀರಿ ಬಂದಿದ್ದಾಗಿ ಹೇಳಿದ್ದಾರೆ.

    ಇಬ್ಬರ ಮಾತುಕತೆಯ ವೇಳೆ ಅಣ್ವಸ್ತ್ರ ಯೋಜನೆಯ ಹಾಗೂ ಪರಸ್ಪರ ಸಹಕಾರ, ಆರ್ಥಿಕ ಬಂಧನ ಕುರಿತು ಮಹತ್ವದ ಚರ್ಚೆ ನಡೆದಿದೆ ಎನ್ನಲಾಗಿದ್ದು, ನಾಲ್ಕು ಮಹತ್ವದ ದಾಖಲೆಗಳಿಗೆ ಸಹಿ ಹಾಕಿದ್ದಾರೆ. ಇದರಲ್ಲಿ ಕಿಮ್ ಮಹತ್ವದ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಕುರಿತ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದ್ದು ಅಧಿಕೃತ ಮಾಹಿತಿ ಲಭಿಸಬೇಕಿದೆ.