Tag: ಭೂ ಸುಧಾರಣಾ ಕಾಯ್ದೆ

  • ರಾಜ್ಯ ಬಂದ್‍ಗೆ ರಾಯಚೂರಿನಲ್ಲಿ ಸಂಪೂರ್ಣ ಬೆಂಬಲ- ಬಿಸಿಲನಾಡು ಸ್ತಬ್ಧ

    ರಾಜ್ಯ ಬಂದ್‍ಗೆ ರಾಯಚೂರಿನಲ್ಲಿ ಸಂಪೂರ್ಣ ಬೆಂಬಲ- ಬಿಸಿಲನಾಡು ಸ್ತಬ್ಧ

    ರಾಯಚೂರು: ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆಗೆ ವಿರೋಧಿಸಿ ರೈತ, ಕಾರ್ಮಿಕ ಸಂಘಟನೆಗಳಿಂದ ಕರೆ ನೀಡಲಾದ ಕರ್ನಾಟಕ ಬಂದ್‍ಗೆ ರಾಯಚೂರಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಅಂಗಡಿ ಮುಗ್ಗಟ್ಟು, ತರಕಾರಿ ಮಾರಾಟ, ಹೋಟೆಲ್ ವ್ಯಾಪಾರ, ಸಾರಿಗೆ ಬಸ್ ಸಂಚಾರ, ಎಂಪಿಎಂಸಿ ಎಲ್ಲವೂ ಸ್ಥಬ್ಧವಾಗಿತ್ತು. ರೈತ ಹೋರಾಟಕ್ಕೆ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಸಾಥ್ ನೀಡಿದರು.

    ನಗರದ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾಯ್ದೆ ಹಿಂಪಡೆಯಲು ಆಗ್ರಹಿಸಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆ ಕಾರ್ಯಕರ್ತರು, ಕಾಂಗ್ರೆಸ್, ಜೆಡಿ ಎಸ್ ಮುಖಂಡರು ಭಾಗವಹಿಸಿ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

    ರಾಯಚೂರು ನಗರ ಮಾತ್ರವಲ್ಲದೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರದಲ್ಲೂ ಬಂದ್ ಜೋರಾಗಿತ್ತು. ಪ್ರತಿಭಟನಾ ಮೆರವಣಿಗೆ ಹಾಗೂ ನಿರಂತರ ಹೋರಾಟಗಳು ನಡೆದವು. ಕೇಂದ್ರ ಸರ್ಕಾರ ರೈತನಿಗೆ ಅನ್ನದಾತ ಅಂತ ಹೇಳುತ್ತಲೇ ಬೆನ್ನಿಗೆ ಚೂರಿ ಹಾಕುತ್ತಿದೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಾದ್ಯಂತ ಬಂದ್ ಯಶಸ್ವಿಯಾಗಿದ್ದು ಎಲ್ಲೂ ಅಹಿತಕರ ಘಟನೆ ನಡೆಯದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲಾಯಿತು.

  • ಗದ್ದಲದ ನಡ್ವೆ ಕೃಷಿ ಮಸೂದೆಗಳು ವಿಧಾನಸಭೆಯಲ್ಲಿ ಪಾಸ್

    ಗದ್ದಲದ ನಡ್ವೆ ಕೃಷಿ ಮಸೂದೆಗಳು ವಿಧಾನಸಭೆಯಲ್ಲಿ ಪಾಸ್

    -ವಿಧೇಯಕದ ಪ್ರತಿ ಹರಿದು ಸಿದ್ದರಾಮಯ್ಯ ಆಕ್ರೋಶ
    -ರಾಜ್ಯ ಸರ್ಕಾರಕ್ಕೆ ರೈತರಿಂದ ಹಿಡಿ ಶಾಪ

    ಬೆಂಗಳೂರು: ವಾರದ ಹಿಂದೆ ಕೃಷಿ ಬಿಲ್ ಬಿಲ್ ವಿರೋಧಿಸಿ ರಾಜ್ಯಸಭೆಯಲ್ಲಿ ವಿಪಕ್ಷ ಸದಸ್ಯರು ಮಸೂದೆ ಪ್ರತಿ ಹರಿದು ಆಕ್ರೋಶ ಹೊರ ಹಾಕಿದ್ದರು. ಇದೀಗ ವಿಧಾನಸಭೆಯಲ್ಲೂ ಇದೇ ರೀತಿಯ ಘಟನೆ ಮರುಕಳಿಸಿದೆ. ವಿಪಕ್ಷ ಸದಸ್ಯರು ಭೂ ಸೂಧಾರಣಾ ತಿದ್ದುಪಡಿ ವಿಧೇಯಕದ ಪ್ರತಿಗಳು ಹರಿದು ಹಾಕಿದರು. ವಿಪಕ್ಷಗಳ ಗದ್ದಲ ಗಲಾಟೆ, ರೈತರ ಪ್ರತಿಭಟನೆಗಳ ನಡುವೆ ಅಧಿವೇಶನದ ಕೊನೆಯ ದಿನವಾದ ಇಂದು ಭೂಸುಧಾರಣಾ ತಿದ್ದುಪಡಿ ವಿಧೇಯಕ ಮತ್ತು ಎಪಿಎಂಸಿ ಬಿಲ್‍ಗಳಿಗೆ ವಿಧಾನಸಭೆಯ ಒಪ್ಪಿಗೆಯನ್ನು ಸರ್ಕಾರ ಪಡೆದುಕೊಂಡಿದೆ.

    ಇದಕ್ಕೂ ಮುನ್ನ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾರ್ಪೋರೇಟ್ ಕಂಪನಿಗಳ ಲಾಬಿಗೆ ಮಣಿದಿರೋ ಸರ್ಕಾರ ಇದನ್ನು ಜಾರಿಗೆ ತರಲು ಮುಂದಾಗುತ್ತಿದೆ. ಇದನ್ನು ಒಪ್ಪಲು ಸಾಧ್ಯವೇ ಇಲ್ಲ. ಇದರಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆಪಾದಿಸಿದರು. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಈ ಕಾಯ್ದೆಯನ್ನ ತಂದರೆ 1964ರ ಹಿಂದಕ್ಕೆ ಹೋಗ್ತೇವೆ. ಇಲ್ಲಿಯವರೆಗೆ ಉಳುವವನೇ ಭೂ ಒಡೆಯ ಅನ್ನುವಂತಿತ್ತು. ಆದರೆ ಈಗ ಅದು ಉಲ್ಟಾ ಆಗಲಿದೆ. ಎಪಿಎಂಸಿಗಳು ಮುಚ್ಚಬಹುದಾದ ಆತಂಕವಿದೆ ಅಂತಾ ಆಕ್ಷೇಪ ವ್ಯಕ್ತಪಡಿಸಿದರು.

    ವಿಪಕ್ಷಗಳಿಗೆ ಸ್ಪಷ್ಟನೆ ಕೊಟ್ಟ ಸಿಎಂ ಬಿ.ಎಸ್.ಯಡಿಯೂರಪ್ಪ, ಸಣ್ಣ ಹಿಡುವಳಿದಾರರ ಹಿತ ಕಾಯಲು ಸರ್ಕಾರ ಬದ್ಧ. ಯಾವುದೇ ಆತಂಕ ನಿಮಗೆ ಬೇಡ ಎಂದರು. ಸಚಿವ ಅಶೋಕ್ ಮಾತನಾಡಿ, ಈ ತಿದ್ದುಪಡಿ ಕಾಯ್ದೆ ತಂದಿದ್ದು ನಾವಲ್ಲ. 2004ರಲ್ಲಿ ಕಂದಾಯ ಸಚಿವರಾಗಿದ್ದವರು ಅಂದ್ರು. ಇನ್ನು ರೈತರನ್ನು ಕೇಳಿ ಎಪಿಎಂಸಿ ಬಿಲ್ ತಂದ್ರಾ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಕೌಂಟರ್ ಕೊಟ್ಟ ಸಚಿವ ಸಿಟಿ ರವಿ, ಲೋಕಸಭೆ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ಪ್ರಸ್ತಾಪಿಸಿದ್ದನ್ನು ಎತ್ತಿ ತೋರಿಸಿದರಿ. ಈ ವೇಳೆ ಭಾರೀ ಗದ್ದಲ ನಡೀತು.

    ಸಿದ್ದರಾಮಯ್ಯನವರು ಸೇರಿ ಹಲವರು ವಿಧೇಯಕ ಪ್ರತಿ ಹರಿದು ಹಾಕಿ, ಸಭಾತ್ಯಾಗ ಮಾಡಿದರು. ಇದರ ಮಧ್ಯೆಯೇ ಧ್ವನಿಮತದ ಮೂಲಕ ಮಸೂದೆಗಳಿಗೆ ಸರ್ಕಾರ ಅಂಗೀಕಾರ ಪಡೆಯಿತು. ಪರಿಷತ್‍ನಲ್ಲಿಯೂ ಭೂಸುಧಾರಣೆ ಬಿಲ್‍ಗೆ ಸರ್ಕಾರ ಒಪ್ಪಿಗೆ ಪಡೆದಿದೆ. ಎಪಿಎಂಸಿ ಬಿಲ್ ಮೇಲೆ ಚರ್ಚೆ ನಡೆಯುತ್ತಿದೆ.

  • ಸೋಮವಾರ ಕೊಡಗು ಬಂದ್‍ಗೆ ನಿರ್ಧಾರ

    ಸೋಮವಾರ ಕೊಡಗು ಬಂದ್‍ಗೆ ನಿರ್ಧಾರ

    ಮಡಿಕೇರಿ: ಕೇಂದ್ರ ಸರ್ಕಾರದ ಭೂ ಸುಧಾರಣಾ ಹಾಗೂ ಎಪಿಎಂಸಿ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳನ್ನು ವಿರೋಧಿಸಿ ರೈತ ಹಾಗೂ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್ ಯಶಸ್ವಿಗೆ ಕೊಡಗಿನಲ್ಲಿ ಹಲವು ಸಂಘಟನೆಗಳು ಕೈ ಜೋಡಿಸಿವೆ.

    ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿ ಸೇರಿದ ರೈತ ಸಂಘಟನೆ, ದಲಿತ ಸಂಘಟನೆ, ಎಸ್‍ಡಿಪಿಐ, ಭಾರತೀಯ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಕಾರ್ಮಿಕ ಸಂಘಟನೆ, ಕಮ್ಯುನಿಸ್ಟ್ ಹಾಗೂ ಮಾರ್ಕ್‍ವಾದಿ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಸೋಮವಾರ ಕೊಡಗು ಜಿಲ್ಲಾ ಬಂದ್ ಬಗ್ಗೆ ಸಮಾಲೋಚನೆ ನಡೆಸಿದರು.

    ಬಳಿಕ ಸೆಪ್ಟೆಂಬರ್ 28 ರ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಕೊಡಗಿನ ಗಡಿ ಭಾಗ ಸಂಪಾಜೆ ಕುಶಾಲನಗರ ಹಾಗೂ ಮಡಿಕೇರಿ ಪಟ್ಟಣದಲ್ಲಿ ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡುವುದು. ಕಾಯ್ದೆಗಳನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಷೋಷಣೆ ಕೂಗುವುದಕ್ಕೆ ಒಮ್ಮತದಿಂದ ನಿರ್ಧಾರವನ್ನು ಕೈಗೊಂಡರು.

    ಕೇಂದ್ರ ಸರ್ಕಾರ ರೈತರು, ಕಾರ್ಮಿಕರು ಹಾಗೂ ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆ ಜಾರಿಗೆ ತಂದಿರುವ ಕಾಯ್ದೆಗಳು ಮರಣ ಶಾಸನವನ್ನು ಬರೆದಂತಿವೆ. ಕಾಯ್ದೆಗಳನ್ನು ಜಾರಿಗೆ ತಂದು ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳಿಗೆ ಮಣೆ ಹಾಕುತ್ತಿದೆ. ಸ್ಥಳೀಯ ಶಾಸಕರು ಹಿಂದೆ ಭೂಮಿ ಮಾರಾಟ ಮಾಡಬೇಡಿ ಎನ್ನುತ್ತಿದ್ದರು ಇದೀಗ ಭೂಮಿ ಮಾರಾಟ ಮಾಡುವಂತೆ ಹೇಳುತ್ತಿದ್ದಾರೆ ಎಂದು ಇದೇ ಸಂದರ್ಭ ಆರೋಪಿಸಿದರು.