Tag: ಭೂ ವಿಜ್ಞಾನ ಸಂಶೋಧನ ಇಲಾಖೆ

  • ಸಮುದ್ರಯಾನದತ್ತ ಭಾರತದ ಚಿತ್ತ – 6,000 ಮೀಟರ್‌ ಮಾನವ ಸಹಿತ ಜಲಾಂತರ್ಗಾಮಿ ಕಳುಹಿಸಲು ಸಿದ್ಧತೆ

    ಸಮುದ್ರಯಾನದತ್ತ ಭಾರತದ ಚಿತ್ತ – 6,000 ಮೀಟರ್‌ ಮಾನವ ಸಹಿತ ಜಲಾಂತರ್ಗಾಮಿ ಕಳುಹಿಸಲು ಸಿದ್ಧತೆ

    ನವದೆಹಲಿ: ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲೇ ಸೂರ್ಯನ ಅನ್ವೇಷಣೆಗೆ ಆದಿತ್ಯ ಎಲ್‌-1 ನೌಕೆಯನ್ನ ಕಳುಹಿಸಿರುವ ಭಾರತ ಇದೀಗ ಸಮುದ್ರಯಾನದತ್ತ (Project Samudrayaan) ಚಿತ್ತ ಹರಿಸಿದೆ.

    ಭಾರತೀಯ ವಿಜ್ಞಾನಿಗಳ (Indian Scientists) ಮಹತ್ವಾಕಾಂಕ್ಷಿ ಸಮುದ್ರಯಾನ ಯೋಜನೆ ಆರಂಭಕ್ಕೆ ಸಿದ್ಧತೆ ಶುರುವಾಗಿದೆ. ಬರೋಬ್ಬರಿ 6 ಸಾವಿರ ಮೀಟರ್ ಸಮುದ್ರದ ಆಳಕ್ಕೆ ಮೂವರು ಸಂಶೋಧಕರನ್ನ ಕಳಿಸಲು ಸಿದ್ಧತೆ ನಡೆಯುತ್ತಿದೆ. ಇದಕ್ಕಾಗಿ ದೇಶೀಯ ನಿರ್ಮಿತ ಜಲಾಂತರ್ಗಾಮಿ ನೌಕೆ ಸಿದ್ಧವಾಗಿದೆ. ಸಮುದ್ರದ ಆಳದಲ್ಲಿ ಇರಬಹುದಾದ ಬೆಲೆ ಬಾಳುವ ಲೋಹಗಳಾದ ನಿಕ್ಕಲ್, ಮ್ಯಾಂಗನೀಸ್, ಕೋಬಾಲ್ಟ್‌ ಲೋಹಗಳ ನಿಕ್ಷೇಪ ಪತ್ತೆ ಹಚ್ಚಲು ಈ ಯೋಜನೆ ಸಹಕಾರಿಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

    ತಜ್ಞರನ್ನು ಸಮುದ್ರದ ಆಳಕ್ಕೆ ಕರೆದೊಯ್ಯುವ ಜಲಾಂತರ್ಗಾಮಿ ನೌಕೆಗೆ ಮತ್ಸ್ಯ (Matsya 6000)ಎಂದು ಹೆಸರಿಡಲಾಗಿದೆ. ಕಳೆದ ಎರಡು ವರ್ಷಗಳಿಂದ ಈ ನೌಕೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಚೆನ್ನೈ ಸಮೀಪದ ಸಾಗರ ತೀರದಲ್ಲಿ ಬಂಗಾಳ ಕೊಲ್ಲಿಯಲ್ಲಿ ಈ ಜಲಾಂತರ್ಗಾಮಿ ನೌಕೆಯ ಮೊದಲ ಸಮುದ್ರ ಪರೀಕ್ಷೆ ನಡೆಯಲಿದ್ದು, 2024ರ ಆರಂಭದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ. ಇದನ್ನೂ ಓದಿ: ಏನಿದು ಭಾರತದ ಸಮುದ್ರಯಾನ್‌ ಯೋಜನೆ? ಏನು ಸಂಶೋಧನೆ ಮಾಡಲಿದೆ?

    ಈ ಕುರಿತು ಮಾಹಿತಿ ನೀಡಿರುವ ಕೇಂದ್ರದ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರವಿಚಂದ್ರನ್, ಆಳ ಸಮುದ್ರ ಯೋಜನೆ ಅಡಿಯಲ್ಲಿ ಸಮುದ್ರಯಾನ ಕಾರ್ಯಕ್ರಮ ರೂಪಿಸಲಾಗಿದೆ. 2024ರ ಮೊದಲ ತ್ರೈಮಾಸಿಕದಲ್ಲಿ ಈ ನೌಕೆಯನ್ನು ಸಮುದ್ರದ 500 ಮೀಟರ್ ಆಳಕ್ಕೆ ಇಳಿಸಿ ಮೊದಲ ಪರೀಕ್ಷಾರ್ಥ ಪ್ರಯೋಗ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. ಈ ಯೋಜನೆ 2026ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಿದ್ದಾರೆ.

    ಎನ್‌ಐಒಟಿ ನಿರ್ದೇಶಕ ಜಿ.ಎ ರಾಮದಾಸ್‌, 2.1 ಮೀಟರ್‌ ವ್ಯಾಸದ ಗೋಳಾಕಾರದಲ್ಲಿ ಈ ಜಲಾಂತರ್ಗಾಮಿಯನ್ನ ವಿನ್ಯಾಸಗೊಳಿಸಲಾಗಿದೆ. 6 ಸಾವಿರ ಮೀಟರ್‌ ಆಳಕ್ಕೆ ಕಳುಹಿಸಬೇಕಿರುವುದರಿಂದ 600 ಬಾರ್‌ ಒತ್ತಡ (ಸಮುದ್ರಮಟ್ಟದ ಒತ್ತಡಕ್ಕಿಂತ 600 ಪಟ್ಟು ಹೆಚ್ಚು) ತಡೆದುಕೊಳ್ಳುವ ಸಾಮರ್ಥ್ಯಕ್ಕೆ ತಕ್ಕಂತೆ ಜಲಾಂತರ್ಗಾಮಿಯನ್ನ ಸಿದ್ಧಪಡಿಸಲಾಗಿದೆ. 12 ರಿಂದ 16 ಗಂಟೆಗಳ ಕಾಲ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. 96 ಗಂಟೆಗಳ ಕಾಲ ಆಕ್ಸಿಜನ್‌ ಇದರಲ್ಲಿ ಲಭ್ಯವಿರಲಿದೆ ಎಂದು ಮಾಹಿತಿ ನೀಡಿದ್ದಾರೆ.

    ಈವರೆಗೆ ಅಮೆರಿಕ, ರಷ್ಯಾ, ಜಪಾನ್, ಫ್ರಾನ್ಸ್‌ ಹಾಗೂ ಚೀನಾ ದೇಶಗಳು ಮಾತ್ರ ಈ ಮಾದರಿಯ ಮಾನವ ಸಹಿತ ಜಲಾಂತರ್ಗಾಮಿ ನೌಕೆಗಳನ್ನು ಅಭಿವೃದ್ಧಿಪಡಿಸಿವೆ. ಈ ನೌಕೆ ಮೂಲಕ ಅಮೂಲ್ಯ ಲೋಹಗಳಾದ ನಿಕ್ಕಲ್, ಕೋಬಾಲ್ಟ್, ಮ್ಯಾಂಗನೀಸ್, ಹೈಡ್ರೋಥರ್ಮಲ್ ಸಲ್ಫೈಡ್ಸ್‌ ಹಾಗೂ ಗ್ಯಾಸ್ ಹೈಡ್ರೇಟ್ಸ್‌ಗಳನ್ನು ಪತ್ತೆ ಹಚ್ಚಲು ತೀರ್ಮಾನಿಸಲಾಗಿದೆ. ಇದನ್ನೂ ಓದಿ: ಗಗನಯಾತ್ರಿಗಳ ಆರೋಗ್ಯದ ಮೇಲೆ ಬಾಹ್ಯಾಕಾಶ ಪ್ರಯಾಣದ ಪರಿಣಾಮಗಳೇನು? – ಪರಿಹಾರವೇನು? 

    ಕೆಲ ದಿನಗಳ ಹಿಂದೆಯಷ್ಟೇ ಟೈಟಾನಿಕ್‌ ಅವಶೇಷಗಳನ್ನು ತೊರಳು ತೆರಳಿದ್ದ ಜಲಾಂತರ್ಗಾಮಿ ಅಟ್ಲಾಂಟಿಕ್ ಸಾಗರದಲ್ಲಿ ಸ್ಫೋಟಗೊಂಡಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏನಿದು ಭಾರತದ ಸಮುದ್ರಯಾನ್‌ ಯೋಜನೆ? ಏನು ಸಂಶೋಧನೆ ಮಾಡಲಿದೆ?

    ಏನಿದು ಭಾರತದ ಸಮುದ್ರಯಾನ್‌ ಯೋಜನೆ? ಏನು ಸಂಶೋಧನೆ ಮಾಡಲಿದೆ?

    ಳವಾದ ಸಮುದ್ರದ (Sea) ಅಧ್ಯಯನಕ್ಕಾಗಿ ಪ್ರಪಂಚದ ಎಲ್ಲಾ ದೇಶಗಳು ಒಂದಲ್ಲ ಒಂದು ರೀತಿಯ ಸಂಶೋಧನೆಯಲ್ಲಿ ತೊಡಗಿವೆ. ಇಂತಹ ಅಧ್ಯಯನಕ್ಕೆ ಮಾನವ ಮತ್ತು ಮಾನವರಹಿತ ಸಬ್‌ಮರ್ಸಿಬಲ್‌ಗಳನ್ನು ಬಳಸಲಾಗುತ್ತದೆ. ಇದೇ ರೀತಿಯ ಸಂಶೋಧನೆಯ ಭಾಗವಾಗಿ ಭಾರತ (India) ಸಮುದ್ರಯಾನ್ (Samudrayaan) ಎಂಬ ಯೋಜನೆಯನ್ನು ಕೈಗೊಂಡಿದೆ.

    ಸಮುದ್ರದ ಆಳದಲ್ಲಿ ಇರುವ ಅಪಾರ ಪ್ರಮಾಣದ ಮ್ಯಾಂಗನೀಸ್, ಕೋಬಾಲ್ಟ್, ತಾಮ್ರ ಮತ್ತು ಕಬ್ಬಿಣ ಹಾಗೂ ಪೆಟ್ರೋಲಿಯಂ ನಿಕ್ಷೇಪಗಳನ್ನು ಪತ್ತೆ ಹಚ್ಚಲು ಈ ಮೂಲಕ ಭಾರತ ಮುಂದಾಗಿದೆ. ಭೂ ವಿಜ್ಞಾನ ಸಂಶೋಧನ ಇಲಾಖೆ ಈ ಕಾರ್ಯದಲ್ಲಿ ತೊಡಗಿದೆ. ಇದು ಭಾರತದ ಮೊದಲ ಮಾನವಸಹಿತ ಆಳ ಸಮುದ್ರದ ಅನ್ವೇಷಣೆಯ ಪ್ರಯತ್ನವಾಗಿದೆ. ಇದರಲ್ಲಿ ಮೂವರು ಸದಸ್ಯರ ತಂಡವನ್ನು ಕಳಿಸಲು ಯೋಜಿಸಲಾಗಿದೆ.

    ಯೋಜನೆಯ ಭಾಗವಾಗಿ ಮತ್ಸ್ಯಾ 6000 (Matsya 6000) ಎಂಬ ಸಬ್‌ಮರ್ಸಿಬಲ್‌ನ್ನು ಚೆನ್ನೈನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ ವಿನ್ಯಾಸಗೊಳಿಸಿ, ತಯಾರಿಸಿದೆ. ಈ ಸಬ್‌ಮರ್ಸಿಬಲ್ 6000 ಮೀಟರ್ ಆಳ ಸಮುದ್ರದಲ್ಲಿ 12 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಅಲ್ಲದೇ ತುರ್ತು ಸಂದರ್ಭಗಳಲ್ಲಿ ಇದು ಮಾನವ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಕ್ರಮಗಳೊಂದಿಗೆ 96 ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತದೆ. ಈ ಮಿಷನ್ 2026ರ ವೇಳೆಗೆ ಕಾರ್ಯಗತಗೊಳ್ಳುವ ನಿರೀಕ್ಷೆಯಿದೆ. ಸಮುದ್ರಯಾನ ಯೋಜನೆಯನ್ನು ಒಳಗೊಂಡಿರುವ ಆಳ ಸಮುದ್ರದ ಮಿಷನ್‌ನ ವೆಚ್ಚವನ್ನು ಐದು ವರ್ಷಗಳ ಅವಧಿಯಲ್ಲಿ 4,077 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದನ್ನು ಹಲವು ಹಂತಗಳಲ್ಲಿ ಕಾರ್ಯಗತಗೊಳಿಸಲು ನಿರ್ಧರಿಸಲಾಗಿದೆ.

    ಭಾರತವು 850,000 ಚದರ ಮೈಲುಗಳಷ್ಟು ವಿಶೇಷ ಆರ್ಥಿಕ ವಲಯವನ್ನು ಹೊಂದಿದೆ. ಅದರ ಬಳಕೆಯ ಪ್ರಮಾಣ ಕಡಿಮೆಯಾಗಿದ್ದು ಅಭಿವೃದ್ದಿಯಾಗದೆ ಉಳಿದಿದೆ. ಇಲ್ಲಿನ 10% ಸಂಪನ್ಮೂಲ 100 ವರ್ಷಗಳವರೆಗೆ ಭಾರತಕ್ಕೆ ಇಂಧನವನ್ನು ಪೂರೈಸಲಿದೆ ಎಂದು ಅಂದಾಜಿಸಲಾಗಿದೆ.

    1980 ರಲ್ಲಿ ಮೊದಲ ಸಂಶೋಧನಾ ನೌಕೆ ಅರಬ್ಬಿ ಸಮುದ್ರದಲ್ಲಿ ಖನಿಜ ನಿಕ್ಷೇಪಗಳ ಹುಡುಕಾಟ ಆರಂಭಿಸಿತ್ತು. ಬಳಿಕ 1982 ರಲ್ಲಿ ವಿಶ್ವಸಂಸ್ಥೆ ಸಮುದ್ರ ಕಾನೂನಿನಡಿಯಲ್ಲಿ ಸಮುದ್ರ ಅನ್ವೇಷಣೆಗಾಗಿ ಮಧ್ಯ ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಸುಮಾರು 1.5 ಲಕ್ಷ ಚದರ ಕಿ.ಮೀ ಪ್ರದೇಶವನ್ನು ಪಡೆದುಕೊಂಡಿತು. ಈ ಮೂಲಕ ಆ ಸಮಯದಲ್ಲಿ ಮಧ್ಯ ಹಿಂದೂ ಮಹಾಸಾಗರದ ಜಲಾನಯನ ಪ್ರದೇಶದಲ್ಲಿ ಆಳ ಸಮುದ್ರದ ಖನಿಜ ಸಂಶೋಧನೆ ಬೆಂಬಲಿಸಿದ ವಿಶ್ವದ ಮೊದಲ ದೇಶ ಭಾರತವಾಗಿತ್ತು. ಬಳಿಕ ಭಾರತವು 2002 ರಲ್ಲಿ ಐಎಸ್‌ಎ (International Seabed Authority) ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು. ಇದಾದ ನಂತರ ಸಮುದ್ರ ತಳದ ಸಂಪನ್ಮೂಲ ಮೌಲ್ಯಮಾಪನವನ್ನು ಪೂರ್ಣಗೊಳಿಸಲಾಯಿತು.

    ಯೋಜನೆಯು ಕೇಂದ್ರದ ನೀಲಿ ಆರ್ಥಿಕ ನೀತಿಯನ್ನು ಬೆಂಬಲಿಸುವ ದೊಡ್ಡ ಆಳ ಸಾಗರ ವೈವಿಧ್ಯತೆಯ ಸಂಶೋಧನೆ ಮಿಷನ್‌ನ ಭಾಗವಾಗಿರುತ್ತದೆ. ಇದು ಉದ್ಯೋಗಗಳನ್ನು ಸೃಷ್ಟಿಸುವುದರ ಜೊತೆಗೆ ದೇಶದ ಆರ್ಥಿಕ ಬೆಳವಣಿಗೆ ಮತ್ತು ಜೀವನೋಪಾಯಕ್ಕಾಗಿ ಸಮುದ್ರ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಜೊತೆಗೆ ಸಮುದ್ರ ಪರಿಸರದ ವ್ಯವಸ್ಥೆಯ ರಕ್ಷಣೆಯ ಜವಬ್ದಾರಿ ಹೊಂದಿದೆ.

    2021 ರಲ್ಲಿ ಇದರ ಪ್ರಯೋಗ ನಡೆಸಲಾಗಿದ್ದು 600 ಮೀಟರ್ ವರೆಗೂ ಇದು ಸಂಚರಿಸಿ ವಾಪಾಸ್ ಆಗಿದೆ. ಇನ್ನೂ ಹೆಚ್ಚಿನ ಆಳಕ್ಕೆ ಇಳಿಸಲು ಮಿಷನ್‌ನ್ನು ಸಿದ್ಧಪಡಿಸಲಾಗುತ್ತಿದೆ. ಈ ಮಿಷನ್ ಮುಂದಿನ ದಿನಗಳಲ್ಲಿ ಬ್ಲೂ ಎಕನಾಮಿಗೆ ಬಲ ನೀಡುವ ನಿರೀಕ್ಷೆ ಇದೆ.

    ಈ ಕಾರ್ಯಾಚರಣೆಗಾಗಿ ಭಾರತವು ಅಮೆರಿಕ, ರಷ್ಯಾ, ಫ್ರಾನ್ಸ್, ಜಪಾನ್ ಮತ್ತು ಚೀನಾದಂತಹ ದೇಶಗಳಿಂದ ತಜ್ಞರ ಮತ್ತು ತಾಂತ್ರಿಕ ನೆರವು ಪಡೆಯುವ ನಿರೀಕ್ಷೆಯಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]