Tag: ಭೂಮಿ ಪೂಜೆ

  • ಮೋದಿ ಬಗ್ಗೆ ಆತಂಕವಾಗ್ತಿದೆ- ಭೂಮಿ ಪೂಜೆಯಿಂದ ದೂರ ಉಳಿದ ಉಮಾಭಾರತಿ

    ಮೋದಿ ಬಗ್ಗೆ ಆತಂಕವಾಗ್ತಿದೆ- ಭೂಮಿ ಪೂಜೆಯಿಂದ ದೂರ ಉಳಿದ ಉಮಾಭಾರತಿ

    ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ ಶುರುವಾಗಿದ್ದು, ಸಿದ್ಧತೆಗಳು ಕೂಡ ಭರದಿಂದ ಸಾಗುತ್ತಿದೆ. ಆದರೆ ಇತ್ತ ಭೂಮಿ ಪೂಜೆ ಕಾರ್ಯಕ್ರಮದಿಂದ ದೂರ ಉಳಿಯುವುದಾಗಿ ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

    ಹೌದು. ಕೊರೊನಾ ವೈರಸ್ ಭೀತಿಯಿಂದ ಉಮಾ ಭಾರತಿ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ. ಈ ಬಗ್ಗೆ ಈಗಾಗಲೇ ಅತಿಥಿಗಳ ಪಟ್ಟಿಯಿಂದ ತನ್ನ ಹೆಸರು ಹೊರಗಿಡುವಂತೆ ಕಾರ್ಯಕ್ರಮದ ಹಿರಿಯ ಅಧಿಕಾರಿಗಳಿಗೆ ಹಾಗೂ ಪ್ರಧಾನಿ ಕಾರ್ಯಾಲಯಕ್ಕೂ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ಶುಭಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಳ್ಳುತ್ತಿದ್ದು, ಅವರ ಆರೋಗ್ಯದ ಬಗ್ಗೆ ನನಗೆ ಆತಂಕ ಶುರುವಾಗಿದೆ ಎಂದಿದ್ದಾರೆ. ಇದನ್ನೂ ಓದಿ: 800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!

    ಈ ಕುರಿತು ಸರಣಿ ಟ್ವೀಟ್ ಮಾಡಿರುವ ಉಮಾ ಭಾರತಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಸುದ್ದಿ ಕೇಳಿದ ಬಳಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆತಂಕ ಎದುರಾಗಿದೆ. ಅಮಿತ್ ಶಾ ಹಾಗೂ ಬಿಜೆಪಿ ನಾಯಕರಿಗೆ ಕೊರೊನಾ ಪಾಸಿಟಿವ್ ಎಂದು ಸುದ್ದಿ ಕೇಳಿದ ಬಳಿಕ ಭಯ ಶುರುವಾಗಿದೆ. ಅಯೋಧ್ಯೆ ಭೂಮಿ ಪೂಜೆಯಲ್ಲಿ ಭಾಗಿಯಾಗುವವರ ಅದರಲ್ಲೂ ಮೋದಿ ಬಗ್ಗೆ ನನಗೆ ಆತಂಕ ಹೆಚ್ಚಾಗಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಭೂಮಿ ಪೂಜೆಯಂದು ದಯವಿಟ್ಟು ಅಯೋಧ್ಯೆಗೆ ಬರಬೇಡಿ- ಟ್ರಸ್ಟ್ ಮನವಿ

    ಇಂದು ನಾನು ಭೋಪಾಲ್ ನಿಂದ ಹೊರಟು ನಾಳೆ ಸಂಜೆ ಅಯೋಧ್ಯೆ ಸೇರುತ್ತೇನೆ. ಆದರೆ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ. ಯಾಕಂದರೆ ಒಂದು ವೇಳೆ ನಾನು ಈ ಶುಭಕಾರ್ಯದಲ್ಲಿ ಪಾಲ್ಗೊಂಡರೆ ನನಗೂ ಸೋಂಕು ಹರಡಬಹುದು. ಪ್ರಧಾನಿ ಮೋದಿಯವರು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅಹಿತರ ಘಟನೆಗಳು ನಡೆಯಬಾರದು. ಈ ಹಿನ್ನೆಲೆಯಲ್ಲಿ ನಾನು ಮನೆಯಲ್ಲೇ ಕುಳಿತು ಕಾರ್ಯಕ್ರಮ ವೀಕ್ಷಿಸುತ್ತೇನೆ. ಕಾರ್ಯಕ್ರಮ ಮುಗಿಸಿ ಪ್ರಧಾನಿಯವರು ದೆಹಲಿಗೆ ಹೊರಟ ನಂತರ ನಾನು ಅಯೋಧ್ಯೆಗೆ ಹೋಗುತ್ತೇನೆ. ಅಲ್ಲಿಯವರೆಗೆ ಸರಯೂ ನದಿಯ ತಟದಲ್ಲಿ ವಿಹರಿಸುವುದಾಗಿ ಉಮಾ ಭಾರತಿ ಮಾಹಿತಿ ನೀಡಿದ್ದಾರೆ.

  • ರಾಮ ಮಂದಿರ ಶಂಕುಸ್ಥಾಪನೆ- ಭರ್ಜರಿಯಾಗಿ ಅಲಂಕೃತಗೊಂಡಿದೆ ಅಯೋಧ್ಯೆ

    ರಾಮ ಮಂದಿರ ಶಂಕುಸ್ಥಾಪನೆ- ಭರ್ಜರಿಯಾಗಿ ಅಲಂಕೃತಗೊಂಡಿದೆ ಅಯೋಧ್ಯೆ

    ಲಕ್ನೋ: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದ ಐತಿಹಾಸಿಕ ಕ್ಷಣಕ್ಕೆ ಇನ್ನು ಎರಡು ದಿನ. ಆಗಸ್ಟ್ 5ರಂದು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿದೆ. ಈ ಶುಭ ಸಂದರ್ಭಕ್ಕೆ ಅಯೋಧ್ಯೆ ಸಿಂಗಾರಗೊಂಡಿದೆ. ಕೊರೊನಾ ಹಿನ್ನೆಲೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ.

    ಆಗಸ್ಟ್ 5ರಂದು ನಡೆಯುವ ಭೂಮಿ ಪೂಜೆಯ ಐತಿಹಾಸಿಕ ಕ್ಷಣಕ್ಕಾಗಿ ರಾಮ ಮಂದಿರ ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸುತ್ತಿದೆ. ಪುರುಷೋತ್ತಮ ರಾಮನ ಮಂದಿರಕ್ಕಾಗಿ ಅಯೋಧ್ಯೆ ಭರ್ಜರಿಯಾಗಿ ಅಲಂಕೃತಗೊಂಡಿದೆ. ಭಾರೀ ಭದ್ರತೆಯನ್ನು ಸಹ ಕೈಗೊಳ್ಳಲಾಗಿದೆ. ಕೊರೊನಾ ಹಿನ್ನೆಲೆ ಸಾಮಾಜಿಕ ಅಂತರ ಪಾಲನೆ ಕಡ್ಡಾಯ ಮಾಡಲಾಗಿದೆ.

    ಮುಖ್ಯವೇದಿಕೆಯಲ್ಲಿ ಐವರಿಗೆ ಮಾತ್ರ ಸ್ಥಾನ ಕಲ್ಪಿಸಲಾಗುತ್ತಿದೆ. ಪ್ರಧಾನಿ ಮೋದಿ, ರಾಮಜನ್ಮಭೂಮಿ ನ್ಯಾಸ್ ಮುಖ್ಯಸ್ಥ ನೃತ್ಯ ಗೋಪಾಲದಾಸ್, ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ಮುಖ್ಯಮಂತ್ರಿ ಸೇರಿದಂತೆ ಒಟ್ಟು ಐವರಷ್ಟೇ ವೇದಿಕೆ ಅಲಂಕರಿಸಲಿದ್ದಾರೆ. ಭದ್ರತಾ ಕಾರಣಗಳಿಂದಾಗಿ 200 ಗಣ್ಯರ ಬದಲಿಗೆ 170 ಗಣ್ಯರಿಗೆ ಅವಕಾಶ ನೀಡಲಾಗಿದೆ. ಮಂದಿರದ ಕನಸು ಕಂಡಿದ್ದ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಷಿ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಭಾಗಿಯಾಗಲಿದ್ದಾರೆ.

    ಅಚ್ಚರಿ ತರುತ್ತೆ ಮಂದಿರ ತಂತ್ರಜ್ಞಾನ
    ಬರೋಬ್ಬರಿ 15 ಪೀಳಿಗೆಯಿಂದ ದೇಶ ಹಾಗೂ ವಿದೇಶಗಳಲ್ಲಿ 131 ದೇವಾಲಯಗಳ ವಿನ್ಯಾಸ ಮಾಡಿರುವ ಅಹಮದಾಬಾದ್‍ನ ಖ್ಯಾತ ಶಿಲ್ಪಿ ಚಂದ್ರಕಾಂತ್ ಸೋಂಪುರ ನೇತೃತ್ವದಲ್ಲಿ ಅವರ ಕುಟುಂಬ ಎಲ್ಲ ಕಾಲಕ್ಕೂ ಸಲ್ಲುವ, ಭವ್ಯ ರಾಮ ಮಂದಿರ ನಿರ್ಮಿಸಲಿದೆ.

    ವಿಶ್ವ ಹಿಂದೂ ಪರಿಷತ್ ಜೊತೆ ಸೇರಿ 1989ರಿಂದಲೇ ರಾಮಮಂದಿರ ವಿನ್ಯಾಸ ರೂಪಿಸಿದ್ದ ಚಂದ್ರಕಾಂತ್ ಸೋಂಪುರ, ಇದೀಗ ವಿನ್ಯಾಸದಲ್ಲಿ ಅಲ್ಪ ಮಾರ್ಪಾಡು ಮಾಡಿದ್ದಾರೆ. ನಾಗರ ಶೈಲಿಯಲ್ಲಿ ಮರ್ಯಾದ ಪುರುಷೋಷತ್ತಮ ಮಂದಿರ ನಿರ್ಮಾಣವಾಗಲಿದೆ. ಈ ಮೊದಲು 270 ಅಡಿ ಉದ್ದ, 145 ಅಡಿ ಅಗಲ, 141 ಅಡಿ ಎತ್ತರದ ಮಂದಿರ ನಿರ್ಮಿಸಲು ಯೋಜಿಸಲಾಗಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ರಾಮಮಂದಿರ ಬರೋಬ್ಬರಿ 360 ಅಡಿ ಉದ್ದ, 235 ಅಡಿ ಅಗಲ ಮತ್ತು 161 ಅಡಿ ಎತ್ತರ ಇರಲಿದೆ.

    ಒಟ್ಟು 366 ಸ್ಥಂಭಗಳನ್ನು ಬಳಸಿ ದೇಗುಲ ನಿರ್ಮಾಣ
    ರಾಮ ಮಂದಿರದ ತಳಭಾಗ 25 ಅಡಿ ಇರಲಿದೆ. ಅದರ ಮೇಲೆ ಡಿಸೈನ್‍ನಲ್ಲಿ 6 ಅಡಿ ಆವರಣ ಇರಲಿದೆ. 16.03 ಅಡಿ ಎತ್ತರದ ಒಟ್ಟು 366 ಸ್ಥಂಭಗಳನ್ನು ಮಂದಿರ ನಿರ್ಮಾಣಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ನೆಲಮಹಡಿಯಲ್ಲಿ 161 ಸ್ಥಂಭ ಇರಲಿದ್ದು, ಇಲ್ಲಿಯೇ ರಾಮನ ಮೂರ್ತಿ ನಿರ್ಮಾಣ ಮಾಡಲಾಗುತ್ತದೆ. ಮೊದಲ ಅಂತಸ್ತಿನಲ್ಲಿ ರಾಮ್‍ಲಲ್ಲಾನ ಗರ್ಭಗುಡಿ ಇರಲಿದೆ. ಇದು ಅಷ್ಟಭುಜಾಕೃತಿಯಲ್ಲಿ ಇರಲಿದೆ. ಇದರ ಪಕ್ಕದಲ್ಲೇ ರಾಮ್ ದರ್ಬಾರ್ ಪ್ರಾಂಗಣ, ಇದರ ಎಡಭಾಗದಲ್ಲಿ ನೃತ್ಯ ಮಂಟಪ, ಅದರ ಹಿಂಬದಿಯಲ್ಲಿ ರಂಗಮಂಟಪ ಇರಲಿದೆ.

    ಭೂಗರ್ಭದಲ್ಲಿ ಅಡಕವಾಗಲಿದೆ ಮಂದಿರ ಇತಿಹಾಸ
    ಮುಂದೆಂದೂ ರಾಮಜನ್ಮಭೂಮಿ ವಿವಾದ ತಲೆ ಎತ್ತಬಾರದು ಎಂಬ ಕಾರಣಕ್ಕೆ, ಮುಂದಿನ ತಲೆಮಾರುಗಳಿಗೆ ರಾಮಮಂದಿರದ ಭವ್ಯ ಐತಿಹ್ಯ ತಿಳಿಯಬೇಕು ಎಂಬ ಉದ್ದೇಶದಿಂದ ರಾಮಮಂದಿರದ 2 ಸಾವಿರ ಅಡಿ ಆಳದಲ್ಲಿ ಮಂದಿರದ ಸಂಪೂರ್ಣ ಇತಿಹಾಸವುಳ್ಳ ತಾಮ್ರದ ಕೆತ್ತನೆಯ ಸಂಪುಟ (ಟೈಮ್ ಕ್ಯಾಪ್ಸುಲ್) ಹುದುಗಿಸಿಡಲು ಸಿದ್ಧತೆ ನಡೆದಿದೆ.

  • ಭೂಮಿ ಪೂಜೆ ಲೈವ್‌ – ಇಂದಿರಾ ಗಾಂಧಿ ಭಾಷಣದ ವಿಡಿಯೋ ಅಪ್ಲೋಡ್‌ ಮಾಡಿ ಪ್ರಶ್ನೆ ಕೇಳಿದ ಬಿಜೆಪಿ

    ಭೂಮಿ ಪೂಜೆ ಲೈವ್‌ – ಇಂದಿರಾ ಗಾಂಧಿ ಭಾಷಣದ ವಿಡಿಯೋ ಅಪ್ಲೋಡ್‌ ಮಾಡಿ ಪ್ರಶ್ನೆ ಕೇಳಿದ ಬಿಜೆಪಿ

    ನವದೆಹಲಿ: ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆಯ ಕಾರ್ಯಕ್ರಮವನ್ನು ಡಿಡಿ ವಾಹಿನಿಯಲ್ಲಿ ಲೈವ್‌ ಪ್ರಸಾರ ಮಾಡವುದಕ್ಕೆ ಟೀಕೆ ವ್ಯಕ್ತವಾಗಿದ್ದಕ್ಕೆ ಬಿಜೆಪಿ ಇಂದಿರಾ ಗಾಂಧಿ ಭಾಷಣದ ವಿಡಿಯೋವನ್ನು ರಿಲೀಸ್‌ ಮಾಡಿ ತಿರುಗೇಟು ನೀಡಿದೆ.

    ಆಗಸ್ಟ್‌ 5 ರಂದು ಆಯೋಜನೆಗೊಂಡಿರುವ ರಾಮ ಮಂದಿರದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ದೂರದರ್ಶನ ಲೈವ್‌ ಪ್ರಸಾರ ಮಾಡಲು ಸಿದ್ಧತೆ ನಡೆಸುತ್ತಿತ್ತು.

    https://twitter.com/BJP4India/status/1289838589346369537

    ಸರ್ಕಾರದ ವಾಹಿನಿಯಾಗಿರುವ ಡಿಡಿ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಮುಂದಾಗಿದ್ದಕ್ಕೆ ಸಿಪಿಐ ಆಕ್ಷೇಪ ವ್ಯಕ್ತಪಡಿಸಿತ್ತು. ಸಿಪಿಐ ಸಂಸದ ಬಿನೊಯ್ ವಿಶ್ವಂ ಅವರು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವ ಪ್ರಕಾಶ್‌ ಜಾವಡೇಕರ್‌ ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ಭೂಮಿ ಪೂಜೆಗೆ ತಯಾರಾಗ್ತಿದೆ 1.25 ಲಕ್ಷ ಮಣ್ಣಿನ ಹಣತೆಗಳು!

    ಜಾತ್ಯತೀತತೆ ಮತ್ತು ಧಾರ್ಮಿಕ ಸಾಮರಸ್ಯದ ತತ್ವಗಳ ಮೇಲೆ ಸ್ಥಾಪಿತವಾದ ದೇಶಕ್ಕೆ ರಾಷ್ಟ್ರೀಯ ವಾಹಿನಿಯಾಗಿರುವ ದೂರದರ್ಶನ ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ಧಾರ್ಮಿಕ ಕಾರ್ಯವನ್ನು ಪ್ರಸಾರ ಮಾಡುವುದು ರಾಷ್ಟ್ರೀಯ ಸಮಗ್ರತೆಯ ಅಂಗೀಕೃತ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಪತ್ರ ಬರೆದಿದ್ದಾರೆ.

    ಈ ಪತ್ರದ ಬೆನ್ನಲ್ಲೇ ಬಿಜೆಪಿ, ಡಿಡಿ ನ್ಯಾಷನಲ್‌ನಲ್ಲಿ 1980ರ ಉತ್ತರ ಪ್ರದೇಶದ ದಿಯೋಬಂದ್‌ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಮಾಡಿದ ಭಾಷಣದ ವಿಡಿಯೋವನ್ನು ಟ್ಚಿಟ್ಟರ್‌ನಲ್ಲಿ ಅಪ್ಲೋಡ್‌ ಮಾಡಿ ಟೀಕಿಸಿದವರಿಗೆ ಪ್ರಶ್ನೆ ಕೇಳಿದೆ.

    ಭಾರತ ಮತ್ತು ಜಗತ್ತಿಗೆ ದಾರುಲ್ ಉಲೂಮ್ ನಿಜವಾದ ಇಸ್ಲಾಮಿಕ್ ಸಂಪ್ರದಾಯದ ಸೇವೆ ಸಲ್ಲಿಸುತ್ತಲೇ ಇರುತ್ತದೆ. 1980ರ ದಿಯೋಬಂದ್‌ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಮಾಡಿದ ಭಾಷಣದದ ವಿಡಿಯೋ ಇದಾಗಿದ್ದು, ಭೂಮಿ ಪೂಜೆಯ ಲೈವ್‌ ವಿರೋಧಿಸುವ ಜನರು ಡಿಡಿ ಪ್ರಸಾರ ಮಾಡಿರುವ ಇಂದಿರಾ ಅವರ ದಿಯೋಬಂದ್ ಭೇಟಿಯ ಬಗ್ಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದೆ.

  • ಅಯೋಧ್ಯೆ ಭೂಮಿ ಪೂಜೆಗೆ ತಯಾರಾಗ್ತಿದೆ 1.25 ಲಕ್ಷ ಮಣ್ಣಿನ ಹಣತೆಗಳು!

    ಅಯೋಧ್ಯೆ ಭೂಮಿ ಪೂಜೆಗೆ ತಯಾರಾಗ್ತಿದೆ 1.25 ಲಕ್ಷ ಮಣ್ಣಿನ ಹಣತೆಗಳು!

    ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ ಶುರುವಾಗಿದ್ದು, ಸಿದ್ಧತೆಗಳು ಕೂಡ ಭರದಿಂದ ಸಾಗಿವೆ. ಆಗಸ್ಟ್ 5ರಂದು ನಡೆಯುವ ಭೂಮಿ ಪೂಜೆಗೆ 1.25 ಲಕ್ಷದ ಮಣ್ಣಿನ ಹಣತೆಗಳು ತಯಾರಾಗುತ್ತಿವೆ.

    ಈ ಸಂಬಂಧ ಮಣ್ಣಿನ ಮಡಿಕೆ ತಯಾರಕರು ಮಾತನಾಡಿ, 1.25 ಲಕ್ಷ ಮಣ್ಣಿನ ಹಣತೆಗಳನ್ನು ಮಾಡಿಕೊಡುವಂತೆ ಆರ್ಡರ್ ಬಂದಿದೆ. ಈ ಗ್ರಾಮದಲ್ಲಿ ಸುಮಾರು 40 ಕುಟುಂಬಗಳಿವೆ. ಸದ್ಯ ನಾವು ಹಣತೆಗಳನ್ನು ಮಾಡುವ ಬ್ಯುಸಿಯಲ್ಲಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!

    ಇತ್ತ ಭಾನುವಾರ ಸಿಎಂ ಆದಿತ್ಯನಾಥ್ ಭೇಟಿ ನೀಡಲಿದ್ದಾರೆ. ಆದರೆ ಅಯೋಧ್ಯೆ ರಥಯಾತ್ರೆ ನಡೆಸಿ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ಮಾಜಿ ಉಪ ಪ್ರಧಾನಿ ಎಲ್‍ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿಗೆ ರಾಮಮಂದಿರ ಟ್ರಸ್ಟ್ ಆಹ್ವಾನ ನೀಡಿಲ್ಲ. ವೇದಿಕೆ ಮೇಲೆ ಅಲಂಕರಿಸುವ ಗಣ್ಯರ ಲಿಸ್ಟ್‍ನಲ್ಲಿ ಇವರಿಬ್ಬರ ಹೆಸರಿಲ್ಲ. ಇದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಈ ಬೆನ್ನಲ್ಲೇ ಫೋನ್ ಮೂಲಕ ಆಹ್ವಾನ ನೀಡೋದಾಗಿ ಟ್ರಸ್ಟ್ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಭೂಮಿ ಪೂಜೆಯಂದು ದಯವಿಟ್ಟು ಅಯೋಧ್ಯೆಗೆ ಬರಬೇಡಿ- ಟ್ರಸ್ಟ್ ಮನವಿ

    ಕೇಂದ್ರದ ಮಾಜಿ ಸಚಿವೆ ಉಮಾಭಾರತಿ, ಮಾಜಿ ಸಿಎಂ ಕಲ್ಯಾಣ್ ಸಿಂಗ್‍ಗೆ ಆಹ್ವಾನ ಹೋಗಿದೆ. ರಾಮಮಂದಿರ ನಿರ್ಮಾಣ ಟ್ರಸ್ಟಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಧನ ಸಂಗ್ರಹಕ್ಕೆ ಕೊಂಕು ನುಡಿದವರಿಗೆ ತಿರುಗೇಟು ನೀಡಿದ್ದಾರೆ. ಒಳ್ಳೆಯ ಕೆಲಸಕ್ಕೆ ವಿಘ್ನ ಎದುರಾಗೋ ಸಾಮಾನ್ಯ ಅಂತ ಮಂದಿರ ವಿರೋಧಿಗಳ ಕಿವಿ ಹಿಂಡಿದ್ದಾರೆ. ಇತ್ತ ತುಮಕೂರು ಗ್ರಾಮಾಂತರ ಬಳಿ ಶ್ರೀರಾಮ ಸೃಷ್ಟಿಸಿದ ಎನ್ನಲಾಧ ನಾಮದ ಚಿಲುಮೆಯ ನೀರನ್ನು ಅಯೋಧ್ಯೆಗೆ ಕಳಿಸಿಕೊಡಲಾಗಿದೆ.  ಇದನ್ನೂ ಓದಿ: ಅಯೋಧ್ಯೆಗೆ ದಾಳಿ ಮಾಡಲು ಐಎಸ್‍ಐ ಸಂಚು – ಗುಪ್ತಚರ ಇಲಾಖೆ

  • ರಾಮ ಮಂದಿರ ಶಿಲಾನ್ಯಾಸ- ಬೆಳಗ್ಗೆ 11.15ಕ್ಕೆ ಪ್ರಧಾನಿ ಮೋದಿ ಅಯೋಧ್ಯೆಗೆ ಆಗಮನ

    ರಾಮ ಮಂದಿರ ಶಿಲಾನ್ಯಾಸ- ಬೆಳಗ್ಗೆ 11.15ಕ್ಕೆ ಪ್ರಧಾನಿ ಮೋದಿ ಅಯೋಧ್ಯೆಗೆ ಆಗಮನ

    – ಐವರಿಗೆ ಮಾತ್ರ ವೇದಿಕೆ ಮೇಲೆ ಅವಕಾಶ

    ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಸಿದ್ಧತೆ ಭರದಿಂದ ಸಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರಮುಖ ಗಣ್ಯರ ಪಟ್ಟಿಯನ್ನು ಸಹ ಮಾಡಿಕೊಳ್ಳಲಾಗಿದೆ. ಈ ಪ್ರಕಾರ ಆಗಸ್ಟ್ 5ರಂದು ನಡೆಯುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಬೆಳಗ್ಗೆ 11.15ಕ್ಕೆ ಅಯೋಧ್ಯೆಗೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಕುರಿತು ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದು, ಪ್ರಧಾನಿ ಮೋದಿ ಬೆಳಗ್ಗೆ 11.15ಕ್ಕೆ ಅಯೋಧ್ಯೆಗೆ ಆಗಮಿಸಿ ಸುಮಾರು ಮೂರು ಗಂಟೆಗಳ ಸಮಯವನ್ನು ಕಳೆಯಲಿದ್ದು, ಮಧ್ಯಾಹ್ನ 2ಕ್ಕೆ ಮತ್ತೆ ದೆಹಲಿಗೆ ಮರಳಿದ್ದಾರೆ ಎನ್ನಲಾಗಿದೆ.

    ಅಯೋಧ್ಯೆಗೆ ಆಗಮಿಸುತ್ತಿದ್ದಂತೆ ಹನುಮಾನ್ ಗರಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ನಂತರ ರಾಮ ಮಂದಿರದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಆಯೋಜಕರು ಈ ಕುರಿತು ಮಾಹಿತಿ ನೀಡಿದ್ದು, ಪ್ರಧಾನಿ ಮೋದಿ ಸೇರಿ ವೇದಿಕೆ ಮೇಲೆ ಐದು ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿಬೆನ್ ಪಟೇಲ್, ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ರಾಮ ಮಂದಿರ ಟ್ರಸ್ಟ್‍ನ ಮುಖ್ಯಸ್ಥ ಮಹಾಂತ್ ನೃತ್ಯಗೋಪಾಲ್ ದಾಸ್ ವೇದಿಕೆ ಮೇಲೆ ಉಪಸ್ಥಿತರಿರಲಿದ್ದಾರೆ ಎಂದಿದ್ದಾರೆ.

    ಕಾರ್ಯಕ್ರಮಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿದ್ದು, ಉತ್ತರ ಪ್ರದೇಶ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮುಖ್ಯಸ್ಥರು ಭೂಮಿ ಪೂಜೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸಿದ್ಧತೆಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.

  • ಭೂಮಿ ಪೂಜೆಯಂದು ದಯವಿಟ್ಟು ಅಯೋಧ್ಯೆಗೆ ಬರಬೇಡಿ- ಟ್ರಸ್ಟ್ ಮನವಿ

    ಭೂಮಿ ಪೂಜೆಯಂದು ದಯವಿಟ್ಟು ಅಯೋಧ್ಯೆಗೆ ಬರಬೇಡಿ- ಟ್ರಸ್ಟ್ ಮನವಿ

    ಲಕ್ನೋ: ಭೂಮಿ ಪೂಜೆಯಂದು ದಯವಿಟ್ಟು ಅಯೋಧ್ಯೆಗೆ ಬರಬೇಡಿ. ಕಾರ್ಯಕ್ರಮವನ್ನು ಟಿವಿಯಲ್ಲೇ ವೀಕ್ಷಿಸಿ ಎಂದು ಭಕ್ತರಲ್ಲಿ ರಾಮಜನ್ಮಭೂಮಿ ಟ್ರಸ್ಟ್ ಮನವಿ ಮಾಡಿಕೊಂಡಿದೆ.

    ಆಗಸ್ಟ್ ರಂದು ನಡೆಯುವ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಆದರೆ ಕೋವಿಡ್ 19 ನಿಂದಾಗಿ ಯಾರೂ ಅಯೋಧ್ಯೆಗೆ ಬರಬೇಡಿ. ಕಾರ್ಯಕ್ರಮವನ್ನು ಟಿವಿಯಲ್ಲಿ ವೀಕ್ಷಿಸಿ. ಅಲ್ಲದೆ ಅಂದು ಸಜೆ ಎಲ್ಲರೂ ದೀಪ ಬೆಳಗಿ ಎಂದು ಟ್ರಸ್ಟ್ ತಿಳಿಸಿದೆ.

    ರಾಮಮಂದಿರ ನಿರ್ಮಾಣವನ್ನು ಭೂಮಿ ಪೂಜೆಯ ಮೂಲಕ ಪ್ರಾರಂಭಿಸುವ ಈ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 5ರಂದು ಅಯೋಧ್ಯೆಗೆ ಭೇಟಿ ನೀಡುವ ಸಾಧ್ಯತೆ ಇದೆ. 3 ಅಥವಾ 5ರಂದು ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ಆಗಮಿಸುವಂತೆ ಈಗಾಗಲೇ ಪ್ರಧಾನಿಯವರಿಗೆ ಆಹ್ವಾನ ನೀಡಲಾಗಿದೆ ಎಂದು ಟ್ರಸ್ಟ್ ಸದಸ್ಯರು ಮಾಹಿತಿ ನಿಡಿದ್ದಾರೆ.  ಇದನ್ನೂ ಓದಿ: 800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!

    ಮಹಾರಾಷ್ಟ್ರ ಮುಖ್ಯಮಂತ್ರಿ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಕೊರೊನಾ ವೈರಸ್ ಭೀತಿಯಿಂದಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಮಮಂದಿರ ಭೂಮಿ ಪೂಜೆ ನೆರವೇರಿಸಬೇಕು ಎಂದು ಹೇಳಿದ್ದರು. ಇದನ್ನೂ ಓದಿ: ವಿಡಿಯೋ ಕಾನ್ಫರೆನ್ಸ್ ಮೂಲಕ ರಾಮ ಮಂದಿರ ಭೂಮಿ ಪೂಜೆಗೆ ವಿರೋಧ- ಉದ್ಧವ್ ಠಾಕ್ರೆ ಹೇಳಿಕೆಗೆ ವಿಎಚ್‍ಪಿ ಕಿಡಿ

    ಭೂಮಿ ಪೂಜೆ ಕಾರ್ಯಕ್ರಮಕ್ಕೆ ನಾನು ಅಯೋಧ್ಯೆಗೆ ಹೋಗಬಲ್ಲೆ. ಆದರೆ ಲಕ್ಷಾಂತರ ರಾಮನ ಭಕ್ತರ ಕಥೆ ಏನು, ಅವರನ್ನು ನೀವು ತಡೆಯಲು ಸಾಧ್ಯವೆ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿಯೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ಮಾಡಿ ಎಂದು ಉದ್ಧವ್ ಠಾಕ್ರೆ ತಿಳಿಸಿದ್ದರು. ಆದರೆ ಠಾಕ್ರೆ ಸಲಹೆಗೆ ವಿಶ್ವ ಹಿಂದೂ ಪರಿಷತ್ ಆಕ್ರೋಶ ವ್ಯಕ್ತಪಡಿಸಿತ್ತು. ಇದನ್ನೂ ಓದಿ: ಅಯೋಧ್ಯೆಗೆ ದಾಳಿ ಮಾಡಲು ಐಎಸ್‍ಐ ಸಂಚು – ಗುಪ್ತಚರ ಇಲಾಖೆ

  • ಭೂಮಿ ಪೂಜೆಗೆ ಮೋದಿ ಹಾಜರಾಗುವುದು ಸಾಂವಿಧಾನಿಕ ಪ್ರಮಾಣವನ್ನು ಉಲ್ಲಂಘಿಸಿದಂತೆ – ಓವೈಸಿ

    ಭೂಮಿ ಪೂಜೆಗೆ ಮೋದಿ ಹಾಜರಾಗುವುದು ಸಾಂವಿಧಾನಿಕ ಪ್ರಮಾಣವನ್ನು ಉಲ್ಲಂಘಿಸಿದಂತೆ – ಓವೈಸಿ

    ಹೈದರಾಬಾದ್: ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಾಜರಾಗುವುದು ಸಾಂವಿಧಾನಿಕ ಪ್ರಮಾಣವನ್ನು ಉಲ್ಲಂಘಿಸಿದಂತೆ ಎಂದು ಅಖಿಲ ಭಾರತ ಮಜ್ಲಿಸ್-ಇ-ಇಥೆಹಾದುಲ್ ಮುಸ್ಮಿಮಿನ್ (ಎಐಎಂಐಎಂ) ಪಕ್ಷದ ಮುಖ್ಯಸ್ಥ, ಹೈದರಾಬಾದ್‌ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

    ಆಗಸ್ಟ್‌ 5 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯಲಿರುವ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ವರದಿ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಓವೈಸಿ ಟ್ವೀಟ್‌ ಮಾಡಿ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.

    “ಕರ್ತವ್ಯದಲ್ಲಿದ್ದಾಗ ಪ್ರಧಾನಮಂತ್ರಿಗಳು ಭೂಮಿ ಪೂಜೆಗೆ ಹಾಜರಾದರೆ ಅದು ಸಾಂವಿಧಾನಿಕ ಪ್ರಮಾಣವಚನದ ಉಲ್ಲಂಘನೆಯಾದಂತೆ. ಜಾತ್ಯತೀತತೆಯು ಸಂವಿಧಾನದ ಮೂಲ ರಚನೆಯ ಒಂದು ಭಾಗವಾಗಿದೆ” ಎಂದು ಟ್ವೀಟ್‌ ಮಾಡಿದ್ದಾರೆ.

    1992ರಲ್ಲಿ ಕ್ರಿಮಿನಲ್‌ ಜನಸಮೂಹದಿಂದ ನೆಲಸಮಗೊಳ್ಳುವ ಮೊದಲು 400 ವರ್ಷಗಳ ಕಾಲ ಬಾಬರಿ ಮಸೀದಿ ಅಯೋಧ್ಯೆಯಲ್ಲಿತ್ತು ಎನ್ನುವುದನ್ನು ನಾವು ಮರೆಯಲು ಸಾಧ್ಯವಿಲ್ಲ ಎಂದು ಓವೈಸಿ ಹೇಳಿದ್ದಾರೆ. ಇದನ್ನೂ ಓದಿ: 800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!

    ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ದೇವಾಲಯದ ಭೂಮಿ ಪೂಜೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುವುದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖಚಿತಪಡಿಸಿದ್ದಾರೆ.

    ಒವೈಸಿ ಅವರ ಹೇಳಿಕೆಗೆ ಬಿಜೆಪಿ ವಕ್ತಾರ ನಲಿನ್ ಕೊಹ್ಲಿ, ಇತ್ತೀಚಿನ ದಿನಗಳಲ್ಲಿ ಒವೈಸಿ ಅವರು ಹೇಳಿಕೆ ನೀಡುವ ಮೂಲಕ ರಾಮ ದೇವಾಲಯದ ಬಗ್ಗೆ ವಿವಾದವನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ. ಧರ್ಮದ ಬಗ್ಗೆ ರಾಜಕೀಯ ಮಾಡಲು ಓವೈಸಿ ಪ್ರಯತ್ನಿಸುತ್ತಿರುವುದು ನಮಗೆ ತಿಳಿದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

    ರಾಮ್ ದೇವಾಲಯದ ಭೂಮಿ ಪೂಜೆಗೆ ಆಗಸ್ಟ್ 5ರಂದು ಅಯೋಧ್ಯೆಗೆ ಬರಲು ಪ್ರಧಾನಿ ಒಪ್ಪಿಕೊಂಡಿದ್ದಾರೆ. ಅವರು ಒಂದೂವರೆ ಗಂಟೆಗಳ ಕಾಲ ಅಲ್ಲಿಯೇ ಇರುತ್ತಾರೆ. ಭೂಮಿ ಪೂಜೆಗೂ ಮೊದಲು ರಾಮ್ ಲಲ್ಲಾಗೆ ಭೇಟಿ ನೀಡುತ್ತಾರೆ ಎಂದು ಶ್ರೀರಾಮ ಮಂದಿರದ ಟ್ರಸ್ಟಿ ಸ್ವಾಮಿ ಗೋವಿಂದ ದೇವಗಿರಿ ತಿಳಿಸಿದ್ದಾರೆ.

    ಈ ಮೊದಲು ಅವರು ಪ್ರಧಾನಿ ಆನ್‌ಲೈನ್‌ನಲ್ಲಿ ಭೂಮಿ ಪೂಜೆ ಮಾಡಲು ನಿರ್ಧರಿಸಿದ್ದರು. ಆದರೆ ನೀವೇ ಖುದ್ದಾಗಿ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ನಾನು ಮನವಿ ಮಾಡಿದ್ದೆ. ನಂತರ ನನ್ನ ಮನವಿಯನ್ನು ಒಪ್ಪಿಕೊಂಡರು. ಮೋದಿಜೀ ಅವರು ಎರಡು ದಿನಾಂಕಗಳನ್ನು ನೀಡುವಂತೆ ಕೇಳಿದ್ದರು. ಆದ್ದರಿಂದ ಅವರ ಕಚೇರಿಗೆ ಜುಲೈ 29 ಮತ್ತು ಆಗಸ್ಟ್ 5ರ ಎರಡು ದಿನಾಂಕಗಳ ಬಗ್ಗೆ ತಿಳಿಸಲಾಯಿತು. ಅಂತಿಮವಾಗಿ ಅವರು ಆಗಸ್ಟ್ 5ಕ್ಕೆ ಬರಲು ಒಪ್ಪಿಗೆ ನೀಡಿದರು ಎಂದು ಗೋವಿಂದ ದೇವಗಿರಿ ಹೇಳಿದರು.

    ಈ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಭಾಗವಹಿಸುವ  ಬಗ್ಗೆ ಪ್ರಧಾನಿ ಕಚೇರಿ ಇನ್ನೂ ಅಧಿಕೃತವಾಗಿ ತಿಳಿಸಿಲ್ಲ.

  • ವಿಡಿಯೋ ಕಾನ್ಫರೆನ್ಸ್ ಮೂಲಕ ರಾಮ ಮಂದಿರ ಭೂಮಿ ಪೂಜೆಗೆ ವಿರೋಧ- ಉದ್ಧವ್ ಠಾಕ್ರೆ ಹೇಳಿಕೆಗೆ ವಿಎಚ್‍ಪಿ ಕಿಡಿ

    ವಿಡಿಯೋ ಕಾನ್ಫರೆನ್ಸ್ ಮೂಲಕ ರಾಮ ಮಂದಿರ ಭೂಮಿ ಪೂಜೆಗೆ ವಿರೋಧ- ಉದ್ಧವ್ ಠಾಕ್ರೆ ಹೇಳಿಕೆಗೆ ವಿಎಚ್‍ಪಿ ಕಿಡಿ

    ನವದೆಹಲಿ: ವಿಡಿಯೋ ಕಾನ್ಫರೆನ್ಸ್ ಮೂಲಕ ಭೂಮಿ ಪೂಜೆ ನೆರವೇರಿಸಬೇಕೆಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಲಹೆಗೆ ವಿಶ್ವ ಹಿಂದೂ ಪರಿಷತ್ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ಶಿವ ಸೇನೆ ಸುಖಾಸುಮ್ಮನೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ತಿರುಗೇಟು ನೀಡಿದೆ.

    ವಿಶ್ವ ಹಿಂದೂ ಪರಿಷತ್‍ನ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, ಉದ್ಧವ್ ಠಾಕ್ರೆ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭೂಮಿ ಪೂಜೆ ಮಾಡುವಂತೆ ಸಲಹೆ ನೀಡಿದ್ದಾರೆ. ಇದು ಅವರ ವಿತಂಡ ವಾದವನ್ನು ತೋರಿಸುತ್ತದೆ. ಬಾಳಾ ಸಾಹೇಬ್ ಠಾಕ್ರೆಯವರ ಪಕ್ಷದವರು ಈ ರೀತಿಯಾಗಿ ಹೇಳಿಕೆ ನೀಡಿದ್ದಕ್ಕೆ ನಾವು ಬೇಸರ ವ್ಯಕ್ತಪಡಿಸುತ್ತೇವೆ ಎಂದು ಹರಿಹಾಯ್ದಿದ್ದಾರೆ.

    ಭೂಮಿ ಪೂಜೆ ಅದೊಂದು ಶುಭ ಆಚರಣೆಯಾಗಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡಲು ಸಾಧ್ಯವಿಲ್ಲ. ಯಾವುದೇ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಬೇಕಾದಲ್ಲಿ ಮಾತೃಭೂಮಿಗೆ ಪೂಜೆ ಸಲ್ಲಿಸಬೇಕು. ಭೂಮಿ ಅಗಿಯಲು ಹಾಗೂ ಕಟ್ಟಡ ನಿರ್ಮಾಣ ಮಾಡಲು ಅವಳ ಅನುಮತಿ ಪಡೆಯಬೇಕು. ಈ ಮೂಲಕ ನಮ್ಮ ಮುಂದಿನ ಯೋಜನೆಗೆ ಅವಳ ಆಶೀರ್ವಾದ ಪಡೆಯಬೇಕಿದೆ ಎಂದು ತಿಳಿಸಿದರು.

    ಕೊರೊನಾ ವೈರಸ್ ಹಿನ್ನೆಲೆ ಅಯೋಧ್ಯೆಯ ರಾಮ ಮಂದಿರದ ಭೂಮಿ ಪೂಜೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನೆರವೇರಿಸಬೇಕು ಎಂದು ಉದ್ಧವ್ ಠಾಕ್ರೆ ಸಾಮ್ನಾ ಪತ್ರಿಕೆಯಲ್ಲಿನ ಸಂದರ್ಶನದಲ್ಲಿ ಹೇಳಿದ್ದರು.

    ಈ ಕುರಿತು ವಿಶ್ವ ಹಿಂದೂ ಪರಿಷತ್ ನಾಯಕರು ಪ್ರತಿಕ್ರಿಯಿಸಿ, ಕೊರೊನಾ ವೈರಸ್ ಕುರಿತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಮೂಲಕ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಅಲ್ಲದೆ ಅಯೋಧ್ಯೆಯಲ್ಲಿ ನಡೆಯುವ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಕೇವಲ 200 ಜನ ಭಾಗವಹಿಸುತ್ತಾರೆ. ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಈಗಗಲೇ ವಿಶ್ವ ಹಿಂದೂ ಪರಿಷತ್ ಹೇಳಿದೆ ಎಂದು ಉದ್ಧವ್ ಠಾಕ್ರೆ ಹೇಳಿಕೆಗೆ ತಿರುಗೇಟು ನೀಡಿದೆ.

    ಇತ್ತೀಚೆಗೆ ಸಾಮ್ನಾದಲ್ಲಿ ಬಿತ್ತರವಾದ ಉದ್ಧವ್ ಠಾಕ್ರೆ ಅವರ ಸಂದರ್ಶನದಲ್ಲಿ ಈ ಕುರಿತು ಪ್ರಸ್ತಾಪಿಸಲಾಗಿದ್ದು, ಭೂಮಿ ಪೂಜೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನೆರವೇರಿಸಬಹುದು. ಇದು ಸಂತಸದ ಕ್ಷಣವಾಗಿದೆ. ಹೀಗಾಗಿ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಈ ಮೂಲಕ ನಾವು ಕೊರೊನಾ ಸೋಂಕು ಹೆಚ್ಚು ಹರಡಲು ಅವಕಾಶ ಮಾಡಿಕೊಡಬೇಕೆ ಎಂದು ಠಾಕ್ರೆ ಪ್ರಶ್ನಿಸಿದ್ದಾರೆ.

    ಇದು ಸಾಮಾನ್ಯ ಮಂದಿರ ನಿರ್ಮಾಣದ ವಿಚಾರವಲ್ಲ, ಕೊರೊನಾ ಮಹಾಮಾರಿ ವಿರುದ್ಧ ಇಂದು ನಾವು ಹೋರಾಡುತ್ತಿದ್ದೇವೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಸಹ ನಿಷೇಧ ಹೇರಲಾಗಿದೆ. ಭೂಮಿ ಪೂಜೆ ಕಾರ್ಯಕ್ರಮಕ್ಕೆ ನಾನು ಅಯೋಧ್ಯೆಗೆ ಹೋಗಬಲ್ಲೆ. ಆದರೆ ಲಕ್ಷಾಂತರ ರಾಮನ ಭಕ್ತರ ಕಥೆ ಏನು, ಅವರನ್ನು ನೀವು ತಡೆಯಲು ಸಾಧ್ಯವೆ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿಯೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ಮಾಡಿ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

    ಆಗಸ್ಟ್ 5ರಂದು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು. ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‍ನ ಸದಸ್ಯರ ಮಾಹಿತಿಯಂತೆ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಭಾಗವಹಿಸಬಹುದು ಎಂದು ಹೇಳಲಾಗಿದೆ.