Tag: ಭುವನ್ ಗೌಡ

  • ಕೆಜಿಎಫ್-2 ಚಿತ್ರೀಕರಣ ಶುರು!

    ಕೆಜಿಎಫ್-2 ಚಿತ್ರೀಕರಣ ಶುರು!

    ನ್ನಡ ಚಿತ್ರಗಳ ಬಗ್ಗೆ ಪರಭಾಷೆಗಳಲ್ಲಿ ಎಂಥಾ ಅಸಡ್ಡೆಯಿತ್ತೋ ಆ ಜಾಗದಲ್ಲಿ ಬೆರಗೊಂದನ್ನು ಪ್ರತಿಷ್ಠಾಪಿಸುವಂಥಾ ಗೆಲುವು ಕಂಡಿರೋ ಚಿತ್ರ ಕೆಜಿಎಫ್. ಪ್ರಶಾಂತ್ ನೀಲ್ ಸಮರ್ಥ ಸಾರಥ್ಯ, ಪ್ರತಿಭಾವಂತ ತಂಡದ ಪರಿಶ್ರಮ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಅದ್ಭುತ ಅಭಿನಯವೂ ಸೇರಿದಂದಂತೆ ಒಂದಕ್ಕೊಂದು ಪೂರಕವಾಗಿದ್ದ ಕೆಜಿಎಫ್ ಬರೆದಿರೋದು ಸಾರ್ವಕಾಲಿಕ ದಾಖಲೆ. ಇಂಥಾ ಚಿತ್ರದ ಚಾಪ್ಟರ್ 2 ಶುರುವಾಗುತ್ತದೆಯೆಂದರೆ ಅದರತ್ತಲೂ ತೀವ್ರವಾದ ಕುತೂಹಲ ಹುಟ್ಟೋದು ಸಹಜವೇ.

    ಕೆಜಿಎಫ್ ಚಾಪ್ಟರ್ 2 ಬಗ್ಗೆಯೂ ಕೂಡಾ ಕನ್ನಡವೂ ಸೇರಿದಂತೆ ನಾನಾ ಭಾಷಾ ಪ್ರೇಕ್ಷಕರಲ್ಲಿ ಅಂಥಾದ್ದೇ ಕುತೂಹಲ ಹುಟ್ಟಿಕೊಂಡಿದೆ. ಕೆಜಿಎಫ್ ಸೃಷ್ಟಿಸಿದ್ದ ಹವಾದ ಬಿಸಿಯಲ್ಲಿಯೇ ಇಡೀ ಟೀಮು ಎರಡನೇ ಭಾಗಕ್ಕಾಗಿ ಸಜ್ಜುಗೊಂಡಿತ್ತು. ಆ ಹೊತ್ತಿಗಾಗಲೇ ಚಿತ್ರೀಕರಣ ಯಾವಾಗ ಶುರುವಾಗುತ್ತದೆ ಎಂಬ ಕುತೂಹಲ ಕೂಡಾ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಆದರೆ ಇತ್ತೀಚೆಗೆ ಆರಂಭವಾಗಲಿದ್ದ ಕ್ಷಣವೊಂದು ಕಾರಣಾಂತರಗಳಿಂದ ಮಿಸ್ ಆಗಿದ್ದರಿಂದ ಎಲ್ಲರಿಗೂ ನಿರಾಸೆಯಾಗಿದ್ದದ್ದು ನಿಜ. ಆದರೆ ಇದೀಗ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣಕ್ಕೆ ವಿಧ್ಯುಕ್ತ ಚಾಲನೆ ಸಿಕ್ಕಿದೆ.

    ಪ್ರಶಾಂತ್ ನೀಲ್ ಹಾಗೂ ಛಾಯಾಗ್ರಾಹಕ ಭುವನ್ ಗೌಡ ಬೆಂಗಳೂರಿನಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ. ಈ ಮೂಲಕವೇ ಒಂದಷ್ಟು ಸಮುಯದಿಂದ ಕೆಜಿಎಫ್ ಅಲೆಯಲ್ಲಿಯೇ ಮಿಂದೇಳುತ್ತಾ ಮಗಳು ಹುಟ್ಟಿದ ಸಂಭ್ರಮವನ್ನು ಆಸ್ವಾದಿಸಿದ್ದ ರಾಕಿ ಭಾಯ್ ಕೂಡಾ ಮತ್ತೆ ಚಿತ್ರೀಕರಣದ ಪೆವಿಲಿಯನ್ನಿಗೆ ಮರಳಿದ್ದಾರೆ. ಇಡೀ ತಂಡ ಕೆಲ ತಿಂಗಳಿಂದ ದೂರವಿದ್ದ ಸೆಟ್ಟಿನಲ್ಲಿ ಮತ್ತೆ ಮುಖಾಮುಖಿಯಾಗಿ ಸಂಭ್ರಮಿಸಿದೆ.

    ಕಳೆದ ಬಾರಿ ಕಥೆಯೆಂಬುದೇ ಸಮಯ ಕೇಳುವಂತಿದ್ದುದರಿಂದ ಚಿತ್ರೀಕರಣ ಎರಡು ವರ್ಷಗಳ ಕಾಲ ಮುಂದುವರೆದಿತ್ತು. ಕೆಜಿಎಫ್ ನೋಡಿದ ಪ್ರತಿಯೊಬ್ಬರಿಗೂ ಅಷ್ಟು ಸಮಯ ತೆಗೆದುಕೊಂಡಿದ್ದದ್ದೇಕೆ ಎಂಬುದೂ ತಿಳಿದಿತ್ತು. ಆದರೆ ಈ ಬಾರಿ ಮಾತ್ರ ಪ್ರೇಕ್ಷಕರ ನಿರೀಕ್ಷೆಯನ್ನೂ ಮೀರಿ ಆದಷ್ಟು ಬೇಗನೆ ಚಿತ್ರೀಕರಣ ಮುಗಿಸಲು ಪ್ರಶಾಂತ್ ನೀಲ್ ನೀಲನಕ್ಷೆ ಸಿದ್ಧಪಡಿಸಿಕೊಂಡಿದ್ದಾರೆ.

    ಇದೀಗ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆಯಾದರೂ ಸದ್ಯದಲ್ಲಿಯೇ ಚಿತ್ರತಂಡ ಕರಾವಳಿಯ ಸುಂದರ ತಾಣಗಳತ್ತ ಹೊರಳಿಕೊಳ್ಳಲಿದೆ. ಇದೆಲ್ಲ ಏನೇ ಇದ್ದರೂ ಕೆಜಿಎಫ್ ಚಾಪ್ಟರ್ 2 ಆರಂಭವಾಗಿರೋದೇ ಪ್ರೇಕ್ಷಕರ ಪಾಲಿಗೆ ಶುಭ ಸಮಾಚಾರ.

  • ಇವ್ರು ಯಶ್ ಅಭಿಮಾನಿ-ಒಮ್ಮೆ ಈ ಅಜ್ಜಿಯ ಮಾತುಗಳನ್ನು ಕೇಳಿ

    ಇವ್ರು ಯಶ್ ಅಭಿಮಾನಿ-ಒಮ್ಮೆ ಈ ಅಜ್ಜಿಯ ಮಾತುಗಳನ್ನು ಕೇಳಿ

    – ಕೆಜಿಎಫ್ ನೋಡಲು ಹೋದ ಅಜ್ಜಿಗೆ ಹೀಗೆ ಹೇಳೋದಾ?

    ಬೆಂಗಳೂರು: ಕನ್ನಡದ ಕಿರೀಟ ಅಂತಾನೇ ಪಾತ್ರವಾಗಿರುವ ಕೆಜಿಎಫ್ ಸಿನಿಮಾ ಎಲ್ಲ ವರ್ಗದವರನ್ನು ತಲುಪವಲ್ಲಿ ಯಶಸ್ವಿಯಾಗಿದೆ. ಸಿನಿಮಾ ಬಿಡುಗಡೆಯಾಗಿ ವಾರಗಳೇ ಕಳೆದ್ರೆ ಕೆಜಿಎಫ್ ಫೀವರ್ ಮಾತ್ರ ಕಡಿಮೆಯಾಗುತ್ತಿಲ್ಲ. ಹೊಸ ವರ್ಷದ ಸಂಭ್ರಮದಲ್ಲಿರುವ ಜನರು ಇನ್ನೊಂದು ಸಾರಿ ಕೆಜಿಎಫ್ ನೋಡೋಣ ಎಂದು ಚಿತ್ರಮಂದಿರದತ್ತ ಹೆಜ್ಜೆ ಹಾಕುತ್ತಿದ್ದಾರೆ. ಎರಡೆರಡು ಬಾರಿ ಚಿತ್ರ ನೋಡುವಂತೆ ಕೆಜಿಎಫ್ ಮೋಡಿ ಮಾಡಿದೆ.

    ಹಿರಿಯರು ಸಹ ಚಿತ್ರಮಂದಿರಗಳತ್ತ ತೆರಳಿ ಕೆಜಿಎಫ್ ನೋಡುತ್ತಿದ್ದಾರೆ. ಇದೀಗ ಕೆಜಿಎಫ್ ಸಿನಿಮಾ ನೋಡಿ ಅಜ್ಜಿಯ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಜ್ಜಿಯ ಮುದ್ದು ಮಾತುಗಳಿಗೆ ಮನಸೋಲುವ ನೆಟ್ಟಿಗರು ತಮ್ಮ ಖಾತೆಗಳಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳುತ್ತಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಯಶು, ನನ್ನ ಹೆಸರು ಸಾವಿತ್ರಮ್ಮ, ನನಗೆ 77 ವರ್ಷ ಆಗಿದೆಯಪ್ಪ. ನಿನ್ನ ನೋಡಬೇಕು ಅಂತಾ ತುಂಬಾ ಇಷ್ಟ ಆಯ್ತು. ಸೆಕೆಂಡ್ ಶೋಗೆ ಹೋಗಿ ಕೆಜಿಎಫ್ ಸಿನಿಮಾ ನೋಡಿಕೊಂಡು ಬಂದೆ. ಆದ್ರೆ ಎಲ್ಲರು ನನ್ನನ್ನು ನಕ್ಕು, ಈ ವಯಸ್ಸಾಗಿರೋ ಅಜ್ಜಿಗೆ ಯಾಕೆ ಬೇಕು ಸಿನಿಮಾ ಅಂತಾ ಮಾತಾಡಿಕೊಂಡರು. ಏನೋ ಗೊತ್ತಿಲ್ಲ ನೀನೆಂದ್ರೆ ನನಗಿಷ್ಟ. ನಿನ್ನ ಫೋಟೋ ನೋಡಿ ಕಣ್ತುಂಬಿಕೊಳ್ಳುತ್ತೇನೆ. ನಾನು ಸಾಯೋದರಲ್ಲಿ ನಿನ್ನ ಮುಖ ನೋಡಬೇಕೆಂಬ ಅಸೆ ಇದೆ. ನಿನ್ನ ಧರ್ಮಪತ್ನಿ ರಾಧಿಕಾ ಪಂಡಿತ್ ಪುಣ್ಯ ಮಾಡಿದ್ದಾಳೆ. ನಿನ್ನ ಮಗಳು ಸಹ ಅದೃಷ್ಟವಂತೆ. ದೇವರು ನಿನಗೆ ಒಳ್ಳೆಯದನ್ನು ಮಾಡಲಿ ಅಂತಾ ಪ್ರಾರ್ಥಿಸಿಕೊಳ್ಳುತ್ತೇನೆ ಅಂತಾ ಅಜ್ಜಿ ನಗುಮೊಗದಿಂದ ಹೇಳಿದ್ದಾರೆ.

    ಅಜ್ಜಿ ವಿಡಿಯೋದಲ್ಲಿ ತಮ್ಮ ಹೆಸರು ಹೇಳಿಕೊಂಡಿದ್ದು, ತಾವು ಎಲ್ಲಿಯವರು ಎಂಬುದನ್ನು ಹೇಳಿಕೊಂಡಿಲ್ಲ. ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಹಿರಿಯರನ್ನು ಆಕರ್ಷಿಸಿದ್ದು ಹೇಗೆ ಕೆಜಿಎಫ್?:
    ಈಗ ತೆರೆಕಾಣುತ್ತಿರುವ ಸಿನಿಮಾಗಳು ಸದ್ಯದ ಟ್ರೆಂಡ್‍ನಂತೆ ಮೂಡಿಬರುತ್ತಿವೆ. ಇದು ಹಿರಿಯ ನಾಗರಿಕರಿಗೆ ನೋಡಲು ಮುಜುಗರ ಅನ್ನಿಸುತ್ತಿತ್ತು. ಇನ್ನು ಕೆಲವೊಂದು ಸಿನಿಮಾಗಳು ರಕ್ತಮಯವಾಗಿ, ಹೊಡಿ ಬಡಿ ದೃಶ್ಯಗಳನ್ನೇ ಒಳಗೊಂಡಿರುತ್ತವೆ. ಆದ್ರೆ ಕೆಜಿಎಫ್ ಒಂದು ಭೂಗತ ಲೋಕ, ಗೋಲ್ಡ್ ಮೈನಿಂಗ್ ಜೊತೆಗೆ ಮಾಸ್ ಫಿಲಂ ಆಗಿದ್ದರೂ ಎಲ್ಲಿಯೂ ಕ್ರೌರ್ಯವನ್ನು ಅಥವಾ ರಕ್ತವನ್ನು ಹೆಚ್ಚು ತೋರಿಸಿಲ್ಲ. ನಿರ್ದೇಶಕ ಪ್ರಶಾಂತ್ ನೀಲ್ ಎಲ್ಲವನ್ನು ಹದವಾಗಿ ಬೆರಸಿ ಹಿತವಾದ ಆಹಾರವನ್ನು ನೋಡುಗರಿಗೆ ನೀಡಿದ್ದಾರೆ. 1970-80ರ ಕಾಲಘಟ್ಟವನ್ನು ಮರುಸೃಷ್ಟಿಸಲು ಕಲಾ ನಿರ್ದೇಶಕ ಶಿವುಕುಮಾರ್ ಸಕ್ಸಸ್ ಆಗಿದ್ದು, ನಿರ್ದೇಶಕರ ಕಲ್ಪನೆಯನ್ನು ಛಾಯಾಗ್ರಾಹಕ ಭುವನ್ ಗೌಡ ತೆರೆಯ ಮೇಲೆ ಅಚ್ಚುಕಟ್ಟಾಗಿ ತೋರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭುವನ್ ಗೌಡ ಚಿತ್ರದಿಂದ ಹೊರ ಹೋಗಿಲ್ಲ: ಭರಾಟೆ ಚಿತ್ರ ತಂಡದ ಸ್ಪಷ್ಟೀಕರಣ!

    ಭುವನ್ ಗೌಡ ಚಿತ್ರದಿಂದ ಹೊರ ಹೋಗಿಲ್ಲ: ಭರಾಟೆ ಚಿತ್ರ ತಂಡದ ಸ್ಪಷ್ಟೀಕರಣ!

    ಬೆಂಗಳೂರು: ಭರಾಟೆಯಿಂದ ಛಾಯಾಗ್ರಾಹಕ ಭುವನ್ ಗೌಡ ಹೊರ ಬಂದಿದ್ದಾರೆಂಬ ಸುದ್ದಿ ಮೊನ್ನೆಯಿಂದ ಎಲ್ಲೆಡೆ ಹರಿದಾಡಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿಯೂ ಸುದ್ದಿಗಳು ಸದ್ದಾಗುತ್ತಲೇ ಚಿತ್ರ ತಂಡ ಈ ಬಗ್ಗೆ ಸ್ಪಷ್ಟೀಕರಣವನ್ನೂ ಕೊಟ್ಟಿದೆ.

    ಚಿತ್ರತಂಡವೇ ಖಚಿತ ಪಡಿಸಿರೋ ಮಾಹಿತಿಯ ಪ್ರಕಾರ ಭುವನ್ ಗೌಡ ಭರಾಟೆ ಚಿತ್ರದಿಂದ ಭುವನ್ ಗೌಡ ಹೊರ ಬಿದ್ದಿಲ್ಲ. ಈಗ ರೂಮರುಗಳು ಹುಟ್ಟಿಕೊಂಡಿರುವಂತೆ ಏನೂ ಸಂಭವಿಸಿಲ್ಲ. ಹಾಗಾದರೆ ಈ ಸುದ್ದಿ ಹುಟ್ಟಿಕೊಂಡಿದ್ದೇಕೆ ಎಂಬ ಅನುಮಾನವೂ ಸಹಜವೇ. ಇದಕ್ಕೂ ಕೂಡಾ ಯಾವ ಅನುಮಾನಗಳಿಗೂ ಎಡೆಯಿಲ್ಲದಂತೆ ಚಿತ್ರತಂಡ ಸ್ಪಷ್ಟೀಕರಣ ನೀಡಿದೆ!

    ಭುವನ್ ಗೌಡ ಯಶ್ ಅಭಿನಯದ ಕೆಜಿಎಫ್ ಚಿತ್ರಕ್ಕೂ ಛಾಯಾಗ್ರಹಣ ಮಾಡಿದ್ದಾರಲ್ಲಾ? ಇನ್ನೇನು ಬಿಡುಗಡೆಗೆ ಸಜ್ಜಾಗಿರೋ ಆ ಚಿತ್ರದ ಕೆಲ ಪ್ಯಾಚಪ್ ಕೆಲಸಗಳು ಬಾಕಿ ಇದ್ದವಂತೆ. ಅದನ್ನು ಪೂರ್ತಿಗೊಳಿಸಲು ಮನವಿಯ ಮೇರೆಗೆ ಭುವನ್ ಗೌಡ ತೆರಳಿದ್ದಾರಂತೆ. ಇನ್ನೇನು ಅವರು ಭರಾಟೆ ಚಿತ್ರದ ಚಿತ್ರೀಕರಣಕ್ಕೆ ವಾಪಾಸಾಗಲಿದ್ದಾರಂತೆ.

    ಚಿತ್ರತಂಡವೇ ಕೊಟ್ಟಿರೋ ಈ ಮಾಹಿತಿಯ ಮೂಲಕ ಭರಾಟೆ ಚಿತ್ರದಿಂದ ಭುವನ್ ಗೌಡ ಹೊರ ಬಿದ್ದಿದ್ದಾರೆಂಬ ಸುದ್ದಿಗಳಿಗೆ ಬ್ರೇಕ್ ಬಿದ್ದಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭರಾಟೆ ಚಿತ್ರದಿಂದ ಛಾಯಾಗ್ರಾಹಕ ಭುವನ್ ಔಟ್?

    ಭರಾಟೆ ಚಿತ್ರದಿಂದ ಛಾಯಾಗ್ರಾಹಕ ಭುವನ್ ಔಟ್?

    ಬೆಂಗಳೂರು: ಶ್ರೀಮುರಳಿ ಅಭಿನಯದ ಭರಾಟೆ ಚಿತ್ರಕ್ಕೆ ಚಿತ್ರೀಕರಣ ನಡೆಯುತ್ತಿರೋದು ಗೊತ್ತೇ ಇದೆ. ಚಿತ್ರೀಕರಣ ಶುರುವಾದಂದಿನಿಂದ ಇದುವರೆಗೂ ಈ ಚಿತ್ರದ ಕಡೆಯಿಂದ ಪ್ರೇಕ್ಷಕರಿಗೆ ಹಬ್ಬವಾಗುವಂಥಾದ್ದೇ ಸುದ್ದಿಗಳು, ಬೆಳವಣಿಗೆಗಳು ಜಾಹೀರಾಗುತ್ತಾ ಬಂದಿವೆ. ಆದರೀಗ ಈ ಚಿತ್ರದ ಬಹು ಮುಖ್ಯ ಭಾಗವಾಗಿದ್ದವರೊಬ್ಬರು ಚಿತ್ರತಂಡದಿಂದ ಹೊರಬಿದ್ದ ಸುದ್ದಿ ಬಂದಿದೆ!

    ಉಗ್ರಂ ಚಿತ್ರದ ಮೂಲಕ ಛಾಯಾಗ್ರಾಹಕರಾಗಿಯೂ ಹೆಸರು ಮಾಡಿದ್ದವರು ಭುವನ್ ಗೌಡ. ಆ ನಂತರ ಅವರು ರಥಾವರ ಚಿತ್ರದಲ್ಲಿಯೂ ಶ್ರೀಮುರಳಿಯವರಿಗೆ ಸಾಥ್ ನೀಡಿದ್ದರು. ಇದೀಗ ಭರಾಟೆ ಚಿತ್ರದ ಮೂಲಕ ಭುವನ್ ಮತ್ತು ಶ್ರೀಮುರಳಿ ಕಾಂಬಿನೇಷನ್ ಮೂರನೇ ಸಲ ಒಂದಾಗಿತ್ತು. ಆದರೆ ಒಂದಷ್ಟು ಕಾಲ ಚಿತ್ರೀಕರಣ ನಡೆಸಿದ ನಂತರ ಇದೀಗ ಭುವನ್ ಗೌಡ ಏಕಾಏಕಿ ಈ ಚಿತ್ರದಿಂದ ಹೊರ ಬಂದಿದ್ದಾರೆನ್ನಲಾಗಿದೆ.

    ಛಾಯಾಗ್ರಾಹಕರೊಬ್ಬರು ಚಿತ್ರೀಕರಣ ಶುರುವಾದ ಮೇಲೆ ಹೊರ ಬಂದರೆ ಸಹಜವಾಗಿಯೇ ಅಚ್ಚರಿಯುಂಟಾಗುತ್ತದೆ. ಅದರ ಸುತ್ತ ರೂಮರ್‍ಗಳೂ ಶುರುವಾಗುತ್ತವೆ. ಅಂಥಾದ್ದೇ ಒಂದು ರೂಮರನ್ನು ಆಧರಿಸಿ ಹೇಳೋದಾದರೆ ಭುವನ್ ಗೌಡ ಮತ್ತು ನಿರ್ದೇಶಕ ಚೇತನ್ ಅವರ ನಡುವಿನ ವೈಮನಸ್ಸೇ ಈ ಬೆಳವಣಿಗೆಗೆ ಕಾರಣ ಎಂದೂ ಹೇಳಲಾಗುತ್ತಿದೆ.

    ಇದೆಲ್ಲದರ ಹಿಂದಿರೋ ಅಸಲೀ ವಿಚಾರ ಏನೆಂಬುದನ್ನು ಚಿತ್ರ ತಂಡವೇ ಹೇಳಬೇಕಿದೆ. ಆದರೆ ಭುವನ್ ಗೌಡ ಹೊರ ಬಂದಿರೋ ಸುದ್ದಿ ನಿಜಕ್ಕೂ ಶಾಕಿಂಗ್. ಯಶ್ ನಟಿಸಿರೋ ಕೆಜಿಎಫ್‍ನಂಥಾ ಚಿತ್ರಗಳಿಗೂ ಕ್ಯಾಮೆರಾ ಕಣ್ಣಾಗಿರುವ ಭುವನ್ ಗೌಡ ಬಹು ಬೇಡಿಕೆ ಹೊಂದಿರುವವರು. ಇಂಥವರು ಚಿತ್ರತಂಡದಿಂದ ಹೊರ ಬಿದ್ದ ಘಟನೆಯ ಸುತ್ತ ವಿನಾ ಕಾರಣ ಸುದ್ದಿಗಳು ಹರಡಿಕೊಳ್ಳುವ ಮೊದಲೇ ಚಿತ್ರ ತಂಡ ಇದರ ಹಿಂದಿನ ವಾಸ್ತವ ವಿಚಾರಗಳನ್ನು ಹೊರ ಹಾಕ ಬಹುದೇನೋ…?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv