Tag: ಭುವನೇಶ್ವರ

  • ನೇಣು ಬಿಗಿದ ಸ್ಥಿತಿಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಶವ ಪತ್ತೆ

    ನೇಣು ಬಿಗಿದ ಸ್ಥಿತಿಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಶವ ಪತ್ತೆ

    ಭುವನೇಶ್ವರ: ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

    ಜುಂಪಾ ದೇಬ್ನಾಥ್ ಮೃತ ವಿದ್ಯಾರ್ಥಿನಿ. ಈಕೆ ಮೂಲತಃ ಕೋಲ್ಕತ್ತಾದವಳಾಗಿದ್ದು, ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈಕೆ ಪ್ರೀತಿ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಂಕಿಸಲಾಗಿದೆ.

    ಮೃತ ವಿದ್ಯಾರ್ಥಿನಿಯ ಸ್ನೇಹಿತ ರಾಹುಲ್ ಸಿಂಗ್ ತನ್ನ ಫೋನ್‍ಗೆ ಉತ್ತರಿಸದ ಕಾರಣ ಆಕೆಯ ಹಾಸ್ಟೆಲ್ ಹೊರಗೆ ಬಂದು ಗಲಾಟೆ ಮಾಡಿದ್ದಾನೆ. ಗಲಾಟೆ ಮಾಡುತ್ತಿದ್ದಾಗ ಹಾಸ್ಟೆಲ್ ಮಾಲೀಕ ಬಂದು ವಿಚಾರಿಸಿದ್ದು, ನಂತರ ವಿದ್ಯಾರ್ಥಿನಿಯ ರೂಮಿಗೆ ಹೋಗಿದ್ದಾರೆ. ಅಷ್ಟರಲ್ಲಿ ದುಪ್ಪಟ್ಟದಿಂದ ವಿದ್ಯಾರ್ಥಿನಿ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

    ತಕ್ಷಣ ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ.

    ನಾವು ಅವರ ಕುಟುಂಬದವರಿಗೆ ಮಾಹಿತಿ ನೀಡಿದ್ದೇವೆ. ಸದ್ಯಕ್ಕೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ವಿದ್ಯಾರ್ಥಿನಿಯ ಸಾವಿಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

  • ರಾಷ್ಟ್ರಪತಿಗಳ ಸರಳತೆಗೆ ಸಾಕ್ಷಿಯಾದ ಉತ್ಕಲ್ ವಿಶ್ವವಿದ್ಯಾಲಯ

    ರಾಷ್ಟ್ರಪತಿಗಳ ಸರಳತೆಗೆ ಸಾಕ್ಷಿಯಾದ ಉತ್ಕಲ್ ವಿಶ್ವವಿದ್ಯಾಲಯ

    ಭುವನೇಶ್ವರ: ಸರಳತೆಗೆ ಹೆಸರುವಾಸಿಯಾಗಿರುವ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಇದೀಗ ಶಿಷ್ಟಾಚಾರ ಬದಿಗೊತ್ತಿ ತಮ್ಮ ಸ್ನೇಹಿತನನ್ನು ಮಾತನಾಡಿಸುವ ಮೂಲಕ ಸುದ್ದಿಯಾಗಿದ್ದಾರೆ.

    ಒಡಿಶಾ ಭುವನೇಶ್ವರದ ಉತ್ಕಲ್ ವಿಶ್ವವಿದ್ಯಾಲಯದ ಪ್ಲಾಟಿನಂ ಜ್ಯೂಬಿಲಿ ಕಾರ್ಯಕ್ರಮದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ವೀರಭದ್ರ ಸಿಂಗ್ ಅವರು ಕಂಡಿದ್ದಾರೆ. ಈ ವೇಳೆ ತಮ್ಮ ಸ್ನೇಹವನ್ನು ನೆನೆದು, ಶಿಷ್ಟಾಚಾರವನ್ನು ಬದಿಗೊತ್ತಿ ಹತ್ತಿರದಿಂದಲೇ ಮಾತನಾಡಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಪ್ರೇಕ್ಷಕರ ಸಾಲಿನಲ್ಲಿ ಬಿಳಿ ತುರ್ಬಾನ್ ಧರಿಸಿ ಕುಳಿತಿದ್ದ ಸಿಂಗ್ ಅವರನ್ನು ಕೋವಿಂದ್ ಅವರು ಗುರುತಿಸಿದ್ದಾರೆ. ನಂತರ ಸುಮಾರು 12 ವರ್ಷಗಳ ಹಿಂದಿನ ಸ್ನೇಹವನ್ನು ನೆನೆದಿದ್ದಾರೆ. ಆಗ ಕಾರ್ಯಕ್ರಮ ಮುಗಿದ ನಂತರ ವೇದಿಕೆ ಮೇಲಿದ್ದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸಿಂಗ್ ಅವರನ್ನು ವೇದಿಕೆ ಮೇಲೆ ಕರೆದಿದ್ದಾರೆ. ನಂತರ ಕೋವಿಂದ್ ಹಾಗೂ ಸಿಂಗ್ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಸಿಂಗ್ ಅವರೊಂದಿಗೆ ಕೋವಿಂದ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    ಈ ಕುರಿತು ಸಿಂಗ್ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದು, 12 ವರ್ಷಗಳ ನಂತರ ರಾಷ್ಟ್ರಪತಿ ಕೋವಿಂದ್ ಅವರನ್ನು ಭೇಟಿಯಾದೆ. ಕೋವಿಂದ್ ಅವರೊಂದಿಗೆ ಕಾರ್ಯನಿರ್ವಹಿಸುವ ಅವಕಾಶ ನನಗೆ ಸಿಕ್ಕಿತ್ತು. 2000-2006ರ ನಡುವೆ ನಾವಿಬ್ಬರೂ ರಾಜ್ಯಸಭಾ ಸದಸ್ಯರಾಗಿದ್ದೆವು. ಆ ಸಮಯದಲ್ಲಿ ನಾವಿಬ್ಬರೂ ಎಸ್‍ಸಿ-ಎಸ್‍ಟಿ ಸಮಿತಿಯ ಸದಸ್ಯರಾಗಿದ್ದೆವು. ಕನಿಷ್ಟ ಎರಡು ವರ್ಷಗಳ ಕಾಲ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೇವೆ ಎಂದು ವಿವರಿಸಿದರು.

    ರಾಷ್ಟ್ರಪತಿಗಳಿಗೆ ಗುಲಾಬಿ ನೀಡಿ ಶುಭ ಕೋರಿದೆ. ಶಿಷ್ಟಾಚಾರದ ಹಿನ್ನೆಲೆ ಹೆಚ್ಚು ಸಮಯ ಕಳೆಯಲಾಗಲಿಲ್ಲ. ರಾಷ್ಟ್ರಪತಿ ಭವನಕ್ಕೆ ಬರುವಂತೆ ಕೋವಿಂದ್ ಆಹ್ವಾನಿಸಿದ್ದಾರೆ ಎಂದು ತಿಳಿಸಿದರು. ಸಿಂಗ್ ಅವರು ಮಾಜಿ ಸಂಸದರಾಗಿದ್ದು, ರಾಜ್ಯದಲ್ಲಿ ಸಚಿವರಾಗಿ ಸಹ ಕೆಲಸ ಮಾಡಿದ್ದಾರೆ. ಉತ್ಕಲ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದು, ಇದೇ ವಿಶ್ವವಿದ್ಯಾಲಯದಲ್ಲಿ 1965 ರಿಂದ 1967ರ ವರೆಗೆ ಅಭ್ಯಾಸ ಮಾಡಿದ್ದಾರೆ.

  • ಗುಡಿಸಲಿನಲ್ಲಿ ಆಡುತ್ತಿದ್ದ ಮೂವರು ಬಾಲಕಿಯರು ಸಜೀವ ದಹನ

    ಗುಡಿಸಲಿನಲ್ಲಿ ಆಡುತ್ತಿದ್ದ ಮೂವರು ಬಾಲಕಿಯರು ಸಜೀವ ದಹನ

    ಭುವನೇಶ್ವರ: ಭತ್ತದ ಪೈರಿನ ಕೂಳೆ ತುಂಬಿದ್ದ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅದರೊಳಗೆ ಆಟವಾಡುತ್ತಿದ್ದ ಮೂವರು ಬಾಲಕಿಯರು ಸಾವನ್ನಪ್ಪಿದ ದುರಂತ ಘಟನೆ ಒಡಿಶಾದಲ್ಲಿ ನಡೆದಿದೆ.

    ಶನಿವಾರ ಕಲಹಂಡಿ ಜಿಲ್ಲೆಯ ಬಿಜ್ಮಾರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು 4 ವರ್ಷದ ದಾಜಿ ದಿಶಾರಿ, ರಾಜಿ ದಿಶಾರಿ ಹಾಗೂ ರಚನಾ ರೌತ್ ಎಂದು ಗುರುತಿಸಲಾಗಿದೆ. ದಾಜಿ ಹಾಗೂ ರಾಜಿ ಅವಳಿ ಜವಳಿ ಸಹೋದರಿಯರು. ಮೂವರು ಬಾಲಕಿಯರು ಭತ್ತದ ಪೈರಿನ ಕೂಳೆ ತುಂಬಿಟ್ಟಿದ್ದ ಗುಡಿಸಲಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ಹೊತ್ತಿಹೊಂಡಿದ್ದು, ಗುಡಿಸಲ ಒಳಗಿದ್ದ ಮೂವರು ಬಾಲಕಿಯರು ಬೆಂಕಿ ಕೆನ್ನಾಲಿಗೆಯಲ್ಲಿ ಸುಟ್ಟು ಸಾವನ್ನಪ್ಪಿದ್ದಾರೆ.

    ಗ್ರಾಮದ ಮಹಿಳೆಯೊಬ್ಬರು ಈ ಬಗ್ಗೆ ಮಾತನಾಡಿ, ಗುಡಿಸಲ ಸುತ್ತಮುತ್ತಲು ಚಳಿ ಕಾಯಿಸಲು ಕೆಲವರು ಕಲ್ಲಿದ್ದಲು ಸುಡುತ್ತಿದ್ದರು. ಬಹುಶಃ ಅದರ ಕಿಡಿ ಗುಡಿಸಲಿಗೆ ತಗಲಿ ಬೆಂಕಿ ಹೊತ್ತಿಕೊಂಡಿರಬೇಕು. ಗುಡಿಸಲಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬಾಲಕಿಯರಿಗೆ ಅಲ್ಲಿಂದ ಹೊರಬರಲು ಆಗಲಿಲ್ಲ. ಮಕ್ಕಳ ಕಿರುಚಾಟ ಕೇಳಿ ಸ್ಥಳಿಯರು ಹೋಗಿ ಬೆಂಕಿ ನಂದಿಸುವಷ್ಟರಲ್ಲಿ ಗುಡಿಸಲು ಸಂಪೂರ್ಣ ಸುಟ್ಟು ಭಸ್ಮವಾಗಿತ್ತು.

    ತಕ್ಷಣ ಬಾಲಕಿಯರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಗ್ನಿ ಅವಘಡದಲ್ಲಿ ಬಾಲಕಿಯರ ಶೇ.90ರಷ್ಟು ದೇಹದ ಭಾಗವು ಸುಟ್ಟು ಹೋಗಿತ್ತು. ನಾವು ಅವರನ್ನು ಉಳಿಸಲು ಪ್ರಯತ್ನಿಸಿದೆವು, ಆದರೆ ಚಿಕಿತ್ಸೆ ನೀಡಿದ 1 ಗಂಟೆ ಬಳಿಕ ಮೂವರು ಬಾಲಕಿಯರು ಮೃತಪಟ್ಟರು ಎಂದು ವೈದ್ಯರು ತಿಳಿಸಿದ್ದಾರೆ.

    ಬಾಲಕಿಯರ ಹೆತ್ತವರು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತ ಮಕ್ಕಳು ಗುಡಿಸಲಿನಲ್ಲಿ ಆಟವಾಡುತ್ತಿದ್ದರು. ಆದರೆ ಈ ರೀತಿ ದುರಂತ ಸಂಭವಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ ಎಂದು ಮೃತ ಬಾಲಕಿಯರ ಅಜ್ಜ ಕಣ್ಣಿರಿಟ್ಟಿದ್ದಾರೆ.

    ಸದ್ಯ ಈ ಬಗ್ಗೆ ಮಾಹಿತಿ ತಿಳಿದ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಲ್ಲದೆ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಡಿವೋರ್ಸ್ ಕೊಡದೇ 3ನೇ ಮದ್ವೆಗೆ ತಯಾರಿ – ಮಂಟಪಕ್ಕೆ ಬಂದ 2ನೇ ಪತ್ನಿ

    ಡಿವೋರ್ಸ್ ಕೊಡದೇ 3ನೇ ಮದ್ವೆಗೆ ತಯಾರಿ – ಮಂಟಪಕ್ಕೆ ಬಂದ 2ನೇ ಪತ್ನಿ

    ಭುವನೇಶ್ವರ: ವ್ಯಕ್ತಿಯೊಬ್ಬ ತನ್ನ ಎರಡನೇ ಪತ್ನಿಗೆ ವಿಚ್ಛೇದನ ನೀಡದೆ ಮೂರನೇ ಮದುವೆಯಾಗಲು ಮುಂದಾಗಿದ್ದನು. ಇದೀಗ ಎರಡನೇ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಆತನನ್ನು ಪೊಲೀಸರು ಬಂಧಿಸಿರುವ ಘಟನೆ ಒಡಿಶಾದ ಜೈಪುರ್ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಪಾನಿಕೋಯಿಲಿ ನಿವಾಸಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ 2016ರಲ್ಲಿ ಜೈಪುರ್ ಜಿಲ್ಲೆಯ ಕೋರೆ ಪ್ರದೇಶದ ಮಹಿಳೆಯನ್ನು ಮದುವೆಯಾಗಿದ್ದನು. ನಂತರ ಆರೋಪಿ ತನ್ನ ಮೊದಲ ಪತ್ನಿಗೆ ತಲಾಕ್ ನೀಡಿ, 2017ರಲ್ಲಿ ಜಿಲ್ಲೆಯ ಕಟಿಯಾ ಗ್ರಾಮದ ಇನ್ನೊಬ್ಬ ಮಹಿಳೆಯನ್ನು ವಿವಾಹವಾದನು ಎಂದು ಇನ್ಸ್ ಪೆಕ್ಟರ್ ರಂಜಿತ್ ಕುಮಾರ್ ಮೊಹಂತಿ ತಿಳಿಸಿದ್ದಾರೆ.

    ಎರಡನೇ ಮದುವೆಯಾದ ಕೆಲವೇ ತಿಂಗಳುಗಳ ನಂತರ ಆರೋಪಿ ವಿದೇಶಕ್ಕೆ ಹೋದನು. ಈ ವೇಳೆ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಪತಿ ವಿದೇಶಕ್ಕೆ ಹೋದ ಮೇಲೆ ಪತಿಯ ಮನೆಯವರು ಹೆಚ್ಚಿನ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಕೊನೆಗೆ ಅವರು ನೀಡುತ್ತಿದ್ದ ಕಿರುಕುಳ ಸಹಿಸಲಾಗದೆ, ಆಕೆ ಪೋಷಕರ ಮನೆಗೆ ಹೋಗಿದ್ದು, ಅವರೊಟ್ಟಿಗೆ ವಾಸಿಸುತ್ತಿದ್ದಳು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.


    ನನ್ನ ಪತಿಗೆ ಮನೆಯವರು ಮೂರನೇ ಮದುವೆಗೆ ತಯಾರಿ ಮಾಡಿಕೊಂಡಿದ್ದರು. ನನಗೆ ಈ ಬಗ್ಗೆ ತಿಳಿದು ಮದುವೆ ನಿಲ್ಲಿಸಲು ಹೋಗಿದ್ದೆ. ಆದರೆ ಆತನ ಕುಟುಂಬದವರು ಮತ್ತು ಸಂಬಂಧಿಕರು ನನ್ನ ಜೊತೆ ಅಸಭ್ಯವಾಗಿ ನಡೆದುಕೊಂಡರು. ಕೊನೆಗೆ ನಾನು ಪೊಲೀಸರಿಗೆ ದೂರು ನೀಡಿದೆ. ಆದರೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಬಳಿಕ ನಾನು ಜೈಪುರ್ ದ ಪೊಲೀಸ್ ಅಧೀಕ್ಷಕರ (ಎಸ್‍ಪಿ) ಕಚೇರಿಯ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಮಹಿಳೆ ಹೇಳಿದ್ದಾಳೆ.

    ಕೊನೆಗೆ ಎಸ್‍ಪಿ ನಿರ್ದೇಶನದ ಮೇರೆಗೆ ಕೋರೆ ಪೊಲೀಸರು ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆಯ ದೂರಿನ ಆಧಾರದ ಮೇಲೆ ಪತಿಯ ಜೊತೆ ಆತನ ಕುಟುಂಬದವರನ್ನು ಬಂಧಿಸಿದ್ದಾರೆ.

  • ಮಾರ್ಗಮಧ್ಯೆ ಅಂಬುಲೆನ್ಸ್ ಡೀಸೆಲ್ ಖಾಲಿ- ನರಳಿ ಪ್ರಾಣಬಿಟ್ಟ ಗರ್ಭಿಣಿ

    ಮಾರ್ಗಮಧ್ಯೆ ಅಂಬುಲೆನ್ಸ್ ಡೀಸೆಲ್ ಖಾಲಿ- ನರಳಿ ಪ್ರಾಣಬಿಟ್ಟ ಗರ್ಭಿಣಿ

    ಭುವನೇಶ್ವರ: ಗರ್ಭಿಣಿಯನ್ನ ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಡೀಸೆಲ್ ಖಾಲಿಯಾಗಿ ಮಾರ್ಗಮಧ್ಯದಲ್ಲಿಯೇ ವಾಹನ ನಿಂತುಕೊಂಡಿದೆ. ಪರಿಣಾಮ ಆಸ್ಪತ್ರೆಗೆ ತೆರಳುವ ಮೊದಲೇ ಗರ್ಭಿಣಿ ನರಳಿ ಪ್ರಾಣಬಿಟ್ಟ ಘಟನೆ ಒಡಿಶಾದ ಮಯೂರ್ ಭಂಜ್ ಜಿಲ್ಲೆಯಲ್ಲಿ ನಡೆದಿದೆ.

    ಬುಡಕಟ್ಟು ಸಮುದಾಯಕ್ಕೆ ಸೇರಿದ ತುಳಸಿ(23) ಅವರನ್ನು ಮೊದಲು ಬಂಗಿರಿಪೋಸಿಯ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ದಾಖಲಿಸಲಾಗಿತ್ತು. ಆದರೆ ಅವರ ಪರಿಸ್ಥಿತಿ ಗಂಭೀರವಾಗಿದ್ದ ಕಾರಣಕ್ಕೆ ಗರ್ಭಿಣಿಯನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಕುಟುಂಬಸ್ಥರಿಗೆ ಸಲಹೆ ನೀಡಿದ್ದರು. ಆದ್ದರಿಂದ ಕುಟುಂಬಸ್ಥರು ಗರ್ಭಿಣಿಯನ್ನು ಅಂಬುಲೆನ್ಸ್‌ನಲ್ಲಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ವಾಹನದ ಡೀಸೆಲ್ ಖಾಲಿಯಾಗಿದ್ದು, ಒಂದು ಗಂಟೆಗೂ ಅಧಿಕ ಕಾಲ ನೋವಿನಿಂದ ನರಳಿದ ಗರ್ಭಿಣಿ ಅಂಬುಲೆನ್ಸ್‌ನಲ್ಲೇ ಸಾವನ್ನಪ್ಪಿದ್ದಾರೆ.

    ಈ ವೇಳೆ ಅಂಬುಲೆನ್ಸ್‌ನಲ್ಲಿ ಆಶಾ ಕಾರ್ಯಕರ್ತೆ ಕೂಡ ಇದ್ದರು, ಆದರೆ ಅವರು ಅಸಹಾಯಕ ಸ್ಥಿತಿಯಲ್ಲಿದ್ದರು. ಆದ್ದರಿಂದ ಪತ್ನಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಮೃತ ಗರ್ಭಿಣಿಯ ಪತಿ ಚಿತ್ತರಂಜನ್ ಮುಂಡಾ ತಿಳಿಸಿದ್ದಾರೆ

    ಅಂಬುಲೆನ್ಸ್ ಡೀಸೆಲ್ ಖಾಲಿ ಆಗಿ ನಿಂತ ತಕ್ಷಣ ಬೇರೆ ವಾಹನದ ವ್ಯವಸ್ಥೆ ಮಾಡಿದ್ದರೆ ನನ್ನ ಪತ್ನಿ ಉಳಿಯುತ್ತಿದ್ದಳು. ಆದರೆ ಸುಮಾರು 2 ತಾಸುಗಳ ಬಳಿಕ ಬೇರೆ ಅಂಬುಲೆನ್ಸ್ ವ್ಯವಸ್ಥೆ ಮಾಡಲಾಯಿತು. ಆ ವೇಳೆಗೆ ನನ್ನ ಪತ್ನಿ ಕೊನೆಯುಸಿರು ಎಳೆದಿದ್ದಳು ಎಂದು ಪತಿ ಅಳಲನ್ನು ತೋಡಿಕೊಂಡರು.

    ಅಂಬುಲೆನ್ಸ್‌ನಲ್ಲಿ ಫುಲ್ ಟ್ಯಾಂಕ್ ಡೀಸೆಲ್ ಇತ್ತು. ಆದರೆ ಟ್ಯಾಂಕ್ ಲೀಕ್ ಆಗಿದಕ್ಕೆ ಎಲ್ಲಾ ಡೀಸೆಲ್ ಸೋರಿ ವಾಹನ ಮಾರ್ಗ ಮಧ್ಯೆ ನಿಂತುಕೊಂಡಿತು ಎಂದು ಅಂಬುಲೆನ್ಸ್ ಚಾಲಕ ಹೇಳಿದ್ದಾನೆ. ಸದ್ಯ ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಅಂಬುಲೆನ್ಸ್ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

  • 6ರ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿದ ಆರೋಪಿಗೆ ಮರಣದಂಡನೆ

    6ರ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿದ ಆರೋಪಿಗೆ ಮರಣದಂಡನೆ

    ಭುವನೇಶ್ವರ: 6 ವರ್ಷದ ಬಾಲಕಿಯನ್ನು ಅತ್ಯಾಚಾರಗೈದು, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ ಆರೋಪಿಗೆ ಒಡಿಶಾ ವಿಶೇಷ ಪೋಸ್ಕೋ ನ್ಯಾಯಾಲಯವು ಮರಣದಂಡನೆ ವಿಧಿಸಿದೆ.

    ಕಳೆದ ವರ್ಷ ಅಪರಾಧಿ ಮುಸ್ತಾಕ್ ಒಡಿಶಾದ ಸಲಿಪುರ ಗ್ರಾಮದಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಬಳಿಕ ಕಲ್ಲಿನಿಂದ ಜಜ್ಜಿ ಬಾಲಕಿಯನ್ನು ಕೊಲೆ ಮಾಡಿದ್ದನು. ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ, ಆಕೆಯನ್ನು ಶಾಲೆಯ ಆವರಣಕ್ಕೆ ಕರೆದೊಯ್ದು ಮುಸ್ತಾಕ್ ಅತ್ಯಾಚಾರ ಮಾಡಿದ್ದನು. ಬಳಿಕ ಈ ಬಗ್ಗೆ ಬಾಲಕಿ ಯಾರಿಗಾದರೂ ಹೇಳುತ್ತಾಳೆ ಎಂಬ ಭಯದಿಂದ ಬಾಲಕಿಯ ತಲೆಯನ್ನು ಕಲ್ಲಿನಿಂದ ಜಜ್ಜಿ ಅಮಾನುಷವಾಗಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದನು.

    ಮಗಳು ಮನೆಯಲ್ಲಿ ಕಾಣದಿದ್ದಾಗ ಪೋಷಕರು ಆಕೆಗಾಗಿ ಹುಡುಕಾಟ ನಡೆಸಿದ್ದಾಗ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಾಗ ಆರೋಪಿ ಮುಸ್ತಾಕ್ ಎಂಬುದು ತಿಳಿದುಬಂದು, ಆತನನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ಬಗ್ಗೆ ಒಡಿಶಾದ ವಿಶೇಷ ಪೋಸ್ಕೋ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಗುರುವಾರ ಆರೋಪ ಪ್ರಕರಣ ಸಾಬೀತಾಗಿದ್ದು ನ್ಯಾಯಾಧೀಶರು ಅಪರಾಧಿಗೆ ಮರಣದಂಡನೆ ವಿಧಿಸಿದ್ದಾರೆ.

    ಈ ಬಗ್ಗೆ ಸಂತ್ರಸ್ತ ಬಾಲಕಿಯ ತಾಯಿ ಮಾತನಾಡಿ, ನನ್ನ ಮಗಳ ಸಾವಿಗೆ ಕಾರಣವಾದ ವ್ಯಕ್ತಿಗೆ ಮರಣದಂಡನೆ ಶಿಕ್ಷೆ ನೀಡಿರುವುದು ಖುಷಿಯಾಗಿದೆ. ಇದರಿಂದ ನನ್ನ ಮಗಳ ಸಾವಿಗೆ ನ್ಯಾಯ ಸಿಕ್ಕಿದೆ, ನ್ಯಾಯಾಲಯಕ್ಕೆ ಧನ್ಯವಾದ. ಈ ತೀರ್ಪು ಅತ್ಯಾಚಾರಿಗಳಿಗೆ ಪಾಠವಾಗಲಿದೆ ಎಂದು ಹೇಳಿದ್ದಾರೆ.

    ಪೋಸ್ಕೋ ಕಾಯ್ದೆ ಅನ್ವಯ 12 ವರ್ಷದ ಒಳಗಿನ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದರೆ ಅಪರಾಧಿಗೆ ಮರಣದಂಡನೆ ಶಿಕ್ಷೆ ನೀಡಲಾಗುತ್ತದೆ. ಐಪಿಸಿ ಸೆಕ್ಷನ್ 302(ಕೊಲೆ), 363(ಅಪಹರಣ), 376ಬಿ (12 ವರ್ಷದ ಒಳಗಡೆ ಇರುವ 12 ವರ್ಷದೊಳಗಿನ ಬಾಲಕಿ ಮೇಲೆ ಅತ್ಯಾಚಾರ) ಅಡಿಯಲ್ಲಿ ಮುಸ್ತಾಕ್ ದೋಷಿ ಎಂದು ಕೋರ್ಟ್ ತೀರ್ಪು ಪ್ರಕಟಿಸಿದೆ. ವಾದ, ಪ್ರತಿವಾದ ಹಾಗೂ ಸಾಕ್ಷಿಯ ಆಧಾರದ ಮೇಲೆ ನ್ಯಾಯಾಲಯವು ಆರೋಪಿಯನ್ನು ಅಪರಾಧಿ ಎಂದು ಘೋಷಿಸಿ ಮರಣದಂಡನೆ ವಿಧಿಸಿದೆ.

  • ಪರಿಸರ ಜಾಗೃತಿ ಮೂಡಿಸಲು ಉದ್ಭವಿಸಿದ ಪ್ಲಾಸ್ಟಿಕ್ ಬಾಟಲ್ ವಿಘ್ನೇಶ್ವರ

    ಪರಿಸರ ಜಾಗೃತಿ ಮೂಡಿಸಲು ಉದ್ಭವಿಸಿದ ಪ್ಲಾಸ್ಟಿಕ್ ಬಾಟಲ್ ವಿಘ್ನೇಶ್ವರ

    ಭುವನೇಶ್ವರ: ಪರಿಸರ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ. ಆದರೂ ಕೂಡ ಪರಿಸರ ಉಳಿಸಬೇಕಾದ ನಾವು ಪ್ಲಾಸ್ಟಿಕ್, ಕೆಮಿಕಲ್ ಇನ್ನಿತರ ವಸ್ತುಗಳ ಬಳಕೆ, ವಾಯು ಮಾಲಿನ್ಯ, ಜಲ ಮಾಲಿನ್ಯ ಮಾಡಿ ನಿಸರ್ಗದ ಉಸಿರು ಗಟ್ಟಿಸುತ್ತಿದ್ದೇವೆ. ಆದ್ದರಿಂದ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಪ್ಲಾಸ್ಟಿಕ್‍ನಿಂದ ಹಾಗೂ ಮರಳಿನಲ್ಲಿ ಗಣಪತಿಯನ್ನು ತಯಾರಿಸಿ ಕಲಾವಿದರೊಬ್ಬರು ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

    ಒಡಿಶಾ ಮೂಲದ ಅಂತರಾಷ್ಟ್ರೀಯ ಮಟ್ಟದಲ್ಲಿ ಮರಳು ಕಲಾಕೃತಿ ಮಾಡುವಲ್ಲಿ ಹೆಸರು ಗಳಿಸಿರುವ ಸುದರ್ಶನ್ ಪಟ್ನಾಯಕ್ ಅವರು ಈ ವಿಶೇಷ ಗಣಪನ ಕಲಾಕೃತಿ ಮಾಡಿದ್ದಾರೆ. ಪುರಿ ಬೀಚ್‍ನಲ್ಲಿ ಈ ಅದ್ಭುತ ಗಣಪನ ಕಲಾಕೃತಿಯನ್ನು ಮಾಡಲಾಗಿದೆ. ಬೀಚ್ ಮರಳಿನಲ್ಲಿ ಸಿಕ್ಕ ಸುಮಾರು 1 ಸಾವಿರ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಗಣಪನ ಕಲಾಕೃತಿಯನ್ನು ವಿಶೇಷವಾಗಿ ತಯಾರಿಸಿದ್ದಾರೆ. ಅಲ್ಲದೆ ಅದರ ಮುಂದೆ ಒಮ್ಮೆ ಮಾತ್ರ ಬಳಕೆಗೆ ಬರುವ ಪ್ಲಾಸ್ಟಿಕ್ ಉಪಯೋಗಿಸಬೇಡಿ, ಪರಿಸರವನ್ನು ಉಳಿಸಿ ಎಂದು ಬರೆದು ಒಂದೊಳ್ಳೆ ಸಂದೇಶವನ್ನು ಸಾರಿದ್ದಾರೆ.

    ಪ್ರಧಾನಿ ಮೋದಿ ಅವರ ಏಕ-ಬಳಕೆ ಪ್ಲಾಸ್ಟಿಕ್ ತ್ಯಜಿಸಿ ಅಭಿಯಾನದಿಂದ ಪ್ರೇರಿತರಾಗಿ ಈ ಕಲಾಕೃತಿ ತಯಾರಿಸಿದ್ದೇನೆ ಎಂದು ಪಟ್ನಾಯಕ್ ಹೇಳಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮೋದಿ ಅವರು ರೆಡಿಯೋದಲ್ಲಿ ಪ್ರಸಾರವಾಗುವ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಈ ಅಭಿಯಾದ ಬಗ್ಗೆ ಹೇಳಿದ್ದರು. ಇದನ್ನು ಆಲಿಸಿದ್ದ ಪಟ್ನಾಯಕ್ ಅವರು ಒಂದು ವಿಶೇಷ ಪ್ರಯತ್ನದ ಮೂಲಕ ಸಾರ್ವಜನಿಕರಲ್ಲಿ ಪರಿಸರ ಉಳಿಸಿ ಎಂದು ವಿನಂತಿ ಮಾಡಿದ್ದಾರೆ.

    ಬರೋಬ್ಬರಿ 5 ಟನ್ ಮರಳನ್ನು ಬಳಸಿ ಪಟ್ನಾಯಕ್ ಅವರು 10 ಅಡಿ ಎತ್ತರದ ಗಣೇಶನ ಕಲಾಕೃತಿಯನ್ನು ಮಾಡಿದ್ದಾರೆ. ಅದರ ಸುತ್ತ ಸುಮಾರು 1 ಸಾವಿರ ಪ್ಲಾಸ್ಟಿಕ್ ಬಾಟೆಲ್‍ಗಳನ್ನು ಇರಿಸಿ ಏಕ-ಬಳಕೆ ಪ್ಲಾಸ್ಟಿಕ್ ಬಳಸಬೇಡಿ, ಪರಿಸರ ಉಳಿಸಿ ಎಂದು ಸಂದೇಶವನ್ನು ಕೂಡ ಕಲಾಕೃತಿಯ ಎದುರು ಬರೆದಿದ್ದಾರೆ. ಅದ್ಭುತ ಕಲಾಕೃತಿ ಜೊತೆಗೆ ಪರಿಸರ ಜಾಗೃತಿ ಮೂಡಿಸಿ ಪಟ್ನಾಯಕ್ ಅವರು ಜನರ ಮನ ಗೆದ್ದಿದ್ದಾರೆ.

  • ಪತ್ನಿಯ ತಲೆಯೊಂದಿಗೆ 8 ಕಿ.ಮೀ ನಡ್ಕೊಂಡೇ ಪೊಲೀಸ್ ಠಾಣೆಗೆ ಬಂದ

    ಪತ್ನಿಯ ತಲೆಯೊಂದಿಗೆ 8 ಕಿ.ಮೀ ನಡ್ಕೊಂಡೇ ಪೊಲೀಸ್ ಠಾಣೆಗೆ ಬಂದ

    ಭುವನೇಶ್ವರ: ವ್ಯಕ್ತಿಯೊಬ್ಬ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಲ್ಲದೇ ಆಕೆಯ ತಲೆಯನ್ನು ಕತ್ತರಿಸಿಕೊಂಡು ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದು ಶರಣಾಗಿರುವ ಆಘಾತಕಾರಿ ಘಟನೆ ಒಡಿಶಾ ಪುರಿ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಜಿಲ್ಲೆಯ ರೈಬೆರುವಾನ್ ಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ಗಣೇಶ್ ಬೆಹೆರಾ ಎಂದು ಗುರುತಿಸಲಾಗಿದ್ದು, ಸದ್ಯಕ್ಕೆ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಗಣೇಶ್ ಚೆನ್ನೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ರಜೆ ತೆಗೆದುಕೊಂಡು ಮನೆಗೆ ಬಂದಿದ್ದಾನೆ. ಆಗ ತನ್ನ ಪತ್ನಿ ಅನ್ನಪೂರ್ಣಾ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಅನುಮಾನಿಸುತ್ತಿದ್ದನು. ಈ ವಿಚಾರವಾಗಿ ಆಗಾಗ ಪತ್ನಿಯೊಂದಿಗೆ ಜಗಳವಾಡುತ್ತಿದ್ದನು. ಸೋಮವಾರ ರಾತ್ರಿ ಕೂಡ ಇದೇ ವಿಚಾರಕ್ಕೆ ದಂಪತಿಯ ಮಧ್ಯೆ ವಾಗ್ವಾದ ನಡೆದಿದೆ.

    ಈ ವೇಳೆ ಜಗಳ ವಿಕೋಪಕ್ಕೆ ಹೋಗಿ ಆರೋಪಿ ಗಣೇಶ್ ತನ್ನ ಪತ್ನಿ ಅನ್ನಪೂರ್ಣಾಳ ತಲೆಯನ್ನು ಕತ್ತರಿಸಿದ್ದಾನೆ. ಕೊಲೆ ಮಾಡಿದ ನಂತರ ಆರೋಪಿ ಕತ್ತರಿಸಿದ ತಲೆಯನ್ನು ಬ್ಯಾಗಿನಲ್ಲಿ ತುಂಬಿಕೊಂಡು 8 ಕಿ.ಮೀ. ವರೆಗೂ ನಡೆದುಕೊಂಡು ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

    ಸದ್ಯಕ್ಕೆ ಪೊಲೀಸರು ಆತ ತಂದಿದ್ದ ಬ್ಯಾಗನ್ನು ವಶಪಡಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

  • ವಿಡಿಯೋ ತೋರಿಸಿ ವಿದ್ಯಾರ್ಥಿನಿಗೆ ದೈಹಿಕ ಸಂಕರ್ಪಕ್ಕೆ ಒತ್ತಾಯ

    ವಿಡಿಯೋ ತೋರಿಸಿ ವಿದ್ಯಾರ್ಥಿನಿಗೆ ದೈಹಿಕ ಸಂಕರ್ಪಕ್ಕೆ ಒತ್ತಾಯ

    ಭುವನೇಶ್ವರ: ಕಾಲೇಜು ಹುಡುಗಿಯ ಅಶ್ಲೀಲ ವಿಡಿಯೋವನ್ನು ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

    ಆರೋಪಿ ಯುವಕನನ್ನು ಅಶೋಕ್ ದಾಸ್ ಅಲಿಯಾಸ್ ದೀಪು (27) ಎಂದು ಗುರುತಿಸಲಾಗಿದೆ. ಬಂಧಿತ ಭಲಿಯಾಲಿ ಗ್ರಾಮದ ಕೊಳೆಗೇರಿ ಪ್ರದೇಶದಲ್ಲಿ ವಾಸಿಸುತ್ತಿದ್ದು, ಟ್ವಿನ್ ಸಿಟಿ ಕಮಿಷನರೇಟ್ ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ದೀಪು ಹುಡುಗಿ ಸ್ನಾನ ಮಾಡುವಾಗ ತನ್ನ ಮೊಬೈಲ್ ಕ್ಯಾಮೆರಾದ ಮೂಲಕ ಆಕೆಗೆ ಗೊತ್ತಿಲ್ಲದಂತೆ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದನು. ನಂತರ ಆ ವಿಡಿಯೋ ಕ್ಲಿಪನ್ನು ಹುಡುಗಿಗೆ ತೋರಿಸಿ ಬ್ಲ್ಯಾಕ್‍ಮೇಲ್ ಮಾಡಲು ಶುರು ಮಾಡಿದ್ದನು. ನನ್ನೊಂದಿಗೆ ದೈಹಿಕ ಸಂಬಂಧ ಹೊಂದಬೇಕು ಒತ್ತಾಯಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಶುಕ್ರವಾರ ರಾತ್ರಿ ಆರೋಪಿ ನಿರ್ಜನ ಪ್ರದೇಶದಲ್ಲಿ ಹುಡುಗಿಯನ್ನು ಹಿಡಿದುಕೊಂಡು ಕಿರುಕುಳ ಕೊಟ್ಟಿದ್ದಾನೆ. ನಂತರ ಹುಡುಗಿ ನಡೆದಿರುವ ಘಟನೆಯ ಬಗ್ಗೆ ಕುಟುಂಬದವರಿಗೆ ತಿಳಿಸಿದ್ದಾಳೆ. ತಕ್ಷಣ ಸ್ಥಳೀಯರು ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

  • ಪತಿಯಿಂದ ಪತ್ನಿಯ ಅಶ್ಲೀಲ ಫೋಟೋ, ವಿಡಿಯೋ ಅಪ್ಲೋಡ್

    ಪತಿಯಿಂದ ಪತ್ನಿಯ ಅಶ್ಲೀಲ ಫೋಟೋ, ವಿಡಿಯೋ ಅಪ್ಲೋಡ್

    ಭುವನೇಶ್ವರ: ವ್ಯಕ್ತಿಯೊಬ್ಬ ತನ್ನ ಪತ್ನಿಯ ಅಶ್ಲೀಲ ಫೋಟೋ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿರುವ ಘಟನೆ ಒಡಿಶಾದ ನಯಾಗಾರ್ ಜಿಲ್ಲೆಯಲ್ಲಿ ನಡೆದಿದೆ.

    ಪತ್ನಿ ಈ ಕುರಿತು ನುಗಾಂವ್ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿ ಪತಿ ಪತ್ನಿಯ ಫೋಟೋ ಮತ್ತು ವಿಡಿಯೋಗಳನ್ನು ತನ್ನ ಮೊಬೈಲ್ ಫೋನಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದನು ಎಂದು ತಿಳಿದು ಬಂದಿದೆ.

    ಪತಿ ನನ್ನ ಅಶ್ಲೀಲ ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೆ ಮನೆಯಲ್ಲಿ ಅತ್ತೆ-ಮಾವ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಅವರ ವಿರುದ್ಧ ಸಹ ದೂರು ದಾಖಲಿಸಿದ್ದಾರೆ. ಪತಿ ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

    ಮಹಿಳೆ ನೀಡಿದ ದೂರಿನ ಅನ್ವಯ ನಾವು ತನಿಖೆಯನ್ನು ನಡೆಸುತ್ತಿದ್ದೇವೆ. ಸದ್ಯಕ್ಕೆ ಆತನನ್ನು ಬಂಧಿಸಲು ಶೋಧಕಾರ್ಯ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.