Tag: ಭುವನೇಶ್ವರ

  • ಡ್ಯೂಟಿ ಫಸ್ಟ್, ಮದ್ವೆ ನೆಕ್ಸ್ಟ್ – ಇಬ್ಬರು ಮಹಿಳಾ ಪೊಲೀಸರಿಂದ ಮದ್ವೆ ಮುಂದೂಡಿಕೆ

    ಡ್ಯೂಟಿ ಫಸ್ಟ್, ಮದ್ವೆ ನೆಕ್ಸ್ಟ್ – ಇಬ್ಬರು ಮಹಿಳಾ ಪೊಲೀಸರಿಂದ ಮದ್ವೆ ಮುಂದೂಡಿಕೆ

    ಭುವನೇಶ್ವರ: ಕೊರೊನಾದಿಂದ ಇಡೀ ದೇಶವೇ ಭಯಭೀತವಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ಪೊಲೀಸರು ತಮ್ಮ ಕುಟುಂಬದವರಿಂದ ದೂರ ಉಳಿದು ಜನರ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಒಡಿಶಾದ ಇಬ್ಬರು ಮಹಿಳಾ ಪೊಲೀಸರು ಕೊರೊನಾ ವೈರಸ್ ಹೋರಾಟಕ್ಕಾಗಿ ತಮ್ಮ ಮದುವೆಯನ್ನೇ ಮುಂದೂಡಿಕೆ ಮಾಡಿದ್ದಾರೆ.

    ಕಾನ್‍ಸ್ಟೇಬಲ್ ಸುನೀತಾ ಅಧಾ ಮತ್ತು ಮಹಿಳಾ ಹೋಮ್ ಗಾರ್ಡ್ ತಿಲೋಟಮ್ಮ ಮೆಹರ್ ತಮ್ಮ ವಿವಾಹ ಸಮಾರಂಭವನ್ನು ಮುಂದೂಡಿದ್ದಾರೆ.

    ಕೊರೊನಾ ವೈರಸ್ ಕರ್ತವ್ಯದಿಂದ ಮಹಿಳಾ ಕಾನ್‍ಸ್ಟೇಬಲ್ ಮತ್ತು ಹೋಮ್ ಗಾರ್ಡ್ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಈ ಮೂಲಕ ಇಬ್ಬರು ಮಹಿಳಾ ಪೊಲೀಸರು ಕರ್ತವ್ಯಕ್ಕಾಗಿ ತಮ್ಮ ವೈಯಕ್ತಿಕ ಸಂತೋಷವನ್ನು ತ್ಯಾಗ ಮಾಡಿದ್ದಾರೆ ಎಂದು ಒಡಿಶಾ ಡಿಜಿಪಿ ಅಭಯ್ ಅವರನ್ನು ಶ್ಲಾಘಿಸಿದ್ದಾರೆ.

    ಇಬ್ಬರು ತಮ್ಮ ತಮ್ಮ ಮದುವೆಗಾಗಿ ರಜೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕಳೆದ ವಾರ ಜಿಲ್ಲೆಯಲ್ಲಿ ಕನಿಷ್ಠ ಮೂರು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿವೆ. ಹೀಗಾಗಿ ಇಬ್ಬರೂ ತಮ್ಮ ಮದುವೆಯನ್ನು ಮೂಂದೂಡುವ ಮೂಲಕ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಡಿಜಿಪಿ ಅಭಯ್, “ಕಾನ್‍ಸ್ಟೇಬಲ್ ಸುನೀತಾ ಅಧಾ ಅವರ ಮದುವೆ ಏಪ್ರಿಲ್ 25 ರಂದು ನಿಶ್ಚಯವಾಗಿತ್ತು. ಆದರೆ ಒಡಿಶಾದ ಬಿರ್ಮಿತ್ರಪುರ ಪ್ರದೇಶದಲ್ಲಿ ಡ್ಯೂಟಿ ಮಾಡುವ ಮೂಲಕ ತಮ್ಮ ಮದುವೆಯನ್ನು ಮುಂದೂಡಿದ್ದಾರೆ” ಎಂದು ಹೇಳಿದ್ದಾರೆ.

    ಮತ್ತೊಂದು ಟ್ವೀಟ್ ಮಾಡಿ, “ಮಹಿಳಾ ಹೋಮ್ ಗಾರ್ಡ್ ತಿಲೋಟಮ್ಮ ಮೆಹರ್ ಅವರ ಮದುವೆ ಏಪ್ರಿಲ್ 12 ರಂದು ನಿಗದಿಯಾಗಿತ್ತು. ಆದರೆ ಕೊರೊನಾ ವೈರಸ್ ಕರ್ತವ್ಯಕ್ಕಾಗಿ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಈ ಮೂಲಕ ಇಬ್ಬರು ಮಹಿಳಾ ಪೊಲೀಸರು ತಮ್ಮ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ” ಎಂದು ಡಿಜಿಪಿ ಅಭಯ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಪೊಲೀಸ್ ಠಾಣೆ ಮುಂದೆಯೇ ಮದ್ವೆ- ಅಂತರ ಕಾಯ್ದುಕೊಂಡ ಜೋಡಿ

    ಪೊಲೀಸ್ ಠಾಣೆ ಮುಂದೆಯೇ ಮದ್ವೆ- ಅಂತರ ಕಾಯ್ದುಕೊಂಡ ಜೋಡಿ

    – ವಧು, ವರ ಬಿಟ್ರೆ ಸಂಬಂಧಿಕರೂ ಇರಲಿಲ್ಲ

    ಭುವನೇಶ್ವರ: ಕೊರೊನಾ ವೈರಸ್ ಜಗತ್ತಿನಾದ್ಯಂತ ಜನರ ಜೀವನದ ಮೇಲೆ ಪರಿಣಾಮ ಬೀರಿದೆ. ಇದರಿಂದ ಸಭೆ, ಸಮಾರಂಭ, ಮದುವೆ ಮುಂತಾದ ಕಾರ್ಯಕ್ರಮಗಳು ಕೂಡ ರದ್ದಾಗಿದೆ. ಅನೇಕ ಜೋಡಿಗಳು ಕೊರೊನಾದ ಲಾಕ್‍ಡೌನ್ ಮಧ್ಯೆಯೂ ತಮ್ಮ ಪೋಷಕರ ಸಮ್ಮುಖದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಒಡಿಶಾದಲ್ಲಿ ಜೋಡಿಯೊಂದು ಪೊಲೀಸ್ ಠಾಣೆ ಮುಂದೆಯೇ ಮದುವೆಯಾಗಿದ್ದಾರೆ.

    ಜೋಡಿಯ ಸರಳ ವಿವಾಹದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಧು-ವರ ಇಬ್ಬರೂ ಯಾವುದೇ ಮದುವೆ ಉಡುಪನ್ನು ಧರಿಸದೇ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಅಲ್ಲಿ ಪೊಲೀಸರೇ ಮುಂದೆ ನಿಂತು ಜೋಡಿಗೆ ಮದುವೆ ಮಾಡಿಸಿದ್ದಾರೆ.

    ವಿಶೇಷ ಎಂದರೆ ಹುಡುಗ-ಹುಡುಗಿ ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡು ವಿವಾಹವಾಗಿದ್ದಾರೆ. ತುಂಬಾ ಹತ್ತಿರ ಹೋಗದೆ ಅಂತರ ಕಾಯ್ದುಕೊಂಡು ವರ-ವಧುವಿಗೆ ಮಾಂಗಲ್ಯಧಾರಣೆ ಮಾಡಿದ್ದಾನೆ. ವಿವಾಹದ ಬಳಿಕ ಠಾಣೆಯ ಪೊಲೀಸ್ ಅಧಿಕಾರಿಗಳ ಕಾಲಿಗೆ ಬಿದ್ದು ವಧು-ವರರು ಆಶೀರ್ವಾದ ಪಡೆದುಕೊಂಡಿದ್ದಾರೆ. ನಂತರ ಪೊಲೀಸರು, ಕೆಲವು ಸ್ಥಳೀಯರಿಗೆ ಜೋಡಿ ಸಿಹಿ ಹಂಚಿದ್ದಾರೆ. ಅಲ್ಲದೇ ತಾವೂ ಪರಸ್ಪರ ಸಿಹಿ ತಿನ್ನಿಸಿದ್ದಾರೆ.

    ಈ ಮದುವೆಯಲ್ಲಿ ವಧು-ವರ ಬಿಟ್ಟರೆ ಸಂಬಂಧಿಕರೂ ಕೂಡ ಭಾಗಿಯಾಗಿರಲಿಲ್ಲ. ವಿವಾಹವಾದ ನಂತರ ಪೊಲೀಸರು ಅವರಿಗೆ ಮಾಸ್ಕ್ ನೀಡಿದ್ದಾರೆ. ಬಳಿಕ ನವ ಜೋಡಿ ಮಾಸ್ಕ್ ಧರಿಸಿ ಖುಷಿಯಿಂದ ಮನೆಗೆ ಹೋಗಿದ್ದಾರೆ. ಪೊಲೀಸರ ನೆರವಿನೊಂದಿಗೆ ನಡೆದ ಈ ಮದುವೆ ಕಾರ್ಯಕ್ರಮದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

  • ಒಂದೇ ದಿನ ತೀರಕ್ಕೆ ಬಂದ 72 ಸಾವಿರಕ್ಕೂ ಅಧಿಕ ಕಡಲಾಮೆಗಳು

    ಒಂದೇ ದಿನ ತೀರಕ್ಕೆ ಬಂದ 72 ಸಾವಿರಕ್ಕೂ ಅಧಿಕ ಕಡಲಾಮೆಗಳು

    – ಒಂದು ಗೂಡಿನಲ್ಲಿ 100ಕ್ಕೂ ಅಧಿಕ ಮೊಟ್ಟೆ

    ಭುವನೇಶ್ವರ: ಕೊರೊನಾ ವೈರಸ್ ಭೀತಿಯಿಂದ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ಜನರ ಓಡಾಟ ಇಲ್ಲದಿರುವುದರಿಂದ ಮಾಲಿನ್ಯ ಪ್ರಮಾಣ ತುಂಬಾ ಕಡಿಮೆಯಾಗಿದೆ. ಇತ್ತ ಜನರ ಓಡಾಟದಿಂದ ಕಂಗೆಟ್ಟಿದ್ದ ಪ್ರಾಣಿ-ಪಕ್ಷಿಗಳಿಗೆ ಸ್ವಾತಂತ್ರ ಸಿಕ್ಕಿದ್ದಂತಾಗಿದೆ. ಒಡಿಶಾದ ತೀರವೊಂದರಲ್ಲಿ ಒಂದೇ ದಿನ ಬರೋಬ್ಬರಿ 72 ಸಾವಿರಕ್ಕೂ ಅಧಿಕ ಆಮೆಗಳು ಕಡಲಿಗೆ ಬಂದಿದ್ದವು.

    ಒಡಿಶಾದ ಗಂಜಾಂ ಜಿಲ್ಲೆಯ ರುಶಿಕುಲ್ಯ ಬೀಚ್‍ನಲ್ಲಿ ಒಲಿವ್ ರಿಡ್ಲಿ ಕಡಲಾಮೆಗಳು ಕಳೆದ ಐದು ದಿನಗಳಿಂದ ಆರು ಕಿಲೋಮೀಟರ್ ದೂರದವರೆಗೂ ಬಂದು ವಿಹಾರಿಸುತ್ತಿವೆ. ಈ ಅಪರೂಪದ ಕಡಲಾಮೆಗಳು ರುಶಿಕುಲ್ಯ ಬೀಚ್‍ನಲ್ಲಿ ಒಟ್ಟಾಗಿ ತಮ್ಮ ಗೂಡಿಗೆ ಬರುತ್ತವೆ. ಕೊರೊನಾ ವೈರಸ್‍ನಿಂದ ಲಾಕ್‍ಡೌನ್ ಆದ ಕಾರಣ ಸಾವಿರಾರು ಕಡಲಾಮೆಗಳು ಒಟ್ಟಾಗಿ ಬಂದಿವೆ ಎಂದು ಒಡಿಶಾ ವನ್ಯಜೀವಿ ಸಂಸ್ಥೆ ಹೇಳಿದೆ.

    ಮಾರ್ಚ್ 22 ರಂದು ಮುಂಜಾನೆ ಸುಮಾರು 2 ಗಂಟೆಗೆ 2,000 ಹೆಣ್ಣಾಮೆಗಳು ಬೀಚ್‍ಗೆ ಬರಲು ಶುರುಮಾಡಿದ್ದವು. ಹೆಣ್ಣಾಮೆಗಳು ತಾವು ಹುಟ್ಟಿದ್ದ ಸ್ಥಳಕ್ಕೆ ಬಂದು ಮತ್ತೆ ಮೊಟ್ಟೆಗಳನ್ನಿಡುತ್ತವೆ. ಒಡಿಶಾ ಕಡಲ ತೀರಾ ಆಮೆಗಳಿಗೆ ಅಧಿಕ ಮೊಟ್ಟೆ ಇಡುವ ಸ್ಥಳವಾಗಿದೆ. 2,78,502ಕ್ಕೂ ಹೆಚ್ಚು ಹೆಣ್ಣಾಮೆಗಳು ಏಕಕಾಲಕ್ಕೆ ಮೊಟ್ಟೆಯಿಡಲು ಬಂದಿದ್ದವು. ಅದರಲ್ಲೂ ಮಂಗಳವಾರ ಬೆಳಿಗ್ಗೆ 72,142ಕ್ಕೂ ಹೆಚ್ಚು ಕಡಲಾಮೆಗಳು ತಮ್ಮ ಗೂಡುಗಳಿಗೆ ಬಂದಿದ್ದವು ಎಂದು ಅರಣ್ಯ ಅಧಿಕಾರಿ ಆಮ್ಲಾನ್ ನಾಯಕ್ ಹೇಳಿದ್ದಾರೆ.

    ಆಮೆಗಳು ಮೊಟ್ಟೆ ಇಡಲು ಮಾಡುವ ಪ್ರತಿಯೊಂದು ಗೂಡಿನಲ್ಲೂ ಸುಮಾರು 100ಕ್ಕೂ ಹೆಚ್ಚು ಮೊಟ್ಟೆಗಳಿರುತ್ತವೆ. ಅವುಗಳು ಮರಿಯಾಗಲು 45 ದಿನಗಳ ಕಾಲಾವಧಿಬೇಕು. ಈ ಹಿಂದೆ ತ್ಯಾಜ್ಯಗಳು, ಮಾಲೀನ್ಯದಿಂದ ಆಮೆಗಳು ಮೊಟ್ಟೆ ಇಡಲು ತೀರಕ್ಕೆ ಬರುತ್ತಿರಲಿಲ್ಲ.

    ಈ ವರ್ಷ ಅತಿ ಹೆಚ್ಚು ಆಮೆಗಳು ಕಂಡುಬಂದಿವೆ. ಹಿಂದಿನ ಎರಡು ವರ್ಷಗಳಲ್ಲಿ ಇಷ್ಟೊಂದು ಆಮೆಗಳು ತೀರಕ್ಕೆ ಬಂದಿರಲಿಲ್ಲ. ಹೀಗಾಗಿ ಈ ವರ್ಷ ರುಶಿಕುಲ್ಯ ಕಡಲತೀರದಲ್ಲಿ ಕನಿಷ್ಠ 4.75 ಲಕ್ಷ ಆಮೆಗಳು ಗೂಡಿಗೆ ಬಂದಿವೆ ಎಂದು ಅರಣ್ಯ ಇಲಾಖೆ ಅಂದಾಜಿಸಿದೆ.

    ಮಾರ್ಚ್ 24 ರಿಂದ ದೇಶಾದ್ಯಂತ ಲಾಕ್‍ಡೌನ್ ಆಗಿರುವ ಪರಿಣಾಮ ರುಶಿಕುಲ್ಯ ಬೀಚ್‍ಗೆ ಪ್ರವಾಸಿಗರು ಬರುವುದನ್ನು ನಿರ್ಬಂಧಿಸಲಾಗಿದೆ. ಆದರೆ ಸಂಶೋಧಕರು ಮತ್ತು ಪರಿಸರವಾದಿಗಳಿಗೆ ಆಮೆ ಗೂಡುಕಟ್ಟುವ ಸ್ಥಳಗಳಿಗೆ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಈ ವರ್ಷ ಕಡಲಾಮೆಗಳು ಸುಮಾರು 6 ಕೋಟಿ ಮೊಟ್ಟೆಗಳನ್ನಿಟ್ಟಿವೆ ಎಂದು ಅಂದಾಜಿಸಲಾಗಿದೆ.

    https://twitter.com/_harikrishnan_s/status/1242994351967318016

  • ಅನೈತಿಕ ಸಂಬಂಧಕ್ಕೆ ಒಪ್ಪದ ಪತ್ನಿಗೆ ಬೆಂಕಿ ಹಚ್ಚಿದ

    ಅನೈತಿಕ ಸಂಬಂಧಕ್ಕೆ ಒಪ್ಪದ ಪತ್ನಿಗೆ ಬೆಂಕಿ ಹಚ್ಚಿದ

    – ಮದ್ವೆಯಾಗಿ ಪತ್ನಿ ಇದ್ರೂ ಬೇರೊಬ್ಬಳ ಜೊತೆ ಸಂಬಂಧ
    – ಹೆಂಡ್ತಿಗೆ ಬೆಂಕಿ ಹಚ್ಚಿ ಗ್ರಾಮದಿಂದ ಎಸ್ಕೇಪ್

    ಭುವನೇಶ್ವರ: ಅನೈತಿಕ ಸಂಬಂಧವನ್ನು ವಿರೋಧಿಸಿದ್ದಕ್ಕೆ 45 ವರ್ಷದ ಪತ್ನಿಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಒಡಿಶಾದ ಜಾಜ್‍ಪುರ ಜಿಲ್ಲೆಯಲ್ಲಿ ನಡೆದಿದೆ.

    ನ್ಯೂ ಮಾರ್ಕೆಟ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಮಹಿಳೆ ಶೇ.80 ರಷ್ಟು ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಮಾಹಿತಿ ತಿಳಿದು ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ದೂರು ದಾಖಲಿಸಿಕೊಂಡಿದ್ದಾರೆ. ಇಬ್ಬರ ನಡುವಿನ ಜಗಳದ ನಂತರ ಆರೋಪಿ ತನ್ನ ಹೆಂಡತಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಅದೇ ಪ್ರದೇಶದ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಇದೇ ವಿಚಾರಕ್ಕೆ ಪತಿ ಮತ್ತು ಪತ್ನಿ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಅಷ್ಟೇ ಅಲ್ಲದೇ ಆರೋಪಿ ತನ್ನ ಪತ್ನಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಿಳೆ ಅನೈತಿಕ ಸಂಬಂಧರ ಬಗ್ಗೆ ತನ್ನ ಪತಿಯೊಂದಿಗೆ ಜಗಳ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ತನ್ನ ಪತ್ನಿಯ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಆಕೆಯ ಕಿರುಚಾಟ ಕೇಳಿದ ನೆರೆಹೊರೆಯವರು ಬಂದು ರಕ್ಷಿಸಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸದ್ಯಕ್ಕೆ ಮಹಿಳೆ ಸ್ಥಿತಿ ಗಂಭೀರವಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪತ್ನಿಗೆ ಬೆಂಕಿ ಹಚ್ಚಿ ಆರೋಪಿ ಗ್ರಾಮದಿಂದ ಪರಾರಿಯಾಗಿದ್ದಾನೆ. ಆತನಿಗಾಗಿ ಶೋಧಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಶಿವರಾತ್ರಿ ವಿಶೇಷ – ಪೆನ್ಸಿಲ್ ನಿಬ್ಬಿನಲ್ಲಿ ಮೂಡಿದ ಪುಟಾಣಿ ಶಿವಲಿಂಗ

    ಶಿವರಾತ್ರಿ ವಿಶೇಷ – ಪೆನ್ಸಿಲ್ ನಿಬ್ಬಿನಲ್ಲಿ ಮೂಡಿದ ಪುಟಾಣಿ ಶಿವಲಿಂಗ

    – ಕಲ್ಲಿನಲ್ಲಿ ಅರಳಿದ 0.5 ಇಂಚಿನ ಮಹಾದೇವ

    ಭುವನೇಶ್ವರ: ಶಿವರಾತ್ರಿ ಹಬ್ಬದ ಪ್ರಯುಕ್ತ ಒರಿಸ್ಸಾದ ಹೆಸರಾಂತ ಮಿನಿಯೇಚರ್ ಆರ್ಟಿಸ್ಟ್ ಎಲ್. ಈಶ್ವರ್ ರಾವ್ ಅವರು ಪೆನ್ಸಿಲ್ ನಿಬ್ಬಿನಲ್ಲಿ ಹಾಗೂ ಕಲ್ಲಿನಲ್ಲಿ 0.5 ಇಂಚಿನ ಶಿವಲಿಂಗವನ್ನು ಕೆತ್ತನೆ ಮಾಡಿ ಭಕ್ತಿ ಮೆರೆದಿದ್ದಾರೆ.

    ಈಶ್ವರ್ ರಾವ್ ಅವರು ಒರಿಸ್ಸಾದ ಖುರ್ದಾ ಜಿಲ್ಲೆಯ ಜಟ್ನಿ ಗ್ರಾಮದ ನಿವಾಸಿಯಾಗಿದ್ದು, ಮಿನಿಯೇಚರ್ ಆರ್ಟಿಸ್ಟ್ ಆಗಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಲಾವಿದ, ಶಿವರಾತ್ರಿ ಪ್ರಯುಕ್ತ ಈ ಪುಟಾಣಿ ಶಿವಲಿಂಗವನ್ನು ಮಾಡಿದ್ದೇನೆ. ಸಣ್ಣ ಬಾಟಲಿನಲ್ಲಿ ಮೃದು ಕಲ್ಲಿನಿಂದ 0.5 ಇಂಚಿನ ಶಿವಲಿಂಗವನ್ನು ತಯಾರಿಸಿದ್ದೇನೆ. ಹಾಗೆಯೇ ಪೆನ್ಸಿಲ್ ನಿಬ್ಬಿನಲ್ಲಿ ಕೂಡ 0.5 ಇಂಚಿನ ಶಿವಲಿಂಗ ಮಾಡಿದ್ದೇನೆ ಎಂದರು.

    ಸಣ್ಣ ಬಾಟಲಿಯೊಳಗೆ ಚಿಕ್ಕ ಕಲ್ಲಿನ ಶಿವಲಿಂಗವನ್ನು ತಯಾರಿಸಲು 2 ದಿನ ಸಮಯ ತಗುಲಿತು, ಆದರೆ ಪೆನ್ಸಿಲ್ ನಿಬ್ಬಿನಲ್ಲಿ ಮಾಡಿರುವ ಶಿವಲಿಂಗವನ್ನು ಒಂದು ದಿನದಲ್ಲಿ ತಯಾರಿಸಿದೆ. ಅದರಲ್ಲೂ ಮೃದು ಕಲ್ಲಿನ ಶಿವಲಿಂಗವನ್ನು ಸಣ್ಣ ಬಾಟಲಿಯೊಳಗೆ ಇರಿಸಲು ಸುಮಾರು 4 ಗಂಟೆ ಸಮಯ ಬೇಕಾಯ್ತು. ಇದು ತುಂಬ ಕಷ್ಟಕರ ಕೆಲಸವಾಗಿತ್ತು ಎಂದು ಕಲಾವಿದ ತಿಳಿಸಿದರು.

    ಕಲಾವಿದನ ಕೈಚಳಕದಲ್ಲಿ ಮೂಡಿದ ಪುಟಾಣಿ ಶಿವಲಿಂಗಗಳು ಭಕ್ತರ ಮನ ಗೆದ್ದಿದ್ದು, ಕಲಾವಿದನ ಪ್ರತಿಭೆಗೆ ಸಲಾಂ ಎಂದಿದ್ದಾರೆ. ಈ ಹಿಂದೆ ಕೂಡ ಕಲಾವಿದ ಈಶ್ವರ್ ರಾವ್ ತಮ್ಮ ಕಲೆಯ ಮೂಲಕ ಎಲ್ಲರ ಮನಗೆದ್ದಿದ್ದರು. ಕಳೆದ ವರ್ಷ ಪೆನ್ಸಿಲ್ ಟಿಪ್ ಮೇಲೆ ಹುಣಿಸೆ ಬೀಜದಲ್ಲಿ ಪುರುಷರ ಹಾಕಿ ವಲ್ರ್ಡ್ ಕಪ್ ಅನ್ನು ಕೆತ್ತಿ ಭಾರತ ತಂಡಕ್ಕೆ ಗೌರವ ಸಲ್ಲಿಸಿದ್ದರು. ಅಲ್ಲದೇ ಕ್ರಿಸ್ಮಸ್ ಹಬ್ಬದಂದು ಚರ್ಚ್‍ವೊಂದನ್ನು ಬಾಟಲಿಯೊಳಗೆ ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದರು.

    ಹಾಗೆಯೇ 4ನೇ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮೂರುವರೆ ಇಂಚಿನ ಪ್ರತಿಮೆಯನ್ನು ಕೆತ್ತಿದ್ದರು. ಬಾಟಲಿಯೊಳಗೆ ಸೋಪಿನಲ್ಲಿ ಈ ಕಲಾಕೃತಿಯನ್ನು ಈಶ್ವರ್ ರಾವ್ ಕೆತ್ತಿದ್ದರು.

  • ಆಪರೇಷನ್ ಮುಗಿಸಿ ಹೊರಗೆ ಬರ್ತಿದ್ದಂತೆ ಯುವತಿ ಸಾವು

    ಆಪರೇಷನ್ ಮುಗಿಸಿ ಹೊರಗೆ ಬರ್ತಿದ್ದಂತೆ ಯುವತಿ ಸಾವು

    – ವೈದ್ಯರ ನಿರ್ಲಕ್ಷ್ಯದ ಆರೋಪ

    ಭುವನೇಶ್ವರ: ವೈದ್ಯರ ನಿರ್ಲಕ್ಷ್ಯದಿಂದ ಯುವತಿ ಮೃತಪಟ್ಟಿದ್ದಾಳೆಂದು ಆಕೆ ಸಂಬಂಧಿಕರು ಮತ್ತು ಸ್ಥಳೀಯರು ಪ್ರತಿಭಟನೆ ಮಾಡಿದ್ದು, ಒಡಿಶಾದ ಬೆರ್ಹಾಂಪುರ ಪಟ್ಟಣದ ಖಾಸಗಿ ಆಸ್ಪತ್ರೆಯ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

    ಐಶ್ವರ್ಯ ಸಿಂಗ್ ಡಿಯೋ (24) ಮೃತ ಯುವತಿ. ಮಂಗಳವಾರ ಸಂಜೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಐಶ್ವರ್ಯಳನ್ನ ಗುರುದೇವ್ ಆಸ್ಪತ್ರೆಗೆ ಕುಟುಂಬದವರು ದಾಖಲಿಸಿದ್ದರು. ವೈದ್ಯರು ಪರೀಕ್ಷಿಸಿ ಯುವತಿಗೆ ಅಪೆಂಡಿಕ್ಸ್ ಇದೆ. ಹೀಗಾಗಿ ಆಪರೇಷನ್ ಮಾಡಬೇಕು ಎಂದು ಹೇಳಿದ್ದಾರೆ. ಹಾಗೆಯೇ ವೈದ್ಯರು ಐಶ್ವರ್ಯಗೆ ಆಪರೇಷನ್ ಮಾಡಿದ್ದಾರೆ. ಆದರೆ ಆಪರೇಷನ್ ಥಿಯೇಟರ್ ನಿಂದ ಹೊರಗೆ ಕರೆದುಕೊಂಡು ಬರುವಾಗ ಯುವತಿ ಮೃತಪಟ್ಟಿದ್ದಾಳೆ.

    ನಾವು ಐಶ್ವರ್ಯಾಳನ್ನು ಮಂಗಳವಾರ ಸಂಜೆ 6.30ಕ್ಕೆ ಗುರುದೇವ್ ಆಸ್ಪತ್ರೆಗೆ ದಾಖಲಿಸಿದ್ದೆವು. ಆಗ ಡಾ.ಪ್ರವತ್ ಪಾನಿಗ್ರಾಹಿ ಅಪೆಂಡಿಕ್ಸ್‌ನಿಂದ ಬಳಲುತ್ತಿದ್ದಾಳೆ, ಶಸ್ತ್ರಚಿಕಿತ್ಸೆಗೆ ಮಾಡಬೇಕು ಎಂದು ಹೇಳಿದ್ದರು. ಆದರೆ ವೈದ್ಯರು ಹೆಚ್ಚಿನ ಪ್ರಮಾಣದಲ್ಲಿ ಅರಿವಳಿಕೆ (ಅನಸ್ತೇಷಿಯಾ) ನೀಡಿದ್ದದ್ದಾರೆ. ಹೀಗಾಗಿ ವೈದ್ಯರ ನಿರ್ಲಕ್ಷ್ಯದಿಂದಾಗಿ ಐಶ್ವರ್ಯ ಮೃತಪಟ್ಟಿದ್ದಾಳೆ” ಎಂದು ಮೃತ ಯುವತಿಯ ಸಂಬಂಧಿಯೊಬ್ಬರು ಹೇಳಿದ್ದಾರೆ.

    ಈ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯದ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿರುವುದರಿಂದ ಸರ್ಕಾರವು ಆಸ್ಪತ್ರೆಯ ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ಸಂಬಂಧಿ ಹೇಳಿದ್ದಾರೆ.

    ಎರಡು ತಿಂಗಳ ಹಿಂದೆ ಇದೇ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ರೋಗಿಯೊಬ್ಬ ಸಾವನ್ನಪ್ಪಿದ್ದನು. ಯುವತಿಯ ಸಂಬಂಧಿಕರು ಮತ್ತು ಸ್ಥಳೀಯರಿಂದ ಆಸ್ಪತ್ರೆಯ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಹಣ ವಾಪಸ್ ಕೇಳಿದ್ದಕ್ಕೆ ಮತ್ತೊಬ್ಬನೊಂದಿಗೆ ಸಂಬಂಧ!

    ಹಣ ವಾಪಸ್ ಕೇಳಿದ್ದಕ್ಕೆ ಮತ್ತೊಬ್ಬನೊಂದಿಗೆ ಸಂಬಂಧ!

    – ಮಾಜಿ ಗೆಳತಿಯ ಅಶ್ಲೀಲ ಫೋಟೋ ಅಪ್ಲೋಡ್

    ಭುವನೇಶ್ವರ: ಮಾಜಿ ಗೆಳತಿಯ ಅಶ್ಲೀಲ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಕ್ಕಾಗಿ 27 ವರ್ಷದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಒಡಿಶಾದ ಜಾಜ್‍ಪುರ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿ ಕಾಂತಿಗಾಡಿಯಾ-ಮಲಂದಾಪುರ ಗ್ರಾಮದ ನಿವಾಸಿಯಾಗಿದ್ದು, ಆತನನ್ನು ಶನಿವಾರ ಬಂಧಿಸಲಾಗಿದೆ. 23ರ ಯುವತಿ ಪ್ಯಾನಿಕೋಯಿಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.

    ಏನಿದು ಪ್ರಕರಣ?
    ಆರೋಪಿ ಮತ್ತು ಯುವತಿ ಕಳೆದ ವರ್ಷ ಭೇಟಿಯಾಗಿದ್ದರು. ದಿನ ಕಳೆದಂತೆ ಇಬ್ಬರು ಸಂಬಂಧ ಹೊಂದಿದ್ದರು. ಈ ವೇಳೆ ಆರೋಪಿ ಯುವತಿಯ ಅಶ್ಲೀಲ ಫೋಟೋಗಳನ್ನು ತನ್ನ ಮೊಬೈಲ್ ಫೋನಿನಲ್ಲಿ ಕ್ಲಿಕ್ಕಿಸಿಕೊಂಡಿದ್ದನು. ಆಗ ಆರೋಪಿ ಯುವತಿಯ ಕುಟುಂಬಕ್ಕೆ ಸಾಲ ನೀಡಿದ್ದನು. ತಾನು ಕೊಟ್ಟಿದ್ದ ಹಣವನ್ನು ವಾಪಸ್ ಕೊಡುವಂತೆ ಜನವರಿಯಲ್ಲಿ ಯುವತಿಯ ಬಳಿ ಕೇಳಿಕೊಂಡಿದ್ದಾನೆ. ಹಣ ಕೇಳಿದ ತಕ್ಷಣ ಯುವತಿ ಆತನಿಂದ ದೂರವಾಗಿದ್ದಾಳೆ ಎಂದು ಪ್ರಾಥಮಿಕ ತನಿಖೆಯ ವೇಳೆ ತಿಳಿದು ಬಂದಿದೆ.

    ಅಷ್ಟೇ ಅಲ್ಲದೇ ಯುವತಿ ಇನ್ನೊಬ್ಬ ಪುರುಷನೊಂದಿಗೆ ಸಂಬಂಧವನ್ನು ಹೊಂದಿದ್ದಳು. ಇದರಿಂದ ಕೋಪಗೊಂಡ ಯುವಕ ಕಳೆದ ವಾರ ಯುವತಿಯ ಅಶ್ಲೀಲ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ. ಅಲ್ಲದೇ ತನ್ನ ಸಂಬಂಧಿಕರೊಂದಿಗೆ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾನೆ ಎಂದು ಇನ್ಸ್ ಪೆಕ್ಟರ್ ಅಜಯ್ ಕುಮಾರ್ ತಿಳಿಸಿದ್ದಾರೆ.

    ಸದ್ಯಕ್ಕೆ ಆರೋಪಿಯ ವಿರುದ್ಧ ಐಪಿಸಿ ಸೆಕ್ಸನ್ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

  • ರಾಡ್‍ನಿಂದ ಹೊಡೆದು ಸಹೋದ್ಯೋಗಿಯ ಬರ್ಬರ ಹತ್ಯೆ – ನದಿಯ ಬಳಿ ಸಮಾಧಿ

    ರಾಡ್‍ನಿಂದ ಹೊಡೆದು ಸಹೋದ್ಯೋಗಿಯ ಬರ್ಬರ ಹತ್ಯೆ – ನದಿಯ ಬಳಿ ಸಮಾಧಿ

    – ಶವವನ್ನ ಪ್ಯಾಕ್ ಮಾಡಿ, ಬೈಕಿನಲ್ಲಿ ಹೊತ್ತೊಯ್ದ

    ಭುವನೇಶ್ವರ: ವ್ಯಕ್ತಿಯನ್ನು ಸಹೋದ್ಯೋಗಿಯೇ ಕೊಲೆ ಮಾಡಿ, ನದಿಯ ಬಳಿ ಮೃತದೇಹವನ್ನು ಸಮಾಧಿ ಮಾಡಿರುವ ಘಟನೆ ಒಡಿಶಾದ ಕಟಕ್ ಜಿಲ್ಲೆಯಲ್ಲಿ ನಡೆದಿದೆ.

    ಸೌಮೇಂದ್ರ ಕುಮಾರ್ ಮೃತ ವ್ಯಕ್ತಿ. ಈತ ರೆಂಗಾಲಿಯ ಸಿಮೆಂಟ್ ಕಾರ್ಖಾನೆಯೊಂದರಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದನು. ಮೃತ ಕುಟುಂಬದವರು ಫೆ.3 ರಂದು ಕುಮಾರ್ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ವೇಳೆ ಸಿಮೆಂಟ್ ಕಳ್ಳತನಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಮೃತ ಕುಮಾರ್ ಮತ್ತು ಸಹೋದ್ಯೋಗಿ ಬಿಸ್ವಾಜಿತ್ ಸಾಹು ಇಬ್ಬರ ನಡುವೆ ವಾಗ್ವಾದ ನಡೆದಿದೆ. ಆಗ ಕೋಪಗೊಂಡ ಆರೋಪಿ, ಕುಮಾರ್ ಗೆ ಕಬ್ಬಿಣದ ರಾಡ್‍ನಿಂದ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತನಿಖೆ ವೇಳೆ ಪತ್ತೆ ಹಚ್ಚಿದ್ದಾರೆ.

    ಆರೋಪಿ ಸಾಕ್ಷಿಗಳನ್ನು ನಾಶ ಮಾಡಲು ಕುಮಾರನ ಮೃತದೇಹವನ್ನು ಪ್ಯಾಕ್ ಮಾಡಿ ನದಿಯ ಬಳಿ ಸಮಾಧಿ ಮಾಡಿದ್ದಾನೆ. ತನಿಖೆ ವೇಳೆ ಮೃತದೇಹವನ್ನು ಬೈಕಿನಲ್ಲಿ ಆರೋಪಿ ಸಾಹು ತೆಗೆದುಕೊಂಡು ಹೋಗಿರುವುದು ಸಿಸಿಟಿವಿ ಕ್ಯಾಮೆರಾ ಸೆರೆಯಾಗಿದೆ. ತಕ್ಷಣ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡಿದ್ದಾರೆ.

    ಆರೋಪಿ ಸಾಹು ವಿಚಾರಣೆ ವೇಳೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಕುಮಾರ್ ಮೃತದೇಹವನ್ನು ಸಮಾಧಿ ಮಾಡಿರುವ ಸ್ಥಳಕ್ಕೆ ಆರೋಪಿಯನ್ನು ಕರೆದುಕೊಂಡು ಹೋಗಿ ಶವವನ್ನು ಹೊರತೆಗೆಯಲಾಗಿದೆ. ಸದ್ಯಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಅಪ್ರಾಪ್ತೆ ಮೇಲೆ 2 ದಿನ ಗ್ಯಾಂಗ್‍ರೇಪ್ ಎಸಗಿ ಮನೆಯ ಬಳಿ ಎಸೆದು ಹೋದ್ರು!

    ಅಪ್ರಾಪ್ತೆ ಮೇಲೆ 2 ದಿನ ಗ್ಯಾಂಗ್‍ರೇಪ್ ಎಸಗಿ ಮನೆಯ ಬಳಿ ಎಸೆದು ಹೋದ್ರು!

    – ಆರೋಪಿಗಳಿಬ್ಬರ ಬಂಧನ

    ಭುವನೇಶ್ವರ: ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಗಂಜಾಂ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿರುವ ಘಟನೆ ಒಡಿಶಾದ ಬೆರ್ಹಾಂಪುರ ಜಿಲ್ಲೆಯಲ್ಲಿ ನಡೆದಿದೆ.

    ಜನಾರ್ಧನ್ ಬೆಹೆರಾ ಮತ್ತು ಮಿಥುನ್ ದಾಸ್ ಬಂಧಿತ ಆರೋಪಿಗಳು. ಜನವರಿ 10 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತೆ ನದಿಯ ಬಳಿ ಹೋಗುತ್ತಿದ್ದಾಗ ಆರೋಪಿಗಳಿಬ್ಬರು ಮಾತನಾಡಿಸಿದ್ದಾರೆ. ನಂತರ ಸಂತ್ರಸ್ತೆಯನ್ನು ಸ್ಕಾರ್ಫ್ ನಿಂದ ಕಟ್ಟಿ ಮತ್ತು ಬರುವ ಔಷಧಿಯನ್ನು ಮಿಕ್ಸ್ ಮಾಡಿರುವ ಜ್ಯೂಸ್ ಕುಡಿಯುವಂತೆ ಒತ್ತಾಯಿಸಿದ್ದಾರೆ.

    ಸಂತ್ರಸ್ತೆ ಜ್ಯೂಸ್ ಕುಡಿದ ನಂತರ ಪ್ರಜ್ಞೆ ತಪ್ಪಿದ್ದಾಳೆ. ಬಳಿಕ ಆರೋಪಿಗಳಿಬ್ಬರೂ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೆ ಸಂತ್ರಸ್ತೆಯನ್ನು ನಿರ್ಜನ ಪ್ರದೇಶದಲ್ಲಿ ಎರಡು ದಿನಗಳ ಕಾಲ ಇರಿಸಿಕೊಂಡು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

    ಎರಡು ದಿನದ ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂತ್ರಸ್ತೆಯನ್ನು ಆಕೆಯ ಮನೆಯ ಬಳಿ ಎಸೆದು ಅಲ್ಲಿಂದ ಪರಾರಿಯಾಗಿದ್ದಾರೆ. ಸಂತ್ರಸ್ತೆಯನ್ನು ನೋಡಿದ ಕುಟುಂಬದವರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.

    ಪೊಲೀಸರು ಐಪಿಸಿ ಮತ್ತು ಪೋಕ್ಸೋ ಕಾಯ್ದೆಯಡಿ ಆರೋಪಿಗಳಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

  • ಚಲಿಸ್ತಿದ್ದ ರೈಲಿನ ಮುಂದೆ ಹಾರಿ ಯುವಕ ಆತ್ಮಹತ್ಯೆ- ಸಾಯೋ ಮುನ್ನ ವಿಡಿಯೋ ರೆಕಾರ್ಡ್

    ಚಲಿಸ್ತಿದ್ದ ರೈಲಿನ ಮುಂದೆ ಹಾರಿ ಯುವಕ ಆತ್ಮಹತ್ಯೆ- ಸಾಯೋ ಮುನ್ನ ವಿಡಿಯೋ ರೆಕಾರ್ಡ್

    – ಯಾರನ್ನೂ ಹೃದಯದಿಂದ ಪ್ರೀತಿಸ್ಬೇಡಿ ಎಂದ

    ಭುವನೇಶ್ವರ: ಲವ್ ಫೇಲ್ಯೂರ್ ಆಗಿದ್ದಕ್ಕೆ ಯುವಕನೊಬ್ಬ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಒಡಿಶಾದ ಕಟಕ್‍ನಲ್ಲಿ ನಡೆದಿದೆ.

    ಮೃತ ಯುವಕನನ್ನು ರೌಸಾ ಪಾಟ್ನಾ ನಿವಾಸಿ ಮನೋಜ್ ಸ್ವೈನ್ ಎಂದು ಗುರುತಿಸಲಾಗಿದೆ. ಯುವಕ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ಮೊಬೈಲ್ ಫೋನಿನಲ್ಲಿ ವಿಡಿಯೋವನ್ನು ರೆಕಾರ್ಡ್ ಮಾಡಿದ್ದು, ವಿಡಿಯೋದಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಕಾರಣ ಏನೆಂಬುದನ್ನು ತಿಳಿಸಿದ್ದಾನೆ.

    ಮೃತ ಮನೋಜ್ ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿಡಿಯೋದಲ್ಲಿ ತಿಳಿಸಿದ್ದಾನೆ. ಮನೋಜ್ ಸುಮಾರು ಮೂರು ವರ್ಷಗಳಿಂದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಇತ್ತೀಚೆಗೆ ಆಕೆ ಬೇರೆ ಯುವಕನನ್ನು ಪ್ರೀತಿಸುತ್ತಿದ್ದು, ಕಳೆದ ವರ್ಷ ಡಿಸೆಂಬರ್ ನಲ್ಲಿ ಆತನೊಂದಿಗೆ ಮದುವೆ ಕೂಡ ನಿಗದಿಪಡಿಸಲಾಗಿದೆ ಎಂದು ತಿಳಿದು ಬಂದಿದೆ.

    “ನಾನು ಅವಳ ಜೊತೆ ಮಾತನಾಡಲು ಕರೆದೆ. ಆದರೆ ಆಕೆ, ನನಗೆ ನಮ್ಮ ಜಾತಿಯ ಹುಡುಗನ ಜೊತೆ ಮದುವೆ ಫಿಕ್ಸ್ ಆಗಿದೆ. ಹೀಗಾಗಿ ನೀನು ನನ್ನನ್ನು ಮರೆಯಬೇಕು ಎಂದು ಕೇಳಿಕೊಂಡಳು. ಅಷ್ಟೇ ಅಲ್ಲದೇ ನೀನು ಯಾರು ಎಂದು ನನಗೆ ಗೊತ್ತಿಲ್ಲ. ನನ್ನ ಜೀವನದಿಂದ ದೂರ ಹೋಗು ಎಂದು ನನ್ನನ್ನು ಕೇಳಿಕೊಂಡಳು. ಅದಕ್ಕಾಗಿಯೇ ನಾನು ನನ್ನ ಜೀವನವನ್ನು ಮುಗಿಸುತ್ತಿದ್ದೇನೆ” ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

    ಕೊನೆಗೆ “ಯಾರನ್ನೂ ಹೃದಯದಿಂದ ತುಂಬಾ ಪ್ರೀತಿಸಬೇಡಿ” ಎಂದು ಮನೋಜ್ ಮನವಿ ಮಾಡಿಕೊಂಡಿದ್ದಾನೆ. ನಂತರ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಯ ಬಗ್ಗೆ ಮಾಹಿತಿ ಪಡೆದ ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಅಧಿಕಾರಿಗಳು ಆತ್ಮಹತ್ಯೆ ಸ್ಥಳದಲ್ಲಿ ಒಂದು ಪತ್ರವನ್ನು ಸಹ ವಶಪಡಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.