Tag: ಭುವಣೇಶ್ವರ

  • ಆಪರೇಷನ್ ಗುರುಗ್ರಾಮ ಬಳಿಕ ಬಿಜೆಪಿಯಿಂದ ಆಪರೇಷನ್ ಒಡಿಶಾ!

    ಆಪರೇಷನ್ ಗುರುಗ್ರಾಮ ಬಳಿಕ ಬಿಜೆಪಿಯಿಂದ ಆಪರೇಷನ್ ಒಡಿಶಾ!

    – ಬಿಜೆಪಿಯಿಂದ ಫೈನಲ್ ರೆಸಾರ್ಟ್ ರಾಜಕೀಯ!
    – ಸರ್ಕಾರ ಉರುಳಿಸುವ ಕೊನೆಯ ಪ್ರಯತ್ನ

    ಬೆಂಗಳೂರು: ಮೈತ್ರಿ ಸರ್ಕಾರ ಉರುಳಿಸಲು ಗುರುಗ್ರಾಮ ರೆಸಾರ್ಟಿನಲ್ಲಿ ರೂಪಿಸಲಾಗಿದ್ದ ಆಪರೇಷನ್ ಕಮಲ ವಿಫಲವಾದ ಬೆನ್ನಲ್ಲೇ ಮತ್ತೆ ಒಡಿಶಾ ಆಪರೇಷನ್ ಪ್ಲಾನ್ ಅನ್ನು ಬಿಜೆಪಿ ರೂಪಿಸಿದೆ.

    ಸಂಕ್ರಾಂತಿ ಆಪರೇಷನ್ ವಿಫಲವಾಗಿದ್ದರಿಂದ ಬಿಜೆಪಿ ನಾಯಕರು `ಮೌನ ಕ್ರಾಂತಿ’ ಆರಂಭಿಸಿದ್ದಾರೆ. ಈ ಮೂಲಕ ಮಹಾರಾಷ್ಟ್ರ ಹಾಗೂ ಗುರುಗ್ರಾಮ ಕೈಬಿಟ್ಟು ಒಡಿಶಾ ರಾಜಧಾನಿ ಭುವನೇಶ್ವರನಲ್ಲಿ ಆಪರೇಷನ್ ನಡೆಸಲು ಮುಂದಾಗಿದೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಕಾಂಗ್ರೆಸ್‍ನ ಅತೃಪ್ತರು ಶಾಸಕರು ಮತ್ತೆ ಬಿಜೆಪಿ ತೆಕ್ಕೆಗೆ ಸಿಕ್ಕಿದ್ದಾರೆ. ಹೀಗಾಗಿ ಅವರನ್ನು ಭುವನೇಶ್ವರ್ ರೆಸಾರ್ಟಿಗೆ ಶಿಫ್ಟ್ ಮಾಡಲು ಪ್ಲಾನ್ ಮಾಡಲಾಗಿದೆ. ಈ ನಿಟ್ಟಿನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆ ಹಲವು ಶಾಸಕರು ಮುಂಬೈನಿಂದ ಭುವನೇಶ್ವರ ರೆಸಾರ್ಟಿಗೆ ಹಾರಲಿದ್ದಾರೆ. ಇತ್ತ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರು ಕೂಡ ಮತ್ತೆ ಕ್ಷೇತ್ರದಿಂದ ನಾಪತ್ತೆಯಾಗಿದ್ದು ಇವರು ಭುವನೇಶ್ವರಗೆ ಹೋಗಲಿದ್ದಾರೆ ಎನ್ನಲಾಗಿದೆ.

    ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ನಾಗೇಂದ್ರ ಅವರು ಕೂಡ ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ನಾಯಕರ ಕೈಗೆ ಸಿಗುತ್ತಿಲ್ಲ. ಅಷ್ಟೇ ಅಲ್ಲದೆ ಸಿಎಲ್‍ಪಿ ಸಭೆಗೂ ಗೈರಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದರು. ಹೀಗಾಗಿ ನಾಗೇಂದ್ರ ಅವರು ಭುವನೇಶ್ವರ್ ರೆಸಾರ್ಟಿಗೆ ಹೋಗಲಿದ್ದಾರೆ ಎನ್ನಲಾಗಿದೆ. ಇತ್ತ ಕಂಪ್ಲಿ ಶಾಸಕ ಗಣೇಶ್ ಕೂಡ ಬಿಜೆಪಿ ಸೇರುವ ಬಗ್ಗೆ ಚರ್ಚೆ ನಡೆಯುತ್ತಿದೆ.

    ಆಪರೇಷನ್ ಭುವನೇಶ್ವರ ಮೂಲಕ ಫೆಬ್ರವರಿ 8ರಂದು ನಡೆಯುವ ಬಜೆಟ್ ಅಧಿವೇಶದ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಲು ಪ್ಲಾನ್ ಅನ್ನು ಬಿಜೆಪಿ ಸಿದ್ಧಪಡಿಸಿದೆ. ಅಷ್ಟೇ ಅಲ್ಲದೆ ಇದೇ ಅಂತಿಮ ಪ್ರಯತ್ನ. ಇದರಲ್ಲಿ ಯಶಸ್ವಿಯಾಗಬೇಕು ಎಂದು ಪಕ್ಷದ ನಾಯಕರು ಶಪಥ ಮಾಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv