Tag: ಭೀಮಾ ನಾಯ್ಕ್

  • ಕಾಂಗ್ರೆಸ್‌ನಲ್ಲೇ ಒಳ ರಾಜಕಾರಣ| ತಗ್ಗಿದ ಭೀಮಾನಾಯ್ಕ್ ಬಲ- ರಾಘವೇಂದ್ರಗೆ ರಾಬಕೊವಿ ಫಲ

    ಕಾಂಗ್ರೆಸ್‌ನಲ್ಲೇ ಒಳ ರಾಜಕಾರಣ| ತಗ್ಗಿದ ಭೀಮಾನಾಯ್ಕ್ ಬಲ- ರಾಘವೇಂದ್ರಗೆ ರಾಬಕೊವಿ ಫಲ

    – ಅವಿರೋಧವಾಗಿ ಹಿಟ್ನಾಳ್ ಆಯ್ಕೆ
    – ಧಮ್ಮು ತಾಕತ್ತು ಏನೆಂದು ತೋರಿಸಿದ್ದೇನೆ
    – ಹಾಲು ಒಕ್ಕೂಟದ ಕಚೇರಿಗೆ ಬಾರದ ಭೀಮಾನಾಯ್ಕ್‌

    ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ(ರಾಬಕೊವಿ) ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನ ನಿರೀಕ್ಷೆಯಂತೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ (Raghavendra Hitnal) ಪಾಲಾಗಿದೆ.

    ಕಳೆದ ಎಂಟು ವರ್ಷಗಳಿಂದ ರಾಬಕೊವಿ ಹಾಗೂ ಐದು ವರ್ಷ ರಾಜ್ಯ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಮಾಜಿ ಶಾಸಕ ಭೀಮಾನಾಯ್ಕ್ (Bheema Naik) ಈ ಬಾರಿಯೂ ಅಧ್ಯಕ್ಷ ಸ್ಥಾನ ಅಲಂಕರಿಸುವ ವಿಶ್ವಾಸದಲ್ಲಿದ್ದರು. ಆದರೆ ಅಧ್ಯಕ್ಷರಾಗಲು ಬೇಕಿರುವ ನಿರ್ದೇಶಕರ ಸಂಖ್ಯಾಬಲ ಇಲ್ಲದ ಕಾರಣ ಕೆಎಂಫ್ ಮೇಲಿನ ಅವರ ಭೀಮಬಲವನ್ನು ಕುಸಿಯುವಂತೆ ಮಾಡಿತು.

    ಕೊನೆಗಳಿಗೆವರೆಗೂ ಕೆಲವು ನಿರ್ದೇಶಕರು ಅವರ ಪರ ಬರಬಹುದು ಎನ್ನುವ ಕಾರಣಕ್ಕೆ ಬಳ್ಳಾರಿವರೆಗೂ ಬಂದಿದ್ದ ಭೀಮಾನಾಯ್ಕ್ ರಾಬಕೊವಿ ಹಾಲು ಒಕ್ಕೂಟದ ಕಚೇರಿವರೆಗೂ ಬರಲಿಲ್ಲ. ಅಲ್ಲದೇ ಬಳ್ಳಾರಿ ಸೇರಿ ಕೊಪ್ಪಳ, ರಾಯಚೂರು ಜಿಲ್ಲೆಯ ಕಾಂಗ್ರೆಸ್ (Congress0 ನಾಯಕರ ಒಳ ರಾಜಕಾರಣ ಭೀಮಾನಾಯ್ಕ್‌ಗೆ ಭಾರೀ ಮುಖಭಂಗವನ್ನುಂಟು ಮಾಡಿತು. ರಾಬಕೊವಿ ಅಧ್ಯಕ್ಷ ಸ್ಥಾನ ಅಲಂಕರಿಸಬೇಕು ಎನ್ನುವ ಲೆಕ್ಕಚಾರವನ್ನೇ ಬುಡಮೇಲು ಮಾಡಿತು. ಇದೇ ಕಾರಣಕ್ಕೆ ಒಕ್ಕೂಟದ ಕಚೇರಿಗೂ ಕಾಲಿಡದ ಭೀಮಾನಾಯ್ಕ್ ಖಾಸಗಿ ಹೋಟೆಲ್‌ನಲ್ಲಿ ಉಳಿದು ವಾಪಸ್‌ ಸ್ವಕ್ಷೇತ್ರಕ್ಕೆ ಮರಳಿದರು. ಇದನ್ನೂ ಓದಿ: ಒಡಿಶಾ | ಅರಣ್ಯ ಅಧಿಕಾರಿ ಮನೆ ಮೇಲೆ ವಿಜಿಲೆನ್ಸ್ ದಾಳಿ – ಸಂಪತ್ತಿನ ಖಜಾನೆ ಪತ್ತೆ!

    8 ಜನರ ಬೆಂಬಲ:
    ರಾಬಕೊವಿ ಹಾಲು ಒಕ್ಕೂಟಕ್ಕೆ ಒಟ್ಟು 12 ನಿರ್ದೇಶಕ ಸ್ಥಾನಗಳಿದ್ದು, 1 ಸರ್ಕಾರಿ ನಾಮ ನಿರ್ದೇಶನ, 5 ಸರ್ಕಾರಿ ಅಧಿಕಾರಿಗಳ ವೋಟ್‌ಗಳಿವೆ. ಆದರೆ ಚುನಾಯಿತ 12 ನಿರ್ದೇಶಕರ ಪೈಕಿ 7 ನಿರ್ದೇಶಕರು, ರಾಘವೇಂದ್ರ ಹಿಟ್ನಾಳ್ ಪರ ಮತ್ತು 5 ನಿರ್ದೇಶಕರು ಭೀಮಾನಾಯ್ಕ್ ಪರ ಇದ್ದರು. ರಾಘವೇಂದ್ರ ಹಿಟ್ನಾಳ್‌ರನ್ನು ನಾಮನಿರ್ದೇಶನ ಸದಸ್ಯರಾಗಿ ಸರ್ಕಾರ ನೇಮಕ ಮಾಡಿದ್ದರಿಂದ ಹಿಟ್ನಾಳ್ ಸದಸ್ಯ ಬಲ 8ಕ್ಕೆ ಏರಿಕೆಯಾಯಿತು. ಹೀಗಾಗಿ ಬಹುಮತ ಇಲ್ಲ ಎನ್ನುವ ಸುಳಿವು ಅರಿತು ಭೀಮಾನಾಯ್ಕ್ ನಾಮಪತ್ರ ಸಲ್ಲಿಸಲು ಆಗಮಿಸಲೇ ಇಲ್ಲ. ಇದೇ ಕಾರಣಕ್ಕೆ ರಾಬಕೊವಿಗೆ ರಾಘವೇಂದ್ರ ಹಿಟ್ನಾಳ್ ಅನಾಯಸವಾಗಿ, ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು.

    ಒಳ ರಾಜಕಾರಣದ ಪೆಟ್ಟು:
    ರಾಘವೇಂದ್ರ ಹಿಟ್ನಾಳ್ ರಾಬಕೊವಿ ಅಧ್ಯಕ್ಷರಾಗಿ ಆಯ್ಕೆಯಾಗುವುದರ ಹಿಂದೆ ನಾಲ್ಕು ಜಿಲ್ಲೆಗಳ ಒಳ ರಾಜಕಾರಣ ಕೆಲಸ ಮಾಡಿದೆ. ವಿಶೇಷವಾಗಿ ಬಳ್ಳಾರಿ, ಕೊಪ್ಪಳದಲ್ಲಿನ ಕೆಲವು ಕಾಂಗ್ರೆಸ್ ಮುಖಂಡರು ಹಾಗೂ ಸ್ವತಃ ಕಾಂಗ್ರೆಸ್‌ನವರೇ ಗುನ್ನಾ ಇಟ್ಟಿದ್ದಾರೆ. ಇತ್ತೀಚೆಗೆ ಭೀಮಾನಾಯ್ಕ್ ಅಖಂಡ ಬಳ್ಳಾರಿ ಜಿಲ್ಲೆಯ ಯಾವ ಶಾಸಕರನ್ನು ವಿಶ್ವಾಸಕ್ಕೆ ಪಡೆಯಲಿಲ್ಲ. ಮಂತ್ರಿಯಂತೆ ವರ್ತಿಸುವ ಸ್ವಭಾವ ಭೀಮಾನಾಯ್ಕ್‌ಗೆ ತಿರುಗುಬಾಣವಾಗಿದೆ. ಇದಕ್ಕೆ ಪುಷ್ಟಿ ಎನ್ನುವಂತೆ ರಾಬಕೊವಿ ಅಧ್ಯಕ್ಷರಾಗಲು ಬಂದ ಕೊಪ್ಪಳ ಶಾಸಕ ಹಿಟ್ನಾಳ್ ಮತ್ತು ಅವರ ಬೆಂಬಲಿಗರಿಗೆ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರೇ ಅತಿಥ್ಯ ಕಲ್ಪಿಸಿದ್ದು ಕಂಡು ಬಂತು. ಇದನ್ನೂ ಓದಿ: 15 ವರ್ಷದಿಂದ ನಡೆಯುತ್ತಿದೆ ಬಳ್ಳಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ- ತಲೆ ಕೆಡಿಸಿಕೊಳ್ಳದ ಜನಪ್ರತಿನಿಧಿಗಳು

    ಅವಿರೋಧ ಆಯ್ಕೆ:
    ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಹಾಲು ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಾಸಕ ರಾಘವೇಂದ್ರ ಹಿಟ್ನಾಳ್, ಉಪಾಧ್ಯಕ್ಷರಾಗಿ ಎನ್.ಸತ್ಯನಾರಾಯಣ ಅವಿರೋಧವಾಗಿ ಆಯ್ಕೆಯಾದರು.

    ಚುನಾವಣೆ ನಿಗದಿಯಂತೆ ಬೆಳಗ್ಗೆ 10 ಗಂಟೆಗೆ ಹಾಲು ಒಕ್ಕೂಟದ ಕಚೇರಿಯಲ್ಲಿ ಚುನಾವಣೆ ಅಧಿಕಾರಿ ಇರುವ ಕೊಠಡಿಗೆ ಆಗಮಿಸಿದ ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷ ಸ್ಥಾನಕ್ಕೆ, ಎನ್.ಸತ್ಯನಾರಾಯಣ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಎದುರಾಗಿ ಯಾವುದೇ ನಾಮಪತ್ರ ಸಲ್ಲಿಸದೇ ಇರುವುದರಿಂದ 1 ಗಂಟೆಗೆ ಚುನಾವಣೆ ಪ್ರಕ್ರಿಯೆ ಆರಂಭವಾಯಿತು. ಚುನಾವಣೆಗೆ ಬೇಕಿದ್ದ ಬಹುಮತ ಇರುವ ಕಾರಣಕ್ಕೆ ತಲೆಗಳ ಲೆಕ್ಕ ಹಾಕಿ ಎದುರಾಗಿ ಯಾರೂ ನಾಮ ಪತ್ರ ಸಲ್ಲಿಸದೇ ಇರದೇ ಇರುವ ಕಾರಣಕ್ಕೆ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ, ಎಸಿ ಪ್ರಮೋದ ಘೋಷಣೆ ಮಾಡಿದರು.

    ವಿಜಯೋತ್ಸವ‌ ಆಚರಣೆ:
    ರಾಬಕೊವಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಪ್ರಕಟವಾಗುತ್ತಿದ್ದಂತೆಯೇ ಕಚೇರಿ ಮುಂದೆ ಜಮಾಯಿಸಿದ್ದ ನೂರಾರು ಕಾರ್ಯಕರ್ತರು, ಹಿಟ್ನಾಳ್ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬಳ್ಳಾರಿ ನಗರ ಶಾಸಕ ಭರತರೆಡ್ಡಿ, ಕಂಪ್ಲಿ ಶಾಸಕ ಜೆಎನ್ ಗಣೇಶ ಸೇರಿ ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರದ ಹಲವು ಕಾಂಗ್ರೆಸ್ ಮುಖಂಡರು ಆಗಮಿಸಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.


    ಸವಾಲು ಗೆದ್ದಿದ್ದೇನೆ:
    ತಾಕತ್ತು, ಧಮ್ಮು ತೋರಿಸಲು ಅಧ್ಯಕ್ಷನಾದೆ ಎಂದ ಹಿಟ್ನಾಳ್- ಈ ಹಿಂದಿನ ಅಧ್ಯಕ್ಷರು ರಾಬಕೊವಿ ಹಾಲು ಒಕ್ಕೂಟಕ್ಕೆ ನಾಮಪತ್ರ ಸಲ್ಲಿಸಲು, ಅಧ್ಯಕ್ಷರಾಗಲು ದಮ್ಮು, ತಾಕತ್ತು ಬೇಕು ಎಂದು ಸವಾಲು ಹಾಕಿದ್ದರು. ಇದೇ ಕಾರಣಕ್ಕೆ ಅನಿರೀಕ್ಷಿತವಾಗಿ ನಾನು ಸಹಕಾರ ಕ್ಷೇತ್ರಕ್ಕೆ ಬಂದು ನನ್ನ ದಮ್ಮು, ತಾಕತ್ತು ಪ್ರದರ್ಶನ ಮಾಡಿದ್ದೇನೆ ಎಂದು ಭೀಮಾನಾಯ್ಕ್ ವಿರುದ್ದ ಕೊಪ್ಪಳ ಶಾಸಕ, ರಾಬಕೊವಿ ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ್ ಆಕ್ರೋಶ ಹೊರ ಹಾಕಿದರು.

    ರಾಬಕೊವಿ ಕಚೇರಿಯಲ್ಲಿ ನಡೆದ ಚುನಾವಣೆಯ ಫಲಿತಾಂಶದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಘವೇಂದ್ರ ಹಿಟ್ನಾಳ್, ಎಲ್ಲರೂ ಕಾಂಗ್ರೆಸ್ ಪಕ್ಷದವರೇ ಇರುವುದು ನಿಜ. ಆದರೆ ಇಲ್ಲಿನ ಒಕ್ಕೂಟಕ್ಕೆ ಬರಲು ದಮ್ಮು, ತಾಕತ್ತು ಇರಬೇಕು ಎಂದು ಸವಾಲು ಹಾಕಿದ್ದರು. ನಾನು ಈ ಸವಾಲು ಗೆದ್ದಿದ್ದೇನೆ ಮತ್ತು ಇದನ್ನು ಇಷ್ಟಕ್ಕೆ ಬಿಡುತ್ತೇನೆ ಎಂದರು.

    ಇಲ್ಲಿ ಯಾರನ್ನೂ ತುಳಿಯುವ ಮಾತು ಬರುವುದಿಲ್ಲ. ಸಿಎಂ, ಡಿಸಿಎಂ ಹಾಗೂ ನಾಲ್ಕು ಜಿಲ್ಲೆಯ ಸಚಿವರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಲ್ಲಿ ಕೆಲಸ ಮಾಡುತ್ತೇನೆ. ರಾಬಕೊವಿದಲ್ಲಿ ಹಲವು ಸಮಸ್ಯೆಗಳಿವೆ. ಇದು ಸಾಲದಲ್ಲಿದ್ದು ಇದೆಲ್ಲವನ್ನೂ ಸರಿಪಡಿಸುತ್ತೇನೆ. ಬಳ್ಳಾರಿಗೆ ಅನ್ಯಾಯವಾಗಿರುವುದನ್ನು ಸರಿಪಡಿಸುವ ಕೆಲಸ ಮಾಡುತ್ತೇನೆ. ರಾಬಕೊವಿಗೆ ಮಂಜೂರಾದ ಮೆಗಾ ಡೈರಿ ಬಳ್ಳಾರಿಯಲ್ಲೇ ಮಾಡುತ್ತೇವೆ. ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರ ಸಭೆ ಬಳಿಕ ಎಲ್ಲಾ ತೀರ್ಮಾನ ಆಗಿದೆ ಎಂದು ಹೇಳಿದರು.

  • ಯಡಿಯೂರಪ್ಪ ಲಿಂಗಾಯಿತ ಸಮುದಾಯದ ಪ್ರಶ್ನಾತೀತ ನಾಯಕರು: ಕಾಂಗ್ರೆಸ್ ಶಾಸಕ

    ಯಡಿಯೂರಪ್ಪ ಲಿಂಗಾಯಿತ ಸಮುದಾಯದ ಪ್ರಶ್ನಾತೀತ ನಾಯಕರು: ಕಾಂಗ್ರೆಸ್ ಶಾಸಕ

    ಬಳ್ಳಾರಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲಿಂಗಾಯಿತ ಸಮುದಾಯದ ಪ್ರಶ್ನಾತೀತ ನಾಯಕರು. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತಗೆಯಬಾರದು. ಅವರು ಸಿಎಂ ಆಗಿ ಮುಂದುವರಿದರೆ ಅದು ಕಾಂಗ್ರೆಸ್ ಪಕ್ಷಕ್ಕೂ ಅನುಕೂಲ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೀಮಾ ನಾಯ್ಕ್ ಹೇಳಿದರು.

    ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ಎರಡು ವರ್ಷದಲ್ಲಿ ಹಗರಿಬೊಮ್ಮನಹಳ್ಳಿ ಕೇತ್ರಕ್ಕೆ 10 ಕೋಟಿ ರೂ. ಬಂದಿದೆ. ಅನುದಾನದಲ್ಲಿ ಸಾಕಷ್ಟು ತಾರತಮ್ಯ ಮಾಡಲಾಗುತ್ತಿದೆ. ಆದರೆ ಸಿದ್ದರಾಮಯ್ಯ ಅವರ ಸರ್ಕಾರ ರಚನೆಯಾದ ಸಂದರ್ಭದಲ್ಲಿ 167 ಭರವಸೆಗಳನ್ನು ಈಡೇರಿಸದರು ಎಂದರು.

    ಯಡಿಯೂರಪ್ಪ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕೊರೊನಾದಿಂದ ಮೃತಪಟ್ಟವರ ಡೆತ್ ಸರ್ಟಿಫಿಕೇಟ್ ಸಿಗುತ್ತಿಲ್ಲ. ಕೊರೊನಾ ಸಮಯದಲ್ಲಿ ಸಾಕಷ್ಟು ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ ಅದು ಯಾರಿಗೆ ತಲುಪಿದ? ಕಾಂಗ್ರೆಸ್ ಪಕ್ಷದ ಶಾಸಕರು ಇರೋ ಕ್ಷೇತ್ರಗಳಿಗೆ ಅನುದಾನ ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ಎಲ್ಲರಿಗೂ ಅನುಕೂಲವಾಗಿತ್ತು ಎಂದರು.

  • ಇಂದು ಕೆಎಂಎಫ್ ಅಧ್ಯಕ್ಷ ಪಟ್ಟಕ್ಕೆ ಚುನಾವಣೆ – ರೇವಣ್ಣಗೆ ಗದ್ದುಗೆ ಪಕ್ಕಾ

    ಇಂದು ಕೆಎಂಎಫ್ ಅಧ್ಯಕ್ಷ ಪಟ್ಟಕ್ಕೆ ಚುನಾವಣೆ – ರೇವಣ್ಣಗೆ ಗದ್ದುಗೆ ಪಕ್ಕಾ

    ಬೆಳಗಾವಿ: ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಇತ್ತ ದೋಸ್ತಿ ನಾಯಕರ ಮೈತ್ರಿಗೆ ಕೊನೆಯ ಮೊಳೆ ಬಿದ್ದಿದೆ. ಅಧಿಕಾರದಾಹಿ ಎಚ್.ಡಿ ರೇವಣ್ಣ ಕೆಎಂಎಫ್ ಅಧ್ಯಕ್ಷರಾಗಲು ಮೈತ್ರಿಯನ್ನೇ ಮುರಿದು ಬಿಟ್ಟಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಾಲಾಗಬೇಕಿದ್ದ ಕೆಎಂಎಫ್ ಅಧ್ಯಕ್ಷ ಪಟ್ಟ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಕೈ ತಪ್ಪುವುದು ಬಹುತೇಕ ಖಚಿತವಾಗಿದೆ.

    ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ಇದಕ್ಕಾಗಿಯೇ ಮಾಜಿ ಸಚಿವ ರೇವಣ್ಣ ಅವರು ನಾಲ್ವರು ಕಾಂಗ್ರೆಸ್ ಬೆಂಬಲಿತ ನಿರ್ದೇಶಕರನ್ನ ಹೈಜಾಕ್ ಮಾಡಿ ತಮ್ಮತ್ತ ಸೆಳೆದುಕೊಂಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆಶಿವಕುಮಾರ್ ರೇವಣ್ಣರಿಗೆ ಎಷ್ಟೇ ಮನವೊಲಿಸಿದ್ರು ಪ್ರಯೋಜನವಾಗಿಲ್ಲ ಎಂದು ಹೇಳಲಾಗಿತ್ತು.

    ಕೆಎಂಎಫ್ ಅದ್ಯಕ್ಷ ಚುನಾವಣೆಯಲ್ಲಿ ಐವರು ಕಾಂಗ್ರೆಸ್ ಬೆಂಬಲಿತ, ಮೂವರು ಜೆಡಿಎಸ್, ಓರ್ವ ಬಿಜೆಪಿ ಹಾಗೂ ಮೂವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬೆಂಬಲಿತ ನಿರ್ದೇಶಕರಿದ್ದು ನಾಲ್ವರು ಸರ್ಕಾರದ ನಾಮನಿರ್ದೇಶಿತ ಸದಸ್ಯರಿದ್ದಾರೆ. ಸದ್ಯ ರೇವಣ್ಣ ಬಳಿ 7 ನಿರ್ದೇಶಕರಿದ್ದು, ಐವರು ಮಾತ್ರ ಶಾಸಕ ಭೀಮಾನಾಯ್ಕ್ ಬೆಂಬಲಕ್ಕೆ ನಿಂತಿದ್ದಾರೆ.

    ಇಂದು ನಡೆಯಲಿರುವ ಚುನಾವಣೆಯಲ್ಲಿ ಬಹುತೇಕ ರೇವಣ್ಣ ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತವಾಗಿದೆ. ಹೀಗಾಗಿ ಕೊನೆ ಪ್ರಯತ್ನವಾಗಿ ಸಿದ್ದರಾಮಯ್ಯ, ಇಂದು ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಲಿದ್ದಾರೆ. ಭಾನುವಾರ ರಾತ್ರಿ ಡಿಕೆ ಶಿವಕುಮಾರ್ ಭೇಟಿ ಬಳಿಕ ಮಾತಾನಾಡಿದ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್, ನಾಮಪತ್ರ ಸಲ್ಲಿಸಲು ನಮ್ ನಾಯಕರು ಹೇಳಿದ್ದಾರೆ. ಹೈಜಾಕ್ ಆದವರು ವಾಪಸ್ ಬರ್ತಾರೆ. ಚುನಾವಣೆಯಲ್ಲಿ ಖಂಡಿತಾ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಸಿದ್ದರಾಮಯ್ಯ ಮಂಜೂರು ಮಾಡಿದ್ದ ಯೋಜನೆಗೆ ಸ್ವಪಕ್ಷೀಯ ಸಚಿವನೇ ಅಡ್ಡಿ

    ಸಿದ್ದರಾಮಯ್ಯ ಮಂಜೂರು ಮಾಡಿದ್ದ ಯೋಜನೆಗೆ ಸ್ವಪಕ್ಷೀಯ ಸಚಿವನೇ ಅಡ್ಡಿ

    ಬಳ್ಳಾರಿ: ಜಿಲ್ಲೆಯಲ್ಲಿ ಸೇಡಿನ ರಾಜಕೀಯ ಆರಂಭವಾಯ್ತಾ ಎನ್ನುವ ಅನುಮಾನವೊಂದು ಮೂಡಿದೆ. ಯಾಕೆಂದರೆ ಮಾಜಿ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡಿದ ಕಾಮಗಾರಿಗೆ ಸ್ವಪಕ್ಷೀಯ ಸಚಿವನಿಂದಲೇ ಅಡ್ಡಿಯಾಗಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು. ಮುಜುರಾಯಿ ಸಚಿವ ಪಿಟಿ ಪರಮೇಶ್ವರ್ ನಾಯಕ್ ಹಾಗೂ ಶಾಸಕ ಭೀಮಾ ನಾಯ್ಕೆ ನಡುವೆ ನೀರಾವರಿ ಯೋಜನೆಗಾಗಿ ಹಗ್ಗಜಗ್ಗಾಟ ನಡೆಯುತ್ತಿದೆ. ಈ ಮೂಲಕ ಬಳ್ಳಾರಿಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ನಾಯಕರ ಜಗಳ ಬೀದಿಗೆ ಬಂದಿದೆ. ಭೀಮಾ ನಾಯ್ಕ್ ಹೀಗೆ ರೈತ ಸಭೆಯಲ್ಲಿ ಸಚಿವ ಪಿಟಿ ಪರಮೇಶ್ವರ್ ನಾಯ್ಕ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ವಿರುದ್ಧ ಪರಮೇಶ್ವರ್ ನಾಯ್ಕ್ ಸೇಡು ತೀರಿಸಿಕೊಳ್ಳಲು ಹಗರಿಬೊಮ್ಮನಹಳ್ಳಿಯ ಜನರ 50 ವರ್ಷದ ಕನಸಾಗಿರುವ 26 ಹಳ್ಳಿಗೆ ಜೀವನಾಡಿಯಾಗುವ ಮಾಲವಿ ಜಲಾಶಯಕ್ಕೆ ನೀರುಣಿಸುವ ಯೋಜನೆಗೆ ಅಡ್ಡಿ ಪಡಿಸಿದ್ದಾರೆ ಆರೋಪ ಕೇಳಿಬಂದಿದೆ.

    ಅಡ್ಡಿ ಯಾಕೆ?:
    ಕಾಮಗಾರಿ ಕೆಲಸದಲ್ಲಿ ಪರ್ಸೆಂಟೆಜ್ ಸಿಕ್ಕಿಲ್ಲ ಎಂದು ಪಿಟಿಪಿ ಯೋಜನೆಗೆ ಅಡ್ಡಿ ಪಡಿಸುತ್ತಿದ್ದಾರೆ. ನಾಮಫಲಕದಲ್ಲಿ ತನ್ನ ಹೆಸರು ಹಾಕುವಂತೆ ಪಿಟಿಪಿ ಮಸಲತ್ತು ಹಾಕಿದ್ದಾರೆ. ಇವನ್ಯಾವ ಸಚಿವರು ಯೋಜನೆ ಭೂಮಿ ಪೂಜೆ ಮಾಡೋಕೆ? ಎರಡು ವರ್ಷದಿಂದ ಪಿಟಿಪಿ ಕಿರುಕುಳ ಕೊಡುತ್ತಿದ್ದಾನೆ. ಈ ವಿಷಯವನ್ನ ಸಿದ್ದರಾಮಯ್ಯ, ಎಂಬಿ ಪಾಟೀಲ್ ಸೇರಿ ಎಲ್ಲರ ಗಮನಕ್ಕೂ ತಂದಿದ್ದರೂ ಬಗೆ ಹರಿದಿಲ್ಲ. ಈಗ ನನ್ನ ಕೈಯಲ್ಲಿ ತಡಿಯೋಕ್ ಆಗಲ್ಲ, ಒಂದಲ್ಲ ಹತ್ತು ಸಾವಿರ ರೈತರನ್ನ ಸಚಿವನ ಮನೆ ಮುಂದೆ ಸೇರಿಸ್ತೀನಿ ಎಂದು ಪರಮೇಶ್ವರ್ ನಾಯ್ಕ್ ಹೇಳುವ ಮೂಲಕ ರೈತರ ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಯೋಜನೆ ಹಿನ್ನೆಲೆಯೇನು?:
    ಹಗರಿಬೊಮ್ಮನಹಳ್ಳಿ ಕ್ಷೇತ್ರದ 26 ಹಳ್ಳಿಗೆ ನೀರುಣಿಸುವ ಮಾಲವಿ ಜಲಾಶಯಕ್ಕೆ ತುಂಗಭದ್ರಾ ಡ್ಯಾಂ ಹಿನ್ನೀರಿನಿಂದ ನೀರುಣಿಸಲು 153 ಕೋಟಿ ಯೋಜನೆ ರೂಪಿಸಲಾಗಿದೆ. ಇದಕ್ಕೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಭೂಮಿ ಪೂಜೆ ಮಾಡಿದ್ದರು. ಆದರೆ ಒಂದೂವರೆ ವರ್ಷವಾದರೂ ಯೋಜನೆ ಪೂರ್ಣವಾಗಿಲ್ಲ. ಯೋಜನೆ ವಿಳಂಬಕ್ಕೆ ಸಚಿವರು ಕಾರಣ ಎಂದು ಶಾಸಕ ಭೀಮಾನಾಯ್ಕ್ ಆರೋಪಿಸುತ್ತಿದ್ದಾರೆ.

    ಮಾಲವಿಗೆ ನೀರೊಯ್ಯಲು ಹೂವಿನಹಡಗಲಿ ಕ್ಷೇತ್ರದ ರಾಜೊಳ್ಳಿಯ ಬಳಿ ಜಾಕ್ವೆಲ್ ಕೂರಿಸಿ, ಪೈಪ್ ಲೈನ್ ಮಾಡಬೇಕು. ಹೀಗಾಗಿ ತನ್ನ ಕ್ಷೇತ್ರದ ರೈತನ ನೆರವಿನಿಂದ ಸಚಿವ ಪಿಟಿಪಿ ಈ ಯೋಜನೆ ಪೂರ್ಣವಾಗಲು ಬಿಡ್ತಿಲ್ಲ ಎಂದು ಭೀಮಾನಾಯಕ್ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

  • ಬಿಜೆಪಿಯ ಆಪರೇಷನ್ ಕಮಲ ಬಹುತೇಕ ಫೇಲ್?

    ಬಿಜೆಪಿಯ ಆಪರೇಷನ್ ಕಮಲ ಬಹುತೇಕ ಫೇಲ್?

    – ಬಿಜೆಪಿ ಗೂಡಿನಿಂದ ಹೊರಬಂದ ಇಬ್ಬರು ಶಾಸಕರು

    ಬೆಂಗಳೂರು: ಮಂಗಳವಾರ ಮಧ್ಯಾಹ್ನ ರಾಜ್ಯದಲ್ಲಿ ಆಪರೇಷನ್ ಕಮಲ ನಡೆದೇ ಹೋಗುತ್ತೆ ಎನ್ನುವಂತೆ ಪಕ್ಷೇತರ ಶಾಸಕರಿಬ್ಬರು ಸರ್ಕಾರಕ್ಕೆ ನೀಡಿದ್ದರು. ಅದೇ ರೀತಿಯಾಗಿ ನಾಯಕರು ಸಭೆಗಳ ಮೇಲೆ ಸಭೆ ನಡೆಸಿದ್ದರು. ಆದರೆ ಈಗ ಬಿಜೆಪಿ ಗೂಡಿನಲ್ಲಿದ್ದಾರೆ ಎನ್ನಲಾದ ಕಾಂಗ್ರೆಸ್ ಶಾಸಕರಾದ ಭೀಮಾನಾಯ್ಕ್ ಮತ್ತು ಕಂಪ್ಲಿ ಗಣೇಶ್ ಬಿಜೆಪಿ ಗೂಡಿನಿಂದ ಹೊರ ಬಂದಿದ್ದಾರೆ.

    ಪಕ್ಷೇತರ ಶಾಸಕರಿಬ್ಬರ ಬೆಂಬಲ ವಾಪಸ್ ಪಡೆದಿದ್ದು ಆಪರೇಷನ್ ಕಮಲದ ಮೊದಲ ಹಂತ ಎಂದು ಹೇಳಲಾಗಿತ್ತು. ಮುಂಬೈನಲ್ಲಿ ಮಾತನಾಡಿದ್ದ ಪಕ್ಷೇತರ ಆರ್.ಶಂಕರ್ ಮತ್ತು ಹೆಚ್.ನಾಗೇಶ್ ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿದ್ದರು. ಈಗ ಕಳೆದ ಮೂರ್ನಾಲ್ಕು ದಿನಗಳಿದ್ದ ಯಾರ ಸಂಪರ್ಕಕ್ಕೆ ಸಿಗದ ಭೀಮಾನಾಯ್ಕ್ ಮತ್ತು ಗಣೇಶ್ ಇಂದು ದಿಢೀರ್ ಆಗಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ.

    ಪಕ್ಷೇತರರು ರಾಜೀನಾಮೆ ನೀಡಿದ ಬಳಿಕ ಬುಧವಾರ ಕಾಂಗ್ರೆಸ್ಸಿನ 6 ಮಂದಿ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎನ್ನುವ ಸುದ್ದಿ ಮೂಲಗಳಿಂದ ಬಂದಿತ್ತು. ಆದರೆ ಈಗ ಬಿಜೆಪಿ ಗೂಡಿನಿಂದ ಇಬ್ಬರು ಹೊರ ಬಂದಿದ್ದಾರೆ.

    ಮುಂಬೈನಲ್ಲಿ ಈಗ 3-4 ಶಾಸಕರು ಇದ್ದು, ಶಾಸಕ ಉಮೇಶ್ ಜಾಧವ್ ಕೂಡ ಉಲ್ಟಾ ಹೊಡೆಯುವ ಸಾಧ್ಯತೆಯಿದೆ. ಉಮೇಶ್ ಜಾಧವ್ ವಾಪಸ್ ಬಗ್ಗೆ ಸಹೋದರ ರಾಮಚಂದ್ರ ಜಾಧವ್ ಸುಳಿವು ನೀಡಿದ್ದಾರೆ. ರಮೇಶ್ ಜಾರಕಿಹೊಳಿ, ಮಹೇಶ್ ಕಮಟಳ್ಳಿ ನಡೆ ಮಾತ್ರ ನಿಗೂಢವಾಗಿದೆ.

    ಆಪರೇಷನ್ ಕಮಲಕ್ಕೆ ದೋಸ್ತಿಗಳ ರಿವರ್ಸ್ ಆಪರೇಷನ್ ಪರಿಣಾಮ ಇಬ್ಬರು ಬಿಜೆಪಿ ಸೇರುವ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದಾರೆ ಎನ್ನಲಾಗಿದೆ. ಅಸಮಾಧಾನಗೊಂಡ ಶಾಸಕರ ಎಲ್ಲ ಬೇಡಿಕೆಗಳನ್ನು ರಾಜ್ಯ ನಾಯಕರು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಈ ಶಾಸಕರು ಬೆಂಗಳೂರಿಗೆ ಬರುತ್ತಿದ್ದಾರೆ ಎನ್ನಲಾಗಿದೆ. ಕೊನೆಕ್ಷಣದಲ್ಲಿ ಹೈಕಮಾಂಡ್ ಯಾವುದೇ ಕಾರಣಕ್ಕೂ ಸರ್ಕಾರ ಬೀಳಲು ಅವಕಾಶ ಮಾಡಿಕೊಡಬೇಡಿ ಎಂದು ಸೂಚಿಸಿದ ಹಿನ್ನೆಲೆಯಲ್ಲಿ ರಾಜ್ಯ ನಾಯಕರು ಪ್ರತಿತಂತ್ರ ಹೂಡಿದ ಪರಿಣಾಮ ಬಿಜೆಪಿಯ ಆಪರೇಷನ್ ಕಮಲ ಫೇಲ್ ಆಗಿದೆ ಎನ್ನುವ ಮಾತು ಕೇಳಿ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv