Tag: ಭಿಕ್ಷೆ

  • ಪತ್ನಿಯ ಎದೆ, ಕೈ, ಕುತ್ತಿಗೆ, ಗುಪ್ತಾಂಗವನ್ನು ಕಚ್ಚಿ ಕೊಲೆಗೈದ ಅಂಧ ಪತಿ

    ಪತ್ನಿಯ ಎದೆ, ಕೈ, ಕುತ್ತಿಗೆ, ಗುಪ್ತಾಂಗವನ್ನು ಕಚ್ಚಿ ಕೊಲೆಗೈದ ಅಂಧ ಪತಿ

    ಕೋಲಾರ: ಕುಡಿದ ಅಮಲಿನಲ್ಲಿದ್ದ ಅಂಧ ಪತಿಯೊಬ್ಬ ಪತ್ನಿಗೆ ದೈಹಿಕವಾಗಿ ಹಿಂಸೆ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಐನೋರಹೊಸ ಹಳ್ಳಿಯಲ್ಲಿ ನಡೆದಿದೆ.

    ರತ್ನಮ್ಮ (28) ಕೊಲೆಯಾದ ದುರ್ದೈವಿ. ಪತಿ ಮಂಜುನಾಥ್ ಕುಡಿದ ಅಮಲಿನಲ್ಲಿ ಪತ್ನಿಯ ಎದೆ, ಮೈ-ಕೈ, ಕುತ್ತಿಗೆ, ಗುಪ್ತಾಂಗವನ್ನ ಬಾಯಿಂದ ಕಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಆರೋಪಿ ಮಂಜುನಾಥ್ ರೈಲು ನಿಲ್ದಾಣ ಹಾಗೂ ಪಟ್ಟಣದಲ್ಲಿ ಭಿಕ್ಷೆ ಬೇಡಿ ಬಡತನದ ಮಧ್ಯೆ ಜೀವನ ನಡೆಸುತ್ತಿದ್ದನು. ಪತ್ನಿಯ ಮೇಲೆ ಹಲ್ಲೆ ಮಾಡಿದ್ದಲ್ಲದೇ ಗಾಯಗೊಂಡು ಬಿದ್ದಿದ್ದ ಹೆಂಡತಿಯನ್ನ ಮನೆಯೊಳಗೆ ಬಿಟ್ಟು, ಮಕ್ಕಳನ್ನ ಮನೆಯಿಂದ ಹೊರ ಹಾಕಿ ಪರಾರಿಯಾಗಿದ್ದಾನೆ.

    ರತ್ನಮ್ಮ ಸಂಬಂಧಿಕರು ಬಂದು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆರೋಪಿ ಮಂಜುನಾಥ್‍ಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ತಂದೆಯ ಅವಾಂತರದಿಂದ ಇಬ್ಬರು ಮಕ್ಕಳು ಕೂಡ ಈಗ ಅನಾಥವಾಗಿದ್ದಾರೆ.

    ಕೊರೊನಾ ಲಾಕ್‍ಡೌನ್ ಆಗಿ ರೈಲುಗಳಿಲ್ಲದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಭಿಕ್ಷೆ ಬೇಡಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಪಟ್ಟಣದಲ್ಲಿ ಭಿಕ್ಷೆ ಬೇಡಿ ಬಂದ ಹಣದಲ್ಲಿ ಕುಡಿದು ಬಂದು ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದನು. ಅಲ್ಲದೇ ನೆರೆಹೊರೆಯವರ ಮೇಲೂ ರೌಡಿಯಿಸಂ ತೋರಿಸುತ್ತಿದ್ದನು. ನಾಲ್ಕು ದಿನಗಳಿಂದ ಪತ್ನಿಯ ಎದೆಯನ್ನ, ಮೈ-ಕೈ ಹಾಗೂ ಗುಪ್ತಾಂಗವನ್ನ ಕಚ್ಚಿ ಗಾಯಗೊಳಿಸುತ್ತಿದ್ದನು. ಅಲ್ಲದೇ ತಲೆಗೆ ಹೊಡೆದು ಗಾಯಗೊಳಿಸಿದರ ಪರಿಣಾಮ ಆಕೆ ಮೃತಪಟ್ಟಿದ್ದಾಳೆ ಎಂದು ಗ್ರಾಮದ ಮಹಿಳೆಯೊಬ್ಬರು ಹೇಳಿದ್ದಾರೆ.

    ಆರೋಪಿ ಅಂಗವಿಕಲನೂ ಎನ್ನದೆ ಆತನಿಗೆ ಶಿಕ್ಷೆಯಾಗಬೇಕು. ಮಗನಿಗೆ ಸಾಥ್ ನೀಡುತ್ತಿದ್ದ ತಾಯಿಯನ್ನು ಬಂಧಿಸಿ ಎಂದು ಗ್ರಾಮದ ಮಹಿಳೆಯರು ಕೆಜಿಎಫ್ ಎಸ್‍ಪಿ ಇಲಕ್ಕಿಯಾ ಕರುಣಾಗರನ್ ಅವರಿಗೆ ಮನವಿ ಸಲ್ಲಿಸಿದರು ಸದ್ಯಕ್ಕೆ ಆರೋಪಿ ಪತಿ ಮಂಜುನಾಥ್‍ನನ್ನು ಬಂಗಾರಪೇಟೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಮಸೀದಿ ಆವರಣದಲ್ಲಿ ಭಿಕ್ಷೆ ಬೇಡುತ್ತಿದ್ದ ಹಿಂದೂ ಮಹಿಳೆಗೆ ಥಳಿತ

    ಮಸೀದಿ ಆವರಣದಲ್ಲಿ ಭಿಕ್ಷೆ ಬೇಡುತ್ತಿದ್ದ ಹಿಂದೂ ಮಹಿಳೆಗೆ ಥಳಿತ

    – ಉಡುಪಿಯ ಜಾಮಿಯಾ ಮಸೀದಿ ಬಳಿ ಅಮಾನವೀಯ ಘಟನೆ

    ಉಡುಪಿ: ನಗರದ ಮಸೀದಿ ಆವರಣದಲ್ಲಿ ಬುರ್ಖಾ ಧರಿಸಿ ಭಿಕ್ಷೆ ಬೇಡುತ್ತಿದ್ದ ಹಿಂದೂ ಮಹಿಳೆಯನ್ನು ಥಳಿಸಿದ್ದಾರೆ.

    ಉಡುಪಿಯ ಜಾಮಿಯಾ ಮಸೀದಿ ಆವರಣದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಮಹಿಳೆ ಮದ್ಯ ಸೇವಿಸಿ ಗೇಟ್ ಬಳಿ ಭಿಕ್ಷೆ ಬೇಡುತ್ತಿದ್ದಳು ಎಂಬುದು ಮಸೀದಿ ಮಂದಿಯ ಆರೋಪ. ಅಲ್ಲಾಹು ನನಗೆ ಒಳಿತನ್ನು ಮಾಡಬಹುದು ಎಂದು ನಂಬಿ ನಾನು ಮಸೀದಿಗೆ ಬೇಡಲು ಬಂದಿದ್ದೇನೆ. ನನ್ನನ್ನು ಬಿಟ್ಟುಬಿಡಿ ಇನ್ನು ಮುಂದೆ ಇಲ್ಲಿಗೆ ಬರುವುದಿಲ್ಲ, ದಯವಿಟ್ಟು ನನ್ನನ್ನು ಬಿಡಿ ಎಂದು ಕಾಲು ಹಿಡಿದು ಮಹಿಳೆ ಬೇಡಿಕೊಂಡಿದ್ದಾಳೆ. ಎಷ್ಟೇ ಪರಿಪರಿಯಾಗಿ ಬೇಡಿದರೂ ಮಸೀದಿಯ ಸಿಬ್ಬಂದಿ ಕುಡಿದು ಮಸೀದಿಯೊಳಗೆ ಯಾಕೆ ಬಂದೆ ಎಂದು ಉರ್ದುವಿನಲ್ಲಿ ಪ್ರಶ್ನಿಸಿ, ಬೈದಿದ್ದಾರೆ.

    ಈ ಮೂಲಕ ಮಹಿಳೆಯೊಂದಿಗೆ ಮಸೀದಿ ಸಿಬ್ಬಂದಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಈ ಕುರಿತು ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಭಿಕ್ಷುಕರಲ್ಲಿ ಧರ್ಮ ನೋಡಬಾರದು, ಸಾಧ್ಯವಾದರೆ ಭಿಕ್ಷೆ ಕೊಡಿ. ಹೊಡೆಯುವ ಅಧಿಕಾರ ನಿಮಗಿಲ್ಲ. ಭಿಕ್ಷೆ ಕೊಡಲು ನಿಮ್ಮಲ್ಲಿ ಹಣ ಇಲ್ಲದಿದ್ದರೆ ಕೊಡಬೇಡಿ ಎಂಬೆಲ್ಲ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಲ್ಲದೆ ಸಾಮಾಜಿಕ ಹೋರಾಟಗಾರ ಅಹಮ್ಮದ್ ಅನ್ಸಾರ್ ಸೇರಿದಂತೆ, ಸ್ಥಳೀಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  • ಭಿಕ್ಷೆ ಬೇಡೋಕೆ ಬೆಂಗ್ಳೂರಿಗೆ ಬಂದು ಹೆಣವಾದ

    ಭಿಕ್ಷೆ ಬೇಡೋಕೆ ಬೆಂಗ್ಳೂರಿಗೆ ಬಂದು ಹೆಣವಾದ

    ಬೆಂಗಳೂರು: ಭಿಕ್ಷೆ ಬೇಡುವರಿಗೆ ಬೆಂಗಳೂರು ಹಾಟ್ ಸ್ಪಾಟ್ ಎಂಬ ಮಾತು ಮೊದಲಿನಿಂದಲೂ ಕೇಳಿ ಬರುತ್ತಿದೆ. ಬೆಂಗಳೂರಿನ ಕೆಲವು ಭಾಗಗಳಲ್ಲಿ ಭಿಕ್ಷಾಟನೆಯನ್ನ ದಂಧೆಯಾಗಿಸಿಕೊಂಡಿರುವ ಕುರಿತು ಪಬ್ಲಿಕ್ ಟಿವಿ ಈ ಹಿಂದೆ ವಿಸ್ತೃತ ವರದಿಯನ್ನು ಬಿತ್ತರಿಸಿತ್ತು. ಹೀಗೆ ಮಹಾರಾಷ್ಟ್ರದ ಪುಣೆಯಿಂದ ಭಿಕ್ಷೆ ಬೇಡಲು ಬಂದಾತ ಬೀದಿ ಹೆಣವಾಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಪುಣೆಯ ಮೂಲದ ಮನೋಜ್ ಭಿಕ್ಷೆ ಬೇಡಲು ಬೆಂಗಳೂರಿಗೆ ಬಂದಿದ್ದನು. ಪುಣೆಯಲ್ಲಿ ಸ್ಥಿತಿವಂತನಾಗಿದ್ದ ಮನೋಜ್ ಬೆಂಗಳೂರಿನಲ್ಲಿ ಚೆನ್ನಾಗಿ ಇರುತ್ತೀನಿ ಎಂದು ಪೋಷಕರ ವಿರೋಧದ ನಡುವೆಯೇ ಸಿಲಿಕಾನ್ ಸಿಟಿಗೆ ಆಗಮಿಸಿದ್ದನು. ಮನೋಜ್ ಎದೆಯ ಮೇಲೆ ಸಹೋದರನ ನಂಬರ್ ಅಚ್ಚೆ ಹಾಕಿಸಿಕೊಂಡಿದ್ದನು. ಎಂಜಿ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಮನೋಜ್ ಭಿಕ್ಷಾಟನೆಯಿಂದ ಬಂದ ಹಣವನ್ನು ಕುಟುಂಬಸ್ಥರಿಗೆ ಕಳುಹಿಸುತ್ತಿದ್ದನು.

    ಮನೋಜ್ ಭಿಕ್ಷೆ ಬೇಡುವ ಪರಿಸ್ಥಿತಿ ಏನಿರಲಿಲ್ಲ. ನಾಲ್ಕು ಎಕರೆ ಕೃಷಿ ಭೂಮಿ ಹೊಂದಿದ್ದ, ಮನೋಜ್ ಸಹೋದರ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಚೆನ್ನಾಗಿ ಇರುತ್ತೇನೆಂದು ಬೆಂಗಳೂರಿಗೆ ಬಂದಿದ್ದ ಮನೋಜ್ ಭಿಕ್ಷಾಟನೆಯನ್ನು ವೃತ್ತಿಯಾಗಿಸಿಕೊಂಡಿದ್ದನು. ಬಳಿಕ ಅನಾರೋಗ್ಯದಿಂದ ಬಳಲುತ್ತಿದ್ದ ಮನೋಜ್, ಸೂಕ್ತ ಚಿಕಿತ್ಸೆ ಇಲ್ಲದೇ ಸಾವನ್ನಪ್ಪಿದ್ದಾನೆ. ಕೊನೆಗೆ ನಿರಾಶ್ರಿತ ಕೇಂದ್ರದವರು ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದರು.

    https://www.youtube.com/watch?v=ACmX0o8J9yk

    ಪುತ್ರನಿಂದ ಫೋನ್ ಬರದೇ ಇದ್ದಾಗ ಭಯಗೊಂಡ ಪೋಷಕರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಪ್ರಕರಣದ ಬೆನ್ನಟ್ಟಿದಾಗ ಮೃತಪಟ್ಟ ಭಿಕ್ಷುಕನೇ ಮನೋಜ್ ಎಂದು ತಿಳಿದು ಬಂದಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಬಿಎಸ್‍ಎನ್‍ಎಲ್ ಸೇವೆಗೋಸ್ಕರ ಭಿಕ್ಷೆ ಬೇಡಿದ ಗ್ರಾಮಸ್ಥರು

    ಬಿಎಸ್‍ಎನ್‍ಎಲ್ ಸೇವೆಗೋಸ್ಕರ ಭಿಕ್ಷೆ ಬೇಡಿದ ಗ್ರಾಮಸ್ಥರು

    ಮಡಿಕೇರಿ: ಭಾರೀ ಭೂ ಕುಸಿತ ಮತ್ತು ಪ್ರವಾಹದಿಂದ ತತ್ತರಿಸಿದ್ದ ಕೊಡಗಿನ ಮಂದಿ ಇದೀಗ ಮತ್ತೊಂದು ಸಮಸ್ಯೆಯಿಂದ ಹೈರಾಣಾಗಿ ಹೋಗಿದ್ದಾರೆ. ಬಹುತೇಕ ಮಡಿಕೇರಿ ಜಿಲ್ಲೆಯ ಜನತೆ ಮೊಬೈಲ್ ನೆಟ್‍ವರ್ಕ್‍ಗಾಗಿ ಬಿಎಸ್‍ಎನ್‍ಎಲ್ ಸೇವೆಯನ್ನೇ ನಂಬಿಕೊಂಡಿದ್ದಾರೆ.

    ಕಳೆದ ಕೆಲ ದಿನಗಳಿಂದ ಇಲ್ಲಿ ಬಿಎಸ್‍ಎನ್‍ಎಲ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಏನಾದರೂ ತೊಂದರೆ ಆದರೆ ತಕ್ಷಣ ಸಹಾಯಕ್ಕಾಗಿ ಯಾರನ್ನು ಸಂಪರ್ಕ ಮಾಡಲು ಆಗುತ್ತಿಲ್ಲ ಎಂದು ಕೊಡಗಿನ ಜನತೆ ವಿನೂತನ ಪ್ರತಿಭಟನೆ ನಡೆಸುವ ಮೂಲಕ ಬಿಎಸ್‍ಎನ್‍ಎಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಕರೆಂಟ್ ಹೋದಾಗ ಬಿಎಸ್‍ಎನ್‍ಎಲ್ ಸೇವೆ ಸ್ಥಗಿತಗೊಳ್ಳುತ್ತಿದೆ. ಜನರೇಟರ್‍ ಗೆ ಡೀಸೆಲ್ ಹಾಕಲು ಬಿಎಸ್‍ಎನ್‍ಎಲ್ ಅಧಿಕಾರಿಗಳು ಹಣ ನೀಡುತ್ತಿಲ್ಲ. ಹಾಗಾಗಿ ಕಳೆದ ಕೆಲವು ದಿನಗಳಿಂದ ಹಲವು ಗ್ರಾಮಗಳಲ್ಲಿ ಬಿಎಸ್‍ಎನ್‍ಎಲ್ ಮತ್ತು ಏರ್‍ ಟೆಲ್ ಸೇರಿದಂತೆ ಯಾವುದೇ ಮೊಬೈಲ್ ಸೇವೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ಎಲ್ಲರೂ ಸೇರಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಅದರಿಂದ 35 ಲೀಟರ್ ಡೀಸೆಲ್ ಖರೀದಿಸಿ ಮೊಬೈಲ್ ಕಂಪನಿಗೆ ನೀಡಿದ್ದಾರೆ.

    ಜೋರಾಗಿ ಮಳೆ ಬಂದು ಏನಾದರೂ ಹೆಚ್ಚು ಕಡಿಮೆ ಆದರೆ ಕರೆ ಮಾಡಿ ವಿಷಯ ತಿಳಿಸೋಣ ಎಂದರೆ ಬಿಎಸ್‍ಎನ್‍ಎಲ್ ಕೆಲಸವೇ ಮಾಡುತ್ತಿಲ್ಲ. ಹಾಗಾಗಿ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದ ಜನರು ಬಿಎಸ್‍ಎನ್‍ಎಲ್‍ಗಾಗಿ ಗ್ರಾಮಸ್ಥರು ಮನೆ ಮನೆ ತೆರಳಿ ಭಿಕ್ಷೆ ಬೇಡಿದ್ದಾರೆ. ನಂತರ ಬಂದ ಹಣದಲ್ಲಿ ಡೀಸೆಲ್ ಖರೀದಿಸಿ ಮೊಬೈಲ್ ಕಂಪನಿಗೆ ನೀಡಿದ್ದಾರೆ.

    ಭಿಕ್ಷೆ ಬೇಡಿದ ಹಣದಿಂದ ಡೀಸೆಲ್ ಖರೀದಿಸಿ ಕಂಪನಿಗೆ ನೀಡಿ ಈ ಮೂಲಕ ಅಲ್ಲಿನ ಅಧಿಕಾರಿಗಳಿಗೆ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ.

  • ಹಂಪಿ ಉತ್ಸವಕ್ಕೆ ಸರ್ಕಾರದ ಬಳಿ ದುಡ್ಡು ಇಲ್ಲದಿದ್ದರೆ ಭಿಕ್ಷೆ ಬೇಡಿಯಾದ್ರೂ ಹಣ ಹೊಂದಿಸಿಕೊಡುತ್ತೇವೆ- ಸೋಮಶೇಖರ್ ರೆಡ್ಡಿ

    ಹಂಪಿ ಉತ್ಸವಕ್ಕೆ ಸರ್ಕಾರದ ಬಳಿ ದುಡ್ಡು ಇಲ್ಲದಿದ್ದರೆ ಭಿಕ್ಷೆ ಬೇಡಿಯಾದ್ರೂ ಹಣ ಹೊಂದಿಸಿಕೊಡುತ್ತೇವೆ- ಸೋಮಶೇಖರ್ ರೆಡ್ಡಿ

    ಬಳ್ಳಾರಿ: ಹಂಪಿ ಉತ್ಸವ ನಡೆಸಲು ಸರ್ಕಾರದ ಬಳಿ ಹಣ ಇಲ್ಲದಿದ್ದರೆ ನಾವೂ ಭಿಕ್ಷೆ ಬೇಡಿ ಹಣ ಹೊಂದಿಸಿಕೊಡುತ್ತೇವೆ ಎಂದು ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ದೋಸ್ತಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಹಂಪಿ ಉತ್ಸವ ನಡೆಸಲು ಮುಂದಾಗಬೇಕು. ಹಂಪಿ ಉತ್ಸವ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುವ ಎಲ್ಲ ಸಂಘಟನೆಗಳ ಬೆಂಬಲಕ್ಕೆ ಬಿಜೆಪಿ ನಿಲ್ಲಲಿದೆ. ಹಂಪಿ ಒಂದು ಐತಿಹಾಸಿಕ ತಾಣ. ಹಂಪಿ ಉತ್ಸವ ನಮ್ಮ ನಾಡಿನ ಹೆಮ್ಮೆಯ ಪರಂಪರೆಯಾಗಿದೆ. ಹಂಪಿ ಉತ್ಸವಕ್ಕೆ ಒಂದು ಇತಿಹಾಸವಿದೆ ಅದನ್ನು ಎಲ್ಲರು ಗೌರವಿಸಬೇಕು ಎಂದು ಹೇಳಿದರು.

    ನಾಡಿನಲ್ಲಿ ಹಂಪಿ ಉತ್ಸವ ಪಾರಂಪರಿಕವಾಗಿ ನಡೆದು ಬಂದಿದೆ. ಈಗಿನ ಮೈತ್ರಿ ಸರ್ಕಾರ ನಾಡಿನ ಪರಂಪರೆ, ಸಂಪ್ರದಾಯಗಳನ್ನು ಹಾಳು ಮಾಡಬಾರದು. ರಾಜ್ಯದಲ್ಲಿ ಬರಗಾಲವಿದೆ ಎಂದು ಮೈತ್ರಿ ಸರ್ಕಾರ ಹಂಪಿ ಉತ್ಸವವನ್ನು ಮುಂದೂಡಲು ನಿರ್ಧರಿಸಿರುವುದು ನನ್ನ ಪ್ರಕಾರ ತಪ್ಪು. ಉತ್ಸವ ನಡೆಸಲು ಸರ್ಕಾರದ ಬಳಿ ಹಣವಿಲ್ಲದಿದ್ದರೇ ಭಿಕ್ಷೆ ಬೇಡಿಯಾದ್ರೂ ಹಣ ಹೊಂದಿಸಿಕೊಡುತ್ತೇವೆ. ಬೀದಿ ಬೀದಿಗೆ ನಾವೇ ಹೋಗಿ ಹಂಪಿ ಉತ್ಸವ ಮಾಡೋಕೆ ಸರ್ಕಾರದ ಹತ್ತಿರ ಹಣವಿಲ್ಲ ಎಂದು ಹೇಳಿ ಭಿಕ್ಷೆ ಕೇಳ್ತೀವಿ ಎಂದು ಸರ್ಕಾರ ವಿರುದ್ಧ ಸೋಮಶೇಖರ್ ರೆಡ್ಡಿ ವ್ಯಂಗ್ಯವಾಡಿದರು.

    ಹೇಗಾದರು ಸರಿ ಸರ್ಕಾರ ಹಂಪಿ ಉತ್ಸವನ್ನು ಎಂದಿನಂತೆ ವಿಜೃಂಭಣೆಯಿಂದ ಈ ವರ್ಷವು ಮಾಡಲೇಬೇಕು. ದೇಶ – ವಿದೇಶಗಳಿಂದ ಹಂಪಿ ಉತ್ಸವ ನೋಡಲು ಪ್ರವಾಸಿಗರು ಉತ್ಸಾಹದಿಂದ ಬರುತ್ತಾರೆ. ಅವರಿಗೆ ನಿರಾಸೆ ಮಾಡಬೇಡಿ, ಹಂಪಿ ಉತ್ಸವವನ್ನು ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಸೋಮಶೇಖರ್ ರೆಡ್ಡಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇವಸ್ಥಾನದ ಎದುರು ಭಿಕ್ಷೆ ಬೇಡೋ ವಿಷ್ಯಕ್ಕೆ ಜಗಳ – ವೃದ್ಧ ಭಿಕ್ಷುಕನಿಗೆ ಚಾಕುವಿನಿಂದ ಇರಿತ

    ದೇವಸ್ಥಾನದ ಎದುರು ಭಿಕ್ಷೆ ಬೇಡೋ ವಿಷ್ಯಕ್ಕೆ ಜಗಳ – ವೃದ್ಧ ಭಿಕ್ಷುಕನಿಗೆ ಚಾಕುವಿನಿಂದ ಇರಿತ

    ಮೈಸೂರು: ಭಿಕ್ಷೆ ಬೇಡೋ ಜಾಗಕ್ಕಾಗಿ ಇಬ್ಬರು ಭಿಕ್ಷುಕರ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ಮೈಸೂರಿನ ಅಗ್ರಹಾರದ ತ್ಯಾಗರಾಜ ರಸ್ತೆಯಲ್ಲಿ ನಡೆದಿದೆ.

    ಸಾಯಿಬಾಬಾ ದೇಗುಲದ ಮುಂಭಾಗ ಭಿಕ್ಷುಕ ಮತ್ತೊಬ್ಬ ಭಿಕ್ಷುಕನಿಗೆ ಚಾಕುವಿನಿಂದ ಇರಿದಿದ್ದಾನೆ. ಚಾಕು ಇರಿತದಿಂದ ವೃದ್ಧನ ಬಟ್ಟೆಯೆಲ್ಲ ರಕ್ತಮಯವಾಗಿದ್ದು ಸ್ಥಳೀಯರು ಆಂಬುಲೆನ್ಸ್‍ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಚಾಕು ಹಾಕಿದ ಭಿಕ್ಷುಕನನ್ನು ಕೆ.ಆರ್. ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಭಿಕ್ಷೆಯೆತ್ತಿ ಅನ್ನ ನೀಡುವ ಭರವಸೆ ನೀಡಿ ಮಾತು ಮರೆತ ಸಂಸದೆ ಶೋಭಾ ಕರಂದ್ಲಾಜೆ!

    ಭಿಕ್ಷೆಯೆತ್ತಿ ಅನ್ನ ನೀಡುವ ಭರವಸೆ ನೀಡಿ ಮಾತು ಮರೆತ ಸಂಸದೆ ಶೋಭಾ ಕರಂದ್ಲಾಜೆ!

    ಮಂಗಳೂರು: ಕಲ್ಲಡ್ಕದ ಎರಡು ಶಾಲೆಗಳಿಗೆ ರಾಜ್ಯ ಸರಕಾರ ಅನುದಾನ ಕಡಿತಗೊಳಿಸಿದಾಗ ಸಂಸದೆ ಶೋಭಾ ಕರಂದ್ಲಾಜೆ ಭಿಕ್ಷೆಯೆತ್ತಿ ಅನ್ನ ನೀಡುವ ಭರವಸೆ ನೀಡಿದ್ದರು.

    ಮಂಗಳೂರಿನ ಬಿಜೆಪಿ ಮುಖಂಡ ವೇದವ್ಯಾಸ ಕಾಮತ್ ಮನೆಯಲ್ಲಿ `ಅಕ್ಕಿ ಭಿಕ್ಷೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಅಲ್ಲದೆ ರಾಜ್ಯ ಮಹಿಳಾ ಮೋರ್ಚ ಘಟಕದ ಮೂಲಕ ಪ್ರತಿ ಸಂಕ್ರಾಂತಿಯಂದು ರಾಜ್ಯಾದ್ಯಂತ ಅಕ್ಕಿ ಭಿಕ್ಷೆ ಅಭಿಯಾನ ನಡೆಸುವ ಮೂಲಕ ಕಲ್ಲಡ್ಕದ ಎರಡು ಶಾಲೆಗಳಿಗೆ ಬಿಸಿಯೂಟದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು.

    ಅ. 1ರಂದು ಯೋಜನೆಗೆ ಚಾಲನೆ ನೀಡಿದ್ದು ಬಿಟ್ಟರೆ ಶೋಭಾ ಕರಂದ್ಲಾಜೆ ಸೇರಿ ಬಿಜೆಪಿ ಮುಖಂಡರು ಮಾತು ಮರೆತಿದ್ದಾರೆ. ಅದಾಕ್ಕಾಗಿ ಒಂದು ತಿಂಗಳ ಬಳಿಕ ದಕ್ಷಿಣ ಕನ್ನಡ ಮಹಿಳಾ ಮೋರ್ಚ ದವರು ಕಲ್ಲಡ್ಕ ಶಾಲೆಗೆ 11 ಕ್ವಿಂಟಾಲ್ ಅಕ್ಕಿ ನೀಡಿದ್ದಾರೆ. ಶಾಲೆಯಲ್ಲಿ ಪ್ರತಿದಿನ 3500 ಕ್ಕೂ ಹೆಚ್ಚು ಮಕ್ಕಳಿಗೆ ಬಿಸಿಯೂಟ ನೀಡುತ್ತಿದ್ದು, ಮಹಿಳಾ ಮೋರ್ಚ ನೀಡಿದ ಅಕ್ಕಿ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.

    ಶಾಲೆಯ ಮುಖ್ಯಸ್ಥರಾದ ಆರ್ ಎಸ್ ಎಸ್ ಮುಖಂಡ ಪ್ರಭಾಕರ ಭಟ್ ಮಾತ್ರ ಭಿಕ್ಷೆ ಎತ್ತಿಯಾದರೂ ಬಿಸಿಯೂಟ ನೀಡುತ್ತೀವಿ ಎಂದಿದ್ದರು. ಹಾಗಾದರೆ ಶೋಭಾ ಕರಂದ್ಲಾಜೆ ಅಕ್ಕಿ ಭಿಕ್ಷೆ ಹೆಸರಲ್ಲಿ ಜೋಳಿಗೆ ತೋರಿಸಿ ನಾಟಕವಾಡಿದರೇ ಎನ್ನುವ ಪ್ರಶ್ನೆ ಇದೀಗ ಅಲ್ಲಿನ ಜನರನ್ನು ಕಾಡುತ್ತಿದೆ.

  • ಮಹಿಳೆಯನ್ನ ಬಂಧನದಲ್ಲಿಟ್ಟುಕೊಂಡ ವೈದ್ಯರು- ಅಮ್ಮನ ಆಸ್ಪತ್ರೆ ಬಿಲ್ ಕಟ್ಟಲು ಭಿಕ್ಷೆ ಬೇಡ್ತಿದ್ದ 7ರ ಬಾಲಕನ ರಕ್ಷಣೆ

    ಮಹಿಳೆಯನ್ನ ಬಂಧನದಲ್ಲಿಟ್ಟುಕೊಂಡ ವೈದ್ಯರು- ಅಮ್ಮನ ಆಸ್ಪತ್ರೆ ಬಿಲ್ ಕಟ್ಟಲು ಭಿಕ್ಷೆ ಬೇಡ್ತಿದ್ದ 7ರ ಬಾಲಕನ ರಕ್ಷಣೆ

    ಪಾಟ್ನಾ: ಆಸ್ಪತ್ರೆಯ ಬಿಲ್ ಕಟ್ಟುವವರೆಗೂ ಡಿಸ್ಚಾರ್ಜ್ ಮಾಡುವುದಿಲ್ಲ ಎಂದು ಹೇಳಿ ಮಹಿಳೆಯೊಬ್ಬರನ್ನ ಆಸ್ಪತ್ರೆಯ ಸಿಬ್ಬಂದಿ ಬಂಧನದಲ್ಲಿರಿಸಿಕೊಂಡಿದ್ದ ಕಾರಣ ಆಕೆಯ 7 ವರ್ಷದ ಮಗ ರಸ್ತೆಯಲ್ಲಿ ಭಿಕ್ಷೆ ಬೇಡಿದ ಕರುಣಾಜನಕ ಘಟನೆ ಬಿಹಾರದಲ್ಲಿ ನಡೆದಿದೆ.

    ಇಲ್ಲಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ 31 ವರ್ಷದ ಲಲಿತಾ ದೇವಿ ಅವರಿಗೆ ಹೆರಿಗೆಯಾಗಿದ್ದು, ಮಗು ಸಾವನ್ನಪ್ಪಿತ್ತು. ಆಸ್ಪತ್ರೆಯವರು 70 ಸಾವಿರ ರೂ. ಬಿಲ್ ಆಗಿದೆ ಎಂದು ಹೇಳಿದ್ದರು. ಹೀಗಾಗಿ ಮಹಿಳೆಯ 7 ವರ್ಷದ ಮಗ ಬಿಲ್ ಕಟ್ಟಲು ರಸ್ತೆಯಲ್ಲಿ ಭಿಕ್ಷೆ ಬೇಡಿದ್ದಾನೆ. ಕೊನೆಗೆ ಮಾದೇಪುರ ಸಂಸದ ಪಪ್ಪು ಯಾದವ್ ಮಧ್ಯಪ್ರದೇಶಿಸಿ ತನ್ನ ಕ್ಷೇತ್ರದವರಾದ ಲಲಿತಾ ದೇವಿ ಅವರನ್ನು ಭಾನುವಾರದಂದು ರಕ್ಷಣೆ ಮಾಡಿದ್ದಾರೆ. ಆಸ್ಪತ್ರೆ ಆಡಳಿತದ ವಿರುದ್ಧ ಈಗ ಎಫ್‍ಐಆರ್ ದಾಖಲಾಗಿದೆ.

    ಪಾಟ್ನಾ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ನವೆಂಬರ್ 14ರಂದು ಲಲಿತಾ ಅವರಿಗೆ ವೈದ್ಯಕೀಯ ಸಮಸ್ಯೆ ಉಂಟಾಗಿದ್ದರಿಂದ ಏಜೆಂಟ್‍ವೊಬ್ಬರ ಮೂಲಕ ಮಾ ಶೀತ್ಲಾ ಎಮರ್ಜೆನ್ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುಟುಂಬದವರಿಗೆ 1.5 ಲಕ್ಷ ರೂ. ಹಣ ಹೊಂದಿಸಿಕೊಳ್ಳುವಂತೆ ಹೇಳಲಾಗಿತ್ತು. ಆದ್ರೆ ಬಳಿಕ ವೈದ್ಯಕೀಯ ಮೊತ್ತವನ್ನು 70 ಸಾವಿರ ರೂ.ಗೆ ಇಳಿಸಲಾಗಿತ್ತು. ಆದ್ರೆ ಲಲಿತಾ ದೇವಿ ಅವರ ಪತಿ ನಿರ್ಧನ್ ರಾಮ್ ಅವರಿಗೆ 25 ಸಾವಿರ ಮಾತ್ರ ಕಟ್ಟಬೇಕಷ್ಟೇ ಎಂದು ಏಜೆಂಟ್ ಹೇಳಿದ್ದರು. ಆ ಹಣವನ್ನು ನಿರ್ಧನ್ ರಾಮ್ ಡೆಪಾಸಿಟ್ ಮಾಡಿದ್ದರು.

    ಆದರೆ ಮಗು ಸಾವನ್ನಪ್ಪಿದ್ದರಿಂದ ವೈದ್ಯರು ಸ್ಟಿಚ್‍ಗಳನ್ನ ಬಿಚ್ಚದೇ ಬಾಕಿ ಹಣ ಕಟ್ಟುವವರೆಗೆ ದೇವಿ ಅವರನ್ನ ಡಿಸ್ಚಾರ್ಜ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಲಲಿತಾ ಅವರ ಪತಿ ಸಂಬಂಧಿಕರ ಬಳಿ ಕೇಳಿ ಸ್ವಲ್ಪ ಹಣವನ್ನ ಹೊಂದಿಸಿದ್ದರು. ಉಳಿದ ಹಣಕ್ಕಾಗಿ ಲಲಿತಾ ಅವರ ಮಗ ಭಿಕ್ಷೆ ಬೇಡಲು ಮುಂದಾಗಿದ್ದ.

     

    ಮಾದೇಪುರದ ಕೆಲವು ನಿವಾಸಿಗಳು ಹಾಗೂ ಕೆಲವು ಸ್ಥಳೀಯ ವಾಹಿನಿಗಳ ಮೂಲಕ ಈ ವಿಷಯ ಪಪ್ಪು ಯಾದವ್ ಅವರ ಗಮನಕ್ಕೆ ಬಂದಿತ್ತು. ನಂತರ ಯಾದವ್ ಮಹಿಳೆಯನ್ನ ರಕ್ಷಣೆ ಮಾಡಿದ್ದಾರೆ. ಅಲ್ಲದೆ ಲಲಿತಾ ದೇವಿ ಅವರಿಗೆ ಆಸ್ಪತ್ರೆಯವರೇ 10 ಸಾವಿರ ರೂ. ಹಣ ಹಿಂದಿರುಗಿಸುವಂತೆ ಮಾಡಿದ್ದು, ಆಂಬುಲೆನ್ಸ್ ಮೂಲಕ ಮನೆಗೆ ಡ್ರಾಪ್ ಮಾಡಿಸಿದ್ದಾರೆ.

    ಆಸ್ಪತ್ರೆಯ ಮಾಲೀಕರಾದ ನಿಶಾ ಭಾರ್ತಿ ಕೇವಲ ಪದವಿ ಪೂರೈಸಿದ್ದು ತಾನೊಬ್ಬ ವೈದ್ಯೆ ಎಂದು ಹೇಳಿಕೊಂಡಿದ್ದಾರೆ. ಆಸ್ಪತ್ರೆಯನ್ನ ರೆಜಿಸ್ಟರ್ ಕೂಡ ಮಾಡಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ರಾಜ್ಯ ಆಗೋಗ್ಯ ಇಲಾಖೆ ಈ ಬಗ್ಗೆ ತನಿಖೆಗೆ ಆದೇಶಿಸಿದೆ.

     

  • ದೇವಾಲಯದ ಮುಂದೆ ಭಿಕ್ಷೆ ಬೇಡಿ 2.30 ಲಕ್ಷ ರೂ. ಕಾಣಿಕೆ ನೀಡಿದ ಮಹಿಳೆ

    ದೇವಾಲಯದ ಮುಂದೆ ಭಿಕ್ಷೆ ಬೇಡಿ 2.30 ಲಕ್ಷ ರೂ. ಕಾಣಿಕೆ ನೀಡಿದ ಮಹಿಳೆ

    ಮೈಸೂರು: ದೇವಸ್ಥಾನದ ಮುಂದೆ ಭಿಕ್ಷೆ ಬೇಡುವ ವಯೋವೃದ್ಧ ಭಿಕ್ಷುಕಿ ಅದೇ ದೇವಸ್ಥಾನದಲ್ಲಿನ ದೇವರಿಗೆ 2.30 ಲಕ್ಷ ರೂ. ಹಣವನ್ನು ಕಾಣಿಕೆಯಾಗಿ ಕೊಟ್ಟಿದ್ದಾರೆ.

    ಮೈಸೂರಿನ ಪಡುವಾರಹಳ್ಳಿಯಲ್ಲಿನ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ಎಂ.ವಿ. ಸೀತಾ ಎಂಬವರು ಹಲವು ವರ್ಷದಿಂದ ಭಿಕ್ಷೆ ಬೇಡುತ್ತಿದ್ದು, ಹಾಗೇ ಭಿಕ್ಷೆ ಬೇಡಿ ಸಂಪಾದಿಸಿದ 2.30 ಲಕ್ಷ ಹಣವನ್ನು ಅದೇ ದೇವಸ್ಥಾನದ ಅಭಿವೃದ್ಧಿಗೆ ಹಾಗೂ ಹನುಮ ಜಯಂತಿ ದಿನ ಅನ್ನಸಂತರ್ಪಣೆಗಾಗಿ ಕಾಣಿಕೆಯಾಗಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

    ತನ್ನವರೂ ಅಂತಾ ಯಾರು ಇಲ್ಲದ ಸೀತಮ್ಮ ದೇವಸ್ಥಾನದ ಸಮೀಪದ ಮನೆಯೊಂದರಲ್ಲಿ ಮಲಗುತ್ತಾರೆ. ದಿನವೂ ಭಿಕ್ಷೆ ಬೇಡಿ ಅದರಲ್ಲಿ ಸಿಕ್ಕ ಹಣವನ್ನು ವಾರಕೊಮ್ಮೆ ತನ್ನ ಬ್ಯಾಂಕ್ ಅಕೌಂಟ್ ಗೆ ಹಾಕುತ್ತಿದ್ದರು. ಈಗ ತಮ್ಮ ಅಕೌಂಟ್ ನಲ್ಲಿದ್ದ ಎಲ್ಲಾ ಹಣವನ್ನು ಯಾವ ದೇವರ ಮುಂದೆ ಕೂತು ಭಿಕ್ಷೆ ಬೇಡಿ ಸಂಪಾದಿಸಿದ್ದರೋ ಅದೇ ದೇವರಿಗೆ ಕಾಣಿಕೆಯಾಗಿ ನೀಡಿದ್ದಾರೆ.

    ಮೊದಲು ಮನೆ ಕೆಲಸ ಮಾಡುತ್ತಿದ್ದೆ. ನಂತರ ಭಿಕ್ಷೆ ಬೇಡಿ ಹಣವನ್ನು ಸಂಗ್ರಹಿಸಲು ಆರಂಭಿಸಿದೆ. ದೇವರು ನನಗೆ ಉಸಿರು ಬದುಕು ಕೊಟ್ಟಿದ್ದಾನೆ. ಅವನಿಂದ ಪಡೆದಿದ್ದನ್ನು ಅವನಿಗೆ ವಾಪಸ್ ಕೊಡುತ್ತಿದ್ದೇನೆ. ನನಗೆ ಇದರಲ್ಲಿ ತೃಪ್ತಿ ಇದೆ ಎಂದು ಸೀತಮ್ಮ ಹೇಳಿದ್ದಾರೆ.

    ಮೂಲತಃ ಮದ್ರಾಸ್ ಮೂಲದ ಅವರು ತಮ್ಮ ಪೋಷಕರದ ವೀರ ರಾಘವಮೂರ್ತಿ ಹಾಗೂ ಉನ್ನವೇಲಮ್ಮ ರವರ 12 ಮಕ್ಕಳ ಪೈಕಿ ಎಂಟನೆಯವರು. ಮೈಸೂರಿನ ರಾಜಮನೆತನದಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ಇವರ ತಂದೆ ವೀರರಾಘವಮೂರ್ತಿ ಸುಮಾರು 1930 ರಲ್ಲಿ ಕುಟುಂಬ ಸಮೇತ ಮದ್ರಾಸ್ ಗೆ ಹಿಂತಿರುಗಿದ್ದರು. ಮದ್ರಾಸ್ ಗೆ ಹಿಂತಿರುಗುವ ವೇಳೆ ಸೀತಮ್ಮ ರನ್ನು ಮೈಸೂರಿನಲ್ಲೇ ಬಿಟ್ಟು ಹೋಗಿದ್ದಾರೆ. ಬಾಲ್ಯದಲ್ಲೇ ಹೆತ್ತವರಿಂದ ದೂರವಾದ ಸೀತಮ್ಮ ಅವರಿವರ ಮನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸಿದ್ದರು. ಕೈಯಲ್ಲಿ ಶಕ್ತಿ ಇರುವ ವರೆಗೂ ದುಡಿದು ತಿಂದ ಸೀತಮ್ಮ ವೃದ್ಧಾಪ್ಯ ಸಮೀಪಿಸಿದಾಗ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಕುಳಿತು ಹತ್ತಾರು ವರ್ಷಗಳಿಂದ ಭಿಕ್ಷೆ ಬೇಡುತ್ತಿದ್ದಾರೆ.

     

    https://www.youtube.com/watch?v=XPd_L8-OBJE

     

  • ಕರು ಸತ್ತಿದ್ದಕೆ ಪ್ರಾಯಶ್ಚಿತ್ತವಾಗಿ ಭಿಕ್ಷೆ ಬೇಡುವಂತೆ ಮಹಿಳೆಗೆ ಆದೇಶ!

    ಕರು ಸತ್ತಿದ್ದಕೆ ಪ್ರಾಯಶ್ಚಿತ್ತವಾಗಿ ಭಿಕ್ಷೆ ಬೇಡುವಂತೆ ಮಹಿಳೆಗೆ ಆದೇಶ!

    ಭೋಪಾಲ್: ಆಕಸ್ಮಿಕವಾಗಿ ಕರುವಿನ ಸಾವಿಗೆ ಕಾರಣವಾಗಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಒಂದು ವಾರ ಭಿಕ್ಷೆ ಬೇಡುವಂತೆ 55 ವರ್ಷದ ಮಹಿಳೆಗೆ ಆದೇಶ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ಭಿಂಡ್‍ನಲ್ಲಿ ನಡೆದಿದೆ.

    ಭಿಕ್ಷೆ ಬೇಡಿ ಬಂದ ಹಣದಲ್ಲಿ ಮಹಿಳೆ ಗಂಗಾ ನದಿಗೆ ಹೋಗಿ ಪ್ರಾಯಶ್ಚಿತ್ತದ ಭಾಗವಾಗಿ ಅಲ್ಲಿ ಮುಳುಗೇಳಬೇಕು ಎಂದು ಇಲ್ಲಿನ ಗ್ರಾಮ ಪಂಚಾಯತ್ ಹೇಳಿದೆ. ಆಗಸ್ಟ್ 31ರಂದು ಇಲ್ಲಿನ ಮಟಾಡಿನ್ ಗ್ರಾಮದ ನಿವಾಸಿ ಕಮಲೇಶ್, ತಾಯಿ ಹಸುವಿನಿಂದ ಕರುವನ್ನ ದೂರಕ್ಕೆ ಎಳೆಯುತ್ತಿದ್ದರು. ಈ ವೇಳೆ ಹಗ್ಗ ಕರುವಿನ ಕತ್ತಿಗೆ ಸುಲುಕಿಕೊಂಡು ಸಾವನ್ನಪ್ಪಿತ್ತು.

    ನಂತರ ಸ್ಥಳೀಯ ಪಂಚಾಯತ್ ಮಹಿಳೆಗೆ ಹತ್ತಿರದ ಗ್ರಾಮಗಳಲ್ಲಿ ಒಂದು ವಾರ ಭಿಕ್ಷೆ ಬೇಡಬೇಕು. ಇಲ್ಲವಾದಲ್ಲಿ ಜೀವನಪೂರ್ತಿ ಬಹಿಷ್ಕಾರ ಅನುಭವಿಸಬೇಕಾಗುತ್ತದೆ ಎಂದು ಹೇಳಿತ್ತು. ಮಹಿಳೆಯನ್ನ 7 ದಿನಗಳವರೆಗೆ ಬಹಿಷ್ಕರಿಸಲಾಗಿತ್ತು. ಆಕೆಗೆ ಗ್ರಾಮದೊಳಗೆ ಪ್ರವೇಶವನ್ನೂ ನಿರಾಕರಿಸಲಾಗಿತ್ತು ಎಂದು ಮಹಿಳೆಯ ಮಗ ಅನಿಲ್ ಶ್ರೀವಾಸ್ ಹೇಳಿದ್ದಾರೆ.

    ಹೆದರಿಕೆಯಿಂದ ಯಾರೂ ಕೂಡ ಇದರ ವಿರುದ್ಧ ಪ್ರಶ್ನೆ ಎತ್ತಲಿಲ್ಲ. ನನ್ನ ತಾಯಿ ಹತ್ತಿರದ ಗ್ರಾಮದಲ್ಲಿನ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಪ್ರತಿದಿನ ಭಿಕ್ಷೆ ಬೇಡಿದ್ರು. ನಂತರ ಅವರಿಗೆ ಅನಾರೋಗ್ಯವಾಗಿ ಆಸ್ಪತ್ರೆಯಲ್ಲಿ ದಾಖಲಿಸುವಂತಾಯ್ತು. ನಿನ್ನೆಯಷ್ಟೇ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಅನಿಲ್ ಹೇಳಿದ್ದಾರೆ.

    ಆದ್ರೆ ಪಂಚಾಯತ್ ಮುಖ್ಯಸ್ಥರು ಈ ರೀತಿಯ ಯಾವುದೇ ಆದೇಶ ನೀಡಿಲ್ಲವೆಂದು ಹೇಳಿದ್ದಾರೆ. ಸ್ವತಃ ಮಹಿಳಯೇ ಪಂಚಾಯ್ತಿ ಕರೆದು ಪ್ರಾಯಶ್ಚಿತ್ತ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ಹೇಳಿದ್ರು ಎಂದು ಪಂಚಾಯತ್ ಮುಖ್ಯಸ್ಥ ಶಂಭು ಶ್ರೀನಿವಾಸ್ ಹೇಳಿದ್ದಾರೆ.

    ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಯಾರಾದ್ರೂ ದೂರು ಕೊಟ್ಟರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.