ಮುಂಬೈ: ಭಿಕ್ಷುಕರೊಬ್ಬರು ಸಾವನ್ನಪ್ಪಿದ ಕುರಿತು ತಿಳಿಸಲು ಅವರ ಮನೆಗೆ ತೆರಳಿದ ಪೊಲೀಸರು ಹೌಹಾರಿದ್ದು, ಸಣ್ಣ ಗುಡಿಸಲಲ್ಲಿ ಲಕ್ಷಾಂತರ ರೂ. ನಾಣ್ಯಗಳನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ.
ಶುಕ್ರವಾರ ರಾತ್ರಿ ಗೋವಂಡಿ ರೈಲು ನಿಲ್ದಾಣದಲ್ಲಿ ಹಳಿ ದಾಟುತ್ತಿದ್ದ ವೇಳೆ ವೇಗದ ರೈಲಿಗೆ ಡಿಕ್ಕಿ ಹೊಡೆದು ಬಿಕ್ಷುಕ ಬಿರ್ಭಿಚಂದ್ ಆಜಾದ್(62) ಮೃತಪಟ್ಟಿದ್ದಾರೆ. ಈ ಸುದ್ದಿಯನ್ನು ಅವರ ಸಂಬಂಧಿಕರು ಹಾಗೂ ಇತರ ಭಿಕ್ಷುಕರಿಗೆ ತಿಳಿಸಲು ಗೀವಾಂಡಿ ರೈಲು ನಿಲ್ದಾಣದ ಬಳಿಯ ಅವರ ಗುಡಿಸಲಿಗೆ ತೆರಳಿದ ರೈಲ್ವೆ ಪೊಲೀಸರ ತಂಡಕ್ಕೆ ಫುಲ್ ಶಾಕ್ ಆಗಿದೆ. ಇದನ್ನೂ ಓದಿ: 10 ವರ್ಷ ಭಿಕ್ಷೆ ಬೇಡಿ 6 ಕೋಟಿ ರೂ. ಸಂಪಾದಿಸಿದ ಭಿಕ್ಷುಕಿ
ಭಿಕ್ಷುಕನ ಗುಡಿಸಲನ್ನು ಪ್ರವೇಶಿಸಿದ ನಂತರ ಯಾರೂ ಇಲ್ಲದ್ದನ್ನು ಕಂಡು ಪೊಲೀಸರು ಒಳಗೆ ತೆರಳಿ ಹುಡುಕಾಟ ನಡೆಸಿದ್ದಾರೆ. ಅಷ್ಟು ಸಣ್ಣ ಗುಡಿಸಲಲ್ಲಿಯೇ ಹತ್ತಾರು ಗನ್ನಿ ಬ್ಯಾಗ್‍ಗಳಲ್ಲಿ ಲಕ್ಷಾಂತರ ರೂ. ನಾಣ್ಯಗಳಿರುವುದು ಪೊಲೀಸರಿಗೆ ಕಂಡು ಬಂದಿದೆ. ಎಣಿಸಲು ಕುಳಿತ ಪೊಲೀಸರು ನಿಬ್ಬೆರಗಾಗಿದ್ದು, ಒಟ್ಟು 1.77 ಲಕ್ಷ ರೂ. ಸಿಕ್ಕಿದೆ.
ಗುಡಿಸಲಿನಲ್ಲಿಟ್ಟಿದ್ದ ನಾಣ್ಯಗಳನ್ನು ಎಣಿಸಲು ಪೊಲೀಸರು ಸುಮಾರು 8 ಗಂಟೆಯನ್ನು ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಾತ್ರವಲ್ಲದೆ ವಿವಿಧ ಬ್ಯಾಂಕ್‍ಗಳಲ್ಲಿ ಸುಮಾರು 8.77 ಲಕ್ಷ ರೂ. ಮೌಲ್ಯದ ಎಫ್‍ಡಿ(ಫಿಕ್ಸಡ್ ಡಿಪಾಸಿಟ್) ಇಟ್ಟಿರುವ ರಶೀದಿಯನ್ನು ಗಮನಿಸಿದ ನಂತರ ಪೊಲೀಸರ ತಂಡ ಇನ್ನೂ ಆಘಾತಕ್ಕೊಳಗಾಗಿದೆ.

ಆಜಾದ್ ಅವರ ಪಾನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಸಿನಿಯರ್ ಸಿಟಿಜನ್ ಕಾರ್ಡ್‍ಗಳನ್ನು ಪೊಲೀಸ್ ತಂಡ ರಾಜಸ್ತಾನದಲ್ಲಿ ಪತ್ತೆ ಮಾಡಿದೆ. ಆತನ ಕುಟುಂಬವನ್ನು ಪತ್ತೆ ಹಚ್ಚಲು ರಾಜಸ್ಥಾನಕ್ಕೆ ತೆರಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಆಜಾದ್ ಅವರ ದೇಹ ಮತ್ತು ವಸ್ತುಗಳನ್ನು ಅವರ ಸಂಬಂಧಿಕರಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಜಾದ್ ಭಿಕ್ಷುಕರಾಗಿದ್ದು, ಹಲವು ವರ್ಷಗಳಿಂದ ಮುಂಬೈನಲ್ಲೇ ವಾಸಿಸುತ್ತಿದ್ದಾರೆ ಎಂದು ಅಲ್ಲಿನ ವ್ಯಾಪಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.