Tag: ಭಿಕ್ಷುಕರು

  • ಭಿಕ್ಷುಕರ ವಿರುದ್ಧ ಕ್ರಮಕ್ಕೆ ಮುಂದಾದ ಪೊಲೀಸರು

    ಭಿಕ್ಷುಕರ ವಿರುದ್ಧ ಕ್ರಮಕ್ಕೆ ಮುಂದಾದ ಪೊಲೀಸರು

    ಮುಂಬೈ: ನಗರದ ಎಲ್ಲಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಂಡುಬರುವ ಭಿಕ್ಷುಕರನ್ನು ಗಮನಿಸಿ ಅವರನ್ನು ಕರೆತಂದು ಚೆಂಬೂರಿನಲ್ಲಿ ಸ್ಥಾಪಿಸಿರುವ ವಿಶೇಷ ಮನೆಗೆ ಸೇರಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಈ ಮೂಲಕ ನಗರದಲ್ಲಿ ಭಿಕ್ಷಾಟನೆಗೆ ಬ್ರೇಕ್ ಹಾಕುವ ಕಾರ್ಯಕ್ಕೆ ಸನ್ನದ್ಧವಾಗಿದೆ.

    ಮುಂಬೈ ನಗರ ಜಂಟಿ ಪೊಲೀಸ್ ಆಯುಕ್ತ ವಿಶ್ವಾಸ್ ನಾಗ್ರೆ ಪಾಟೀಲ್ ಅವರ ಸೂಚನೆಯ ಮೇರೆಗೆ ನಗರದ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಭಿಕ್ಷುಕರನ್ನು ಪತ್ತೆ ಮಾಡಿ ಕರೆತಂದು ಕೋವಿಡ್ ಟೆಸ್ಟ್ ಮಾಡಿಸಿ ಚೆಂಬೂರಿನಲ್ಲಿ ಸ್ಥಾಪಿಸಿರುವ ವಿಶೇಷ ಮನೆಯಲ್ಲಿ ಆಶ್ರಯ ನೀಡುವಂತೆ ತಿಳಿಸಿದ್ದಾರೆ. ಇದರೊಂದಿಗೆ ನಗರದಲ್ಲಿ ಭಿಕ್ಷಾಟನೆಯನ್ನು ನಿಷೇಧ ಮಾಡಲು ಹೊರಟಿದ್ದಾರೆ.

    ಬಾಂಬೆ ಭಿಕ್ಷಾಟನೆ ಕಾಯ್ದೆ 1959ರ ಪ್ರಕಾರ ನಗರದಲ್ಲಿ ಭಿಕ್ಷಾಟನೆ ನಿಷೇಧಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. ಭಿಕ್ಷಾಟನೆ ಒಂದು ಸಾಮಾಜಿಕ ಅಪರಾಧ ಎಂದು ತಿಳಿಸಿ ಎಲ್ಲಾ ಠಾಣೆಗಳಿಗೆ ಮಾಹಿತಿ ನೀಡಿ ಕೋರ್ಟ್ ನ ಆದೇಶದಂತೆ ಕೋವಿಡ್ ಟೆಸ್ಟ್ ಮಾಡಿಸಿ ನಂತರ ಭಿಕ್ಷುಕರ ನೂತನ ಮನೆಗೆ ಸೇರಿಸಲು ಡಿಸಿಪಿ ಎಸ್ ಚೈತನ್ಯ ಆದೇಶಿಸಿದ್ದಾರೆ.

    ಭಿಕ್ಷಾಟನೆ ಸಾಮಾಜಿಕ ಅಪರಾಧವಾಗಿದ್ದು ಚಿಕ್ಕ ಮಕ್ಕಳನ್ನು ಭಿಕ್ಷಾಟನೆಗೆ ತಲ್ಲುತ್ತಿರುವುದು ಕಂಡು ಬಂದಿದ್ದು, ಇದು ಮುಂಬೈ ನಗರಕ್ಕೆ ಕಪ್ಪು ಚುಕ್ಕೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

    ಈ ಕುರಿತು ಸಾರ್ವಜನಿಕ ವರ್ಗದಿಂದ ಪ್ರಶ್ನೆ ಬಂದಿದ್ದು ಯಾವ ರೀತಿ ಭಿಕ್ಷುಕರನ್ನು ಹೊಸ ಮನೆಯಲ್ಲಿ ನೋಡಿಕೊಳ್ಳುವ ವ್ಯವಸ್ಥೆ ಇದೆ ಎಂದಿದ್ದಾರೆ. ಈಗಾಗಲೇ ಭಿಕ್ಷುಕರಿಗಾಗಿ ಚೆಂಬೂರಿನಲ್ಲಿ ಹೊಸದಾಗಿ ನಿರ್ಮಿಸುವ ಮನೆಯಲ್ಲಿ ಮೊದಲು ಕೋವಿಡ್ ಟೆಸ್ಟ್ ನಡೆಸಿ ನಂತರ ಅದನ್ನು ಪುನರ್‍ಶ್ಚೇತನ ಕೇಂದ್ರವಾಗಿಸುವ ಗುರಿ ಹೊಂದಲಾಗಿದೆ ಎಂದು ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರಾದ ಅಭಾ ಸಿಂಗ್ ಹೇಳಿದ್ದಾರೆ. ಪ್ರಸ್ತುತ 14 ಮಂದಿ ಭಿಕ್ಷುಕರನ್ನು ಚೆಂಬೂರಿನ ಪುನರ್‌ಶ್ಚೇತನ ಕೇಂದ್ರಕ್ಕೆ ಪೊಲೀಸರು ದಾಖಲಿಸಿದ್ದಾರೆ.

  • ಜೈಪುರದಲ್ಲಿರುವ ಭಿಕ್ಷುಕರಲ್ಲಿ ಇಬ್ಬರು ಮಾಸ್ಟರ್ ಡಿಗ್ರಿ, 3 ಪದವೀಧರರು ಪತ್ತೆ

    ಜೈಪುರದಲ್ಲಿರುವ ಭಿಕ್ಷುಕರಲ್ಲಿ ಇಬ್ಬರು ಮಾಸ್ಟರ್ ಡಿಗ್ರಿ, 3 ಪದವೀಧರರು ಪತ್ತೆ

    – ಕೆಲಸ ನೀಡಿದರೆ ಮಾಡಲು ಸಿದ್ಧ

    ಜೈಪುರ: ರಾಜಸ್ತಾನದ ಜೈಪುರದಲ್ಲಿ ಪೊಲೀಸರು ಸಮೀಕ್ಷೆ ನಡೆಸಿದ್ದು, ನಗರದಲ್ಲಿರುವ 1,162 ಭಿಕ್ಷುಕರಲ್ಲಿ ಇಬ್ಬರು ಸ್ನಾತಕೋತ್ತರ ಮತ್ತು ಮೂವರು ಪದವೀಧರರನ್ನು ಪತ್ತೆ ಮಾಡಿದ್ದಾರೆ.

    ಜೈಪುರವನ್ನು ಭಿಕ್ಷುಕರಿಂದ ಮುಕ್ತವಾಗಿ ಮಾಡುವುದು ಮತ್ತು ಅವರಿಗೆ ಕೆಲವು ಉದ್ಯೋಗ ಕೌಶಲ್ಯಗಳನ್ನು ನೀಡುವುದು, ಇತರರನ್ನು ಕೌಶಲ್ಯರಹಿತ ಉದ್ಯೋಗಗಳಿಗೆ ಪರಿಚಯಿಸುವುದು ಈ ಸಮೀಕ್ಷೆಯ ಉದ್ದೇಶವಾಗಿದೆ. ಈ ಸಮೀಕ್ಷೆಯ ಪ್ರಕಾರ ಜೈಪುರದಲ್ಲಿ 825 ಭಿಕ್ಷಕರು ಅನಕ್ಷರಸ್ಥರು, 39 ಜನ ಅಕ್ಷರಸ್ಥರು ಮತ್ತು 193 ಜನ ಶಾಲೆಗೆ ಹೋಗಿದ್ದವರು ಸಿಕ್ಕಿದ್ದಾರೆ.

    ಸಮೀಕ್ಷೆಯ ಪ್ರಕಾರ, ಪದವೀಧರ ಭಿಕ್ಷುಕರು ಜೈಪುರದ ರಾಮ್ನಿವಾಸ್ ಬಾಗ್, ಸಿ-ಸ್ಕೀಮ್ ಮತ್ತು ವಾಲ್ಡ್ ಸಿಟಿಯಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ವಿದ್ಯಾವಂತ ಭಿಕ್ಷುಕರು ಅವಕಾಶ ನೀಡಿದರೆ ಗೌರವಯುತ ಜೀವನವನ್ನು ಕಟ್ಟಿಕೊಳ್ಳಲು ಸಿದ್ಧವಿದ್ದೇವೆ ಎಂದು ಹೇಳಿದ್ದಾರೆ ಎಂದು ಸಮೀಕ್ಷೆ ಮಾಡಿದ ಸಂಸ್ಥೆಯವರು ಹೇಳಿದ್ದಾರೆ. ಅಕ್ಷರಸ್ಥ ಐದು ಜನ ಭಿಕ್ಷುಕರಲ್ಲಿ ಇಬ್ಬರು 32 ಮತ್ತು 35 ವರ್ಷದೊಳಗಿನವರು, ಇನ್ನಿಬ್ಬರು 50 ರಿಂದ 55 ವರ್ಷದೊಳಗಿನವರು ಮತ್ತು ಒಬ್ಬರು 65 ವರ್ಷ ವಯಸ್ಸಿನವರು ಎಂದು ತಿಳಿದು ಬಂದಿದೆ.

    ಐದು ಉನ್ನತ ಮಟ್ಟದ ವಿದ್ಯಾವಂತ ಭಿಕ್ಷುಕರು ಹೋಟೆಲ್‍ಗಳು, ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಮತ್ತು ಇತರ ಕೌಶಲ್ಯರಹಿತ ಉದ್ಯೋಗಗಳಲ್ಲಿ ಕೆಲಸ ಮಾಡಲು ಸಿದ್ಧವಿದ್ದೇವೆ ಎಂದು ಸರ್ವೇಯರ್ ಗಳಿಗೆ ತಿಳಿಸಿದ್ದಾರೆ. ಒಟ್ಟು ಭಿಕ್ಷುಕರಲ್ಲಿ ಕನಿಷ್ಠ 419 ಮಂದಿ ಜನರು ಈ ಕೆಲಸವನ್ನು ಬಿಟ್ಟು ಒಳ್ಳೆಯ ಜೀವನವನ್ನು ಕಟ್ಟಿಕೊಳ್ಳಲು ಸಿದ್ಧರಿದ್ದಾರೆ. ಜೊತೆಗೆ 27 ಭಿಕ್ಷುಕರು ಅಧ್ಯಯನ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

    ಇದರಲ್ಲಿ ಓರ್ವ ಭಿಕ್ಷುಕ ಮಾತನಾಡಿ, ನಾನು ಝೂನ್‍ಝುನು ಮೂಲದವನು. 25 ವರ್ಷಗಳ ಹಿಂದೆ ಸರ್ಕಾರಿ ಕಾಲೇಜಿನಿಂದ ಪದವಿ ಪಡೆದಿದ್ದೇನೆ. ಉದ್ಯೋಗ ಹುಡುಕಲು ಜೈಪುರಕ್ಕೆ ಬಂದೆ ಆದರೆ ನನಗೆ ಇಲ್ಲಿ ಉದ್ಯೋಗ ಸಿಗಲಿಲ್ಲ. ಈ ಸಮಯದಲ್ಲಿ ನನಗೆ ತಿನ್ನಲು ಮತ್ತು ಮಲಗಲು ಸ್ಥಳವಿಲ್ಲದ ಪರಿಸ್ಥಿತಿ ನಿರ್ಮಾಣವಾಯಿತು. ನನಗೆ ಕುಟುಂಬದವರೆಂದು ಯಾರೂ ಇಲ್ಲ. ಆದ್ದರಿಂದ ಅನಿವಾರ್ಯವಾಗಿ ಬೀದಿಯಲ್ಲಿ ಭಿಕ್ಷೆ ಬೇಡಿ ಜೀವನ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

    ನಮಗೆ ಅವಕಾಶ ಕೊಟ್ಟರೆ ಗೌರವಯುತ ಜೀವನವನ್ನು ಕಟ್ಟಿಕೊಳ್ಳಲು ಸಿದ್ಧವಿದ್ದೇವೆ. ನಾನು ಕಾರ್ಮಿಕ ಕೆಲಸ ಅಥವಾಸ ನಗರವನ್ನು ಸ್ವಚ್ಛ ಮಾಡುವ ಕೆಲಸವಾಗಲಿ ಮಾಡಲು ಸಿದ್ಧ. ನನಗೆ ದೈನಂದಿನ ಅಗತ್ಯಗಳನ್ನು ಖರೀದಿಸಲು ಮತ್ತು ಮನೆಗೆ ಬಾಡಿಗೆ ಪಾವತಿಸಲು ಸಾಧ್ಯವಾಗುವಷ್ಟು ಸಂಬಳ ನೀಡಿದರೆ ಸಾಕು. ಎಲ್ಲರೂ ಒಳ್ಳೆಯ ಜೀವನವನ್ನು ಬಯಸುತ್ತಾರೆ. ಹಾಗೆಯೇ ನಾವು ಕೂಡ ಗೌರವಯುತ ಜೀವನವನ್ನು ಬಯಸುತ್ತೇವೆ ಎಂದು ತಿಳಿಸಿದ್ದಾರೆ.

  • ರಾಯಚೂರು ಸಂಪೂರ್ಣ ಲಾಕ್‍ಡೌನ್ – ಊಟವಿಲ್ಲದೆ ಪರದಾಡುತ್ತಿರೋ ಭಿಕ್ಷುಕರು

    ರಾಯಚೂರು ಸಂಪೂರ್ಣ ಲಾಕ್‍ಡೌನ್ – ಊಟವಿಲ್ಲದೆ ಪರದಾಡುತ್ತಿರೋ ಭಿಕ್ಷುಕರು

    ರಾಯಚೂರು: ಜಿಲ್ಲೆಯಲ್ಲಿ ಪತ್ತೆಯಾದ ಆರು ಜನ ಕೊರೊನಾ ಸೋಂಕಿತರ ಸಂಪರ್ಕದಲ್ಲಿರುವವರ ಪತ್ತೆಗಾಗಿ ಇಡೀ ನಗರವನ್ನ ಇಂದು ಬಂದ್ ಮಾಡಲಾಗಿದೆ. ಸಂಪೂರ್ಣ ಲಾಕ್‍ಡೌನ್ ಇರುವುದರಿಂದ ಹೋಟೆಲ್, ಬೇಕರಿ, ಅಂಗಡಿ ಮುಗ್ಗಟ್ಟು ಸಂಪೂರ್ಣ ಬಂದ್ ಆಗಿದ್ದು, ಜನರ ಓಡಾಟವೂ ವಿರಳವಾಗಿದೆ. ಇದರಿಂದ ರಸ್ತೆಯ ಬದಿಯ ಭಿಕ್ಷುಕರು ಊಟವಿಲ್ಲದೆ ಪರದಾಡುತ್ತಿದ್ದಾರೆ.

    ಮೂರನೇ ಹಂತದ ಲಾಕ್‍ಡೌನ್ ಆರಂಭವಾದ ನಂತರ ರಾಯಚೂರಿನಲ್ಲಿ ಲಾಕ್‍ಡೌನ್ ಸಡಲಿಕೆಯಾಗಿತ್ತು. ಭಿಕ್ಷೆ ಬೇಡಿ ಬದುಕುತ್ತಿದ್ದವರು ಕೂಡ ಈಗ ಊಟಕ್ಕಾಗಿ ಪರದಾಡುತ್ತಿದ್ದಾರೆ.

    ಸಂಪೂರ್ಣ ಲಾಕ್‍ಡೌನ್ ಇರುವುದರಿಂದ ದಾನಿಗಳು ಸಹ ಊಟದ ಪಾಕೇಟ್ ನೀಡುತ್ತಿಲ್ಲ. ಹೀಗಾಗಿ ಕೇವಲ ನೀರು ಕುಡಿದು ಯಾರಾದರೂ ಊಟ ನೀಡುತ್ತಾರ ಅಂತ ನಿರೀಕ್ಷೆಯಲ್ಲೇ ಕಾಯುತ್ತಿದ್ದಾರೆ.

    ರಾಯಚೂರು ರೈಲು ನಿಲ್ದಾಣ ಸೇರಿದಂತೆ ವಿವಿಧೆಡೆ ಇರುವ 200ಕ್ಕೂ ಹೆಚ್ಚು ಭಿಕ್ಷುಕರು ಇಂದು ಊಟವಿಲ್ಲದೆ ಪರದಾಡುತ್ತಿದ್ದಾರೆ. ಜಿಲ್ಲಾಡಳಿತ ಸಹ ರಸ್ತೆ ಬದಿಯ ಭಿಕ್ಷುಕರು, ಅನಾರೋಗ್ಯ ಪೀಡಿತ ವೃದ್ಧರಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ.

  • ಹೆಸರಿಗೆ ಪಾನಿಪುರಿ ಅಂಗಡಿ ಸಂಪಾದನೆ ಮಾತ್ರ ಲಕ್ಷ ಲಕ್ಷ..!

    ಹೆಸರಿಗೆ ಪಾನಿಪುರಿ ಅಂಗಡಿ ಸಂಪಾದನೆ ಮಾತ್ರ ಲಕ್ಷ ಲಕ್ಷ..!

    -ಪಬ್ಲಿಕ್ ಬೇಟೆಯಲ್ಲಿ ತಗ್ಲಾಕ್ಕೊಂಡ್ರು ಸೈಡ್ ಬ್ಯುಸಿನೆಸ್ ಪಾನಿಪುರಿ ಒನರ್ಸ್.!

    ಬೆಂಗಳೂರು: ನೆಪಮಾತ್ರಕ್ಕೆ ಪಾನಿಪುರಿ ಬ್ಯುಸಿನೆಸ್ ಆದ್ರೆ ತಿಂಗಳಿಗೆ ಲಕ್ಷ ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿರೋ ಪಾನಿಪುರಿ ಅಂಗಡಿಯವರ ಅಸಲಿ ಮುಖ ಪಬ್ಲಿಕ್ ಟಿವಿ ರಹಸ್ಯ ಕಾರ್ಯಚರಣೆ ಮೂಲಕ ಬಯಲಾಗಿದೆ.

    ಪಾನಿಪುರಿ ಅಂಗಡಿ ಇಟ್ಕೊಂಡು ಲಕ್ಷ ಲಕ್ಷ ಎಣಿಸೋದಾ ಅದ್ಯಾಗೆ ಅಂತಾ ಅಚ್ಚರಿ ಆಗುತ್ತೆ. ಆದ್ರೆ ಇದು ನಿಜ, ಕೆ.ಆರ್ ಮಾರ್ಕೆಟ್‍ನ ಪಾನಿಪುರಿ ಮಾರೋರು ಲಕ್ಷಾಧಿಪತಿಗಳು ಅನ್ನೋದು ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಚರಣೆಯಲ್ಲಿ ಬಯಲಾಗಿದೆ. ಕೆ.ಆರ್ ಮಾರ್ಕೆಟ್‍ನ ಬಸ್ ಸ್ಟ್ಯಾಂಡ್ ಬಳಿ ಚಕಚಕ ಅಂತಾ ಈರುಳ್ಳಿ ಟೊಮ್ಯೋಟೋ ಕಟ್ ಮಾಡಿಕೊಂಡು ಪಾನಿಪುರಿ ಮಾರುವ ಅಸಾಮಿಗಳು, ತಿಂಗಳಿಗೆ ಏನಿಲ್ಲ ಅಂದರೂ ಭರ್ತಿ ಲಕ್ಷ ಲಕ್ಷ ಸಂಪಾದಿಸ್ತಾರೆ.

    ಈ ಪಾನಿಪುರಿ ಅಂಗಡಿಗಳೆಲ್ಲ ಇವರಿಗೆ ನೆಪದ ಬ್ಯುಸಿನೆಸ್. ಅಸಲಿಗೆ ಇವರೆಲ್ಲ ಬೆಗ್ಗರ್ಸ್ ಮಾಫಿಯಾದ ಡಾನ್‍ಗಳು. ಕೆಲಸಕ್ಕೆ ಅಂತ ಬಡ ಹೆಣ್ಮಕ್ಕಳನ್ನು ದೂರದೂರಿಂದ ಕರ್ಕೊಂಡು ಬಂದು ಭಿಕ್ಷಾಟನೆಗೆ ಬಿಡೋದೇ ಅವರ ಅಸಲಿ ವ್ಯವಹಾರವಾಗಿದೆ.

    ಬೆಗ್ಗರ್ ಮಾಫಿಯಾದ ಸುದ್ದಿಯ ಬೆನ್ನತ್ತಿ ಹೊರಟ ಪಬ್ಲಿಕ್ ಟಿವಿಗೆ ಮಾರ್ಕೆಟ್‍ನ ಜನಜಂಗುಳಿಯ ಮಧ್ಯೆ ಭಿಕ್ಷೆ ಬೇಡುವ ಭಿಕ್ಷುಕರ ಹಿಂದಿನ ಅಸಲಿ ಕೈಗಳ ನಿಜಬಣ್ಣ ಗೊತ್ತಾಗಿದೆ. ಅಲ್ಲಿ ಪಾನಿಪುರಿ ಅಂಗಡಿಯೊಂದನ್ನು ಇಟ್ಕೊಂಡಿರೊ ವ್ಯಕ್ತಿ ಐದಾರು ಜನ ಭಿಕ್ಷುಕರ ಟೀಮ್ ಲೀಡ್ ಮಾಡುತ್ತಾನಂತೆ. ಇವನ ಟೀಮ್‍ನಲ್ಲಿರುವ ಒಬ್ಬ ಮಹಿಳೆಯ ಜೊತೆ ಮಾತನಾಡಿದಾಗ ಈ ಕರ್ಮಕಾಂಡವನ್ನು ಆಕೆ ಬಿಚ್ಚಿಟ್ಟಿದ್ದಾಳೆ.

    ಐದಾರು ಜನ ಕಳಿಸ್ತಾರೆ. ಕೆಲಸ ಕೊಡುಸುತ್ತೇವೆ ಅಂತ ನನನ್ನು ಊರಿಂದ ಕರೆದುಕೊಂಡು ಬಂದಿದ್ದಾರೆ. ಇಲ್ಲಿ ಬಂದು ನಾನು ಭಿಕ್ಷೆ ಬೇಡುತ್ತಿರುವುದು ನಮ್ಮ ಮನೆಯವರಿಗೆ ಗೊತ್ತಿಲ್ಲ. ಭಿಕ್ಷೆ ಬೇಡಿ ಒಟ್ಟಾದ ಹಣವನ್ನು ಪಾನಿಪುರಿ ಅಂಗಡಿ ಅವರಿಗೆ ಕೊಡ್ತೀನಿ ಎಂದು ಈ ದಂಧೆಯಲ್ಲಿ ಸಿಲುಕಿಕೊಂಡಿದ್ದ ಮಹಿಳೆ ಹೇಳಿದ್ದಾರೆ.

    ಕೆಲಸದ ಆಮಿಷವೊಡ್ಡಿ ಬಡ ಹೆಣ್ಣುಮಕ್ಕಳನ್ನು ದೂರದೂರಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಮಾರ್ಕೆಟ್‍ನ ಜನಜಂಗುಳಿ ಮಧ್ಯೆ ಭಿಕ್ಷೆ ಬೇಡಿಸಿ ಈ ಪಾನಿಪುರಿ ಅಂಗಡಿ ಅವರು ಹಣ ಮಾಡುತ್ತಿದ್ದಾರೆ. ಸರಿಯಾಗಿ ಈ ಹೆಣ್ಣುಮಕ್ಕಳಿಗೆ ತಿನ್ನೋಕೆ ಅನ್ನ, ಮಲಗೋಕೆ ಜಾಗ ಕೊಡುತ್ತಿಲ್ಲ. ಅಷ್ಟೇ ಅಲ್ಲದೆ ಕಾಯಿಲೆ ಬಂದು ಹುಷಾರಿಲ್ಲ ಅಂತ ಮಲಗಿದ್ರೆ ವಿಷ ಕುಡಿದು ಸತ್ತೋಗಿ ಅಂತ ಹಿಂಸೆ ಕೊಡುತ್ತಾರೆ ಈ ಪಾನಿಪುರಿ ಅಂಗಡಿಯ ದಂಧೆಕೋರರು ಎಂದು ನೊಂದ ಮಹಿಳೆ ತಿಳಿಸಿದ್ದಾರೆ.

    ಕೆಲ ಪಾನಿಪುರಿ ವ್ಯಾಪಾರಿಗಳು ಈ ರೀತಿ ಅಕ್ರಮ ದಂಧೆ ಮಾಡಿಕೊಂಡು ಕಂಡವರ ಮಕ್ಕಳನ್ನು ಗುಂಡಿಗೆ ದೂಡಿ ಲಕ್ಷ ಲಕ್ಷ ಎಣಿಸುತ್ತಿದ್ದಾರೆ. ಕೆ.ಆರ್ ಮಾರ್ಕೆಟ್‍ನೊಳಗೆ ನಡೆಯುವ ಈ ದಂಧೆಗೆ ಖಾಕಿ ಬ್ರೇಕ್ ಹಾಕಬೇಕು. ಹಾಗೆಯೇ ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

    https://www.youtube.com/watch?v=ACmX0o8J9yk

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮಂಗ್ಳೂರಿನಲ್ಲಿದ್ದಾರೆ ಹೈ-ಫೈ ಭಿಕ್ಷುಕಿಯರು

    ಮಂಗ್ಳೂರಿನಲ್ಲಿದ್ದಾರೆ ಹೈ-ಫೈ ಭಿಕ್ಷುಕಿಯರು

    ಮಂಗಳೂರು: ಅತ್ತ ದುಡಿಯಲೂ ಆಗದೆ, ತಿನ್ನೋಕೂ ಗತಿಯಿಲ್ಲದವರುವ ಕೊನೆಗೆ ಭಿಕ್ಷೆಗೆ ಇಳಿಯುತ್ತಾರೆ. ಆದರೆ ನಗರದಲ್ಲೊಂದು ಯುವತಿಯರ ತಂಡ ಹೈ- ಫೈ ಆಗಿದ್ದುಕೊಂಡು ಭಿಕ್ಷಾಟನೆಗಿಳಿದಿದೆ.

    ನಗರದ ಹಲವು ಕಡೆ ಯುವತಿಯರು ಹೈ-ಫೈ ರೀತಿಯಲ್ಲಿ ಪ್ಯಾಂಟ್, ಶರ್ಟ್ ಹಾಕಿಕೊಂಡು ಹಿಂದಿ ಮಾತನಾಡುತ್ತಾ ಭಿಕ್ಷೆ ಬೇಡುತ್ತಿದ್ದಾರೆ. ಸಿಗ್ನಲ್ ಗಳ ಬಳಿ ವಾಹನ ಸವಾರರಿಗೆ ನಾವು ರಾಜಸ್ಥಾನದ ರಾಣಿಪುರ್ ಜಿಲ್ಲೆಯವರು, ಪ್ರವಾಹದಿಂದಾಗಿ ಎಲ್ಲವನ್ನು ಕಳೆದುಕೊಂಡಿದ್ದೇವೆ. ಹೀಗಾಗಿ ಗತಿಯಿಲ್ಲದೆ ಭಿಕ್ಷೆ ಬೇಡುತ್ತಿದ್ದೇವೆ ಎಂದು ಪ್ರವಾಹ ಪರಿಸ್ಥಿತಿಯ ಬಗ್ಗೆ ಬರೆದುಕೊಂಡಿರುವ ಪತ್ರವನ್ನು ಮುಂದಿಟ್ಟು ಭಿಕ್ಷೆ ಬೇಡುತ್ತಿದ್ದಾರೆ.

    ಯುವತಿಯರನ್ನು ನೋಡಿದರೆ ಯಾವ ಉದ್ಯೋಗಿಗಳಿಗೂ ಕಮ್ಮಿಯಿಲ್ಲದಂತಿದ್ದು, ರಸ್ತೆಯಲ್ಲಿ ಬೈಕಿನಲ್ಲಿ ಬರುವ ಯುವಕರನ್ನು ಯಾಮಾರಿಸಿಕೊಂಡು ನೂರು, ಇನ್ನೂರು ರೂಪಾಯಿಗಳನ್ನು ಕೀಳುತ್ತಿದ್ದಾರೆ. ಇವರ ಈ ವರ್ತನೆಯನ್ನು ಗಮನಿಸಿದ ಕೆಲವು ಯುವಕರು ಆಕ್ಷೇಪಿಸಿ, ಕದ್ರಿ ಪೊಲೀಸ್ ಠಾಣೆಯ ಗಮನಕ್ಕೆ ತಂದಿದ್ದರು.

    ಘಟನೆ ಕುರಿತು ಯುವತಿಯರನ್ನು ವಶಕ್ಕೆ ಪಡೆದ ಪೊಲೀಸರು ಈ ರೀತಿ ಇನ್ನೊಮ್ಮೆ ಮಾಡದ ಹಾಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಆದರೆ ಹಣಗಳಿಸಲು ಯುವತಿಯು ಹೈ-ಫೈ ಭಿಕ್ಷಾಟನೆಗಿಳಿದಿರುವುದು ವಿಪರ್ಯಾಸವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಭಿಕ್ಷುಕರಿಬ್ಬರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಕೊಲೆ!

    ಭಿಕ್ಷುಕರಿಬ್ಬರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಕೊಲೆ!

    ಬೆಂಗಳೂರು: ದುಷ್ಕರ್ಮಿಗಳು ರಸ್ತೆ ಬದಿಯಲ್ಲಿ ಮಲಗಿದ್ದ ಇಬ್ಬರು ಭಿಕ್ಷುಕರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆಯಲ್ಲಿ ನಡೆದಿದೆ.

    ಹೊಸಕೋಟೆ ಪಟ್ಟಣದ ಕೆಇಬಿ ಸರ್ಕಲ್ ನಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದವರಲ್ಲಿ ಓರ್ವರನ್ನು ಹೊಸಕೋಟೆ ಪಟ್ಟಣದ ನಿವಾಸಿ ಮುನಿನಾರಾಯಣಪ್ಪನ ಮಗ ರಮೇಶ(36) ಎನ್ನಲಾಗಿದ್ದು, ಸುಮಾರು 35 ವರ್ಷದ ಮಹಿಳೆಯ ಗುರುತು ಪತ್ತೆಯಾಗಿಲ್ಲ. ದುಷ್ಕರ್ಮಿಗಳು ನಡೆಸಿದ ಈ ಕೃತ್ಯಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ.

    ರಾತ್ರಿ ಸುಮಾರು 2 ರಿಂದ 3 ಗಂಟೆ ಸಮಯದಲ್ಲಿ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದ್ದು, ಹೊಸಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.