Tag: ಭಾಷಾಂತರ

  • ಗೂಗಲ್‌ ಟ್ರಾನ್ಸ್‌ಲೇಟ್‌ಗೆ ಸೇರ್ಪಡೆ ಆಯ್ತು ತುಳು!

    ಗೂಗಲ್‌ ಟ್ರಾನ್ಸ್‌ಲೇಟ್‌ಗೆ ಸೇರ್ಪಡೆ ಆಯ್ತು ತುಳು!

    ಬೆಂಗಳೂರು: ತುಳು ಭಾಷೆಯನ್ನು (Tulu Language) ಕಲಿಯಬೇಕೆಂಬ ಜನರಿಗೆ ಸಿಹಿ ಸುದ್ದಿ. ಈಗ ಗೂಗಲ್‌ ಟ್ರಾನ್ಸ್‌ಲೇಟ್‌ನಲ್ಲಿ ತುಳು ಭಾಷೆ ಸೇರ್ಪಡೆಯಾಗಿದೆ.

    ಗೂಗಲ್‌ ಟ್ರಾನ್ಸ್‌ಲೇಟ್‌ನಲ್ಲಿ ಹೊಸದಾಗಿ 110 ಭಾಷೆಗಳನ್ನು ಸೇರಿಸಿದೆ. ಭಾರತದ ತುಳು ಸೇರಿದಂತೆ ಅವಧಿ, ಬೋಡೋ, ಖಾಸಿ, ಕೊಕ್ಬೊರೊಕ್, ಮಾರ್ವಾಡಿ, ಸಂತಾಲಿಯನ್ನು ಸೇರಿಸಿದೆ.

    Google ಅನುವಾದವನ್ನು 2006 ರಲ್ಲಿ ಪರಿಚಯಿಸಲಾಗಿದ್ದು ಇಲ್ಲಿಯವರೆಗೆ 133 ಭಾಷೆಗಳನ್ನು ಬೆಂಬಲಿಸುತಿತ್ತು. ಆದರೆ ಈಗ ಒಂದೇ ಬಾರಿಗೆ 110 ಭಾಷೆಗಳನ್ನು ಸೇರಿಸಿದ್ದು ಒಟ್ಟು ಈಗ 243 ಭಾಷೆಗಳನ್ನು ಬೆಂಬಲಿಸುತ್ತಿದೆ.

    ಡೆಸ್ಕ್‌ಟಾಪ್‌ನಲ್ಲಿ translate.google.co.in ಹೋಗಿ ಭಾಷೆಯನ್ನು ಆಯ್ಕೆ ಮಾಡಬಹುದು. ಸ್ಮಾರ್ಟ್‌ಫೋನ್‌ ಬಳಕೆದಾರರು ಗೂಗಲ್‌ ಟ್ರಾನ್ಸ್‌ಲೇಟ್‌ ಆಪ್‌ ಡೌನ್‌ಲೋಡ್‌ ಅಥವಾ ಡೆಸ್ಕ್‌ಟಾಪ್‌ ಯುಆರ್‌ಎಲ್‌ ಲಿಂಕ್‌ ಬಳಸಿ ಭಾಷಾಂತರ ಮಾಡಬಹುದು. ಇದನ್ನೂ ಓದಿ: ಡಿಕೆಗೆ ಸಿಎಂ ಸ್ಥಾನ ಹೇಳಿಕೆ ಹಿಂದಿದ್ಯಾ ಕುತಂತ್ರ? – ಆಪ್ತರ ಬಳಿ ಸಿಎಂ ತೀವ್ರ ಅಸಮಾಧಾನ

    ಹಲವು ಪದಗಳು ನಿಖರವಾಗಿ ತುಳುವಿಗೆ ಅನುವಾದವಾದರೂ ಕೆಲವೊಂದು ಪದಗಳು ಸರಿಯಾಗಿ ಅನುವಾದವಾಗೇಬೇಕಿದೆ. ಕನ್ನಡ ಭಾಷೆಯನ್ನು ಆರಂಭದಲ್ಲಿ ಟ್ರಾನ್ಸ್‌ಲೇಟ್‌ಗೆ ಸೇರಿಸಿದಾಗಲೂ ಕೆಲವೊಂದು ಪದಗಳು ಸರಿಯಾಗಿ ಅನುವಾದವಾಗುತ್ತಿರಲಿಲ್ಲ. ಹಂತ ಹಂತವಾಗಿ ಗೂಗಲ್‌ ಇದನ್ನು ಸರಿಪಡಿಸುತ್ತಾ ಬಂದಿದೆ. ಗೂಗಲ್‌ನ ಆರಂಭಿಕ ಪ್ರಯತ್ನಕ್ಕೆ ತುಳು ಭಾಷಿಗರು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

     

  • ಕಿರಣ್ ಬೇಡಿ ಭಾಷಾಂತರ ಪರೀಕ್ಷೆಯಲ್ಲಿ ಪುದುಚೇರಿ ಸಿಎಂ ಪಾಸ್- ವಿಡಿಯೋ ನೋಡಿ

    ಕಿರಣ್ ಬೇಡಿ ಭಾಷಾಂತರ ಪರೀಕ್ಷೆಯಲ್ಲಿ ಪುದುಚೇರಿ ಸಿಎಂ ಪಾಸ್- ವಿಡಿಯೋ ನೋಡಿ

    ಪುದುಚೆರಿ: ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ಅವರು ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರ ಭಾಷಣವನ್ನು ಭಾಷಾಂತರಿಸುವ ಮೂಲಕ ಈಗ ಸುದ್ದಿಯಾಗಿದ್ದಾರೆ.

    ಕಿರಣ್ ಬೇಡಿ ಮತ್ತು ಪುದುಚೇರಿ ಸಿಎಂ ಸ್ವಾಮಿ ತಮ್ಮಿಬ್ಬರ ನಡುವಿನ ಕಚ್ಚಾಟದಿಂದ ಹಿಂದೆ ಸುದ್ದಿಯಾಗಿದ್ದರು. ಆದರೆ ಇವರಿಬ್ಬರು ಪರಸ್ಪರ ಕಾಲೆಳೆದುಕೊಂಡು ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರಿಗೆ ಮನರಂಜನೆ ನೀಡಿದ್ದಾರೆ.

    53ನೇ ಸಾಹಿತ್ಯ ಹಬ್ಬ ‘ಕಂಬನ್ ವಿಳಾ’ದ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಿರಣ್ ಬೇಡಿ ಭಾಗವಹಿಸಿದ್ದರು. ತಮ್ಮ ಭಾಷಣದ ವೇಳೆ, ಇಲ್ಲಿ ಎಷ್ಟು ಜನರಿಗೆ ಇಂಗ್ಲಿಷ್ ಬರುತ್ತದೆ ಎಂದು ಪ್ರಶ್ನಿಸಿದರು. ಈ ವೇಳೆ ಕೆಲವರು ಮಾತ್ರ ಕೈ ಎತ್ತಿದರು. ಆಗ ಶಿಕ್ಷಣ ಸಚಿವ ಕಮಲಾಕಣ್ಣನ್ ಮುಂದೆ ಬಂದು ತಮಿಳಿಗೆ ನಾನು ಭಾಷಾಂತರ ಮಾಡುವುದಾಗಿ ತಿಳಿಸಿದರು.

    ಸಚಿವರ ಮಾತಿಗೆ ಕಿರಣ್ ಬೇಡಿ, ನನ್ನ ಇಂಗ್ಲಿಷ್ ಭಾಷಣವನ್ನು ಮುಖ್ಯಮಂತ್ರಿಗಳು ಅನುವಾದ ಮಾಡಬೇಕು. ಇದು ನನ್ನ ಆಸೆ ಎಂದು ಹೇಳಿದರು. ಬೇಡಿ ಮಾತು ಕೇಳಿ ವೇದಿಕೆಯಲ್ಲಿ ಕುಳಿತುಕೊಂಡಿದ್ದ ಸ್ವಾಮಿ ಅವರು ಮುಂಭಾಗಕ್ಕೆ ಆಗಮಿಸಿ, ಜನ ಬಯಸಿದ್ದಾರೆ. ನಾನು ಭಾಷಾಂತರ ಮಾಡುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ, ನಾನು ಏನು ಭಾಷಣ ಮಾಡುತ್ತೇನೋ ಅದನ್ನು ಮಾತ್ರ ಹೇಳಬೇಕು ಎಂದು ಬೇಡಿ ಷರತ್ತು ವಿಧಿಸಿದರು.

    ಈ ಷರತ್ತಿಗೆ ಸಿಎಂ, ಹಾಗೆಲ್ಲ ಖಾತ್ರಿ ಕೊಡಲು ಸಾಧ್ಯವಿಲ್ಲ ಎಂದು ಚಟಾಕಿ ಹಾರಿಸಿದಾಗ ಬೇಡಿ, ನಾನು ನಿಮ್ಮನ್ನು 10 ನಿಮಿಷಗಳ ಕಾಲ ನಂಬುತ್ತೇನೆ. ಇದೊಂದು ತಾತ್ಕಾಲಿಕ ಸ್ನೇಹ ಎಂದು ಹೇಳಿದರು. ಇದಕ್ಕೆ ನಾರಾಯಣ ಸ್ವಾಮಿ ನಾನು ಸ್ನೇಹ ಶಾಶ್ವತವಾಗಿರಲಿ ಎಂದು ಹೇಳಿ ಭಾಷಾಂತರಕ್ಕೆ ಸಿದ್ಧರಾದರು.

    ತನ್ನ ಎಲ್ಲ ಮಾತುಗಳನ್ನು ನಾರಾಯಣ ಸ್ವಾಮಿ ಸಮರ್ಥವಾಗಿ ಭಾಷಾಂತರಿಸಿದ್ದು ಬೇಡಿ ಅವರಿಗೆ ಖುಷಿ ನೀಡಿತು. ನಂತರ, ಸ್ವಾಮಿ ಅವರಿಗೆ ತಮಿಳು, ಇಂಗ್ಲಿಷ್ ಅಲ್ಲದೇ ಹಿಂದಿ ಮತ್ತು ಫ್ರೆಂಚ್ ಭಾಷೆಯೂ ಬರುತ್ತದೆ. ನನ್ನ ಭಾಷಣವನ್ನು ಅನುವಾದ ಮಾಡಲು ಬಂದಿದ್ದು ನನಗೆ ಬಹಳ ಸಂತಸ ನೀಡಿದೆ ಎಂದು ಶ್ಲಾಘಿಸಿದರು.

    ಕಾರ್ಯಕ್ರಮ ಮುಗಿದ ಬಳಿಕ ಪ್ರತಕರ್ತರು ಸಿಎಂ ಮತ್ತು ನಿಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಬಿಟ್ಟಿದ್ದೀರಾ ಎಂದು ಕೇಳಿದ್ದಕ್ಕೆ, ಪುದುಚೇರಿ ಅಭಿವೃದ್ಧಿಯ ಕಾಳಜಿಯನ್ನು ನಾನು ಹೊಂದಿದ್ದೇನೆ. ನಾನು ಒಂದು ಉದ್ದೇಶಕ್ಕಾಗಿ ಇಲ್ಲಿಗೆ ಆಗಮಿಸಿದ್ದು, ಅದು ಬಿಟ್ಟು ಬೇರೇನೂ ಇಲ್ಲ ಎಂದು ಉತ್ತರಿಸಿ ತೆರಳಿದರು.

    ಬುಧವಾರ ನೈತಿಕ ಹೊಣೆಯನ್ನು ಹೊತ್ತು ಕಿರಣ್ ಬೇಡಿ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಸಿಎಂ ನಾರಾಯಣ ಸ್ವಾಮಿ ಆಗ್ರಹಿಸಿದ್ದರು.