Tag: ಭಾವುಕ

  • ನನ್ನ ಪಾಲಿಗೆ ಇಂದು, ಭವಿಷ್ಯವೂ ನೀನೇ : ಚಿರು ನೆನೆದ ಮೇಘನಾ ರಾಜ್

    ನನ್ನ ಪಾಲಿಗೆ ಇಂದು, ಭವಿಷ್ಯವೂ ನೀನೇ : ಚಿರು ನೆನೆದ ಮೇಘನಾ ರಾಜ್

    ಪ್ರತಿಭಾವಂತ ನಟ ಚಿರಂಜೀವಿ ಸರ್ಜಾ (Chiranjeevi Sarja) ನಿಧನರಾಗಿ ಇಂದಿಗೆ ಮೂರು ವರ್ಷ. ಹೃದಯಾಘಾತದಿಂದ ಹಠಾತ್ತಾಗಿ ನಿಧನ ಹೊಂದಿದ ಚಿರು ಆಗಷ್ಟೇ ಮದುವೆಯಾಗಿದ್ದರು. ಅಸಂಖ್ಯಾತ ಅಭಿಮಾನಿಗಳ ಜೊತೆ ಪ್ರೀತಿಯ ಮಡದಿಯನ್ನೂ ಅವರು ಬಿಟ್ಟು ಹೋದರು. ಈ ನೋವಿನಲ್ಲೇ ಬದುಕುತ್ತಿರುವ ಪತ್ನಿ, ನಟಿ ಮೇಘನಾ ರಾಜ್, ಇಂದು ಪತಿಗಾಗಿ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

    ಚಿರು ಜೊತೆಗಿನ ಆತ್ಮೀಯ ಫೋಟೋವನ್ನು ಹಂಚಿಕೊಂಡಿರುವ ಮೇಘನಾ ರಾಜ್, ‘ನನಗೆ ನಿನ್ನೆ, ನಾಳೆ, ಭವಿಷ್ಯವೂ ನೀನೇʼ ಎಂದು ಭಾವುಕರಾಗಿ ಸಾಲುಗಳನ್ನು ಬರೆದಿದ್ದಾರೆ. ಚಿರುವನ್ನು ಹಿಂದಿನಿಂದ ತಬ್ಬಿಕೊಂಡ ಫೋಟೋವನ್ನು ಶೇರ್ ಮಾಡಿದ್ದಾರೆ. ಫೋಟೋ ಮತ್ತು ಮೇಘನಾ ರಾಜ್ ಬರೆದ ಸಾಲುಗಳು ನಿಜಕ್ಕೂ ಭಾವುಕ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತವೆ. ಇದನ್ನೂ ಓದಿ:ಪ್ರಣಿತಾ ಹಾಟ್‌ನೆಸ್‌ಗೆ ಸಂತೂರ್ ಮಮ್ಮಿ ಎಂದ ನೆಟ್ಟಿಗರು

    ಚಿರಂಜೀವಿ ಸರ್ಜಾ ಅವರನ್ನು ಪುತ್ರನಲ್ಲಿ ಕಾಣುತ್ತಿರುವ ಮೇಘನಾ ರಾಜ್ (Meghana Raj) ಮೊನ್ನೆಯಷ್ಟೇ ರಾಯನ್ ರಾಜ್ ಸರ್ಜಾ (Rayaan Raj Sarja) ರನ್ನು ಶಾಲೆಗೆ ಕಳುಹಿಸಿದ್ದಾರೆ. ಈ ಬಗ್ಗೆ ಮೇಘನಾ ರಾಜ್, ಪೋಸ್ಟ್ ಹಂಚಿಕೊಂಡು ಭಾವುಕರಾಗಿದ್ದರು. ಅವರ ಆ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು.

    ಸರ್ಜಾ ಕುಟುಂಬದ ಖುಷಿ ರಾಯನ್, ಚಿರಂಜೀವಿ ಸರ್ಜಾ ಅಗಲಿಕೆಯ ನಂತರ ಮಗನ ಆರೈಕೆಯಲ್ಲಿ ತನ್ನ ನೋವನ್ನೆಲ್ಲ ಮರೆಯಲು ನಟಿ ಮೇಘನಾ ಪ್ರಯತ್ನಿಸುತ್ತಿದ್ದಾರೆ. ಮಗನ ಖುಷಿಯಲ್ಲಿ ತನ್ನ ಖುಷಿಯನ್ನ ಕಾಣುತ್ತಿದ್ದಾರೆ. ಹೀಗಿರುವಾಗ ಪುತ್ರ ರಾಯನ್ ಶಾಲೆಗೆ ಕಾಲಿಟ್ಟಿರುವ ಬಗ್ಗೆ ನಟಿ ಪೋಸ್ಟ್ ಶೇರ್ ಮಾಡಿದ್ದರು.

    ನಾವು ಪೋಷಕರಾದ ಮೇಲೆ ಮಕ್ಕಳು ಮಾತ್ರವಲ್ಲ ನಾವು ಕೂಡ ಜೀವನ ಪ್ರತಿಯೊಂದು ಮೈಲಿಗಲ್ಲು ದಾಟುತ್ತೀವಿ ಎಂದು ಮೇಘನಾ ಬರೆದುಕೊಂಡಿದ್ದು. ಇಂದು ನಮ್ಮ ಜೀವನದ ತುಂಬಾ ಸ್ಪೆಷಲ್ ದಿನವಾಗಿದೆ. ರಾಯನ್ ರಾಜ್ ಸರ್ಜಾ ಸ್ಕೂಲ್‌ನ ಮೊದಲ ದಿನ ಇಂದು. ನನ್ನ ಭಾವನೆಗಳನ್ನು ಪದಗಳಲ್ಲಿ ವರ್ಣಿಸಲು ಆಗುವುದಿಲ್ಲ. ವಿದ್ಯಾಭ್ಯಾಸ, ಜ್ಞಾನ ಹಾಗೂ ಜೀವನದ ಅತಿ ಅಮೂಲ್ಯವಾದ ಪಾಠಗಳನ್ನು ಕಲಿಯುವುದ್ದಕ್ಕೆ ರಾಯನ್ ಮೊದಲ ಹೆಜ್ಜೆ ಇಡುತ್ತಿದ್ದಾನೆ. ನಿಮ್ಮ ಹಾರೈಕೆ ಮತ್ತು ಪ್ರೀತಿ ಅವನ ಮೇಲಿರಲಿ ಎಂದು ಮೇಘನಾ ರಾಜ್ ಹೇಳಿದ್ದರು.

     

    ಇನ್ನೂ ಮೇಘನಾ ರಾಜ್ ಅವರು ‘ತತ್ಸಮ ತದ್ಭವ’ (Tatsama Tadbhava) ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಂಬ್ಯಾಕ್ ಆಗಿದ್ದಾರೆ. ಫೀಮೇಲ್ ಓರಿಯೆಂಟೆಡ್ ಚಿತ್ರದಲ್ಲಿ ಮೇಘನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  • ಯಾವುದೇ ಒತ್ತಡಕ್ಕೆ ಮಣಿದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲ: ಬಿಎಸ್‍ವೈ

    ಯಾವುದೇ ಒತ್ತಡಕ್ಕೆ ಮಣಿದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲ: ಬಿಎಸ್‍ವೈ

    – ಇನ್ನೊಬ್ಬರು ರಾಜಕೀಯವಾಗಿ ಬೆಳೆಯಲಿ ಎಂಬ ಉದ್ದೇಶದಿಂದ ರಾಜೀನಾಮೆ

    ಶಿವಮೊಗ್ಗ: ಯಾವುದೇ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲ, ರಾಜಕೀಯವಾಗಿ ಇತರರು ಬೆಳೆಯಲಿ ಎಂಬ ಉದ್ದೇಶದಿಂದ ಸಿಎಂ ಸ್ಥಾನದಿಂದ ಇಳಿದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

    ಜಿಲ್ಲೆಯ ಶಿಕಾರಿಪುರದ ಕುಮದ್ವತಿ ಸಭಾಂಗಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾದ ಎರಡು ವರ್ಷದ ಅವಧಿ ಮುಗಿದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಷಣದ ವೇಳೆ ಸ್ವಲ್ಪ ದುಃಖ ವ್ಯಕ್ತಪಡಿಸಿದ್ದೆ. ಶಿಕಾರಿಪುರ ಜನರ ಹೋರಾಟ ನೆನಪು ಮಾಡಿಕೊಳ್ಳುವ ಸಂದರ್ಭದಲ್ಲಿ ಆವೇಶಕ್ಕೆ ಒಳಗಾಗಿದ್ದು ನಿಜ ಎಂದರು.

    ಸರ್ಕಾರಕ್ಕೆ ಎರಡು ವರ್ಷ ಮುಗಿಯುವ ವೇಳೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಬೇರೊಬ್ಬರಿಗೆ ಅವಕಾಶ ಮಾಡಿಕೊಡಬೇಕು ಎಂಬ ಸಂಕಲ್ಪ ಮಾಡಿದ್ದೆ. ಅದರಂತೆಯೇ ನನ್ನ ಭಾಷಣ ಮುಗಿದ ಮೇಲೆ ಎಲ್ಲರಿಗೂ ಸಿಹಿ ಊಟ ಹಾಕಿಸಿ, ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆ ರಾಜಭವನಕ್ಕೆ ತೆರಳಿ, ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ನನಗೆ ಸಹಕಾರ ನೀಡಿದಂತೆ ಅವರಿಗೂ ಸಹಕಾರ ನೀಡಬೇಕು. ದೇಶಕ್ಕೆ ಮಾದರಿಯಾಗುವ ರೀತಿ ಅಭಿವೃದ್ಧಿ ಕಾರ್ಯಗಳ ಮೂಲಕ ರಾಜ್ಯ ನಿರ್ಮಿಸೋಣ ಎಂದು ತಿಳಿಸಿದರು. ಇದನ್ನೂ ಓದಿ: ಬೈ ಎಲೆಕ್ಷನ್‍ನಲ್ಲಿ ಸೋತ್ರೂ ನಮ್ಮ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಬಲ ಕೊಟ್ಟಿದ್ದಾರೆ: ಡಿ.ಕೆ.ಶಿವಕುಮಾರ್

    ರಾಜ್ಯದ ಉದ್ದಗಲಕ್ಕೂ ತೆರಳಿ ಪಕ್ಷ ಸಂಘಟನೆ ಮಾಡುವುದು ನನ್ನ ಏಕೈಕ ಉದ್ದೇಶ. ಪಕ್ಷದ ಪ್ರಮುಖರು ಕಾರ್ಯಕರ್ತರೊಂದಿಗೆ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವೆ, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವ ಉದ್ದೇಶ ನಮ್ಮದು. ದೇಶದಲ್ಲಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಉದ್ದೇಶ ನಮ್ಮದು ಎಂದರು.

    ಶಿಕಾರಿಪುರದಲ್ಲಿ ಅತಿಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ಇತರೆ ಭಾಗಗಳಲ್ಲಿ ಕೂಡ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಸಮಾಧಾನ ಇದೆ. ಜನರ ವಿಶ್ವಾಸ ಮತ್ತು ಅವರ ನಂಬಿಕೆಯನ್ನು ಉಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದರು.

  • ಅಪ್ಪಾಜಿಯ ಸಿಎಂ ಸ್ಥಾನ ಗಟ್ಟಿಯಾಗಿರಲೆಂದು ದೇವರಲ್ಲಿ ಪ್ರಾರ್ಥಿಸುವೆ: ಬಿಎಸ್‍ವೈ ದತ್ತು ಪುತ್ರ ವಿಶ್ವನಾಥ್

    ಅಪ್ಪಾಜಿಯ ಸಿಎಂ ಸ್ಥಾನ ಗಟ್ಟಿಯಾಗಿರಲೆಂದು ದೇವರಲ್ಲಿ ಪ್ರಾರ್ಥಿಸುವೆ: ಬಿಎಸ್‍ವೈ ದತ್ತು ಪುತ್ರ ವಿಶ್ವನಾಥ್

    ಬೆಂಗಳೂರು: ಅಪ್ಪಾಜಿ ಸಿಎಂ ಸ್ಥಾನದಿಂದ ನಿರ್ಗಮನದ ವಿಚಾರ ಚರ್ಚೆಯಾಗುತ್ತಿದೆ. ಆದರೆ ಅವರು ಐದು ವರ್ಷ ಪೂರೈಸಬೇಕು. ಸಿಎಂ ಸೀಟಿನಿಂದ ಕೆಳಗೆ ಇಳಿಯಬಾರದು. ಸಿಎಂ ಸ್ಥಾನ ಗಟ್ಟಿಯಾಗಿರಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದತ್ತು ಪುತ್ರ ವಿಶ್ವನಾಥ್ ಬಿ ತಿಳಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ಅಪ್ಪಾಜಿಯವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು, ಅವರು ಸಿಎಂ ಸ್ಥಾನದಲ್ಲಿ ಮುಂದುವರಿಯಬೇಕೆಂದು ಪ್ರಾರ್ಥಿಸುತ್ತೇನೆ ಎಂದು ಭಾವುಕರಾಗಿ ನುಡಿದರು.

    ಮೂಲತಃ ಉತ್ತರ ಕರ್ನಾಟಕ ಮೂಲದ ವಿಶ್ವನಾಥ್ ಬೆಂಗಳೂರಿನಲ್ಲಿ ವಾಸವಾಗಿದ್ದರು. 2010ರಲ್ಲಿ ಬಿಎಸ್‍ವೈ ಸಿಎಂ ಆಗಿದ್ದಾಗ ಮಳೆ ಹಾನಿ ವೀಕ್ಷಿಸಲು ಗಾಳಿ ಅಂಜನೇಯ ದೇಗುಲಕ್ಕೆ ತೆರಳಿದ್ದರು. ಆಗ 11 ವರ್ಷದ ವಿಶ್ವನಾಥ್ ಸಿಎಂ ನೋಡಲು ದೇವಸ್ಥಾನದ ಗೋಡೆ ಎಗರಿ, ಸರ್ಕಸ್ ಮಾಡಿ ಸಿಎಂ ಬಳಿಗೆ ಬಂದಿದ್ದರು.

    ಈ ವೇಳೆ ಪುಟ್ಟ ಹುಡುಗನನ್ನು ನೋಡಿದ ಬಿಎಸ್‍ವೈ ಖುಷಿ ಪಟ್ಟು, ನಿನ್ನನ್ನು ನಾನು ದತ್ತು ಪಡೆದು, ವಿದ್ಯಾಭ್ಯಾಸ ನೋಡಿಕೊಳ್ಳುತ್ತೇನೆ ಎಂದು ವಿಶ್ವನಾಥ್ ಗೆ ಭರವಸೆ ಕೊಟ್ಟಿದ್ದರು. ಅಷ್ಟೇ ಅಲ್ಲ ವಿಶ್ವನಾಥ್ ಗೆ ಈಗ ಕೆಆರ್‍ಡಿಎಲ್ ನಲ್ಲಿ ಡಿ ಗ್ರೂಪ್ ನೌಕರ ಹುದ್ದೆಯನ್ನು ಕೂಡ ಕೊಡಿಸಿದ್ದಾರೆ. ಈಗ ಸಿಎಂ ಬದಲಾವಣೆಯ ಬಗ್ಗೆ ಚರ್ಚೆಯಾಗುತ್ತಿರುವ ವಿಚಾರಕ್ಕೆ ಸಿಎಂ ದತ್ತು ಪುತ್ರ ಬೇಸರ ವ್ಯಕ್ತಪಡಿಸಿದ್ದಾರೆ.

  • ಪ್ರಧಾನಿ ಭೇಟಿ ಬಳಿಕ ಭಾವುಕರಾಗಿ ಕಣ್ಣೀರಿಟ್ಟ ಸಿಎಂ ಬಿಎಸ್‍ವೈ

    ಪ್ರಧಾನಿ ಭೇಟಿ ಬಳಿಕ ಭಾವುಕರಾಗಿ ಕಣ್ಣೀರಿಟ್ಟ ಸಿಎಂ ಬಿಎಸ್‍ವೈ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಬಳಿಕ ಸಿಎಂ ಯಡಿಯೂರಪ್ಪ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    ಕಳೆದ ಎರಡು ದಿನಗಳಿಂದ ನವದೆಹಲಿಯಲ್ಲಿ ವಾಸ್ತವ್ಯ ಹೂಡಿರುವ ಯಡಿಯೂರಪ್ಪನವರು, ಇಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಈ ನಡುವೆ ನಿನ್ನೆ ಪ್ರಧಾನಿ ಮೋದಿಯವರನ್ನು ಸಂಸತ್‍ನಲ್ಲಿ ಭೇಟಿ ಮಾಡಿದ್ದ ಯಡಿಯೂರಪ್ಪ ಭಾವುಕರಾಗಿ ಕಣ್ಣಿರಿಟ್ಟಿದ್ದಾರೆ ಎಂಬ ಸುದ್ದಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸಿಎಂ ಭೇಟಿ ವೇಳೆ ಪ್ರಧಾನಿ ಮೋದಿಯವರು ಬಿಎಸ್‍ವೈ ಆರೋಗ್ಯದ ಬಗ್ಗೆ ಅತೀವ ಕಾಳಜಿ ತೋರಿದ್ದು, ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಆರೋಗ್ಯದ ಬಗ್ಗೆ ಜಾಗೃತಿ ವಹಿಸಲು ಸಲಹೆ ನೀಡಿದ್ದಾರೆ. ವಯಸ್ಸಾಗಿದೆ, ಆರೋಗ್ಯ ಸಮಸ್ಯೆಗಳ ಕಡೆ ಹೆಚ್ಚು ನಿಗಾವಹಿಸಿ. ಕೊರೊನಾ ಸಂಧರ್ಭದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರುವಂತೆ ಮೋದಿ ಹೇಳಿದ್ದಾರೆ. ಇದನ್ನು ಕಂಡು ಬಿಎಸ್‍ವೈ ಭಾವುಕರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಕೊರೊನಾದಿಂದ ಸಾವನ್ನಪ್ಪಿದ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ವಿಚಾರ ಪ್ರಸ್ತಾಪಿಸಿ ಬೇಸರ ವ್ಯಕ್ತಪಡಿಸಿರುವ ಮೋದಿ, ವಿಡಿಯೋ ಕಾನ್ಫರೆನ್ಸ್ ಮೂಲಕವೇ ಸಭೆ ನಡೆಸಲು ಸೂಚನೆ ನೀಡಿದ್ದಾರೆ. ಇವರ ಜೊತೆಗೆ ಹಲವು ಕೇಂದ್ರ ಸಚಿವರು ಕೂಡ ಫೋನ್ ಮೂಲಕವೇ ಬೇಡಿಕೆಗಳು ತಿಳಿಸಿ. ಪ್ರಯಾಣ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ. ಕೇಂದ್ರ ನಾಯಕರ ಕಾಳಜಿಯನ್ನು ಕಂಡು ಬಿಎಸ್‍ವೈಯವರು ಭಾವುಕರಾಗಿದ್ದಾರೆ ಎನ್ನಲಾಗಿದೆ.

  • ಮಹಿಳೆಯ ಮಾತು ಕೇಳಿ ಭಾವುಕರಾದ ಮೋದಿ

    ಮಹಿಳೆಯ ಮಾತು ಕೇಳಿ ಭಾವುಕರಾದ ಮೋದಿ

    ನವದೆಹಲಿ: ಮಹಿಳೆಯೊಬ್ಬರ ಮಾತು ಕೇಳಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವೇದಿಕೆಯಲ್ಲಿಯೇ ಭಾವುಕರಾಗಿದ್ದಾರೆ.

    ಇಂದು ಮೋದಿ ಜನೌಷಧಿ ಕೇಂದ್ರಗಳ ಮಾಲೀಕರು ಮತ್ತು ಪ್ರಧಾನ್ ಮಂತ್ರಿ ಭಾರತೀಯ ಜನೌಶಧಿ ಪರಿಯೋಜನ (ಪಿಎಂಬಿಜೆಪಿ) ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಹನ ನಡೆಸಿದರು. ಈ ಕಾರ್ಯಕ್ರಮದಲ್ಲಿ ಮಹಿಳೆ ದೀಪಾ ಶಾ, ನಾನು ದೇವರನ್ನು ನೋಡಿಲ್ಲ. ಆದರೆ ನಿಮ್ಮಲ್ಲಿ ದೇವರನ್ನು ನೋಡುತ್ತೇನೆ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿದ ಮೋದಿ ಒಂದು ಕ್ಷಣ ಭಾವುಕರಾದರು.

    ಈ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ದೀಪಾ ಶಾ, ನಾನು 2011 ರಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದೆ. ವೈದ್ಯರು ನೀವು ಗುಣವಾಗಲ್ಲ ಎಂದು ಹೇಳಿದ್ದರು. ಆದರೆ ನಾನು ಜನೌಷಧಿ ಕೇಂದ್ರದಿಂದ ಕಡಿಮೆ ಬೆಲೆಗೆ ಮಾತ್ರೆಗಳನ್ನು ತೆಗೆದುಕೊಂಡು ಸೇವಿಸಿ ಈಗ ಗುಣವಾಗಿದ್ದೇನೆ. ಜೊತೆಗೆ ತಿಂಗಳಿಗೆ 3,500 ರೂ. ಹಣವನ್ನು ಉಳಿಸಿಕೊಳ್ಳುತ್ತಿದ್ದೇನೆ. ಈ ಹಣ ನನ್ನ ಊಟದ ಮತ್ತು ತಿಂಗಳ ಬಳಕೆಗೆ ಖರ್ಚು ಮಾಡುತ್ತೇನೆ ಎಂದರು.

    ಜೊತೆಗೆ ನನಗೆ ಎಲ್ಲರೂ ಸಹಾಯ ಮಾಡಿದ್ದಾರೆ. ನಮ್ಮ ರಾಜ್ಯದ ಮುಖ್ಯಮಂತ್ರಿಯೂ ಕೂಡ ಸಹಾಯ ಮಾಡಿದ್ದಾರೆ. ನಾನು ಯಾವತ್ತು ಶಿವನನ್ನು ನೋಡಿಲ್ಲ. ಆದರೆ ನಿಮ್ಮನ್ನು ನೋಡಿದಾಗ ನನಗೆ ನಿಮ್ಮಲ್ಲಿ ಶಿವ ಕಾಣುತ್ತಾನೆ ಎಂದು ಹೇಳಿ ಅವರು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ದೀಪಾ ಶಾ ಅಳುವುದನ್ನು ಕಂಡ ಮೋದಿ ಅವರು ಕೂಡ ಕಣ್ಣೀರು ಹಾಕಿದ್ದಾರೆ.

    ಇದಾದ ನಂತರ ಮಾತನಾಡಿದ ಮೋದಿ ಅವರು, ನೀವು ನಿಮ್ಮ ಇಚ್ಛಾಶಕ್ತಿಯಿಂದ ನಿಮ್ಮ ರೋಗವನ್ನು ಸೋಲಿಸಿದ್ದೀರಾ. ನಿಮ್ಮ ಧೈರ್ಯ ನಿಮ್ಮ ದೇವರು, ಆ ಧೈರ್ಯವೇ ನಿಮ್ಮನ್ನು ರೋಗದಿಂದ ಹೋರಬರುವ ಶಕ್ತಿ ನೀಡಿದೆ. ನಿಮ್ಮಲ್ಲಿರುವ ಈ ವಿಶ್ವಾಸ ಹೀಗೆ ಇರಲಿ ಎಂದು ವಿಡಿಯೋ ಕಾನ್ಫರೆನ್ಸ್ ಅಲ್ಲಿ ತಿಳಿಸಿದ್ದಾರೆ.

    ಇದೇ ವೇಳೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಮೋದಿ, ಕೊರೊನಾ ವೈರಸ್ ವದಂತಿಯಿಂದ ದೂರ ಇರುವಂತೆ ನನ್ನ ದೇಶದ ಜನರಲ್ಲಿ ಮನವಿ ಮಾಡುತ್ತೇನೆ. ಕೊರೊನಾ ಈ ನಿಟ್ಟಿನಲ್ಲಿ ನಾವು ವೈದ್ಯರ ಸಲಹೆಯನ್ನು ಪಾಲಿಸಬೇಕಾಗಿದೆ ಎಂದು ಕರೆ ಕೊಟ್ಟರು. ನಾವು ನಮಸ್ಕಾರ ಎಂದು ಶುಭಾಶಯ ಕೋರುವುದನ್ನು ಕೆಲವು ಕಾರಣಗಳಿಂದ ಮರೆತ್ತಿದ್ದೇವೆ. ಆದರೆ ಇಂದು ಇಡೀ ಪ್ರಪಂಚವೇ ನಮಸ್ಕಾರ ಮಾಡಿ ಆಹ್ವಾನಿಸುವುದನ್ನು ಮಾಡುತ್ತಿದೆ. ನಮಗೆ ಇದೇ ಸರಿಯಾದ ಸಮಯ ಹ್ಯಾಂಡ್‍ಶೇಕ್ ಮಾಡುವ ಬದಲು ನಮಸ್ಕಾರ ಮಾಡುವ ಅಭ್ಯಾಸವನ್ನು ಮತ್ತೊಮ್ಮೆ ಅಳವಡಿಸಿಕೊಳ್ಳಬೇಕು ಎಂದು ಮೋದಿ ತಿಳಿಸಿದ್ದಾರೆ.

    ಪ್ರತಿ ತಿಂಗಳು, ಒಂದು ಕೋಟಿ ಕುಟುಂಬಗಳು ಈ ಜನೌಷಧಿ ಕೇಂದ್ರಗಳಿಂದ ಅಗ್ಗದ ಔಷಧಿಗಳ ಲಾಭವನ್ನು ಪಡೆಯುತ್ತಿವೆ. ದೇಶಾದ್ಯಂತ 6,000 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ಜನರಿಗೆ 2,000-2,500 ಕೋಟಿ ರೂ. ಗಳನ್ನು ಉಳಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿದರು.