Tag: ಭಾವಗೀತೆ

  • ಲಹರಿ ಭಾವಗೀತೆ, ಜಾನಪದ ಗೀತೆ ಖಾತೆಗೆ ಯೂಟ್ಯೂಬ್‌ನಿಂದ ಗೋಲ್ಡನ್‌ ಬಟನ್‌ ಪ್ರಶಸ್ತಿ

    ಲಹರಿ ಭಾವಗೀತೆ, ಜಾನಪದ ಗೀತೆ ಖಾತೆಗೆ ಯೂಟ್ಯೂಬ್‌ನಿಂದ ಗೋಲ್ಡನ್‌ ಬಟನ್‌ ಪ್ರಶಸ್ತಿ

    ಬೆಂಗಳೂರು: ದಕ್ಷಿಣ ಭಾರತದ ಹೆಸರಾಂತ ಸಂಗೀತ ಕಂಪನಿ ಲಹರಿ ಮ್ಯೂಸಿಕ್ ಮತ್ತೊಂದು ದಾಖಲೆ ಬರೆದಿದ್ದು, ಯೂಟ್ಯೂಬ್‌ ಗೋಲ್ಡನ್‌ ಬಟನ್‌ ಪ್ರಶಸ್ತಿ ಸಿಕ್ಕಿದೆ.

    ಯೂಟ್ಯೂಬ್‌ನಲ್ಲಿರುವ Lahari Bhavageethegalu & Folk – T-Series ಖಾತೆಯನ್ನು 10 ಲಕ್ಷ ಮಂದಿ ಸಬ್‌ಸ್ಕ್ರೈಬ್‌ ಮಾಡಿದ ಹಿನ್ನೆಲೆಯಲ್ಲಿ ಯೂಟ್ಯೂಬ್‌ನಿಂದ ಗೋಲ್ಡನ್‌ ಬಟನ್‌ ಗೌರವ ಸಿಕ್ಕಿದೆ.

    ಭಾವಗೀತೆಗಳು ಮತ್ತು ಜಾನಪದ ಗೀತೆಗಳಿಗೆ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ 10 ಲಕ್ಷ ಚಂದಾದಾರರಾಗಿದ್ದಕ್ಕೆ ಆಗಿದ್ದಕ್ಕೆ ಈ ಅವಾರ್ಡ್ ಸಿಕ್ಕಿದೆ. ಸಮಸ್ತ ಕೇಳುಗರಿಗೆ ಲಹರಿ ಸಂಸ್ಥೆ ಧನ್ಯವಾದಗಳನ್ನು ಅರ್ಪಿಸಿದೆ.  ಇದನ್ನೂ ಓದಿ: 29 ದಾಖಲೆಗಳನ್ನು ಬರೆದು ರಾಕೆಟ್ ವೇಗದಲ್ಲಿ ಮುನ್ನುಗ್ಗುತಿದೆ ಕೆಜಿಎಫ್ 2: ದಾಖಲೆಗಳ ಪಟ್ಟಿ ಇದೆ

    ಇಲ್ಲಿಯವರೆಗೂ ಈ ಖಾತೆಯಲ್ಲಿ 2,883 ಹಾಡುಗಳನ್ನು ಅಪ್ಲೋಡ್‌ ಮಾಡಲಾಗಿದೆ. ಕನ್ನಡದ ಪ್ರಸಿದ್ಧ ಭಾವಗೀತೆಗಳನ್ನು ನೀವು ಲಹರಿ ಕಂಪನಿಯ Lahari Bhavageethegalu & Folk – T-Series  ಯೂಟ್ಯೂಬ್‌ ಚಾನೆಲ್‌ನಲ್ಲಿ ಆಲಿಸಬಹುದು.

  • ಸಖತ್ ಸೌಂಡ್ ಮಾಡ್ತಿದೆ ಪಲ್ಲವಿ ರಾಜು ನಟನೆಯ ಭಾವಗೀತೆ

    ಸಖತ್ ಸೌಂಡ್ ಮಾಡ್ತಿದೆ ಪಲ್ಲವಿ ರಾಜು ನಟನೆಯ ಭಾವಗೀತೆ

    – ಡಿ ಗ್ಲಾಮರ್ ಲುಕ್ ನಲ್ಲಿ ಕಣ್ಮನ ಸೆಳೆದ ಬ್ಯೂಟಿ

    ಲ್ಲವಿ ರಾಜು ಸದ್ಯಕ್ಕೆ ಗಾಂಧಿನಗರದಲ್ಲಿ ಈ ಹೆಸರು ಜೋರಾಗಿ ಓಡುತ್ತಿದೆ. ಅದಕ್ಕೆ ಕಾರಣವಾಗಿರೋದು ಪಲ್ಲವಿ ನಟನೆಯ ಚೆಂದದ ಭಾವಗೀತೆ. ಸತ್ಯನಂದ ಅವರ ಲಿರಿಕ್ಸ್ ಸಿ.ಅಶ್ವತ್ಥ್ ಅವರ ಮ್ಯೂಸಿಕ್ ಅರ್ಜುನ್ ಕೃಷ್ಣ ಅವರ ನಿರ್ದೇಶನ, ರಾಜು ಅನಂತಸ್ವಾಮಿ ಅವರ ಕಂಠ ಸಿರಿಯಲ್ಲಿ ಬಂದ ಬಡವನಾದರೇ ಏನು ಪ್ರಿಯೆ ಭಾವಗೀತೆಯಲ್ಲಿ ಪಲ್ಲವಿ ರಾಜು ನಟನೆ ಎಲ್ಲರ ಗಮನ ಸೆಳೆಯುತ್ತಿದೆ.

    ಪಕ್ಕ ಹಳ್ಳಿ ಲುಕ್ ನಲ್ಲಿ, ತುಂಬು ಗರ್ಭಿಣಿಯಾಗಿ, ಡಿ ಗ್ಲಾಮರ್ ರೋಲ್ ನಟಿಸಿರುವ ಪಲ್ಲವಿ ನಟನೆಗೆ ಪ್ರೇಕ್ಷಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅರ್ಥಪೂರ್ಣ ಪದಗಳನ್ನು ಪೋಣಿಸಿ, ಸುಂದರ ಜಾಗದಲ್ಲಿ ಚಿತ್ರೀಕರಿಸಿರುವ ಹಾಡು ಎಷ್ಟು ಅದ್ಭುತವಾಗಿ ಮೂಡಿ ಬಂದಿದೆಯೋ ಅದೇ ರೀತಿ ಪಲ್ಲವಿ ರಾಜು ನಟನೆ ಕೂಡ ಅಷ್ಟೇ ಮನಮೋಹಕವಾಗಿದೆ.

    ಅಷ್ಟಕ್ಕೂ ಪಲ್ಲವಿ ರಾಜು ಇಂತಹ ಅದ್ಭುತ ನಟನೆ ಕಾರಣ ಅವರ ಸಿನಿಯಾನದ ಬದುಕಿನ ಅನುಭವಗಳು. ರಂಗಭೂಮಿ ಕಲಾವಿದೆಯಾಗಿ ಗುರುತಿಸಿಕೊಂಡಿದ್ದ ಪಲ್ಲವಿ, ಆ ಬಳಿಕ ಹೆಜ್ಜೆ ಹಾಕಿದ್ದು ಗಾಂಧಿನಗರದತ್ತ. ಮಂತ್ರ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದ ಪಲ್ಲವಿಗೆ ಆ ಬಳಿಕ ಹೊಸ ಹೊಸ ಸಿನಿಮಾಗಳ ಅವಕಾಶ ಹುಡುಕಿಕೊಂಡು ಬಂದವು.

    ಪಲ್ಲವಿ ಇಂದು ತೆರೆಮೇಲೆ ಬಣ್ಣ ಹಚ್ಚಿ ಮಿಂಚುತ್ತಿದ್ದಾರೆ. ಆದ್ರೆ ಅದಕ್ಕೂ ಮೊದಲು ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ಮೂಲತಃ ಸಿಲಿಕಾನ್ ಸಿಟಿ ಬೆಂಗಳೂರಿನವರಾದ ಪಲ್ಲವಿ ನಟನೆಯಲ್ಲಿ ವಿಪರೀತಿ ಆಸಕ್ತಿ ಇಟ್ಟುಕೊಂಡಿದ್ದವರು. ಹೀಗಾಗಿ ನಾಟಕ ತಂಡ ಸೇರಿ ನಟನೆ ಕಲಿತರು. ಆ ಬಳಿಕ ನಾಟಕಗಳಲ್ಲಿ ನಟಿಸುತ್ತಾ ರಂಗಭೂಮಿ ಕಲಾವಿದೆಯಾಗಿ, ನಟಿಯಾಗಿ ರೂಪಗೊಂಡ ನಂತರ ಕೆಲವೊಂದಿಷ್ಟು ಕಿರುಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಕನ್ನಡದ ಜೊತೆ ತಮಿಳು ಕಿರುಚಿತ್ರದಲ್ಲಿಯೂ ಪಲ್ಲವಿ ಅಭಿನಯಿಸಿದ್ದಾರೆ.

    ಹೀಗೆ ಶುರುವಾದ ಪಲ್ಲವಿ ಸಿನಿಬದುಕು ಬಂದು ನಿಂತಿದ್ದು, ಹೊಸಬರ ಸಿನಿಮಾ ಗುಲ್ಟು ತಂಡದ ಬಳಿ. ಗುಲ್ಟು ಸಿನಿಮಾದಲ್ಲಿ ನಟಿಸಿದ ಬಳಿಕ ಈ ಚೆಲುವೆ ಮತ್ತಷ್ಟು ಖ್ಯಾತಿ ಪಡೆದರು. ಆ ಬಳಿಕ ರತ್ನಮಂಜರಿ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡರು. ಸದ್ಯ ಪಲ್ಲವಿ ಭತ್ತಳಿಕೆಯಲ್ಲಿ ಮೂರ್ನಾಲ್ಕು ಸಿನಿಮಾ ರಿಲೀಸ್ ಗೆ ರೆಡಿಯಾಗಿವೆ. ಉತ್ತಮರು, ನಿಕ್ಸನ್ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ.

    ಈ ಸಿನಿಮಾಗಳ ಜೊತೆ ಮತ್ತಷ್ಟು ಸಿನಿಮಾ ಕಥೆ ಕೇಳಿ ಎಕ್ಸೈಟ್ ಆಗಿರುವ ಪಲ್ಲವಿ ಸದ್ಯದಲ್ಲಿಯೇ ಹೊಸ ಸಿನಿಮಾದ ಬಗ್ಗೆ ಅಪ್ ಡೇಟ್ ಕೊಡಲಿದ್ದಾರೆ. ಪ್ರತಿ ಸಿನಿಮಾದಲ್ಲಿ ವಿಭಿನ್ನ ಪಾತ್ರಗಳನ್ನೇ ನಟಿಸುತ್ತಿರುವ ಪಲ್ಲವಿ ಗ್ಲಾಮರ್ ಗೂ ಸೈ…ಡಿ ಗ್ಲಾಮರ್ ಗೂ ಜೈ ಎನ್ನುವ ಪ್ರತಿಭೆ. ಪ್ರತಿಭೆ ಜೊತೆ ಅದೃಷ್ಟ ಎರಡು ಪಲ್ಲವಿಗಿದೆ. ಹೀಗಾಗಿ ಕನ್ನಡದಲ್ಲಿ ಗಟ್ಟಿಯಾಗಿ ನೆಲೆಯೂರುವ ಭರವಸೆ ಮೂಡಿಸಿದ್ದಾರೆ.

  • ಗಾನಚಂದ್ರಿಕೆಯ ಚೈತನ್ಯ ಗೀತೆ ಲೋಕಾರ್ಪಣೆ – ಯುಗದ ಆದಿಗೆ ಗಾನಚಂದ್ರಿಕಾ ಸಂಗೀತ ಶಾಲೆಯ ಕೊಡುಗೆ!

    ಗಾನಚಂದ್ರಿಕೆಯ ಚೈತನ್ಯ ಗೀತೆ ಲೋಕಾರ್ಪಣೆ – ಯುಗದ ಆದಿಗೆ ಗಾನಚಂದ್ರಿಕಾ ಸಂಗೀತ ಶಾಲೆಯ ಕೊಡುಗೆ!

    ದೆಂಥದ್ದೇ ಸಂದಿಗ್ಧ ಘಳಿಗೆಯಲ್ಲಿಯೂ ಕೂಡಾ ಆಶಾವಾದದ ಸೆಳೆಮಿಂಚು ಮೂಡಿಸುವ ಚುಂಬಕ ಶಕ್ತಿ ಸಂಗೀತಕ್ಕಿದೆ. ಎಲ್ಲ ದಾರಿಗಳೂ ಮುಗಿದು ಹೋಯಿತೆಂಬ ನಿರಾಶೆಯ ನೆತ್ತಿಯಲ್ಲಿ ಹೊಸ ಭರವಸೆಯ ಚಿಗುರು ಮೊಳೆಯಿಸುವ ತಾಕತ್ತು ಬಹುಶಃ ಸಂಗೀತಕ್ಕಲ್ಲದೆ ಬೇರೆ ಯಾವುದಕ್ಕೂ ಇರಲು ಸಾಧ್ಯವೇ ಇಲ್ಲವೇನೋ. ಅದರಲ್ಲಿಯೂ ಎದೆಯ ಮಿದುವಿಗೆ ನವಿರಾಗಿ ತಾಕುವ ಭಾವ ಗೀತೆಗಳಿಗಂತೂ ಆ ಶಕ್ತಿ ತುಸು ಹೆಚ್ಚೇ ಇದೆ. ಅದನ್ನು ಲಾಗಾಯ್ತಿನಿಂದಲೂ ಮತ್ತಷ್ಟು ಪಸರಿಸುವ ನಿಟ್ಟಿನಲ್ಲಿ ಗಾನ ಸುಧೆ ಹರಿಸುತ್ತಾ ಬಂದಿರುವವರು ಸುಗಮ ಸಂಗೀತ ಕ್ಷೇತ್ರದ ಪ್ರಸಿದ್ಧ ಗಾಯಕಿ ನಾಗಚಂದ್ರಿಕಾ ಭಟ್. ಇದೀಗ ಅವರ ಸಾರಥ್ಯದ ಗಾನಚಂದ್ರಿಕಾ ಸಂಗೀತ ಶಾಲೆಯ ಕಡೆಯಿಂದ ಯುಗಾದಿಯ ಹೊಸ್ತಿಲಿಗೆ ನವಚೈತನ್ಯದ ತೋರಣ ಕಟ್ಟುವಂಥಾದ್ದೊಂದು ಚೆಂದದ ಗೀತೆ ತಯಾರಾಗಿದೆ. ಅದನ್ನಿಂದು ಬಸವನಗುಡಿ ಕ್ಷೇತ್ರದ ಶಾಸಕ ರವಿ ಸುಬ್ರಹ್ಮಣ್ಯ ಲೋಕಾರ್ಪಣೆಗೊಳಿಸಿದ್ದಾರೆ.

    ಇಲ್ಲಿ ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಸಾಹಿತಿ ಮೈ.ವೆಂ ಸೀತಾರಾಮಯ್ಯನವರು ಬರೆದಿರುವ ಕವಿತೆಯೊಂದು ಸುಂದರ ಹಾಡಾಗಿದೆ. ‘ತೆರೆ ಕಿಟಕಿ ಬಾಗಿಲ ಬೀಸಿ ಬರಲಿ ಗಾಳಿ ನವಯುಗವೈ ತಾಳಿ’ ಎಂಬ ಆಶಯದೊಂದಿಗೆ ಶುರುವಾಗುವ ಈ ಹಾಡು ನಾಗಚಂದ್ರಿಕಾ ಭಟ್ ಅವರ ಚೆಂದದ ಪರಿಕಲ್ಪನೆಯೊಂದಿಗೆ ಮೂಡಿ ಬಂದಿದೆ. ವಿಕಾಸ್ ವಸಿಷ್ಟ ಸಂಗೀತ ಸಂಯೋಜನೆ ಮಾಡಿರುವ ಈ ಹಾಡು ಸತ್ಯಾತ್ಮ ಸ್ಟುಡಿಯೋ ಕಡೆಯಿಂದ ಚಿತ್ರೀಕರಿಸಲ್ಪಟ್ಟಿದೆ. ಶ್ರೀನಿಧಿ ವಿಡಿಯೋ ಚಿತ್ರೀಕರಣ ಮತ್ತು ಪೃಥ್ವಿಶ್ ಅವರ ಸಂಕಲನ ಹಾಗೂ ಆನ್‍ಲೈನ್ ನಿರ್ವಹಣೆಯಿದೆ.

    ಈ ಹಾಡನ್ನು ನಾಗಚಂದ್ರಿಕಾ ಭಟ್ ತಮ್ಮ ಸಂಗೀತ ಶಾಲೆಯ ವಿದ್ಯಾರ್ಥಿಗಳೊಡಗೂಡಿ ಪ್ರಚುರಪಡಿಸಿದ್ದಾರೆ. ಅದರ ಸಂಗೀತ, ಧ್ವನಿ ಮತ್ತು ಚಿತ್ರೀಕರಣಗಳಲ್ಲಿ ಭಾವಗೀತೆಗಳ ಅಸಲಿ ಸ್ವಾದದ ಘಮವಿದೆ. ಗಾನಚಂದ್ರಿಕಾ ಸಂಗೀತ ಶಾಲೆಯ ಅಷ್ಟೂ ವಿದ್ಯಾರ್ಥಿಗಳು ನವ ಸಂವತ್ಸರವನ್ನು ಉತ್ಸಾಹದಿಂದ ಎದುರುಗೊಳ್ಳುವ ಆಹ್ಲಾದ ತುಂಬುವಂತೆ ಈ ಹಾಡಿಗೆ ರಂಗು ತುಂಬಿದ್ದಾರೆ. ಇದೊಂದು ಯುಗಾದಿಯ ಆಶಯಗೀತೆಯಾಗಿ ಮಾತ್ರವೇ ಗಮನ ಸೆಳೆಯೋದಿಲ್ಲ; ಬದಲಾಗಿ ಇಡೀ ಜಗತ್ತನ್ನು ಕಣ್ಣಿಗೆ ಕಾಣದೊಂದು ವೈರಸ್ ಆವರಿಸಿಕೊಂಡಿರೋ ಈ ದಿನಮಾನವನ್ನು ಆತ್ಮಬಲದಿಂದ ದಾಟಿಕೊಳ್ಳುವ ಧೀಶಕ್ತಿಯನ್ನೂ ಕೂಡಾ ಪ್ರತೀ ಮನಸುಗಳಿಗೆ ದಾಟಿಸುವಂತಿದೆ.

    ಸಾಹಿತ್ಯ ಮತ್ತು ಅದರ ಮಾಧುರ್ಯದ ಮತ್ತೊಂದು ಆವೃತ್ತಿಯಂತಿರುವ ಭಾವಗೀತೆಗಳು ಯಾವತ್ತಿದ್ದರೂ ಪ್ರೇರಕ ಶಕ್ತಿಯೇ. ಇಂಥಾ ಸ್ವರಗಳು ಯಾವುದೋ ಚಿಂತೆಯ ಚಿತೆಯಿಂದ ಅದೆಷ್ಟೋ ಜನರನ್ನು ಪಾರುಗಾಣಿಸಿವೆ. ಹಾಗಿರುವಾಗ ಈವತ್ತಿನ ಕೊರೋನಾ ಸಂದಿಗ್ಧವನ್ನು ಹಾದು ಹೋಗುವಂತೆ ಮಾಡಬಲ್ಲ ಶಕ್ತಿಯೂ ಭಾವಗೀತೆಗೆ ಖಂಡಿತವಾಗಿಯೂ ಇದ್ದೇ ಇದೆ. ಈ ಹಾಡನ್ನೊಮ್ಮೆ ಕೇಳಿದಾಗ ಕಡೇಯಲ್ಲಿ ಉಳಿದುಕೊಳ್ಳುತ್ತದೆಯಲ್ಲಾ ಆತ್ಮತೃಪ್ತಿ, ಅದು ಮೇಲ್ಕಂಡ ಮಾತುಗಳಿಗೆ ಸಾಕ್ಷಿಯಂತೆ ಗೋಚರಿಸುತ್ತದೆ. ಈ ಯುಗಾದಿಯಿಂದಾದರೂ ಕೊರೊನಾ ಕಾಟದಿಂದ ಮುಕ್ತಿ ಸಿಗಲೆಂಬುದು ಜಗತ್ತಿನ ಆಶಯವಾಗಿತ್ತು. ಆದರೀಗ ಅದು ಮತ್ತೆ ಮುತ್ತಿಕೊಂಡಿದೆ. ಅಂಥಾ ಎಲ್ಲ ಅವಘಡಗಳ ಕಾವಳ ಕರಗಿ ಮತ್ತೆ ಹೊಸ ಗಾಳಿ ಬೀಸಿ ಬರಲೆಂಬ ಆಶಯದ ಈ ಗೀತೆಯನ್ನು ಶಾಸಕ ರವಿಸುಬ್ರಹ್ಮಣ್ಯ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ನೀವೂ ಒಮ್ಮೆ ಕೇಳಿ ನೋಡಿ. ಖಂಡಿತಾ ನಿಮಗಿಷ್ಟವಾಗದಿರೋದಿಲ್ಲ!