Tag: ಭಾವ

  • ಹಾಡಹಗಲೇ ಬಾವನನ್ನು ಕೊಂದು ಬಾಮೈದ ಪರಾರಿ

    ಹಾಡಹಗಲೇ ಬಾವನನ್ನು ಕೊಂದು ಬಾಮೈದ ಪರಾರಿ

    ಚಿಕ್ಕಬಳ್ಳಾಪುರ: ಬಾವನನ್ನು ಕೊಂದು ಬಾಮೈದ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕರೇನಹಳ್ಳಿಯಲ್ಲಿ ನಡೆದಿದೆ.

    ಕೊಲೆಯಾದವರು ಬಾಗೇಪಲ್ಲಿ ಮೂಲದ ನವೀನ್(30) ಎನ್ನಲಾಗಿದೆ. ನವೀನ್ ಪತ್ನಿಯ ತಮ್ಮ ವೆಂಕಟೇಶ್ ಹಾಗೂ ಸಹಚರರು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

    ಭಾವನನ್ನೇ ಕೊಂದಿದ್ಯಾಕೆ?
    ಕೊಲೆಯಾದ ನವೀನ್ ಕರೇನಹಳ್ಳಿ ನಿವಾಸಿ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದು, ಕೌಟುಂಬಿಕ ಕಲಹದ ಕಾರಣ ಆಕೆ ತವರುಮನೆ (ಕರೇನಹಳ್ಳಿ) ಸೇರಿದ್ದಳು. ಈ ನಡುವೆ ಮಕ್ಕಳ ವಿಚಾರ ಹಾಗೂ ಸಂಸಾರ ಸರಿಪಡಿಸುವ ವಿಚಾರವಾಗಿ ರಾಜಿ ಪಂಚಾಯಿತಿ ಪ್ರಯತ್ನ ಮುಂದುವರೆದಿದ್ದು, ಶನಿವಾರ ರಾತ್ರಿ ರಾಜಿಗೆಂದು ಕರೇನಹಳ್ಳಿಗೆ ನವೀನ್ ಬಂದಿದ್ದಾನೆ. ಈ ವೇಳೆ ಮಡದಿಯ ಕುಟುಂಬದವರೊಂದಿಗೆ ಜಗಳ ಮಾಡಿದ್ದಾನೆ ಎನ್ನಲಾಗಿದೆ.

    ಭಾನುವಾರ ಬೆಳಗ್ಗೆ ಸ್ಥಳೀಯ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ನಡೆಸಲು ನವೀನ್ ಮಡದಿಯ ಪೋಷಕರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಅಷ್ಟರಲ್ಲಿ ಕರೇನಹಳ್ಳಿಯ ಹೊರಭಾಗದಲ್ಲಿ ನವೀನ್ ಮಡದಿಯ ತಮ್ಮ ವೆಂಕಟೇಶ್ ಹಾಗೂ ಸಹಚರರು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಹತ್ಯೆ ನಡೆಯುವಾಗ ಈ ಸ್ಥಳದಲ್ಲಿ ಕೆಲ ಹುಡುಗರು ಆಟವಾಡುತ್ತಿದ್ದು, ಹತ್ಯೆ ಕಂಡು ಆತಂಕಗೊಂಡು ಓಡಿದ್ದಾರೆ.

    ಅಲ್ಲದೆ ಹಾಡಹಗಲೇ ನಗರದಲ್ಲಿ ಹತ್ಯೆ ನಡೆದಿರುವ ಹಿನ್ನೆಲೆ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಮತ್ತೊಂದೆಡೆ ತಲೆಮರೆಸಿಕೊಂಡಿರುವ ಆರೋಪಿ ವೆಂಕಟೇಶ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಬಟ್ಟೆ ಒಗೆದುಕೊಡಲ್ಲ ಎಂದು ತುಂಬು ಗರ್ಭಿಣಿಯನ್ನ ಕೊಚ್ಚಿ ಕೊಂದ ಪಾಪಿ ಬಾವ

    ಬಟ್ಟೆ ಒಗೆದುಕೊಡಲ್ಲ ಎಂದು ತುಂಬು ಗರ್ಭಿಣಿಯನ್ನ ಕೊಚ್ಚಿ ಕೊಂದ ಪಾಪಿ ಬಾವ

    – ಸೀಮಂತದ ಖುಷಿಯಲ್ಲಿದ್ದ ಗರ್ಭಿಣಿ ಮಸಣ ಸೇರಿದ್ಳು

    ಚಿಕ್ಕಬಳ್ಳಾಪುರ: ಆರು ತಿಂಗಳ ತುಂಬು ಗರ್ಭಿಣಿಯನ್ನ ಬಾವನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ಅನೆಮಡುಗು ಗ್ರಾಮದಲ್ಲಿ ನಡೆದಿದೆ.

    ಅನೆಮಡುಗು ಗ್ರಾಮದ ಜ್ಯೋತಿ (26) ಕೊಲೆಯಾದ ತುಂಬು ಗರ್ಭಿಣಿ. ಹರೀಶ್ ಬಾಬು (40) ಕೊಲೆಗೈದ ಪಾಪಿ ಬಾವ. ಸೀಮಂತದ ಖುಷಿಯಲ್ಲಿದ್ದ ಜ್ಯೋತಿ ಮಸಣ ಸೇರಿದ್ದಾರೆ.

    ಜ್ಯೋತಿ, ಅವರ ಗಂಡ, ಅತ್ತೆ, ಮಾವ ಸೇರಿದಂತೆ ಬಾವ ಒಂದೇ ಮನೆಯಲ್ಲಿ ವಾಸವಾಗಿದ್ದರು. ತವರು ಮನೆ ಚಿಂತಾಮಣಿಯಲ್ಲಿದ್ದ ತಾಯಿಯನ್ನು ಕರೆದುಕೊಂಡುಬರಲು ಇಂದು ಜ್ಯೋತಿಯ ಪತಿ ಹೋಗಿದ್ದ. ಇತ್ತ ಜ್ಯೋತಿ ಅವರ ಮಾವ ತೋಟದ ಮನೆ ಬಳಿ ಇದ್ದರಂತೆ. ಈ ವೇಳೆ ಮನೆಯಲ್ಲಿ ಏಕಾಂಗಿಯಾಗಿದ್ದ ಗರ್ಭಿಣಿಯ ಜೊತೆ ವಿನಾಕಾರಣ ಹರೀಶ್ ಬಾಬು ಜಗಳ ಆರಂಭಿಸಿದ್ದ.

    ನನಗೆ ಬಟ್ಟೆ ಒಗೆದುಕೊಡುವುದಿಲ್ಲ. ಸರಿಯಾಗಿ ನೋಡಿಕೊಳ್ಳಲ್ಲ ಎಂದು ಹರೀಶ್ ತಗಾದೆ ತೆಗೆದು ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಕೋಪಗೊಂಡ ಹರೀಶ್ ತುಂಬು ಗರ್ಭಿಣಿ ಅಂತಲೂ ನೋಡದೆ ಮಚ್ಚಿನಿಂದ ತಲೆಗೆ ಬಲವಾಗಿ ಹೊಡೆದು ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ.

    ಅದೇ ಗ್ರಾಮದ ಜ್ಯೋತಿ ತಾಯಿ ಮಗಳನ್ನ ನೋಡುವುದಕ್ಕೆ ಅಂತ ಮನೆಗೆ ಬಂದಾಗ ರಕ್ತದ ಮಡುವಿನಲ್ಲಿದ್ದ ಜ್ಯೋತಿ ಕೊನೆಯುಸಿರುನಲ್ಲಿ ವಿಲ ವಿಲ ಅಂತ ಒದ್ದಾಡುತ್ತಿದ್ದಳು. ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಷ್ಟರಲ್ಲೇ ಜ್ಯೋತಿ ಕೊನೆಯುಸಿರುಳೆದಿದ್ದಾರೆ.

    ಜ್ಯೋತಿ ಅವರ ಪತಿ ರೈಲ್ವೆ ಇಲಾಖೆ ಉದ್ಯೋಗಿಯಾಗಿದ್ದು, 08 ವರ್ಷಗಳ ನಂತರ ಮಗು ಆಗುತ್ತಿದ್ದ ಸಂತಸದಲ್ಲಿ ಮನೆಮಂದಿಯೆಲ್ಲಾ ಇದ್ದರು. 10ರಿಂದ 12 ದಿನಗಳಲ್ಲಿ ಜ್ಯೋತಿಗೆ ಹೆರಿಗೆಯಾಗುವ ದಿನಾಂಕ ಸಹ ವೈದ್ಯರು ನೀಡಿದ್ದರು. ಇತ್ತ ಚಿಂತಾಮಣಿಗೆ ಹೋಗಿದ್ದ ಗಂಡ ಸಹ ತನಗೆ ಸೀಮಂತಕ್ಕೆ ಸೀರೆ ತರುವುದಾಗಿ ಹೇಳಿ ಹೋಗಿದ್ದ. ಆದರೆ ಅಷ್ಟರಲ್ಲೇ ಪಾಪಿ ಬಾವ ನಾದಿನಿಯ ಪ್ರಾಣವನ್ನ ಬಲಿ ಪಡೆದುಬಿಟ್ಟಿದ್ದಾನೆ.

    ಈ ಸಂಬಂಧ ದಿಬ್ಬೂರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪಾಪಿ ಹರೀಶ್ ಬಾಬುನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.

  • ತಮ್ಮನ ಹೆಂಡ್ತಿಯನ್ನ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಂದ

    ತಮ್ಮನ ಹೆಂಡ್ತಿಯನ್ನ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಂದ

    ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ತಮ್ಮನ ಹೆಂಡತಿಯನ್ನ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯಪ್ಪನಗರದಲ್ಲಿ ನಡೆದಿದೆ.

    ಸುಮತಿ(30) ಕೊಲೆಯಾದ ಮಹಿಳೆ. ಇವರು ಮೂಲತಃ ಆಂಧ್ರಪ್ರದೇಶದವರಾಗಿದ್ದು ಕಳೆದ ಏಳು ತಿಂಗಳಿನಿಂದ ಕೆ.ಆರ್.ಪುರಂನ ದೇವಸಂದ್ರ ಮುಖ್ಯರಸ್ತೆಯ ಅಯ್ಯಪ್ಪನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮಹಿಳೆ ಹಾಗೂ ಗಂಡ ಮೋಹನ್ ರೆಡ್ಡಿ ಮಾತ್ರ ಇಲ್ಲಿ ನೆಲೆಸಿದ್ದರು. ಕೊಲೆಯಾದ ಸುಮತಿಯ ಭಾವ(ಪತಿಯ ಅಣ್ಣ) ವಿನಾಯಕ ರೆಡ್ಡಿ ಅಗಾಗ ಮನೆಗೆ ಬಂದು ಹೋಗುತ್ತಿದ್ದ.

    ಬುಧವಾರ ಬೆಳಗ್ಗೆ ಮನೆಯಲ್ಲಿ ಸುಮತಿ ಒಬ್ಬರೇ ಇರುವಾಗ ವಿನಾಯಕ ರೆಡ್ಡಿ ಬಂದು ಮಚ್ಚಿನಿಂದ ಸುಮತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾನೆ. ಯಾವ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎಂಬುದು ಪ್ರಶ್ನೆಯಾಗಿ ಉಳಿದಿದೆ.

    ವಿಷಯ ತಿಳಿದ ಕೆ.ಆರ್.ಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿ ವಿನಾಯಕ ರೆಡ್ಡಿಗಾಗಿ ಬಲೆ ಬೀಸಿದ್ದಾರೆ.

    ಮಹಿಳೆಯ ಶವದ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಶವವನ್ನು ಪತಿ ಮೋಹನ್ ರೆಡ್ಡಿ ಅವರಿಗೆ ಹಸ್ತಾಂತರಿಸಲಾಗಿದೆ.

  • ಬಾಮೈದನ ಹೆಂಡ್ತಿ ಜೊತೆ ಓಡಿಹೋದ ಭಾವ- ಹೆಂಡ್ತಿಗಾಗಿ ಊರೂರು ಸುತ್ತುತ್ತಿರೋ ಪತಿ

    ಬಾಮೈದನ ಹೆಂಡ್ತಿ ಜೊತೆ ಓಡಿಹೋದ ಭಾವ- ಹೆಂಡ್ತಿಗಾಗಿ ಊರೂರು ಸುತ್ತುತ್ತಿರೋ ಪತಿ

    ತುಮಕೂರು: ಅವರು ಭಾವ-ಬಾಮೈದ, ಅದಕ್ಕೂ ಹೆಚ್ಚಾಗಿ ಒಳ್ಳೇ ಸ್ನೇಹಿತರಾಗಿದ್ರು. ಆದರೆ ಭಾವನಿಗೆ ಬಾಮೈದನ ಪತ್ನಿ ಮೇಲೆ ಕಣ್ಣು ಬಿದ್ದು, ಕೊನೆಗೆ ಆಕೆಯೊಂದಿಗೆ ಲವ್ವಿಡವ್ವಿ ಶುರುಮಾಡಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಜಂಪೇನಳ್ಳಿ ಗ್ರಾಮದಲ್ಲಿ ನಡೆದಿದೆ.

    ಜಂಪೇನಳ್ಳಿ ನಿವಾಸಿ ಪರಶುರಾಮ ಅವರ ಹೆಂಡತಿ ಓಡಿಹೋಗಿದ್ದಾಳೆ. ತೀವ್ರವಾಗಿ ನೊಂದು ಹೆಂಡ್ತಿ ಬೇಕು ಅಂತ ಪರಶುರಾಮ್ ಊರೂರು ಸುತ್ತುತ್ತಿದ್ದಾರೆ. ಪರಶುರಾಮ್ ಪತ್ನಿ ಮಂಜುಳಾ ತನ್ನ ನಾದಿನಿಯ ಗಂಡ ಶ್ರೀನಿವಾಸ್ ಜೊತೆ ಪರಾರಿಯಾಗಿದ್ದಾಳೆ.

    ಪರಶುರಾಮ್ ಹಾಗೂ ಮಂಜುಳಾ ಮದುವೆಯಾಗಿ 12 ವರ್ಷ ಕಳೆದಿದೆ. ಇವರಿಗೆ ನಾಲ್ಕು ಮಕ್ಕಳೂ ಕೂಡ ಇವೆ. ಆದರೂ ಮಂಜುಳಾ-ಶ್ರೀನಿವಾಸ್ ಲವ್ವಿಡವ್ವಿ ಶುರು ಮಾಡಿಕೊಂಡಿದ್ದರು. ಈ ಅಕ್ರಮ ಸಂಬಂಧ ಪತಿ ಪರಶುರಾಮ್‍ಗೆ ಗೊತ್ತಾಗುತ್ತಿದ್ದಂತೆ ಇಬ್ಬರೂ ಜೊತೆಯಾಗಿ ಪರಾರಿಯಾಗಿದ್ದಾರೆ.

    ಪರಶುರಾಮ್ ಹಾಗೂ ಶ್ರೀನಿವಾಸ್ ಒಳ್ಳೆಯ ಸ್ನೇಹಿತರು. ಇಬ್ಬರೂ ಬಳೆ ವ್ಯಾಪಾರ ಮಾಡಿಕೊಂಡಿದ್ದರು. ಹಾಗಾಗಿ ಪರಶುರಾಮ ತನ್ನ ತಂಗಿ ಗೀತಾಳನ್ನು ಶ್ರೀನಿವಾಸ್‍ಗೆ ಕೊಟ್ಟು ಮದುವೆ ಮಾಡಿದ್ದರು. ಸಹಜವಾಗಿಯೆ ಶ್ರೀನಿವಾಸ್ ಪರಶುರಾಮನ ಮನೆಗೆ ಬಂದು ಹೋಗುತಿದ್ದ. ಪರಶುರಾಮನ ಪತ್ನಿ ಮಂಜುಳಾ ನೋಡಲು ಸುಂದರವಾಗಿದ್ಳು ಅಂತ ತನ್ನ ಹೆಂಡತಿಯನ್ನ ಬಿಟ್ಟು ಅವಳನ್ನು ಹಾರಿಸಿಕೊಂಡು ಹೋಗಿದ್ದಾನೆ ಅಂತ ಮಂಜುಳಾ ತಾಯಿ ರತ್ನಮ್ಮ ಹೇಳಿದ್ದಾರೆ.

    ಮಂಜುಳಾ ತನ್ನ ಇಬ್ಬರು ಮಕ್ಕಳನ್ನು ತನ್ನೊಟ್ಟಿಗೆ ಕರೆದುಕೊಂಡು ಹೋಗಿದ್ದಾಳೆ. ಶ್ರೀನಿವಾಸನ ಪತ್ನಿ ಗೀತಾ ಕೂಡಾ ಗಂಡನ ಹುಡುಕಾಟದಲ್ಲಿ ತೊಡಗಿದ್ದಾರೆ. ಹೆಂಡತಿಯನ್ನ ಹುಡುಕಿಕೊಡಿ ಎಂದು ಪರಶುರಾಮ್ ಪೊಲೀಸರ ಮೊರೆ ಹೋಗಿದ್ದಾರೆ. ಆಕೆ ಓಡಿಹೋದ್ರೂ ಪರವಾಗಿಲ್ಲ, ವಾಪಸ್ ಬಂದು ಮಕ್ಕಳ ಆರೈಕೆ ಮಾಡಿಕೊಂಡು ಇದ್ದರೆ ಸಾಕು ಎಂದು ಪರುಶರಾಮ್ ಹೇಳುತ್ತಿದ್ದಾರೆ.

  • ಅಕ್ಕನ ಸಾವಿಗೆ ಪತಿಯೇ ಕಾರಣವೆಂದು ಭಾವನನ್ನು ಕೊಚ್ಚಿ ಕೊಂದ ಬಾಮೈದ

    ಅಕ್ಕನ ಸಾವಿಗೆ ಪತಿಯೇ ಕಾರಣವೆಂದು ಭಾವನನ್ನು ಕೊಚ್ಚಿ ಕೊಂದ ಬಾಮೈದ

    ಬೆಂಗಳೂರು: ಅಕ್ಕನನ್ನು ಕೊಂದ ಅನ್ನೋ ದ್ವೇಷಕ್ಕೆ ಬಾಮೈದನೇ ಭಾವನನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಆರ್ ಪುರಂನ ಚಿಕ್ಕದೇವಸಂದ್ರದಲ್ಲಿ ನಡೆದಿದೆ.

    ಚಲುವರಾಯ(35) ಕೊಲೆಯಾದ ವ್ಯಕ್ತಿ. ಈತನ ಮೊದಲ ಹೆಂಡತಿ ತಮ್ಮ ರಾಜಕುಮಾರನಿಂದ ಈ ಕೃತ್ಯ ನಡೆದಿದೆ. 10 ವರ್ಷಗಳ ಹಿಂದೆ ಚಲುವರಾಯನ ಪತ್ನಿ ಮಂಜುಳ ಆತ್ಮಹತ್ಯೆ ಮಾಡಿಕೊಂಡಿದ್ದು ಈಕೆ ಸಾವಿಗೆ ಪತಿಯೇ ಕಾರಣ ಅಂತಾ ಕುಟುಂಬಸ್ಥರು ದೂರು ನೀಡಿದ್ರು. ಪ್ರಕರಣ ಸಂಬಂಧ ಚಲುವರಾಯ 2 ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರಗೆ ಬಂದು ಮತ್ತೊಂದು ಮದುವೆಯಾಗಿದ್ದ.

    ಅಕ್ಕನನ್ನು ಕೊಂದ ಅನ್ನೋ ಸೇಡು ಹೊಂದಿದ್ದ ರಾಜಕುಮಾರ ತನ್ನ ಸ್ನೇಹಿತರೊಂದಿಗೆ ಸೇರಿ ಭಾವನ ವಿರುದ್ಧ ಸ್ಕೆಚ್ ಹಾಕಿ ಮನೆಗೆ ಕರೆಸಿಕೊಂಡು ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

    ಪ್ರಕರಣ ಸಂಬಂಧ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.