Tag: ಭಾರತ

  • ವೃದ್ಧಿಮಾನ್ ಸಹಾ, ಸ್ಮಿತ್ ಬಾಲ್ ಆಟ ನೋಡಿ ಅಂಪೈರ್, ಆಟಗಾರರು ನಕ್ಕಿದ್ದೆ ನಕ್ಕಿದ್ದು! ವಿಡಿಯೋ

    ವೃದ್ಧಿಮಾನ್ ಸಹಾ, ಸ್ಮಿತ್ ಬಾಲ್ ಆಟ ನೋಡಿ ಅಂಪೈರ್, ಆಟಗಾರರು ನಕ್ಕಿದ್ದೆ ನಕ್ಕಿದ್ದು! ವಿಡಿಯೋ

    ರಾಂಚಿ: ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿಕೆಟ್ ಉಳಿಸಿಕೊಂಡು ಮೇಲುಗೈ ಸಾಧಿಸಿದರೂ ಮೊದಲ ದಿನ ಕ್ರೀಡಾಂಗಣದಲ್ಲಿ ಒಂದು ಪ್ರಸಂಗದಿಂದಾಗಿ ಆಟಗಾರರು ಮತ್ತು ಅಂಪೈರ್ ಬಿದ್ದು ಬಿದ್ದು ನಕ್ಕಿದ್ದಾರೆ.

    ಆಗಿದ್ದು ಇಷ್ಟು 79.2 ನೇ ಓವರ್‍ನಲ್ಲಿ ಸ್ಟ್ರೈಕ್‍ನಲ್ಲಿ ನಾಯಕ ಸ್ಮಿತ್ 97 ರನ್ ಗಳಿಸಿ ಆಡುತ್ತಿದ್ದರು. ಜಡೇಜಾ ಎಸೆದ ಒಂದು ಎಸೆತ ಸ್ಮಿತ್ ಬ್ಯಾಟ್‍ನ ಬಳಿ ಬಂದು ಮೇಲಕ್ಕೆ ಚಿಮ್ಮಿತು. ಮೇಲಕ್ಕೆ ಚಿಮ್ಮಿದ ಕೂಡಲೇ ಮುಂದಕ್ಕೆ ಬಂದ ಕೀಪರ್ ವೃದ್ಧಿಮಾನ್ ಸಹಾ ಬಾಲನ್ನು ಎಲ್ಲಿದೆ ಎಂದು ನೋಡಿದ್ರು.

    ಇದನ್ನೂ ಓದಿ:ಅಶ್ವಿನ್ ಬೌಲಿಂಗ್‍ನಲ್ಲಿ ಸಹಾ ಸೂಪರ್ ಡೈವಿಂಗ್ ಕ್ಯಾಚ್- ಸೊನ್ನೆ ಸುತ್ತಿದ ವೇಡ್

    ಅಷ್ಟರಲ್ಲೇ ಸ್ಮಿತ್ ಎರಡು ಕಾಲಿನ ಮಧ್ಯದಲ್ಲಿ ಬಾಲ್ ಇರುವುದನ್ನು ನೋಡಿದ ಸಹಾ ಅದನ್ನು ಹಿಡಿಯಲು ಮುಂದಾದರು. ಸಹಾ ಹಿಡಿಯಲು ಮುಂದಾಗುತ್ತಿದ್ದಂತೆ ಸ್ಮಿತ್ ಬಾಲ್ ಸಿಗದಂತೆ ತಡೆಯಲು ನೆಲಕ್ಕೆ ಬಿದ್ದರು. ಸ್ಮಿತ್ ಬೀಳುವುದನ್ನು ನೋಡಿ ಸಹಾ ಬಾಲ್ ಹಿಡಿಯಲು ಅವರ ಮೇಲೆಯೇ ಬಿದ್ದರು. ಬಿದ್ದ ಬಳಿಕ ಬಾಲನ್ನು ಹಿಡಿದು ನಗುತ್ತಲೇ ಔಟ್ ಗೆ ಮನವಿ ಸಲ್ಲಿಸದರು.

    ಸ್ಮಿತ್ ಮತ್ತು ವೃದ್ಧಿಮಾನ್ ಸಹಾ ಅವರ ಈ ಆಟವನ್ನು ನೋಡಿದ ಇಂಗ್ಲೆಂಡಿನ ಅಂಪೈರ್ ಇಯಾನ್ ಗೌಲ್ಡ್ ಬಿದ್ದು ಬಿದ್ದು ನಕ್ಕರು. ಅಂಪೈರ್ ಜೊತೆಗೆ ಆಟಗಾರರು ನಗಾಡಿದರು.

    ಇದನ್ನೂ ಓದಿ: ಭರ್ಜರಿ ಶತಕ ಹೊಡೆದು ತಂಡವನ್ನು ಪಾರು ಮಾಡಿದ ಸ್ಮಿತ್



     

  • ಭರ್ಜರಿ ಶತಕ ಹೊಡೆದು ತಂಡವನ್ನು ಪಾರು ಮಾಡಿದ ಸ್ಮಿತ್

    ಭರ್ಜರಿ ಶತಕ ಹೊಡೆದು ತಂಡವನ್ನು ಪಾರು ಮಾಡಿದ ಸ್ಮಿತ್

    ರಾಂಚಿ: ಮೂರನೇ ಟೆಸ್ಟ್ ಪಂದ್ಯದಲ್ಲಿ ಸ್ವೀವ್ ಸ್ಮಿತ್ ಭರ್ಜರಿ ಶತಕ ಬಾರಿಸುವ ಮೂಲಕ ಆಸ್ಟ್ರೇಲಿಯಾ ಭಾರೀ ಮೊತ್ತವನ್ನು ಪೇರಿಸುವ ಸೂಚನೆ ನೀಡಿದೆ.

    ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಆಸ್ಟ್ರೇಲಿಯಾ ಮೊದಲ ದಿನದ ಆಟಕ್ಕೆ4 ವಿಕೆಟ್ ನಷ್ಟಕ್ಕೆ  90 ಓವರ್‍ಗಳಲ್ಲಿ 299 ರನ್ ಗಳಿಸಿದೆ.

    ಸ್ಮಿತ್ ಅಜೇಯ 117 ರನ್(244 ಎಸೆತ, 13 ಬೌಂಡರಿ) ಗ್ಲೇನ್ ಮ್ಯಾಕ್ಸ್ ವೆಲ್ ಅಜೇಯ 82 ರನ್( 147 ಎಸೆತ, 5 ಬೌಂಡರಿ, 2 ಸಿಕ್ಸರ್)ಗಳಿಂದಾಗಿ ಆಸ್ಟ್ರೇಲಿಯಾ ರನ್ 300ರ ಗಡಿಯ ಹತ್ತಿರ ಬಂದು ನಿಂತಿದೆ.

    227 ಎಸೆತದಲ್ಲಿ ಸ್ಮಿತ್ ತಮ್ಮ ಟೆಸ್ಟ್ ಬಾಳ್ವೆಯ 19ನೇ ಶತಕವನ್ನು ಹೊಡೆದರು. ಮ್ಯಾಟ್ ರೇನ್‍ಷಾ 44 ರನ್(69 ಎಸೆತ, 7 ಬೌಂಡರಿ), ಡೇವಿಡ್ ವಾರ್ನರ್ 19 , ಮಾರ್ಷ್ 2, ಹ್ಯಾಂಡ್ಸ್ ಕಾಂಬ್ ಕಾಂಬ್ 19 ರನ್‍ಗಳಿಸಿ ಔಟಾದರು.

    ಭಾರತದ ಪರವಾಗಿ ಉಮೇಶ್ ಯಾದವ್ 2, ಆರ್ ಅಶ್ವಿನ್ ಮತ್ತು ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು. 140 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಸ್ಮಿತ್ ಮತ್ತು ಮ್ಯಾಕ್ಸ್‍ವೆಲ್ 47.4 ಓವರ್‍ಗಳಲ್ಲಿ ಮುರಿಯದ 5ನೇ ವಿಕೆಟ್‍ಗೆ 159 ರನ್‍ಗಳ ಜೊತೆಯಾಟವಾಡಿದ ಕಾರಣ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ ವಿಕೆಟ್ ಉಳಿಸಿಕೊಂಡು ಮೇಲುಗೈ ಸಾಧಿಸಿದೆ.

    ಬೈ 4, ಲೆಗ್‍ಬೈ 11, ನೋಬಾಲ್ 1 ರನ್ ನೀಡುವ ಮೂಲಕ ಇತರೇ ರೂಪದಲ್ಲಿ ಭಾರತ 16 ರನ್‍ಗಳನ್ನು ನೀಡಿದೆ.

  • ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ 11ರ ಪಾಕ್ ಬಾಲಕಿಯಿಂದ ಮೋದಿಗೆ ಶುಭಾಶಯ!

    ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ 11ರ ಪಾಕ್ ಬಾಲಕಿಯಿಂದ ಮೋದಿಗೆ ಶುಭಾಶಯ!

    ಇಸ್ಲಾಮಾಬಾದ್: ಉತ್ತರಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿರೋದಕ್ಕೆ ಪಾಕಿಸ್ತಾನದ 11ರ ಬಾಲಕಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭ ಕೋರಿದ್ದಾಳೆ.

    ಪಾಕಿಸ್ತಾನದ 11ರ ಹರೆಯದ ಅಖೀದತ್ ನವೀದ್ ಎಂಬಾಕೆ ಪತ್ರದ ಮೂಲಕ ಪ್ರಧಾನಿಗೆ ವಿಶ್ ಮಾಡಿದ್ದಾಳೆ. ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಶಾಂತಿಯ ಅಗತ್ಯವಿದ್ದು, ಮೋದಿ ಅವರಿಂದ ಈ ಕೆಲಸ ಶೀಘ್ರವಾಗಿ ಆಗುತ್ತದೆ ಎಂದು ಹೇಳಿದ್ದಾಳೆ.

    ಪತ್ರದಲ್ಲೇನಿದೆ?: `ಜನರ ಮನಸ್ಸನ್ನು ಗೆಲ್ಲುವುದು ಅದ್ಭುತವಾದ ಕೆಲಸ ಎಂದು ನನ್ನ ತಂದೆ ಹೇಳುತ್ತಿದ್ದರು. ಅಂತೆಯೇ ನೀವು ಈಗಾಗಲೇ ಭಾರತೀಯರ ಮನ ಗೆದ್ದಿದ್ದೀರಿ. ಹೀಗಾಗಿ ನೀವು ಉತ್ತರಪ್ರದೇಶದಲ್ಲಿ ಭರ್ಜರಿ ಜಯ ಗಳಿಸಿದ್ದೀರಿ. ಅಂತೆಯೇ ಮತ್ತಷ್ಟು ಭಾರತೀಯರು ಹಾಗೂ ಪಾಕಿಸ್ತಾನ ಜನತೆಯ ಹೃದಯಗಳನ್ನು ಗೆಲ್ಲಬೇಕಾದರೆ, ಉಭಯ ರಾಷ್ಟ್ರಗಳ ನಡುವೆ ಸ್ನೇಹ ಮತ್ತು ಶಾಂತಿಯನ್ನು ಕಾಪಾಡಬೇಕು. ಈ ಎರಡೂ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿಯ ಸೇತುವೆಯನ್ನು ನಿರ್ಮಾಣ ಮಾಡಿ. ನಾವು ಬುಲೆಟ್‍ಗಳನ್ನು ಖರೀದಿ ಮಾಡುವ ಬದಲಾಗಿ ಪುಸ್ತಕಗಳನ್ನು ಖರೀದಿ ಮಾಡಲು ನಿರ್ಧರಿಸೋಣ. ಪಿಸ್ತೂಲ್‍ಗಳನ್ನು ಖರೀದಿ ಮಾಡೋ ಬದಲು ಬಡವರಿಗಾಗಿ ಔಷಧಿಗಳನ್ನು ಖರೀದಿ ಮಾಡೋಣವೆಂದು ನಿರ್ಧಾರ ಕೈಗೊಳ್ಳೋಣ ಅಂತಾ ಅಖೀದತ್ ಪ್ರಧಾನಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾಳೆ.

    ಪತ್ರದ ಕೊನೆಯಲ್ಲಿ ಶಾಂತಿ ಮತ್ತು ಸಂಘರ್ಷ ಯಾವುದು ಬೇಕು ಎಂಬ ಆಯ್ಕೆ ಎರಡೂ ರಾಷ್ಟ್ರಗಳ ಕೈಯಲ್ಲಿದೆ ಎಂದು ಹೇಳಿದ್ದು, ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಪ್ರಧಾನಿಗೆ ಶುಭಾಶಯ ತಿಳಿಸಿದ್ದಾಳೆ.

     

  • ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ?

    ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ?

    ನವದೆಹಲಿ: ಸತತ ಏರಿಕೆಯಾಗುತ್ತಿದ್ದ ಪೆಟ್ರೋಲ್ ಡೀಸೆಲ್ ಬೆಲೆ ಭಾರೀ ಇಳಿಕೆಯಾಗುವ ಸಾಧ್ಯತೆಯಿದೆ. ಭಾರತೀಯ ತೈಲ ಕಂಪೆನಿಗಳು ಮಾರ್ಚ್ 15ರಂದು ದರವನ್ನು ಪರಿಷ್ಕರಿಸಲಿದ್ದು, ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಅಂದಾಜು 2 ರೂ.ನಿಂದ 2.50 ರೂ.ರವರೆಗೆ ಇಳಿಕೆ ಆಗುವ ಸಾಧ್ಯತೆಯಿದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್ ಕಚ್ಚಾ ತೈಲದ ಬೆಲೆ 56 ಡಾಲರ್‍ನಿಂದ(3,700 ರೂ.) 54 ಡಾಲರ್‍ಗೆ (3,570 ರೂ.) ಇಳಿಕೆಯಾಗಿದ ಹಿನ್ನೆಲೆಯಲ್ಲಿ ಭಾರತದಲ್ಲೂ ತೈಲಗಳ ದರ ಇಳಿಕೆಯಾಗುವ ಸಾಧ್ಯತೆಯಿದೆ.

    ಪ್ರತಿ 15 ದಿನಗಳಿಗೊಮ್ಮೆ ಭಾರತೀಯ ತೈಲ ಕಂಪೆನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರವನ್ನು ನೋಡಿಕೊಂಡು ಬೆಲೆಯನ್ನು ಪರಿಷ್ಕರಿಸುತ್ತಿರುತ್ತವೆ. ಆದರೆ ಪಂಚರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ತೈಲ ಕಂಪೆನಿಗಳು ಎರಡು ತಿಂಗಳಿನಿಂದ ಬೆಲೆ ಪರಿಷ್ಕರಣೆಗೆ ಮುಂದಾಗಿರಲಿಲ್ಲ. ಆದರೆ, ಈ ಅವಧಿಯಲ್ಲಿ ಅಡುಗೆ ಅನಿಲ ದರವನ್ನು ಪರಿಷ್ಕರಿಸಲಾಗಿತ್ತು.

    ಜನವರಿ 15ರಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 42 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 1.03 ಪೈಸೆ ಏರಿಕೆಯಾಗಿತ್ತು. ಪ್ರಸ್ತುತ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 76.28 ರೂ. ಇದ್ದರೆ, ಡೀಸೆಲ್ ಬೆಲೆ 63.16 ರೂ. ಇದೆ.

  • ಸತ್ಯನಾರಾಯಣ ಪೂಜೆಗೆ ರಂಗೋಲಿ ಹಾಕಿದ್ದು ಯಾಕೆ ಎಂದು ಯುಎಸ್ ಮಹಿಳೆ ಕಿರಿಕ್!

    ಸತ್ಯನಾರಾಯಣ ಪೂಜೆಗೆ ರಂಗೋಲಿ ಹಾಕಿದ್ದು ಯಾಕೆ ಎಂದು ಯುಎಸ್ ಮಹಿಳೆ ಕಿರಿಕ್!

    – ನೀವೇನ್ಮಾಡ್ತಿದ್ದೀರೋ ಅದನ್ನ ಇಲ್ಲಿಗೇ ನಿಲ್ಲಿಸಿ ಎಂದು ಗಲಾಟೆ
    – ಭಾರತೀಯರ ಮೇಲೆ ಅಮೆರಿಕ ಮಹಿಳೆಯ ಆವಾಜ್

    ಆಶ್ವತ್ಥ್ ಸಂಪಾಜೆ
    ಬೆಂಗಳೂರು: ಭಾರತೀಯರ ಮೇಲೆ ಅಮೆರಿಕದಲ್ಲಿ ಜನಾಂಗೀಯ ನಿಂದನೆ ಹೊಸದೇನಲ್ಲ. ಈಗ ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಸತ್ಯನಾರಾಯಣ ಪೂಜೆಗೆ ರಂಗೋಲಿ ಹಾಕಿದ್ದು ಯಾಕೆ ಎಂದು ಅಮೆರಿಕದ ಮಹಿಳೆಯೊಬ್ಬಳು ಭಾರತೀಯರ ಮೇಲೆ ಆವಾಜ್ ಹಾಕಿದ್ದಾಳೆ.

    ಇಲಿನಾಯ್ಸ್ ಓಕ್‍ಬ್ರೂಕ್ ಎಂಬಲ್ಲಿ ಭಾರತೀಯರೊಬ್ಬರು ಮಾರ್ಚ್ 12ರಂದು ಸತ್ಯನಾರಾಯಣ ಪೂಜೆಯನ್ನು ಆಯೋಜಿಸಿದ್ದರು. ಈ ಪೂಜೆಗಾಗಿ ಮನೆಯ ಮುಂದೆ ದೊಡ್ಡ ರಂಗೋಲಿ ಹಾಕಿದ್ದರು. ಈ ರಂಗೋಲಿ ಹಾಕಿದ್ದನ್ನು ನೋಡಿ ಕಾರಿನಲ್ಲಿ ಬಂದ ಮಹಿಳೆ ಮನೆಯ ಬಾಗಿಲನ್ನು ಬಡಿದು ರಂಗೋಲಿ ಹಾಕಿದ್ದು ಯಾಕೆ ಎಂದು ಪ್ರಶ್ನಿಸಿದ್ದಾಳೆ. ಅಷ್ಟೇ ಅಲ್ಲದೇ ನೀವು ಇಲ್ಲಿ ಏನು ಮಾಡುತ್ತಿದ್ದೀರಿ ಅದನ್ನು ನಿಲ್ಲಿಸಿ ಎಂದು ಆವಾಜ್ ಹಾಕಿದ್ದಾಳೆ.

    ಈಕೆಯ ಪ್ರಶ್ನೆಗಳಿಗೆ ಶಾಂತವಾಗಿ ಉತ್ತರಿಸಿದ ಮನೆಯ ಯಜಮಾನ ಬಾಗಿಲನ್ನು ಮುಚ್ಚಿ 911 ನಂಬರ್‍ಗೆ ಕರೆ ಮಾಡಿದ್ದಾರೆ. ಪೊಲೀಸರು ಬರುವವರೆಗೆ ಈಕೆ ಅವರ ಮನೆಯ ಹೊರಗಡೆ ಕಾರನ್ನು ಪಾರ್ಕ್ ಮಾಡಿದ್ದಾಳೆ. ಪೊಲೀಸರು ಬಂದು ವಿಚಾರಣೆ ನಡೆಸಿದ ಬಳಿಕ ಆಕೆ ಅಲ್ಲಿಂದ ತೆರಳಿದ್ದಾಳೆ.

    ಈ ಘಟನೆಯ ಬಗ್ಗೆ ಮೈಸೂರು ಮೂಲದ ಅಮೆರಿಕದಲ್ಲಿ ವೈದ್ಯರಾಗಿರುವ ಉಷಾ ಕೋಲ್ಪೆ ಅವರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿ, 25 ವರ್ಷ ನಾನು ಅಮೆರಿಕದಲ್ಲಿ ಇದ್ದೇನೆ. ಇದುವರೆಗೆ ನನಗೆ ಈ ರೀತಿಯ ಶಾಕಿಂಗ್ ಅನುಭವ ಆಗಿಲ್ಲ ಎಂದು ಬರೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಉಷಾ ಕೋಲ್ಪೆ, ಪೊಲೀಸರು ಈಗ ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆಕೆ ಮಾನಸಿಕ ಅಸ್ವಸ್ಥೆ ಎನ್ನುವ ವಿಚಾರ ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ ಎಂದು ತಿಳಿಸಿದ್ದಾರೆ. ಉಷಾ ಅವರ ಈ ಫೇಸ್ ಬುಕ್  ಪೋಸ್ಟ್ ಗೆ ಬಹಳಷ್ಟು ಜನ ಕಮೆಂಟ್ ಹಾಕಿದ್ದು, ಪೊಲೀಸರು ಯಾಕೆ ಅವಳನ್ನು ಕೂಡಲೇ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

    ಫೆ.22ರಂದು ಕ್ಯಾನ್ಸಾಸಾದ ಬಾರ್‍ನಲ್ಲಿ ಅಮೆರಿಕದ ನಿವೃತ್ತ ಯೋಧನೊಬ್ಬ, ದೇಶ ಬಿಟ್ಟು ತೊಲಗಿ ಎಂದು ಚೀರಾಡಿ ಟೆಕ್ಕಿ ಶ್ರೀನಿವಾಸ ಕುಚಿಬೋಟ್ಲಾ ಅವರನ್ನು ಹತ್ಯೆ ಮಾಡಿದ್ದ. ಇದಾದ ನಂತರ ಮಾರ್ಚ್ 4ರಂದು ವ್ಯಾಪಾರಿ ಹರ್ಣೀಶ್ ಪಟೇಲ್ ಅವರನ್ನು ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದ.

  • #IAmNewIndia ಹೊಸ ಭಾರತ ಕಟ್ಟಲು ಪ್ರತಿಜ್ಞೆ ಮಾಡಿ: ನಮೋ ಆಪ್ ಮೂಲಕ ಮೋದಿ ಮನವಿ

    #IAmNewIndia ಹೊಸ ಭಾರತ ಕಟ್ಟಲು ಪ್ರತಿಜ್ಞೆ ಮಾಡಿ: ನಮೋ ಆಪ್ ಮೂಲಕ ಮೋದಿ ಮನವಿ

    ನವದೆಹಲಿ: ಕಳೆದ ದೀಪಾವಳಿಗೆ ಸೈನಿಕರಿಗೆ ಸಂದೇಶ ಕಳುಹಿಸಿ ಎಂದು ದೇಶದ ಜನರಲ್ಲಿ ಕೇಳಿದ್ದ ಪ್ರಧಾನಿ ಮೋದಿ ಈ ಹೋಳಿಯ ಸಂಭ್ರಮದಲ್ಲಿ ಹೊಸ ಭಾರತದ ನಿರ್ಮಾಣಕ್ಕಾಗಿ ಪ್ರತಿಜ್ಞೆಯನ್ನು ಕೈಗೊಂಡು ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

    ಈ ಸಂಬಂಧ ನಮೋ ಆಪ್ ಮೂಲಕ ದೇಶವ್ಯಾಪಿ ಪ್ರತಿಜ್ಞಾ ಆಂದೋಲನಕ್ಕೆ ಮೋದಿ ಚಾಲನೆ ನೀಡಿದ್ದಾರೆ. 2022ರ ಸ್ವಾತಂತ್ರ್ಯ ಸಂಭ್ರಮಕ್ಕೆ 75 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಗಾಂಧೀಜಿ, ಸರ್ದಾರ್ ವಲ್ಲಭಭಾಯ್ ಪಾಟೇಲ್, ಅಂಬೇಡ್ಕರ್ ಕನಸನ್ನು ನನಸು ಮಾಡಿ ಹೊಸ ಭಾರತ ನಿರ್ಮಿಸಲು ಸಹಕಾರ ನೀಡಿ ಎಂದು ಮೋದಿ ವಿನಂತಿ ಮಾಡಿಕೊಂಡಿದ್ದಾರೆ.

    ಜನ ಏನು ಮಾಡಬೇಕು?
    ಆಪ್‍ನಲ್ಲಿ ದೇಶದ ಕೆಲವೊಂದು ಸಮಸ್ಯೆ/ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಟಗೆರಿಗಳನ್ನು ನೀಡಲಾಗಿದ್ದು, ಇವುಗಳಲ್ಲಿ ಒಂದು ಆಯ್ಕೆಯನ್ನು ಜನ ಆರಿಸಿಕೊಳ್ಳಬೇಕಾಗುತ್ತದೆ.

    ಯಾವೆಲ್ಲ ವಿಭಾಗಗಳಿವೆ?
    – ಭಾರತದ ಭ್ರಷ್ಟಾಚಾರ ನಿರ್ಮೂಲನೆಗೆ ಕೈ ಜೋಡಿಸುತ್ತೇನೆ
    – ಕ್ಯಾಶ್‍ಲೆಸ್ ವ್ಯವಹಾರ ಹೆಚ್ಚಿಸಲು ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ
    – ಸ್ವಚ್ಛ ಭಾರತಕ್ಕಾಗಿ ನಾನು ಕೆಲಸ ಮಾಡುತ್ತೇನೆ
    – ಡ್ರಗ್ಸ್ ಮುಕ್ತ ಭಾರತ ನಿರ್ಮಾಣಕ್ಕೆ ಕೈ ಜೋಡಿಸುತ್ತೇನೆ
    – ಮಹಿಳೆಯರಿಗೆ ಪ್ರೋತ್ಸಾಹ ಮತ್ತು ಅಭಿವೃದ್ಧಿಗೆ ನಾನು ಬೆಂಬಲ ನೀಡುತ್ತೇನೆ
    – ಪ್ರಕೃತಿ ಮತ್ತು ಪಾಕೃತಿಕ ಸಂಪನ್ಮೂಲಗಳ ರಕ್ಷಣೆಗೆ ನಾನು ಕಟಿಬದ್ಧನಾಗಿದ್ದೇನೆ
    – ಭಾರತದ ಶಕ್ತಿ, ಏಕತೆ ಮತ್ತು ಸದ್ಭಾವನೆಗಾಗಿ ನಾನು ನಿಲ್ಲುತ್ತೇನೆ
    – ನಾನು ಉದ್ಯೋಗವನ್ನು ಬೇಡದೇ ಉದ್ಯೋಗ ನೀಡುವ ವ್ಯಕ್ತಿಯಾಗುತ್ತೇನೆ

    ಈ ಮೇಲೆ ತಿಳಿಸಿದ ಆಯ್ಕೆಯಲ್ಲಿ ಒಂದನ್ನು ಆರಿಸಿಕೊಂಡು ಪ್ರತಿಜ್ಞೆ ಮಾಡಬೇಕು. ಈ ಪ್ರಕ್ರಿಯೆಗಳನ್ನು ಮುಗಿಸಿದ ಬಳಿಕ ನೀವು ನಿಮ್ಮ ಪ್ರತಿಜ್ಞೆಯನ್ನು ಫೇಸ್‍ಬುಕ್ ಮತ್ತು ಟ್ವಿಟ್ಟರ್‍ನಲ್ಲಿ ಶೇರ್ ಮಾಡಲು ಸಾಧ್ಯವಿದೆ. ನರೇಂದ್ರ ಮೋದಿ ಆಪ್‍ನ್ನು ನೀವು ಗೂಗಲ್ ಆಂಡ್ರಾಯ್ಡ್ ಪ್ಲೇ ಸ್ಟೋರ್ ಮತ್ತು ಆಪಲ್ ಐಟ್ಯೂನ್ ಸ್ಟೋರ್‍ನಿಂದ ಡೌನ್‍ಲೋಡ್ ಮಾಡಬಹುದು.

  • 11 ರನ್‍ಗಳಿಗೆ 6 ವಿಕೆಟ್ ಪತನ: ಭಾರತಕ್ಕೆ 75 ರನ್ ಗಳ ಜಯ

    11 ರನ್‍ಗಳಿಗೆ 6 ವಿಕೆಟ್ ಪತನ: ಭಾರತಕ್ಕೆ 75 ರನ್ ಗಳ ಜಯ

    ಬೆಂಗಳೂರು: ಎರಡನೇ ಟೆಸ್ಟ್ ಪಂದ್ಯವನ್ನು ಭಾರತ 75 ರನ್‍ಗಳಿಂದ ಗೆದ್ದುಕೊಳ್ಳುವ ಮೂಲಕ ಭಾರತ 5 ಟೆಸ್ಟ್ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

    ಗೆಲ್ಲಲು 188 ರನ್‍ಗಳ ಸುಲಭದ ಸವಾಲನ್ನು ಸ್ವೀಕರಿಸಿದ ಆಸ್ಟ್ರೇಲಿಯಾ ಆರಂಭದಿಂದ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 35.4 ಓವರ್‍ಗಳಲ್ಲಿ 112 ರನ್‍ಗಳಿಗೆ ಆಲೌಟ್ ಆಯ್ತು. ಸ್ಪಿನ್ನರ್ ಆರ್ ಅಶ್ವಿನ್ 6 ವಿಕೆಟ್‍ಗಳನ್ನು ಪಡೆಯುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು.

    ಒಂದು ಹಂತದಲ್ಲಿ 4 ವಿಕೆಟ್ ಕಳೆದುಕೊಂಡು 101 ರನ್‍ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಆಸ್ಟ್ರೇಲಿಯಾ 11 ರನ್ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡ ಕಾರಣ ಸೋಲನ್ನು ಅನುಭವಿಸಿದೆ.

    213 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ನಾಲ್ಕನೇಯ ದಿನದಾಟವನ್ನು ಆರಂಭಿಸಿದ ಭಾರತ ಇಂದು 6 ವಿಕೆಟ್‍ಗಳ ಸಹಾಯದಿಂದ 61 ರನ್‍ಗಳಿಸಿ 97.1 ಓವರ್‍ಗಳಲ್ಲಿ 274 ರನ್‍ಗಳಿಗೆ ಆಲೌಟ್ ಆಯ್ತು.

    ಸೋಮವಾರ 79 ರನ್‍ಗಳಿದ್ದ ಚೇತೇಶ್ವರ ಪೂಜಾರ ಇಂದು 92 ರನ್(211 ಎಸೆತ, 7 ಬೌಂಡರಿ), 40 ರನ್‍ಗಳಿಸಿದ್ದ ಅಜಿಕ್ಯಾ ರೆಹಾನೆ 52 ರನ್(134 ಎಸೆತ, 4 ಬೌಂಡರಿ) ಗಳಿಸಿ ಔಟಾದರು. ಬೌಲರ್‍ಗಳು ಬೇಗನೇ ವಿಕೆಟ್ ಒಪ್ಪಿಸಿದ್ದರಿಂದ ಭಾರತ 274 ರನ್‍ಗಳಿಗೆ ಆಲೌಟ್ ಆಯ್ತು.

    ಆಸ್ಟ್ರೇಲಿಯಾದ ಪರವಾಗಿ ನಾಯಕ ಸ್ವೀವ್ ಸ್ಮಿತ್ 28 ರನ್, ಪೀಟರ್ ಹ್ಯಾಂಡ್ಸ್ ಕಾಂಬ್ 24 ರನ್‍ಗಳಿಸಿದರು. ಅಶ್ವಿನ್ 6 ವಿಕೆಟ್ ಪಡೆದರೆ ಉಮೇಶ್ ಯಾದವ್ 2 ವಿಕೆಟ್ ಪಡೆದರು. ಇಶಾಂತ್ ಶರ್ಮಾ ಮತ್ತು ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.

    ಮೊದಲ ಇನ್ನಿಂಗ್ಸ್ ನಲ್ಲಿ 91 ರನ್, ಎರಡನೇ ಇನ್ನಿಂಗ್ಸ್ ನಲ್ಲಿ 51 ರನ್ ಬಾರಿಸಿದ ಕೆಎಲ್ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಪುಣೆಯಲ್ಲಿ ನಡೆದ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ 333 ರನ್‍ಗಳಿಂದ ಗೆದ್ದು ಕೊಂಡಿತ್ತು. ಮೂರನೇ ಟೆಸ್ಟ್ ಪಂದ್ಯ ರಾಂಚಿಯಲ್ಲಿ ಮಾರ್ಚ್ 16ರಿಂದ ಆರಂಭವಾಗಲಿದೆ.

    ಸಂಕ್ಷಿಪ್ತ ಸ್ಕೋರ್
    ಭಾರತ 189& 274
    ಆಸ್ಟ್ರೇಲಿಯಾ 276 & 112

     

  • ಭಾರತ-ಪಾಕ್ ಗಡಿಯಲ್ಲಿ ಅತ್ಯಂತ ಎತ್ತರದ ತ್ರಿವರ್ಣಧ್ವಜ ಹಾರಿಸಿದ ಭಾರತ- ಪಾಕ್‍ಗೆ ಈಗ ಭಯವೇನು ಗೊತ್ತಾ?

    ಭಾರತ-ಪಾಕ್ ಗಡಿಯಲ್ಲಿ ಅತ್ಯಂತ ಎತ್ತರದ ತ್ರಿವರ್ಣಧ್ವಜ ಹಾರಿಸಿದ ಭಾರತ- ಪಾಕ್‍ಗೆ ಈಗ ಭಯವೇನು ಗೊತ್ತಾ?

    ನವದೆಹಲಿ: ಭಾರತ ಪಾಕಿಸ್ತಾನ ಗಡಿಯಲ್ಲಿರುವ ಅಮೃತಸರ ಬಳಿಯ ಅಟ್ಟಾರಿಯಲ್ಲಿ ಭಾನುವಾರದಂದು ಭಾರತ ಅತ್ಯಂತ ಎತ್ತರದ ತ್ರಿವರ್ಣ ಧ್ವಜವನ್ನ ಹಾರಿಸಿದೆ.

    120 ಅಡಿ ಉದ್ದ, 80 ಅಡಿ ಅಗಲವಿರುವ ಧ್ವಜವನ್ನ 360 ಅಡಿ ಉದ್ದದ ಸ್ತಂಭದ ಮೇಲೆ ಹಾರಿಸಲಾಗಿದೆ. ಈ ಧ್ವಜ ಎಷ್ಟು ಎತ್ತರವಿದೆ ಎಂದರೆ ಇದನ್ನು ಸುಮಾರು 30 ಕಿ.ಮೀ ದೂರದಲ್ಲಿರುವ ಲಾಹೋರ್‍ನಲ್ಲಿರುವ ಪ್ರಸಿದ್ಧ ಅನಾರ್ಕಲಿ ಬಜಾರ್‍ನಿಂದಲೂ ಕಾಣಬಹುದಾಗಿದೆ. 100 ಕೆಜಿ ತೂಕವಿರುವ ಈ ಧ್ವಜವನ್ನ ಎತ್ತರದ ಪ್ರದೇಶದಲ್ಲಿ ಜೋರಾಗಿ ಬೀಸೋ ಗಾಳಿಯನ್ನು ತಡೆದುಕೊಳ್ಳಲು ಸಹಾಯವಾಗುವಂತೆ ಪ್ಯಾರಾಚೂಟ್ ಮೆಟೀರಿಯಲ್‍ನಿಂದ ಮಾಡಲಾಗಿದೆ.

    360 ಅಡಿ ಉದ್ದವಿರುವ ಸ್ತಂಭ 55 ಟನ್ ತೂಕವಿದ್ದು ದೆಹಲಿಯ ಕುತುಬ್ ಮಿನಾರ್‍ಗಿಂತ ಎತ್ತರವಿದೆ. ಧ್ವಜ ಸ್ತಂಭದ ಸುತ್ತ ಎಲ್‍ಇಡಿ ಫ್ಲಡ್ ಲೈಟ್‍ಗಳನ್ನ ಹಾಕಲಾಗಿದ್ದು, ರಾತ್ರಿ ಹೊತ್ತಿನಲ್ಲೂ ಮೈಲಿ ದೂರದಲ್ಲಿದ್ರೂ ಧ್ವಜ ಕಾಣುವಂತೆ ಮಾಡಲಾಗಿದೆ.

    ಈ ಯೋಜನೆಗೆ ಸುಮಾರು 4 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಅಮೃತಸರ ಇಂಪ್ರೂವ್‍ಮೆಂಟ್ ಟ್ರಸ್ಟ್ ಇದನ್ನು ಪೂರ್ಣಗೊಳಿಸಿದೆ. ಧ್ವಜದ ದೈನಂದಿನ ನಿರ್ವಹಣೆಯನ್ನು ಬಿಎಸ್‍ಎಫ್‍ನ ಆದೇಶದಂತೆ ಮಾಡಲಾಗುತ್ತದೆ ಎಂದು ವರದಿಯಾಗಿದೆ. ಅತೀ ಎತ್ತರದ ಈ ತ್ರಿವರ್ಣ ಧ್ವಜ ಈಗ ಅಟ್ಟಾರಿ ವಾಗಾ ಗಡಿಯಲ್ಲಿ ಪ್ರತಿದಿನ ಸಂಜೆ ಬೀಟಿಂಗ್ ರಿಟ್ರೀಟ್ ವೀಕ್ಷಿಸಲು ಬರುವ ಸಾವಿರಾರು ಜನರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

    ಪಾಕಿಸ್ತಾನದ ವಿರೋಧ: ಇದೇ ವೇಳೆ ಗಡಿ ಭಾಗದಲ್ಲಿ ಎತ್ತರದ ಧ್ವಜ ಅಳವಡಿಸಿರುವುದಕ್ಕೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿದೆ. ಭಾರತ ಈ ಧ್ವಜವನ್ನು ಗಡಿ ಭಾಗದಲ್ಲಿ ಗೂಢಾಚಾರಿಕೆ ಮಾಡಲು ಬಳಸುತ್ತದೆ ಎಂದು ಪಾಕಿಸ್ತಾನ ಹೆದರಿದೆ.

    ಈ ಹೇಳಿಕೆಯನ್ನು ಭಾರತ ತಳ್ಳಿಹಾಕಿದ್ದು, ಧ್ವಜಸ್ತಂಭವನ್ನು ಝೀರೋ ಲೈನ್‍ಗಿಂತ 200 ಮೀಟರ್ ಒಳಗೆ ಅಳವಡಿಸಲಾಗಿದೆ. ಧ್ವಜ ನಿಂತಿರುವುದು ಭಾರತದ ಮಣ್ಣಿನಲ್ಲಿ. ದೇಶವೊಂದು ತನ್ನ ನೆಲದಲ್ಲಿ ಧ್ವಜ ಹಾರಿಸುವುದನ್ನು ಯಾವುದೇ ಕಾನೂನಾಗಲೀ ಅಥವಾ ಅಂತರಾಷ್ಟ್ರೀಯ ಕಟ್ಟುಪಾಡುಗಳಾಗಲೀ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ.

  • ಲಿಯಾನ್ ಸ್ಪಿನ್ ದಾಳಿಗೆ ಟೀಂ ಇಂಡಿಯಾ ಪೆವಿಲಿಯನ್ ಪರೇಡ್

    ಲಿಯಾನ್ ಸ್ಪಿನ್ ದಾಳಿಗೆ ಟೀಂ ಇಂಡಿಯಾ ಪೆವಿಲಿಯನ್ ಪರೇಡ್

    ಬೆಂಗಳೂರು: 5 ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೊದಲ ದಿನವೇ ನಥನ್ ಲಿಯಾನ್ ಸ್ಪಿನ್‍ಗೆ ತತ್ತರಿಸಿದ ಭಾರತ 71.2 ಓವರ್ ಗಳಿಗೆ 189 ರನ್‍ಗಳಿಗೆ ಆಲೌಟ್ ಆಗಿದೆ.

    ಆರಂಭಿಕ ಆಟಗಾರ ಕೆಎಲ್ ರಾಹುಲ್ 90 ರನ್ (205 ಎಸೆತ, 9 ಬೌಂಡರಿ) ಕರಣ್ ನಾಯರ್ 26 ರನ್ ಹೊಡೆದರು. ಜೀವನ ಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ ಲಿಯಾನ್ 22.2 ಓವರ್ ಎಸೆದು 50 ರನ್ ನೀಡಿ 8 ವಿಕೆಟ್ ಪಡೆದರು.

    ಅಭಿನವ್ ಮುಕುಂದ್ ಅವರನ್ನು ಸ್ಟ್ರಾಕ್ ಎಲ್‍ಬಿ ಮಾಡಿದ್ರೆ, ಕರಣ್ ನಾಯರ್ ಅವರನ್ನು ಸ್ವೀವ್ ಓ ಕೀಫ್ ಬೌಲಿಂಗ್‍ನಲ್ಲಿ ಮ್ಯಾಥ್ಯೂ ವೇಡ್ ಸ್ಟಂಪ್ ಔಟ್ ಮಾಡಿದರು. ಉಳಿದ ಆಟಗಾರರನ್ನು ಲಿಯನ್ ಪೆವಿಲಿಯನ್‍ಗೆ ಕಳುಹಿಸಿದರು.

    ಇದನ್ನೂ ಓದಿ:ಕೊಹ್ಲಿಗೆ ಧೋನಿಯ ಈ ಒಂದು ದಾಖಲೆ ಮುರಿಯಲು ಸಾಧ್ಯವೇ ಇಲ್ಲ

    ಯಾರು ಎಷ್ಟು ರನ್?
    ಕೆಎಲ್ ರಾಹುಲ್ 90, ಅಭಿನವ್ ಮುಕುಂದ್ 0, ಚೇತೇಶ್ವರ ಪೂಜಾರ 17, ವಿರಾಟ್ ಕೊಹ್ಲಿ 12, ಅಜಿಂಕ್ಯಾ ರೆಹಾನೆ 17, ಕರಣ್ ನಾಯರ್ 26, ಆರ್ ಅಶ್ವಿನ್ 7, ವೃದ್ಧಿಮಾನ್ ಸಹಾ 1, ರವೀಂದ್ರ ಜಡೇಜಾ 3, ಉಮೇಶ್ ಯಾದವ್ ಔಟಾಗದೇ 0, ಇಶಾಂತ್ ಶರ್ಮಾ 0 ರನ್ ಗಳಿಸಿದರು.

    ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೇ 40 ರನ್ ಗಳಿಸಿದೆ. ಡೇವಿಡ್ ವಾರ್ನರ್ 23 ರನ್, ಮ್ಯಾಟ್ ರೇನ್‍ಶಾ 15 ರನ್‍ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ನಥನ್ ಲಿಯಾನ್ 2013ರ ಮಾರ್ಚ್ ನಲ್ಲಿ ದೆಹಲಿಯ ಫಿರೋಜಾ ಕೋಟ್ಲಾ ಮೈದಾನದಲ್ಲಿ ಭಾರತದ ವಿರುದ್ಧ ನಡೆದ ಟೆಸ್ಟ್ ನಲ್ಲಿ 94 ರನ್ ನೀಡಿ 7 ವಿಕೆಟ್ ಪಡೆದಿದ್ದರು. ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ 333 ರನ್‍ಗಳಿಂದ ಗೆದ್ದುಕೊಂಡಿತ್ತು.

  • ಟೆಕ್ಕಿ ಆಯ್ತ, ಈಗ ಅಮೆರಿಕದಲ್ಲಿ ಭಾರತೀಯ ಮೂಲದ ಉದ್ಯಮಿ ಹತ್ಯೆ

    ಟೆಕ್ಕಿ ಆಯ್ತ, ಈಗ ಅಮೆರಿಕದಲ್ಲಿ ಭಾರತೀಯ ಮೂಲದ ಉದ್ಯಮಿ ಹತ್ಯೆ

    ವಾಷಿಂಗ್ಟನ್: ಕಾನ್ಸಾಸ್‍ನಲ್ಲಿ ಭಾರತೀಯ ಮೂಲದ ಎಂಜಿನಿಯರ್ ಶ್ರೀನಿವಾಸ್ ಹತ್ಯೆಯ ಬೆನ್ನಲ್ಲೇ ಭಾರತೀಯ ಮೂಲದ ಉದ್ಯಮಿಯೊಬ್ಬರನ್ನು ಅಮೆರಿಕದ ಅವರ ಮನೆಯ ಹೊರಗೆ ಹತ್ಯೆ ಮಾಡಲಾಗಿದೆ.

    ಇಲ್ಲಿನ ಸೌತ್ ಕ್ಯಾರೊಲಿನಾದ ಲ್ಯಾಂಕ್ಯಾಸ್ಟರ್ ಕೌಂಟಿಯಲ್ಲಿ ಅಂಗಡಿಯೊಂದರ ಮಾಲೀಕರಾಗಿದ್ದ 43 ವರ್ಷದ ಹರ್ನಿಶ್ ಪಟೇಲ್ ಅವರ ಮೇಲೆ ಗುಂಡಿನ ದಾಳಿ ನಡೆಸಿ ಗುರುವಾರದಂದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಟೇಲ್ ಅವರು ಗುರುವಾರದಂದು ಸುಮಾರು 11.24ರ ವೇಳೆಯಲ್ಲಿ ಅಂಗಡಿಯನ್ನು ಮುಚ್ಚಿ ಮನೆಗೆ ಹೊರಟಿದ್ದು, ಬಳಿಕ ಅವರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಅಂಗಡಿಯಿಂದ ಪಟೇಲ್ ಅವರ ಮನೆಗೆ 6 ಕಿ.ಮೀ ನಷ್ಟು ದೂರವಿದೆ. ಪಟೇಲ್ ಕೊಲೆಯಾದ 10 ನಿಮಿಷಗಳ ಮುಂಚೆಯಷ್ಟೆ ಅಂಗಡಿಯಿಂದ ಹೊರಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    ಕಾನ್ಸಾಸ್‍ನಲ್ಲಿ ಶ್ರೀನಿವಾಸ್ ಅವರ ಹತ್ಯೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಆದರೆ ಇದು ಜನಾಂಗೀಯ ಕಾರಣದಿಂದ ಅಥವಾ ಅವರು ಭಾರತೀಯರೆಂಬ ಕಾರಣಕ್ಕೆ ನಡೆದಿರುವ ಕೊಲೆಯಾಗಿರಲು ಸಾಧ್ಯವಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಇಲ್ಲಿನ ಪೊಲೀಸರು ಹೇಳಿದ್ದಾರೆ.

    ಪಟೇಲ್ ಅವರ ನಿಧನದ ಸುದ್ದಿ ಕೇಳಿ ಸ್ನೇಹಿತರು ಹಾಗೂ ಗ್ರಾಹಕರು ಶಾಕ್ ಆಗಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಪಟೇಲ್ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಪಟೇಲ್ ಅವರು ಒಳ್ಳೆಯ ವ್ಯಕ್ತಿಯಾಗಿದ್ರು. ಅವರು ಉದ್ಯಮದಲ್ಲಿ ಕೇವಲ ಲಾಭಕ್ಕಾಗಿ ಯೋಚಿಸುತ್ತಿರಲಿಲ್ಲ. ಯಾರ ಬಳಿಯಾದ್ರೂ ಹಣವಿಲ್ಲವೆಂದರೆ ಅವರಿಗೆ ಊಟ ಕೊಡುತ್ತಿದ್ದರು. ಅಂತಹವರಿಗೆ ಯಾರು ತಾನೆ ಈ ರೀತಿ ಮಾಡ್ತಾರೆ ಅಂತ ಗ್ರಾಹಕ ನಿಕೋಲ್ ಜೋನ್ಸ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಪಟೇಲ್ ಅವರ ಹತ್ಯೆಗೆ ಲ್ಯಾಂಕ್ಯಾಸ್ಟರ್‍ನಲ್ಲಿ ಆಕ್ರೋಶ ವ್ಯಕ್ತವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಪಟೇಲ್ ಅವರು ಪತ್ನಿ ಹಾಗೂ ಪ್ರಾಥಮಿಕ ಶಲೆಯಲ್ಲಿ ಓದುತ್ತಿರುವ ಮಗುವನ್ನು ಅಗಲಿದ್ದಾರೆ.